ಕದಳಿ ಮಹಿಳಾ ವೇದಿಕೆ ಮತ್ತು ಶರಣ ಸಾಹಿತ್ಯ ಪರಿಷತ್ತಿನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಮುಂಡರಗಿ ತಾಲೂಕ ಕದಳಿ ಮಹಿಳಾ ವೇದಿಕೆ ಮತ್ತು ಶರಣ ಸಾಹಿತ್ಯ ಪರಿಷತ್ತಿನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಇಳೆ ಎಂದರೆ ಭೂಮಿ.. ಮಹಾ + ಇಳೆ = ಮಹಿಳೆ… ಎಂದರೆ ಹಿರಿದಾದ ಭೂಮಿ, ಧರಣಿ ಎಂದು ಅರ್ಥ.
ಭೂಮಿ ತಾಯಿಯ ತೂಕದಷ್ಟೇ ಹೆಣ್ಣಿನ ವ್ಯಕ್ತಿತ್ವವಿದೆ.
ಪ್ರೀತಿ, ಮಮತೆ, ತಾಳ್ಮೆ,ಬಾಂಧವ್ಯಗಳ ಮೂರ್ತ ರೂಪವೇ ಹೆಣ್ಣುಮಗಳು ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ ಎ ಬಳಿಗೇರ ಅವರು ಹೇಳಿದರು.

ಮುಂಡರಗಿ ಪಟ್ಟಣದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು, ಕದಳಿ ಮಹಿಳಾ ವೇದಿಕೆ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ‘ಕದಳಿ ಶ್ರೀ‘ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂಡರಗಿಯ ಕದಳಿ ಮಹಿಳಾ ವೇದಿಕೆಯು ಅತ್ಯದ್ಭುತವಾಗಿ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಶ್ಲಾಘಿಸಿದ ಅವರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಕೋರಿದರು.

ಪದಾಧಿಕಾರಿಗಳಿಗೆ ಸೇವಾ ದೀಕ್ಷೆಯನ್ನು ಬೋಧಿಸಿದ ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾಗಿರುವ ಉಪನ್ಯಾಸಕರಾದ ಸುಧಾ ಹುಚ್ಚಣ್ಣವರ ಅವರು ಮಾತನಾಡಿ ಮಹಿಳೆ ಎಂದು ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿರುವುದು ಅತ್ಯುತ್ತಮ ಬೆಳವಣಿಗೆಯಾಗಿದೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆಯಲು ಅವಕಾಶ ದೊರಕಿಸಿಕೊಡಬೇಕು ಎಂದು ಹಲವು ದೃಷ್ಟಾಂತಗಳನ್ನು ವಿವರಿಸಿದರು.

ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಹಮ್ಮಿಗಿ ಕ್ಷೇತ್ರದ
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಮಾಜಸೇವಕರು ಆಗಿರುವ ಶೋಭಾ ಬಸವರಾಜ್ ಮೇಟಿ ಅವರಿಗೆ ‘ಕದಳಿ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶೋಭಾ ಮೇಟಿಯವರು ತಮ್ಮ ಸಾಹಿತ್ಯಕ ಮತ್ತು ಸಾಮಾಜಿಕ ಸೇವೆಗೆ ಬೆಂಬಲವಾಗಿ ಕುಟುಂಬದವರು ಮತ್ತು ಸ್ನೇಹಿತರ ಸಹಕಾರಗಳು ಇದ್ದು ಅವರೆಲ್ಲರಿಗೂ ಆಭಾರ ವ್ಯಕ್ತಪಡಿಸಿದರು.
ತಂದೆಗೆ ಅತ್ಯಂತ ಸಂತೋಷ ಮತ್ತು ಸಮಾಧಾನವನ್ನು ನೀಡುವವರು ಹೆಣ್ಣು ಮಕ್ಕಳೇ, ಕುಟುಂಬದ ಕಣ್ಣು ಹೆಣ್ಣು ಮಕ್ಕಳು, ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಗತಿಯನ್ನು ಸಾಧಿಸುತ್ತಿದ್ದು ಸಮಾಜದ ಮುನ್ನೆಲೆಗೆ ಬರುತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಎಂ ಜಿ ಗಚ್ಛಣ್ಣವರ್ ಅವರು ಭಾರತ ದೇಶವನ್ನು ತಮ್ಮ ಧೈರ್ಯ ಸಾಹಸ ಅಸೀಮ ಶ್ರದ್ದೆ ಮತ್ತು ಶೈಕ್ಷಣಿಕ ಬಲದಿಂದ ಬೆಳಗಿದ ಕೆಲವು ಮಹಿಳಾ ಮಣಿಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿ ಇಂದು ಮಹಿಳೆಯರು ಯಾವುದಕ್ಕೂ ಹೆದರಬೇಕಾಗಿಲ್ಲ ಎಲ್ಲ ರೀತಿಯ ಸಹಾಯ ಸಹಕಾರ ಪ್ರೋತ್ಸಾಹಗಳು ಅವರಿಗೆ ಕೌಟುಂಬಿಕವಾಗಿ ಸಾಮಾಜಿಕವಾಗಿ ದೊರೆಯುತ್ತಿವೆ, ಮಹಿಳೆಯರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾಗಿರುವ ಸೀತಾ ಬಸಾಪುರ ಅವರು ಕಳೆದ ಎರಡು ದಶಕಗಳಿಂದ ಮುಂಡರಗಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕದಳಿ ಮಹಿಳಾ ವೇದಿಕೆಯು ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು ಪ್ರತಿ ವರ್ಷವೂ ವಿಜೃಂಭಣೆಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ಈ ವರ್ಷ ದೈಹಿಕ ವಿಕಲಾಂಗತೆಯನ್ನು ಹೊಂದಿದ್ದರೂ ಕೂಡ ಸಚೇತನರನ್ನು ನಾಚಿಸುವಷ್ಟು ಸ್ವಾವಲಂಬಿತನವನ್ನು ಮೈಗೂಡಿಸಿಕೊಂಡಿರುವ ಅಂಧ ಮಹಿಳೆ ಶೋಭಾ ಮಲ್ಲಾಡದ, ಮೃತ ವೀರಯೋಧ ಪತ್ನಿ ಶಿವಲೀಲಾ ಸೊಕ್ಕಿ, ಎರಡೂ ಕಾಲುಗಳಲ್ಲಿ
ಕಸುವು ಇಲ್ಲದೆ ಇದ್ದಾಗಲೂ ಕೂಡ ಹೊಲಿಗೆ ತರಬೇತಿಯನ್ನು ಪಡೆದು ಹೊಲಿಗೆ ತರಗತಿಗಳನ್ನು ನಡೆಸಿ ಜೀವನೋಪಾಯ ಮಾಡುತ್ತಿರುವ ರಾಜ್ಮಾ ಹಾತಲಗೇರಿ ಮತ್ತು ಕಳೆದ 20 ವರ್ಷಗಳಿಂದ ಕಾಯಕದಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿರುವ ಪುರಸಭೆಯ ಪೌರಕಾರ್ಮಿಕರಾದ ಗಂಗಮ್ಮ ಹರಿಜನ್ ಇವರನ್ನು ಈ ಬಾರಿಯ ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಹೇಳಿದರು.

ಕದಳಿ ಮಹಿಳಾ ವೇದಿಕೆಯ ಕಾರ್ಯ ಚಟುವಟಿಕೆಗಳಲ್ಲಿ ವೇದಿಕೆಯ ಎಲ್ಲಾ ಸದಸ್ಯರ ಸಹಾಯ ಮತ್ತು ಸಹಕಾರವನ್ನು ಅತ್ಯಂತ ಪ್ರೀತಿ ಮತ್ತು ಹೆಮ್ಮೆಯಿಂದ ನೆನೆದರು.

ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾ. ಸಂತೋಷ್ ಹಿರೇಮಠ ಅವರು ಕೂಡ ನೆರೆದ ಎಲ್ಲ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ಕೋರಿ ಕಾರ್ಯಕ್ರಮದ ಕುರಿತು ಮತ್ತು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆರ್ ಎಲ್ ಪೊಲೀಸ್ ಪಾಟೀಲ್ ಗುರುಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭ ಕೋರಿ ಸಮಯದ ಸದುಪಯೋಗದ ಔಚಿತ್ಯತೆಯನ್ನು ಕುರಿತು ಹೇಳಿ ಇನ್ನೂ ಹೆಚ್ಚಿನ ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಎಲ್ಲ ಮಹಿಳೆಯರಿಗೂ ಕರೆ ನೀಡಿದರು. ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇಲ್ಲಿಯವರೆಗೂ ಕಾರ್ಯನಿರ್ವಹಿಸಿ ಇದೀಗ ಸ್ವಯಂ ನಿವೃತ್ತಿಯನ್ನು ಹೊಂದಿದ್ದರೂ ಎಲ್ಲರ ಅಪೇಕ್ಷೆಯ ಮೇರೆಗೆ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿಗೆ ತಮ್ಮ ತಾಯಿಯವರ ಹೆಸರಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿ ಸಾಹಿತ್ಯ ಭವನದ ಕಟ್ಟಡಕ್ಕೆ ಧನಸಹಾಯ ಮಾಡಿದ ಸಮಾಜಸೇವಕರು, ಶಿಕ್ಷಣ ಪ್ರೇಮಿಗಳು ಆಗಿರುವ ವೀರಣ್ಣ ಮಡಿವಾಳರ ದಂಪತಿಗಳನ್ನು ಕೂಡ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇತ್ತೀಚೆಗೆ ರಾಜ್ಯ ಸಹಕಾರ ಸೇವಾ ರತ್ನ ಪ್ರಶಸ್ತಿಯನ್ನು ಪಡೆದ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀಣಾ ಹೇಮಂತ್ ಗೌಡ ಪಾಟೀಲ್ ಮತ್ತು 2024ನೇ ಸಾಲಿನ ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿಯನ್ನು ಪಡೆದ ಮಂಜುಳಾ ಇಟಗಿ ಅವರನ್ನು ಕೂಡ ಸನ್ಮಾನಿಸಲಾಯಿತು.

ಕುಮಾರಿ ನಯನ ಅಳವಂಡಿ ಪ್ರಾರ್ಥನೆಗೈದರೆ ಕದಳಿ ಮಹಿಳಾ ವೇದಿಕೆಯ ಸದಸ್ಯರಾದ ವೀಣಾ ಪಾಟೀಲ್ ಮತ್ತು ಗಿರಿಜಾ ಸೂಡಿಯವರು ಎಲ್ಲರನ್ನೂ ಸ್ವಾಗತಿಸಿ ಪುಷ್ಪ ಸಮರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸನ್ಮಾನಿತರ ಪರಿಚಯವನ್ನು ಶಶಿಕಲಾ ಕುಕನೂರ್ ಅವರು ಮಾಡಿಕೊಟ್ಟರು. ನಂತರ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜ್ಯೋತಿ ಕುರಿ ಅವರು ನಡೆಸಿಕೊಟ್ಟರು.

ಲೀಲಾ ಅಕ್ಕೂರ್, ಅನ್ನಪೂರ್ಣ ಬೆಲ್ಲದ್, ಪಾರ್ವತಿ ಮತ್ತು ಗಂಗಾ ಕುಬಸದ್ ಅವರು ಮಹಿಳಾ ದಿನಾಚರಣೆ ಮತ್ತು ಹೆಣ್ಣಿನ ಮಹತ್ವದ ಕುರಿತ ಹಾಡುಗಳನ್ನು ಹಾಡಿದರು. ಪ್ರತಿಭಾ ಹೊಸ್ಮನಿಯವರು ಇಡಿ ಕಾರ್ಯಕ್ರಮವನ್ನು ನಿರೂಪಿಸಿದರು ಶ್ರೀದೇವಿ ಗೋಡಿ ವಂದಿಸಿದರು.

ವೇದಿಕೆಯ ಮೇಲೆ ಎಸ್ ಎಸ್ ಕೆ ಸಮಾಜದ ಅಧ್ಯಕ್ಷರಾದ ಅಶೋಕ್ ಶಿದ್ಲಿಂಗ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬೂದಪ್ಪ ಅಂಗಡಿ ಅವರು ಕೂಡ ಹಾಜರಿದ್ದರು. ಎಸ್ಆರ್ ಬಸಾಪುರ್
ಅವರು ಮಾರ್ಗದರ್ಶಿಯಾಗಿದ್ದರು.
ಎಸ್ ಬಿ ಕರಿಭರಮಗೌಡ್ರು, ಸಂಗಣ್ಣ ಲಿಂಬಿಕಾಯಿ, ಡಾಕ್ಟರ್ ಬಸವರಾಜ್ ಮೇಟಿ, ವಿಶ್ವನಾಥ್ ಉಳ್ಳಾಗಡ್ಡಿ, ಮಹೇಶ್ವರ ಮೇಟಿ, ಶಂಕರ್ ಕುಕನೂರ್, ಹನುಮರೆಡ್ಡಿ ಇಟಗಿ ಎನ್ ಎನ್ ಕಲಕೇರಿ, ಜಗದೀಶ್ ಗವರಾಳ್, ಪಿ ಐ ಗಣ ದಿನ್ನಿ, ವಿ ಜೆ ಹಿರೇಮಠ, ಶರಣಪ್ಪ ಕುಬಸದ್, ಸಿ ಎಸ್ ಅರಸನಾಳ, ಶರಣು ಸೊಲಗಿ, ಡಾಕ್ಟರ್ ಶರತ್ ಮೇಟಿ, ರಂಗನಾಥ್ ರೆಡ್ಡಿ ಬಸಾಪುರ್ ಮತ್ತು ಭರತ್ ಮೇಟಿ ಅವರಲ್ಲದೆ ಶರಣ ಸಾಹಿತ್ಯ ಪರಿಷತ್ತಿನ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಕದಳಿ ಮಹಿಳಾ ವೇದಿಕೆಯ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Don`t copy text!