ಮುಂಡರಗಿಯಲ್ಲಿ ಶರಣ ಚಿಂತನ ಮಾಲಿಕೆ 13
ಕಲ್ಯಾಣದ ಶರಣರಲ್ಲಿ ಸಾಮಾನ್ಯವಾಗಿ ಬಸವಣ್ಣ, ಚೆನ್ನ ಬಸವಣ್ಣ, ಅಲ್ಲಮಪ್ರಭುಗಳು, ಅಕ್ಕಮಹಾದೇವಿಯರ ವಚನಗಳನ್ನು ಉಲ್ಲೇಖಿಸುವ ಜನರು ಇನ್ನೂ ಅನೇಕ ಶಿವಶರಣ ಶರಣೆಯರು ವಚನಗಳನ್ನು ರಚಿಸಿದರು ಎಂಬುದನ್ನು ಮರೆತೇ ಹೋಗಿರುವ ಕಾಲದಲ್ಲಿ ಉಪೇಕ್ಷಿತ ವಚನಕಾರರನ್ನು ಕುರಿತ ವಚನ ಮಾಲಿಕೆಯನ್ನು ಪ್ರಾರಂಭಿಸಿ ಯಶಸ್ವಿಯಾಗಿರುವುದು ಗಮನಾರ್ಹ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ಪ್ರಚುರಗೊಳ್ಳಲಿ ಎಂದು ಮುಂಡರಗಿಯ ಕ. ರಾ.ಬೆಲ್ಲದ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಿ ಸಿ ಮಠದ ಅವರು ಆಶಯ ವ್ಯಕ್ತಪಡಿಸಿದರು.
ಮುಂಡರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಸೌರಭ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಶರಣ ಚಿಂತನ ಮಾಲಿಕೆಯ 13ನೇ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
1500 ವರ್ಷಗಳ ಪ್ರಾಚೀನತೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ವಿಶ್ವಮಟ್ಟದಲ್ಲಿ ವಿಶಿಷ್ಟತೆಯನ್ನು ಪಡೆಯಲು ಜನವಾಣಿಯನ್ನು ದೇವವಾಣಿಯನ್ನಾಗಿಸಿದ ವಚನಕಾರರು ಕಾರಣವಾಗಿದ್ದಾರೆ. ವಚನಕಾರರು ಅತ್ಯಂತ ಸರಳವಾದ ಜನಸಾಮಾನ್ಯರ ಆಡು ಭಾಷೆಯಲ್ಲಿದ್ದು
ಬಸವಾದಿ ಪ್ರಮಥರು ಅನುಭವ ಮಂಟಪದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯನ್ನು ಪೋಷಿಸಿದ ಕಾರಣ ವಚನ ಸಾಹಿತ್ಯವು ಮೂಡಿಬಂತು ಎಂದು ಕೆ ಸಿ ಸಿ ಬ್ಯಾಂಕಿನ
ಸಹಾಯಕ ವ್ಯವಸ್ಥಾಪಕರಾದ ಎಸ್ ವಿ ಪಾಟೀಲ್ ಅವರು ಹೇಳಿದರು. ಶರಣ ಮಾದರ ಚೆನ್ನಯ್ಯನ ಕುರಿತು ಉಪನ್ಯಾಸ ಮಾಡಿದ ಅವರು ಪಲ್ಲವರ ಮಹಾರಾಜ ಕಂಚಿಯ ಕರಿಕಾಲ ಚೋಳನ ಕುದುರೆ ಲಾಯದಲ್ಲಿ ಕುದುರೆಗಳಿಗೆ ಹುಲ್ಲು ತರುವ ಕಾಯಕವನ್ನು ಮಾಡುತ್ತಿದ್ದ ಮಾದರ ಚೆನ್ನಯ್ಯ ಶಿವನ ಪರಮ ಭಕ್ತನಾಗಿದ್ದರೂ ಕೀಳು ಜಾತಿಯ ಆತ ದೇವರ ಪೂಜೆ ಮಾಡುವುದು ನಿಶಿದ್ಧವಾಗಿದ್ದ ಕಾರಣ ಆತನ ಭಕ್ತಿಯನ್ನು ಪ್ರಚುರ ಪಡಿಸಲು ಆ ಶಿವನೇ ಅಂಬಲಿ ಕುಡಿದು ಹೊಟ್ಟೆ ತುಂಬಿಸಿಕೊಂಡ ಘಟನೆಯನ್ನು ಸಾಧ್ಯಂತವಾಗಿ ವಿವರಿಸಿ ಆ ದೇವರಿಗೆ ಬೇಕಾಗಿರುವುದು ಆಡಂಬರದ ಪೂಜೆ ನೇಮ ನಿಷ್ಠೆಗಳಲ್ಲ ಬದಲಾಗಿ ಕೇವಲ ಭಕ್ತಿಯಿಂದ ದೇವರನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಸರೋಜಾ ಹಿರೇಮಠ್ ಅವರು ಮಾದರ ಚೆನ್ನಯ್ಯನವರ ವಚನ ಒಂದನ್ನು ಸುಶ್ರಾವ್ಯವಾಗಿ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ವೇದಿಕೆಯನ್ನು (ಪೋಡಿಯಂ) ತಯಾರಿಸಿಕೊಟ್ಟ ಎಸ್ ವಿ ಪಾಟೀಲ್ ರಿಗೆ ಸನ್ಮಾನಿಸಲಾಯಿತು,ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಧನಸಹಾಯ ಮಾಡಿದವರ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂಜಿ ಗಚ್ಚಣ್ಣವರ್ ಅವರು ಸಾದರಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಆರ್ ಎಲ್ ಪೊಲೀಸ್ ಪಾಟೀಲ್ ರವರು ವೀರಶೈವ ಲಿಂಗಾಯತ ಎಂದು
ಭೇದ ಭಾವ ಮಾಡದೆ ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುನ್ನಡೆಯಬೇಕು. ಶರಣ ಪರಂಪರೆಯಲ್ಲಿ ಭಕ್ತಿ, ದಾಸೋಹ ಮತ್ತು ಕಾಯಕಗಳು ಮುಖ್ಯವಾಗುತ್ತವೆಯೇ ಹೊರತು ಸಾಮಾಜಿಕ ಸ್ವಾಸ್ಥಕ್ಕೆ ಧಕ್ಕೆ ತರುವ ವಿಷಯಗಳಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಕ್ಕಮ್ಮ ಕೊಟ್ಟೂರ್ ಶೆಟ್ಟರ್, ಗಿರಿಜಾ ಕೋರಿ ಶೆಟ್ಟರ್, ಜಯಶ್ರೀ ಅಳವಂಡಿ, ಮಧುಮತಿ ಇಳಕಲ್, ಉಮಾ ದೊಡ್ಡಮನಿ, ಲೀಲಾ ಉಮಚಗಿ, ಶಶಿಕಲಾ ಕುಕನೂರು, ಎಸ್ ಬಿ ಕರಿಭರಮ ಗೌಡರ್, ಎಂ ಎಸ್ ಹೊಟ್ಟಿನ್, ಡಾ. ಸಂತೋಷ್ ಹಿರೇಮಠ, ವಿ ಕೆ ಗುಡದಪ್ಪನವರ್, ಹನುಮರೆಡ್ಡಿ ಇಟಗಿ, ಮೋಹನ್ ಪಾಟೀಲ್, ಎನ್ ಎನ್ ಕಲಕೇರಿ, ಆರ್ ವೈ ಪಾಟೀಲ್, ಮೋಹನ್ ಪಾಟೀಲ್, ಕೃಷ್ಣ ಸಾವಕಾರ, ಎಂ ಎಸ್ ಶೀರನಹಳ್ಳಿ, ಮಹೇಶ್ವರ ಮೇಟಿ ಮುಂತಾದವರು ಹಾಜರಿದ್ದರು.