ಲಿಂಗಕ್ಕರ್ಪಿತವ
ಮಾಡಿಕೊಂಬುದೆ ಶಿವಾಚಾರ
೧೨ ನೇಯ ಶತಮಾನದಲ್ಲಿ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಜಾತಿ, ವರ್ಗ,ವರ್ಣ, ಲಿಂಗ ತಾರತಮ್ಯದಂತಹ ವ್ಯವಸ್ಥೆಗಳ ವಿರುದ್ಧ ಬಸವಣ್ಣನವರು ಹಾಗೂ ಪ್ರಮುಖ ಶಿವಶರಣರು ನಿಷ್ಠುರವಾಗಿ ಸಿಡಿದೆದ್ದರು.ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಹೊಸ ಧರ್ಮದ ತಳಹದಿಯಲ್ಲಿ ಸಮಾಜ ವ್ಯವಸ್ಥೆಯನ್ನು ನಿರ್ಮಿಸ ತೊಡಗಿದರು.
ಅದಕ್ಕಾಗಿ ಸಮಾಜದಲ್ಲಿದ್ದ ಅಸಮಾನತೆಯನ್ನು ಬೇರು ಸಮೇತ ಕಿತ್ತೆಸೆದರು.ನೂರೆಂಟು ದೇವರುಗಳ ನಂಬಿಕೆಯ ಕಲ್ಪನೆಯನ್ನು ಕಿತ್ತು ಹಾಕಿ ಎಕದೇವೋಪಾಸನೆಯ ಪದ್ಧತಿಯನ್ನು ಪ್ರಾರಂಭಿಸಿ ಇಷ್ಟಲಿಂಗದ ಕುರುಹನ್ನು ಎಲ್ಲ ಜನಾಂಗಕ್ಕೆ ನೀಡಿ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಪ್ಪಿಸಿದರು.ಹೊಸ ಧರ್ಮ, ಸಂಸ್ಕೃತಿಯ ಸಮಾಜವನ್ನು ನಿರ್ಮಿಸಿದರು. ಜನಸಾಮಾನ್ಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಮೇಲೆತ್ತಿದರು.ಸಮಾನತೆಯ ಕಲ್ಯಾಣ ಸಮಾಜ ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಈ ಉದ್ದೇಶ ಈಡೇರಿಕೆಗೆ ಅವರು ಕೆಲವು ತತ್ವಗಳನ್ನು ತಾವು ರೂಪಿಸಿದ ಹೊಸ ಧರ್ಮವಾದ ಲಿಂಗಾಯತ ಧರ್ಮದಲ್ಲಿ ಅಳವಡಿಸಿಕೊಂಡರು.
ಅಷ್ಟಾವರಣಗಳು, ಷಟಸ್ಥಲಗಳು, ಪಂಚಾಚಾರಗಳು ಈ ಧರ್ಮದ ಪ್ರಮುಖ ತತ್ವಗಳಾದವು.ಅವುಗಳಲ್ಲಿ ಶರಣರ ಸಮಾನತೆಯ ಸಮಾಜ ನಿರ್ಮಾಣದ ಕನಸನ್ನೆ ತನ್ನ ಮೂಲ ಉದ್ದೇಶವಾಗಿ ಹೊಂದಿರುವದು ಪಂಚಾಚಾರಗಳಲ್ಲಿ ಮೂರನೆಯ ಆಚಾರವಾಗಿ ಬರುವ “ಶಿವಾಚಾರ”.
” ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಾಚಾರ “ ಎನ್ನುವಂತೆ ಎಲ್ಲರನ್ನೂ ಸಮಾನವಾಗಿ ಕಾಣುವುದೆ ಶಿವಾಚಾರ. ಅಂಗದ ಮೇಲೆ ಲಿಂಗವನ್ನು ಧರಿಸಿದ ಎಲ್ಲರನ್ನೂ ಸಮಾನವಾಗಿ ಭಾವಿಸುವುದು ಶಿವಾಚಾರ. ಲಿಂಗ ಧರಿಸಿದವರು ಯಾರೆ ಆಗಿರಲಿ ಅವರಲ್ಲಿ ಬೇಧ ಭಾವ ಮಾಡದೆ ಅವರೊಂದಿಗೆ ಸಾಮರಸ್ಯದಿಂದ ಬಾಳಬೇಕು.ಲಿಂಗ ಧರಿಸಿದವರಲ್ಲಿ ಜಾತಿ, ವರ್ಣ,ವರ್ಗ,ಲಿಂಗ,ಕುಲ,ಗೋತ್ರ ಎಂದು ಅರಸಬಾರದು. ಲಿಂಗ ಧರಿಸಿದವರು ಯಾರೇ ಆಗಿರಲಿ, ಯಾವುದೇ ಧರ್ಮ, ಮತ,ಜಾತಿಗೆ ಸೇರಿರಲಿ ಅವರನ್ನು ಲಿಂಗಾಯತರು ಎಂದು ತಿಳಿಯಬೇಕು. ಲಿಂಗದೇಹಿಗಳಾದ ಎಲ್ಲರನ್ನೂ ‘ಶಿವನ ಸ್ವರೂಪ ‘ ಎಂದು ಭಾವಿಸುವುದು ಶಿವಾಚಾರ.
ಈ ಶಿವಾಚಾರವನ್ನು ಬಸವಣ್ಣನವರು ತಮ್ಮ ವಚನದಲ್ಲಿ ಕೆಳಗಿನಂತೆ ಹೇಳುತ್ತಾರೆ.
ಇವನಾರವ ಇವನಾರವ ಇವನಾನಾರವ ಎಂದೆನಿಸದಿರಯ್ಯ
ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯಾ
ಕೂಡಲಸಂಗಮದೇವ
ನಿಮ್ಮ ಮನೆಯ ಮಗನೆಂದಿನಿಸಯ್ಯಾ
.(ವಚನಸಂಪುಟ-೧,ವಚನಸಂಖ್ಯೆ-೬೨ ಪುಟ-೧೮)
ಇಲ್ಲಿ ಬಸವಣ್ಣನವರು ಇವನಾರವ ಇವನಾರವ ಇವನಾರವ ಎಂಬ ಪದವನ್ನು ಮೂರು ಭಾರಿ ಬಳಸುತ್ತಾರೆ.ಈ ಬಳಕೆ ಕೇವಲ ಕಾಟಾಚಾರಕ್ಕಾಗಿರದೆ ಅದರ ಹಿಂದೆ ಶಿವಾಚಾರದ ತತ್ವವನ್ನು ಹೇಳುವ ಸದುದ್ದೇಶ ಅಡಕವಾಗಿದೆ.
ಮೊದಲನೆಯದಾಗಿ ಜಾತಿ ವರ್ಣವನ್ನು ಆಶ್ರಯಿಸಿ ಶರಣನನ್ನು ಇವನಾರವ ಎಂದು ಪ್ರಶ್ನೆಸಿ ತಾರತಮ್ಯ ಮಾಡಬಾರದು. ಎರಡನೆಯದಾಗಿ ಲಿಂಗವನ್ನು ಆಶ್ರಯಿಸಿ ಪ್ರಶ್ನಿಸುವ ಮೂಲಕ ಲಿಂಗ ತಾರತಮ್ಯ ಮಾಡಬಾರದು .ಮೂರನೆಯದಾಗಿ ಶರಣನ ಕುಲಕಸುಬನ್ನು ಆಧರಿಸಿ ಶರಣನನ್ನು ಬೇಧಭಾವದಿಂದ ಕಾಣಬಾರದು.ಶರಣನನ್ನು ಜಾತಿ,ಲಿಂಗ, ಕುಲಕಸುಬಿನ ಆಧಾರದಿಂದ ಬೇಧಭಾವ ಮಾಡದೆ ಶರಣನನ್ನು ಕೇವಲ ಶರಣನೆಂದು ,ಮಹಾಮನೆಯ ಮಗನೆಂದು ಪರಿಭಾವಿಸಬೇಕು.
ಹೀಗೆ ಎಲ್ಲ ರೀತಿಯ ಬೇಧಭಾವಗಳನ್ನು ತೊರೆದು ಸಮಾನತೆಯಿಂದ ಬಾಳುವುದೆ ಶಿವಾಚಾರ.
ಲಿಂಗ, ಜಂಗಮ ಮೆಚ್ಚುವಂತೆ ನಡೆದು,ಪ್ರಸಾದವನ್ನು ಸ್ವಾಯತ್ತವನ್ನಾಗಿ ಮಾಡಿಕೊಂಡ ಶರಣರೆ ಶಿವಾಚಾರಿಗಳು.ಸಾಕ್ಷಾತ್ ಶಿವನ ಸ್ವರೂಪವೇ ಆದ ಅವರಲ್ಲಿ ಮೇಲುಕೀಳೆಂಬ ಯಾವ ಬೇಧವು ಇರಕೂಡದು.ಶರಣನಾದವ ಕಾಯಕದಿಂದ ಸಂಪಾದಿಸಿ ತಂದು ಅದನ್ನು ಗುರು,ಲಿಂಗ,ಜಂಗಮರಿಗೆ ದಾಸೋಹ ಮಾಡಬೇಕು. ಆ ದಾಸೋಹದಲ್ಲಿ ಯಾವ ಬೇಧಭಾವ ಮಾಡಕೂಡದು.ಅಂದಾಗ ಆತ ಶಿವಾಚಾರಿ ಎನಿಸುತ್ತಾನೆ.
ತನ್ನ ತಾನರಿತು ನಡೆನುಡಿಗಳಲೊಂದಾದ ಶರಣ ತಾನೇ ಶಿವನಾಗಿ ಉಳಿದ ಶಿವಸ್ವರೂಪಿಗಳನ್ನು ತನ್ನ ಸದಾಚಾರದ ನಡೆಯಿಂದ ಜಂಗಮರನ್ನಾಗಿಸುತ್ತಾ ತಾನು ಜಂಗಮನಾಗುವುದೆ ಶಿವಾಚಾರ.ಶರಣ ತನ್ನ ಸದಾಚಾರದಿಂದ ಶಿವತತ್ವವನ್ನು ಅಕ್ಷರಶಃ ಪಾಲಿಸುತ್ತಾ ಪ್ರತಿಯೊಬ್ಬರಲ್ಲಿಯೂ ಶಿವನನ್ನು ಕಾಣುತ್ತಾನೆ. ತಾನು ಮಾತ್ರ ಲಿಂಗವಂತನಾಗಿ ತನ್ನ ಪಾಡಿಗೆ ತಾನಿರುವದನ್ನು ಶರಣರು ಯಾವತ್ತಿಗೂ ಮೆಚ್ಚುವದಿಲ್ಲ.
ಶರಣ ತಾನು ಶಿವಸ್ವರೂಪಿಯಾಗಿ ಸದಾಚಾರವನ್ನು ರೂಢಿಸಿಕೊಂಡು ತನ್ನ ಸುತ್ತಲಿರುವ ಶರಣರನ್ನು ಶಿವಸ್ವರೂಪಿಗಳನ್ನಾಗಿ ಕಂಡು ಅವರು ಸಹ ಸದಾಚಾರಿಗಳಾಗುವಂತೆ ಮಾಡುತ್ತಾನೆ.ಪ್ರತಿಯೊಬ್ಬರನ್ನೂ ಶಿವಸ್ವರೂಪಿಯಾಗಿ ಕಾಣುವದರಿಂದ ಆತ ಶಿವಾಚಾರಿ ಎನಿಸುತ್ತಾನೆ.ಇದರಿಂದ ಅವನಲ್ಲಿ ಇವನಾರವ ಎನ್ನುವ ಬೇಧಬಾವ ಅಳಿದು ಇವನಮ್ಮವ ಎಂದು ಅಪ್ಪಿಕೊಳ್ಳುವ ಮನೋಭಾವ ಬೆಳೆಯುತ್ತದೆ.
ಹೀಗೆ ಜಗದ ಜನರೆಲ್ಲಾ ಒಂದೆ ಎಂಬ ಸಮತಾ ಭಾವನೆಯನ್ನು ಹೊಂದುವುದೆ ಶಿವಾಚಾರ. ಈ ಶಿವಾಚಾರ ಪ್ರತಿಯೊಬ್ಬರ ಸಮತ್ವದ ಜೊತೆಗೆ ಸಮಾಜದ ಆಗುಹೋಗುಗಳ ನಡುವೆ ಸಮತೋಲನವನ್ನು ಸಾಧಿಸುವ ಸಾಧನವಾಗಿದೆ.ಈ ತತ್ವ ಸಮಾಜದಲ್ಲಿರುವ ಜಾತಿ, ವರ್ಗ,ವರ್ಣ,ಲಿಂಗ ,ಆಶ್ರಮಗಳಲ್ಲಿರುವ ಬೇಧಭಾವವನ್ನು ಕಿತ್ತೊಗೆಯುತ್ತದೆ.ಸರ್ವಸಮಾನತೆಯನ್ನು ಸಾಧಿಸುವುದು. ಇಂತಹ ಶಿವಾಚಾರವನ್ನು ಕುರಿತು ಅನೇಕ ಶರಣರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ.ಅಂತೆಯೇ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುದೇವರು ಸಹ ಶಿವಾಚಾರದ ತತ್ವವನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸುತ್ತಾರೆ.
‘ಶೂನ್ಯ ಸಿಂಹಾಸನಾಧೀಶ್ವರ‘ ಎನಿಸಿದ ಅಲ್ಲಮಪ್ರಭು ಮಹಾ ನಿಷ್ಠುರವಾದಿ.ಅಪ್ರತಿಮ ಅನುಭವಿಯಾಗಿದ್ದ ಅಲ್ಲಮಪ್ರಭು ತನ್ನೊಬ್ಬನ ಉದ್ಧಾರ ಮಾತ್ರ ಬಯಸದೆ ಲೋಕದ ಇತರ ಸಾಧಕರ ಹಾಗೂ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸಿದ್ದ ಸಮಾಜ ಚಿಂತಕ.ದೀನದಲಿತರನ್ನು ಸಂತೈಸುವ, ಅಜ್ಞಾನಿಗಳನ್ನು ಎಚ್ಚರಿಸುವ, ಸಾಧನೆ ಮಾಡುವ ಸಾಧಕರಿಗೆ ಮಾರ್ಗದರ್ಶನ ಮಾಡುವ ಲೋಕೋಪಕಾರಿ.
ಬಸವಣ್ಣನವರು ರೂಪಿಸಿದ ಕಲ್ಯಾಣದ ಆಂದೋಲನಕ್ಕೆ ಹೊಸ ಚೇತನ, ಹೊಸ ಶಕ್ತಿಯನ್ನು ತುಂಬಿ ಅದಕ್ಕೆ ಪೂರ್ಣ ಬೆಂಬಲವನಿತ್ತವ.ಬೆಡಗಿನ ವಚನ ಪದ್ಧತಿಗೆ ಒಂದು ತೆಜಸ್ಸನ್ನು ತಂದು ಕೊಟ್ಟ ವಚನಕಾರ. ವೈಚಾರಿಕ ದೃಷ್ಟಿಕೋನ, ಆಚಾರ ವಿಚಾರಗಳ ಸಮನ್ವಯದ ತಳಹದಿಯ ಮೇಲೆ ರಚನೆಗೊಂಡ ಶರಣಧರ್ಮ ನಿರ್ಮಾಣದ ಮುಂದಾಳಿಗ.
ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುವಿನ ಸುಮಾರು ೧೬೬೫ ವಚನಗಳು ದೊರೆತಿವೆ.ಆತನ ವಚನಗಳಲ್ಲಿ ಷಟಸ್ಥಲ ವಚನಗಳ ಸಂಖ್ಯೆಯೆ ಅಧಿಕವಾಗಿವೆ.ಅಂತೆಯೇ ಅವನ ವಚನಗಳಲ್ಲಿ ಲಿಂಗಾಯತ ಧರ್ಮದ ತತ್ವಗಳಾದ ಅಷ್ಟಾವರಣಗಳು, ಪಂಚಾಚಾರಗಳಿಗೆ ಸಂಬಂಧಿಸಿದ ವಚನಗಳು ದೊರೆಯುತ್ತವೆ. ಹಾಗೆಯೇ ಆತನ ವಚನಗಳಲ್ಲಿ ಶಿವಾಚಾಕ್ಕೆ ಸಂಬಂಧಿಸಿದ ವಚನಗಳನ್ನು ಸಹ ಕಾಣಬಹುದಾಗಿದೆ. ಅಲ್ಲಮ ತನ್ನ ವಚನಗಳಲ್ಲಿ ಶಿವಾಚಾರ ಪದ ಬಳಕೆ ಮಾಡಿಲ್ಲ. ಆದರೆ ಆತನ ಕೆಲವೊಂದು ವಚನಗಳು ಶಿವಾಚಾರ ತತ್ವವನ್ನು ಕುರಿತೆ ಹೇಳುತ್ತವೆ.
ಶಿವಾಚಾರದ ಮೊದಲನೆಯ ಅಂಶವೇ ಜಾತಿ ,ವರ್ಣ ಆಧರಿಸಿ ತಾರತಮ್ಯ ಮಾಡದಿರುವುದು. ವಿವಿಧ ಜಾತಿಗಳಿಂದ ಬಂದವರು ಲಿಂಗದೀಕ್ಷೆಯನ್ನು ಪಡೆದ ನಂತರ ಅವರಲ್ಲಿ ಸಂಪೂರ್ಣ ಸಾಮರಸ್ಯದ ಭಾವನೆ ಬರಬೇಕು.
ಅವರೆಲ್ಲ ಜಾತಿ ತಾರತಮ್ಯದ ಭಾವನೆಗಳನ್ನು ಮೀರಿ ನಾವೆಲ್ಲ ಒಂದೆ, ಲಿಂಧಾರಿಗಳೆಲ್ಲ ಶಿವಾಚಾರಿಗಳು ಎಂಬ ಭಾವನೆಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಸಾಮರಸ್ಯದಿಂದ ಬಾಳಬೇಕು.ಹಾಗಿದ್ದರೂ ಕೂಡಾ ಕೆಲವರು ಲಿಂಗದೀಕ್ಷೆಯನ್ನು ತೆಗೆದುಕೊಂಡು ಲಿಂಗವಂತರಾದರು ಕೂಡಾ ಸಮಾನತೆಯಿಂದ ಬಾಳಲಿಲ್ಲ.ಅಲ್ಲಿಯೂ ಕೂಡ ಕೆಲವು ವಿಚಾರದಲ್ಲಿ ಜಾತಿ,ವರ್ಣ ತಾರತಮ್ಯ ಮಾಡತೊಡಗಿದರು. ಈ ತಾರತಮ್ಯ ಲಿಂಗಾಯತ ಧರ್ಮಕ್ಕೆ ವಿರುದ್ಧವಾದುದು. ಇಂತಹ ತಾರತಮ್ಯವನ್ನು ಅಲ್ಲಮರು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸುತ್ತಾರೆ.
ವಾರವೇಳು ಜಾತಿ ಹದಿನೆಂಟಂದು ನುಡಿವ ಪಾತಕರ ನುಡಿಯ ಕೇಳಲಾಗದು
ಅದೆಂತೆಂದಡೆ
ವಾರವೆರಡು,ಜಾತಿಯೆರಡು,ಭವಿಯೊಂದು ಕುಲ ಭಕ್ತನೊಂದು ಕುಲ
ಇಂತೀ ಎಂಬತ್ತು ನಾಲ್ಕು ಲಕ್ಷ ಜೀವಕ್ಕೆ ಜೀವನವೆ ಆಹಾರ
ಜೀವ ತಪ್ಪಿಸಿ ಜೀವಿಸಬಾರದು
‘ ಯಥಾ ಮಂತ್ರ ತಥಾ ಸಿದ್ಧಿ’ ಎಂದು ಲಿಂಗಕ್ಕರ್ಪಿತವ ಮಾಡಿಕೊಂಬುದೆ ಶುದ್ಧ
ಉಳಿದಾದುವೆಲ್ಲ ಜೀವನ್ಮಾಯ ಗುಹೇಶ್ವರ
(ವಚನಸಂಪುಟ-೨,ವಚನಸಂಖ್ಯೆ-೧೫೨೮,ಪುಟ-೪೫೫)
ಲಿಂಗದೀಕ್ಷೆ ಪಡೆದು ತಮ್ಮನ್ನು ಲಿಂಗಕ್ಕೆ ಅರ್ಪಿಸಿಕೊಂಡ ಶರಣರೆಲ್ಲ ಶುದ್ಧರಾಗುತ್ತಾರೆ.ಅವರೆಲ್ಲರೂ ಭಕ್ತರು. ಲಿಂಗದೀಕ್ಷೆಯನ್ನು ಪಡೆಯದವರೆಲ್ಲ ಭವಿಗಳು.ಭೂಮಿಯ ಮೇಲೆ ಇರುವುದು ಎರಡೇ ಜಾತಿ.ಒಂದು ಲಿಂಗದೀಕ್ಷೆಯನ್ನು ಪಡೆದು ಸದುವಿನಯ,ಸದಾಚಾರಿಗಳಾಗಿ ,ಕಾಯಕನಿಷ್ಟೆಯಿಂದ ಬದುಕುವ ಸದ್ಭಕ್ತರದು ಒಂದು ಕುಲ. ಲಿಂಗದೀಕ್ಷೆಯಿಂದ ಹೊರಗುಳಿದು ದುರ್ಗುಣ,ದುರಾಚಾರಿಗಳಾಗಿ ,ಪರಾವಲಂಬಿ, ಸೋಮಾರಿಗಳಾದ ಭವಿಗಳದು ಇನ್ನೊಂದು ಕುಲ.ಹಾಗಿದ್ದು ಕೂಡಾ ಭಕ್ತರಲ್ಲಿ ಹದಿನೆಂಟು ಜಾತಿಗಳೆಂದು ವಿಂಗಡಿಸುವವರು ಮಹಾಪಾತಕಿಗಳು.ಅವರ ನುಡಿಯ ಕೇಳಲಾಗದು ಎನ್ನುತ್ತಾರೆ ಅಲ್ಲಮಪ್ರಭು. ಹುಟ್ಟಿನಿಂದ ಯಾರು ಮೇಲುಕೀಳುಗಳಲ್ಲ.ನಮ್ಮ ಆಚಾರ ವಿಚಾರಗಳು ನಮ್ಮ ಶ್ರೇಷ್ಠತೆ, ಕನಿಷ್ಠತೆಯನ್ನು ನಿರ್ಧರಿಸುತ್ತವೆ ಎಂದು ಹೇಳಿ ಹುಟ್ಟಿನಿಂದ ಬಂದ ಹೊಲೆತನವನ್ನು ಕಿತ್ತೊಗೆದರು. ಹುಟ್ಟಿನಿಂದ, ಕುಲದಿಂದ ದೊಡ್ಡಸ್ತಿಕೆ ಬರುವುದಿಲ್ಲ ಮಾಡುವ ಕಾಯಕ, ಆಯ್ಕೆ ಮಾಡಿಕೊಂಡ ರೀತಿ,ಮಾಡುವ ವಿಧಾನದಿಂದ ದೊಡ್ಡಸ್ತಿಕೆ ಬರುತ್ತದೆ.ಶರಣನಾದವ ಕೇವಲ ಮನುಷ್ಯರನ್ನು ಮಾತ್ರ ಜೀವವೆಂದು ಭಾವಿಸದೆ ಎಂಬತ್ತನಾಲ್ಕು ಲಕ್ಷ ಜೀವರಾಶಿಗಳನ್ನು ಮಾನವೀಯತೆಯಿಂದ ಕಾಣಬೇಕು.ಇಡೀ ಜೀವಸಂಕುಲವನ್ನು ಬೇಧಭಾವ ಮಾಡದೆ ಸಮಾನತೆಯಿಂದ ಕಾಣುವ ಭಾವ ಇಲ್ಲಿದೆ. ಹೀಗೆ ಸಕಲ ಜೀವರಾಶಿಗಳನ್ನು ಮಾನವೀಯತೆಯ ಭಾವನೆಯಿಂದ ಕಾಣುವ ತತ್ವವೇ ಶಿವಾಚಾರ.
ಲಿಂಗ ತಾರತಮ್ಯ ಮಾಡದಿರುವುದು ಶಿವಾಚಾರ ತತ್ವದ ಎರಡನೆಯ ಅಂಶ.
ಶರಣರು ಹೆಣ್ಣು ಗಂಡು ಎಂಬ ಲಿಂಗಬೇಧವನ್ನು ಒಪ್ಪುವುದಿಲ್ಲ. ಅವರು ಪುರುಷ ಶ್ರೇಷ್ಠ, ಸ್ತ್ರೀ ಕನಿಷ್ಠ ಎಂಬ ಭಿನ್ನತೆಯನ್ನು ತಿರಸ್ಕರಿಸಿದರು. ಸ್ತ್ರೀ ಪುರುಷರಲ್ಲಿರುವ ದೈಹಿಕ ವ್ಯತ್ಯಾಸ ನಿಸರ್ಗದತ್ತ ನಿಯಮ.ಆದರೆ ಅವರಿಬ್ಬರಲ್ಲಿ ಅಂತರ್ಗತವಾಗಿರು ದೈವಿಚೈತನ್ಯ ಒಂದೇ ಸ್ವರೂಪದಲ್ಲಿದೆ.ಅಂತರಂಗದಲ್ಲಿರುವ ಅರಿವು,ಸುಜ್ಞಾನ,ಆತ್ಮಚೇತನ ಭಿನ್ನವಾದವುಗಳಲ್ಲ.ಹೀಗಾಗಿ ಯಾರು ಮೇಲಲ್ಲ,ಯಾರು ಕೀಳಲ್ಲ ಎಂದು ಸಾರಿ ಶತಶತಮಾನಗಳಿಂದ ಸ್ತ್ರೀಯರನ್ನು ಪುರುಷ ಪ್ರಧಾನ ಸಮಾಜ ತುಳಿದುಕೊಂಡು ಬಂದದನ್ನು ಶರಣರು ತೊಡೆದು ಹಾಕಿದರು. ಅಷ್ಟೇ ಅಲ್ಲ ಸ್ತ್ರೀಯರಿಗೆ ಅನುಭವ ಮಂಟಪದಲ್ಲಿ ಸಮಾನ ಅವಕಾಶ ಕಲ್ಪಿಸಿದರು. ಪರಿಣಾಮವಾಗಿ ಶಿವಶರಣೆಯರು ವಚನಗಳನ್ನು ರಚಿಸಿದರು.ಅಂದಿನ ವಚನಕಾರ್ತಿಯರು ಆಧ್ಯಾತ್ಮಿಕ ಹಾಗೂ ಸಾಹಿತ್ಯಕ ಕ್ರಾಂತಿಯನ್ನು ಮಾಡಿದಲ್ಲದೆ ತಮ್ಮ ಗಂಡಂದಿರ ತಪ್ಪು ತಿಳಿವಳಿಕೆಯನ್ನು ತಿದ್ದಿ ವಿಚಾರಪತ್ನಿಯರು ಎನಿಸಿಕೊಂಡರು.
ಕೆಲವು ವಿಚಾರಪತ್ನಿಯರಾದ ಶಿವಶರಣೆಯರ ಜೀವನದ ಘಟನೆಗಳನ್ನು ನೋಡಿದಾಗಲಂತು ಸ್ತ್ರೀ ಕೂಡ ಪುರುಷರನ್ನು ಮೀರಿಸುವ ಜ್ಞಾನಸಿದ್ಧಿಯನ್ನು ಪಡೆದಿದ್ದರೆಂಬುವುದರಲ್ಲಿ ಸಂಶಯವಿಲ್ಲ.
ಆದರೆ ಪಾರಂಪರಿಕ ಸಮಾಜದಲ್ಲಿ ಸ್ತ್ರೀ ಕೇವಲ ಮಾಂಸದ ಮುದ್ದೆ ಎಂಬ ನಂಬಿಕೆ ಬೇರೂರಿತ್ತು.ಅವರು ಹೆಣ್ಣನ್ನು ‘ಮಾಯೆ’ ಎಂದು ಭಾವಿಸಿದ್ದರು. ಹೆಣ್ಣು ತಾಯಿ, ಹೆಂಡತಿ, ಮಗಳ ರೂಪದಲ್ಲಿ ಕಾಡುವ ಮಾಯೆ.ಇವಳು ನಮ್ಮ ಆಧ್ಯಾತ್ಮಿಕ ಸಾಧನೆಗೆ ಅಡ್ಡಿ ಎಂಬ ಪರಿಕಲ್ಪನೆ ಅವರಲ್ಲಿತ್ತು. ಹೀಗಾಗಿ ಅವರು ಧಾರ್ಮಿಕ ವಲಯದಿಂದ ಹೆಣ್ಣನ್ನು ದೂರವೇ ಇರಿಸಿದ್ದರು.ಇದು ಶರಣರ ಶಿವಾಚಾರ ತತ್ವಕ್ಕೆ ವಿರುದ್ಧವಾಗಿತ್ತು. ಇದನ್ನು ಶರಣರು ನಿರಾಕರಿಸಿದರು. ಅಲ್ಲಮನು ಸಹ ಶಿವಾಚಾರ ತತ್ವಕ್ಕೆ ವಿರುದ್ಧವಾದ ಲಿಂಗ ತಾರತಮ್ಯವನ್ನು ವಿರೋಧಿಸುತ್ತಾನೆ.
ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಅಸೆಯೆ ಮಾಯೆ ಕಾಣಾ ಗುಹೇಶ್ವರ
(ವಚನ ಸಂಪುಟ-೨,ವಚನ ಸಂಖ್ಯೆ-೭೨,ಪುಟ-೨೫)
ಹೊನ್ನು,ಹೆಣ್ಣು, ಮಣ್ಣುಗಳ್ಯಾವವು ಮಾಯೆಯಲ್ಲ.ನಮ್ಮ ಮನದೊಳಗಿರುವ ದೌರ್ಬಲ್ಯವೇ ಮಾಯೆ.ಅವುಗಳನ್ನು ಬಯಸುವ ತನ್ನ ಆಸೆಯೇ ಮಾಯೆಯಾಗಿ ಕಾಡುತ್ತದೆ.ಹೆಣ್ಣು, ಗಂಡು ದೇವನಿಂದ ನಿರ್ಮಿಸಲ್ಪಟ್ಟವುಗಳು.ಅವರು ಪ್ರಕೃತಿದತ್ತವಾದ ಆಸೆಗಳನ್ನು ನೀತಿಯುತವಾಗಿ ತೃಪ್ತಿಪಡಿಸಿ ಮನುಕುಲದ ವಂಶಾಭಿವೃದ್ಧಿಯನ್ನು ಮುಂದುವರೆಸಬೇಕು.ಈ ಸಹಜ ವ್ಯವಸ್ಥೆಯನ್ನು ಬದಿಗಿಟ್ಟು ಹೆಣ್ಣನ್ನು ಮಾಯೆಯೆಂದು ಜರಿದು ಇಂದ್ರಿಯ ನಿಗ್ರಹ ಮಾಡಿಕೊಂಡು ತದನಂತರ ಮನೋವಿಕಾರಗೊಂಡು ಸಮಾಜದಲ್ಲಿ ಅನಾಚಾರ,ಅತ್ಯಾಚಾರಗಳಿಂದ ಕಂಡ ಕಂಡ ಸ್ತ್ರೀಯರನ್ನು ಬೋಗಿಸುತ್ತಾ ಸಮಾಜದ ಜೀವನವನ್ನು ಅದಃಪತನಕ್ಕೆ ಈಡುಮಾಡುವುದು ತಪ್ಪು.
ಬದಲಾಗಿ ಗೃಹಸ್ಥ ಜೀವನವನ್ನು ಆದರ್ಶಮಯವಾಗಿ ನಡೆಸಿದರೆ ಹೆಣ್ಣು ತೊಡಕಾಗಿ ಕಾಣದೆ ನಮ್ಮ ಆಧ್ಯಾತ್ಮ ಸಾಧನೆಗೆ ಸಹಕಾರಿಯಾಗುತ್ತಾಳೆ.ಮನಸ್ಸಿನ ದೌರ್ಬಲ್ಯಗಳನ್ನು, ಆಸೆಗಳನ್ನು ಕಿತ್ತೊಗೆಯದಿದ್ದರೆ ಭೂಮಿಯ ಪ್ರತಿಯೊಂದು ವಸ್ತುವೂ ನಮಗೆ ಮಾಯೆಯಾಗಿಯೆ ಕಾಣುತ್ತದೆ ಎಂದು ಸಾರಿ ಅಲ್ಲಮರು ಲಿಂಗ ತಾರತಮ್ಯವನ್ನು ವಿರೋಧಿಸಿದರು. ಇದನ್ನು ಕೇವಲ ವಚನಗಳಲ್ಲಿ ಹೇಳದೆ ನುಡಿದಂತೆ ನಡೆ ಎಂಬಂತೆ ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದರು. ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು,ವಿಚಾರ ಮಂಡಿಸಲು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದರು.
ಶಿವಾಚಾರದ ಮೂರನೆಯ ಅಂಶವೆ ಕುಲಕಸಬನ್ನು ಆಧರಿಸಿ ಶಿವಶರಣರಲ್ಲಿ ಬೇಧಭಾವ ಮಾಡದಿರುವುದು. ಸಮಾಜದಲ್ಲಿ ವರ್ಣವ್ಯವಸ್ಥೆ ಅಸ್ತಿತ್ವದಲ್ಲಿದ್ದು ದುಡಿಯುವ ಶ್ರಮಿಕ ವರ್ಗವನ್ನು, ಕೈಕಸಬುದಾರರನ್ನು ಶೂದ್ರರೆಂದು ಪರಿಗಣಿಸಲಾಗಿತ್ತು. ಅವರು ಮಾಡುವ ಕುಲಕಸಬನ್ನು ಆಧರಿಸಿ ಅವರನ್ನು ಕೀಳಾಗಿ ಕಾಣುವ ಪರಂಪರೆ ಸಮಾಜದಲ್ಲಿ ಮನೆಮಾಡಿತ್ತು.ಇಂತಹ ಕುಲಕಸಬನ್ನು ಆಧರಿಸಿ ತಾರತಮ್ಯ ಮಾಡುವುದನ್ನು ಶರಣರು ವಿರೋಧಿಸಿದರು. ಬಸವಣ್ಣ “ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬಿನ್ನಗೊಂಡೆಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ತಲೆದಂಡ ತಲೆದಂಡ ” ಎನ್ನುವ ಮೂಲಕ ಶರಣನಾದವ ಯಾವುದೇ ಕಾಯಕ ಮಾಡಿದರು ಬೇಧ ಎನಿಸಬಾರದು.ಮಾಡುವ ಕಾಯಕ ಸತ್ಯಶುದ್ಧ ಮನಸ್ಸಿನಿಂದ ಕೂಡಿದ್ದರೆ ಸಾಕು ಎಂದು ಸಾರಿದರು.ಪರಿಣಾಮವಾಗಿ ಇಲ್ಲಿಯವರೆಗೆ ತಮ್ಮ ಕಾಯಕದಿಂದ ಸಮಾಜದ ದೃಷ್ಟಿಯಲ್ಲಿ ಕೀಳುತನವನ್ನು ಅನುಭವಿಸುತ್ತಿರುವವವರು ತಮ್ಮ ವೃತ್ತಿಯ ಬಗೆಗಿನ ಕೀಳುತನವನ್ನು ಕಳೆದುಕೊಂಡು ತಮ್ಮ ಕಾಯಕದ ಬಗ್ಗೆ ಗೌರವ ಭಾವನೆಗಳನ್ನು ಬೆಳೆಸಿಕೊಂಡರು.
ಶಿವಾಚಾರ ತತ್ವಕ್ಕೆ ವಿರುದ್ಧವಾದ ಕುಲಕಸಬನ್ನು ಆಧರಿಸಿ ಬೇಧಭಾವ ಮಾಡುವುದನ್ನು ಅಲ್ಲಮಪ್ರಭುವರು ಸಹ ನಿಷ್ಠುರವಾಗಿ ವಿರೋಧಿಸುತ್ತಾರೆ.
ಸಹಜವ ನುಡಿದಡೆ ಸೇರುವರಿಲ್ಲ ಕಾಣಿರಣ್ಣಾ
ಅಸಹಜಕ್ಕಲ್ಲದೆ ಲೋಕ ಭಜಿಸದು
ಕೆರೆಯ ಕಟ್ಟಿಸುವನ (ಕಟ್ಟುವನ?) ಕಂಡು ಒಡ್ಡರಾಮಯ್ಯನೆಂದಡೆ
ಮುಳಿಸಿನಿಂದ ಲಿಂಗತನುವ ನೋಯಿಸುವರ?
ನಮ್ಮ ಗುಹೇಶ್ವರಲಿಂಗವು ಜಗದೊಳಗೆ ಪರಿಪೂರ್ಣವಾದ ಕಾರಣ
ಶರಣರ ನೋವು ಮರಳಿ ಪಾತಕರ ತಾಗಿದಡೆ
ಅಲ್ಲಯ್ಯ ನೋಡಿ ನಗುತಿರ್ದನು
(ವಚನ ಸಂಪುಟ-೨,ವಚನ ಸಂಖ್ಯೆ-೧೫೮೫,ಪುಟ-೪೭೧)
ಶರಣರನ್ನು ಅವರ ವ್ಯಕ್ತಿತ್ವದಿಂದ ಗುರುತಿಸಬೇಕೆ ಹೊರತು ಅವರು ಮಾಡುವ ಕಾಯಕದಿಂದಲ್ಲ.ಸಿದ್ಧರಾಮ ಮಹಾಜ್ಞಾನಿ.
ಅವನನ್ನು ಅವನ ವಚನಗಳಿಂದ ,ಜ್ಞಾನದಿಂದ ಅಳಿಯಬೇಕೆ ಹೊರತು ಆತ ಕೆರೆಕಟ್ಟಿಸುವ ಕಾರ್ಯ ನೋಡಿ ಒಡ್ಡನೆಂದು ಕರೆದು ಲಿಂಗವೆ ತಾನಾಗಿರುವ ಆತನ ಮನಸ್ಸನ್ನು ನೋಯಿಸುವ ಕೆಲಸ ಮಾಡಬಾರದು.ಹಾಗೆ ಮಾಡುವವರು ಮಹಾಪಾತಕರು.ಶರಣರ ನೋವು ಮರಳಿ ತಟ್ಟಿದರೆ ಅವರು ಉಳಿಯಲು ಸಾಧ್ಯವಿಲ್ಲ .ಅಂತಹ ಪಾತಕರು ನೋವು ಪಡುವಾಗ ರಕ್ಷಿಸಬೇಕಾದ ದೇವರು ಸಹ ನೋಡಿ ನಗುತ್ತಾನೆ ಹೊರತು ರಕ್ಷಿಸಲು ಬಾರನು.ಹಾಗಾಗಿ ಶರಣರನ್ನು ಅವರ ಕುಲಕಸಬನ್ನು ಆಧರಿಸಿ ಕೀಳಾಗಿ ಪರಿಭಾವಿಸಬಾರದೆಂದು ಅಲ್ಲಮ ತಿಳಿಸುತ್ತಾನೆ.
ಹೀಗೆ ಅಲ್ಲಮಪ್ರಭು ಜಾತಿ ತಾರತಮ್ಯ, ಲಿಂಗ ತಾರತಮ್ಯ, ಕುಲಕಸಬು ತಾರತಮ್ಯವನ್ನು ನಿಷ್ಠುರವಾಗಿ ಖಂಡಿಸುತ್ತಾನೆ.ತನ್ನ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ಲಿಂಗ, ವೃತ್ತಿಯವರಿಗು ಬೇಧಭಾವ ಮಾಡದೆ ಸಮಾನ ಅವಕಾಶ ಕಲ್ಪಿಸುತ್ತಾನೆ.ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳಲು ಅಭಿವ್ಯಕ್ತಿ ಸ್ವಾತಂತ್ರ್ಯ ನಿಡುತ್ತಾನೆ.ಪ್ರತಿಯೊಬ್ಬರನ್ನು ಸಮಾನ ಭಾವದಿಂದ ಕಂಡ ಅಲ್ಲಮಪ್ರಭು ತನ್ನ ವಚನಗಳಲ್ಲಿ ಶಿವಾಚಾರದ ತತ್ವಗಳನ್ನು ಕೇವಲ ಆಚಾರವಾಗಿ ಹೇಳದೆ ಅದನ್ನು ಕಾರ್ಯರೂಪಕ್ಕೆ ತರುವ ಮೂಲಕ ” ನಿಜ ಶಿವಾಚಾರಿ” ಎನಿಸುತ್ತಾನೆ.
–ಶ್ರೀಮತಿ ರಾಜೇಶ್ವರಿ ಶೀಲವಂತರು ಬೀಳಗಿ