ಐತಿಹಾಸಿಕ ಪ್ರಜ್ಞೆಯ ಜಾದೂಗಾರ ಡಾ. ಶಿವಾನಂದ ಜಾಮದಾರ

ಐತಿಹಾಸಿಕ ಪ್ರಜ್ಞೆಯ ಜಾದೂಗಾರ ಡಾ. ಶಿವಾನಂದ ಜಾಮದಾರ

 

 

 

 

 

 

 

 

 

 

ಹೊಗಳಲು ಅಥವಾ ತೆಗಳಲು ಇತ್ತೀಚೆಗೆ ತುಂಬಾ ಆತಂಕವಾಗುತ್ತಲಿದೆ, ಏಕೆಂದರೆ ಒಳ್ಳೆಯವರು ಎಂದು ಹೊಗಳಿಸಿಕೊಂಡವರ ಬಣ್ಣ ಕೆಲ ದಿನಗಳಲ್ಲಿ ಬದಲಾಗುತ್ತದೆ, ಹಾಗೆಯೇ ಕೆಟ್ಟವರು ಎಂದು ಬೈಸಿಕೊಂಡವರು ದಿಢೀರ್ ಎಂದು ಉಪಕಾರ ಮಾಡಿ ಬಿಡುತ್ತಾರೆ.

ಈ ಅನುಭವ ಕಳೆದ ನಾಲ್ಕು ತಿಂಗಳಿನಿಂದ, ಅಂದರೆ ವಚನ ಟಿವಿ ಆರಂಭ ಮಾಡಿದಾಗಿನಿಂದ ಹೆಚ್ಚು ಭಾಸವಾಗುತ್ತದೆ. ‌ಒಳ್ಳೆಯವರು ಸದಾ ನನ್ನ ಜೊತೆಗಿರಬಹುದು ಎಂದು ಭಾವಿಸಿದ, ‘ಸೋ ಕಾಲ್ಡ್’ ಒಳ್ಳೆಯವರು ಬಯಲಾಗಿ, ನನ್ನನ್ನೂ ಬಯಲ ಬೆತ್ತಲೆ ಮಾಡಿ ಮಾಯವಾಗಿದ್ದಾರೆ. ‌ದೂರದೂರಿನ ಅಪರಿಚಿತರು, ಅದಮ್ಯ ಉತ್ಸಾಹದ ಭರವಸೆಯಾಗಿದ್ದಾರೆ.

ಆದರೆ ಯಾವುದೂ ಶಾಶ್ವತವಲ್ಲ ಎಂಬಂತೆ, ನಾನು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ, ಏಳು ನೂರಾ ಎಪ್ಪತ್ತು (೭೭೦) ಅಮರ ಗಣಂಗಳನ್ನು ನಂಬಿ ಸಾಗಿದ್ದೇನೆ, ಸಾಗುತ್ತಲೇ ಇರುತ್ತೇನೆ.

ಈಗೇಕೆ ಈ ಮಾತು? – ಇತ್ತೀಚೆಗೆ ವಚನ ವಾಹಿನಿಯಲ್ಲಿ ಕೆಲವರ ಸಂದರ್ಶನಗಳು ಬೇಗ ವೈರಲ್ ಆಗಿವೆ. ಅದಕ್ಕೆ ಕಾರಣ ಅವರ ವೈಯಕ್ತಿಕ ವರ್ಚಸ್ಸು ಹಾಗೂ ನನ್ನ ಸಹನೆಯೂ ಇರಬಹುದು. ಇವರಲ್ಲಿ ಸಾಣೇಹಳ್ಳಿ ಶ್ರೀಗಳು, ಡಾ. ಶಿವಾನಂದ ಜಾಮದಾರ ಹಾಗೂ ರಂಜಾನ್ ದರ್ಗಾ ಪ್ರಮುಖರು. ನೂರಾರು ಕಿಲೋಮೀಟರ್ ಪಯಣ ಮಾಡಿ, ಫಳ ಫಳ ಹೊಳೆಯುವ ಲೈಟ್ ಬೆಳಕಲಿ‌ ಆತಂಕದಿಂದ ಪ್ರಶ್ನೆ ಮಾಡಿ ಬೈಸಿಕೊಂಡದ್ದು ಇದೆ.‌ ಆದರೆ ಈ ಸಂದರ್ಶನಗಳನ್ನು ಅನೇಕರು ‘ಡಿಜಿಟಲ್ ಅನುಭವ ಮಂಟಪ’ ಎಂದು ಕೊಂಡಾಡಿದ್ದಾರೆ. ಇರಲಿ ‌ಅದೇನೆ ಸಂಕಷ್ಟ ಎದುರಾದರೂ ನಾನು ಸಾಗುತ್ತಲೇ ಇರುತ್ತೇನೆ ೭೭೦ ಶರಣರೊಂದಿಗೆ.

ಐತಿಹಾಸಿಕ ಪ್ರಜ್ಞೆಯ ಜಾದೂಗಾರ ಜಾಮದಾರ ಇತ್ತೀಚೆಗೆ ಲಕ್ಷಾಂತರ ವೀಕ್ಷಕರ ಗಮನ ಸೆಳೆದ ಡಾ. ಜಾಮದಾರ ಅವರ ಮಾತುಕತೆ ನನ್ನ ಮಟ್ಟಿಗೆ ಅದ್ಭುತ ಅನುಭವ. ಇವರನ್ನು ನಾನು ಕೇವಲ ಎರಡು ವರ್ಷದಿಂದ ನೇರವಾಗಿ ಬಲ್ಲೆ, ಆದರೆ ಇದಕ್ಕೂ ಮೊದಲು ಅವರ ವ್ಯಕ್ತಿತ್ವದ ಘನತೆ ಗೊತ್ತಿತ್ತು, ಭೇಟಿ ಆಗಿರಲಿಲ್ಲ. ‌ದಕ್ಷತೆ, ಪ್ರಾಮಾಣಿಕತೆಯೂ ಗೊತ್ತಿತ್ತು.
ಆದರೆ ನಾನೊಬ್ಬ ಬರಹಗಾರ, ನನಗೆ ನನಗಿಂತ ‘ಬುದ್ಧಿವಂತರು ಹಾಗೂ ಪ್ರಾಮಾಣಿಕರು’ ಮುಖ್ಯ, ಏಕೆಂದರೆ ನಾನೇ ಶತ ದಡ್ಡ ನನಗಿಂತ ದಡ್ಡರು ಹಾಗೂ ಕೆಟ್ಟವರ ಜೊತೆಗೆ ನನಗೇನು ಕೆಲಸ!?

ಇರಲಿ ಡಾ. ಜಾಮದಾರ ಅವರ ಬಗ್ಗೆ ಅನೇಕ ಊಹಾಪೋಹದ ಮಾತುಗಳ ಕೇಳಿದ್ದೆ, ‘ತುಂಬಾ ಮುಂಗೋಪಿ, ಯಾರ ಮಾತನ್ನೂ ಕೇಳುವುದಿಲ್ಲ, ಅಹಂಕಾರಿ, ಐಎಎಸ್ ಮೆಂಟಾಲಿಟಿಯ ಸರ್ವಾಧಿಕಾರಿ’ ಹೀಗೆ ಏನೇನೊ ಕೇಳಿಸಿಕೊಂಡು ದೂರವಿದ್ದೆ. ಆದರೆ ಒಮ್ಮೆ ಇವರನ್ನು ಭೇಟಿಯಾಗಿ, ನನ್ನ ‘SWOC analysis’ ತಂತ್ರ ಬಳಸಿ ಮಾತನಾಡಿಸಬೇಕು ಎಂದುಕೊಂಡಿದ್ದೆ. ಇದನ್ನು ಕಲ್ಯಾಣದ ಗೆಳೆಯರೊಬ್ಬರು ‘ಆಗು ಮಾಡಿದರು’. ಆಗ ಸುದೀರ್ಘ ಎಂದರೆ, ತುಂಬಾ ಸುದೀರ್ಘವಾಗಿ ಮಾತನಾಡಿ ಎಲ್ಲಾ ಅನಗತ್ಯ ಅನುಮಾನಗಳನ್ನು ದೂರ ದೂಡಿದರು. ಅವರ ಕುರಿತಾದ ಇರುವ ನೆಗೆಟಿವ್ ಮಾತುಗಳಲಿ ಕಂಡದ್ದು ಬರೀ ಅರ್ಧಸತ್ಯ! ನಾಲ್ಕು ಕಂತುಗಳ ಸಂದರ್ಶನದ ನಂತರ, ನಾಡಿನ ಖ್ಯಾತ ವಾಗ್ಮಿ ಹಾಗೂ ಸಾಧಕರೋರ್ವರ ವಿಡಿಯೋಗಾಗಿ ನೀಡಿದ ಅಕ್ಯಾಡಮಿಕ್, ಸಂಶೋಧನಾತ್ಮಕ, ಆಳ ಅಧ್ಯಯನದ ಪ್ರತಿಕ್ರಿಯೆಯ ವಿವರಣೆ ಕೇಳಿ ಬೆರಗಾದೆ, ಈಗ ಇಡೀ ನಾಡೇ ಬೆರಗಾಗಿದೆ.

ಇಂಗ್ಲಿಷ್ ಸಾಹಿತ್ಯ, ವಚನಗಳ ಮಧ್ಯ ಬೆಳೆದ ನನಗೆ, ಅವರ ಎತ್ತರದ ಓದುವಿಕೆ ಮತ್ತು ಸ್ಮರಣ ಶಕ್ತಿಯ ಹಂತಕ್ಕೆ ಏರಲಾಗದು ಎನಿಸಿತು. ಅವರು ಕೇವಲ ಜಾಣ ಐಎಎಸ್ ಅಲ್ಲ, ಅದ್ಭುತ ಇತಿಹಾಸಕಾರರು ಹೌದು! ಅಲ್ಲ ಎನ್ನುವವರು ಅವರ ಎಲ್ಲಾ ವಿಡಿಯೋ ನೋಡಿ.
ಸರಿ ಸುಮಾರು ಎರಡು ತಾಸು, ಒಂದಿನಿತು ಬ್ರೇಕ್ ತೆಗೆದುಕೊಳ್ಳದೆ ನಿರಂತರ ವಿವರಣೆ ನೀಡಿದರು.

ಆ ವಿವರಣೆಯಲ್ಲಿನ ಖಚಿತತೆ, ಆತ್ಮವಿಶ್ವಾಸ, ಆಳ-ಅಗಲಗಳ ಅಭಿವ್ಯಕ್ತಿ ಬೆರಗು ಮೂಡಿಸಿತು.‌ ಸ್ವತಃ ಡಾ. ಜಾಮದಾರ ಅವರು ಒಂದೂವರೆ ತಾಸಿನ ವಿಡಿಯೋ ಬೇಡ, ಮೂರು ಭಾಗ ಮಾಡಿ ಎಂದಿದ್ದರು, ಆದರೆ ಒಂದೂವರೆ ತಾಸಿನ ವಿವರಣೆಯನ್ನು ಒಂದಿನಿತು ಸ್ಕಿಪ್ ಮಾಡದೆ ಲಕ್ಷಾಂತರ ವೀಕ್ಷಕರು ನೋಡಿ ಬೆರವಾಗಿದ್ದಾರೆ. ನೂರಾರು ವೀಕ್ಷಕರು ಖುದ್ದಾಗಿ ಮಾತನಾಡಿ ತಮ್ಮ ಸೋಜಿಗವನ್ನು ಹಂಚಿಕೊಂಡಿದ್ದಾರೆ. ಇವರು ಖಂಡಿತವಾಗಿ ಕನ್ನಡ ನೆಲದ ಆಸ್ತಿ, ಮುಖ್ಯವಾಗಿ ವಚನ ಚಳವಳಿ ಹಾಗೂ ಐತಿಹಾಸಿಕ ವಿವರಣೆಯ ಸಾಮರ್ಥ್ಯದ ಉಪಯೋಗವನ್ನು ನಾವು ಪಡೆದುಕೊಳ್ಳಲೇ ಬೇಕು. ಇದನ್ನು ಅರ್ಥಪೂರ್ಣವಾಗಿ ದಾಖಲಿಸಿ ನಾಡಿನ ಯುವಕರಿಗೆ, ಐತಿಹಾಸಿಕ ಸತ್ಯಗಳ ಅರಿಯುವ ಜಿಜ್ಞಾಸುಗಳಿಗೆ ತಲುಪಿಸಲೇಬೇಕು.

ಏಕೆಂದರೆ ಇಷ್ಟೊಂದು ಬಲ್ಲವರು ಬೇರಿಲ್ಲ, ಜಾಗತಿಕ ಲಿಂಗಾಯತ ಮಹಾಸಭೆಯ ಬಹುದೊಡ್ಡ ಕೊಡುಗೆ ಇವರು. ಆದ್ದರಿಂದ ಇವರ ಕುರಿತು ಇರಬಹುದಾದ ಎಲ್ಲಾ ನೆಗೆಟಿವ್ ಮಾತುಗಳ ಗಾಳಿಗೆ ತೂರಿ ಹತ್ತಿರವಾಗಿರುವ ಪುಳಕವೇ ಅನನ್ಯ. ಏಕೆಂದರೆ ಪ್ರತಿಯೊಬ್ಬರಿಗೂ ಅವರದೇ ಆದ ಮಿತಿಗಳು ಇದ್ದೇ ಇರುತ್ತವೆ, ಹಾಗೆ ಇರಬೇಕು ಕೂಡ! ಅವುಗಳ ಬದಿಗಿರಿಸಿ ಪ್ರತಿಯೊಬ್ಬರನ್ನೂ ಅರಿಯುವ ಪ್ರಯತ್ನ ಮಾಡಿ, ನಾವೇ ಅವರಿಗೆ ಅಂಕ (ಇದೂ ಕೂಡ ಸಮರ್ಪಕ ಮತ್ತು ಶಾಶ್ವತ ಅಲ್ಲ ಎಂಬ ಅರಿವು ಹೊಂದಿ) ಕೊಡಬೇಕು.

ಮುಂದಿನ ದಿನಗಳಲ್ಲಿ ಇವರು ಹೇಳುವ ಲಿಂಗಾಯತ ಸತ್ಯಗಳನ್ನು ದಾಖಲಿಸುವುದು ಕೂಡ ಶರಣ ಚಳವಳಿಯ ಒಂದು ಭಾಗ ಎಂದೇ ಭಾವಿಸಿದ್ದೇನೆ.‌ ಹಾಗೆ ‘ನೆಲದ ಮರೆಯ ನಿಧಾನದಂತೆ’ ಇರುವ ನೂರಾರು ಮನಸುಗಳ‌, ಸಾವಿರದ ವಿಚಾರಗಳ ಹೊತ್ತು ಸಾಗೋಣ, ನಾನು, ನಾವು, ನೀನು ಮತ್ತು
ನೀವೂ, ನಮ್ಮ ಬಸವಾದಿ ಶರಣರ ಬಟ್ಟೆಯಾಗಿ…

 

 

 

 

 

 

 

 

 

 

 

ಪ್ರೊ.ಸಿದ್ದು ಯಾಪಲಪರವಿ
9448358040

Don`t copy text!