ಪ್ರಿಯ ಪಾರ್ಕರ್

ಪ್ರಿಯ ಪಾರ್ಕರ್

 

ನಿನ್ನ ಕೇವಲ ನಾಯಿ ಎಂದರೆ
ನಾವು ಮನುಷ್ಯರು ಹೇಗೆ ಹೇಳು

ನನ್ನದೇ ಚೇತನದ ಭಾಗವೇನೊ ಎಂಬಂತೆ
ಮನುಷ್ಯ ಮತ್ತು ನಾಯಿ ಜೀವಗಳು ಮಾತ್ರ ಎಂಬಂತೆ
ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ನೀನಿದ್ದಲ್ಲೇ ಪ್ರೀತಿಯ ಜಲಪಾತ ಸೃಷ್ಟಿಸುತ್ತ ಅಡ್ಡಾಡಿದಲ್ಲೆಲ್ಲ ಸಗ್ಗಗಳ ಬರೆಯುತ್ತ
ಮನುಷ್ಯ ಕಾಣದ ಮಮತೆಯ ನೀಡುತ್ತ ಎಲ್ಲರಿಗೂ ದಾನ ಮಾಡುತ್ತ ಎಲ್ಲಿ ಹೋದೆ ಪಾರ್ಕರ್
ಸ್ಟುಪಿಡ್ ನಿನ್ನ ಕಳೆದುಕೊಂಡ ನನ್ನನ್ನೇ ಸ್ಟುಪಿಡ್ ಆಗಿಸಿ

ನಿನ್ನ ಚಿರತೆ ಕಚ್ಚಿತೆಂದಾದರೆ ಆ ಚಿರತೆ ನನ್ನನ್ನೇ ಕಚ್ಚಿ ತಿನ್ನುತ್ತಿರಬಹುದು
ನೀ ಆ ಬೆಟ್ಟದ ಮೇಲಿನಿಂದ ಬಿದ್ದೆ ಎಂದಾದರೆ ನನ್ನ ಎಲುಬುಗಳೇ ಪುಡಿಪುಡಿಯಾಗಿರಬಹುದು
ಯಾರೋ ನಿನ್ನ ಕದ್ದರೆಂದಾದರೆ ನಾನೇ ಕಳೆದುಹೋಗಿರಬಹುದು
ದಟ್ಟಡವಿಯಲ್ಲಿ ನೀ ಓಡಿಹೋಗಿರಬಹುದಾದರೆ ನಾನೂ ಅದ್ಯಾವುದೋ ಕಾನನದಲ್ಲಿ ಕಂಗೆಟ್ಟಿರಬಹುದು
ನಿನಗೊಬ್ಬ ಹ್ಯಾಚಿಗಿಂತಲೂ ಮಿಗಿಲಾದ ಪ್ರೇಯಸಿ ಸಿಕ್ಕು ಅವಳ ಮೂಸಿ ನೀ ಬೆನ್ನತ್ತಿರಬಹುದಾದರೆ
ಹೋಗು ಲೋಫರ್, ಚನ್ನಾಗಿ ಬಾಳು
ಆಗಾಗ ಬಂದು ಒಮ್ಮೆ ಮುಖ ತೋರಿಸಿಯಾದರೂ ಹೋಗು

ನೀ ಇದ್ದಕ್ಕಿದ್ದಂತೆ ಇದ್ದಲ್ಲಿನಿಂದಲೇ ಮಾಯವಾದೆ
ನೀನಿಲ್ಲವಾದ ಕಾರಣಗಳ ಹುಡುಕುತ್ತ ಎಷ್ಟೊತ್ತು ಕೂರಲಿ
ಈ ವಿಷಾದ ನಿರಂತರ
ಈಗ ಹ್ಯಾಚಿ ನಿನ್ನನ್ನೇ ಹೆತ್ತಿದ್ದಾಳೆ ಒಂದಲ್ಲ ಹಲವು ರೂಪದಲ್ಲಿ
ಕಪ್ಪು ಉಲ್ಕಾಪಾತದಂತೆ ಪ್ರಿಯ ಪಾರ್ಕರ್ ನೀನು ಮತ್ತೆ ಮನೆತುಂಬ ತುಂಬಿದ್ದೀಯ
ಬೀದಿಯಲ್ಲೊಂದು ಮುತ್ತು ಕಳೆದುಹೋಯಿತು
ಮನೆಯ ತುಂಬ ಈಗ ಜೀವಂತ ಕಪ್ಪು ವಜ್ರಗಳು

ಯಾವುದನ್ನ ನಂಬಲಿ
ಪ್ರಿಯ ಪಾರ್ಕರ್
ಹೃದಯದ ತುಣುಕೊಂದು ಕತ್ತರಿಸಿದ ಮೇಲೂ ಹೀಗೆ
ನಿನ್ನನ್ನ ನೆನೆದೇ ಲಬ್ ಡಬ್ ಎನ್ನುತ್ತಿರುವ
ಈ ಹೃದಯಕ್ಕೆ ನಾಚಿಕೆಯಿಲ್ಲ

ಈ ಅವೇದನೆಗಳು ನೀನೆಲ್ಲಿದ್ದರೂ
ನಿನಗೆ ಕೇಳಿಸಲಿ
ಈ ಕಪ್ಪು ಆಕಾಶ ಈ ಕಪ್ಪು ನೆಲ ಈ ಕಪ್ಪು ಬೀದಿಗಳು
ಈ ಕಪ್ಪು ಜನ ಈ ಕಪ್ಪು ಕಪ್ಪಾದ ಮನೆ ಈ ಕಪ್ಪು ನೀರು
ಕೊನೆಗೆ ನಾ ಉಸಿರುತ್ತಿರುವ ಗಾಳಿಯೂ ಕಪ್ಪಾಗಿದೆ ಪಾರ್ಕರ್

ನಿನ್ನದು ನಾಯಿ ಜನ್ಮ
ಮೈಲಾರಲಿಂಗನ ಒಡನಾಡಿ ನೀನು

ನಾನು ನಿನ್ನೆದಿರು ಮನುಷ್ಯ ಮಾತ್ರ

ವೀರಣ್ಣ ಮಡಿವಾಳರ

(ನಾವು ಗೌರವಿಸುವ ಯೋಗೇಶ್ ಮಾಸ್ಟರ್ ರ ಎಲ್ಲೋ ಕಳೆದುಹೋದ *ಪಾರ್ಕರ್ ಗೊಂದು ಶ್ರದ್ಧಾಂಜಲಿ ಗೀತ*)

Don`t copy text!