ಬಣ್ಣ
ಹೊಳಿ ಹಬ್ಬದಲ್ಲಿ ಬಣ್ಣ ಎರಚಾಡುವುದು ಅನೇಕ ಕಡೆಯ ವಾಡಿಕೆ. ಯುಗಾದಿ ಪಾಡ್ಯದ ಮಾರ್ನೆ ದಿನವೂ ಹಲವು ಕಡೆ ಬಣ್ಣ ಆಡುವುದು ಕಂಡುಬರುತ್ತದೆ. ಬಣ್ಣ ಆಡುವುದು ಬಾಲ್ಯದಲ್ಲಿ ಒಂದು ಉಲ್ಲಾಸದ ಸಂಗತಿಯೇ ಸರಿ. ಬಣ್ಣದ ನೀರನ್ನು ಡಬ್ಬಿ ಬಾಟಲುಗಳಲ್ಲಿ ತುಂಬಿ ತಂದವರಒಂದು ಗುಂಪು, ಹಿಂದಿನ ದಿನವೇ ಅಂಗಡಿಗಳಲ್ಲಿ ಪಿಚುಕಾರಿ ತಂದಿಟ್ಟುಕೊಂಡು ಅದರಲ್ಲಿ ಬಣ್ಣದ ನೀರು ತುಂಬಿ ಎರಚಾಡುವವರದು ಇನ್ನೊಂದು ಗುಂಪು. ಮನೆಯವರೇ ಬಗೆ ಬಗೆ ಬಣ್ಣ ನೀರಲ್ಲಿ ಬೆರೆಸಿ ಕೊಡುವ ಅಪ್ಪ-ಅಮ್ಮಂದಿರು, ಹೀಗೆ ತರಾವರಿ ದೃಶ್ಯಗಳು ಬಣ್ಣದ ಹಬ್ಬದಲ್ಲಿ ಕಂಡುಬರುತ್ತವೆ.
ಇಷ್ಟಪಡುವ ಗೆಳೆಯರು ಸೇರಿ ಆಡುವುದು, ಬಣ್ಣಕ್ಕೆ ಅಂಜಿ ಕುಳಿತವರ ಹುಡುಕಿ ಬಣ್ಣ ಹಾಕುವುದು ಬಿಸಿಲೇರುವವರೆಗೆ ನಡೆದೇ ಇರುತ್ತದೆ. ಬಣ್ಣದ ಜಾಗದಲ್ಲಿ ಮಿಂಚುವ ಪೇಂಟ್ ಬಂದು ಮುಖ -ತಲೆಗೆ ಹಚ್ಚುವ ಯುವಕರು ಬಂದಮೇಲೆ ಮಕ್ಕಳ ಆಟ ಮಂಕಾಗಿ ತಾವು ಅವರಂತೆ ಪೇಂಟ್ ಬಳಸಲು ಹೋಗಿ ಮನೆಯವರಿಂದ ಬೈಯಿಸಿಕೊಂಡು ಆಟ ಮುಗಿಸುತ್ತಾರೆ.
ಈ ಮಿಂಚುವ ಬಿಳಿ ಕರಿ ಪೇಂಟ್ಗಳು ಬಣ್ಣದಾಟವನ್ನು ವಿರೂಪಗೊಳಿಸಿ ಅನೇಕರು ಮನೆಯಿಂದ ಹೊರಬರದಂತೆ ಮಾಡಿದೆ. ಇದೇ ಬಣ್ಣ ಕೆಲವರು ಊರು ಬಿಡುವಂತೆ ಮಾಡಿ ಬಣ್ಣಕ್ಕೂ ಭಯಕ್ಕೂ ನಂಟಾಗಿದೆ.
ಈಗೀಗ ಬಣ್ಣದಾಟವಿಲ್ಲದಿದ್ದರೂ ಅನೇಕ ಬಣ್ಣದ ಬಟ್ಟೆಗಳು ರಸ್ತೆಯ ಬದಿ ರಾರಾಜಿಸುತ್ತ ಏನನ್ನೋ ಹೇಳುತ್ತವೆ. ಕೆಂಪು, ನೀಲಿ, ಹಸಿರು, ಹಳದಿ ಬಣ್ಣಗಳು ಯಾರದೋ ಸ್ವತ್ತಾಗಿವೆ. ಮೂಡುವ ಮುಳುಗುವ ಕೆಂಪು ಸೂರ್ಯ, ರಾಮನ್ ರಿಗೆ ನೊಬೆಲ್ ತಂದು ಕೊಟ್ಟ ನೀಲಿ ಸಮುದ್ರ, ಹಸಿರು ಸಸ್ಯ ರಾಶಿ, ಹೆಣ್ಣು ಮಕ್ಕಳಿಗೆ ಅಪ್ಯಾಯಮಾನವಾದ ಹಳದಿ ಲೋಹ ನಮ್ಮ ಮನಸಿಗೆ ಪಾಠ ಹೇಳುವುದೇ ಇಲ್ಲ.
ಕಪ್ಪು ಬಿಳುಪಿಗಿಂತ ಬಣ್ಣದ ಚಿತ್ರಗಳು ಸಂತೋಷ ಕೊಟ್ಟವು. ಆದರೆ ಸುತ್ತ ಹಾರಾಡುವ ಬಣ್ಣದ ಬಾವುಟಗಳು ನಮಗೆ ಮುದ ಕೊಡುತ್ತಿಲ್ಲ. ಬಣ್ಣಗಳನ್ನು ಯಾರು ಸೀಮಿತಗೊಳಿಸಿಕೊಂಡರು.. ತಿಳಿಯುತ್ತಿಲ್ಲ. ಹೆಗಲ ಮೇಲಿನ ಬಣ್ಣದ ಬಟ್ಟೆ ನಾನಾರು ಎಂದು ಹೇಳುತ್ತದೆ. ಆದರೆ ನನ್ನೊಳಗಿನ ಮನಸ್ಸು ನೀನಾರು ಎಂದು ಕೇಳುವಂತೆ ಭಾಸವಾಗುತ್ತಿದೆ. ನಾನಾರೆಂದು ತಿಳಿಯುವ ಮೊದಲೇ ಎಲ್ಲರೂ ಲೋಕದಿಂದ ಮರೆಯಾಗುತ್ತಾರೆ. ಬಣ್ಣಗಳು ಭೂಮಿಯ ಮೇಲೆ ಹಾಗೇ ಉಳಿಯುತ್ತವೆ, ಮನುಷ್ಯ ಈ ಬಣ್ಣಗಳನ್ನು ಆಸ್ತಿ ಹಂಚಿಕೊಂಡಂತೆ ಹಂಚಿಕೊಂಡೇ ಬದುಕುತ್ತಿರುತ್ತಾನೆ. ಸಂಘರ್ಷವನ್ನು ಕಾಪಿಟ್ಟುಕೊಂಡೇ ಇರುತ್ತಾನೆ.
ಮಕ್ಕಳ ಅಂಗಿಯ ಮೇಲೆ ಎರಚಿದ ಎಲ್ಲ ಬಣ್ಣಗಳನ್ನು ನೋಡಿದಾಗ ಅವನೊಬ್ಬ ವಿಶ್ವಮಾನವನಂತೆ ಕಾಣುತ್ತಾನೆ. ಕಾಡುವ ಬಣ್ಣಗಳು ಕಾಮನಬಿಲ್ಲಾಗಲಿ. ಏಳು ಬಣ್ಣಗಳು ಸೇರಿ ಒಂದೇ ಬಣ್ಣ ವಾಗುವಂತೆ ಬೇರೆ ಬೇರೆ ಬಣ್ಣದ ಮನುಜರು ಒಂದಾಗಲಿ. ಈ ಭೂಮಿ ಕೊಡುವ ಬಣ್ಣದ ಹೂಗಳನ್ನು ಪ್ರೇಮಿಸುವಂತೆ ನಮ್ಮ ಮನ ಹದಗೊಳ್ಳಲಿ.
–ಮಹಾಂತೇಶ ಮಸ್ಕಿ