ಗಜಲ್
ಧರ್ಮ ಎಂದರೇನೆಂದು ತಿಳಿಯಲು ಗ್ರಂಥವೇನು ಬೇಕಿಲ್ಲ
ಬದುಕನು ಕಲಿಯಲು ಭಾಷೆ-ಅಕ್ಷರದ ಹಂಗೇನು ಬೇಕಿಲ್ಲ
ಜಗ ಬೆಳಗುವವ ಸೂರ್ಯನೊಬ್ಬನೇ ಎಂಬುದೇ ಸತ್ಯ
ಸಕಲ ಜೀವ-ಜಂಗುಳಿಗೆ ದೇವನೊಬ್ಬನೆನಲೇನು ಬೇಕಿಲ್ಲ
ಹಲವು ಪುರಾಣ ನೂರು ಶಾಸ್ತ್ರವನೋದಲು ಏಸು ಕಾಲ ?
ಪರೋಪಕಾರವೇ ಬಾಳು ಎಂಬರಿವಿಗೆ ವೇಳೆಯೇನು ಬೇಕಿಲ್ಲ
ಶಂಕರ ಮಧ್ವನೋ ಬುದ್ಧ ಜಿನ ಬಸವ ರಾಮಾನುಜನೋ
ಒಡಲ ತೋರಿ ಕೋರಲು ಭಾಷೆಯ ಗೊಡವೆಯೇನು ಬೇಕಿಲ್ಲ
ಕೇಳು “ಕಾಂತ” ಧರ್ಮಕೇನು ಯಾವ ಬಣ್ಣ ಭೇದವಿಲ್ಲ ಬಿಡು
ಜೀವ-ದೇವರೊಂದೆಂಬ ನಿಲುವಿಗೆ ಸಂಶಯವೇನು ಬೇಕಿಲ್ಲ
–ಕೆ.ಶಶಿಕಾಂತ
ಲಿಂಗಸೂಗೂರ