ಪುಸ್ತಕ ಪರಿಚಯ
ಅವಳು (ಗಜಲ್ ಸಂಕಲನ)
ಲೇಖಕರು…ಡಾ.ರೇಖಾ ಪಾಟೀಲ ಮೊ.೯೯೪೫೨೬೭೫೨೯
ಕೃತಿಯ ಶೀಶಿ೯ಕೆ…………..ಅವಳು (ಗಜಲ್ ಸಂಕಲನ)
ಲೇಖಕರು…….ಡಾ.ರೇಖಾ ಪಾಟೀಲ. ಮೊ.೯೯೪೫೨೬೭೫೨೯
ಪ್ರಕಾಶನ……..ಸಿದ್ಧಾರ್ಥ ಪ್ರಕಾಶನ ವಿಜಯಪುರ
ಪ್ರಕಟಿತ ವರ್ಷ….೨೦೨೪. ಬೆಲೆ..೧೨೫ ₹
ಮಹಿಳಾ ಶೋಷಣೆಗೆ ದನಿ ಎತ್ತಿದ ಗಜಲ್ ಗಳು
ಪ್ರಕೃತಿಯು ಜೀವ ಸಂಕುಲವನ್ನು ಬದುಕಿಸುವ ಬೆಳೆಸುವ ಮೂಲಸ್ಥಾನ ಧಾರಿಣಿ, ವಸುಂಧರೆ ಒಡಲಾಳದಲ್ಲಿ ಎಷ್ಟೋ ಲಾವಾರಸ ,ಬೆಂಕಿ ,ಲೋಹ ,ಕಠೋರ ಕಲ್ಲುಗಳಿದ್ದರೂ ಅದೆಲ್ಲವನ್ನು ಮುಚ್ಚಿಟ್ಟು ಜೀವಿಗಳು ಬದುಕಲು ಬೇಕಾಗುವ ಆಹಾರ ,ಜಲ ,ವಾಯು ,ನೀಡುತ್ತಾ ಮನುಜ ಕುಲ ಸಂತೋಷ ,ಪ್ರೀತಿ ,ಸೌಹಾರ್ದತೆಯಿಂದ ಬದುಕಲೆಂದು ಸದಾ ಜೀವ ಸಂಕುಲಕ್ಕೆ ಕಾಲಕಾಲಕ್ಕೆ ಸರ್ವಾವನ್ನು ನೀಡುತ್ತಾಳೆ .
ಅವಳ ಒಡಲಿಗೆ ಹಾಕಿದ ಬೀಜ ಹೊರ ಬರಬೇಕಾದರೆ ಒಡಲು ಸೀಳಿ ಹೊರಬಂದು ಮೊಳಕೆ ಒಡೆದು ಹಸಿರಾಗಿ ನಗುತ್ತದೆ ಜಗದ ಜೀವಿಗಳಿಗೆ ಉಸಿರಾಗುತ್ತದೆ. ಆದರೆ ಭೂದೇವಿ ಎಂದು ಆ ನೋವು ಪರರಿಗೆ ಕಾಣ ಕೊಡುವುದಿಲ್ಲ ಸದಾ ಅವಳು ಪರರಿಗಾಗಿ ನಗುನಗುತ್ತಾ ಇರುತ್ತಾಳೆ ಪ್ರೀತಿ ಹಂಚುತ್ತಾಳೆ ,ಪ್ರೀತಿಗೆ ಇತರ ಮನ ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ . ಪ್ರಕೃತಿಯ ಪ್ರತಿಯೊಂದು ಕಣಕಣದಲ್ಲಿ ಪ್ರೀತಿ ವ್ಯಾಪಿಸಿರುತ್ತದೆ ಆ ಪ್ರೀತಿಯ ಶಕ್ತಿಯಿಂದ ನಿಸರ್ಗ ನಿರಂತರವಾಗಿ ಅರಳುತ್ತಾ ಕಂಪಿನ ಉಸಿರು ಬಿಡುತ್ತದೆ.
ಮಾನವನು ಪ್ರಕೃತಿಯನ್ನು ಕಲುಷಿತಗೊಳಿಸುತ್ತಾ ಬಂದಿದ್ದಾನೆ ,ಆದರೂ ಅವಳು ತನ್ನ ಕರ್ತವ್ಯನು ಬಿಡದೆ ಜೀವರಾಶಿಗಳಿಗಾಗಿ ಎಲ್ಲವನ್ನು ಸಹಿಸುತ್ತಾ ಬಂದಿದ್ದಾನೆ . ಪ್ರಕೃತಿಯ ಮಡಿಲಿನಲ್ಲಿ ಹುಟ್ಟಿ ಬೆಳೆಯುವ ಮನುಜ ತನ್ನ ಸುಖ ಸ್ವಾರ್ಥಕ್ಕಾಗಿ ಭೂದೇವಿ ಮೇಲೆ ಅನೇಕ ಅತ್ಯಾಚಾರಗಳನ್ನು ಮಾಡುತ್ತಾನೆ . ಪ್ರಕೃತಿಯು ಕೋಪಿಸಿಕೊಂಡರೆ ಭೂಮಿ ಕಂಪಿಸಿದರೆ ತಾನು ಎಲ್ಲಿ ಹೋಗುತ್ತೇನೆಂಬ ಅರಿವು ಅವನಿಗಿಲ್ಲ ಅವಳಿಗೆ ಕೋಪ ಬಂದರೆ ಪ್ರಳಯವಾಗಿ ಜಗವು ಅಳಿಯುವದೆಂಬುದನ್ನು ಮರೆತ ಮಾನವ ದಾನವನಾಗುತ್ತಾ ಹೊರಟಿದ್ದಾನೆ .
ಹೃದಯಾಳದಿಂದ ನಿರ್ಮಲ ಮನಸ್ಸಿನಿಂದ ಪ್ರೀತಿಯಿಂದ ಮನದ ಭಾವನೆಗಳನ್ನು ರೂಪಕಗಳೊಂದಿಗೆ ಹೊರಹಾಕುವ ಮೃದು ಮಧುರ ಮಾತುಗಳೇ ಗಜಲ್ ಗಳೆಂದು ಹೇಳ ಬಹುದು. ಭಾಷೆ ಯಾವುದೇ ಆಗಿರಲಿ ವಿಷಯ ಏನೇ ಆಗಿರಲಿ ಅದನ್ನು ಕಿವಿಗೆ ತಲುಪಿಸುವುದಕ್ಕಿಂತ ಮುಂಚೆಯೇ ಹೃದಯಕ್ಕೆ ತಲುಪುವಂತೆ ಹೃದಯದಿಂದ ಹೃದಯಕ್ಕೆ ಹರಿಸುವ ನೋವು ನಲಿವುಗಳ ಮೆರವಣಿಗೆ, ಗಜಲ್ ಕಾವ್ಯ ನೋವನ್ನು ಶಮನಗೊಳಿಸುವ ಪ್ರೀತಿಯಿಂದ ಗಾಯಕ್ಕೆ ಮುಲಾಮ ಹಚ್ಚುವ ಕಾರ್ಯ ಗಜಲ್ ಮಾಡುತ್ತದೆ . ಗಜಲ್ ಎಂಬ ಶಬ್ದ ಅರಬ್ಬಿ ಭಾಷೆಯಲ್ಲಿ ಹುಟ್ಟಿದರೂ ಅದು ಕಾವ್ಯ ಪ್ರಕಾರವಾಗಿ ಅಲ್ಲಿ ಬೆಳೆಯಲಿಲ್ಲ ಇರಾನ್ ದೇಶದ ಫಾರ್ಸಿ ಭಾಷೆ ಯಲ್ಲಿ ಹಾಗೂ ಅಲ್ಲಿಯ ಜಾನಪದ ಸಾಹಿತ್ಯ ಚಾಮದಿಂದ ಗಜಲ್ ಪ್ರೇರಣೆ ಪಡೆದು ರೂಪಕಗಳೊಂದಿಗೆ ಆಕರ್ಷಕವಾದ ಕಾವ್ಯವಾಗಿ ಸಮೃದ್ಧವಾಗಿ ಫಾರ್ಸಿ ಭಾಷೆಯಲ್ಲಿ ಬೆಳೆಯಿತು ಹೆಂಗಸಿನೊಡನೆ ಪಿಸುಮಾತಿನಲ್ಲಿ ಪ್ರೀತಿ ಮೋಹ ವಿರಹ ಬಗ್ಗೆ ಸಂಭಾಷಣೆ ಮಾಡುವುದು ಎಂಬ ಅರ್ಥ ಸಾಮಾನ್ಯವಾಗಿ ಪ್ರಚಾರದಲ್ಲಿದೆ .
ಫಾಸಿ೯ ಭಾಷೆಯಿಂದ ಭಾರತಕ್ಕೆ ಬಂದ ಗಜಲ್ ಸಾಹಿತ್ಯ ದಖನಿ ಉದು೯ ಭಾಷೆಯಲ್ಲಿ ಇಲ್ಲಿಯ ನೆಲ ಜಲ ಸಂಸ್ಕೃತಿಗೆ ತಕ್ಕಂತೆ ಗಜಲ್ ಕಾವ್ಯ ಬೆಳೆದು ರಾಜರ ಆಸ್ಥಾನದ ಕಾವ್ಯರಾಣಿಯಾಗಿ ಮೆರೆಯಿತು .ಉರ್ದು ಭಾಷೆಯನ್ನು ಬಲ್ಲಂತಹ ಡಾ . ಶಾಂತರಸರು ಗಜಲ್ ಸಾಹಿತ್ಯವನ್ನು ಕನ್ನಡಕ್ಕೆ ತಂದ ಪಿತಾಮಹ ಎಂದು ಹೇಳಬಹುದು ಅವರು ತೋರಿಸಿದ ಛಂದಸ್ಸು ಪ್ರಕಾರದಿಂದ ಇಂದು ಕನ್ನಡದಲ್ಲಿ ಗಜಲ್ ಗಳನ್ನು ಬರೆಯುತ್ತಿದ್ದೇವೆ .
ಪ್ರೀತಿ ಎಂದರೆ ಏನೆಂದು ವ್ಯಾಖ್ಯಾನಿಸಲು ಬರುವುದಿಲ್ಲವೋ ಅದೇ ರೀತಿಯಾಗಿ ಗಜಲ್ ಎಂದರೇನು ಎಂದು ವ್ಯಾಖ್ಯಾನಿಸಲು ಬರುವುದಿಲ್ಲ. ಅವರವರ ಭಾವಕ್ಕೆ ಅವರವರ ಭಕ್ತಿಗೆ ತೆರನಾಗಿ ಕಾಣುವನು ನಿರಾಕಾರನಾದ ಭಗವಂತ ಎಂಬಂತೆ ಗಜಲ್ ಸಹ ಅವರವರ ವಿಚಾರಕ್ಕೆ ತಕ್ಕಂತೆ ತನ್ನ ಹೊಳಪುಗಳನ್ನು ಬಿತ್ತರಿಸುತ್ತದೆ .
ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ ,ಆತ್ಮಾನುಸಂಧಾನ ನಮ್ಮನ್ನು ನಾವು ಅರಿತುಕೊಂಡು ಲೌಕಿಕ ಪ್ರೀತಿಯಿಂದ ಅಲೌಕಿಕ (ಅಧ್ಯಾತ್ಮಿಕ )ಪ್ರೀತಿಯಲ್ಲಿ ಕೊನೆಗೊಳ್ಳಲು ನಿರಾಕಾರನಾದ ಭಗವಂತನೊಂದಿಗೆ ಮಾತನಾಡುವುದು ಅಥವಾ ನಮ್ಮ ಮನದಾಳದ ಭಾವನೆಗಳನ್ನು ನಿವೇದಿಸಿಕೊಳ್ಳುವುದು. ಶರಣ ಸತಿ ಲಿಂಗ ಪತಿ ಭಾವನೆ ಮೈ ತಾಳುವುದು, ಮೀರಾ ಮಾಧವನ ಭಕ್ತಿಯಂತೆ ,ರಾಧಾಕೃಷ್ಣರ ಪ್ರೀತಿಯಂತೆ ,ಅಕ್ಕಮಹಾದೇವಿ ಮಲ್ಲಿಕಾರ್ಜುನನ್ನು ಧ್ಯಾನಿಸಿದಂತೆ . ಆದರೆ ಸೂಫಿ ತತ್ವದಲ್ಲಿ ದೇವರೇ ಪ್ರಿಯತಮೆ ಮತ್ತು ಭಕ್ತನೇ ಪ್ರಿಯಕರ ಪ್ರೇಮಿಯನ್ನು ವರ್ಣಿಸುವಾಗ ಅದರ ಹಿಂದಿರುವ ದೈವಿಕ ಕಲ್ಪನೆಯನ್ನು ಕವಿ ಮರೆಯುವುದಿಲ್ಲ ನಮ್ಮ ಅನುದಿನದ ಪ್ರೇಮ ವನ್ನು ಹೇಳುತ್ತಾ ನಿತ್ಯ ಜೀವನದ ವಿಚಾರ ಕ್ರಿಯೆಗಳನ್ನು ಒಂದು ಹೃದಯ ಇನ್ನೊಂದು ಹೃದಯಕ್ಕೆ ಹೇಳುವ ಗೇಯತೆಯ ,ಲಯ, ಮಾಧುರ್ಯತೆಯ, ತೀವ್ರತೆಯ ಉತ್ಕರ್ಷ ಉಕ್ಕಿಸುವ ಕಾವ್ಯ ಪ್ರಕಾರವಾಗಿದೆ . ಆತ್ಮ ತನ್ನ ನೋವು ನಲಿವುಗಳನ್ನು ತನ್ನ ಸುತ್ತ ಹೇಳಿದುಕೊಳ್ಳುವ ಮೋಹಕವಾದ ಪ್ರೇಮಿಗಳ ಪಿಸುಮಾತು, ಗಜಲ್ ಒಂದು ಹಾಡುಗಬ್ಬ .
ಗಜಲ್ ಎಂದರೆ ಬರೀ ಪ್ರೀತಿ ,ಪ್ರೇಮ ,ವಿರಹ ,ಸಾಕಿ ,ಮಧು ,ಮಧುಶಾಲೆಗಳಿಗೆ ಸೀಮಿತವೆಂಬ ಭಾವ ಅನೇಕರಲ್ಲಿ ಇತ್ತು ಆದರೆ ಈಗ ಗಜಲ್ ಕಾರರು ಅವುಗಳ ಜೊತೆಗೆ ಸುಡುವ ವರ್ತಮಾನಕ್ಕೆ ಮುಖಾ ಮುಖಿಯಾಗಿದ್ದಾರೆ ಎನ್ನುವುದು ಕಂಡು ಬರುತ್ತದೆ .ಇಂದಿನ ಕೆಲವು ಗಜಲ್ ಕಾರರು ಗಜಲ್ ಗಳಲ್ಲಿ ವೈಚಾರಿಕ ಪ್ರಜ್ಞೆ ತಾತ್ವಿಕತೆಯಂಥ ಉದಾತ ಭಾವಗಳು ಸಹಜವಾಗಿ ಮೂರ್ತಗೊಳ್ಳುತ್ತಿದೆ .
ಮಹಿಳಾ ಸಂವೇದನೆ ,ಶೋಷಣೆ ,ಧರ್ಮಗಳ ಕಿತ್ತಾಟ, ಸಾಮಾಜಿಕ ಕಳಕಳಿ ಹೀಗೆ ಅಭಿವ್ಯಕ್ತಿಯ ಹೊಸ ಹೊಸ ಶೋಧನೆ ನಡೆದಿದ್ದು ನಾಳೆಗಳ ಬಗ್ಗೆ ಹೊಸ ಕನಸುಗಾರಿಕೆ ಹಂಬಲಗಳಿಗೆ, ತುಳಿದ ಸಮಾಜಕ್ಕೆ ಒಡ್ಡಿದ ಪ್ರತಿರೋಧವಿಕೆ ಏಕಾಂತದಿಂದ ಸಮಾಜ ಕಡೆಗೆ ಮುಖ ಮಾಡಿಸುವ ಭಾವ ಜಗತ್ತಿದೆ . ಮನುಷ್ಯ ಪ್ರೀತಿಯನ್ನು ಮೊಗೆ ಮೊಗೆದು ಕೊಡುವುದರೊಂದಿಗೆ ಗಜಲ್ ಗಳ ಮೂಲಕ ತೆರೆದುಕೊಳ್ಳುತ್ತವೆ.
ಶತ ಶತಮಾನಗಳಿಂದ ಗಜಲ್ ಗಳನ್ನು ಗಂಡಸರು ರಚಿಸುತ್ತಾ ಬಂದಿದ್ದು ಗಂಡು, ಹೆಣ್ಣನ್ನು ವರ್ಣಿಸುತ್ತ ಅವಳ ರೂಪ ಚೆಲುವನ್ನು ವಿವರಿಸುತ್ತ ತಾನು ಅವಳಿಗೆ ಮೋಹಿತನಾಗಿ ಆ ಪ್ರೀತಿಯ ಜಾಲದ ಪಿಸುಮಾತುಗಳನ್ನು ಹೆಣ್ಣಿನ ಹೃದಯ ತಾಕುವಂತೆ ಮೃದು ಮಾತಿನಲ್ಲಿ ಹೇಳುತ್ತಾ ಬಂದಿದ್ದೆ ಗಜಲ್ ಆಗಿತ್ತು. ಈಗ ಕಾಲ ಬದಲಾಗಿ ರಚನೆಯಲ್ಲಿಯೂ ಬದಲಾವಣೆಯಾಗಿದ್ದು ಅಲ್ಲಲ್ಲಿ ಕಂಡು ಬರುತ್ತದೆ . ಶತಮಾನಗಳಿಂದ ಹೆಣ್ಣು ಜಗದ ಎರಡನೇ ಪ್ರಜೆಯಾಗಿ ಗಂಡಿನ ಶೋಷಣೆಯಲ್ಲಿ ಬಾಳುತ್ತಿದ್ದು ಅವಳು ಅಸಹಾಯಕತೆಯಿಂದ ಬದುಕುತ್ತಿರುವುದು ಕಂಡು ಈ ಶತಮಾನದ ಮಹಿಳೆಯರು ತಮ್ಮ ಸೋದರಿ ಮಹಿಳೆಯರಿಗೆ ಅಸಹಾಯಕತೆಯಲ್ಲಿ ಬಾಳುವುದು ಸಾಕು ಎಚ್ಚೆತ್ತುಕೊಳ್ಳಿ ಎಂದು ಕೆಲವು ಮಹಿಳಾ ಗಜಲ್ ಕಾರ್ತಿಯರು ಧೈರ್ಯವಾಗಿ ತಮ್ಮ ಮನದ ಬದುಕಿನ ಅಸಹಾಯಕತೆಯನ್ನು ತೋರಿಸುವ ಗಜಲ್ ಗಳನ್ನು ರಚಿಸುತ್ತಿರುವುದು ಕಂಡು ಬರುತ್ತದೆ .
ಅರುಣಾ ನರೇಂದ್ರ, ಶಮಾ ಜಮಾದಾರ , ಶ್ರೀದೇವಿ ಕೆರೆಮನೆ , ಹೇಮಲತಾ ವಸ್ತ್ರದ, ಅನುಸೂಯ ಸಿದ್ದರಾಮ, ಪ್ರಭಾವತಿ ದೇಸಾಯಿ ,ಅನುಸೂಯಾ ಜಹಗೀರದಾರ, ಡಾ. ಜಯದೇವಿ ಗಾಯಕವಾಡ , ವಿದ್ಯಾವತಿ ಅಂಕಲಗಿ ಹೀಗೆ ಹತ್ತು ಹಲವಾರು ಮಹಿಳೆಯರು ತಮ್ಮ ಗಜಲ್ ಗಳಲ್ಲಿ ಮಹಿಳಾ ಶೋಷಣೆ ಬಗ್ಗೆ ದನಿ ಎತ್ತಿದ್ದಾರೆ ಇವರಲ್ಲಿ ಡಾ. ರೇಖಾ ಪಾಟೀಲರು ಒಬ್ಬರಾಗಿದ್ದಾರೆ
ಡಾ . ರೇಖಾ ಪಾಟೀಲ್ ಅವರು ವೃತ್ತಿಯಿಂದ ದಂತ ವೈದ್ಯರಾಗಿದ್ದರೂ ಪ್ರವೃತ್ತಿಯಿಂದ ಸಾಹಿತಿಗಳು ,ಸಮಾಜ ಸೇವಕರು ,ಒಳ್ಳೆಯ ವಾಗ್ಮಿಗಳು ಆಗಿದ್ದಾರೆ , ಸುಮಾರು 25 ವರ್ಷಗಳಿಂದ ಸಾಹಿತಿಗಳ ಒಡನಾಟದಿಂದ ಅನೇಕ ಲೇಖನಗಳನ್ನು (ವೈದ್ಯಕೀಯ) ಕವಿತೆಗಳನ್ನು ಕಥೆ ,ಪ್ರಬಂಧ ,ಹನಿಗವನ, ವಚನ ,ಹಾಗೂ ಗಜಲ್ ಗಳನ್ನು ಬರೆಯುತ್ತಾ ಬಂದಿದ್ದಾರೆ.
ವಿಜಾಪುರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಕವಿ ಗೋಷ್ಠಿಗಳಲ್ಲಿ ಕವನ ವಾಚನ ಮಾಡುತ್ತ ಅತಿಥಿಗಳಾಗಿ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ ಇವರಿಗೆ ಅನೇಕ ಪ್ರಶಸ್ತಿಗಳು ಹಾಗೂ ಅನೇಕ ಸಂಘ ಸಂಸ್ಥೆಗಳ ಸನ್ಮಾನಗಳು ದೊರೆತಿವೆ.
ಡಾ . ರೇಖಾ ಪಾಟೀಲ್ ಅವರ ಪ್ರಥಮ ಗಜಲ್ ಸಂಕಲನ ಅವಳು ಶೀರ್ಷಿಕೆ ಒಂದು ವಿಶಿಷ್ಟವಾದ ಶೀರ್ಷಿಕೆಯಾಗಿದ್ದು ಪ್ರತಿ ಓದುಗರು ಅವನಾಗಿದ್ದರೂ ಅವಳಾಗಿ ಓದಿದಾಗ ಈ ಗಜಲ್ ಗಳು ಅವನಿಗೆ ಪೂರ್ಣ ಅರ್ಥವಾಗುತ್ತವೆ ಮತ್ತು ಅವನು ಅವಳಾಗಿಬಿಡುತ್ತಾನೆ .
ಗಜಲ್ ಕಾರ್ತಿ ರೇಖಾ ಪಾಟೀಲ್ ಅವರ ಗಜಲ್ ಗಳೆಲ್ಲವೂ ವಿಭಿನ್ನವಾಗಿದ್ದು ಹೆಣ್ಣಿನ ಮೇಲೆ ನಡೆಯುವ ಅನ್ಯಾಯ ,ದೌರ್ಜನ್ಯ ,ಅತ್ಯಾಚಾರ ,ಅವಮಾನ ,ಶೋಷಣೆಗಳ ,ಘಟನೆಗಳನ್ನು ಕುರಿತು ರಚಿಸಲ್ಪಟ್ಟಿವೆ . ಪ್ರತಿ ದ್ವಿಪದಿಗಳಲ್ಲಿ ಆಕ್ರೋಶದ ಕಟ್ಟೆ ಹೊಡೆಯುತ್ತದೆ ,ಸಮಾಜಕ್ಕೆ ವ್ಯಂಗ್ಯ ವಿಡಂಬನೆ ಹಾಗೂ ಚಾಟಿಯನ್ನು ಬೀಸುತ್ತಾ ವ್ಯವಸ್ಥೆಯ ವಿರುದ್ಧ ಸಮರಸ ಸಾರಿದ್ದಾರೆ . ಜೊತೆಜೊತೆಗೆ ನಿತ್ಯ ನಡೆಯುವ ಹೆಣ್ಣಿನ ಶೋಷಣೆ ಹಾಗೂ ಲಿಂಗ ಅಸಮಾನತೆಯ ಬಗ್ಗೆ ಪ್ರಶ್ನೆ ಕೇಳುತ್ತಾ ಸರಕಾರ ಕಾನೂನು ಹಾಗೂ ಶಿಕ್ಷೆಗಳನ್ನು ಮಾಡಿದ್ದರು ಹೆಣ್ಣು ಶೋಷಣೆಗೆ ಒಳಗಾಗುತ್ತಲೇ ಇದ್ದಾಳೆ ಇದಕ್ಕೆ ಪರಿಹಾರ ಹೆಣ್ಣು ತಾನಾಗಿಯೇ ಮುಂದೆ ಬಂದು ಪುರುಷ ಸಮಾಜದ ದಬ್ಬಾಳಿಕೆಯನ್ನು ಎದುರಿಸಬೇಕು ಬೇಕೆಂದು ಗಜಲ್ ಕಾರ್ತಿಯವರು ಅನೇಕ ರೂಪಕಗಳೊಂದಿಗೆ ಮಹಿಳಾ ಕುಲನಕ್ಕೆ ಪಿಸು ಮಾತಿನಲ್ಲಿ ಹೇಳಿದ್ದಾರೆ.
ಡಾ. ರೇಖಾ ಪಾಟೀಲ್ ಅವರ ಅವಳು ಗಜಲ್ ಸಂಕಲನದಲ್ಲಿ ಒಟ್ಟು 52 ಗಜಲ್ ಗಳಿದ್ದು ಈ ಸಂಕಲನಕ್ಕೆ ಪ್ರೊ. ಆರ್ ಸುನಂದಮ್ಮ ಅವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ. ಹಾಗೂ ಡಾ. ಬಸವರಾಜ ಸಬರದ ಅವರು ಅರ್ಥಪೂರ್ಣವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ, ಕೃತಿ ಪ್ರಕಟಣೆಗೆ ಮೊದಲು ಓದಿದ ಸಾಹಿತಿಗಳು ,ಶರಣ ಸಾಹಿತ್ಯ ಪರಿಷತ್ತದ ಅಧ್ಯ್ಯಕ್ಷರಾದ ಶ್ರೀ ಜಂಬುನಾಥ ಕಂಚ್ಯಾಣಿ ಸರ್ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ . ಸಂಕಲನದ ಮುಖಪುಟ ವಿನ್ಯಾಸವನ್ನು ಮುಂಬೈದ ಶ್ರೀ ವಿನಾಯಕ ಮೇಟಿ ಅವರು ಅರ್ಥಪೂರ್ಣವಾಗಿ ಚಿತ್ರಿಸಿ ಕೃತಿಯ ಅಂದ ಹೆಚ್ಚಿಸಿದ್ದಾರೆ ಹಾಗೂ ಪ್ರತಿ ಗಜಲ್ ಗೆ ಅರ್ಥಪೂರ್ಣವಾದ ಚಿತ್ರವನ್ನು ಮುದ್ರಿಸಿದ್ದಾರೆ ಪುಸ್ತಕದ ಮೌಲ್ಯ ಹೆಚ್ಚಿಸಿದ್ದಾರೆ.
ಬದುಕಿಗೆ ಇನ್ನೊಂದು ಹೆಸರು ಅವಳು
ಮುಸುಕಿಗೆ ಇನ್ನೊಂದು ಹೆಸರು ಅವಳು
ಡಾ .ರೇಖಾ ಪಾಟೀಲ್ ಅವರು ತಮ್ಮ ಗಜಲ್ ಸಂಕಲನ ಶೀರ್ಷಿಕೆ ಅವಳು ಎಂದು ಇಟ್ಟಿದ್ದು, ಈ ಗಜಲ್ ರದೀಪ್ ಅವಳು ಎಂದು ಮಾಡಿ ಗಜಲ್ ರಚಿಸಿದ್ದಾರೆ. ಈ ಗಜಲ್ ಓದಿದಾಗ ಅವಳು ಯಾರು ಎಂದು ಓದುಗರಿಗೆ ಅರ್ಥವಾಗುತ್ತದೆ . ಗಂಡಸಿನ ಬಾಳಿನಲ್ಲಿ ಸದಾ ಹಾಸು ಹೊಕ್ಕದ ಅವಳು ಅದೇ ಗಂಡಸಿನ ಶೋಷಣೆಗೆ ಒಳಗಾದವಳು ಅವಳು, ಅವಳಿಂದಲೇ ಬದುಕು, ಅವಳಿಂದಲೇ ಎಲ್ಲಾ ಸುಖ, ಆದರೆ ಅವಳು ತನ್ನ ಭಾವನೆಗಳಿಗೆ ಮುಸುಕು ಹಾಕಿಕೊಂಡು ಮುಸುಕುಧಾರಿಯಾಗಿದ್ದಾಳೆ ,ಯಾರು ಎಷ್ಟೇ ಶೋಷಣೆ ಮಾಡಿದರು ತುಳಿದರು ಹಠದಿಂದ ಚಿಗುರುವ ಗರಿಕೆ ಅವಳು ,ಯಾರೇ ಎಷ್ಟೇ ಕೌರ್ಯದಿಂದ ವರ್ತಿಸಿದರು ಎಲ್ಲವನ್ನು ಮುಚ್ಚಿಡುವ ಜಾಯಮಾನದ ಶ್ರಮಗುಣಿಯವಳು ,ಸಂಸಾರದ ಚುಕ್ಕಾಣಿ ಯಾದವಳು ,ಜಗದ ಎಲ್ಲಾ ಚರಾಚರ ವಸ್ತುಗಳಲ್ಲಿ ಅಡಗಿದವಳು ,ಇಳೆ ಬೆಳೆ ಅವಳು , ಆದರೂ ಅವಳ ಮೇಲೆ ನಡೆಯುವ ದೌರ್ಜನ್ಯಗಳು ಕಡಿಮೆಯಾಗಿಲ್ಲವೆಂದು ಹೆಣ್ಣಿನ ಅಸಹಾಯಕ ಸ್ಥಿತಿಯನ್ನು ಸಾರುವ ಗಜಲ್ ಇದಾಗಿದೆ .
ಆತ್ಮವಂಚನೆಯದು ಸಾಕು ಮಾಡಮ್ಮ ಲೈಂಗಿಕ ಜೀತ
ಆತ್ಮ ಶೋಷಣೆಯದು ಸಾಕು ಮಾಡಮ್ಮ ಲೈಂಗಿಕ ಜೀತ
ಮೇಲಿನ ಗಜಲ್ ದ ಮತ್ಲಾ ಓದಿದಾಗ ಅದರಲ್ಲಿ ಉಪಯೋಗಿಸಿದ ರದೀಪ್ ಲೈಂಗಿಕ ಜೀತ ಎಂಬುವುದು ಹೊಸ ಶಬ್ದವಾಗಿದ್ದು ಚಿಂತನೆಗೆ ಹಚ್ಚುತ್ತದೆ . ಸಾಮಾನ್ಯವಾಗಿ ಓದುಗ ಕೇವಲ ಜೀತ ಎಂಬ ಶಬ್ದ ಓದಿರುತ್ತಾನೆ ಮತ್ತು ಅದರ ಅರ್ಥ ವಿವರಣೆಯು ಗೊತ್ತಿರುತ್ತದೆ . ಆದರೆ ಇಲ್ಲಿ ಉಪಯೋಗಿಸಿದ ಲೈಂಗಿಕ ಜೀತ ಎನ್ನುವ ರದೀಫ್ ಬಹಳ ವಿಶೇಷವಾಗಿದ್ದು ಅದರ ಅರ್ಥ ಬಹಳ ವಿಶಾಲವಾಗಿದೆ . ಮದುವೆಯಾದ ಹೆಣ್ಣು ಒಂದು ರೀತಿಯಲ್ಲಿ ಗಂಡನ ದೈಹಿಕ ಕಾಮ ದಾಹವನ್ನು ತೃಪ್ತಿಪಡಿಸುವ ಲೈಂಗಿಕ ಜೀತದಾಳ ಆಗಿದ್ದಾಳೆ ಎಂದು ಗಜಲ್ ಕಾರ್ತಿ ಉಪಯೋಗಿಸಿದ್ದು ಕಂಡುಬರುತ್ತದೆ . ಹೆಣ್ಣಿಗೆ ಮನಸಿರಲಿ ಇಲ್ಲದಿರಲಿ ಅವಳು ತನ್ನ ಆತ್ಮ ವಂಚನೆ ಮಾಡಿಕೊಂಡು ದೈಹಿಕ ಶೋಷಣೆ ಮಾಡಿಕೊಂಡು ಗಂಡನನ್ನು ತೃಪ್ತಿ ಪಡಿಸಲೇಬೇಕಾಗುತ್ತದೆ. ಆದ ಕಾರಣ ಈ ಒಲ್ಲದ ಮನಸ್ಸಿನ ದೈಹಿಕ ಸಂಬಂಧಕ್ಕೆ ಲೈಂಗಿಕ ಜೀತ ಎನ್ನುವ ಪದ ಉಪಯೋಗ ಮಾಡಿ ಓದುಗರಿಗೆ ಚಿಂತನೆಗೆ ಹಚ್ಚಿದ್ದಾರೆ .
ಸ್ವಾಭಿಮಾನ ಮರೆತು ನಗು ಮುಖವಾಡ ಧರಿಸಿ ಮಾಡುವ ಈ ಸೇವೆ ಘೋರ ಮತ್ತು ಆತ್ಮಯಾತನೆ ಇದು . ಆತ್ಮರೋದನೆ ಆಗಿರುತ್ತದೆ . ಕೆಲವು ಸಾರಿ ಈ ಲೈಂಗಿಕ ಜೀತಕ್ಕೆ ಮಾರಾಟಕ್ಕೆ ಇಟ್ಟ ದೇಹ ಎಂಬ ಭಾವನೆಯಿಂದ ಎಷ್ಟೋ ಮಹಿಳೆಯರು ಈ ಕಿರುಕುಳವನ್ನು ಸಹಿಸದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗಗಳು ಬಂದಿರುತ್ತವೆ. ಅದಕ್ಕೆ ಈ ಆತ್ಮವಂಚನೆ ಸಾಕು ,ಈ ಆತ್ಮ ಶೋಷಣೆ ಸಾಕು ಎಂದು ಮಹಿಳಾ ಕುಲಕ್ಕೆ ಗಜಲ್ ಕಾತಿ೯ ಹೇಳುತ್ತಾರೆ .
ಬಾನೆತ್ತರಕ್ಕೆ ಹಾರಬಾರದೇ ಒಮ್ಮೆ ಬಹಿಮೂ೯ಖಯಾಗಿ
ಕಡಲಾಳಕ್ಕೆ ಈಜಬಾರದೇ ಒಮ್ಮೆ ಬಹಿಮೂ೯ಖಿಯಾಗಿ
ಮೇಲಿನ ಮತ್ಲಾ ಓದಿದಾಗ ಗಜಲ್ ಕಾತಿ೯ಯು ಮಹಿಳೆಗೆ ಸ್ವತಂತ್ರವಾಗಿ ಬಾಳು , ಮೂಢನಂಬಿಕೆಗಳ ಬಂಧನ ಬೇಡ ,ಸಂಸಾರ ಎಂಬ ಬಂಗಾರ ಪಂಜರದಿಂದ ಹೊರಗೆ ಬಂದು ಬಾನೆತ್ತರಕ್ಕೆ ಹಾರು ಸಂತಸದಲ್ಲಿ ಬಾಳು ಸಂತೋಷಪಡು ನಿನ್ನನ್ನು ಕಟ್ಟಿ ಹಾಕಲು ಹತ್ತಿಕ್ಕಲು ಹೆಜ್ಜೆ ಹೆಜ್ಜೆ ಚಕ್ರವ್ಯೂಹ ರಚಿಸಿರುತ್ತಾರೆ ಈ ಸಮಾಜದಲ್ಲಿ , ನಿನ್ನ ಹೃದಯ ಬಯಕೆಯನ್ನು ತೀರಿಸಿ ಕೋ, ಹೃದಯಕ್ಕೆ ಆಘಾತ ಮಾಡಬೇಡ ,ನಿನ್ನ ಆಸೆಯ ಕನಸುಗಳನ್ನು ಬಿಚ್ಚಿ ಸುಂದರಗೊಳಿಸು ಅವುಗಳನ್ನು ಚೌಕಟ್ಟಿನಲ್ಲಿ ಬಂಧಿಸ ಬೇಡವೆಂದು ಹೇಳಿದ್ದಾರೆ . ಇದನ್ನು ಬುದ್ಧಿವಾದ ರೀತಿಯಲ್ಲಿ ಹೇಳಿದ್ದಾರೆ . ಸ್ತ್ರೀ ಸ್ವಾತಂತ್ರ ಸಮಾನತೆಯ ಬಗ್ಗೆ ಈ ಗಜಲ್ ನಲ್ಲಿ ಬಿತ್ತರಿಸಿದ್ದಾರೆ.
ಸಬಲೀಕರಣವಾದರೂ ಕ್ಷೀಣಿಸದಾದ ಅವಳ ತಲ್ಲಣ
ಸ್ವಾವಲಂಬಿಯಾದರೂ ಕ್ಷೀಣಿಸದಾದ ಅವಳ ತಲ್ಲಣ
ದೇಶ ಸ್ವಾತಂತ್ರ್ಯವಾದ ಮೇಲೆ ಸರಕಾರ ಮಹಿಳೆಯರ ಕಲ್ಯಾಣಕ್ಕಾಗಿ ಎಷ್ಟು ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ . ಸರಕಾರ ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರ ಸ್ವಾವಲಂಬಿಯಾಗಲು ಅನೇಕ ಅವಕಾಶ ಗಳನ್ನು ಕಲ್ಪಿಸಿದೆ ಇಂದು . ಇಂದು ಮಹಿಳೆ ವಿದ್ಯಾವಂತೆಯಾಗಿ ಮಹಿಳೆ ಗಂಡಸಿಗೆ ಸಮವಾಗಿ ಕಚೇರಿಗಳಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ ಆರ್ಥಿಕ ಸ್ವಾವಲಂಬಿಯಾದರೂ ಅವಳ ಮಾನಸಿಕ ತಲ್ಲಣಗಳು ಕಡಿಮೆಯಾಗಿಲ್ಲ. ದುಡಿಯುವ ಮಹಿಳೆಯರಿಗೆ ಮನೆ ಮತ್ತು ಉದ್ಯೋಗದ ಜವಾಬ್ದಾರಿ ಹೆಚ್ಚಾಗಿ ಅವಳು ಮಾನಸಿಕವಾಗಿ ಕುಗ್ಗುತ್ತಿದ್ದಾಳೆ .ಸಂಬಂಧಿಕರು ನೆರೆಹೊರೆಯವರು ಮನೆಯ ಗಂಡ ಮಕ್ಕಳು ಹೀಗೆ ಎಲ್ಲರಿಂದಲೂ ಅನೇಕ ಮಾತುಗಳನ್ನು ಬರುತ್ತವೆ ದುಡಿಯುವಳೆಂದು ಇವಳಿಗೆ ಅಹಂ ಹೆಚ್ಚು ಎಂದು ಸಹಜವಾಗಿ ಜನ ಆಡಿಕೊಳ್ಳುತ್ತಾರೆ . ಆದರೆ ಅವಳು ಇನ್ನೊಬ್ಬರಿಗೆ ಅನ್ನ ಹಾಕುವ ಅನ್ನದಾತೆಯಾದರೂ ಗಂಡಿನ ದಬ್ಬಾಳಿಕೆ ತಪ್ಪಿಲ್ಲವೆಂದು ಗಜಲ್ ಕಾತಿ೯ ದುಡಿಯುವ ಹೆಣ್ಣು ಮಕ್ಕಳು ಪಡುವ ತಲ್ಲಣಗಳು ಮಾನಸಿ ಕಿರಿಕಿರಿ ದೈಹಿಕ ಶೋಷಣೆಯನ್ನು ಸುಂದರವಾಗಿ ವಿವರಿಸಿದ್ದಾರೆ .
ಸಹನೆಯಿಂದ ನೀನೇ ಸಾಕಿದ ಕೊಬ್ಬಿದ ಗೂಳಿ ಅವನು
ಸೇವೆಯಿಂದ ನೀನೇ ಸಾಕಿದ ಕೊಬ್ಬಿದ ಗೂಳಿ ಅವನು
ಭಾರತೀಯ ಸಂಸ್ಕೃತಿಯಲ್ಲಿ ಯುಗಯುಗಗಳಿಂದ ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ತಾಯಿ ಅಕ್ಕ ಮನೆಯವರೆಲ್ಲರೂ ಗಂಡುಮಗ ಎಂಬ ಹೆಗ್ಗಳಿಕೆಯನ್ನು ಕೊಡುತ್ತಾ ಹೆಮ್ಮೆಯಿಂದ ಅವನಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೆಚ್ಚಿದ ಲಾಲನೆ ಪಾಲನೆಯನ್ನು ಮಾಡುವುದನ್ನು ನಾವೆಲ್ಲ ನಮ್ಮಗಳ ಮನೆಯಲ್ಲಿ ನೋಡಿದ್ದೇವೆ . ಅದೇ ಗಂಡು ದೊಡ್ಡದಾಗಿ ಹೆಣ್ಣನ್ನು ಕೀಳಾಗಿ ಕಾಣುತ್ತಾ ಹೆಣ್ಣು ಭೋಗದ ವಸ್ತು ಎಂದು ಹೆಣ್ಣಿಗೆ ಶೋಷಣೆ ಮಾಡುತ್ತದೆಂದು ಗಜಲ್ ಕಾತಿ೯ ನೀ ಸಾಕಿದ ಗಿಣಿ ನಿನಗೆ ಹದ್ದಾಗಿ ಕುಕ್ಕುತ್ತದೆ ಎಂದು ಕೊಬ್ಬಿದ ಗೂಳಿಯಾಗಿ ಸಮಾಜದಲ್ಲಿ ಮದುವೇರಿ ಮೆರೆಯುತ್ತಾ ಸಿಕ್ಕ ಸಿಕ್ಕ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವುದೆಂದು ಉತ್ತಮವಾದ ರೂಪಕಗಳೊಂದಿಗೆ ಗಜಲ್ ದಲ್ಲಿ ವಿವರಿಸಿದ್ದಾರೆ ಮತ್ತು ಗಂಡು ಮೇಲು ಹೆಣ್ಣು ಕೀಳು ಎಂಬುವುದನ್ನು ನಾವು ಚಿಕ್ಕಂದಿನಿಂದ ಬಳೆಸಿದ ಪರಿಣಾಮ ಎಂದು ಅದರ ಫಲವನ್ನು ಹೆಣ್ಣು ಅನುಭವಿಸಬೇಕಾಗಿದೆ ಎಂದು ಗಜಲ್ ಕಾರ್ತಿ ನೊಂದು ವಿವರಿಸಿದ್ದಾರೆ.
ಚಾರಿತ್ರ್ಯಯನ್ನೊ ಸಂಪ್ರದಾಯ ಕೇವಲ ಹೆಣ್ಣಿಗೆ ಮೀಸಲೆ ?
ಸಹಿಷ್ಣುತೆಯನ್ನೊ ಸಂಪ್ರದಾಯ ಕೇವಲ ಹೆಣ್ಣಿಗೆ ಮೀಸಲೆ ?
ನಮ್ಮ ಭಾರತೀಯ ಸಂಸ್ಕೃತಿಯನ್ನು ಸಾರುವ ಪುರಾಣ ವೇದ ಕಾವ್ಯ ಗ್ರಂಥಗಳಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೆ ಹೆಣ್ಣಿನ ಶೀಲದ ಬಗ್ಗೆ ಮತ್ತು ಆಕೆಯ ಪತಿವ್ರತ ಬಗ್ಗೆ ಪರೀಕ್ಷೆಗಳು ನಡೆದಿದ್ದನ್ನು ನಾವು ಮೊದಲಿನಿಂದಲೂ ಓದುತ್ತಾ ಬಂದಿದ್ದೇವೆ .ಆದರೆ ಗಂಡಿಗೆ ಅಂತ ಯಾವ ಶೀಲದ ಸಂಶಯದ ಪರೀಕ್ಷೆಗಳಾಗಲಿ ನಡೆದಿದ್ದು ನಾವು ಎಲ್ಲಿಯೂ ಓದಿಲ್ಲ ಕಂಡಿಲ್ಲ ,ಇದನ್ನೇ ಗಜಲ್ ಕಾರ್ತಿಯವರು ಸೀತೆ ,ರೇಣುಕಾ, ಅಹಲ್ಯಾ ಈ ಶ್ರೇಷ್ಠ ಮಹಿಳೆಯರ ಶೀಲವನ್ನು ಸಮಾಜ ಸಂಶಯ ಪಟ್ಟಿದ್ದು ನಾವು ಕಾವ್ಯ ಪುರಾಣಗಳಲ್ಲಿ ಓದಿದ್ದೇವೆ .ಸೀತೆಯ ಶೀಲ ಪರೀಕ್ಷ ಮಾಡಲು ಅವಳನ್ನು ಅಗ್ನಿಪರೀಕ್ಷೆಗೆ ,ರೇಣುಕಾಳ ಶೀಲಾ ಸಂಶಯಿಸಿ ಜಮದಗ್ನಿಯು ಮಗನಿಂದಲೇ ತಾಯಿಯ ಶಿರಶ್ಚೇತನ ಮಾಡಿಸುತ್ತಾನೆ ,ಅಹಲ್ಯಾಳ ಶೀಲದ ಬಗ್ಗೆ ಸಂಶಯ ಪಟ್ಟು ಗಂಡ ಗೌತಮ ಮುನಿ ಅವಳಿಗೆ ಶಿಲೆಯಾಗೆಂದು ಶಾಪ ಕೊಡುತ್ತಾನೆ. ಗಜಲ್ ಕಾರ್ತಿಯು ಈ ರೂಪಕಗಳನ್ನು ಇಟ್ಟುಕೊಂಡು ಸಮಾಜಕ್ಕೆ ಪ್ರಶ್ನೆ ಮಾಡುತ್ತಾರೆ ರಾಮನಿಗೆ, ಜಮದಗ್ನಿಗೆ, ಗೌತಮನಿಗೆ, ಯಾರು ಅವರ ಶೀಲ ಪರೀಕ್ಷೆ ಮಾಡಲಿಲ್ಲ ಕೇವಲ ಹೆಣ್ಣಿಗೆ ಏಕೆ ಸಂಶಯ ಪಟ್ಟು ಪರೀಕ್ಷೆ ಮಾಡಬೇಕೆಂದು ಕೇಳುತ್ತಾರೆ .ಎಲ್ಲಾ ರೀತಿಯಿಂದಲೂ ಹೆಣ್ಣು ಶೋಷಣೆಗೆ ,ಶೀಲ ಪರೀಕ್ಷೆಗೆ ಒಳಗಾಗಬೇಕೆಂದು ನೊಂದ ಸಮಾಜದ ವ್ಯವಸ್ಥೆಯ ಬಗ್ಗೆ ಪ್ರಶ್ನಿಸುತ್ತಾರೆ.
ಡಾ.ರೇಖಾ ಪಾಟೀಲ ಅವರ ಅವಳುಗಜಲ್ ಸಂಕಲನದ ಎಲ್ಲಾ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ ಮತ್ತು ಓದುಗರಿಗೆ ಚಿಂತನೆಗೆ ಹಚ್ಚುತ್ತವೆ . ಡಾ.ರೇಖಾ ಪಾಟೀಲ ಅವರ *ಅವಳು* ಮೊದಲ ಗಜಲ್ ಸಂಕಲನವಾದ ಕಾರಣ ನಾನು ಇಲ್ಲಿ ಕೆಲವೊಂದು ಮಾತುಗಳನ್ನು ಹೇಳಲೇಬೇಕಾಗಿದೆ ,ಗಜಲ್ ರಚನೆಗೆ ಬೇಕಾದ ಮತ್ಲಾ , ಕಾಫಿಯ , ರದೀಪ್ , ಮತ್ತು ಮಕ್ತಾ ಎಂಬ ನಾಲ್ಕು ಅಂಗಗಳನ್ನು ಅವಶ್ಯಕತೆ ಇದ್ದು ಅವುಗಳನ್ನು ರೇಖಾ ಪಾಟೀಲರು ತಮ್ಮ ಎಲ್ಲ ಗಜಲ್ ಗಳಲ್ಲಿ ಬಳಸಿಕೊಂಡಿದ್ದಾರೆ. ಗಜಲ್ ದ್ವಿಪದಿಗಳಲ್ಲಿ ಇದ್ದು ಕನಿಷ್ಠ ಒಂದು ಗಜಲ್ ಗೆ ಐದು ದ್ವಿಪದಿಗಳು ಇರಬೇಕೆಂಬ ಸಾಮಾನ್ಯ ನಿಯಮ ,ಆದರೆ ರೇಖಾ ಪಾಟೀಲ ಅವರ ಕೆಲವು ಗಜಲ್ ಗಳು ನಾಲ್ಕು ದ್ವಿಪದಿಯಲ್ಲಿ ಕೊನೆಗೊಂಡಿವೆ. *ಅವಳು* ಗಜಲ್ ಸಂಕಲನದಲ್ಲಿ ಇರುವ ಎಲ್ಲಾ ಗಜಲ್ ಗಳು ಮಹಿಳಾ ಶೋಷಣೆ ,ಮಹಿಳಾ ದೌರ್ಜನ್ಯ ,ಮಹಿಳೆಯರ ಮನದ ತಳಮಳ ಹಾಗೂ ಸಮಾಜದ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಹಾಕುವ ಗಜಲ್ ಗಳಿವೆ ,ಗಜಲ್ ದ ಸ್ಥಾಯಿ ಗುಣವಾದ ಪ್ರೀತಿ ,ಪ್ರೇಮ ,ವಿರಹ, ಅಧ್ಯಾತ್ಮಿಕ ,ವಿಷಯಗಳ ಮೇಲೆ ಕೆಲವು ಗಜಲ್ ಗಳನ್ನು ರಚಿಸಿ ಇದರಲ್ಲಿ ಸೇರ್ಪಡೆ ಮಾಡಿದ್ದರೆ ಅವಳು ಕೃತಿ ಶ್ರೇಷ್ಠ ವಾಗುತ್ತಿತ್ತು.
ಕೆಲವು ಗಜಲ್ ಗಳಲ್ಲಿ ಕಾವ್ಯದ ಝಲಕ್ ಕಾಣುತ್ತದೆ ಹಾಗೆ ಕೆಲವು ಗಜಲ್ ಗಳು ವಾಚಕತೆಯಿಂದ ಕಾಣಿಸುತ್ತವೆ. ಡಾ. ರೇಖಾ ಪಾಟೀಲ ಅವರ ಅವಳು ಮೊದಲ ಗಜಲ್ ಸಂಕಲನ ವಾಗಿದ್ದು ಈ ರೀತಿಯ ಸಣ್ಣ ತಪ್ಪುಗಳಾಗುವುದು ಸಹಜ ಮುಂದಿನ ಗಜಲ್ ರಚನೆ ಯಲ್ಲಿ ಇವುಗಳ ಬಗ್ಗೆ ಗಮನಿಸಿ ಇನ್ನೂ ಉತ್ತಮವಾದ ಗಜಲ್ ಗಳನ್ನು ರಚಿಸಿ ಪ್ರಕಟಿಸಿ ಕನ್ನಡ ಗಜಲ್ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸುತ್ತಾರೆಂಬ ಭರವಸೆಯೊಂದಿಗೆ ಶುಭ ಕೋರುತ ನನ್ನ ಬರಹಕ್ಕೆ ವಿರಾಮ ಕೊಡುತ್ತೇನೆ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ