ಭಕ್ತಿ ಜ್ಞಾನ ವೈರಾಗ್ಯಗಳ ಮೂರ್ತಿ…ಸಜ್ಜಲಗುಡ್ಡದ ಶರಣಮ್ಮ ತಾಯಿ

ಭಕ್ತಿ ಜ್ಞಾನ ವೈರಾಗ್ಯಗಳ ಮೂರ್ತಿ…ಸಜ್ಜಲಗುಡ್ಡದ ಶರಣಮ್ಮ ತಾಯಿ

 

 

 

 

 

 

 

 

 

 

 

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ 1875ರಲ್ಲಿ ನಿಂಗಪ್ಪ ಮತ್ತು ತಾಯಿ ನಿಂಗಮ್ಮರ ಪುಣ್ಯ ಗರ್ಭ ಸಂಜಾತೆಯಾದ ಯಮುನಮ್ಮ ಹುಟ್ಟಿದ ಕೆಲವೇ ದಿನಗಳಲ್ಲಿ ತಂದೆಯನ್ನು ಕಳೆದುಕೊಂಡು ಅಕ್ಷರಶಃ ಅನಾಥಳಾದರು.

ಹಸಿವು, ಬಡತನವನ್ನು ಬೆನ್ನಲ್ಲಿ ಕಟ್ಟಿಕೊಂಡು ಹೊಟ್ಟೆಯ ತುತ್ತಿಗೆ ಮಗಳನ್ನು ಕರೆದುಕೊಂಡು ಊರೂರು ಅಲೆದು ಕೆಲಸ ಮಾಡುತ್ತಿದ್ದ ನಿಂಗಮ್ಮ ಮಠಮಾನ್ಯಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಡೆಸಿಕೊಡುತ್ತಿದ್ದರು.
ಆ ತಾಯಿ ಮಗಳು ದುಡಿಮೆಯನ್ನು ಅರಸುತ್ತಾ ಕಂಪ್ಲಿ, ಸೂಗೂರು, ಕಂಬಾಳ್ಯಾಳಗಳಿಗೆ ಊರೂರು ಅಲೆಯುತ್ತಿದ್ದರು. ಹಗಲು ಕೂಲಿ ಕೆಲಸವನ್ನು ಮಾಡಿ ರಾತ್ರಿಯ ಹೊತ್ತಿಗೆ ಆಯಾ ಊರುಗಳಲ್ಲಿನ ಮಠಮಾನ್ಯಗಳಲ್ಲಿ ಪುರಾಣ ಪ್ರವಚನಗಳನ್ನು ಕೇಳುತ್ತಾ, ಆಧ್ಯಾತ್ಮದ ಅರಿವನ್ನು ಮೂಡಿಸಿಕೊಳ್ಳುತ್ತಿದ್ದರು.

ಹೀಗೆಯೇ ಒಂದು ಬಾರಿ ಅವರು ಕಂಬಳ್ಯಾಳ ಗ್ರಾಮಕ್ಕೆ ಆಗಮಿಸಿದ್ದ ಗುಡದೂರಿನ ಬಸವೇಶ್ವರ/ ಬಸವಾರ್ಯ ಶಿವಯೋಗಿಗಳು ಸೇವಾ ಕಾರ್ಯದಲ್ಲಿ ನಿರತರಾಗಿದ್ದ ಈ ತಾಯಿ ಮಕ್ಕಳ ಸೇವಾ ಮನೋಭಾವವನ್ನು ಮೆಚ್ಚಿ ಶ್ಲಾಘಿಸಿದರು. ತಾಯಿಯನ್ನು ಕುರಿತು ನಿನ್ನ ಮಗಳು ಒಳ್ಳೆ ಲಕ್ಷಣವಂತಳು. ಒಳ್ಳೆಯ ವರನನ್ನು ನೋಡಿ ಮಗಳಿಗೆ ಮದುವೆ ಮಾಡು ಎಂದು ಹೇಳಿದಾಗ ಈಗಾಗಲೇ ಮಗಳು ಐಹಿಕ ಸುಖ ಭೋಗಗಳನ್ನು ದೂರವಿಟ್ಟು ಆಧ್ಯಾತ್ಮ ಮಾರ್ಗದಲ್ಲಿ ಸಾಗುತ್ತಿರುವುದನ್ನು ಗಮನಿಸಿದ್ದ ಆ ತಾಯಿಯು “ಎಪ್ಪಾ, ನನ್ನ ಮಗಳನ್ನು ಮದುವೆಯ ಬಂಧನಕ್ಕೆ ಸಿಲುಕಿಸುವುದು ಬೇಡ, ಆಕೆಗೆ ಈ ಸಾಂಸಾರಿಕ ಜೀವನದಲ್ಲಿ ಎಳ್ಳಷ್ಟು ಆಸಕ್ತಿ ಇಲ್ಲ ಆಕೆಯನ್ನು ಯಾವುದಾದರೂ ಮಠಕ್ಕೆ ಸೇರಿಸಿಬಿಡು”
ಎಂದು ಕೈ ಮುಗಿದು ಹೇಳಿದಳು. ಮಗಳ ಮುಖದಲ್ಲಿಯೂ ಅದೇ ಭಾವ ಗೋಚರಿಸಿದ್ದುದನ್ನು ಕಂಡು ‘ಶಿವನಿಚ್ಛೆ’ಯೆಂದ ಶಿವಯೋಗಿಗಳು “ಆಯ್ತು ಒಮ್ಮೆ ಗುಡದೂರಿಗೆ ಬನ್ನಿ” ಎಂದು ಹೇಳಿ ಹೊರಟು ಹೋದರು.

ಮುಂದೆ ಕೆಲ ದಿನಗಳ ನಂತರ ಗುಡದೂರಿಗೆ ತಾಯಿ ಮಗಳು ಬಂದು ಶಿವಯೋಗಿಗಳ ದರ್ಶನ ಮಾಡಿ ಈ ಹಿಂದೆ ಪ್ರಸ್ತಾಪಿಸಿದ ವಿಷಯವನ್ನು ಜ್ಞಾಪಿಸಿದಾಗ ಶಿವಯೋಗಿಗಳು ಆಕೆಯ ಮಗಳನ್ನು ಕುರಿತು ‘ನಿನಗೇನು ಬೇಕು ತಾಯಿ‘ ಎಂದು ಕೇಳಿದಾಗ ಆಕೆ
ಎಪ್ಪಾ… ನನಗೆ ಮೋಕ್ಷದ ಮಾರ್ಗವನ್ನು ತೋರಿಸು ನಾನು ಎಲ್ಲಿಂದ ಬಂದೆ ಮತ್ತು ಮತ್ತು ಎಲ್ಲಿಗೆ ಹೋಗುವೆ ಎಂಬ ಜ್ಞಾನವನ್ನು ನನಗೆ ತಿಳಿಸಿ ಕೊಡು” ಎಂದು ಕೇಳಿದಳು.
ಇದರಿಂದ ಅಚ್ಚರಿಗೊಂಡ ಶಿವಯೋಗಿಗಳು “ಎವ್ವಾ..
ಓದಾಕ ಬರಿಯಾಕ ಬರತೈತೇನು” ಎಂದು ಕೇಳಿದರು.
ಇದಕ್ಕೆ ಉತ್ತರವಾಗಿ ಆ ಹೆಣ್ಣು ಮಗಳು “ಸ್ವಲ್ಪ ಸ್ವಲ್ಪ ಬರತೈತಿ ಯಪ್ಪಾ” ಎಂದು ಹೇಳಿದಳು.

ಕೂಡಲೇ ಆಕೆಯ ಕೈಯಲ್ಲಿ ತಾವು ಓದುತ್ತಿದ್ದ ಷಣ್ಮುಖ ಶಿವಯೋಗಿಗಳ ಅಖಂಡೇಶ್ವರರ ವಚನಗಳ ಪುಸ್ತಕದಲ್ಲಿನ ಗುರು ಕಾರುಣ್ಯದ ಅಧ್ಯಾಯವನ್ನು ಕೊಟ್ಟು ಅದನ್ನು ಓದಲು ಹೇಳಿದರು.

 

 

 

 

 

 

 

 

 

ಗುರುವೇ ಪರತತ್ವವು ತಾನೆ ನೋಡಾ
ಗುರುವೇ ಪರ ವಸ್ತುವು ತಾನೇ ನೋಡಾ
ಗುರುವೇ ಪರಬ್ರಹ್ಮವೂ ತಾನೇ ನೋಡಾ
ಗುರುವಿಲ್ಲದೆ ಪರವಿಲ್ಲವೆಂದು
ಸಕಲ ಸಂಸ್ಕೃತಿಗಳು ಹೊಗಳುತ್ತವೆ ನೋಡಾ
ಗುರುವಿಂಗೆ ನಮೋ ನಮೋ ಎನ್ನುವೆನಯ್ಯ

ಎಂಬ ಅಖಂಡೇಶ್ವರರ ವಚನವನ್ನು ಗುರುಗಳು ಪೂಜೆ ಮುಗಿಸಿ ಬರುವಷ್ಟರಲ್ಲಿ ಓದಿ ಬಾಯಿ ಪಾಠ ಮಾಡಿದ ಆಕೆ ಅವರಿಗೆ ಯಥಾವತ್ತಾಗಿ ಓದಿ ತೋರಿದರು.
ಆಕೆಯ ಅದ್ಭುತ ಜ್ಞಾಪಕ ಶಕ್ತಿಯನ್ನು ಕಂಡು ಬೆರಗಾದ ಶಿವಯೋಗಿಗಳು ಆಕೆಯನ್ನು ಮಗಳಾಗಿ ಸ್ವೀಕರಿಸಿ ವೀರವಿರಾಗಿಣಿ ಅಕ್ಕಮಹಾದೇವಿಯ ಜೀವನ ದರ್ಶನವನ್ನು ಮಾಡುತ್ತಿದ್ದು “ಇನ್ನು ಮುಂದೆ ಗುಡದೂರು ಮತ್ತು ಕಂಬಳ್ಯಾಳ ಗ್ರಾಮಗಳಲ್ಲಿ ನೀನು ವಾಸ ಮಾಡು, ಪ್ರತಿದಿನ ಐದು ಮನೆಗಳಲ್ಲಿ ಭಿಕ್ಷಾಟನೆ ಮಾಡಿ ಬಂದ ಆಹಾರವನ್ನು ನೀನು ಸೇವಿಸಬೇಕು, ಈ ಭಿಕ್ಷೆಯನ್ನು ಬೇಡುವಾಗಲೂ ಕೂಡ ಕೇವಲ ಒಂದು ಬಾರಿ ಮಾತ್ರ ಅವರನ್ನು ನೀನು ಕರೆಯಬೇಕು. ಕೊಟ್ಟರೆ ಮಾತ್ರ ಪಡೆ ಕೊಡದಿದ್ದರೆ ಮತ್ತೆ ಕೇಳಬಾರದು, ಕೊಟ್ಟಷ್ಟನ್ನು ಮಾತ್ರ ಪಡೆಯಬೇಕು ಹೆಚ್ಚಿನದಕ್ಕೆ ಅಪೇಕ್ಷ ಬೇಡ” ಎಂಬ ಕರಾರುಗಳನ್ನು ವಿಧಿಸಿದರು. ಪುಟ್ಟ ಯುವತಿ ಗುರುಗಳ ವಾಕ್ಯವನ್ನು ಶಿರಸಾ ಪಾಲಿಸಿ ಅಂತೆಯೇ ನಡೆದಳು.

ಮನೆ ಮನೆಯ ಮುಂದೆ ತಪ್ಪದೇ ಕೈಯೊಡ್ಡುವಂತೆ ಮಾಡು, ಬೇಡಿದರೆ ಇಕ್ಕದಂತೆ ಮಾಡು
ಇಕ್ಕಿದರೆ ನಾನೆತ್ತಿಕೊಳ್ಳುವ ಮುನ್ನ ಶುನಕ ಎತ್ತಿಕೊಳ್ಳುವಂತೆ ಮಾಡು”
ಎಂಬ ಅಕ್ಕಮಹಾದೇವಿ ತಾಯಿಯ ವಚನದಂತೆ ಆಕೆ ಬೆಳೆಯುತ್ತಾಳೆ. ಗುರು ತೋರಿದ ಸಾಧನೆಯ ಮಾರ್ಗದಲ್ಲಿ ಜಪ-ತಪ, ನೇಮ ನಿಷ್ಟೆ, ಲಿಂಗ ಪೂಜೆ, ಅನುಷ್ಠಾನಗಳನ್ನು ಮಾಡುತ್ತಾ ಅಪಾರ ಮಹಿಮೆಗಳನ್ನು ತನ್ನದಾಗಿಸಿಕೊಳ್ಳುತ್ತಾರೆ. ಗುರುವಿನ ಮಾರ್ಗದರ್ಶನದಲ್ಲಿ ಸಾಗಿದ ಆಕೆ ಅಪಾರ ಮಹಿಮಾವಂತಳಾಗಿ, ದೇವಿ ಸ್ವರೂಪವಾಗಿ ಕಂಗೊಳಿಸಿದಳು.

ಅಮ್ಮನ ತಪ ಶಕ್ತಿಯ ಬಲದಿಂದ ಮಳೆ ಬೆಳೆಗಳಾಗುವುದು, ಮಕ್ಕಳ ಭಾಗ್ಯ ಬಯಸಿ, ಕಂಕಣ ಭಾಗ್ಯ ಬಯಸಿ ಬಂದವರಿಗೆ ಅವರ ಅಭೀಷ್ಟ ಸಿದ್ಧಿಯಾಗುವುದು ಹೀಗೆ ಸಕಾರಾತ್ಮಕ ಸಿದ್ದಿಗಳ ಮೂಲಕ ಭಕ್ತರ ಉದ್ಧಾರವನ್ನು ಮಾಡಿದ ಆಕೆ ತನ್ನ ಪೂರ್ವಾಶ್ರಮದ ಯಮುನಮ್ಮ ಎಂಬ ಹೆಸರಿನಿಂದ ಶರಣಮ್ಮ ಎಂಬ ಮರು ನಾಮಕರಣವನ್ನು ಹೊಂದಿದರು. ಬರಗಾಲದ ಪ್ರದೇಶವಾದ ರಾಯಚೂರು ಜಿಲ್ಲೆಯ ಈ ಭಾಗದ ಜನರು ಆಹಾರದ ಕೊರತೆಯಿಂದ ಬಳಲಬಾರದು ಎಂಬ ಆಶಯದಿಂದ ಇಲ್ಲಿಯ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಅಪೇಕ್ಷೆಯಿಂದ ಭಕ್ತರ ಒತ್ತಾಯದ ಮೇರೆಗೆ ಲಿಂಗಸೂರು ತಾಲೂಕಿನ ಸಜ್ಜಲಗುಡ್ಡಕ್ಕೆ ಬಂದು ನೆಲೆಸಿದ ಶರಣಮ್ಮ ತಾಯಿ ನಮ್ಮೆಲ್ಲರ ಆರಾಧ್ಯ ದೈವ ಸಜ್ಜಲ ಶ್ರೀ ಶರಣಮ್ಮ ತಾಯಿಯಾಗಿ ಎಲ್ಲರ ಪಾಲಿಗೆ ಮಹಾಮಾತೆಯಾಗಿ ಭಕ್ತ ಜನರ ಇಷ್ಟಾರ್ಥಗಳನ್ನು ಸಿದ್ಧಿಸುವ ನಿಟ್ಟಿನಲ್ಲಿ ಆ ಭಗವಂತ ಮತ್ತು ಭಕ್ತರ ನಡುವಿನ ಕೊಂಡಿಯಾದರು.

 

 

 

 

 

 

 

 

 

ಅಮ್ಮನ ಧೀಶಕ್ತಿ ತಪಶ್ಯಕ್ತಿ ಎಷ್ಟಿತ್ತು ಎಂದರೆ ಆಕೆ ಎಲ್ಲ ಗುರು ವಿರಕ್ತ ಪರಂಪರೆಯ ಮಠಮಾನ್ಯಗಳನ್ನು ಗೌರವಿಸಿದಳು ಆದರೆ ಆಕೆ ಎಂದು ಯಾರಿಂದಲೂ ಸಾಷ್ಟಾಂಗ ನಮಸ್ಕಾರವನ್ನು ಮಾಡಿಸಿಕೊಳ್ಳಲಿಲ್ಲ.

೧೯೬೦ರಲ್ಲಿ ಬಸವೇಶ್ವರ ಶಿವಯೋಗಿಗಳು ಲಿಂಗೈಕ್ಯರಾದಾಗ ಅವರ ಗಣಾರಾಧನೆಯನ್ನು ಐದು ಸೇರು ನುಚ್ಚು ಮತ್ತು ಐದು ಸೇರು ನವಣೆಯನ್ನು ತಂದು ಮಾಡಿದ್ದ ಅಮ್ಮನ ಮಠದಲ್ಲಿ ಇಂದು ಸಾವಿರಾರು ಜನರಿಗೆ ದಾಸೋಹ ಜರುಗುತ್ತದೆ.

ಒಂದೊಮ್ಮೆ ಬಾಗಲಕೋಟೆಯ ಬಳೂಲಮಠದ ವಕೀಲರ ಮನೆಯಲ್ಲಿ ಪಂಚಪೀಠದ ಶ್ರೀಮದ್ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮತ್ತು ಅನುಷ್ಠಾನಗಳು ನೆರವೇರುತ್ತಿದ್ದವು. ಗುರುಗಳ ಕಟ್ಟಪ್ಪಣೆಯನ್ನು ಜೀವನಪೂರ್ತಿ ಆಜ್ಞೆಯಂತೆ ನಡೆಸಿಕೊಂಡು ಬಂದ ಅಮ್ಮನವರು ಸಜ್ಜಲಗುಡ್ಡ ಮತ್ತು ಕಂಬಳ್ಯಾಳ ಗ್ರಾಮಗಳನ್ನು ಬಿಟ್ಟು ಬೇರೆಲ್ಲೂ ಹೋಗಲಿಲ್ಲ…. ಬಾಗಲಕೋಟೆಗೆ ರಂಭಾಪುರಿ ಪೀಠದ ಮಹಾಸ್ವಾಮಿಗಳ ಆಗಮನವನ್ನು ಕೇಳಿ ತಿಳಿದ ಖುದ್ದು ತನ್ನನ್ನು ಮೂಳ ಎಂದು ಸಂಭೋಧಿಸಿಕೊಳ್ಳುತ್ತಿದ್ದ ‘ಈ ಮೂಳನ ಜೀವಕ್ಕೆ ಅಪ್ಪನ ದರ್ಶನದ ಭಾಗ್ಯವಿಲ್ಲ’ ಎಂದು ಸಂಕಟಪಡುತ್ತ ಹೇಳಿದರು. ಈ ವಿಷಯವನ್ನು ರಂಭಾಪುರಿ ಜಗದ್ಗುರುಗಳಿಗೆ ಅರುಹಿದ ಬಳೂಲಮಠ ವಕೀಲರು ಅಮ್ಮನ ಸಂಕಟವನ್ನು ವಿವರಿಸಿದರು. ಪಂಚ ಪೀಠಾಧೀಶರಲ್ಲಿ ಒಬ್ಬರಾದ ನಾನು ಒಬ್ಬ ಹೆಣ್ಣುಮಗಳಿಗೆ ದರ್ಶನ ಭಾಗ್ಯವನ್ನು ಕರುಣಿಸಲು ಹೋಗಬೇಕೇ ಎಂದು ಈ ವಿಷಯವನ್ನು ನಿರ್ಲಕ್ಷಿಸಿದ ಗುರುಗಳಿಗೆ ಆ ದಿನ ರಾತ್ರಿಯೆಲ್ಲ ನಿದ್ದೆಯೇ ಸುಳಿಯದಾಯಿತು.ಅತ್ಯಂತ ಕಸಿವಿಸಿಯಿಂದ ಆ ರಾತ್ರಿಯನ್ನು ಕಳೆದ ಅವರು ಮರುದಿನ ಮುಂಜಾನೆ ತಾವು ಸಜ್ಜಲಗುಡ್ಡಕ್ಕೆ ಅಮ್ಮನವರಿಗೆ ದರ್ಶನ ನೀಡಲು ಬರುವುದಾಗಿ ಹೇಳಿ ಕಳುಹಿಸಿದರು.

ಗುರುಗಳ ಆಗಮನದ ಸುದ್ದಿಯನ್ನು ಕೇಳಿ ಇಡೀ ಗ್ರಾಮದ ಜನರಲ್ಲಿ ಸಂಚಲನ ಉಂಟಾಯಿತು. ಮನೆ ಮನೆಗಳಲ್ಲಿ, ತಳಿರು ತೋರಣ ರಂಗೋಲಿಗಳ ಅಲಂಕಾರವಾಗಿ ಸ್ವತಃ ಅಮ್ಮನೇ ಗುರುಗಳನ್ನು ಎದುರುಗೊಳ್ಳಲು ಆರತಿ ತಟ್ಟೆಯನ್ನು ಹಿಡಿದು ನಿಂತರು.

ಶ್ರೀಮದ್ರಂಭಾಪುರಿ ಪೀಠಾಧೀಶ ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳು ಗ್ರಾಮಕ್ಕೆ ಆಗಮಿಸಿದಾಗ ಅವರಿಗೆ ಪಾದ ಪೂಜೆ ಮಾಡಿ ಉಂಡೆ ಕರ್ಪೂರವನ್ನು ಬೆಳಗಿದ ಅಮ್ಮನ ಕೈಗಳು ಬಿಸಿಯಾದ ಆರತಿ ತಟ್ಟೆಯನ್ನು ಕೈಯಲ್ಲಿ ಹಿಡಿದ ಪರಿಣಾಮವಾಗಿ ಬೊಬ್ಬೆಗಳು ಉಂಟಾಗಿದ್ದವು. ಪೂಜೆ ಪುನಸ್ಕಾರಗಳು ನೆರವೇರಿಸಿ ಪ್ರಸಾದವನ್ನು ಸ್ವೀಕರಿಸಿದ ನಂತರ ಗುರು ದಕ್ಷಿಣೆಯನ್ನು ನೀಡಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ ನಂತರ ಜರುಗಿದ ತಮ್ಮ ಆಶೀರ್ವಚನದಲ್ಲಿ ಗುರುಗಳು “ನಾವು ನಮ್ಮ ಪೂರ್ವಾಶ್ರಮದ ಎಲ್ಲ ಸಂಬಂಧಗಳನ್ನು ತೊಡೆದುಹಾಕಿ ಈ ಪೀಠಕ್ಕೆ ಬಂದಿರುತ್ತೇವೆ. ಅಂತಹ ಪಂಚ ಪೀಠಾಧೀಶರೆಲ್ಲರಿಗೂ ಯಾವುದಾದರೂ ಒಂದು ಸಂಬಂಧ ಇದೆ ಎಂದು ಕಲ್ಪಿಸುವುದಾದರೆ ಅದು ಸಜ್ಜಲಗುಡ್ಡದ ಶರಣಮ್ಮ ತಾಯಿಯ ಮಾತೃ ಹೃದಯದ ಸಂಬಂಧ, ನಾವೆಲ್ಲರೂ ಆಕೆಯ ಮಕ್ಕಳು” ಎಂದು ಗದ್ಗದಿತರಾಗಿ ಹೇಳುತ್ತಾರೆ.

ಅಂತಹ ಧೀ ಶಕ್ತಿಯನ್ನು ಹೊಂದಿದ ಅಮ್ಮ ತಮ್ಮ ಬದುಕಿನ ಕೊನೆಯವರೆಗೂ ಗುರುವಿನ ರಕ್ಷೆ, ಗುರು ಹಾಕಿದ ಭಿಕ್ಷೆ, ಗುರು ತೋರಿದ ಮಾರ್ಗ ಮತ್ತು ಆತನ ಕಕ್ಷೆಯಲ್ಲಿಯೆ ತಾನಿದ್ದೇನೆ ಎಂಬ ಭಾವದಲ್ಲಿಯೇ ತನ್ನ ಗುರು ಬಸವೇಶ್ವರ ಶಿವಯೋಗಿಗಳ ಭಾವಚಿತ್ರವನ್ನು ಪಕ್ಕದಲ್ಲಿ ಇಟ್ಟುಕೊಂಡು ಅವರೇ ತನ್ನ ಮೂಲಕ ಎಲ್ಲ ಕೈಂಕರ್ಯಗಳನ್ನು ನಡೆಸಿಕೊಡುತ್ತಿದ್ದಾರೆ, ತಾನು ಕೇವಲ ಅವರ ನಿಯಾಮಕಳು ಎಂಬಂತೆ ನಡೆದುಕೊಂಡು ಗುರುವನ್ನು ಮೀರಿದ ಮಹಾನ್ ಸಾಧಕಿಯಾದರು. 1981ರ ಏಪ್ರಿಲ್ 24ರಂದು ಅಮ್ಮ 105 ವರ್ಷಗಳ ಕಾಲ ಮೋಕ್ಷ ಸಾಧನೆಯ ಪರಮೋಚ್ಚ ಬದುಕನ್ನು ಸಾಧಿಸಿ ಲಿಂಗೈಕ್ಯರಾದರು.

ಬಡವ- ಬಲ್ಲಿದ, ಮೇಲು- ಕೀಳು, ಸ್ಪೃಶ್ಯ- ಅಸ್ಪೃಶ್ಯ ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಅಪ್ಪ ಅವ್ವ ಎಂದು ಸಂಬೋಧಿಸಿ ಪ್ರೀತಿಯಿಂದ ಆಶೀರ್ವದಿಸುತ್ತಿದ್ದ ಅಮ್ಮನ ಲೀಲೆಗಳು ಅಪಾರ.

ಹಿಡಿ ನುಚ್ಚಿಗೆ ಪರದಾಡುತ್ತಿದ್ದ ಮಠದಲ್ಲಿ, ಗ್ರಾಮೀಣ ಭಾಗದ ಮಕ್ಕಳು ಆಹಾರ ಮತ್ತು ವಿದ್ಯೆಯ ಕೊರತೆಯಿಂದ ಬಳಲಬಾರದು ಎಂಬ ಭಕ್ತರ ಅಪೇಕ್ಷೆಯ ಮೇರೆಗೆ ಸಜ್ಜಲಗುಡ್ಡದಲ್ಲಿ ಶಾಲೆಯನ್ನು ಅಮ್ಮ ಆರಂಭಿಸಿದರು. ಇದೀಗ ಹಲವಾರು ಶಾಲೆಗಳು ಇವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

1947ರಲ್ಲಿ ಪ್ರಸಾದ ನಿಲಯವನ್ನು ಆರಂಭಿಸಲಾಯಿತು. ಅಮ್ಮನ ಮಡಿಲಿನ ಕೃಪಾಶೀರ್ವಾದದಲ್ಲಿ ಬೆಳೆದ ನೂರಾರು ಸಾವಿರಾರು ಬಡ ಮಕ್ಕಳು ಇಂದು ಉನ್ನತ ಹುದ್ದೆಗಳಲ್ಲಿ ಇದ್ದು ಅವರ ಅಭ್ಯುದಯಕ್ಕೆ ಕಾರಣವಾದದ್ದು ಅಮ್ಮನ
ಅಂತಃ ಕರಣ.

ಮೂರು ವರ್ಷಗಳ ಹಿಂದೆ 2022ರಲ್ಲಿ ಅಮ್ಮನ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳೆಲ್ಲರೂ ಸೇರಿ ಅಮ್ಮನ ನೆನಪಿನಲ್ಲಿ 50 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ ಹರ ಗುರು ಚರಮೂರ್ತಿಗಳನ್ನು ಕರೆಯಿಸಿ ಬಹುದೊಡ್ಡ ಸಮಾರಂಭವನ್ನು ಏರ್ಪಡಿಸಿ ಬಸವ ಆರ್ಯ ಶಿವಯೋಗಿಗಳ ಪುಣ್ಯಸ್ಮರಣೆಯನ್ನು ಆಚರಿಸಿ ಬೆಳ್ಳಿಯ ಮೂರ್ತಿಯನ್ನು ಮಾಡಿ ಅರ್ಪಿಸಿದರು.

ಸುಕ್ಷೇತ್ರ ಸಜ್ಜಲಗುಡ್ಡದ ಶಿವ ಶರಣೆ ಶರಣಮ್ಮನವರ ಮಠ ಆಧ್ಯಾತ್ಮಿಕ ಚಿಂತನೆ, ಶಿವಾನುಭವ, ಸಂಸ್ಕೃತ, ವೇದ ಪಾಠದ ಉಚಿತ ಬೋಧನೆ ಮಾಡುವ ಜಿಲ್ಲೆಯ ಅಪರೂಪದ ಮಠವಾಗಿದ್ದು, ಅಂದು ಕೇವಲ ಐದು ಗಣಗಳಿಗೆ ಪ್ರಸಾದ ಮಾಡಿಸುತ್ತಿದ್ದ ಕ್ಷೇತ್ರ ಇಂದು ಲಕ್ಷಾಂತರ ಭಕ್ತರಿಗೆ ದಾಸೋಹ ಮಾಡಿಸುವ ಪುಣ್ಯಕ್ಷೇತ್ರವಾಗಿ ಬೆಳೆದಿದೆ. ಜಾಗೃತ ಕ್ಷೇತ್ರವಾಗಿ ನಾಡಿನ ಸಕಲ ಭಕ್ತರನ್ನು ಕೈಬೀಸಿ ಕರೆಯುತ್ತಿದ್ದು ಶರಣಮ್ಮ ತಾಯಿಯ ಹಸ್ತಗಳು ಭಕ್ತರಿಗೆ ಅಭಯ ಹಸ್ತಗಳಾಗಿ ಈ ಕ್ಷೇತ್ರದಲ್ಲಿ ನೆಲೆ ನಿಂತಿವೆ.

2021 ರಲ್ಲಿ ಅಮ್ಮನ ಸ್ವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮಾಡಿದ್ದು ಮಾತೃ ಹೃದಯ ಎಂಬ ಸ್ಮರಣ ಸಂಚಿಕೆಯನ್ನು ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ಬಿಡುಗಡೆ ಮಾಡುವ ಶ್ರೀ ಕ್ಷೇತ್ರದ ಭಕ್ತಗಣ ಸನ್ನಾಹದಲ್ಲಿದೆ. ಆ ನಿಟ್ಟಿನಲ್ಲಿ ಬರೆದ ಈ ಲೇಖನ ಅಮ್ಮನ ಪಾದಪದ್ಮಗಳಿಗೆ ಸಲ್ಲಲಿ.

 

 

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!