ಭಿನ್ನತೆಯನ್ನು ಬಹುತ್ವವಾಗಿ ಪರಿವರ್ತಿಸಲು ಮೈತ್ರಿ ಭಾವವೊಂದಿದ್ದರೆ ಸಾಕಲ್ಲವೇ?

ಭಿನ್ನತೆಯನ್ನು ಬಹುತ್ವವಾಗಿ ಪರಿವರ್ತಿಸಲು ಮೈತ್ರಿ ಭಾವವೊಂದಿದ್ದರೆ ಸಾಕಲ್ಲವೇ?

 

ಚಳವಳಿ ಹೋರಾಟಗಳಿಗೆ ಸಮಾಜವನ್ನು ಸಿದ್ಧ ಮಾಡುವ ಹೈದರಾಬಾದ್ ಕರ್ನಾಟಕದ ರಾಯಚೂರು ಸೀಮೆಯ ಸಿಂಧನೂರಿನಲ್ಲಿ ೧೧ನೇ ಮೇ ಸಾಹಿತ್ಯ ಮೇಳ ಮೇ ೧೭, ೧೮ರಂದು ನಡೆಯಿತು. ಎರಡು ದಿನದ ಸಮ್ಮೇಳನ ಯಶಸ್ವಿಯಾಗಲು ಹೆಚ್ಚುಕಡಿಮೆ ಎರಡು ತಿಂಗಳ ತೀವ್ರ ತಯಾರಿ, ಆರೆಂಟು ತಿಂಗಳ ಮುಂದಾಲೋಚನೆ ಕೆಲಸ ಮಾಡಿರುತ್ತದೆ. ಅಂತೂ ಎಲ್ಲ ಪ್ರಯತ್ನ, ಹೆಗಲುಗೊಡುವಿಕೆ, ಒಗ್ಗೂಡುವಿಕೆ, ಮುನಿಸು, ಕಸಿವಿಸಿ, ಬೇಷರತ್ ಬೆಂಬಲಗಳ ನಡುವೆ ನಡೆದ ಸಮ್ಮೇಳನದ ಕೆಲವು ಚಿತ್ರಗಳನ್ನು ಮರೆಯುವ ಮುನ್ನ ಹಂಚಿಕೊಳ್ಳಬೇಕೆನಿಸಿದೆ.


ಪ್ರೊ. ಶಂಸುಲ್ ಇಸ್ಲಾಂ ಅವರ ಬರಹ ಓದಿದ್ದೆ. ಒಂದೆರೆಡು ಕಡೆಗಳಲ್ಲಿ ಅವರ ಉಪನ್ಯಾಸವನ್ನು ರದ್ದುಪಡಿಸಿದ/ಅಡ್ಡಿಪಡಿಸಿದ ದೇಶಭಕ್ತರ ರಂಪಾಟ ಕುರಿತು ಕೇಳಿದ್ದೆ. ಆದರೆ ಮೇ ಮೇಳದಲ್ಲಿ ಭಾಗವಹಿಸಲು ಹುಬ್ಬಳ್ಳಿ ಏರ್ಪೋರ್ಟಿಗೆ ಬಂದಿಳಿದಾಗ ಹೊರಬಂದವರನ್ನು ಗುರುತಿಸುವೆನೋ ಇಲ್ಲವೋ ಎಂಬ ಗೊಂದಲದಲ್ಲಿದ್ದೆ. ಅದಕ್ಕೆ ಅವಕಾಶವೇ ಕೊಡದೆ ಎದೆ ಮೇಲೆ ಭಗತ್ ಸಿಂಗನ ಲೋಹದ ಬ್ಯಾಜ್ ಅಂಟಿಸಿಕೊಂಡಿದ್ದ ಅಜಾನುಬಾಹು ವ್ಯಕ್ತಿ ನನ್ನತ್ತ ಕೈ ಮಾಡಿ ನಡೆದುಬಂದರು. ಅವರ ಸೂಟ್ಕೇಸ್ ತೆಗೆದುಕೊಳ್ಳಹೋದರೆ ಬಿಲ್ಕುಲ್ ಬೇಡವೆಂದು ತಾವೇ ಎಳೆದು ತಂದರು. ಅತ್ಯಂತ ಲವಲವಿಕೆಯ, ಮಗುವಿನಷ್ಟು ಕುತೂಹಲದ, ಮಕ್ಕಳು ಯುವಜನರು ಹಿರಿಯರೆನದೆ ಎಲ್ಲರೊಡನೆಯೂ ತಾವೇ ಮುಂಬರಿದು ಮಾತನಾಡಬಯಸುವ, ಒಡನಾಟದಲ್ಲಿ ಮೈತ್ರಿ ಭಾವದ ಅನುಭವ ನೀಡುವ ವ್ಯಕ್ತಿ ಕಾಮ್ರೇಡ್ ಶಂಸುಲ್ ಇಸ್ಲಾಂ. ಇಂದಿನ ಪಾಕಿಸ್ತಾನದ ರಾವಲ್ಪಿಂಡಿಯ ಅವರ ಕುಟುಂಬ ಸ್ವಾತಂತ್ರ್ಯಾನಂತರ ದೆಹಲಿಯಲ್ಲಿ ನೆಲೆಯಾಯಿತು. ರಂಗ, ಬರಹ, ಹೋರಾಟ, ಅಧ್ಯಾಪನ – ಇವೆಲ್ಲವನ್ನೂ ಗಂಭೀರವಾಗಿ ಲವಲವಿಕೆಯಿಂದ ಮಾಡುವ ಅವರು ೧೫ ಪುಸ್ತಕ ಪ್ರಕಟಿಸಿದ್ದಾರೆ. ೬೦೦೦ಕ್ಕೂ ಮಿಗಿಲು ಬೀದಿನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಾಳಸಂಗಾತಿ ನೀಲಿಮಾ ಶರ್ಮ ಎಲ್ಲದರಲ್ಲೂ ಸಂಗಾತಿಯಾಗಿದ್ದಾರೆ.

‘ದಯವಿಟ್ಟು ನನ್ನ ಸರ್ ಎನ್ನಬೇಡ, ಕಾಮ್ರೇಡ್ ಅಥವಾ ಶಂಸುಲ್ ಅಂತ ಕರೆದರೂ ಪರವಾಗಿಲ್ಲ’ ಎಂದ ಶಂಸುಲ್ ಅತಿ ಸರಳ ವ್ಯಕ್ತಿತ್ವದವರು. ಗಂಗಾವತಿಯ ಪುಟ್ಟ ಖಾನಾವಳಿಯೊಂದರೊಳಗೆ ನಮ್ಮ ಬೇಡಿಕೆ ಮನ್ನಿಸಿ ಬಿಳಿ ಜೋಳದ ಬಿಸಿಬಿಸಿ ತೆಳು ರೊಟ್ಟಿಯನ್ನು ಮಾಡಿಕೊಟ್ಟ ಅವ್ವೆಯನ್ನು ಬಾಯ್ತುಂಬ ವಂದಿಸಿ ಹೊಟ್ಟೆ ತುಂಬ ಊಟ ಮಾಡಿದರು. ಮೇಳದ ಹಿಂದಿನ ರಾತ್ರಿ ಸಿಂಧನೂರಿಗೆ ಬಂದಿಳಿದಾಗ ತಮ್ಮೆದುರು ಬಂದ ಮೊದಲ ಮಗುವಿಗೆ ಎದೆ ಮೇಲಿದ್ದ ಭಗತನನ್ನು ತೆಗೆದು ಕೊಟ್ಟು ಅವಳದನ್ನು ಅಲ್ಲೇ ಅಂಟಿಸಿಕೊಳ್ಳುವಷ್ಟು ವಿವರ ತಿಳಿಸಿದರು. ಮೇಳಕ್ಕೆ ಬಂದ ಸಾವಿರಾರು ಜನರಿಗೆ ಉಣಬಡಿಸಿ, ಸ್ವಯಂಸೇವಾ ಕಾರ್ಯಕರ್ತರಾಗಿ ಕೆಲಸ ಮಾಡಿದ ಸಿಂಧನೂರಿನ ಅನಿಕೇತನ ಪದವಿ ಮಹಾವಿದ್ಯಾಲಯದ ಎನ್ನೆಸ್ಸೆಸ್ ವಿದ್ಯಾರ್ಥಿಗಳಂತೂ ಅವರೊಡನೆ ಸೆಲ್ಫಿ ತೆಗೆದುಕೊಂಡಿದ್ದೇ ತೆಗೆದುಕೊಂಡದ್ದು. ದಿಕ್ಸೂಚಿ ಮಾತಾಡುವ ಮೊದಲೂ ಅಷ್ಟೇ, ಎರಡನೆಯ ದಿನದ ಸಮಾರೋಪ ಕಾರ್ಯಕ್ರಮದ ನಂತರವೂ ಅಷ್ಟೇ, ‘ನಾನು ಹಾಡು ಹೇಳಲಾ’ ಎಂದು ಕೇಳಿ ಕ್ರಾಂತಿಗೀತೆಗಳನ್ನು ಬಲು ಉತ್ಸಾಹದಿಂದ ಹಾಡಿ ಹಾಡಿಸಿದರು. ಭಗತನ ಉತ್ಸಾಹವನ್ನೂ, ಜನಸಾಮಾನ್ಯರೊಂದಿಗೆ ಮಿಳಿತವಾಗುವ ಸಂಗಾತಿ ಗುಣವನ್ನೂ ತೋರಿಸಿದ ಶಂಸುಲ್ ಇಸ್ಲಾಂ ನಿಜಕ್ಕೂ ‘ಜನಸಂಗಾತಿ’ಯೇ. ಲಾಲ್ ಸಲಾಂ ಕಾಮ್ರೇಡ್!


ಉಡುಪಿ ಚಿಕ್ಕಮಗಳೂರು ಜಿಲ್ಲೆಗಳನ್ನು ರಣರಂಗ ಮಾಡಿದ ಖ್ಯಾತಿಯ ಕನ್ನಡ ಕುವರಿ ಈಗ ಕೇಂದ್ರ ಸಚಿವೆ. ಅವರು ಹುಬ್ಬಳ್ಳಿ ಏರ್ಪೋರ್ಟಿನಲ್ಲಿ ಬಂದಿಳಿದರೆಂದು ಸಿದ್ಧತೆಯೋ ಸಿದ್ಧತೆ. ಅಂಕೆ ಅಂಕುಶವಿಲ್ಲದೆ ಮನ ಬಂದಂತೆ ಆಡುವ ಆಕೆಯ ಮಾತುಗಳ ಸವಿಯಲು ಒಂದೆಡೆ ಟಿವಿ ಚಾನೆಲ್ಲುಗಳು ತಮ್ಮ ಕ್ಯಾಮೆರಾ ಮೈಕುಗಳ ಪೇರಿಸಿಕೊಂಡು ನಿಂತಿದ್ದರೆ, ಮತ್ತೊಂದೆಡೆ ಅವರ ರಕ್ಷಣೆಗಾಗಿ ಶ್ವಾನಪಡೆಯೂ ಸೇರಿದಂತೆ ಬಹುದೊಡ್ಡ ಗಣ ಒಳಹೊರಗೆ ತಾರಾಡುತ್ತಿತ್ತು. ಅದರ ನಡುವೆ ದೆಹಲಿಯಿಂದ ಬರಲಿರುವ ರಾಮ್ ಪುನಿಯಾನಿಯವರಿಗೆ ನಾನು ಮತ್ತು ಕಾ. ಶಂಸುಲ್ ಕಾಯುತ್ತಿದ್ದೆವು. ಸಚಿವೆಯನ್ನು ಮೈಕಿನೆದುರು ನಿಲ್ಲಿಸಿದ ಮೇಲೆ ಮಿಕ್ಕವರನ್ನು ಹೊರಬಿಟ್ಟರು. ಪಾರದರ್ಶಕ ಬಾಗಿಲು ದಾಟಿ ಕೃಶಕಾಯದ ೮೦ರ ರಾಮ್ ಪುನಿಯಾನಿ ಹೊರಬಂದರು. ಅವರು ನನ್ನ ವೃತ್ತಿ ಬಾಂಧವರು. ಇಂದಿನ ಪಾಕಿಸ್ತಾನದ ಪಂಜಾಬಿನಲ್ಲಿ ಹುಟ್ಟಿ, ದೇಶ ವಿಭಜನೆಯ ಬಳಿಕ ಅವರ ಕುಟುಂಬ ಭಾರತದ ನಾಗಪುರದಲ್ಲಿ ನೆಲೆಯಾದರು. ತಮ್ಮ ಎಂಬಿಬಿಎಸ್, ಎಂಡಿ ಎರಡನ್ನೂ ನಾಗಪುರದಲ್ಲಿ ಮುಗಿಸಿ ಐಐಟಿಯಲ್ಲಿ ವೈದ್ಯಾಧಿಕಾರಿಯಾಗಿ ವೃತ್ತಿ ನಡೆಸಿದರು. ಒಂದು ಹಂತದಲ್ಲಿ ವೃತ್ತಿ ತೊರೆದು ಪೂರ್ಣಕಾಲಿಕ ಸಾಮಾಜಿಕ ಕಾರ್ಯಕರ್ತರಾಗಿ, ಬರಹಗಾರರಾಗಿ ಹೊಮ್ಮಿದ ಪುನಿಯಾನಿ ೩೮ ಪುಸ್ತಕ ಪ್ರಕಟಿಸಿದ್ದಾರೆ. ಬಲಪಂಥೀಯ ಕೋಮುವಾದವನ್ನು, ಚರಿತ್ರೆ ತಿರುಚುವಿಕೆಯನ್ನು ಖಂಡತುಂಡ ವಿರೋಧಿಸುವ ಅವರು ಸಾಮಾಜಿಕ ಜಾಲತಾಣದಲ್ಲಿ ಬಲು ಪ್ರಖ್ಯಾತರು.

ಅಂದು ಅವರೊಡನೆ ನಾವು ಹೊರ ಬರುತ್ತಿದ್ದ ಹಾಗೆ ಒಬ್ಬ ಕಟ್ಟುಮಸ್ತಾದ ನಡುವಯಸ್ಕ ವ್ಯಕ್ತಿ ಓಡೋಡಿ ಬಂದರು. ‘ಸರ್, ಆ..ಪ್, ಆಪ್ ರಾಮ್ ಪುನಿಯಾನಿಜಿ ಹೈನ?’ ಎಂದು ಕೇಳಿದರು. ತಾನವರನ್ನು ಜಾಲತಾಣದಲ್ಲಿ ಫಾಲೋ ಮಾಡುವುದಾಗಿ, ಅವರ ನೂರಾರು ವೀಡಿಯೋಗಳನ್ನು ನೋಡಿರುವುದಾಗಿ ಹೇಳಿದರು. ಅನುಮತಿ ಕೇಳಿ ಒಂದು ಸೆಲ್ಫಿ ತೆಗೆದುಕೊಂಡ ಆತ ಫೌಜಿ ಎಂದು ತಿಳಿದ ಮೇಲೆ ನಮ್ಮ ಫೌಜು ಆತನಂತಹ ವಿವೇಕಯುತ ಜನರನ್ನು ಹೊಂದಿದೆಯೆಂದು ಭಾರೀ ನೆಮ್ಮದಿಯಾಯಿತು.


ರಾತ್ರಿಯೂಟವನ್ನು ಗಂಗಾವತಿಯ ಖಾನಾವಳಿಯಲ್ಲಿ ಉಂಡು ಎದುರಿದ್ದ ಪಾನ್ ಬೀಡಾ ಶಾಪಿಗೆ ಹೋದೆವು. ಹತ್ತಾರು ಹುಡುಗರ ನಡುವೆ ನಾನೊಬ್ಬಳೇ ಸರತಿಯಲ್ಲಿ ನಿಂತಿದ್ದೆ. ಬೇರೆಯವರ ಬೀಡಾ ಕಟ್ಟುತ್ತಲೇ ನಮ್ಮಗಳ ಮಾತುಕತೆ ಕೇಳಿದ ಆತ ನೀವು ಮಾತನಾಡುತ್ತಿರುವುದು ಯಾವ ಸಾಹಿತ್ಯ ಸಮ್ಮೇಳನದ ಬಗೆಗೆ ಎಂದು ಕೇಳಿದ. ಅದು ಯಾವ ರೀತಿಯ ಸಮ್ಮೇಳನವೆಂದು ತಿಳಿಸಲು ‘ಅಸಮಾನ ಭಾರತ’ ಎಂಬ ಮುಖ್ಯ ವಿಷಯ ಹಾಗೂ ಅದರ ಬಗೆಗೆ ಮಾತನಾಡಲು ಬಂದವರ ಕುರಿತು ಹೇಳಿದೆ. ಸೆಕೆಂಡಿಗೆ ಲಕ್ಷಗಟ್ಟಲೆ ದುಡ್ಡು ಬಾಚುವವರ ದೇಶದಲ್ಲಿ ಪಾನ್ ಬೀಡಾ ಅಣ್ಣನಂತಹವರಿಗೆ ಅಸಮಾನತೆ ದಿನನಿತ್ಯದ ಅನುಭವವಾಗಿದೆ. ಎಂದೇ ಅಸಮಾನ ಭಾರತ, ಅವಮಾನಿತ ಭಾರತ, ಅಸುರಕ್ಷಿತ ಭಾರತ ಎಂಬಂತಹ ಪದಗಳೇ ಅವರನ್ನು ಆಕರ್ಷಿಸಿದವು. ಗೋಷ್ಠಿಗಳು, ಅದರಲ್ಲಿ ಚರ್ಚೆಯಾಗಲಿರುವ ವಿಚಾರಗಳ ಬಗೆಗೆ ಕೇಳಿದರು. ಅಷ್ಟಾಗುವಾಗ ಸುತ್ತ ನಿಂತ ಯುವಜನರು ಕುತೂಹಲದಿಂದ ಆಲಿಸುತ್ತಿದ್ದರು. ಕೊನೆಗೆ ಬೀಡಾ ಕೊಟ್ಟ ಅಣ್ಣನನ್ನು ಬೀಳ್ಕೊಂಡು ಬರುವಾಗ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ಮತ್ತೆ ಮತ್ತೆ ವಿನಂತಿಸಿದರೂ ನಿಮ್ಮಂತಹವರ ಹಾರೈಕೆ ನನಗಿರಲಿ ಸಾಕು ಎಂದು ಕೈಕುಲುಕಿ ಕೆಲಸದಲ್ಲಿ ಮಗ್ನರಾದರು.


ಇನ್ನು ಮೇ ಮೇಳ ಕವಿಗೋಷ್ಟಿಗೆ ಬರಬೇಕಿದ್ದ ಆ ಕವಿಯ ಬಗೆಗೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗಿನಿಂದ ಕಾಲಿಂಪಾಂಗಿಗೆ ಬಂದು, ಬಾಗಡೋಗ್ರಾಗೆ ತಲುಪಿ ಅಲ್ಲಿಂದ ಹೈದರಾಬಾದಿಗೆ ಹಾರಿ, ಬಳಿಕ ಬಸ್ಸಿನಲ್ಲಿ ಸಿಂಧನೂರಿಗೆ ಅವರು ಬರಬೇಕಿತ್ತು. ಆತ ಪಕ್ಕಾ ಕವಿ. ಯಾಕೆ ಗೊತ್ತಾ? ನಮ್ಮ ಪ್ಲಾನುಗಳನ್ನೆಲ್ಲ ಸುಮ್ಮನೆ ಕೇಳಿಸಿಕೊಂಡು ಕೊನೆಗೆ ತನಗೆ ಹೊಳೆದಂತೆ ಮಾಡಿಬಿಡುತ್ತಾರೆ. ಹೈದರಾಬಾದ್ ಏರ್ ಪೋರ್ಟಿನಲ್ಲಿಳಿದು ಸಿಂಧನೂರು ಬಸ್ ಹಿಡಿಯಲು ಐದು ತಾಸು ಸಮಯವಿತ್ತು. ಏರ್ ಪೋರ್ಟಿನಲ್ಲೇ ಸ್ವಲ್ಪ ಹೊತ್ತು ತಣ್ಣಗೆ ಕೂತು ಬಳಿಕ ಬಸ್ಟ್ಯಾಂಡಿಗೆ ಬಾ ಮಾರಾಯಾ ಅಂದರೆ ಆತ ವಿಮಾನ ಇಳಿದವನೇ ನಮ್ಮ ಸೂಚನೆಗಳನ್ನೆಲ್ಲ ಮರೆತು ಒಂದು ರಿಕ್ಷಾ ಹತ್ತಿದರು. ‘ಕರ್ನಾಟಕಕ್ಕೆ ಹೋಗಬೇಕು, ಬಸ್ಟ್ಯಾಂಡಿಗೆ ಕರೆದೊಯ್ಯಿ’ ಅಂದರು. ರಿಕ್ಷಾದಣ್ಣನು ಹತ್ತಿರದ ಒಂದು ಬಸ್ ನಿಲ್ದಾಣದಲ್ಲಿಳಿಸಿದ. ಅದು ನಮ್ಮ ಕವಿ ಹತ್ತುವ ಜಾಗವಾಗಿರಲಿಲ್ಲ. ಅದು ನೋಡಿದರೆ ೩೫ ಕಿಲೋಮೀಟರ್ ದೂರದಲ್ಲಿತ್ತು. ಕವಿಯು ಉರಿ ಬಿಸಿಲ ರಸ್ತೆ ಮೇಲೆ ನಿಂತು ‘ನಾನೀಗ ರಿಕ್ಷಾದಲ್ಲೇ ಹೋಗಲಾ?’ ಎಂದು ಕರೆ ಮಾಡಿ ತಬ್ಬಿಬ್ಬುಗೊಳಿಸಿದರು. ಅರೆ, ಅಷ್ಟು ದೂರ ರಿಕ್ಷಾ ಯಾಕೆ? ಬಸ್, ಟ್ಯಾಕ್ಸಿ ಇದಾವಲ್ಲ ಎಂದರೆ, ಅವರೇನೆನ್ನಬೇಕು? ‘ಆಮ್ ಆದ್ಮಿಯೋಂಕೆ ಸಾತ್ ಚಲನೇಕೋ ಮಜಾ ಆತಾ ಹೈ’!


ಮೈಕ್ ಸಿಸ್ಟಂ ಎದುರು ಕೂತು ಎರಡೂ ದಿನದ ಧ್ವನಿ ನಿರ್ವಹಣೆ ಮಾಡುತ್ತಿದ್ದ ತರುಣ ಭಾಷಣಗಳನ್ನು, ಕವಿತೆಗಳನ್ನು ಬಾಯಿ ಬಿಟ್ಟು ಸವಿಯುತ್ತಿದ್ದದ್ದನ್ನು ಗಮನಿಸಿದ್ದೆ. ಎಷ್ಟು ಸವಿಸವಿದು ಕೇಳುತ್ತಿದ್ದರೆಂದರೆ ನಡುನಡುವೆ ಭಾರೀ ಚಪ್ಪಾಳೆ ಅವರಿಂದಲೇ ಬರುತ್ತಿತ್ತು. ಮೇಳದ ಕೊನೆಗೆ ಬಿಡುಗಡೆಯಾದ ‘ಬುಕ್ಕಾ ನನಗೊಂದು ಕೊಡ್ರಿ’ ಎಂದು ಕೇಳಿ ಕವನ ಸಂಕಲನ ಪಡೆದರು. ಒಂದು ಗೋಷ್ಠಿ ಮುಗಿಯುವುದು ತಡವಾದಾಗ ತನ್ನ ಕಿಸೆಯಿಂದ ತೆಗೆದು ತಿನ್ನುತ್ತಿದ್ದ ಸೇಂಗಾ ನನಗೂ ತಂದುಕೊಟ್ಟರು. ಮೇಳ ಮುಗಿಸಿ ಹೊರಟಾಗ ಮೊಬೈಲ್ ತೆರೆಯ ಮೇಲೆ ತಾನು ಅಂದು ಟೈಪಿಸಿದ ಪದ್ಯ ತೋರಿಸಿದರು. ‘ನಾ ಹಿಂತಾ ಮೇಳ ನೋಡೇ ಇರಲಿಲ್ರಿ. ಮತ್ಯಾವಾಗ ಬರ್ತೀರೀ’ ಎಂದು ವಿದಾಯಗೊಳ್ಳುವಾಗ ದನಿ ಭಾರವಾದದ್ದು ಅವರದೋ ನನ್ನದೋ?


ಮೇಳ ನಡೆಯುವ ಊರು ಬದಲಾಗುತ್ತಿದೆ, ಆದರೆ ಮೇಳದ ಸದುದ್ದೇಶ ಅರಿತು ಕಡಿಮೆ ದರದಲ್ಲಿ ಅಡುಗೆ ಮಾಡಿ ಕೊಡುವ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಒಬ್ಬರೇ ಆಗಿದ್ದಾರೆ. ದಾವಣಗೆರೆಯಲ್ಲಿ ಒಟ್ಟುಗೂಡಿದ ಹಜರತ್ ಭಾಯಿ ತಮ್ಮ ತಂಡದೊಂದಿಗೆ ಇದುವರೆಗೆ ನಾಲ್ಕು ಸಮಾವೇಶಗಳಿಗೆ ಅಡುಗೆ ಮಾಡಿಕೊಟ್ಟಿದ್ದಾರೆ. ಈ ಸಲದ ಹುಗ್ಗಿ, ಖೀರು, ಹೋಳಿಗೆ, ಹೋಳಿಗೆ ಸಾರು, ಚುರಮುರಿ, ಸೂಸಲಾ, ಉಪ್ಪಿಟ್ಟು ಶಿರಾ, ಈರುಳ್ಳಿ ಬಜೆಯ ತನಕ ಪ್ರತಿಯೊಂದನ್ನೂ ತಮ್ಮ ತಂಡ ಕರೆತಂದು ಮಾಡಿಕೊಟ್ಟವರು ಹಜರತ್ ಭಾಯಿ ಬಳಗದವರು. ಮಾಡಿದ್ದನ್ನು ಉಣಬಡಿಸಿ, ಬಳಿಕ ಸ್ವಚ್ಛಗೊಳಿಸುವ ಕೆಲಸವನ್ನು ಅನಿಕೇತನ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸಮೂಹ ಶ್ರದ್ಧೆಯಿಂದ ಮಾಡಿ ನೆರೆದವರ ಆದರಕ್ಕೆ ಪಾತ್ರರಾದರು.


ಮೇಳ ಎಂದರೆ ಹೀಗೆ. ಅದಕ್ಕೆ ಬರುವವರ, ಕೈಜೋಡಿಸುವವರ ಮನಸ್ಸು ಶುದ್ಧ ತಿಳಿ ಜಲ. ಚಹರೆಗಳು ಬಲು ಭಿನ್ನ.

ಮೇ ಮೇಳಕ್ಕೆ ದೇಣಿಗೆ ಕೊಡುವವರಲ್ಲಿ ರೊಟ್ಟಿ-ಗೋಧಿ-ಶೇಂಗಾ ಹಿಂಡಿ-ಅಕ್ಕಿ-ಎಣ್ಣೆ-ಬೆಲ್ಲ-ಚುರಮುರಿ-ಬೇಳೆ-ತುಪ್ಪಗಳನ್ನು ಕೊಡುವವರಿಂದ ಹಿಡಿದು ತಮ್ಮ ಸಮಯ, ಹಣ, ಸೇವೆ, ಮನೆ, ವಾಹನಗಳನ್ನು ತೆರೆದ ಮನಸ್ಸಿನಿಂದ ಕೊಡುವ, ಪ್ರಶಸ್ತಿ ಬಂದ ಹತ್ತು ಸಾವಿರ ಮೊತ್ತ ಮೇಳಕ್ಕೇ ಇರಲಿ ಎನುವ, ಮೇಳದ ದಿನಾಂಕ ಪ್ರಕಟವಾದ ಕೂಡಲೆ ಟಿಕೆಟ್ ಕಾಯ್ದಿರಿಸಿಕೊಳ್ಳುವ, ಬರುವವರಿಗೆ ಮಫ್ಲರ್ ಹೆಣೆದುಕೊಡುವ ನೂರಾರು ಸಹಭಾಗಿಗಳಿದ್ದಾರೆ. ಮೇಳ ಯಶಸ್ವಿಯಾಗಲು ಶ್ರಮದ ಬೆವರು ಹರಿಸಿದವರಲ್ಲಿ ಅನುಭವಿ ಹೋರಾಟಗಾರರು, ಸಂಗಾತಿಗಳಿಂದ ಹಿಡಿದು ಬಿಸಿರಕ್ತದ ತರುಣ ಪಡೆ, ವಿದ್ಯಾರ್ಥಿ-ವಿದ್ಯಾರ್ಥಿನಿ ಬಳಗದವರ ತನಕ ಹಲವರಿದ್ದಾರೆ.

ಸಮಯಾಭಾವ, ಅಲ್ಲಿಲ್ಲಿ ಅಶಿಸ್ತು, ಗೋಷ್ಠಿಗಳ ಬಾಹುಳ್ಯದಿಂದ ಸಂವಾದ ಅಸಾಧ್ಯವಾದುದು, ಬರಬೇಕಾದವರು ಕಡೆಯ ಗಳಿಗೆಯಲ್ಲಿ ಬರದಿರುವುದೇ ಮೊದಲಾದ ಚಿಕ್ಕಪುಟ್ಟ ನಸನಸೆಗಳನ್ನು ಬಿಟ್ಟರೆ ಸಿಂಧನೂರಿನ ಮೇ ಮೇಳಕ್ಕೆ ತಮ್ಮ ಸ್ಥಾನ, ವರ್ಗ, ಪ್ರಭಾವಳಿಗಳನ್ನು ಮರೆತು ಹಲವರು ತನು, ಮನ, ಧನಗಳನ್ನು ಧಾರೆಯೆರೆದು ಕಾರ್ಯಕರ್ತರಂತೆ ದುಡಿದಿದ್ದಾರೆ. ಎಂದೇ ಅದು ಯಶಸ್ವಿಯಾಗಿ ಭಾಗಿಯಾದವರಲ್ಲಿ ಹೊಸ ಕನಸುಗಳ ಬಿತ್ತಿದೆ. ಯುವಜೀವರಲ್ಲಿ ಸಂಚಲನ ಮೂಡಿಸಿದೆ. ತಮ್ಮ ಬಲ ಕ್ಷೀಣಗೊಳ್ಳುತ್ತಿದೆಯೇ ಎಂಬ ಆತಂಕ ಇರುವವರಲ್ಲಿ ಭರವಸೆ ಮೂಡಿಸಿದೆ.

ಭಿನ್ನತೆಯನ್ನು ಬಹುತ್ವವಾಗಿ ಪರಿವರ್ತಿಸಲು ಮೈತ್ರಿ ಭಾವವೊಂದಿದ್ದರೆ ಸಾಕಲ್ಲವೇ? ಸೇರುತ್ತ ಇರೋಣ ಹೀಗೆ, ಮತ್ತೆ

ಡಾ. ಎಚ್. ಎಸ್. ಅನುಪಮಾ

Don`t copy text!