ಕೋವಿ ಕೊಳಲಾಗಲಿ….

 

ಕೋವಿ ಕೊಳಲಾಗಲಿ….

 

 

 

 

 

 

 

 

 

 

 

(ಎ ಐ ಆಧಾರಿತ ಚಿತ್ರ)

 

ರಕ್ತದಿಂದ ತೊಯ್ದ ನೆಲದಲ್ಲಿ ಹೂಗಳು ಅರಳುವುದಿಲ್ಲ
ಹೂಗಳು ಅರಳದ ಊರಿಗೆ ಚಿಟ್ಟೆಗಳು ಹಕ್ಕಿಗಳು ದುಂಬಿಗಳು ಬರುವುದಿಲ್ಲ

ಅಂಗಳದ ಮಣ್ಣಿನಲ್ಲಿ ಮದ್ದು ಗುಂಡು ಬಾಂಬ್ ಗಳ‌ ರಕ್ತ ಸಿಕ್ತ ರಂಗೋಲಿ
ಆಡುವ ಕಂದನ ಅಂಗಾಲಿಗೆ ಮಣ್ಣು ಅಂಟುವುದಿಲ್ಲ

ಈಗೀಗ ಆಗಸದಲ್ಲಿ ಹಕ್ಕಿಗಳಿಗಿಂತ ಬಾಂಬ್ ಮಿಸೈಲ್ ಗಳು ಹಾರಾಡುತ್ತಿವೆ
ಹಕ್ಕಿಗಳು ಹಾರಾಡುವುದನ್ನು ಇನ್ನು ಮುಂದೆ ನೋಡಲಾಗುವುದಿಲ್ಲ

ದೊರೆಯ ಕೋಟೆ ಕೊತ್ತಲುಗಳನ್ನು ಸಾಮಾನ್ಯರ ಗೋರಿ ಮೇಲೆ ಕಟ್ಟಲಾಗಿದೆ
ರಕ್ತ ಹರಿಯುವ ನೆಲದಲ್ಲಿ ಬುದ್ಧ ಎಂದು ಹುಟ್ಟುವುದಿಲ್ಲ

ಮಗು ಹೂವ ಬಯಸಿತು, ಧರ್ಮ ಬಂದೂಕು ನೀಡಿತು
ಸುಡುವುದರ ಮುಂದೆ ಹಂಚುವುದು ಸುದ್ದಿಯಾಗುವುದಿಲ್ಲ

ಸಾವೇ ಯುದ್ಧವನ್ನು ಗೆದ್ದ ಮೇಲೆ ನಿಜವಾಗಿಯೂ ಯುದ್ಧವನ್ನು ಗೆದ್ದವರಾರು
ತಾಯಿಯ ಕಣ್ಣೀರು ತಂದೆಯ ಕನಸುಗಳು ಮಗುವಿನ ನಗುವನ್ನ ಯಾವ ಯುದ್ಧವು ಹಿಂತಿರುಗಿಸುವುದಿಲ್ಲ

ಉಸಿರಾಡುವ ಗಾಳಿಯಲ್ಲಿ
ಬರೀ
ಬಂದೂಕುಗಳ ಸದ್ದು
ಬೆಂಕಿ ಕಾರುವ ಗುಂಡು
ನೆಲದಿಂದ ನಭಕ್ಕೆ ಚಿಮ್ಮುವ ನೆತ್ತರು
ಮುರಿದು ಬಿದ್ದ ಮನೆ ಮನಸು ಕನಸುಗಳು
ಹೆಣಗಳ ರಾಶಿ
ಕುಕ್ಕಿ ತಿನ್ನುವ ರಣ ಹದ್ದುಗಳು
ಹಕ್ಕಿಗಳ ಹಾಡಿಲ್ಲ
ನದಿಯ ನೀರು
ಹುಟ್ಟುವ ಸೂರ್ಯ
ಮುಳುಗುವ ಚಂದ್ರ
ಎಲ್ಲವೂ ಕೆಂಪು ಬಣ್ಣವಲ್ಲ
ರಕ್ತ
ಧರ್ಮದ ಅಫೀಮು ನೆತ್ತಿಗೇರಿದವರ ಎದೆಯಲಿ ಬುದ್ಧ ಉಸಿರಾಡುವುದಿಲ್ಲ

ಧರ್ಮ ಮಧುಶಾಲೆಯ ದಾರಿ ಹಿಡಿದು
ಗಾಲಿಬನ ಮತ್ಲಾಗಳಿಗೆ ಕಿವಿಯಾಗಲಿ
ಧರ್ಮ ಜೋಲಿ ಹೊಡೆಯುತ್ತ
ಬುದ್ಧನ ಬೋಧಿವೃಕ್ಷ ಹುಡುಕಲಿ
ದಯವೇ ಧರ್ಮದ ಮೂಲವೆಂದ ಅಣ್ಣನ ಕಲ್ಯಾಣದ ದಾರಿ ಹಿಡಿಯಲಿ
ಭೀಮ ಸಮತೆಯ ಹಣತೆ ಹಚ್ಚಲಿ

ಕೋವಿ ಕೊಳಲಾಗಲಿ

ಅಭಿಷೇಕ ಬಳೆ ಮಸರಕಲ್

One thought on “ಕೋವಿ ಕೊಳಲಾಗಲಿ….

  1. ತುಂಬಾ ಒಳ್ಳೆಯ ಬರಹ , ಈ ಬರಹ ಬಂದೂಕು ಹಿಡಿಯುವ ಆ ಕೈಗಳಿಗೆ ಸೇರಬೇಕು.

Comments are closed.

Don`t copy text!