ಗಣಿತದ ರಾಣಿ…. ಮರಿಯo ಮಿರ್ಜಾಖಾನಿ

ಗಣಿತದ ರಾಣಿ…. ಮರಿಯo ಮಿರ್ಜಾಖಾನಿ

 

ಇರಾನ್ ನಂತಹ ದೇಶದಲ್ಲಿ ಹುಟ್ಟಿ ತನ್ನ ಪ್ರತಿಭೆಯಿಂದ ಜಾಗತಿಕವಾಗಿ ಗುರುತಿಸಿಕೊಂಡ ವ್ಯಕ್ತಿ ಮರಿಯಎಂ ಮಿರ್ಜಾಖಾನಿ.

1977ರಲ್ಲಿ ಇರಾನ್ ದೇಶದ ಟೆಹರಾನ್ ನಲ್ಲಿ ಜನಿಸಿದ
ಮರಿಯಂಗೆ ತನ್ನಲ್ಲಿನ ಮೇಧಾಶಕ್ತಿಯ ಅರಿವೇ ಇರಲಿಲ್ಲ. ಪೂರ್ವ ಸಾಮಾನ್ಯ ಬಾಲಕಿಯಾಗಿ ಆಕೆ ಉಳಿದೆಲ್ಲ ಮಕ್ಕಳಂತೆ ತನ್ನ ಶಾಲೆಯ ಆಟ ಪಾಠಗಳಲ್ಲಿ ನಿರತಳಾಗಿರುತ್ತಿದ್ದಳು.

ಆದರೆ ಕಾದಂಬರಿಗಳನ್ನು ಓದುವುದರಲ್ಲಿ ಕಥೆಗಳನ್ನು ಬರೆಯುವುದರಲ್ಲಿ ಆಕೆಯ ಆಸಕ್ತಿ ತುಸು ಹೆಜ್ಜೆ ಇತ್ತು. ಚಿಕ್ಕ ವಯಸ್ಸಿನಲ್ಲಿ ಆಕೆ ಪಠ್ಯಪುಸ್ತಕದ ಓದಿಗಿಂತ ಕಾದಂಬರಿಗಳನ್ನು ಓದಿದ್ದೆ ಹೆಚ್ಚು
ಇರಾನ್ ಇರಾನ್ ಯುದ್ಧದ ಭೀಕರತೆಯ ಸಮಯದಲ್ಲಿ ಬಾಲ್ಯವನ್ನು ಕಳೆದ ಆಕೆಗೆ ಗಣಿತದ ಕುರಿತು ಕೂಡ ಆಕೆಯ ಆಸಕ್ತಿ ಅಷ್ಟಾಗಿ ಇರಲಿಲ್ಲ.

ಮೊದಮೊದಲು ಗಣಿತದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ  ಮರಿಯಂ ಒಂದು ದಿನ ತಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವಾಗ ತನ್ನ ಅಣ್ಣ ಮನೆಗೆ ತಂದ ಒಂದು ಗಣಿತದ ಪುಸ್ತಕವನ್ನು ನೋಡಿದಳು.. ಅದು ಗಣಿತದ ಒಗಟಿನ ಪುಸ್ತಕವಾಗಿತ್ತು. ಅದರಲ್ಲಿನ ಲೆಕ್ಕಗಳನ್ನು ಹೇಗೆ ಬಿಡಿಸಬೇಕೆಂದು ಆಕೆಯ ಅಣ್ಣ ಆಕೆಗೆ ತೋರಿಸಿಕೊಟ್ಟನು. ಒಂದಷ್ಟು ಲೆಕ್ಕಗಳನ್ನು ಬಿಡಿಸಿದ ಆಕೆಯ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು… ಅದುವೇ ಮುಂದೆ ಆಕೆ ಗಣಿತದಲ್ಲಿ ಅತಿ ಹೆಚ್ಚಿನ ಆಸಕ್ತಿ ವಹಿಸಲು ಕಾರಣವಾಯಿತು ಎಂದರೆ ಅತಿಶಯೋಕ್ತಿಯೇನಲ್ಲ.

ಹೆಣ್ಣುಮಕ್ಕಳಿಗಾಗಿಯೇ ತೆರೆದ ವಿಶೇಷ ಶಾಲೆಯಲ್ಲಿ ಮರಿಯಮ್ ವಿದ್ಯಾಭ್ಯಾಸ ಮಾಡಿದಳು. ನಿಧಾನವಾಗಿ ಆಕೆಯ ಪ್ರತಿಭೆಯ ಅರಳತೊಡಗಿತು. ಅಲ್ಲಲ್ಲಿ ನಡೆಯುತ್ತಿದ್ದ ಗಣಿತದ ಸ್ಪರ್ಧೆಗಳಲ್ಲಿ ಆಕೆ ಭಾಗವಹಿಸಲಾರಂಬಿಸಿದಳು…. ಸಣ್ಣಪುಟ್ಟ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳು ಆಕೆಯನ್ನು ಅಂತಿಮವಾಗಿ ಅಂತರಾಷ್ಟ್ರೀಯ ಮಟ್ಟದ ಗಣಿತದ ಒಲಂಪಿಯಾಡ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಮೊಟ್ಟಮೊದಲ ಇರಾನಿ ವಿದ್ಯಾರ್ಥಿನಿಯಾಗಿ ಆಕೆ ಹೊರಹೊಮ್ಮಿದಳು.

ಸ್ಪರ್ಧೆಯಲ್ಲಿ ಆಕೆ 42ಕ್ಕೆ 42 ಅಂಕಗಳನ್ನು ಪಡೆದು ಅದ್ಭುತ ಪ್ರತಿಭೆಯನ್ನು ಮೆರೆದು ಚಾಂಪಿಯನ್ನಾಗಿ ಹೊರಹೊಮ್ಮಿದಳು.. ಈ ಮೂಲಕ ಆಕೆ ಹೆಣ್ಣು ಮಕ್ಕಳು ಗಣಿತದಲ್ಲಿ ಅಷ್ಟೇನೂ ಜಾಣರಲ್ಲ ಎಂಬ ಸಾರ್ವಕಾಲಿಕ ನಂಬಿಕೆಯನ್ನು ಛಿದ್ರಗೊಳಿಸಿದಳು.

ಇರಾನ್ ನಂತಹ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರ ಬೆಳವಣಿಗೆಗೆ ಅಡ್ಡಗಾಲಾಗಿದ್ದ ನಿರ್ಬಂಧಗಳನ್ನು ಮುರಿದು ಹಾಕಿ ಹೆಣ್ಣು ಮಕ್ಕಳ ಅಸ್ಮಿತೆಗೆ ಮರಿಯಂ ಹೊಸದೊಂದು ಆಯಾಮವನ್ನು ಕಲ್ಪಿಸಿದಳು. ಹಾಗೆಂದು ಆಕೆ ಜೋರಾಗಿ ಭಾಷಣ ಬಿಗಿಯಲಿಲ್ಲ, ವ್ಯವಸ್ಥೆಯ ವಿರುದ್ಧ ಧ್ವನಿ ಏರಿಸಿ ಹೋರಾಡಲಿಲ್ಲ… ಬದಲಾಗಿ ತನ್ನ ಅಪ್ರತಿಮ ಜಾಣ್ಮೆ ಮತ್ತು ಅಸದಳ ಆತ್ಮ ವಿಶ್ವಾಸದಿಂದ ಆಕೆ ಸಾಮಾಜಿಕವಾಗಿ ಬೇರೂರಿದ ಹೆಣ್ಣು ಮಕ್ಕಳ ಕುರಿತಾದ ಮೌಡ್ಯವನ್ನು ತೆಗೆದುಹಾಕಿದಳು.

ಕೆಲ ಯುದ್ಧಗಳನ್ನು ಗೆಲ್ಲಲು ಹರಿತವಾದ ಖಡ್ಗದಂತಹ ಆಯುಧಗಳು ಬೇಕಾಗಿಲ್ಲ, ಹೋರಾಟಗಳು ಕೂಡ ಜನರ ಮನಸ್ಸನ್ನು ಕರಗಿಸಲು ಸಾಧ್ಯವಿಲ್ಲ. ಮಾತುಗಳ ಪ್ರಹಾರ ಕೂಡ ಬೇಕಿಲ್ಲ…. ಕೆಲವು ಯುದ್ಧಗಳನ್ನು ನಮ್ಮ ಕೃತಿಯಿಂದ ಜಾಣ್ಮೆಯಿಂದ ಗೆಲ್ಲಬಹುದು ಎಂಬುದನ್ನು ಮರಿಯಮ್ ತೋರಿಸಿಕೊಟ್ಟಳು.
ತನ್ನ ಹೈಸ್ಕೂಲ್ ವಿದ್ಯಾಭ್ಯಾಸದ ನಂತರ ಆಕೆ ಇರಾನಿನ ಶರೀಫ್ ವಿಶ್ವವಿದ್ಯಾಲಯದಲ್ಲಿ ಗಣಿತದ ಅಧ್ಯಯನ ಮಾಡಿದಳು. ಗಣಿತವನ್ನು ಐಚ್ಚಿಕ ವಿಷಯವಾಗಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪೂರೈಸಿದ ಆಕೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಹೆಚ್ಚಿನ ಅಧ್ಯಯನಗೈಯಲು ಸ್ಕಾಲರ್ಶಿಪ್ ಪಡೆದಳು. ಅಲ್ಲಿ ಆಕೆಯ ಅಧ್ಯಯನಕ್ಕೆ ಮರಿಯಂಗೆ ಮಾರ್ಗದರ್ಶಕರಾಗಿ ಗಣಿತಕ್ಕಾಗಿ ಫೀಲ್ಡ್ ನ ಮೆಡಲನ್ನು ಪಡೆದುಕೊಂಡ ಕರ್ಟಿಸ್ ಮ್ಯಾಕ್ ಮುಲನ್ ಅವರು ಕಾರ್ಯನಿರ್ವಹಿಸುತ್ತಿದ್ದು ಆಕೆಯ ಸೃಜನಶೀಲತೆ ಕಂಡು ಅವರು ಬೆರಗಾದರು. ರೇಖಾಗಣಿತದಲ್ಲಿ ಆಕೆ ಬೇರೆಯವರು ಊಹಿಸಲಾಗದಷ್ಟು ವೈವಿಧ್ಯಮಯ ಉತ್ತರಗಳನ್ನು ಕಂಡುಕೊಳ್ಳುತ್ತಿದ್ದಳು. ಆಕೆಯಲ್ಲಿ ತರ್ಕ ಊಹೆ ಮತ್ತು ದೃಶ್ಯ ಚಿಂತನೆ ಇತ್ತು.

ಮುಖ್ಯವಾಗಿ ಆಕೆ ಹೈಪರ್ಬೋಲಿಕ್ ರೇಖಾ ಗಣಿತದಲ್ಲಿ ಆಸಕ್ತಿಯನ್ನು ವಹಿಸಿ ರೇಮನ್ ನ ಆಕೃತಿಗಳು ಸಂಕೀರ್ಣವಾದ ವಿಷಯಗಳನ್ನು ಆರಿಸಿಕೊಂಡು ಆಕೆ ಅಧ್ಯಯನ ಮಾಡುತ್ತಿದ್ದಳು. ಬಹುತೇಕ ಗಣಿತಜ್ಞರು ಮಾಡಲು ಒದ್ದಾಡುತ್ತಿದ್ದ ವಿಷಯಗಳನ್ನು ಆಕೆ ಲೀಲಾ ಜಾಲವಾಗಿ ಬಿಡಿಸುತ್ತಿದ್ದಳು.

ಗಣಿತದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ ಫೀಲ್ಡ್ಡ್ ಮೆಡಲನ್ನು 2014ರಲ್ಲಿ ಮೊತ್ತ ಮೊದಲಬಾರಿ ಮರಿಯಂ ಮಿರ್ಜಾಖಾನಿ ಪಡೆದಳು. ಹೀಗೆ ಮೆಡಲನ್ನು ಪಡೆದ ಮೊಟ್ಟಮೊದಲ ಇರಾನಿ ಮಹಿಳೆ ಮತ್ತು ಜಗತ್ತಿನ ಮೊದಲ ಮಹಿಳೆಯಾಗಿ ಆಕೆ ಗುರುತಿಸಿಕೊಂಡರು. ಮಹಿಳೆಯರ ಗಣಿತ ಲೋಕದ ಸಾಧಕರಲ್ಲಿ ಆಕೆ ಐತಿಹಾಸಿಕವಾಗಿ ಗುರುತಿಸಿಕೊಂಡಳು.
ಗಣಿತದ ಪರಮ ಮೇಧಾವಿ ಎಂದು ಗುರುತಿಸಿಕೊಂಡ ಮರಿಯಂ ಅತ್ಯಂತ ಶಾಂತ, ಮಾನವೀಯತೆಯುಳ್ಳ, ಮೃದು ಸ್ವಭಾವದ ಹೆಣ್ಣು ಮಗಳಾಗಿದ್ದಳು. ಗಣಿತದ ನಿಜವಾದ ಸೌಂದರ್ಯವನ್ನು ಅರಿಯಲು ನೀವು ನಿಮ್ಮ ಕೊಂಚಮಟ್ಟಿನ ಪ್ರಯತ್ನ ಮತ್ತು ಶಕ್ತಿಯನ್ನು ಹಾಕಲೇಬೇಕು ಎಂದು ಆಕೆ ಪ್ರತಿಪಾದಿಸುತ್ತಾಳೆ.

ನೆಲದ ಮೇಲೆ ದೊಡ್ಡ ದೊಡ್ಡ ಕಾಗದದ ಹಾಳೆಗಳನ್ನು ಹಾಕಿಕೊಂಡು ಆಕೆ ತನ್ನ ಲೆಕ್ಕದ ಕುರಿತಾದ ರೇಖಾ ಚಿತ್ರಗಳನ್ನು ಬಿಡಿಸುತ್ತಿದ್ದಳು. ಬಣ್ಣ ಬಣ್ಣದ ಮಾರ್ಕರ್ ಪೆನ್ನುಗಳನ್ನು ಆಕೆ ಬಳಸಿ ಲೆಕ್ಕಗಳನ್ನು ಮಾಡುತ್ತಿರುವುದನ್ನು ನೋಡಿದ ಆಕೆಯ ಮಗಳು ತನ್ನ ತಾಯಿ ಓರ್ವ ಚಿತ್ರಕಾರರು ಎಂದೇ ತಿಳಿದುಕೊಂಡಿದ್ದಳು ಎಂಬುದನ್ನು ಆಕೆ ನಗುತ್ತಾ ಹೇಳುತ್ತಿದ್ದರು.

ಗಣಿತದಲ್ಲಿ ಸಂಶೋಧನೆ ಮಾಡುವ ಎಲ್ಲಾ ಹೊಸ ಗಣಿತಜ್ಞರಿಗೆ ಆಕೆ ಸ್ಪೂರ್ತಿ ದೇವತೆಯಾಗಿದ್ದಳು ಎಂದರೆ ತಪ್ಪಿಲ್ಲ, ಆದರೆ 2017ರಲ್ಲಿ ಸ್ಥನದ ಕ್ಯಾನ್ಸರ್ ನಿಂದ ಆಕೆ ಮೃತಳಾದಳು.ಆದರೆ ಆಕೆ ಗಣಿತದ ಸಂಶೋಧನೆಯಲ್ಲಿ ಹಾಕಿಕೊಟ್ಟ ಭವ್ಯ ಪರಂಪರೆ ಆಕೆಯನ್ನು ದಂತ ಕಥೆಯನ್ನಾಗಿಸಿದೆ.

ಹೆಣ್ಣು ಮಕ್ಕಳಿಗಾಗಿ ಆಕೆ ಗಣಿತದ ಹೆಬ್ಬಾಗಿಲನ್ನು ಮುಕ್ತವಾಗಿಸಿದಳು. ಕ್ರಿಯಾಶೀಲತೆ ಮತ್ತು ಬದ್ಧತೆ ಇದ್ದರೆ ಯಶಸ್ವಿಗೆ ಅದು ರಹದಾರಿ ಎಂದು ಆಕೆ ತೋರಿಸಿಕೊಟ್ಟಳು. ಗಣಿತವು ಸೂತ್ರಗಳು ಮತ್ತು ಪ್ರಮೇಯಗಳ ಮೇಲೆ ಆಧರಿತವಾಗಿರುವುದಿಲ್ಲ. ಅದೊಂದು ಅದ್ಭುತ ಲೆಕ್ಕಾಚಾರ. ಊಹೆ ಮತ್ತು ಸಂಶೋಧನಾತ್ಮಕವಾದದ್ದು.

ಮರಿಯಮ್ ಳ ಕಥೆ ಬಹಳಷ್ಟು ಸ್ಪೂರ್ತಿದಾಯಕವಾಗಿದ್ದು ಇರಾನ್ ನಂತಹ ರಾಜಕೀಯ ತಲ್ಲಣಗಳು, ಯುದ್ಧ, ಲಿಂಗ ಅಸಮಾನತೆ ಮತ್ತು ಆರೋಗ್ಯದ ತೊಂದರೆಗಳ ನಡುವೆಯೂ ಕೂಡ ಆಕೆ ಯಶಸ್ಸನ್ನು ಗಳಿಸಿದಳು.
ಆಕೆ ಹುಟ್ಟು ಪ್ರತಿಭೆಯೇನಲ್ಲ… ಗಣಿತದ ಮೇಲಿನ ಆಕೆಯ ಪ್ರೀತಿ ಮತ್ತು ಆಸಕ್ತಿಯನ್ನು ಆಕೆ ಅರಿತದ್ದೇ ಮಾಧ್ಯಮಿಕ ಶಾಲೆಯಲ್ಲಿದ್ದಾಗ ಎಂಬುದು ಕೂಡ ಗಮನಾರ್ಹ. ವಿಜ್ಞಾನ ತಂತ್ರಜ್ಞಾನ ಇಂಜಿನಿಯರಿಂಗ್ ಕೌಶಲ್ಯ ಮತ್ತು ಗಣಿತದಲ್ಲಿ ಹೆಣ್ಣು ಮಕ್ಕಳು ಕೂಡ ಏನನ್ನಾದರೂ ಸಾಧಿಸಬಲ್ಲರು ಎಂಬ ಭರವಸೆ ಮತ್ತು ಸಾಧ್ಯತೆಗಳನ್ನು ಮರಿಯಮ್ ಕಟ್ಟಿಕೊಟ್ಟಳು.

ಗಣಿತದ ಮೇಲಿನ ಆಕೆಯ ಆಸಕ್ತಿ ಪ್ರೀತಿಯಾಗಿ ಬದಲಾಗಲು ಕಾರಣ ಆಕೆ ಗಣಿತವನ್ನು ಕೇವಲ ಲೆಕ್ಕಗಳನ್ನು ಸುಲಭವಾಗಿ ಬಿಡಿಸುವ ಒಂದು ವಿದ್ಯೆಯಾಗಿ ಕಾಣದೆ ವೈವಿಧ್ಯಮಯ ರೇಖೆಗಳ ಮತ್ತು ಚಿತ್ರಗಳ ಕರೆಯ ಮಾಧ್ಯಮದಂತೆ ಭಾವಿಸಿ ಕಲಿತಳು.

ಮರಿಯಮ್ ಳ ಜೀವನ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ತಜ್ಞರಿಗೆ ಒಂದು ಪಾಠವಾಗಿದೆ. ಆರಂಭದಲ್ಲಿ ಎಲ್ಲರೂ ಲೆಕ್ಕದ ವಿಷಯದಲ್ಲಿ ಸಂಘರ್ಷವನ್ನು ಅನುಭವಿಸಬಹುದು, ಆದರೆ ಹತ್ತಿಕ್ಕದ ಕುತೂಹಲ ಮತ್ತು ನಿರಂತರ ಪರಿಶ್ರಮ ವ್ಯಕ್ತಿಯನ್ನು ಮುಂದೆ ನಡೆಸುತ್ತದೆ.

ಸರಿಯಾದ ರೀತಿಯ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಒದಗಿಸಿದರೆ ಗಂಡು-ಹೆಣ್ಣು ಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಲೆಕ್ಕಗಳನ್ನು ಮಾಡಬಹುದು. ಗಣಿತಕ್ಕೆ ಯಾವುದೇ ಲಿಂಗಭೇದವಿಲ್ಲ.

ಗಣಿತ ಕೇವಲ ಕೂಡಿಸುವ, ಕಳೆಯುವ, ಗುಣಾಕಾರ ಮತ್ತು ಭಾಗಾಕಾರದ ಲೆಕ್ಕ ಮಾಡುವ ಪ್ರಕ್ರಿಯೆಯಲ್ಲ. ಅದೊಂದು ಯೋಚನಾ ವಿಧಾನ, ಹೊಸತನ್ನು ಅರಿಯುವ ಮತ್ತು ಸೃಜಿಸುವ ಗಣಿತವು ಲೆಕ್ಕಾಚಾರವನ್ನು ಮೀರಿ ನಮಗೆ ಸೃಜನಶೀಲತೆಯನ್ನು ಕಲಿಸಿಕೊಡುತ್ತದೆ.

ಹೆಣ್ಣು ಮಕ್ಕಳಿಗೆ ಲೆಕ್ಕಗಳನ್ನು ಬಿಡಿಸುವ ಕೂಡಿಸುವ ಕಳೆಯುವ ಮತ್ತು ಗುಣಾಕಾರ ಮಾಡುವ ಭಾಗಿಸುವ ಲೆಕ್ಕಗಳು ನೀರು ಕುಡಿದಂತೆ…. ಆದರೂ ಕೂಡ ಇಂದಿಗೂ ಸಮಾಜದ ಬಹುತೇಕ ಜನರು ಹೆಣ್ಣು ಮಕ್ಕಳನ್ನು ಲೆಕ್ಕ ಬಾರದ ಹೆಡ್ಡರು ಎಂಬಂತೆ ಭಾವಿಸುತ್ತಾರೆ. ಮರಿಯಂ ರಂತ ಹೆಣ್ಣು ಮಕ್ಕಳು ಪ್ರತಿ ಮನೆಯಲ್ಲಿ ಇದ್ದಾರೆ.

ಪ್ರೀತಿಯಿಂದ ಎಲ್ಲರನ್ನು ಒಳಗೊಳ್ಳುವ ಸಿಟ್ಟು ಸೆಡವುಗಳನ್ನು ಕಳೆದುಕೊಳ್ಳುವ ನಲಿವನ್ನು ಗುಣಿಸುವ ನೋವನ್ನು ಕಳೆಯುವ ಕೆಲಸವನ್ನು ಭಾಗಿಸಿ ಹಂಚಿಕೊಳ್ಳುವ ಹೆಣ್ಣು ಮಕ್ಕಳು ಕುಟುಂಬದ ಸಂತೋಷವನ್ನು ದ್ವಿಗುಣಗೊಳಿಸುತ್ತಾರೆ. ಕುಟುಂಬದಲ್ಲಿ ಪುರುಷರ ಕೆಲಸಕ್ಕಿಂತ ಹೆಚ್ಚಿನ ಪಾಲು ಕೆಲಸವನ್ನು ತಾವೇ ಮಾಡಿ ಮುಗಿಸುವ ಹೆಣ್ಣು ಮಕ್ಕಳ ವಿಷಯದಲ್ಲಿ ಈ ಸಮಾಜ ನೀಡುವ ಅಂಕಗಳು ಶೂನ್ಯವಾದಾಗ ಆಕೆ ಬೇಸರದಿಂದ ನಲುಗುತ್ತಾಳೆ. ಅಂತಹ ಹೆಣ್ಣು ಮಕ್ಕಳಿಗೆ ನಾವೆಲ್ಲರೂ ಪ್ರೀತಿಯ ಸಾಂತ್ವನವನ್ನು ನೀಡಿದಾಗ ಆಕೆ ಅರಳಿದ ಪ್ರಫುಲ್ಲ ಮಲ್ಲಿಗೆಯಂತೆ ತನ್ನ ಚಾತುರ್ಯದಿಂದ ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸುತ್ತಾಳೆ.
ಅಂತಹ ಎಲ್ಲ ಹೆಣ್ಣು ಮಕ್ಕಳಿಗೆ ನಮ್ಮ ಪ್ರೀತಿಯ ಅಭಿನಂದನೆಗಳು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!