ನೀವು ತಿನ್ನುವುದು ರೊಟ್ಟಿಯೇ ಆಗಿದ್ದರೆ…
ಭತ್ತ,ಗೋಧಿ, ರಾಗಿ, ಜೋಳ
ಬೆಳೆಯುವ ಈ ಜನರು…
ಹೆಚ್ಚೆಂದರೆ ಹೊಟ್ಟೆಗೆ-ಬಟ್ಟೆಗೆ
ಗೇದು, ಸಂಪಾದಿಸುವರು…
ಮಕ್ಕಳು ಓದಿ, ಬರೆದು ನೆಟ್ಟಗೆ ಬಾಳಲಿ
ಎಂದು ಕನಸು ಕಾಣುವರು !
ಗಾಳಿ ಮಳೆ ಬಿಸಿಲು ಚಳಿಗೆ
ಹೆದರುವರೆ? ಬೆದರುವರೆ?
ಗೋಧಿ, ಭತ್ತ, ರಾಗಿ, ಜೋಳದ
ತೆನೆಗಳಂತೆ ಹಾಲು ತುಂಬಿದ
ತಾಯಿ ಗುಣದವರು….
ಕೆಟ್ಟರೂ, ಸುಟ್ಟರೂ ಮೊಲೆ ಉಣಿಸುವರು !
ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ
ಎಂದಾದರೂ ಇದೆಯೆ ಇವನ ಹೆಸರು?
ನೂರಂತಸ್ತಿನ ಮನೆ, ವಿಮಾನ, ಹೆಲಿಕಾಪ್ಟರು
ಎಂದಾದರೂ ಹೊಂದಿರುವರೆ ಇವರು?
ಮಣಗಟ್ಟಲೆ ಬಂಗಾರ, ಬೆಳ್ಳಿ, ಕಂತೆ ಕಂತೆ ನೋಟು
ಎಂದಾದರೂ ಕೂಡಿಟ್ಟಿರುವರೆ ಇವರು ?
ಮೋಸ, ವಂಚನೆ.ಭ್ರಷ್ಟಾಚಾರ..ಎಸಗಿ
ಓಡಿ ಹೋದವರ ಪಟ್ಟಿಯಲ್ಲಿ
ಎಂದಾದರೂ ಸೇರಿರುವರೆ ಇವರು?
ಸಾಲ, ಕಳಪೆ ಬೀಜ-ಗೊಬ್ಬರ, ಬೆಳೆನಾಶ,ಜಪ್ತಿ,
ಇವೇ ಇವರ ಒಡನಾಡಿಗಳು….
ಹೆಚ್ಚೆಂದರೆ ತಮ್ಮ ಜಮೀನಿನಲ್ಲೇ ತಾವು ನೆಟ್ಟ
ಮರಗಳಿಗೇ ನೇಣು ಹಾಕಿಕೊಳ್ಳುವವರು…
ಮೇಟಿ ವಿದ್ಯೆಯೊಂದನೇ ನೆಚ್ಚಿರುವ ಇವರು
ನಿಮ್ಮ ಕೋಟಿ ವಿದ್ಯೆಯ
ಪ್ರಯೋಗ ಪಶುಗಳಾಗಲೊಲ್ಲರು…
ಬೆಳೆದು ಕೊಟ್ಟವರು, ಪಟ್ಟು ಹಿಡಿದು
ತಾ ಬಯಸಿದ ಬೆಳೆ ಬೆಳೆಯುವ ಹಕ್ಕು,
ಬೆಳೆದ ಬೆಳೆಗೆ ಬೆವರಿನ ಬೆಲೆ ಕೇಳುತಿಹರು..
ನೀವು ತಿನ್ನುವುದು ರೊಟ್ಟಿಯೇ ಆಗಿದ್ದರೆ
ಸಿಟ್ಟಾಗದೆ ಆಲಿಸಿರಿ.. ಬಿಟ್ಟುಬಿಡಿ ಪೊಗರು !
ಸವಿತಾ ನಾಗಭೂಷಣ