ಉದ್ಘಾಟನೆ ಭಾಗ್ಯ ಕಾಣದ ಆಸ್ಪತ್ರೆ

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆ ಅಡಿಯಲ್ಲಿ ರೂ.11ಕೋಟಿ ವೆಚ್ಚ
ಉದ್ಘಾಟನೆ ಭಾಗ್ಯ ಕಾಣದ ಆಸ್ಪತ್ರೆ

ಬಸವರಾಜ ಭೋಗಾವತಿ
e- ಸುದ್ದಿ, ಮಾನ್ವಿ
——————–
ಮುಖ್ಯಾಂಶಗಳು
ಸುಸಜ್ಜಿತ ಆಸ್ಪತ್ರೆ, ಸಿಬ್ಬಂದಿ ವಸತಿ ಗೃಹ ನಿರ್ಮಾಣ
60ಹಾಸಿಗೆಗಳ ಸೌಲಭ್ಯ
ತಜ್ಞ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಮನವಿ
————–
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆ ಅಡಿಯಲ್ಲಿ ರೂ.11ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನು ನೆಲಸಮಗೊಳಿಸಿ ಹೊಸದಾಗಿ 60ಹಾಸಿಗೆಗಳ ಸೌಲಭ್ಯ ಹೊಂದಿರುವ ಸುಸಜ್ಜಿತ ಆಸ್ಪತೆಯ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿಯೇ ಕಟ್ಟಡವು ಆರೋಗ್ಯ ಇಲಾಖೆಗೆ ಹಸ್ತಾಂತರಗೊಂಡಿದ್ದರೂ ಉದ್ಘಾಟನೆ ಕಾರ್ಯಕ್ರಮ ನನೆಗುದಿಗೆ ಬಿದ್ದಿರುವುದರಿಂದ ಸೇವೆಗೆ ಲಭ್ಯ ಇಲ್ಲದಂತಾಗಿದೆ. ಪ್ರಸ್ತುತ ಚೀಕಲಪರ್ವಿ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 100-120 ಹೆರಿಗೆಗಳಾಗುತ್ತವೆ. ಪ್ರತ್ಯೇಕವಾಗಿ ನಿರ್ಮಿಸಲಾಗಿರುವ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಹೊಸದಾಗಿ ತಜ್ಞ ವೈದ್ಯರು ಮತ್ತಿತರ ಸಿಬ್ಬಂದಿ ನೇಮಕಗೊಂಡು ಉತ್ತಮ ಸೇವೆ ಲಭ್ಯವಾಗಲಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಇತರೆ ರೋಗಿಗಳ ಆರೈಕೆಗೆ ಹೆಚ್ಚಿನ ಅನುಕೂಲ ಸಾಧ್ಯ ಎಂದು ಸ್ಥಳೀಯರು ನಿರೀಕ್ಷಿಸಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗನೆ ಆಸ್ಪತ್ರೆಯ ಉದ್ಘಾಟನೆಗೆ ಗಮನಹರಿಸಬೇಕು. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಮತ್ತಿತರ ವೈದ್ಯಕೀಯ ಸಿಬ್ಬಂದಿಯನ್ನು ನೇಮಕಗೊಳಿಸಬೇಕು.

—————————————-

ಕೋವಿಡ್ ಕಾರಣ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಉದ್ಘಾಟನೆ ವಿಳಂಬವಾಗಿದೆ. ಶೀಘ್ರದಲ್ಲಿ ಆಸ್ಪತ್ರೆ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು.
ಡಾ.ಚಂದ್ರಶೇಖರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ, ಮಾನ್ವಿ
——————-

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆ, ತಜ್ಞ ವೈದ್ಯರು ಮತ್ತು ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು.
ಶೇಖ್ ಫರೀದ್ ಉಮ್ರಿ, ಪುರಸಭೆಯ ಸದಸ್ಯ ಮಾನ್ವಿ

Don`t copy text!