e-ಸುದ್ದಿ, ಮಸ್ಕಿ
ನಾರಾಯಣಪುರ ಬಲದಂಡೆ 5 ಎ ಕಾಲುವೆ ಜಾರಿಗಾಗಿ ಕರ್ನಾಟಕ ನೀರಾವರಿ ಸಂಘ 50 ದಿನಗಳಿಂದ ತಾಲೂಕಿನ ಪಾಮನಕಲ್ಲೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಶನಿವಾರ ಮಸ್ಕಿ ಬಂದ್ ಗೆ ಕರೆ ಕೊಟ್ಟಿದ್ದು ಬಂದ್ ಸಂಪೂರ್ಣ ಯಶಸ್ವಿಯಾಯಿತು. ಮಸ್ಕಿ ಪಟ್ಟಣದಲ್ಲಿರುವ ಸುಮಾರು 300 ಅಂಗಡಿಗಳು ಮುಚ್ಚಿದ ವ್ಯಾಪರಸ್ಥರು ರೈತರು ಕರೆ ಕೊಟ್ಟ ಬಂದ್‍ಗೆ ಬೆಂಬಲ ವ್ಯಕ್ತ ಪಡಿಸಿದರು.
ಹಳೇ ಬಸ್ ನಿಲ್ದಾಣದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಬಳಿ ಪ್ರತಿ ಭಟನಾಕಾರರು ಸಮಾವೇಶಗೊಂಡರು.
5 ಎ ಕಾಲುವೆ ಹೊರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರ ಮಾತನಾಡಿ ಕಳೆದ 12 ವರ್ಷದಿಂದ ನಿರಂತರವಾಗಿ 5 ಎ ಕಾಲುವೆ ಜಾರಿಗೊಳಿಸುವಂತೆ ಹೊರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರಗಳು ಅಧಿಕಾರ ನಡೆಸಿ ಚುನಾವಣೆಯ ಸಂದರ್ಭದಲ್ಲಿ 5 ಕಾಲುವೆ ಜಾರಿಗೊಳಿಸುವದಾಗಿ ಸುಳ್ಳು ಭರವಸೆ ನೀಡಿ ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಂದವಾಡಗಿ ಏತ ನೀರಾವರಿ ಯೋಜನೆಗೆ ನಮ್ಮ ಹಳ್ಳಿಗಳನ್ನು ಜೋಡಿಸುವುದು ಬೇಡ. ನಮಗೆ ಹರಿ ನೀರಾವರಿ ಬೇಕು. ಅದಕ್ಕಾಗಿ ನಂದವಾಡಗಿ ಏತ ನೀರಾವರಿ ಯೋಜನೆ ಅಡಿಯಲ್ಲಿ 3.75 ಟಿ.ಎಂ.ಸಿ ನೀರು 1530 ಕೋಟಿ ರೂ ಮೀಸಲಿಟ್ಟು 5 ಎ ಕಾಲುವೆ ಪ್ರತೇಕವಾಗಿ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಹೊರಾಟ ಸಮಿತಿಯ ಗೌರಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಪ್ಪಾಜಿಗೌಡ, ಸಂಚಾಲಕ ನಾಗರಡ್ಡೆಪ್ಪ ದೇವರಮನಿ, ದೊಡ್ಡಪ್ಪ ಮುರಾರಿ, ನೀಲಕಂಠಪ್ಪ ಬಜಂತ್ರಿ, ಅಂಬಮ್ಮ, ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗನಗೌಡ ಮಾತನಾಡಿದರು.
ಮೆರವಣಿಗೆ ಃ ಬೆಳಿಗ್ಗೆ ಗಾಂಧಿ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಆರಂಭವಾಯಿತು. ಪ್ರತಿಭಟನಾಕಾರರು ಅಶೋಖ ವೃತ್ತದಲ್ಲಿ ಕೆಲ ಕಾಲ ಹೆದ್ದಾರಿ ತಡೆದಿದ್ದರಿಂದ ಗೊಂದಲ ಉಂಟಾಯಿತು. ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಮತ್ತು ಸಂಘಟನೆಯ ಮುಖಂಡರು ಮದ್ಯ ಪ್ರವೇಶಿಸಿ ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಿಕೊಟ್ಟರು.
ಅಶೋಕ ವೃತ್ತ, ಖಲೀಲವೃತ್ತ, ಮುಖ್ಯ ಬೀದಿ, ಕನಕವೃತ್ತದ ಮುಖಾಂತರ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, 50 ಹಳ್ಳಿಗಳ 2 ಸಾವಿರ ರೈತರು, ರೈತ ಮಹಿಳೆಯರು, ರೈತರ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.