ಸೂತಕಗಳನ್ನು ನಿರಾಕರಿಸಿದ ಶರಣರು
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12ನೇ ಶತಮಾನ ಒಂದು ಪರ್ವ ಕಾಲ. ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಧಾರ್ಮಿಕ ಪ್ರವೃತ್ತಿಗಳ ಕಾಲಘಟ್ಟ. ಧಾರ್ಮಿಕ ಇತಿಹಾಸದಲ್ಲಿ ಬಸವಣ್ಣನ ಸ್ಥಾನ ವಿಶಿಷ್ಟವಾದದ್ದು. ಜಾತಿ ಸೂತಕಗಳ ಶಾಪಕ್ಕೆ ನರಳುತ್ತಿರುವ ದೇಶದಲ್ಲಿ 800 ವರ್ಷಗಳ ಹಿಂದೆಯೇ ಜಾತಿ ಸೂತಕಗಳ ನಿರ್ಮೂಲನೆ ಮಾಡಿದ ಮಹಾ ಮಾನವತಾವಾದಿ.
ಅಂದು ವರ್ಗ ತಾರತಮ್ಯ, ಅಸಮಾನತೆ, ಲಿಂಗ, ಜಾತಿ ಭೇದ ಪಿಡುಗುಗಳ ವಿರುದ್ಧ ಹೋರಾಡಿದ ಶರಣರು, ವೈದಿಕ ಮತ್ತು ಜೈನ ಧರ್ಮಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು.
ಶರಣರು ಮಾತನಾಡುತ್ತಿರಲಿಲ್ಲ ಅವರ ನಡೆಯೇ ಮಾತಾಗಿತ್ತು. ಕೇವಲ ತತ್ವ ಸಿದ್ಧಾಂತಗಳಿಂದ ಬದಲಾವಣೆ ಅಸಾಧ್ಯವೆಂದು ನಮ್ಮೊಳಗೆ ನಾವು ಬದಲಾಗಬೇಕು. ಹೀಗಾಗಿ ವೈಯಕ್ತಿಕ ಬದಲಾವಣೆಯೇ ವಚನ ಸಾಹಿತ್ಯದ ಮೂಲ ಆಶಯವಾಗಿತ್ತು. ಧರ್ಮ ಸಾಧನೆಯ ಮುಖ್ಯ ಉದ್ದೇಶ ಹೊಂದಿದ ಶರಣರು ಅಂದಿನ ಸೂತಕಗಳ ಒಳ ಸೂಕ್ಷ್ಮಗಳಿಂದ ಘಾಸಿಗೊಂಡು ಬೆಚ್ಚಿದರು. ಶ್ರೇಣೀಕೃತ ಧರ್ಮಗಳ ನೆಲೆಬೆಲೆಗಳನ್ನು ತೂಗಿ ನೋಡಿ ಸೂತಕಗಳ ಕೊಳೆ ನಿರ್ಮೂಲನವಾಗಬೇಕು. ಹೊಸದನ್ನು ನಿರ್ಮಿಸಬೇಕು, ಬೆಳೆಯನ್ನು ಬೆಳೆಯಬೇಕು, ಪಡೆಯಬೇಕೆನ್ನುವ ಧೋರಣೆ ವಚನಕಾರರದಾಗಿತ್ತು.
ಸೂತಕವೆಂದರೆ ಹೊಲೆ, ಮೈಲಿಗೆ ಎಂಬರ್ಥಗಳಿವೆ. ಕೆಲ ಸಂಮುದಾಯಗಳಲ್ಲಿ ಹುಟ್ಟು-ಸಾವು ಎರಡೂ ಸೂತಕಗಳೇ ಆಗಿವೆ. ನಮ್ಮ ಸಂಸ್ಕ್ರತಿ, ಸಂಸ್ಕಾರವನ್ನೂ ಕ್ರಿಯಾಶೀಲವಾಗಿ ನಿರ್ವಹಿಸ ಬೇಕೆಂಬ ಧಾವಂತದಲ್ಲಿ ಸೂತಕಗಳು ಬಹು ಮುಖಿ ಆಯಾಮಗಳನ್ನೂ ಪಡೆದು ಕೊಂಡಿತು, ಮನುಷ್ಯನ ನಂಬಿಕೆಯ ಜೊತೆಗೆ, ಸೂತಕಗಳೂ ಸಹಿತ, ಧರ್ಮಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡವು. ಮನುಷ್ಯ ಲೋಕದ ಜೊತೆಗೆ, ಮತ್ತೊಂದು ಲೋಕ ಸೂತಕವಾಗಿದೆ ದುಷ್ಟ ಶಕ್ತಿಯಿಂದ ತಪ್ಪಿಸಿಕೊಳ್ಳಬೇಕಾದಾಗ ಶೋಕಾಚರಣೆಯ ಅವಧಿಯನ್ನು ರೂಪಿಸಿಕೊಂಡದು ಇದೆ.
ವಚನಕಾರರು ದೇಹವನ್ನು ಆಲಯವಾಗಿ ಕಂಡವರು “ಎನ್ನ ಕಾಲೇ ಕಂಬ ದೇಹವೇ ದೇಗುಲ” ಎಂದು ಸ್ಪಷ್ಟಪಡಿಸಿದರು. ಶರಣ ಪರಂಪರೆಯಲ್ಲಿ ಸೂತಕಕ್ಕೆ ತೃತೀಯ ಸ್ಥಾನವನ್ನು ವಚನ ಕಾರರು ಪ್ರತಿಕ್ರಿಯಿಸಿದ್ದಾರೆ.
ವ್ಯಕ್ತಿ ಸತ್ತಾಗ ಸೂತಕವಾದರೆ, ಮಗು ಜನ್ಮಿಸಿದಾಗ ವೃದ್ಧಿ ಎಂದು ಹೇಳಲಾಗುತ್ತದೆ. ಸತ್ತ ವ್ಯಕ್ತಿಯ ಮನೆಯಲ್ಲಿ ಸಾವು ಸೂತಕವಾದರೆ ಮಗು ಜನ್ಮಿಸಿದ ಮನೆಯಲ್ಲಿ ಸಂತೋಷದ ಸೂತಕವಾಗಿರುತ್ತದೆ. ಸರಳವಾಗಿ ಹೇಳುವುದಾದರೆ ಸೂತಕಗಳು ಮನುಷ್ಯನ ವ್ಯಕ್ತಿತ್ವಕ್ಕೆ ಸಂಬಂದ್ಧಪಟ್ಟದ್ದು. ವ್ಯಕ್ತಿಯಿಂದ ಕುಂಟುಂಬ, ಕುಟುಂಬದಿಂದ ಸಮಾಜ, ಸಮಾಜದಿಂದ ಧರ್ಮಗಳಿಗೆ, ನಂಟಿನಿಂದ ಕೂಡಿಸಿ ಕಟ್ಟುವ ಮನುಷ್ಯ ನಿರ್ಮಿಸಿದ ನಿಯಮಗಳಾಗಿವೆ. ಸೂತಕಗಳು ಅವರವರ ಮಡಿವಂತಿಕೆಯ ಅನನ್ಯತೆಯನ್ನು ವಿಭಿನ್ನವಾಗಿ ಹೇಳುತ್ತವೆ. ಒಂದೊಂದು ಧರ್ಮದಲ್ಲಿ ಸೂತಕಗಳಿಗೆ ಅವುಗಳದೇ ಆಚರಣೆ ಇರುತ್ತದೆ. ಅರ್ಥವಿರುತ್ತದೆ, ಸಮಾಜದಲ್ಲಿ ಮರು ಹುಟ್ಟು ಪಡೆಯುತ್ತ ಸಾಗುತ್ತದೆ.
ಚನ್ನಬಸವಣ್ಣನು ಸುಮಾರು 60 ವಚನಗಳಲ್ಲಿ ಸೂತಕದ ಪ್ರಸ್ತಾಪ ಮಾಡಿದ್ದಾರೆ. ಮಿಕ್ಕ ವಚನಕಾರರು ಸೂತಕದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಂದಿನ ಸಮುದಾಯದ ಸಂದರ್ಭದಲ್ಲಿ ಸೂತಕ ಎನ್ನುವುದು ವಾಗ್ವಾದದ ಸಂಗತಿಯಾಗಿತ್ತು. ದಲಿತನಾದ ಮಾದಾರ ದೂಳಯ್ಯನಿಗೆ ಸೂತಕದ ಶೋಷಣೆಯಿಂದ ಮುಕ್ತ ಮಾರ್ಗ ಅಗೋಚರವಾದರೂ ಆಧ್ಯಾತ್ಮದ ನೆಲೆಯ ಮೂಲಕ ಪರಿಹಾರ ಕಾಣುತ್ತಾನೆ. ಶಿವನನ್ನೇ ಪ್ರಶ್ನಿಸಿ ದೇಹ ಮತ್ತು ಪ್ರಾಣ ಸೂತಕಗಳ ಬಗ್ಗೆ ಸಾರಿ ಹೇಳಿದ ಶರಣನಾಗಿದ್ದ. ಜಾತಿ ಹಾಗೂ ಸೂತಕಗಳೆಂಬ ಪೆಡಂಭೂತಗಳು ಮಹಿಳೆಯರನ್ನು ಬೆಂಬಿಡದೆ ಕಾಡಿವೆ. ಜನನ ಹಾಗೂ ಮರಣ ದೈವದತ್ತವಾದದ್ದು. ಅದಕ್ಕೆ ಯಾವುದೇ ಸೂತಕ ಅಂಟಿಸಬೇಕಾಗಿಲ್ಲ ಎನ್ನುತ್ತಾನೆ.
ಸೂತಕವೆನ್ನುವುದು ನಮ್ಮದು ಪುನರಾವರ್ತನೆಯ ಪ್ರಕ್ರಿಯೆ ಮತ್ತು ಕೆಳ ವರ್ಗ ಸಮಾಜದ ಸ್ಫೋಟ. ಇವೆರಡೂ ಸಮಾಜದಲ್ಲಿ ಉರಿವ ಕೆಂಡದಂತೆ. ನಮ್ಮನ್ನು ದಹಿಸುತ್ತಲೇ ಇರುತ್ತವೆ. ಸೂತಕಗಳೆಂಬ ಸ್ವಾಭಿಮಾನ ಚಳುವಳಿಯು ಶರಣರ ಅರಿವು ಅನುಭಾವದ ಮೂಸೆಯಿಂದ ಹೊರಬಂದಿತು.
ಒಬ್ಬ ವ್ಯಕ್ತಿ ಮರಣ ಹೊಂದಿದಾಗ, ಅವನಲ್ಲಿದ್ದ ಆತ್ಮವು 10ದಿನಗಳ ಕಾಲ ಈ ಭೂಮಿಯ ಮೇಲೆ ಇರುತ್ತದೆ ಎಂಬ ನಂಬಿಕೆಯಿದೆ. ಹಾಗು ಆ ವ್ಯಕ್ತಿ ಇದ್ದ ಮನೆಯ ಸುತ್ತಲೂ ಇರುತ್ತದೆ. ವಾಸ್ತವದಲ್ಲಿ ಇದನ್ನು ಆತ್ಮ ಎನ್ನುತ್ತಾರೆ. ಆತ್ಮವು ಭೂಮಿಯ ಮೇಲ್ಲಿದ್ದಷ್ಟು ಕಾಲ ಆ ಮನೆಯ ಮಂದಿಗೆ ಸೂತಕವಿರುತ್ತದೆ ಈ ಸೂತಕದ ಅವಧಿಯು ವರ್ಣವನ್ನು ಆಧರಿಸಿರುತ್ತದೆ.
ಚೆನ್ನಬಸವಣ್ಣನು ಹೇಳುವಂತೆ, ರಜ ಸೂತಕ, ಕುಲಸೂತಕ, ಜನನ ಸೂತಕ, ಪ್ರೇತ ಸೂತಕ, ಉಚ್ಛಿಷ್ಠ ಸೂತಕವೆಂದು ಚೆನ್ನಬಸವಣ್ಣನು ಐದು ಸೂತಕಗಳ ಬಗ್ಗೆ ಹೇಳುತ್ತಾನೆ. ದೇಹಕ್ಕೆ ಸಂಬಂಧಪಟ್ಟ ಸೂತಕಗಳು ಇವು ದೇಹಕ್ಕೆ ಸಂಬಂಧಪಟ್ಟ ಸೂತಕಗಳಾಗಿರುತ್ತವೆ. ಭಕ್ತನಾದವನಿಗೆ ಇವುಗಳ ಕಟ್ಟುಪಾಡುಗಳಿಲ್ಲ. ಇವನ್ನು ಬಿಟ್ಟಲ್ಲದೆ ಅವನು ಭಕ್ತನಾಗುವುದಿಲ್ಲ. ಪಂಚ ಸೂತಕಗಳನ್ನು ಬಿಟ್ಟಂತಹ ಭಕ್ತರಲ್ಲಿ ಕೊಟ್ಟುಕೊಂಬುದು ಸದಾಚಾರ. ಆರು ಸ್ಥಲಗಳ ಪ್ರಕಾರ ಆರು ಸೂತಕಗಳೆಂದು ಸ್ಪಷ್ಠೀಕರಿಸುತ್ತಾನೆ. ಕುಲಸೂತಕ, ಛಲ ಸೂತಕ, ತನು ಸೂತಕ, ಮನ ಸೂತಕ, ನೆನಹು ಸೂತಕ, ಭಾವ ಸೂತಕ ಎನ್ನುವ ಕ್ರೋಢೀಕೃತ ಅಂಶಗಳು ಗಮನಸೆಳೆಯುತ್ತವೆ.
ಬ್ರಾಹ್ಮಣನಿಗೆ 10ದಿನ ಕ್ಷತ್ರಿಯನಿಗೆ 12ದಿನ, ವೈಶ್ಯನಿಗೆ 15ದಿನ, ಶೂದ್ರನಿಗೆ 30ದಿನ, ಸಾವಿನ ಸೂತಕಗಳು ಬಹಳ ಗಂಭೀರವಾದದ್ದು ಮತ್ತು ವಿಶಿಷ್ಟವಾದದ್ದು. ಜನನವನ್ನು ಸಮಾಜದಲ್ಲಿ ಸ್ವಾಗತಿಸಿ ಕೊಳ್ಳುವುದು, ಅದೇ ಜನಾಂಗವು ಸಾವಾದಾಗ ದುಃಖದ ಸೂತಕವಾಗುವಾಗುತ್ತದೆ.
ನಮ್ಮ ಧರ್ಮ ಸಂಸ್ಕೃತಿಯ ವಿಕಾಸಪಥದ ಯಾನದಲ್ಲಿ ವಿವಿಧ ನಿಯಮಗಳನ್ನು ಅಳವಡಿಸಿಕೊಂಡು ಬೆಳೆಯುತ್ತಲೇ ಇರುತ್ತದೆ. ಸೂತಕದ ಮನೆಯಲ್ಲಿ ದೇವತಾಕಾರ್ಯಗಳನ್ನು ಮಾಡುವುದಿಲ್ಲ. ಬೇರೆಯವರ ಮನೆಗೂ ಹೋಗುವಂತಿಲ್ಲ ಒಂದು ರೀತಿಯಲ್ಲಿ ಸಾಮಾಜಕ ಬಹಿಷ್ಕಾರವಾಗಿ ಕಂಡು ಬರುತ್ತದೆ.
ಪ್ರತಿ ಧರ್ಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸೂತಕಗಳಿಗೆ ವ್ಯಕ್ತಿಗಳು ಒಳಗಾಗಿರುತ್ತಾರೆ. ಒಂದೊಂದು ಸೂತಕವೂ ಪ್ರತಿಯೊಂದು ಧರ್ಮಕ್ಕೆ ಹೊಂದಾಣಿಕೆ ಆಗುವಾಗ ಆಯಾ ಧರ್ಮಕ್ಕೆ ಸಾಮಾಜಿಕ ಗುರುತು ಆಗಿರುತ್ತದೆ ವಿರೋಧವೂ ಆಗುತ್ತದೆ. ಅಸ್ಪೃಶ್ಯತೆ ಎನ್ನುವುದು ವರ್ಣನೀತಿಯ ಬಳುವಳಿಯಾಗಿದೆ. ಸೂತಕವೆಂಬುದು ಅದರೊಳಗಿನ ಒಳ ಆಚರಣೆಯಾಗಿದೆ. ಮನುಷ್ಯ ಜನ್ಮವನ್ನೇ ಕರ್ಮದ ಹಂಗಿನಲ್ಲಿ ವ್ಯಾಖ್ಯಾನಿಸಿದವರು. ಹೆಣ್ಣನ್ನು ಹೊಲೆತನದ ಸಂಕೋಲೆಯಲ್ಲಿ ಬಂಧಿಸಿ. ಮೈಲಿಗೆಯಾಗಿ ನೋಡಿದೆ. ಆದರೆ ಶರಣ ಧರ್ಮದಲ್ಲಿ ಇಂತಹ ಸೂತಕಗಳನ್ನು ವಿರೋಧಿಸಲಾಗಿದೆ. ದೇಹಕ್ಕಂಟಿದ ಯಾವುದೇ ನೈಸರ್ಗಿಕ ಸಹಜ ಸಂಗತಿಗಳನ್ನು ಅವರು ಸೂತಕಗಳೆಂದು ಭಾವಿಸಿಲ್ಲ. ಹೆಣ್ಣಿನ ಸರ್ವ ಸಂಕೋಲೆಗಳನ್ನು ಬಿಡಿಸಿದವರು ಶರಣರಾಗಿದ್ದರು.
ಜಾತಿ ಸೂತಕ:
ಜಾತಿ ಹುಟ್ಟಿನಿಂದ ಬರುವುದಲ್ಲ. ಒಂದು ವೇಳೆ ಹೊಲೆ ಪದವನ್ನು ಬಳಸುವುದಾದರೆ, ಅದು ಜಾತಿ ಹೊಲೆ ಅಲ್ಲ. ಹುಟ್ಟಿನಿಂದ ಬಂದ ಹೊಲೆ. ಹಾಗೆ ನೋಡಿದರೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹೊಲೆಯ. ಬಸವಣ್ಣನವರು ಹೀಗೆ ಹೇಳಿದ್ದಾರೆ. “ಹೊಲೆ ಗಂಡನಲ್ಲದೆ ಪಿಂಡ ನೆಲೆಗೆ ಆಶ್ರಯವಿಲ್ಲ ಹೊಲೆನಿಂದು ಪಿಂಡವಾಗಿ ಆ ಹೊಲೆ ಪಿಂಡವೇ ಬಲಿತು ಹೊಲೆ ದೇಹವಾಗುತ್ತದೆ. ಪಿಂಡದಿಂದುದಿಸಿ ಬಂದ ದೇಹದ ಹೊಲೆತನವನ್ನು ಕಳೆದುಕೊಂಡರೆ ಮಾತ್ರ ಆಗ ಆ ವ್ಯಕ್ತಿ ಕುಲಜನಾಗುತ್ತಾನೆ”. ಇದಕ್ಕೆ ಸಂಬೋಳಿ ನಾಗಿದೇವನ ಬದುಕೇ ಉದಾಹರಣೆ. ಹೊಲೆ ಜಾತಿಯವನಾದ ನಾಗಿ ದೇವನು ಪ್ರಭುತ್ವ ವಹಿಸಿದ ಕೆಲಸವೆಂದು “ಸಂಭೋಳಿ ಸಂಭೋಳಿ ಎಂದು ಕೂಗುವ ಕೆಲಸ ಮಾಡುತ್ತಿದ್ದ. ಸಂಭೋಳಿ ಎಂದರೆ ದೂರ ಹೋಗಿ ದೂರ ಹೋಗಿ ಎಂದು ಈ ವೃತ್ತಿಯನ್ನು ನಿಲ್ಲಿಸಿದವರು ಶರಣರಾಗಿದ್ದರು. ಕುಲ ಜಾತಿಯ ಸೂತಕದಲ್ಲಿ ದಲಿತರು ಊರಲ್ಲಿ ಬರುತ್ತಿದ್ದಾರೆ ದೂರ ಹೋಗಿ ದೂರ ಹೋಗಿ ಎನ್ನುವ ಘೋಷಣೆಯ ವೃತ್ತಿ ಇದನ್ನು ಜಾತಿ ಸೂತಕ ಅರ್ಥದ ನೆಲೆಯಲ್ಲಿ ಕುಲ ಸೂತಕವೆಂದು ಬಿಂಬಿಸಲಾಗಿದೆ.
ಶೋಷಣೆ ಮತ್ತು ಧಮನ ನೀತಿ ರೂಢಿಸಿ ಮೇಲ್ವರ್ಗದಿಂದ ನಡೆದ ಅಟ್ಟಹಾಸವಾಗಿದೆ. ಇದನ್ನು ಖಂಡಿಸಿದ ಶರಣರು ಕುಲ ಸೂತಕ ನೆಲೆಯಲ್ಲಿ ಮಾತನಾಡಲು ಪ್ರಾರಂಭಿಸಿದರು.
ಜನನ ಸೂತಕ:
ಹೆಣ್ಣು ಸೂತಕಕ್ಕಂಟಿದವಳು ಎಂಬ ಹೇಳಿಕೆ ಜಗಜ್ಜಾಹೀರವಾಗಿದೆ. ಹೆರಿಗೆಯಾದವಳನ್ನು ಮುಟ್ಟಬಾರದೆಂಬ ನಿಯಮ ರೂಪಿಸಿದ ಸಮಾಜದಲ್ಲಿ ಆಚರಣೆಗೆ ತರಲಾಯಿತು. ಅಶುಚಿತ್ವವು ಸಂಬಂಧ ಮತ್ತು ಕಾಲದ ಮೇಲೆ ಅವಲಂಬಿಸಿರುತ್ತದೆ. ಹೀಗೂ ಇರಬಹುದು ರಕ್ತ ಸ್ರಾವದಿಂದ ಅವಳ ರೋಗ ನಿರೋಧ ಶಕ್ತಿಯನ್ನು ಕುಗ್ಗಿಸಿರುತ್ತದೆ ಮತ್ತು ತಾಯಿಯ ಆರೈಕೆಯಿಂದ ತೆಗೆದುಕೊಂಡ ಕ್ರಮವೂ ಇರಬೇಕು.
ರಜ ಸೂತಕ:
ರಸಜ್ವಲೆಯಾದವಳನ್ನು ಆಕೆ ಮುಟ್ಟಿದುದನ್ನು ಮುಟ್ಟಬಾರದು. ವೈಜ್ಞಾನಿಕವಾಗಿ, ಜೈವಿಕವಾಗಿ ಬಂದಿರುವ ಸ್ತ್ರೀ ಗುಣವು ಪ್ರಕೃತಿ ದತ್ತವಾದ ಗುಣವಾಗಿರುತ್ತದೆ. ಕ್ರೋಮೋ ಜೋಮುಗಳು ದೇಹ ರಚನೆ ಸಂತಾನೋತ್ಪತ್ತಿಗೆ ಕಾರಣವಾಗಿತ್ತು. ಇದರ ಅರಿವಿಲ್ಲದೆ ನಿರಂತರವಾಗಿ ಶೋಷಿತಳಾಗುತ್ತಿದ್ದಳು. ಹೀಗಾಗಿ ಅಂದು ಸಮಾಜದಲ್ಲಿ ಅವಳನ್ನು ಅಸ್ಪೃಶ್ಯಳಂತೆ ಕಾಣಲಾಯಿತು. ಇದನ್ನು ಖಂಡಿಸಿದ ಶರಣರು ಅವಳಿಗೆ ಆಗುವ ಶೋಷಣೆಯನ್ನು ಅಸಾಹಕತೆಯನ್ನು ಮನಗಂಡು ಅಂದು ಸ್ತ್ರೀಯರನ್ನು ರಕ್ಷಣೆ ಮಾಡಿದಂಹವರು ಶರಣರಾಗಿದ್ದರು.
ಪ್ರೇತ ಸೂತಕ:
ಸತ್ತವರ ಮನೆಯವರನ್ನು ಮುಟ್ಟಬಾರದು, ಮೈಲಿಗೆ ಅಂಟಿಕೊಳ್ಳುತ್ತದೆ ಎಂಬ ವಾದವಿದೆ. ಆದರೆ ಲಿಂಗವಂತ ಧರ್ಮದಲ್ಲಿ ಸತ್ತ ವ್ಯಕ್ತಿಯ ಅಂತ್ಯ ಕ್ರಿಯೆ ಮಾಡುವಾಗ ಶಿವ ಶಿವ ಎನ್ನುವ ನಾಮ ಸ್ಮರಣೆಯಲ್ಲಿ ಸ್ಮಷಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಶವ ಸಂಸ್ಕಾರ ಸಮಯದಲ್ಲಿ ಲಿಂಗವನ್ನು ಮೃತ ವ್ಯಕ್ತಿಯ ಬಾಯಲ್ಲಿ ಇಡುವುದರಿಂದ ಸೂತಕ ಇರುವುದಿಲ್ಲ. ಸತ್ತ ವ್ಯಕ್ತಿಗೆ ಸೂತಕವಿಲ್ಲದಾಗ ಮನೆಯವರಿಗೆ ಅದರ ಪರಿಣಾಮದ ತೀವ್ರತೆ ಇಲ್ಲ ಎನ್ನುವುದು ಶರಣ ಧರ್ಮದ ಪರಿಪಾಲನೆ.
ಎಂಜಲು ಸೂತಕ:
ಬೇರೆಯವರು ತಿಂದು ಉಳಿದುದ್ದನ್ನು ತಿನ್ನಬಾರದು. ಶರಣರು ಸಾಂಪ್ರದಾಯಕ ಪದ್ಧತಿಯನ್ನು ಇಡಿಯಾಗಿ ಖಂಡಿಸಿದ್ದಾರೆ. ಅವರ ಪ್ರಕಾರ ಲಿಂಗ ದೀಕ್ಷೆಯು ನಮ್ಮಲ್ಲಿರುವ ಎಲ್ಲಾ ದೋಷಗಳನ್ನು ನಾಶ ಮಾಡುವುದಲ್ಲದೆ, ಯಾವುದೇ ದೋಷಗಳು ನಮಗೆ ಬರದಂತೆ, ಅಂಟದಂತೆ ನಮ್ಮನ್ನು ಶುದ್ಧ ಮಾಡುತ್ತದೆ.
ಸಾವಿನ ಸೂತಕ:
ಸಾವಿನ ಸೂತಕದಲ್ಲಿ ಯಾವುದೇ ಶುಭ ಕಾರ್ಯವಿರುವುದಿಲ್ಲ. ಮನುಷ್ಯನ ಹುಟ್ಟು ಸಾವು ಯಾವಾಗ ಸಂಭವಿಸುತ್ತದೆ ಎನ್ನುವುದು ಅನಿರೀಕ್ಷಿತ. ಸಾವಿನ ಮನೆಯಲ್ಲಿ ದುಃಖ ಛಾಯೆ ಇರುವುದರಿಂದ ಅಶೌಚವೆಂದು ಭಾವಿಸಲಾಗುತ್ತದೆ. ಶರಣರು ಸರಳ ಜೀವನದ ಮೂಲಕ ತತ್ವಗಳನ್ನು ಪಸರಿಸಿದರು. ಕೆಳ ವರ್ಗದ ಶ್ರಮಿಕರಿಗೆ ಹೊರೆಯಾಗುವ ಸಾವಿನ ಸೂತಕಗಳನ್ನು ಖಂಡಿಸಿರು.
ಮಡಿವಂತಿಕೆಯ ಅಂದಿನ ಸಮಾಜದಲ್ಲಿ ಸೂತಕಗಳಿಂದ ಸ್ತ್ರೀಯರಿಗೆ ನೋವಾಗುತ್ತಿತ್ತು. ಸೂತಕ ಎನ್ನುವುದು ಶ್ರಾದ್ದದ ಹಾಗೆ. ಆಂತರಿಕ ಅರ್ಥಗಳಿಗೆ ಯಾವುದೇ ಪ್ರತಿಫಲವಿರಲಿಲ್ಲ. ಮಹಿಳೆಯರು ರಸಜ್ವ್ಜಲೆಯಾದಾಗ ಅವರನ್ನು ಬೇರೆಯೇ ಕೂರಿಸುವಂತಹ ಆಚರಣೆ ಇನ್ನೂ ಕೆಲ ಜನಾಂಗಗಳಲ್ಲಿದೆ. ಮುಟ್ಟಾಗುವುದು ಎಂದರೆ ಪೀಡೆ ಆಕೆಗೆ ಸೂತಕವಂಟಿಕೊಂಡಿರುತ್ತದೆ. ಆಕೆಯನ್ನು ಮನೆಯವರು ಮುಟ್ಟಿಕೊಳ್ಳುವಂತಿಲ್ಲ, ಸ್ನಾನ ಮಾಡುವಂತಿಲ್ಲ, ಯಾರಾದರೂ ಮುಟ್ಟಿದರೆ ಕೆಡುಕಾಗುತ್ತದೆ ಎಂಬ ನಂಬಿಕೆ ಬಲವಾಗಿದೆ. ಈ ಸೂತಕದ ಹಲ್ಲೆಯು ಸ್ತ್ರೀಯನ್ನು ಶೋಷಿಸುವ ಹಂತವಾಗಿದೆ. ಗೊಲ್ಲರ ಜನಾಂಗದಲ್ಲಿ ಮುಟ್ಟು ಮತ್ತು ಹೆರಿಗೆಯಾದಾಗ ಮನೆಯಲ್ಲಿರಿಸಿಕೊಳ್ಳದೆ, ಊರ ಹೊರಗೆ ಮರದ ಕೆಳಗೆ, ಆಕೆಯನ್ನು ಇರಿಸಲಾಗುತ್ತದೆ. ಇದು ಸೂತಕದ ನಿಗೂಢ, ನಿಗೂಢತೆಯಾಗಿದ್ದು, ಸಮುದಾಯದ ಅಹಂನ್ನು ಪ್ರಕಟಿಸುತ್ತದೆ.
ಮುಟ್ಟು ಸಹಜವಾದ ನೈಸರ್ಗಿಕ ಪ್ರಕ್ರಿಯೆ, ತಾಯ್ತನದ ಆಚರಣೆಗೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಂಡ ಗರ್ಭಕೋಶ, ಆ ತಿಂಗಳು ಗರ್ಭಧಾರಣೆಯಾಗದಿದ್ದಾಗ ಎಲ್ಲವನ್ನೂ ನಿರ್ಧಾಕ್ಷಿಣ್ಯವಾಗಿ ಹೊರ ಹಾಕುತ್ತದೆ.
ಲೌಕಿಕ ಜ್ಞಾನವೊಂದೇ ಮುಕ್ತಿಗೆ ಸಾಧನೆಯಲ್ಲ. ಪವಿತ್ರತೆಯು ಶರಣಧರ್ಮವನ್ನು ಆಧರಿಸಿದ್ದು.
ಗುರುಕಾರುಣ್ಯ ಕಟಾಕ್ಷದಲ್ಲಿ
ಉತ್ಪತ್ಯವಾದ || ಅಜಾತಂಗಳಿಗೆ.
ಜಾತಿ ಸೂತಕ || ಜನನ ಸೂತಕ
ರಜಸೂತಕ || ಉಚ್ಛಿಷ್ಟ ಸೂತಕ ಉಂಟೆಂಬುವುಗಳಿಗೆ
ಗುರುವಿಲ್ಲ || ಲಿಂಗವಿಲ್ಲ || ಜಂಗಮವಿಲ್ಲ
ಪ್ರಸಾದ ವಿಲ್ಲವಯ್ಯ || ಕೂಡಲ ಚೆನ್ನ ಸಂಗಮ ದೇವ
ಜಾತಿ ಸೂತಕ ಜನನ ಸೂತಕ, ಪ್ರೇತಸೂತಕ, ಉಚ್ಛಿಷ್ಟ ಸೂತಕ, ಈ ಪಂಚಸೂತಕಗಳು ಶರಣರಿಗೆ. ಇಲ್ಲವೆಂದು ಚೆನ್ನಬಸವಣ್ಣನೇ ಹೇಳುವನು. ವೈದಿಕ ಧರ್ಮದಲ್ಲಿ ಇಂದಿಗೂ ಪಂಚಸೂತಕಗಳ ಆಚರಣೆಯ ನೆಪದಲ್ಲಿ ದಲಿತರ, ದುಃಖಿತರ, ಸ್ತ್ರೀಯರ ಶೋಷಣೆಯಾಗುವುದನ್ನು ಗುರುತಿಸಿದ ಶರಣರು, ಈ ಸೂತಕಗಳನ್ನೇ ನಿರಾಕರಿಸಿದರು.
ವೈದಿಕ ಪರಂಪರೆಯಿಂದ ಬಂದ ಮಹಿಳೆಯರ ಮೌಲ್ಯಗಳು ಪುರುಷ ಪ್ರಧಾನ ನೆಲೆಯಲ್ಲಿ ನರಳುತ್ತಿವೆ. ಬುಡಕಟ್ಟು ಮತ್ತು ಕೆಳವರ್ಗದ ಸಮುದಾಯಗಳಲ್ಲಿ ಮಾತೃ ನೆಲೆಯ ಅಧಿಕಾರವಿರುತ್ತದೆ. ಆದ್ದರಿಂದ ಸೂತಕಗಳೂ ಸಹಿತ ಸಂಪ್ರದಾಯ ಬದ್ದವಾಗಿಯೇ ವ್ಯವರಿಸುತ್ತವೆ. ಜನಪದರಲ್ಲಿ ಸೂತಕದ ಪರಿಕಲ್ಪನೆ ವಿಶಿಷ್ಟವಾದದ್ದು. ಜನನ ಮರಣ, ಮತ್ತು ಋತುಮತಿಯಾದ ಸಂದರ್ಭಗಳಲ್ಲಿ ಸೂತಕವನ್ನು ಆಚರಿಸಲಾಗುತ್ತದೆ. ಇದರ ನಿವಾರಣೆಯನ್ನು ಸೂತಕ ತೆಗೆಯುವುದು ಎಂದು ಹೇಳಲಾಗುತ್ತದೆ. ಮಗು ಜನ್ಮಿಸಿದಾಗ ಉಂಟಾಗುವ ಮೈಲಿಗೆಗೆ, ಜಾತ ಶೌಚ ಎಂದು ವೃದ್ದಿ ಅಥವಾ ಪುರುಡು ಎನ್ನುತ್ತಾರೆ. ಸೂತಕವಿರುವ ಅವಧಿಯಲ್ಲಿ ಯಾವುದೆ ಶುಭಕಾರ್ಯಗಳು ನಡೆಯುವುದಿಲ್ಲ ಮಾಂಸಭಕ್ಷಣೆ ನಿಷಿದ್ದ, ಕುಟುಂಬದ ಎಲ್ಲರೂ ತಮ್ಮ ತ್ಮಮ ಮನೆಯನ್ನು ಗುಡಿಸಿ, ಸಾರಿಸಿ ಪಾತ್ರೆ, ಪಡಿಗೆ, ತೊಳೆದು ಶುಭ್ರ ಗೊಳಿಸುತ್ತಾರೆ. ಹಾಸಿಗೆ ಹೊದಿಕೆಗಳನ್ನು ಸ್ವಚ್ಛ ಮಾಡಿ ಮಡಿ ಮಾಡುತ್ತಾರೆ. ಒಕ್ಕಲು ಅಯ್ಯನವರು ಅಥವಾ ದಾಸಯ್ಯನವರು ಬಂದು, ಮನೆದೇವರನ್ನು ಪೂಜಿಸಿ ಮನೆಗೆ ಹಾಗೂ ಮನೆಮಂದಿಗೆ ತೀರ್ಥ ಪ್ರೋಕ್ಷಿಸಿ, ಗೌರವ ಕಾಣಿಕೆ ಪಡೆದು ಹೋಗುತ್ತಾರೆ. ಸಾವಿನ ಆಚರಣೆಯನ್ನು ತಿಥಿಯ ಮೂಲಕ ನಿವಾರಿಸಿಕೊಳ್ಳಲಾಗುತ್ತದೆ.
ಶ್ರೇಣಿಕೃತ ಅಂದಿನ ಸಮಾಜದಲ್ಲಿ ಸೂತಕಗಳಿಂದ ಸ್ತ್ರೀಯರಿಗೆ ನೋವಾಗುತ್ತಿತ್ತ್ತು, ಆದರೆ ಲಿಂಗವಂತರಲ್ಲಿ ತಾಯಿಯ ಗರ್ಭದಲ್ಲಿರುವ ಮಗುವಿಗೆ ಲಿಂಗಧಾರಣೆ ಮಾಡುವುದರಿಂದ ಸೂತಕವಿಲ.್ಲ ಜನನ ಸೂತಕ, ಮರಣ ಸೂತಕ, ಮಹಿಳೆಯರು ರಜ ಸೂತಕ. ಜಾತಿ ಸೂತಕ ಇವುಗಳನ್ನು ಶರಣರು ನಿರಾಕರಿಸಿದರು. ಶಿವಭಕ್ತರಾಗಿ, ಶಿವಧರ್ಮ ಪ್ರೇಮಕ್ಕಾಗಿ, ಬದುಕನ್ನ ಸ್ವೀಕರಿಸಬೇಕೆಂದು ಸಾರಿದವರು ಶರಣರು. ಬಸವಣ್ಣನು ಪಂಚಮಹಾ ಸೂತಕಕ್ಕಂಜುವುದು ಕೂಡಲ ಸಂಗನ ನಾಮಕ್ಕಯ್ಯ ಎನ್ನುತ್ತಾನೆ. ವೈದಿಕರ ಸೂತಕಗಳು, ಅಸ್ಪøಶ್ಯತೆಯ ವಾತಾವರಣವನ್ನು ಮುಂದು ಮಾಡಿದರೆ, ಲಿಂಗವಂತರ ಸೂತಕಗಳು ಭಿನ್ನವಾಗಿ ವಿಶಿಷ್ಟವಾಗಿ. ಮನುಷ್ಯ ಧರ್ಮದ ಸತ್ಯವನ್ನು ಹೇಳುತ್ತವೆ. ದಾಸಿ ಪುತ್ರನಾಗಲಿ, ವೇಶ್ಯಾಪುತ್ರನಾಗಲಿ, ಶಿವಲಿಂಗ ದೀಕ್ಷೆಯಾದ ಬಳಿಕ, ಸಾಕ್ಷಾತ್ ಶಿವನೆಂದು ವಂದಿಸಿ ಬೇಕೆನ್ನುತ್ತಾರೆ. ಪ್ರಾಣಲಿಂಗಸ್ಥಲದ ಅನುಭೂತಿ ಪಡೆದ ಶರಣರು, ಲಿಂಗವೇ ಪ್ರಾಣ. ಪ್ರಾಣವೇ ಲಿಂಗವೆಂದು, ಸ್ಪಷ್ಟಪಡಿಸಿದರು. ಶಿವಶಕ್ತಿಯರ ಸಾಮರಸ್ಯವನ್ನೇ ಪ್ರಾಣಲಿಂಗದಲ್ಲಿ ಶರಣರು ಕಂಡರು.
ಸಾವು ಸರ್ವರಿಗೆ ಸಮವಾದದ್ದು, ಸಂಸಾರಿ ಸತ್ತರೆ ಸೂತಕವೆನ್ನುತ್ತೇವೆ ಮಠದ ಸ್ವಾಮಿಗಳು ಐಕ್ಯವಾದ ಸೂತಕ ನಿಷಿದ್ದವಾಗಿದೆ. ಯೋಗಿಯಾದವನ ಶರೀರ ಪವಿತ್ರ, ದರ್ಶನದಿಂದ ಸ್ಪರ್ಶಗಳಿಂದ ಪಾಪ ಪರಿಹಾರ ಎಂಬ ನಂಬಿಕೆ ಇದೆ. ಸಾವಿನಲ್ಲೂ ಜನಮನ್ನಣೆ ಗಳಿಸಿ. ಅಖಂಡ ಜೀವರಾಶಿಗಳಿಗೆ ಲೇಸನ್ನೇ ಬಯಸ ತಕ್ಕಂತವರು ದೈವಸ್ವರೂಪಿಗಳೆಂಬ ನಂಬಿಕೆ ಇದೆ. “ಶರಣರ ಸಾವು ಮರಣದಲ್ಲಿ ನೋಡು” ಎನ್ನುವಂತೆ ಶರಣರು ನಡೆದಾಡಿದ ಕಾಲ, ದೇಶ, ಸ್ಥಳಗಳು ಪವಿತ್ರವಾದವುಗಳು. ಅಂಥವರ ಜನ್ಮದಿನವನ್ನು ಜಯಂತಿ ಎಂದು ಆಚರಿಸುತ್ತೇವೆ.
ಆದರೆ ಶರಣರು
ಶಿವಪೂಜೆ ಎತ್ತ || ವಿಷಯದ ಸವಿ ಎತ್ತ
ಆ ವಿಷಯದ ಸವಿ || ತಲೆಗೇರಿ ಶಿವಪೂಜೆ
ಬಿಟ್ಟು || ವೇಶಿಯರ ಎಂಜಲು ಹೇಸದೆ
ತಿಂಬ || ದೋಷಿಗಳೇನೆಂಬೆ ರಾಮಾನಾಥ.
ಎಂದು ಜೇಡರ ದಾಸಿಮಯ್ಯ ಹೇಳುತ್ತಾನೆ. ಲೌಕಿಕ ಜೀವನದ ಅರಿವೆ ವಿಷಯಗಳು. ನಿಜವಾದ ಶರಣನು, ಶಿವ ವ್ರತಾಚರಣೆಯನ್ನು ಮಾಡಿ. ಗುರುಲಿಂಗಕ್ಕೆ ಅರ್ಪಿಸುತ್ತಾನೆ. ಲಿಂಗದಲ್ಲಿ ಪ್ರೇಮ, ಜಂಗಮ ದಲ್ಲಿ ದಾಸೋಹ, ಗುರುಪೂಜೆಯಲ್ಲಿ ಪರಮ ನಿಷ್ಠೆಗಳನ್ನು ಹೊಂದಿರುತ್ತಾನೆ. ಈ ವಿಷಯಗಳು ಆಗೋಚರವೆನಿಸಿದರೂ ಪದೇ-ಪದೇ ಬೇಕೆಂಬ ವ್ಯಾಂಛೆಕಾಡುತ್ತದೆ. ಶಬ್ದ ಸ್ಪರ್ಶ ರೂಪ, ರಸ, ಗಂಧಗಳು, ಅರಿವನ್ನು ಎಚ್ಚರಿಸಿ ತಕ್ಕಂತವುಗಳು. ವಿಷಯಗಳಿಗಿಂತ ಶಿವ ಪೂಜೆ ಶ್ರೇಷ್ಟ. ಶಿವಧ್ಯಾನವ ಬಿಟ್ಟು. ಶಿವಪೂಜೆಯ ಬಿಟ್ಟು ಇಂದ್ರಿಯ ವ್ಯಾಮೋಹಕ್ಕೆ ವಶವಾದರೆ, ಶರಣ ಧರ್ಮಕ್ಕೆ ದ್ರೋಹ ಮಾಡಿದಂತೆ, ವೇಶಿಯರ ಎಂಜಲು ಹೇಸದೆ ತಿನ್ನುವವನು ಮಹಾಪಾತಕ, ಶರಣ ಧರ್ಮಕ್ಕೆ ಸೂತಕ ಎಂದು ಎಚ್ಚರಿಸಿದ್ದಾರೆ.
ಕಡಕೋಳ್ ಮಡಿವಾಳಪ್ಪನ ಈ ತತ್ವಪದವನ್ನು ಗಮನಿಸಬೇಕು.
“ಹ್ಯಾಂಗ ಭ್ರಾಂತಿ ನೀಗುತಿ|| ನೀ ಹ್ಯಾಂಗ ಮಹಾಂತನಾಗುತಿ
ಹಾಂಗ ಹಿಂಗ ಹೊತ್ತುಗಳೆದು|| ಹೀಗೆ ನೀ ಸತ್ತುಹೋಗುತಿ
ಸಾವಿನ ನಂತರವು ಅವರ ಆತ್ಮಾವಲೋಕನದ ರೂಪಕಗಳು ನಮ್ಮ ಬದುಕಿನ ಸಂಘರ್ಷಗಳಾಗಿವೆ.
ಸೂತಕದ ಮನೆಗೆ ಅಶೌಚವೆನ್ನುತ್ತಾರೆ. ಅಶೌಚವೆಂದರೆ ಅಶುಚಿತ್ವ ಎಂಬ ಅರ್ಥ ಬರುತ್ತದೆ. ಎಂದರೆ ನಾವು ಅಶುಚಿಯಾಗಿದ್ದೇವೆ, ಶುಚಿತ್ವದಲ್ಲಿ ಎರಡು ತೆರನಾಗಿದೆ 1) ಅಂತಃ ಶುಚಿತ್ವ 2) ಬಹಿಃ ಶುಚಿತ್ವ
ಅಂತಃ ಶುಚಿತ್ವವೆಂದರೆ ಮನಸ್ಸನ್ನು ಶುಚಿಯಾಗಿಟ್ಟಿಕೊಳ್ಳುವುದಾಗಿದೆ. ಶರಣರ ದೃಷ್ಟಿಯಲ್ಲಿ ಅಶೌಚವು ಮನಸ್ಸಿಗೆ ಹೊರತು ದೇಹಕ್ಕಲ್ಲ. “ನುಡಿದಂತೆ ನಡೆ ಇದೇ ಜನ್ಮಕಡೆ”ಎಂಬ ಸಂದೇಶದೊಂದಿಗೆ, ವೈಚಾರಿಕತೆಯನ್ನು ಬಿಂಬಸಿದರು.
ನಾನು ಎಂಬ ಅಹಂಕಾರವನ್ನು ಮನಸಿನ ಸೂತಕವೆಂದು ಖಂಡಿಸಿದರು. ನನ್ನದು ನನ್ನವರು ಎಂಬ ಮೋಹ ತ್ಯಜಿಸಬೇಕು. ನಾನೊಬ್ಬನೇ ಸುಖವನ್ನು ಅನುಭವಿಸಬೇಕೆಂಬ ಮನದ ಅಭೀಪ್ಸೆ, ಕಾಮ, ಐಶ್ವರ್ಯ, ವಿದ್ಯೆಯ ಮದ, ಸಂಗ್ರಹಿಸುತ್ತಲೇ ಇರುತ್ತಾರೆ. ಇತರರನ್ನು ಕಂಡರೆ ಮಾತ್ಸರ್ಯ, ಅವ್ಯಕ್ತವಾದ ಭಯ, ಕ್ರೌರ್ಯ ಹಿಂಸಾಚಾರ. ಹೀಗೆ ಸಾವಿರಾರು ಮುಖವಾಡಗಳು ಮನುಷ್ಯನನ್ನು ಹಿಂಬಾಲಿಸುತ್ತವೆ. ಇವುಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ನಿವಾರಣೆ ಮಾಡುವುದೇ ಅಶೌಚ ಸೂತಕವೆಂದರು ಶರಣರು.
ಹೊಲೆಯುಂಟೆ|| ಲಿಂಗವಿದ್ದಡೆಯಲ್ಲಿ
ಕುಲವುಂಟೆ|| ಜಂಗಮವಿದ್ದಡೆಯಲ್ಲಿ
ಎಂಜಲುಂಟೇ|| ಪ್ರಸಾದ ವಿದ್ದಡೆಯಲ್ಲಿ
ಅಪವಿತ್ರದ ನುಡಿಯ|| ನುಡಿವ ಸೂತಕವೇ ಪಾತಕ,
ನಿಷ್ಕಳಂಕ || ನಿಜೈಕ್ಯ || ತ್ರಿವಿಧ ನಿರ್ಣಯ||
ಕೂಡಲ ಸಂಗಮದೇವ|| ನಿಮ್ಮ ಶರಣರಿಗಲ್ಲದಿಲ್ಲ.
ಹೊಲೆ ಎಂದರೆ ಮಲಿನ. ಲಿಂಗವಿದ್ದಲ್ಲಿ ಮಲಿನವಿರಲು ಸಾದ್ಯವೆ. ಲಿಂಗವು ಎಲ್ಲಾ ಅಸ್ಪøಶ್ಯತೆಯನ್ನು ತೊಲಗಿಸುವ ವಸ್ತುವಾಗಿದೆ. ಜನನ ಮರಣ ಮುಟ್ಟು ಇವು ಸೂತಕಗಳಲ್ಲ್ಲ ಎನ್ನುತ್ತಾನೆ ಬಸವಣ್ಣ. ಈ ಎಲ್ಲ ಮಲಿನಗಳನ್ನು ಹೊಗಲಾಡಿಸುವ ಶಕ್ತಿ ಲಿಂಗಕ್ಕಿದೆ. ಜಂಗಮ ವಿರುವ ಕಡೆ, ಜಾತಿಯ ವಿಷಯವಿರಲು ಸಾದ್ಯವಿಲ್ಲ. ಅಂದರೆ ಪ್ರಸಾದ ಎಂದಿಗೂ ಅಪವಿತ್ರವಲ್ಲ. ಎಂದು ಹೇಳುತ್ತಾರೆ. ನಮ್ಮ ನುಡಿಗಳಲಲ್ಲಿ ಮಾತುಗಳಲ್ಲಿ ಮನುಷ್ಯನ ನಡತೆಯನ್ನು ತೋರಿಸುತ್ತದೆ.
ಮನದ ಸೂತಕ ದೇಹದ ಸೂತಕಕ್ಕಿಂತಲೂ ಅಪಾಯಕಾರಿ. ಅಲ್ಲಮ ಪ್ರಭು ಅವರು ಒಂದು ವಚನದಲ್ಲಿ ಹೇಳುನ್ನಾನೆ. ಕಂಗಳ ಸೂತಕ, ಶಬ್ದ ಸೂತಕ, ಭಾವ ಸೂತಕವೆಂದು ಬಳಸುತ್ತಾನೆ.
ಅಪವಿತ್ರ ನುಡಿಯನ್ನು ನುಡಿಯವುದೇ ಸೂತಕ. ಕೆಟ್ಟ ಮಾತುಗಳನ್ನಾಡಿದರೆ ಪಶ್ಚಾತಾಪ ಪಡಬೇಕೆ ಹೊರತು ಬೇರೆ ವಿಷಯೆಗಳಿಗಲ್ಲ. ತ್ರ್ರಿವಿಧ ನಿರ್ಣನಯವನ್ನು ಕೊಡುವವರು ಲಿಂಗ ಜಂಗಮ ದಾಸೊಹಿಗಳು ನಿರ್ಣಾಯಕರು ಆಗಿದ್ದಾರೆ. ಮನುಷ್ಯನ ನಡತೆ. ತನ್ನ ಕಾಯ. ಮತ್ತು ಗುಣಗಳಿಂದ ಅಳಿಯಬಹುದು. ಬದಲಾಗಿ ತನ್ನ ಮೂಢ ನಂಬಿಕೆಗಳು. ಕೆಲವು ಆಚರಣೆಗಳಿಂದಲ್ಲ.
ಸೂತಕ ಎನ್ನುವುದು ಶೋಕಾಚರಣೆಯ ಅವಧಿಯಾಗಿರುತ್ತದೆ. ಸೋಂಕು ರೋಗ ಪೀಡಿತರ ಮನೆಗೆ ಯಾರೇ ಹೋದರೂ ಅವರಿಗೆ ಸೋಂಕು ಅಂಟಿಕೊಳ್ಳುವ ಸಾಧ್ಯತೆಯಿತ್ತು. ಹೀಗಾಗಿ ಯಾರು ಸಾವಿನ ಮನೆಗೆ ಹೋಗಲು ಇಷ್ಟಪಡುತ್ತಿರಲಿಲ್ಲ. ಸೋಂಕು ರೋಗ ತಪ್ಪಿಸಲು ಪುರಾಣಕಾರರು ಸೂತಕದ ಪರಿಕಲ್ಪನೆಯನ್ನು ಧರ್ಮದ ಚೌಕಟ್ಟಿನಲ್ಲಿ ತಂದು, ಅವರಿಗೆ ಸಾಮಾಜಿಕ ಬಹಿಷ್ಕಾರವನ್ನು ತಂದಿರಬೇಕು. ಸಾವಿನ ಮನೆಗೆ ಅನಿವಾರ್ಯವಾಗಿ ಹೋಗಬೇಕಾದವರು, ಮನೆಯಿಂದ ಬಂದ ಕೂಡಲೆ ನದಿಗೋ ಕೆರೆಗೋ ಭಾವಿಗೋ ಹೋಗಿ ಸ್ನಾನ ಮಾಡಿ ಬರಬೇಕಿತ್ತು. ಹೀಗಾಗಿ ಅಂದು ಸೂತಕದ ದಿನಗಳು ಅರ್ಥವತ್ತಾಗಿತ್ತು.
ಜ್ಞಾನವೊಂದೇ ಮುಕ್ತಿಗೆ ಸಾಧನೆಯಲ್ಲ. ಪವಿತ್ರತೆಯು ನಮ್ಮ ನಂಬಿಕೆಯನ್ನು ಆಧರಿಸಿದ್ದಾಗಿದೆ.
ಶರಣರ ಷಟ್ ಸ್ಥಲಗಳ ಪ್ರಕಾರ ಕುಲ ಸೂತಕ, ಛಲಸೂತಕ, ತನುಸೂತಕ, ಮನಸೂತಕ, ನೆನಹು ಸೂತಕ, ಭಾವ ಸೂತಕಗಳೆಂಬ ಆರು ಸೂತಕಗಳೆನ್ನುತ್ತಾರೆ.
ಅಂಗಲಿಂಗವೆಂಬನ್ನಕ್ಕರ || ಕಾಯದ ಸೂತಕ
ಕಾಯಲಿಂಗ ವೆಂಬನ್ನಕ್ಕರ || ಅರಸುವುದೇ
ಜನನ ಸೂತಕ || ಮರೆವುದೆ ಮರಣ ಸೂತಕ
ಸೂತಕವ ಹಿಂಗಿ || ಅಜಾತನಾಗಬಲ್ಲಡೆ
ಆತಂಗೆ || ಏತರ ಬಂಧನವಿಲ್ಲ
ಕಾಮಧೂಮ ಧೂಳೇಶ್ವರ.
ಎಂದು ಮಾದಾರ ಧೂಳಯ್ಯ ಹೇಳುತ್ತಾನೆ. ಇಲ್ಲಿ ಜನನ ಮರಣ ಕಾಯ ಸಂಬಂಧದ ಸೂತಕ, ನಂಬಿಕೆಗಳನ್ನು ಬೇರೆ ಪರ್ಯಾಯ ಬಗೆಯಲ್ಲಿ ಅರ್ಥೈಸುತ್ತಾ ಈ ಬಂಧನಗಳನ್ನು ಕಳೆದುಕೊಂಡ ಶರಣತ್ವದಲ್ಲಿ ಯಾವ ಸೂತಕ ಪಾತಕಗಳು ಇರುವುದಿಲ್ಲವೆಂದು, ಮಾದಾರ ಧೂಳಯ್ಯನ ಚಿಂತನೆ, ಅಂಗ ಸೂತಕ, ಪ್ರಾಣ ಸೂತಕಗಳನ್ನು ಕಳೆದುಕೊಳ್ಳುವುದೆಂದರೆ, ಕಾಯವನ್ನು ಕಾಯಕ ಸಂಬಂಧವಾಗಿಸುತ್ತಾ. ಕಾಯವನ್ನೇ ಕೈಲಾಸವಾಗಿಸುವ ಪರಿಕ್ರಮ. ಇದು ಬಸವಣ್ಣವರು ಹೇಳುವ “ದೇಹವನ್ನೇ ದೇವಾಲಯವಾಗಿಸುವ ಮಾರ್ಗ, ಮರಣವೇ ಮಹಾನವಮಿ ಎಂದು ಭಾವಿಸಿದ ಶರಣರ ಮಾರ್ಗ”.
ಈ ದಾರಿಯನ್ನು ಬಿಟ್ಟು ಕಂಗಳ ಸೂತಕದಿಂದ ಕಾಣಿಸಿಕೊಂಬುದು. ಮನದ ಸೂತಕದಿಂದ ನೆನೆಯಿಸಿಕೊಂಬುದು ಕಾಯದ ಸೂತಕದಿಂದ ಮುಟ್ಟಿಸಿಕೊಂಬುದು, ಈ ಮೂರರ ಸೂತಕದಲ್ಲಿ ಗಾರಾಗುತ್ತ ಮೀರಿ ಕಾಬ ಅರಿವು ಸೂರೆಯೇ ಎಂದು ದೂಳಯ್ಯ ಪ್ರಶ್ನಿಸುತ್ತಾನೆ.
ಕಣ್ಣು, ಮನ, ಕಾಯಗಳು, ಮೈಲಿಗೆ (ಸೂತಕ) ಗಳಾದರೆ, ಬದುಕು ಜಿಡ್ಡು ಮೆತ್ತಿದ ಕನ್ನಡಿಯ ಪ್ರತಿಫಲದಂತೆ, ಬಂದುದನರಿಯದೆ, ಕುರಿಹಿನ ಹಾವಸೆಯಲ್ಲಿ ಮೆರೆದು ಒರಗುವ ಪರಿ.
ಜೀವನದ ಮೌಲ್ಯದಲ್ಲಿ ಸೂತಕವೆನ್ನುವ ನಂಬಿಕೆಯು ಅವನ ಅಪವಿತ್ರತೆಯನ್ನು ಸಾರುತ್ತದೆ. ಹಾಗೂ ನಮಗೆ ನೀತಿಯ ಬೋಧನೆಯನ್ನು ಹೇಳುತ್ತದೆ. ಜನನ, ಜೀವನ, ಸಾವಿನ ನಂಬಿಕೆಯ ಜೊತೆಗೆ ಸೂತಕ ತೆಗೆಯುವುದು ಎಂದು ಹೇಳುತ್ತಾ. ನಾನು ಮಾಡಿದ ಕರ್ಮಗಳಿಂದ, ನನ್ನನ್ನು ರಕ್ಷಿಸು ಎಂದು ದೇವರನ್ನು ಸ್ತುತಿಸುವುದಾಗಿದೆ. “ಗಂಗೆಗೆ ಕಟ್ಟಿಲ್ಲ ಲಿಂಗಕ್ಕೆ ಮುಟ್ಟಿಲ್ಲ” ಎಂಬ ಗಾದೆಯೇ ಇದೆ. ಹೀಗಾಗಿ ಇಂತಹ ಸಂವೇದನಾತ್ಮಕ ವಿಚಾರಗಳನ್ನು ಕಾಲಕ್ರಮೇಣ ಅರಿತು ಶರಣರು ಖಂಡಿಸಿದ್ದಾರೆ. ಹೀಗಾಗಿ ಭೌತಿಕ ಸ್ವರೂಪದ ಸೂತಕವನ್ನು ನಿರಾಕರಿಸಿ ಪ್ರತಿಭಟಿಸಿದ್ದಾರೆ.
–ಡಾ.ಸರ್ವಮಂಗಳ ಸಕ್ರಿ, ಕನ್ನಡ ಉಪನ್ಯಾಸಕರು, ರಾಯಚೂರು