ಜನಪದ ಸಾಹಿತ್ಯ
ಭೂತಾಯಿ ಸೀಮಂತದ ಹಬ್ಬ ಚರಗ
ಜನಪದರ ಬದುಕು ನಂಬಿಕೆ,ಸಂಪ್ರದಾಯ, ಆಚರಣೆಗಳ ಗೊಂಚಲು.ವರ್ಷದ ಹನ್ನೆರಡು ತಿಂಗಳು ಜನಪದರು ಋತುಮಾನದ ಪರಿವರ್ತನೆಗೆ ಅನುಗುಣವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಾರೆ.
ಜನಪದರಿಗೆ ಪ್ರಕೃತಿಯೇ ದೈವ.ಪ್ರಾಚೀನ ಕಾಲದಲ್ಲಿ ಕಾಲಮಾನಕ್ಕೆ ಅನುಗುಣವಾಗಿ ನಿಸರ್ಗದಲ್ಲಾಗುವ ಬದಲಾವಣೆಗಳಿಂದ ಅಚ್ಚರಿಗೊಂಡ ,ಭೀತಿಗೊಂಡ ಜನಪದರು ಸಾಮೂಹಿಕವಾಗಿ ಪ್ರಕೃತಿಯನ್ನು ಪೂಜಿಸಿ, ಒಲಿಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾದರು.ಜನಪದರ ಇಂತಹ ಪ್ರಯತ್ನಗಳೇ ಆಚರಣೆಗಳ ಉಗಮಕ್ಕೆ ಕಾರಣವಾಗಿವೆ.
ಜನಪದರ ಮೂಲ ಉದ್ಯೋಗ ಕೃಷಿ .ಕೃಷಿಯೇ ಅವರ ಬದುಕಿನ ಆಸರೆ.ಹೀಗಾಗಿ ನಮ್ಮಲ್ಲಿ ಕಾಣುವ ಬಹುತೇಕ ಹಬ್ಬಗಳು ಬೇಸಾಯ ಕೇಂದ್ರಿತವಾದವುಗಳೆ.ಜನಪದರು ಋತುಮಾನಕ್ಕನುಗುಣವಾಗಿ ತಮ್ಮ ಕೃಷಿ ಕ್ಷೇತ್ರದಲ್ಲಾಗುವ ಬದಲಾವಣೆಯನ್ನು ಅನುಸರಿಸಿ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಜೋಕುಮಾರನ ಹಬ್ಬ, ಶೀಗವ್ವ,ಗುಳ್ಳವ್ವ,ಪಂಡರವ್ವ,ವಾರ ಹಿಡಿಯುವದು ಮುಂತಾದವುಗಳೆಲ್ಲವೂ ಕೃಷಿಗೆ ಸಂಬಂಧಿಸಿದ ಹಬ್ಬಗಳೆ ಆಗಿವೆ.ಅವುಗಳಲ್ಲಿ “ಚರಗ ಚೆಲ್ಲುವ” ಆಚರಣೆಯು ಒಂದು.
ಚರಗ ಚೆಲ್ಲುವ ಆಚರಣೆ ವರ್ಷದಲ್ಲಿ ಎರಡು ಬಾರಿ ನಡೆಯುತ್ತದೆ.ಮುಂಗಾರು ಹಂಗಾಮಿನಲ್ಲಿ ಬರುವ ಶೀಗೆಹುಣ್ಣಿಮೆ ಒಮ್ಮೆ ಹಾಗೂ ಹಿಂಗಾರು ಹಂಗಾಮಿನಲ್ಲಿ ಬರುವ ಎಳ್ಳಮಾಸೆಗೆ ಮತ್ತೊಮ್ಮೆ ಹೀಗೆ ಎರಡು ಬಾರಿ ಚರಗ ಚೆಲ್ಲಲಾಗುತ್ತದೆ.
ಹೊಲದಲ್ಲಿ ಫಸಲು ಕಾಳುಗಟ್ಟುವ ವೇಳೆಯಲ್ಲಿ ಬರುವ ಈ ಆಚರಣೆ ರೈತಾಪಿ ಮಕ್ಕಳಿಗೆ ಸಂಭ್ರಮದ ಹಬ್ಬ. ಹಾಗಾಗಿ ಚರಗ ಚೆಲ್ಲುವದು ಒಂದು ವಾರವೋ, ಹದಿನೈದು ದಿನಗಳು ಇರುವಾಗಲೇ ಚರಗ ಚೆಲ್ಲುವ ಹಬ್ಬಕ್ಕೆ ತಯಾರಿ ನಡೆಸುತ್ತಾರೆ. ಹಬ್ಬ ಹತ್ತಿರ ಬರುತ್ತಿರುವಂತೆಯೇ ಪುರುಷರು ಚಕ್ಕಡಿ ರಿಪೇರಿ ಮಾಡಿಸುವ, ಅದಕ್ಕೆ ಸವಾರಿ ಹಾಕುವ, ಎತ್ತುಗಳಿಗೆ ಕಟ್ಟುವ ಗಂಟೆ, ಗೆಜ್ಜೆಸರ,ಝುಲಾಗಳನ್ನು ಹೊರಗೆ ತೆಗೆಯುವ ಕಾರ್ಯದಲ್ಲಿ ತೊಡಗುತ್ತಾರೆ. ಹೆಣ್ಣುಮಕ್ಕಳು ಚರಗ ಚೆಲ್ಲುವದಕ್ಕಾಗಿ ಎಳ್ಳುಹಚ್ಚಿದ ಸಜ್ಜಿರೊಟ್ಟಿ,ಹುರಿಯಕ್ಕಿ ಕರ್ಚಿಕಾಯಿ,ಶೇಂಗಾ ಹೋಳಿಗೆ,ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಅಗಸಿ ಹಿಂಡಿ ಮುಂತಾದವುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತಾರೆ. ಜೊತೆಗೆ ಕುಟುಂಬದವರನ್ನು,ನೆಂಟರನ್ನು ಚರಗ ಚೆಲ್ಲುವದಕ್ಕಾಗಿ ಕರೆಯಿಸಿಕೊಳ್ಳುತ್ತಾರೆ.ಹೊಲ ಇಲ್ಲದ ಅಕ್ಕಪಕ್ಕದ ಮನೆಯವರಿಗೂ ತಮ್ಮ ಹೊಲಕ್ಕೆ ಚರಗ ಚೆಲ್ಲಲು ಬರಬೇಕೆಂದು ಆಮಂತ್ರಣ ನೀಡಿರುತ್ತಾರೆ.
ಹಬ್ಬದ ದಿನ ಬೆಳಿಗ್ಗೆಯೇ ಎದ್ದು ಪುರುಷರು ಎತ್ತುಗಳ ಮೈತೊಳೆದು,ಪೂಜಿಸಿ, ಅವುಗಳಿಗೆ ಗೆಜ್ಜೆಸರ ಝೂಲಾ ಹಾಕಿ, ಚಕ್ಕಡಿಗೆ ಸವಾರಿ ಕಟ್ಟಿ ಹೊಲಕ್ಕೆ ಹೋಗಲು ತಯಾರಿ ಮಾಡುತ್ತಾರೆ. ಹೆಣ್ಣುಮಕ್ಕಳು ಚರಗ ಚೆಲ್ಲುವ ಸಲುವಾಗಿ ಹೋಳಿಗೆ,ಹುಗ್ಗಿ,ಕರಿಕಡಬು,ಸಜ್ಜಿಕಡಬು,ಅನ್ನ,ಸಾರುಗಳನ್ನು,ಪುಂಡಿಪಲ್ಲೆ,ಚವಳಿಕಾಯಿ,ಕುಂಬಳಕಾಯಿ, ಬದನೆಕಾಯಿ ಎಣ್ಣಿಗಾಯಿ ಮುಂತಾದ ಕಾಯಿಪಲ್ಯಗಳನ್ನು ತಯಾರಿಸುತ್ತಾರೆ. ಇವೆಲ್ಲ ಕಾಯಿಪಲ್ಯಗಳು,ಅಡುಗೆಗಳು ಚರಗ ಚೆಲ್ಲವ ನೈವೇದ್ಯಕ್ಕೆ ಕಡ್ಡಾಯವಾಗಿ ಇರಲೇಬೇಕು.( ಆದರೆ ಆಧುನಿಕ ಮಹಿಳೆಯರು ಇಷ್ಟೆಲ್ಲ ತಿನ್ನವವರು ಇಲ್ಲ, ಮಾಡುವ ತೊಂದರೆಯೂ ಬೇಡವೆಂದು ಒಂದು ಸಿಹಿಯನ್ನು ಮತ್ತು ಎಲ್ಲಾ ರೀತಿಯ ತರಕಾರಿ ಹಾಕಿ ಒಂದು ಪಲ್ಲೆಯನ್ನು ತಯಾರಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.) ಇವುಗಳೊಂದಿಗೆ ಊಟದಲ್ಲಿ ಬಡಿಸಿಕೊಳ್ಳಲು ಉಳ್ಳಾಗಡ್ಡಿ, ಅಕ್ಕರಕಿ,ಮೆಂತೆಪಲ್ಯ,ಸವತಿಕಾಯಿ,ಗಜ್ಜರಿ ಮುಂತಾದವುಗಳನ್ನು ಸಿದ್ದಪಡಿಸಿ ಕೊಳ್ಳುತ್ತಾರೆ. ಇವುಗಳೊಂದಿಗೆ ಹೊಲದಲ್ಲಿ ಪೂಜೆಗೆ ಬೇಕಾದ ನೀರು, ವಿಭೂತಿ, ಕುಂಕುಮ,ತೆಂಗಿನಕಾಯಿ, ಉದಬತ್ತಿ,ನೈವೇದ್ಯ ಮುಂತಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳುತ್ತಾರೆ.
ಇದೆಲ್ಲಾ ಹೋಲಕ್ಕೆ ಒಯ್ಯುವ ವಸ್ತುಗಳ ತಯಾರಿ ಆದರೆ ಇನ್ನೂ ಹೊಲಕ್ಕೆ ಹೊರಟ ರೈತಾಪಿ ಮಕ್ಕಳ ತಯಾರಿಯು ಜೋರಾಗಿಯೇ ಇರುತ್ತದೆ.ಹೆಣ್ಣುಮಕ್ಕಳು ಹಬ್ಬ ಹರಿದಿನಗಳಲ್ಲಿ, ಮದುವೆಗೆ ಉಡಲು ಇಟ್ಟ ಇಳಕಲ್ ಸೀರೆ, ಕುಪ್ಪಸ ತೊಟ್ಟು ತಯಾರಾದರೆ,ಪುರುಷರು ಧೋತರ ಉಟ್ಟುಕೊಂಡು,ಮಕ್ಕಳು ಹೊಸ ಅರಿವೆ ಧರಿಸಿ ತಯಾರಾಗುತ್ತಾರೆ.ಮಕ್ಕಳು ಮರಿಗಳು ಬಂದ ನೆಂಟರು,ಹೊಲವಿಲ್ಲದ ಅಕ್ಕಪಕ್ಕದ ಮನೆಯವರನ್ನು ಸೇರಿಸಿಕೊಂಡು ಸವಾರಿ ಗಾಡಿ ಎರಿ ರೈತನ ಕುಟುಂಬ ಸಂಭ್ರಮದಿಂದ ಹೊಲಕ್ಕೆ ತೆರಳುತ್ತಾರೆ.
ಹೊಲಕ್ಕೆ ತೆರಳಿದ ನಂತರ ಹೊಲದಲ್ಲಿರುವ ಬನ್ನಿಗಿಡದ ಮುಂದೆ ೫ ಕಲ್ಲುಗಳನ್ನಿಡುತ್ತಾರೆ.ನಂತರ ಬನ್ನಿಗಿಡಕ್ಕು,ಆ ೫ ಕಲ್ಲುಗಳಿಗೆ, ಅಲ್ಲಿ ಬೆಳೆದು ನಿಂತ ಬೆಳೆಗು ವಿಭೂತಿ, ಕುಂಕುಮ ಹಚ್ಚಿ ಉದಿನಕಡ್ಡಿ ಬೆಳಗಿ,ಎಡೆ ಹಿಡಿಯುತ್ತಾರೆ.ನಂತರ ಅದೇ ಎಡಯನ್ನು ತೆಗೆದುಕೊಂಡು ” ಹುಲ್ಲುಲ್ಲಿಗ್ಯೋ ಸಣ್ಣಮಲ್ಲಿಗ್ಯೋ” ಎಂದು ಹೇಳುತ್ತಾ ಇಡೀ ಹೊಲದ ತುಂಬಾ ಅಡ್ಡಾಡಿ ಚರಗ ಚೆಲ್ಲುತ್ತಾರೆ. ” ಭೂತಾಯಿ ಕೊಟ್ಟ ಪ್ರತಿಯೊಂದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವ ರೈತರು ಭೂತಾಯಿ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಭೂಮಿಯ ಮೇಲಿರುವ ಪ್ರತಿಯೊಂದಕ್ಕೂ ಗೌರವ ಸಲ್ಲಿಸಲು ‘ಹುಲ್ಲುಹುಲ್ಲಿಗೂ ಶರಣು ಮಲ್ಲಿಗೆ’ ಎಂದು ಹೇಳುತ್ತಾ ಬಂದದ್ದು ಕ್ರಮೇಣವಾಗಿ ಜನಪದರ ಮಾತಲ್ಲಿ ‘ ಹುಲ್ಲಲ್ಲಿಗ್ಯೋ ಸಣಮಲ್ಲಿಗ್ಯೋ ಆಗಿರಬಹುದು ” ಎಂದು ಶ್ರೀ ವೀರೇಂದ್ರ ಶೀಲವಂತ ಅವರು ತಮ್ಮ ‘ ಕೃಷಿ ಆಚರಣೆಗಳು’ ಕೃತಿಯಲ್ಲಿ ಅಭಿಪ್ರಾಯ ಪಡುತ್ತಾರೆ.
ಚರಗ ಚೆಲ್ಲಿದ ನಂತರ ಎಲ್ಲರೂ ನೆರಳಿರುವ ಮರದ ಕೆಳಗೆ ಕುಳಿತು ತಾವು ಹೊತ್ತು ತಂದ ಭಕ್ಷಭೋಜನಗಳನ್ನು ಊಟ ಮಾಡುತ್ತಾರೆ. ಈ ಊಟದಲ್ಲಿ ತಮ್ಮ ಪರಿವಾರ ಮಾತ್ರವಿರದೆ ಹತ್ತಿರದ ನೆಂಟರು,ಆಯಗಾರರು,ಹೊಲದ ಆಳುಗಳು ಸೇರಿರುತ್ತಾರೆ ಜೊತೆಗೆ ಅಲ್ಲಿ ಯಾರೇ ಹಾದು ಹೋಗುತ್ತಿರಲಿ ಅವರನ್ನು ಬಿಡದೆ ಕರೆದು ತಮ್ಮ ಭೋಜನದಲ್ಲಿ ಭಾಗಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ಈ ಊಟದ ವೇಳೆಯಲ್ಲಿ ವರ್ಷದ ಮಳೆಬೆಳೆ,ತಮ್ಮ ಕಷ್ಟಸುಖದ ಚರ್ಚೆಗಳು ನಡೆಯುತ್ತಿರುತ್ತವೆ.ಎಳ್ಳಮಾಸಿ ಚರಗ ಆಗಿದ್ದರೆ ಆಗಲೇ ಕಾಳುಕಟ್ಟಿದ ತೆನೆಗಳಲ್ಲಿ ಬೆಳಸಿಮಾಡಲು ಜೋಳವನ್ನು ,ಉಮಗಾಯಿ ಮಾಡಲು ಗೊಧಿಯನ್ನು,ಕಡಲೆ ಸುಲಗಾಯಿಯನ್ನು ಕಿತ್ತುಕೊಂಡು ಈ ವರ್ಷ ಬರುವ ಬೆಳೆಯ ಬಗ್ಗೆ ಚರ್ಚಿಸುತ್ತಾ ಮತ್ತೆ ಸಾಯಂಕಾಲದ ಹೊತ್ತಿಗೆ ಚಕ್ಕಡಿ ಎರಿ ಮನೆಗೆ ಮರಳುತ್ತಾರೆ.
ಕೆಲವೊಂದು ಗ್ರಾಮಗಳಲ್ಲಿ ಶೀಗಿಹುಣ್ಣಿಮೆ ಚರಗವನ್ನು ಹೊತ್ತು ಹೊಂಡುವದರೊಳಗೆ ಚೆಲ್ಲಿ ಬರಬೇಕೆಂಬ ಪದ್ಧತಿಯು ಇದೆ.
ಚರಗ ಚೆಲ್ಲುವ ಆಚರಣೆ ಮೇಲ್ನೋಟಕ್ಕೆ ಕೇವಲ ಸಂಪ್ರದಾಯವಾಗಿ ಕಂಡರೂ,ಇದು ಮಾನವನಿಗೂ ಮತ್ತು ಪ್ರಕೃತಿಗೂ ಇರುವ ಅವಿನಾಭಾವ ಸಂಬಂಧದ ಸೂಚಕವಾಗಿ ಆಚರಣೆಗೊಳ್ಳುತ್ತದೆ.ಪ್ರಕೃತಿಯನ್ನು ತಾಯಿ ಎಂದು, ಬಸವನನ್ನು ತಂದೆ ಎಂದು,ಚಂದ್ರನನ್ನು ಮಾವ ಎಂದು ಸಂಭೋದಿಸುವ ಜನಪದರು ಪ್ರಕೃತಿಯೊಂದಿಗೆ ನಿಷ್ಕಲ್ಮಷ ಬಾಂಧವ್ಯವನ್ನು ಬೆಳಸಿಕೊಂಡಿದ್ದಾರೆ.ಜೊತೆಗೆ ತಾವು ಅನುಭವಿಸುವ ಲೌಕಿಕ ಅನುಭವಗಳನ್ನು ಚೈತನ್ಯಯುತವಾದ ಪ್ರಕೃತಿಯೊಂದಿಗೆ ಹೊಂದಿಸುತ್ತಾ ಬಂದಿದ್ದಾರೆ. ಜನಪದರ ದೃಷ್ಟಿಯಲ್ಲಿ ಹೆತ್ತ ತಾಯಿ ಬೇರೆಯಲ್ಲ.ಭೂಮಿ ತಾಯಿ ಬೇರೆಯಲ್ಲ.ಪ್ರಕೃತಿಯನ್ನು ದೈವವೆಂದು ಪೂಜಿಸುವ ಜನಪದರು ಪ್ರಕೃತಿಯಲ್ಲಿನ ಚೇತನ ಶಕ್ತಿಯನ್ನು ನೋಡಿ ಅದಕ್ಕೆ ಜೀವವಿದೆ ಎಂದು ಭಾವಿಸಿ ಪ್ರಕೃತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.ತಾಯಿ ನಮ್ಮನ್ನು ಹೆತ್ತು ಹೊತ್ತು ಸಾಕುವಂತೆ ಭೂಮಿತಾಯಿಯು ತನ್ನಲ್ಲಿ ಬೆಳೆ ಬೆಳೆದು ರೈತರಿಗೆ ನೀಡಿ ಜನರ ಹೊಟ್ಟೆ ತುಂಬಿಸುತ್ತಾಳೆ.ತಾಯಿಯ ಗುಣಗಳೆಲ್ಲವೂ ಭೂಮಿಯಲ್ಲಿರುವದರಿಂದ ಅವರು ಭೂಮಿಯನ್ನು ತಾಯಿಯೆಂದು ಭಾವಿಸುತ್ತಾರೆ.ಹೆಣ್ಣು ಮತ್ತು ಭೂಮಿ ಇಬ್ಬರಲ್ಲೂ ಹೊರುವ,ಹೆರುವ ಸಮೃದ್ಧತೆಯ ಗುಣಗಳು, ಪಾಲನೆ,ಪೋಷಣೆ ಮಾಡುವ ಮಮಕಾರ ಗುಣಗಳು ಇರುವುದರಿಂದ ಇಬ್ಬರನ್ನೂ ಸಮೀಕರಿಸಿ ನೋಡುತ್ತಾರೆ. ಅಂತಯೇ ಹೆಣ್ಣಿನ ಜೀವನದಲ್ಲಿ ತಾಯ್ತನಕ್ಕೆ ಸಂಬಂಧಿಸಿದಂತೆ ಆಚರಿಸುವ ಕ್ರಿಯೆಗಳನ್ನು ಭೂಮಿ ತಾಯಿಗೂ ಆಚರಿಸಲು ಹಂಬಲಿಸುತ್ತಾರೆ.
ಚರಗ ಚೆಲ್ಲುವದು ಭೂಮಿ ತಾಯಿಗೆ ಮಾಡುವ ಸೀಮಂತದ ಕ್ರಿಯೆ. ಗರ್ಭಿಣಿಯಾದ ಹೆಣ್ಣುಮಕ್ಕಳಿಗೆ ಸೀಮಂತ ಕಾರ್ಯ ಮಾಡುವಂತೆ ಕೃಷಿಕರು ಚರಗ ಚೆಲ್ಲುವ ಮೂಲಕ ಭೂತಾಯಿಗೆ ಸೀಮಂತ ಮಾಡುತ್ತಾರೆ. ಶೀಗಿಹುಣ್ಣಿಮೆ ,ಎಳ್ಳಮಾಸಿ ಹೊತ್ತಿಗೆ ಕಾಳು ಕಟ್ಟಿಕೊಂಡು ನಿಂತಿರುವ ಫಸಲುಗಳು ಗರ್ಭಿಣಿ ಹೆಣ್ಣಿನಂತೆ ಭಾಸವಾಗುತ್ತವೆ.ಹೆಣ್ಣು ಮಗುವನ್ನು ಹೆತ್ತು ಹೇಗೆ ಮನೆಗೆ ಆನಂದವನ್ನು ತರುತ್ತಾಳೊ ಹಾಗೆ ಭೂಮಿ ತಾಯಿ ಫಸಲು ಕೊಟ್ಟು ನಮ್ಮ ಕಣಜ ತುಂಬಿ ನಮ್ಮನ್ನು ಸಂತೋಷಗೊಳಿಸುತ್ತಾಳೆ.ಹೆಣ್ಣನ್ನು ಭೂಮಿ ತಾಯಿಯನ್ನು ಒಂದೇ ಎಂದು ಭಾವಿಸುವ ಕೃಷಿಕರು ಹೆಣ್ಣುಮಕ್ಕಳಂತೆ ಭೂತಾಯಿಗು ಸೀಮಂತ ಮಾಡ ಬಯಸುತ್ತಾರೆ. ಆಕೆಗೂ ಗರ್ಭಿಣಿ ಹೆಣ್ಣಿನಂತೆ ಬಯಕೆಗಳಿರುತ್ತವೆ ಎಂದು ಭಾವಿಸುತ್ತಾರೆ. ಆಕೆಯ ಬಯಕೆ ತೀರಿಸುವದಕ್ಕಾಗಿ ಬಗೆಬಗೆಯ ಅಡುಗೆ ಮಾಡಿ ನೈವೇದ್ಯ ಮಾಡಿ ಚರಗ ಚೆಲ್ಲುತ್ತಾರೆ.
ಆಧುನೀಕ ಜಗತ್ತು ಭೂಮಿಯನ್ನು ತಮ್ಮ ಕಾಮನೆಗಳನ್ನು ಪೂರೈಸುವ ಒಂದು ವಸ್ತು ಎಂದು ಪರಿಭಾವಿಸುತ್ತಿದೆ.ಆದರೆ ಜನಪದರು ಚೈತನ್ಯಯುತವಾದ ಪ್ರಕೃತಿಯಲ್ಲಿ ತಾಯಿಯನ್ನು ಕಾಣುತ್ತಾರೆ.ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.ಉತ್ತು ಬಿತ್ತುವ ಭೂಮಿಯಿಂದಿಗೆ ಕಳ್ಳುಬಳ್ಳಿ ಸಂಬಂಧ ಹೊಂದಿರುವ ಇವರು ಭೂತಾಯಿಗೆ ಕೃತಜ್ಞತೆ ಸಲ್ಲಿಸಲು ಹಾಕಿಕೊಂಡಿರುವ ಈ ಆಚರಣೆ ಶೃದ್ಧೆ,ನಂಬಿಕೆ, ಮುಗ್ಧ ಭಕ್ತಿಯಿಂದ ಕೂಡಿರುತ್ತದೆ.ಜನಪದರ ಈ ಮುಗ್ಧಭಕ್ತಿ ಆಧುನಿಕ ಜಗತ್ತಿನ ಕಾಲಾಚಕ್ರಕ್ಕೆ ಸಿಲುಕಿದರು ತನ್ನತನವನ್ನು ಉಳಿಸಿಕೊಂಡು ಮುನ್ನುಗುತ್ತಿರುವದು ಮಾತ್ರ ರೈತಾಪಿ ಮಕ್ಕಳು ಮತ್ತು ಭೂತಾಯಿ ನಡುವಿನ ಅನನ್ಯವಾದ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಡಾ.ರಾಜೇಶ್ವರಿ ವೀ.ಶೀಲವಂತ
ಬೀಳಗಿ