ವಿಪರ್ಯಾಸ
ಈಗ ಕೇಳುತ್ತಾಳೆ ಅವಳು
ಕೆಣಕಿ ಕೆಣಕಿ ಮುಸಿ ಮುಸಿ ನಗುತ್ತ
ಅಂದು ನನ್ನೊಂದಿಗೆ
ಬಾಳ ಕಟ್ಟಿಕೊಳ್ಳುವ ಬಯಕೆ ತೋಡಿ
ಹೇಳದೇ ಕೇಳದೇ ಇನ್ನೋರ್ವನ ಸಂಗಾತಿಯಾಗಿ ಹೋದವಳು..
ನಿನ್ನ ಬೀಡಿನೊಳಗೆ ಬಿಟ್ಟುಕೋ ಎಂದು..!!
ಮಣ್ಣಿನ ಘಮಲಿನಲಿ ಬೆರೆತು
ಬೆವರು ಹರಿಸಬೇಕಿದೆ
ಹಳ್ಳಿಗೇ ಹೊರಟು ಬಿಡೋಣ
ಹೊಲ ಗದ್ದೆಯಲಿ ಮೈಮುರಿದು
ಗೇಯ್ದು ಹಸಿರು ಬೆಳಸಿ
ಬಣ್ಣ ಬಣ್ಣದ ಹೂಗಳರಳಿಸಿ
ತೆನೆ ಕಾಳು ಒಕ್ಕಲು ಮಾಡಿ
ತೆಕ್ಕೆಗೆ ತೆಕ್ಕೆ ಹಾಯಿಸಿ
ಸೊಗಡಿನ ಸುಗ್ಗಿಯ ಮಾಡಿ
ಸಂಭ್ರಮಿಸೋಣ ಅಂತ..
ನೀನದೆಷ್ಟು ತಡವಾಗಿ ತೋಡಿಕೊಂಡೆ..?
ಮುಂಚೆಯೇ ಉಲಿಯುವುದಕ್ಕೆ
ಏನಾಗಿತ್ತು ನಿನಗೆ?
ಬೇಕಿತ್ತು ನನಗೆ ಅಂದು..
ಹೀಗೆ ಕೇಳುವವರೊಬ್ಬರು
ಯಾರೂ ಬರಲಿಲ್ಲ
ಯಾವಳೂ ಬರಲಿಲ್ಲ
ಬಂದವಳು ಒಮ್ಮೆಯೂ
ನುಡಿಯಲಿಲ್ಲ ಹೀಗೆ..
ಬಾಳೊಳಗೆ ಬಂದವಳಿಗೋ..
ಬೆವರೇ ಆಗಿ ಬರೋದಿಲ್ಲ..
ಏನಿದ್ದರೂ ಆಕರ್ಷಣೆಗೆ
ನುಲಿತಕ್ಕೆ ರಸ ನಿಮಿಷಗಳ ಕೂಟಕ್ಕೆ
ನಕ್ಕು ನಲಿಯುವುದಕ್ಕೆ
ಕೈಗೆ ಕೈ ಬೆಸೆದು ಮುಸಿ ಮುಸಿ ನಗುವುದಕ್ಕೆ
ಆಧುನಿಕ ಸ್ವರ್ಗದಂತಿರುವ
ನಗರವೇ ಬೇಕು..
ಗೌಜು ಗದ್ದಲದ
ಅಂಕು ಡೊಂಕು ಸಂದಿಗಳ
ದನಗಳ ಗಂಜಲು ಉಚ್ಚಿಷ್ಠಗಳ
ಸೊಳ್ಳೆ ನೊಣಗಳ ಕಿರಿಕಿರಿಗಳ
ಹಳ್ಳಿಯ ಗೀಜಗನ ಗೂಡು
ಎಂದಿಗೂ ಎಂದೆಂದಿಗೂ
ಬೇಡವೇ ಬೇಡ ಅವಳಿಗೆ..
ವಿಪರ್ಯಾಸವೆಂದರೆ
ಇದಲ್ಲದೆ ಮತ್ತೇನು..!!
–ಡಾ. ಲಕ್ಷ್ಮಣ ಕೌಂಟೆ