ಜಗನ್ಮಾತೆ ಅಕ್ಕಮಹಾದೇವಿ
ಗಗನದ ಗುಂಪ ಚಂದ್ರಮ ಬಲ್ಲನಲ್ಲದೆ;
ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯಾ ?
ನದಿಯ ಗುಂಪ ತಾವರೆ ಬಲ್ಲುದಲ್ಲದೆ;
ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ ?
ಪುಷ್ಪದ ಪರಿಮಳವ ದುಂಬಿ ಬಲ್ಲುದಲ್ಲದೆ;
ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ ?
ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ;
ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ ?
ಮೇಲಿನ ವಚನದಲ್ಲಿ ಅಕ್ಕ ಹೇಳಿರುವಂತೆ..
ಗಗನದ ಚಿತ್ರಣವನ್ನು ಲಕ್ಷಲಕ್ಷ ತಾರೆಗಳ ಮಧ್ಯೆ ಕಂಗೊಳಿಸುತ್ತಿರುವ ಚಂದಿರನು ಬಲ್ಲನಲ್ಲದೆ,
ಆಕಾಶದಲ್ಲಿ ಹಾರಾಡುವ ಹದ್ದಿಗೆ ಆ ಅನುಭವ ಹೇಗೆ ಸಾಧ್ಯವಿಲ್ಲವೊ ಹಾಗೆ..
ನದಿಯ ಗುಂಪ ತಾವರೆ ಬಲ್ಲುದಲ್ಲದೆ
ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ..?
ನದಿಯ ಸೌಂದರ್ಯವನ್ನು,
ನದಿಯಲ್ಲೇ ಅರಳಿದ ಚೆಂದದ ತಾವರೆ ಬಲ್ಲುದಲ್ಲದೆ..
ಊರಿನ ಹೊಲಗಳ ಮಧ್ಯೆ ಬೆಳೆವ (ಹೊನ್ನಾವರಿಕೆ) ಕಸದ ಗರಿಕೆಯ ಹೂವಿಗೆ
ಆ ನದಿಯ ಸೌಂದರ್ಯ ತಿಳಿಯದು..
ಪುಷ್ಪದ ಪರಿಮಳವ ದುಂಬಿ ಬಲ್ಲುದಲ್ಲದೆ,
ಕೆಡೆಯಲ್ಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ..?
ತೋಂಟದಲ್ಲೊ, ಮನೆಯಂಗಳದಲ್ಲೊ…
ಅರಳಿ ನಿಂತ ಸುಂದರ ಹೂವಿನ ಪರಿಮಳವನ್ನು.
ದುಂಬಿ ತಿಳಿದಿರುವುದಲ್ಲದೆ..
ಕೊಳೆತ ವಸ್ತುವಿನ ಮೇಲೆ ಕೂಡುವ ನೊಣಕ್ಕೆ ತಿಳಿದಿರಲಾರದು..
ಚೆನ್ನಮಲ್ಲಿಕಾರ್ಜುನಯ್ಯಾ. ನಿಮ್ಮ ಶರಣರ ನಿಲುವ ನೀವೆ ಬಲ್ಲಿರಲ್ಲದೆ,
ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ…
ಆಹಾ ಎಂಥಹಾ ಅದ್ಭುತ ವಿಚಾರ..
ಶರಣರ ಕಾಯಕ, ದಾಸೋಹ, ಸಮತೆಯ ಒಲವು,
‘ದಯವೇ ಧರ್ಮದ ಮೂಲ’ವೆಂಬ ನಿಲುವು ಇಂಥಹಾ ಅದ್ಭುತ ವಿಚಾರಗಳನ್ನು ಬಸವಾದಿ ಶಿವಶರಣರು ಬಲ್ಲರಲ್ಲದೆ,.
ಸಜ್ಜನ ಸಾತ್ವಿಕ ಶರಣರ ಕಂಡು’
ಸಹಿಸದೆ ಚುಚ್ಚು ನುಡಿಗಳನ್ನಾಡುವ,
ಕೋಣದ ಮೈಮೇಲಣ ಸೊಳ್ಳೆಗಳಂತಿರುವರಿಗೆ ತಿಳಿಯಲಾರದು..
ಎಂಬುದೇ ಈ ವಚನದ ಭಾವಾರ್ಥ..
ವಿಶ್ಲೇಷಣೆ :
ಲೋಕೇಶ್ ಎನ್ ಮಾನ್ವಿ