ಯುಗ ಪ್ರವರ್ತಕ ಬಸವಣ್ಣ

ಯುಗ ಪ್ರವರ್ತಕ ಬಸವಣ್ಣ

ಸಂಸ್ಕೃತಿ ಸಂಸ್ಕಾರಗಳ ಆಗರವಾಗಿರುವ ತಮ್ಮ ತಮ್ಮ ಧರ್ಮಗಳು ಶ್ರೇಷ್ಠ ಎನ್ನುವ ವಿತಂಡ ವಾದದಲ್ಲಿ ತೊಡಗಿರುವುದು ಅಚ್ಚರಿಯೇ ಸರಿ. ದೊಡ್ಡ ಲೇಖಕರು ವಿದ್ವಾಂಸರು ತಾವು ನಂಬಿದ ಧರ್ಮದ ತಾತ್ವಿಕತೆಯನ್ನು ಹಠವಾದಿಗಳಾಗಿ ಮಂಡಿಸುತ್ತದ್ದಾರೆಯೇ ಹೊರತು ಸಾಮಾಜಿಕ ನೆಲೆಯಲ್ಲಿ ಅಲ್ಲ. ಇದೆಲ್ಲದರ ಪರಿಣಾಮ ಸಮಾಜ ಆಂತರಿಕ ಬೇಗೆಯಲ್ಲಿ ನಿಗಿ ನಿಗಿ ಕೆಂಡವಾಗುತ್ತಿದೆ. ಈ ಮಾರಾಟದ ಪೈಪೋಟಿಯಲ್ಲಿ ತನ್ನ ವಿಚಾರ ಶಕ್ತಿಯನ್ನೇ ಸ್ಪ್ರರ್ಧಾತ್ಮಕವಾಗಿ ಪೈಪೋಟಿಯಾಗಿ ಮನುಷ್ಯ ಕೈಗೊಂಡಿದ್ದಾನೆ.

ಆದರೆ ಇವೇ ಧರ್ಮರ್ಗಳು ನಮ್ಮನ್ನು ತಾಯಿಯಂತೆ ಕಾಪಾಡಿವೆ. ಯುದ್ದ ವಿನಾಶದ ಹಾದಿಯನ್ನು ಪರಿಚಯಿಸಿವೆ. ಭಕ್ತಿ ದ್ವೇಷ ಜಡತೆ ಪೂರ್ವಾಗ್ರಹಗಳನ್ನು ಮೀರದಂತೆ ಆಧ್ಯಾತ್ಮದ ಗಂಭೀರತೆಯಲ್ಲಿ ಸಾಂಸ್ಕೃತಿಕ ಕಾಳಜಿ ವಹಿಸಿವೆ. ದೇವರು ಮಾನವರಾಗಿ ಅಥವಾ ಮಾನವ ರೂಪದಲ್ಲಿ ಅವತರಿಸಿರುವ ನಂಬಿಕೆ ಎಲ್ಲಾ ಧರ್ಮಗಳಲ್ಲಿದೆ. ಜಾಗತಿಕ ಧರ್ಮಗಳಾದ ಕ್ರೈಸ್ತ, ಇಸ್ಲಾಂ, ಯಹೂದಿ ಧರ್ಮಗಳು ಇದಕ್ಕೆ ಹೊರತಲ್ಲ.

ಧರ್ಮಗಳಿಗೆ ಸರ್ವಜ್ಞನಾದ ಮೂಲ ಪುರುಷ ಬಸವಣ್ಣ. ವರ್ಣಾಶ್ರಮ ಧರ್ಮದ ಪ್ರಭಾವದಿಂದಾಗಿ ಬಹುವ್ಯಾಪಿ ಜನರಿಗೆ ಅಂದು ಆರ್ಥಿಕ, ಧಾರ್ಮಿಕ ಮತ್ತು ವೈಚಾರಿಕ ಸ್ವಾತಂತ್ರ್ಯಗಳನ್ನು ಬಹಳ ಮಟ್ಟಿಗೆ ನಿರಾಕರಿಸಲ್ಪಟ್ಟಿದ್ದವು. ಕೇವಲ ಕೆಲವರ ಸುಖಕ್ಕಾಗಿ ಸಮಸ್ತರೂ ಶ್ರಮಿಸುತ್ತಿರಬೇಕೆಂಬುದು ಆ ಕಾಲದ ಸಿದ್ದಾಂತವೇನೊ ಎನ್ನುವಂತ್ತಿತ್ತು. ಇಂಥಹ ದಾರುಣಮಯ ಸ್ಥಿತಿಯಲ್ಲಿ ಅಂದಿನ ಪ್ರಭುತ್ವವು ದೇವರ ಬಗ್ಗೆ ತಪ್ಪು ಕಲ್ಪನೆಗಳನ್ನು ಸಮಾಜದಲ್ಲಿ ಬಿತ್ತಿದ್ದರು. ಸದಾ ಜಾಗೃತರಾಗಿ ಎಚ್ಚರಿಕೆಯಿಂದ ನೋಡಿ ಕೊಂಡು ಬರುತ್ತಿದ್ದರು. ಇದಕ್ಕೆ ಪೂರಕವಾಗಿ ರಾಜಸತ್ತೆಯ ಈ ಕಟ್ಟಳೆಗಳನ್ನು ಮುರಿಯಲು ಪ್ರಯತ್ನಿಸಿದವರ ವಿರುದ್ದ ಕ್ರಮ ತೆಗೆದು ಕೊಳ್ಳು ತ್ತಿದ್ದರು. ಹೀಗಾಗಿ ಸಮಾಜ ಸುಧಾರಣೆಯ, ಧರ್ಮ ಸುಧಾರಣೆಯ ಮಾತೆತ್ತುವುದು ಅಂತಿಂಥವರ ಆಳದ ಗ್ರಹಿಕೆಗೆ ನಿಲುಕದ್ದಾಗಿತ್ತು. ಇಂಥಹ ಪರಿಸರದಲ್ಲಿ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದಕ್ಕಾಗಿ ಶರಣ ಧರ್ಮವನ್ನು ಆಚರಣೆಗೆ ತಂದರು.

ದಯವಿಲ್ಲದ ಧರ್ಮಅದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಯ್ಯನಂತೊಲ್ಲದೊಲ್ಲನಯ್ಯ

ಎಂದು ಬಸವಣ್ಣನವರ ಅರ್ಥಪೂರ್ಣ ಮಾತುಗಳು ಮನುಷ್ಯ ಧರ್ಮವನ್ನು ಎಚ್ಚರಿಸುವುದಾಗಿದೆ. ವಿಶ್ವ ವ್ಯಾಪಕ ಚಿಂತನೆಯ ಧಾರ್ಮಿಕ ಮೌಲ್ಯವನ್ನು ಅನುಷ್ಠಾನ ಗೊಳಿಸುವ ದಾರ್ಶನಿಕನಾಗಿದ್ದ ಅಣ್ಣ. ಮಾನವೀಯತೆಯ ಆಗರವಾದ ದಯೆ ಇಡೀ ಜನಾಂಗವನ್ನು ಒಂದುಗೂಡಿಸುವುದು. ದಯೆ ಇಲ್ಲದವರನ್ನು ಧರ್ಮವೆಂದು ಒಪ್ಪಿಕೊಳ್ಳುವುದಾದರು ಹೇಗೆ? ದಯವೆ ಧರ್ಮದ ಪ್ರಾಣ. ಪ್ರಾಣವಿಲ್ಲದ ವಸ್ತು ಜಡ. ಅಂತೆಯೆ ಮಾನವೀಯತ್ವವಿಲ್ಲದ ಧರ್ಮವೂ ಜಡ. ದಯದಲ್ಲಿ ಧರ್ಮದ ಸಿಹಿ ಇರುವುದರಿಂದ ಧರ್ಮಕ್ಕೆ ಮೌಲ್ಯವಿದೆ, ತತ್ವವಿದೆ, ಸಿದ್ದಾಂತವಿದೆ. ಆದರದ ಮನ್ನಣೆ ಇದೆ. ಧರ್ಮ ನಿರಂತರ ಸೃಜನಶೀಲ, ಚಲನಶೀಲವಾಗಿದೆ. ಸತ್ಯ, ನ್ಯಾಯ, ನೀತಿ, ಅನುಕಂಪ, ವಿಶ್ವಾಸ, ಪ್ರೀತಿ ಇವು ಧರ್ಮದ ಕವಚಗಳು. ಹೀಗಾಗಿ ಒಬ್ಬ ಶ್ರೇಷ್ಠ ಧರ್ಮ ಚಿಂತಕ ಅಣ್ಣನಾಗಿದ್ದ.

ಕಲ್ಯಾಣದಲ್ಲಿ ಮಡಿವಾಳ ಮಾಚಯ್ಯನು ವೀರಗಣಾಚಾರಿ ವೀರನಿಷ್ಠೆಯ ಶರಣ. ಬಟ್ಟೆಯನ್ನು ಮಡಿ ಮಾಡಿಕೊಡುವ ಕಾಯಕದ ಶರಣನಾಗಿದ್ದ. ಬಸವಣ್ಣನನ್ನು ಗುರುವಾಗಿ ಧರ್ಮವಾಗಿ ಕಂಡಿದ್ದನು.

ಎತ್ತೆತ್ತ ನೋಡಿದಡೆ ಬಸವನೆಂಬ ಬಳ್ಳಿ
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ
ಆಯತ ಬಸವಣ್ಣನಿಂದ ಸ್ವಾಯತ ಬಸವಣ್ಣನಿಂದ
ಸನ್ನಿಹಿತವು ಬಸವಣ್ಣನಿಂದ
ಗುರು ಬಸವಣ್ಣನಿಂದ ಲಿಂಗ ಬಸವಣ್ಣನಿಂದ
ಜಂಗಮ ಬಸವಣ್ಣನಿಂದ
ಪಾದೋದಕ ಬಸವಣ್ಣನಿಂದ ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೆ ಇತ್ತ ಬಲ್ಲಡೆ ನೀವು ಕೇಳಿರೆ
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ
ಶೂನ್ಯ ಕಾಣಾ ಕಲಿದೇವರದೇವಾ

ಮಾಚಯ್ಯನಿಗೆ ಬಸವನೆಂಬ ಪ್ರಭೆ ಬಳ್ಳಿಯಾಗಿತ್ತು. ಕಲ್ಯಾಣದ ತುಂಬೆಲ್ಲಾ ಬಸವನೆಂಬ ಬಳ್ಳಿ ಹರಡಿದೆ. ಬಳ್ಳಿಗೆ ಅನೇಕ ತಾತ್ವಿಕ ಗೊಂಚಲುಗಳು. ಒತ್ತಿ ಹಿಡಿದರೆ ಭಕ್ತಿ ಎಂಬ ರಸವು ಆಯತ, ಸ್ವಾಯತ, ಸನ್ನಿಹಿತ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಬಸವಣ್ಣನೇಆಗಿದ್ದಾನೆ. ಬಸವ ಬಸವಾ ಬಸವಾ ಎಂದು ಮಜ್ಜನಕ್ಕೆರೆದರೆ ಭಕ್ತಿಶೂನ್ಯ ಕಾಣಾ ಕಲಿದೇವರ ದೇವ. ಮಾಚಯ್ಯನಿಗೆ ಅಂತರಂಗದ ಅರಿವು ಬಸವ. ಸರ್ವಾಂಗ ಲಿಂಗವು ಬಸವನಾಗಿದ್ದ. ವಚನ ಧರ್ಮ ಸಾಂಸ್ಥಿಕವಾಗಿ ಸುಭದ್ರವಾದಂತೆಲ್ಲಾ ಅದರ ಆತ್ಮ ವ್ಯಾಖ್ಯೆಯಲ್ಲಿ ಸಂಪ್ರದಾಯ ಶರಣತೆ ನಿಧಾನವಾಗಿ ಸೇರಿ ಕೊಳ್ಳುತ್ತಾ ಬಂತು ಎಂಬುದಕ್ಕೆ ಈ ಮೇಲಿನ ವಚವೇ ಸಾಕ್ಷಿ.

ಬಸವಣ್ಣ ಹೇಳುವುದು ಒಂದೇ ಧರ್ಮ.

ನಮ್ಮ ಧರ್ಮದ ಮೌಲಿಕತೆಯ ಪ್ರಶ್ನೆ ಬಂದಾಗ ಸತ್ಯಾನ್ವೇಷಣೆಯ ನೀತಿಯ ತತ್ವವಾಗುವುದು. ಅದು ಪ್ರಕೃತಿ ತತ್ವದಲ್ಲಿ ಘನೀಕೃತವಾಗಿ ಲೀನವಾಗಬೇಕು. ಅಂದಾಗ ಮಾತ್ರ ಅದು ಮಾನವ ಧರ್ಮವಾಗುತ್ತದೆ. ಇದನ್ನೆ ಹಿಂದುಗಳು ಮುಕ್ತಿ ಎಂದರು. ಜೈನರು ನಿರ್ವಾಣ ಎಂದರು. ಬೌದ್ಧರು ಮೋಕ್ಷವೆಂದು ಸ್ಪಷ್ಟಪಡಿಸಿದರು. ಬಸವಣ್ಣ ಹೇಳುವುದು ಒಂದೇ ಧರ್ಮ ಇಡೀ ವಿಶ್ವ ಪಾರಮಾರ್ಥಿಕ ಉತ್ಕೃಷ್ಟತೆ ಹೊಂದಿರುವ ಅನುಭಾವಿ ಧರ್ಮವಾಗಬೇಕು. ಸಾಂಸಾರಿಕ ಬದುಕಿನ ಪಯಣದಲ್ಲಿ ಸತ್ಯ ಶುದ್ದ ಮನಸ್ಸಿನ ಪ್ರಾಮಾಣಿಕ ವ್ಯಕ್ತಿ ಶಿವಯೋಗ ಸಾಧನೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳಲು ಸಾದ್ಯವೆಂದು ಅಣ್ಣ ಬಸವ ಧರ್ಮದಲ್ಲಿ ನಿರೂಪಿಸಿದರು. ಅಂದು ಬಸವಣ್ಣನವರು ಹೇಳಿದ ಲಿಂಗಾಯಧರ್ಮ ಎನ್ನುವುದಕ್ಕಿಂತ ವಿಶ್ವಧರ್ಮ ಎನ್ನುವುದು ಬಹು ಸೂಕ್ತವಾಗಿದೆ.

ಸಂಸಾರದಲ್ಲಿದ್ದು ಕೊಂಡು ಧರ್ಮದಿಂದ ನಡೆಯಬೇಕೆಂಬ ಎಚ್ಚರಿಕೆ ನಮ್ಮ ಹಿರಿಯರದು. ಸಾಧಕ ಮಾರ್ಗದಲ್ಲಿದ್ದು ಪಾರಮಾರ್ಥಿಕ ಪಥಕ್ಕೆ ಅಂಟಿಕೊಂಡ ಕೆಲವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. “ಸತಿಸಂಗವತಿ ಘೋರನರಕ ” ಎನ್ನುವ ವಿವೇಕದ ಎಚ್ಚರಿಕೆಯಲ್ಲಿ ಸತಿಯರ ಸಂಗವನ್ನು ತ್ಯಜಿಸಿದ್ದನ್ನು ಅಣ್ಣನು ಒಪ್ಪುವುದಿಲ್ಲ. “ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವ ದೋಶಂಗಳು ಎನ್ನುತ್ತಾರೆ”. ಅಂದು ಸಮಾಜದಲ್ಲಿ ಸ್ತ್ರೀಯರನ್ನು ಗೌರವ ಸ್ಥಾನದಲ್ಲಿ ಕಂಡ ಬಸವಣ್ಣನು ಅಕ್ರಮ ಸಂಬಂದ, ವೇಶ್ಯಾವಾಟಿಕೆಗಳನ್ನು ನಿರ್ಮೂಲನ ಮಾಡಬೇಕಾಗಿತ್ತು. ಅನಾಚಾರ, ಅತ್ಯಾಚಾರವಾಗುತ್ತಿರುವ ಸಮಾಜವು ಅಪವಿತ್ರ ಚಾರಿತ್ರ ಹೀನರಿಂದ ರಕ್ಷಣೆ ಬೇಕಾಗಿತ್ತು. ಚೆನ್ನಬಸವಣ್ಣನ ಈ ವಚನ….

ದಾಸಿಯ ಸಂಗವ ಮಾಡಿದಡೆ ಸೂಕುರನ ಮಾಂಸವ ತಿಂದ ಸಮಾನ
ವೇಶಿಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ
ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ
ಗಂಡನ ಬಿಟ್ಟವಳ ಸಂಗವ ಮಾಡಿದೊಡೆ ನರ ಮಾಂಸ ತಿಂದ ಸಮಾನ
ಗಂಡನುಳ್ಳವಳ ಸಂಗವ ಮಾಡಿದೊಡೆ ಸತ್ತ ಹೆಣದ ಬೆನ್ನಮಲವ ತಿಂದ ಸಮಾನ
ಚೋರ ಕನ್ನಿಕೆಯ ಸಂಗವ ಮಾಡಿದಡೆ ಸುರಪಾನವ ಕೊಂಡ ಸಮಾನ
ಇದು ಕಾರಣ
ಗುರುವಾಗಲಿ ಜಂಗಮವಾಗಲಿ ಭಕ್ತನಾಗಲಿ
ದಾಶಿ ವೇಶಿ ವಿಧವೆ ಪರಸ್ಥ್ರೀ ಚೋರ ಕನ್ನಿಕೆ ಬಿಡಸ್ತ್ರೀ
ಮೊದಲಾದ ಹಲವು ಪ್ರಕಾರದ ರಾಶಿಕೂಟದ ಸ್ತ್ರೀಯರ ಬಿಟ್ಟು
ಶುದ್ದಕನ್ಯೆಯ ಭಕ್ತಗಣ ಸಾಕ್ಷಿಯಾಗಿ ವಿಭೂತಿ ಪಟ್ಟ ಪಾಣಿಗ್ರಹಣ
ಏಕಪ್ರಸಾದಭುಕ್ತನಾಗಿ ಭಕ್ತಿಕಲ್ಯಾಣವಾಗಿ ಸತ್ಯಸದಾಚಾರದಲ್ಲಿ
ವರ್ತಿಸುವ ಭಕ್ತರಾಧ್ಯರಿಗೆ ಗುರುವುಂಟು ಲಿಂಗವುಂಟು ಜಂಗಮವುಂಟು
ಪಾದೋದಕವುಂಟು ಪ್ರಸಾದವುಂಟು ಆತಂಗೆ ನಿಜಮೋಕ್ಷವುಂಟು
ಇಂತಲ್ಲದೆ ತನ್ನಂಗವಿಕಾರಕ್ಕೆಳಸಿ ದುರ್ವಿಷಯಾಸಕ್ತನಾಗಿ
ಆರು ಪ್ರಕಾರದ ಸ್ತ್ರೀಯರು ಮುಂತಾದ
ರಾಶಿಕೂಟದ ಸ್ತ್ರೀಯರಿಗೆ ಹೇಸದೆ ಆಸೆ ಮಾಡುವ ಪಾಠಕರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ
ಅವ ಭಕ್ತನಲ್ಲ ಜಂಗಮವಲ್ಲ ಅವರಿಗೆ ಮುಕ್ತಿಯಿಲ್ಲ
ಮುಂದೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ

ಧರ್ಮವೆಂಬ ಸಂಸಾರದಲ್ಲಿ ಪತಿಪತ್ನಿಯರಿಬ್ಬರೂ ಸಮಾನರು. ಸಾಂಸಾರಿಕ ಬದುಕಿನ ಪಯಣದಲ್ಲಿ ಅನೈತಿಕತೆ ಎನ್ನುವುದು ಧರ್ಮ ಮತ್ತು ಲೈಂಗಿಕತೆಗೆ ಸಂಬಂದ ಪಟ್ಟಿರುತ್ತದೆ. ಒಬ್ಬ ಪುರುಷನಿಗೆ ಒಬ್ಬ ಮಹಿಳೆ ಎಂದು ಬಾಳುವುದು ನಮ್ಮ ಸಮಾಜದಲ್ಲಿ ಗೌರವದ ಪ್ರಶ್ನೆ ಯಾಗಿದೆ. ಇಂದು ಹೆಚ್ಚುತ್ತಿರುವ ಅನಾಚಾರ, ಅನೈತಿಕತೆ, ವ್ಯಭಿಚಾರ ಇವೆಲ್ಲಾ ಚಾರಿತ್ರಹೀನ ನಡವಳಿಕೆಗಳಾಗಿವೆ. ಅನೈತಿಕ ಸಂಬಂಧದಿಂದಾಗಿ ಅತಿ ಹೆಚ್ಚು ಅನ್ಯಾಯ, ದಮನಕ್ಕೆ ಸ್ತ್ರೀ ಒಳಗಾಗಿದ್ದಾಳೆ. ಸಮಾಜಬಾಹಿರ ವಿರೋಧಗಳಾದ ವ್ಯಭಿಚಾರ, ಪರಸ್ತ್ರೀ ಸಂಗ, ವೇಶ್ಯಾವೃತ್ತಿ ಮುಂತಾದವು ಅಧರ್ಮ ಪಾಪಗಳಾಗಿವೆ. ಇದರ ಕಾರಣದಿಂದ ಮನುಷ್ಯ ಕೇವಲ ಸಮಾಜದ ದೃಷ್ಟಿಯಿಂದ ಕುಸಿಯುವುದು ಮಾತ್ರವಲ್ಲ ಸ್ವಯಂ ತನ್ನ ವ್ಯಕ್ತಿತ್ವವನ್ನೂ ಕುಗ್ಗಿಸಿ ಕೊಳ್ಳುತ್ತಾನೆ. ಯಾವುದೇ ಅಪರಾಧ ವಾಗಿರಲಿ ಅದು ಭಗವಂತನ ನ್ಯಾಯಾಲಯದಲ್ಲಿ ಅಪರಾಧ ವಾಗುತ್ತದೆ. ವಿಶ್ವದ ವಿಭಿನ್ನ ಅಪರಾಧಗಳಿಗೆ ದೇವರ ಬಳಿ ಶಿಕ್ಷೆ ಇದೆ. ಆದರೆ ವಚನಕಾರರು ಕಂಡಂತೆ ಈ ಮನದೊಡೆಯ ಶಿವ. ಮನಸ್ಸನ್ನಾಳುವವ ಸರ್ವಜ್ಞನಾದವ ಮನೀಷಿ ಎಂಬ ಆತ್ಮ ವಿಶ್ವಾಸ ಶರಣರದು. ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವಗಳು ಪ್ರಜಾಪ್ರಭುತ್ವದ ಬುನಾದಿಗಳು. ವಚನಕಾರರು ಸ್ಥ್ರೀಯರಿಗೂ ಸಮಾನತೆಯನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ವ್ಯಭಿಚಾರವೆಂಬ ಅನಾಚಾರ ಕುರಿತಾದ ವಚನಗಳಲ್ಲಿ ದಾಸಿಯ ಸಂಗವ ಮಾಡಿದೊಡೆ.. ವೇಶಿಯ ಸಂಗವ ಮಾಡಿದಡೆ…. ಗಂಡನ ಬಿಟ್ಟವಳ ಸಂಗವ ಮಾಡಿದಡೆ.. ವಚನಗಳೆಂಬ ಧಾರ್ಮಿಕ ವ್ಯಾಖ್ಯಾನಗಳ ಮೂಲಕ ಎಚ್ಚರಿಸಿ… ಶುದ್ದ ಕನ್ಯೆಯ ಭಕ್ತಗಣ ಸಾಕ್ಷಿ ಎಂದರು… ಏಕಪ್ರಸಾದ ಸದಾಚಾರದ ಕಲ್ಯಾಣವೆಂದು ಚೆನ್ನಬಸವಣ್ಣ ಅಭಿವ್ಯಕ್ತಿಸಿದ್ದಾನೆ.

ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತರು ನೆರೆದು
ಭಕ್ತಿ ಭಿಕ್ಷೆಯನಿಕ್ಕಿದೊಡೆ
ಎನ್ನ ಪಾತ್ರೆ ತುಂಬಿತ್ತು
ನೋಡಾ ಕೂಡಲಸಂಗಮದೇವಾ

ಡೋಹರ ಕುಲದ ಕಕ್ಕಯ್ಯ ಅನುಭವ ಮಂಟಪದಲ್ಲಿ ಶ್ರೇಷ್ಠ ಶರಣನೆಂದು ಗುರಿತಿಸಿಕೊಂಡಿದ್ದ. ಮಾದಾರ ಚೆನ್ನಯ್ಯ ಶಿವನ ಪರೀಕ್ಷೆಯಲ್ಲಿ ಗೆದ್ದವನಾಗಿದ್ದು ಚೆನ್ನಯ್ಯನ ಜೊತೆ ಅಂಬಲಿಯನುಂಡು ತೃಪ್ತನಾಗಿದ್ದ. ಕಕ್ಕಯ್ಯ ಮಾದಾರ ಚೆನ್ನಯ್ಯರಲ್ಲಿ ಭಕ್ತಿ ಎಂಬ ಬಿಕ್ಸೆ ಬೇಡಿದ ದಾಸಯ್ಯ ನಾನೆಂಬ ನಮ್ರವಾದ ಧರ್ಮ ಬಸವಣ್ಣನದು. ಆಧ್ಯಾತ್ಮದ ಬದುಕಿನಲ್ಲಿ ಶರಣರಿಗೆ ಧರ್ಮವೇ ಜೀವಾಳ. ಧರ್ಮವೇ ಜಯವೆಂಬ ಮಂತ್ರ. ಪುರುಷಾರ್ಥಗಳಲ್ಲಿ ಪ್ರಥಮ ಸ್ಥಾನ ಧರ್ಮಕ್ಕೆ ನಂತರ ಅರ್ಥ ಕಾಮಗಳು. ಎಲ್ಲವನ್ನೂ ಧರ್ಮದಿಂದಲೆ ಕಾಣುವ ಪಡೆಯುವ ಮನೋಭಾವ ಇವರದು.

ಪಾಶ್ಚಾತ್ಯ ವಿದ್ವಾಂಸರ ತೌಲನಿಕ ಹೇಳಿಕೆಯ ಸಮರ್ಥನೆ

ವಿಶ್ವದ ಇತಿಹಾಸದಲ್ಲಿ ಧಾರ್ಮಿಕ ಸಾಮಾಜಿಕ ಆಶಯಗಳ ತತ್ವಜ್ಞಾನಿ ಬಸವಣ್ಣನಾಗಿದ್ದಾನೆ. ಬಡವರ ದಲಿತರ ಮನೆ ಮನಗಳಿಗೆ ಜೀವನಾದರ್ಶದ ಸಂದೇಶಗಳನ್ನು ತಾತ್ವಿಕ ಚಿಂತನೆಗಳನ್ನು ಬಿತ್ತಿದವವನಾಗಿದ್ದನು. ಸೃಜನ ಸ್ವತಂತ್ರವಾಗಿ ವಿಚಾರ ಮಾಡಲು ಪ್ರೇರೇಪಿಸಿದ ಬಸವಣ್ಣನವರ ಕುರಿತು.

ಅಮೇರಿಕಾದ ಶಿಕ್ಷಣ ತಜ್ಞ ಮತ್ತು ರಾಜಕಾರಣಿ Arthur miles ಹೇಳುವಂತೆ:
Whatever legend may about lord Basava the fact in pretty clear that he was the first Indian free thinker. He might be called Martin Luther of India. ಎಂದು ಭಾರತದ ಪ್ರಥಮ ವಿಚಾರವಾದಿ ಎಂದಿದ್ದಾರೆ. ಕಿಂಕರರಲ್ಲಿ ಕಿಂಕರನಾಗಿ ದಾಸಾನುದಾಸನಾಗಿ ಕರ್ತವ್ಯ ನಿರ್ವಹಿಸಿದ್ದಾನೆ. ಅವರ ತೇಜಸ್ವಿ ವ್ಯಕ್ತಿತ್ವಕ್ಕೆ ಅವರ ವಚನಗಳೇ ಸಾಕ್ಷಿ. ಇಂಥಹ ಶಿಕ್ಷಕ ತತ್ವಜ್ಞಾನಿ ಎಂದಿಗೂ ಪ್ರಸ್ತುತ.

ಆದ್ದರಿಂದ ಬಸವಣ್ಣನೆಂದರೆ ವಿಶ್ವವನ್ನೇ ಆಕರ್ಷಿ ಸುವ ಶಕ್ತಿ ಸಂಚಾಲಕ. ಅದಕ್ಕೆ ಕಾರಣ ಮಾತು ಕೃತಿಗಳಲ್ಲಿ ಇರುವ ಸಮನ್ವಯತೆ. ಹೃದಯವನ್ನು ಹೃದಯದಿಂದಲೇ ಗೆಲ್ಲಬೇಕೆಂದು ಹೇಳುತ್ತಾರೆ. ಶರಣರ ಹೃದಯವು ನಿಷ್ಕಲ್ಮಷವಾದದ್ದು. ಅವರ ವಚನ ಸಂದೇಶಗಳು ಕ್ರೂರಿಗಳ ಮನಃ ಪರಿವರ್ತಿಸುವ ಶಕ್ತಿಯುಳ್ಳದ್ದೆಂದು ಸ್ಪಷ್ಟಪಡಿಸಬಹುದು. ವಿಶ್ವವ್ಯಾಪಿ ಧರ್ಮ ಸಂದೇಶಗಳಲ್ಲಿ ನೂತನ ವಿಚಾರಗಳಿಗೆ ಅವಕಾಶಗಳಿಲ್ಲದ್ದನ್ನು ಕಾಣುತ್ತೇವೆ. ಧರ್ಮ ಗ್ರಂಥಗಳಲ್ಲಿ ಬರೆದದ್ದನ್ನು ನಡೆಯಬೇಕೆನ್ನುವ ಕಟ್ಟಳೆಗಳಿವೆ. ಸ್ವ ಚಿಂತನೆಗೆ ಅವಕಾಶವೇ ಇಲ್ಲ. ಆದರೆ ಶರಣ ಧರ್ಮದಲ್ಲಿ ಪ್ರತಿಯೊಬ್ಬರ ಸ್ವ ವಿಚಾರ ಜ್ಞಾನಕ್ಕೆ ಅವಕಾಶ ಮಾಡಿಕೊಟ್ಟರೆಂಬುದನ್ನು ಜಗತ್ತಿನ ತತ್ವ ಜ್ಞಾನಿಗಳು ಲೇಖಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ 2009 ರಿಂದ 2019 ರವರೆಗೆ ಸ್ಪೀಕರ್ ಆಗಿದ್ದವರು. John- Simon Bercow ಬಸವಣ್ಣನ ಬಗ್ಗೆ ಅಪಾರ ಗೌರವ ಹೆಮ್ಮೆ ಪಟ್ಟವರು. ಅವರು… “Basavanna’s philosophy of universal Significance”.. ಬಗ್ಗೆ ಹೇಳಿದ್ದು ದಾಖಲಾಗಿದೆ.

“Basavana pioneered the ideas of democracy and stood for civil liberties even before” magna cart” was signed and preached the idea of democracy 700 years before Abraham Lincoln. It is amazing and extraordinary that Basavana professed, adopted Campaigned and advocated genuine democracy human Rights Gender Equality way back in the 12th century even before anyone in U K and even though about it. ಜಾನ್ ಬರ್ಕೋ ಹೀಗೆ ಹೇಳಿದ್ದಾನೆ. ಬಸವಣ್ಣನು ಒಬ್ಬ ಯುಗ ಪ್ರವರ್ತಕನಾಗಿ ಹುಟ್ಟು ಹಾಕಿದ ಪ್ರಜಾಪ್ರಭುತ್ವ ಸಾಮಾಜಿಕ ಸುಧಾರಣೆಗಳನ್ನು ಮ್ಯಾಗ್ನಾಕಾರ್ಟ್ ಕ್ಕಿಂತ ಮುಂಚೆಯೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು. ಅಮೇರಿಕಾದ ಅಧ್ಯಕ್ಷರಾದ ಅಬ್ರಾಹಂ ಲಿಂಕನ್ ರಗಿಂತ 700 ವರ್ಷಗಳ ಮುಂಚೆಯೇ ಸಾಮಾಜಿಕ ನ್ಯಾಯ ನೀತಿಗಳನ್ನು ಜಾರಿಗೆ ತಂದಿದ್ದರು. 12 ನೇ ಶತಮಾನದಲ್ಲಿಯೇ ಬಸವಣ್ಣನವರು ಪ್ರಾಮಾಣಿಕವಾಗಿ ಪ್ರಜಾಪ್ರಭುತ್ವವನ್ನು ಮಾನವ ಕಲ್ಯಾಣವನ್ನು ಲಿಂಗ ಸಮಾನತೆಯನ್ನು ಅದ್ಬುತ ಅಸಾಧಾರಣ ರೀತಿಯಿಂದ ಸಮಾಜದಲ್ಲಿ ಅಳವಡಿಸಿಕೊಂಡು ಪ್ರಚಾರ ಗೊಳಿಸಿದರು.

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿ ಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮ ದೇವ

ಬಸವಣ್ಣನು ಇಡೀ ವಿಶ್ವವನ್ನು ತನ್ನ ಪರಿವಾರವೆಂದು ತಿಳಿದವನು. ಸಮಾನತೆ ಎನ್ನುವುದು ಪ್ರಜಾಪ್ರಭುತ್ವದ ಧೋರಣೆ. ಪರರ ದುಃಖಕ್ಕೆ ಅಳುವುದಕ್ಕಿಂತ ಪರರ ದುಃಖ ನಿವಾರಿಸಬೇಕೆಂಬ ಮಾನವೀಯತೆಯಾಗಿದೆ. ನಿಜ ವಾಸ್ತವವನ್ನು ಅರಿತವನು ದುಃಖದಿಂದ ದೂರವಾಗುತ್ತಾನೆ. ವ್ಯಕ್ತಿ ಅಂತರಂಗದಲ್ಲಿ ಬಹಿರಂಗದಲ್ಲೂ ಬದಲಾಗಬೇಕು. ಅಂದಾಗ ಲೋಕ ಸುಂದರವಾಗಿರುತ್ತದೆ. ದೇಹ ಮತ್ತು ಮನಸ್ಸನ್ನು ಸಂತೈಯಿಸುವ ಅರ್ಹತೆ ಹೊಂದಿರಬೇಕು.

12 ಶತಮಾನದ ಬಸವಣ್ಣ ಹಾಗೂ ಶರಣರು ಸ್ಥಾಪಿಸಿದ ಪ್ರಜಾಪ್ರಭುತ್ವ ಧರ್ಮದ ಮರು ಆವಿಷ್ಕಾರ. 20 ನೇ ಶತಮಾನದ ಅವಿಸ್ಮರಣೀಯ ಸೋಜಿಗಗಳಲ್ಲಿ ಒಂದು ಶರಣ ಧರ್ಮವಾಗಿದೆ. “ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ” ಎನ್ನುವ ಗಟ್ಟಿಯಾದ ದ್ವನಿಯಾಗಿದೆ. ಜನತೆಯ ಆಧೀನದಲ್ಲಿರುವುದೇ ಡೆಮಾಕ್ರಸಿ ಎಂಬ ಪ್ರಧಾನ ತತ್ವವಾಗಿದೆ. ಅಬ್ರಾಹಂ ಲಿಂಕನ್ ಹೇಳುವಂತೆ… “ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾದ ಪ್ರಜಾಪ್ರಭುತ್ವ….”

ಅಲ್ಲಮಪ್ರಭು ಹೇಳುವಂತೆ….”ಸಂಗನ ಬಸವಣ್ಣನ ಪಾದಕ್ಕೆ ಈರೇಳು ಭುವನವೆಲ್ಲಾ ಜೀಯಾ ಜೀಯಾ ಎನ್ನುತ್ತಿದ್ದವು” ..ಎಂಬ ಹೇಳಿಕೆಯಲ್ಲಿ ಅಖಂಡ ಸೃಷ್ಟಿಯ ಚೈತನ್ಯವೆಲ್ಲಾ ಬಸವನ ಪಾದಕ್ಕೆ ಅರ್ಪಿತ. C.P.Brown… ಹೇಳುತ್ತಾನೆ. ಇಡೀ ಜಗತ್ತಿನ ಅನೇಕ ದಾರ್ಶನಿಕರನ್ನು ಕುರಿತು ಅಧ್ಯಯನ ಮಾಡಿದ್ದೇನೆ. ಆದರೆ ಯಾರೊಬ್ಬರೂ ಕರ್ನಾಟಕದ ಶಿವಶರಣರಂತೆ ಅದನ್ನು ಜಾರಿಗೆ ತರಲು ಪ್ರಯತ್ನಿಸಿರುವುದು ವಿರಳ. 900 ವರ್ಷಗಳ ಹಿಂದೆಯೇ ಅಂಥಹದ್ದೊಂದು ತಂಡ ಬಸವಣ್ಣನವರ ನೇತೃತ್ವದಲ್ಲಿ ನಡೆಯಿತು. ಈ ದೃಷ್ಟಿಯಲ್ಲಿ ಕರ್ನಾಟಕದಲ್ಲಿರುವ ಲಿಂಗಾಯತ ಸಮುದಾಯವನ್ನು ಒಂದು ಸುದೈವಿ ಸಮುದಾಯವೆಂದು ಹೇಳುತ್ತೇನೆ. ಎನ್ನುತ್ತಾರೆ. (1840 ರಲ್ಲಿ ಬ್ರಿಟಿಷ್ ಸರಕಾರದಲ್ಲಿ ನ್ಯಾಯಾಧೀಶ ರಾಗಿದ್ದರು)

ಭಾರತದ ನೂತನ ಸಂಸತ್ ಶಿಲಾನ್ಯಾಸದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉಗಮದ್ವಿಶ್ವದ ಮೊದಲ ಸಂಸತ್ ಜಗಜ್ಯೋತಿ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದ ಬಗ್ಗೆ ಉಲ್ಲೇಖವನ್ನು ಸ್ಪಷ್ಟಪಡಿಸಿದರು. ವಿಶ್ವದ ಮೊದಲ ಪ್ರಜಾ ಪ್ರಭುತ್ವದ ಉಗಮ ಭಾರತದಲ್ಲಾಯಿತು. ಈ ಸತ್ಯವನ್ನು ವಿಶ್ವಕ್ಕೆ ತಿಳಿಸಬೇಕಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ಬಸವಾದಿ ಶರಣರ ವೈಚಾರಿಕ ಸಾಮಾಜಿಕ ಚಿಂತನೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನಮ್ಮ ಧರ್ಮದ ನಾಯಕತ್ವ ಹುಡುಕಾಟದಲ್ಲಿ ಆಹಾರ ವಸ್ತ್ರ ಮತ್ತು ಆಚರಣೆಯ ಚಚರ್ಚೆ ನಿಲ್ಲಿಸಿ ನಾವು ಬಸವಾದಿ ಶರಣರ ಮೌಲ್ಯಗಳನ್ನು ಸಾಂಸ್ಥಿಕ ಗೊಳಿಸುವುದು ಹೇಗೆ ಎನ್ನುವ ಕಡೆ ಗಮನಹರಿಸಬೇಕಾಗಿದೆ. ನಿಜವಾದ ಧರ್ಮ ಬೆಳಕಾಗ ಬೇಕೆ ಹೊರತು ಬೆಂಕಿಯಲ್ಲ. ವಚನ ಧರ್ಮ ಮಾನವನ ವೈಯಕ್ತಿಕ ಸಾಮಾಜಿಕ ಬದುಕಿನ ಸ್ವಾಸ್ಥ್ಯಕ್ಕಾಗಿ ಹೊಸ ಮಾರ್ಗ ತೋರಿದ ವಿಶ್ವ ಧರ್ಮ. ಶೋಷಿತ ವರ್ಗ ಸಮುದಾಯಗಳು ಶರಣತ್ವವನ್ನು ಬಯಸಿ ಬಂದಾಗ ಇವನಾರವ ಎನ್ನದೆ ಅಪ್ಪಿಕೊಂಡದ್ದು ಲಿಂಗಾಯತ ಧರ್ಮವಾಗಿದೆ. 12 ನೇ ಶತಮಾನದಲ್ಲಿ ಜಾತಿರಹಿತ ಲಿಂಗರಹಿತ ವರ್ಗರಹಿತ ಲಿಂಗ ತಾರತಮ್ಯವಲ್ಲದ ಸಮಾಜ ಕಟ್ಟಿದ ಶರಣರು ನಮ್ಮ ಮನೆ ಮತ್ತು ಮನದ ಮಾತಾಗಲಿ. ಧರ್ಮ ಸಂಸ್ಥಾಪನೆಯ ಜೊತೆಗೆ ನವಕಲ್ಯಾಣ ಕಟ್ಟಬೇಕಾಗಿದೆ. ಲಿಂಗವಂತ ತತ್ವವನ್ನು ಅಳವಡಿಸಿ ಕೊಂಡು ಅಂತರಂಗ ಬಹಿರಂಗದಲ್ಲಿ ಧರ್ಮ, ದೀಪದಂತೆ ಬೆಳಕಾಗಿ ಘನೀಕೃತವಾಗ ಬೇಕಾದ ಅವಶ್ಯಕತೆ ಇದೆ.

ಡಾ. ಸರ್ವಮಂಗಳಾ ಸಕ್ರಿ
ಉಪನ್ಯಾಸಕರು , ರಾಯಚೂರು
ಈ-ಮೇಲ್ : sarvamangalasakri58@gmail.com
ಮೋಬೈಲ್ ಸಂ : +91 94499 46839

Don`t copy text!