ವಿಶೇಷ ಲೇಖನ
ಸಜ್ಜನರ ಸಂಗ
ಅಂತರಂಗದ ಅನುಭಾವದ ಅಭಿವ್ಯಕ್ತಿಯ ಅಮೃತದ ಫಲವಾದ ಬಸವಾದಿ ಶರಣರ ವಚನಗಳು ಅರಿವನ್ನು ಮೂಡಿಸುವಲ್ಲಿ ಅವುಗಳ ಪಾತ್ರ ಅನುಪಮವಾದದ್ದು. ಮತ್ತು ಅನನ್ಯವಾದದ್ದು. ಈ ವಚನಗಳ ಸಾರದಲ್ಲಿ ಮುಳುಗಿ ಮಿಂದಾಗಲೆ ನಮಗೆ ಅದರ ಆಳ, ಅಗಲದ ಮತ್ತು ಅದರ ವಿಸ್ತಾರ ನೋಟದ ಅನುಭವವಾಗುವದು.
ಸರ್ವಜ್ಞ ಕವಿ ಹೇಳುವಂತೆ “ಸಜ್ಜನರ ಸಂಗವದು, ಹೆಜ್ಜೆನು ಸವಿದಂತೆ” ಎಂಬಂತೆ ನಿಜವಾಗಿಯು ಸಜ್ಜನರ ಸಹವಾಸವು ಜೇನು ಸವಿದಂತೆ. ಅಂತಹ ಜೇನಿನಂತಹ ಒಂದೆರಡು ವಚನಗಳ ಸವಿಯನ್ನು ಸವಿಯೋಣ.
“ಅಯ್ಯಾ ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದಯ್ಯಾ
ಮಹಾನುಭಾವರ ಸಂಗದಿಂದ
ಶ್ರೀಗುರುವನರಿಯಬಹುದು
ಲಿಂಗವನರಿಯಬಹುದು, ಜಂಗಮವನರಿಯಬಹುದು
ಪ್ರಸಾದವನರಿಯಬಹುದು, ತನ್ನ ತಾನರಿಯಬಹುದು.
ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು
ಕೂಡಲ ಸಂಗಮದೇವಾ ನಿಮ್ಮ ಧರ್ಮಾ”
ಶರಣರಲ್ಲಿ ನಾವು ಮುಖ್ಯವಾಗಿ ಕಾಣುವುದೆ ಸದ್ಭಾವ, ಸದ್ಭಕ್ತಿ, ಸದುದ್ಧೇಶ, ಸತ್ಕ್ರಿಯೆ. “ಸಾರ ಸಜ್ಜನರ ಸಂಗವದು ಲೇಸು ಕಂಡಯ್ಯ,” ಎನ್ನವಂತೆ ಸಜ್ಜನ ಸದ್ಭಾವಿಗಳ ಸಂಗದಿಂದ ಪರಶಿವನನ್ನು ಸಾಕ್ಷಾತ್ಕರಿಸಿಕೊಂಡು ಮಹಾ ಅನುಭವವನ್ನು ಪಡೆದ ಮಹಾನುಭಾವರನ್ನು ಕಾಣಬಹುದು.
ಇಂತಹ ಮಹಾನುಭಾವರ ಸಂಗದಿಂದ ಸತ್ಪತವ ತೋರುವ ಭವಭ್ರಾಂತಿಯ ದುರಿತವನ್ನು ಬಿಡಿಸುವ ಗುರುವನರಿಯಬಹುದು. ಆ ಗುರುವಿನ ಮೂಲಕ “ಲಿಂಗಮಧ್ಯೆ ಜಗತ್ ಸರ್ವಂ” ಎನ್ನುವಂತಹ ಸರ್ವವು ಆದ ಲಿಂಗವನ್ನು ಅರಿಯಬಹುದು. ಲಿಂಗಸಾಮರಸ್ಯದಿಂದ ಜಂಗಮವನ್ನು ಜಾಗ್ರತಗೊಳಿಸಬಹುದು. ಪ್ರಸಾದವನ್ನು ಅರಿಯಬಹುದು. “ತನ್ನ ತಾನರಿದಡೆ ತಾನೆ ದೇವನೊಡಾ”ಎನ್ನುವಂತೆ ನಮ್ಮನ್ನು ನಾವು ಅರಿಯಬಹುದು.ಆದ್ದರಿಂದ ಸದ್ಭಕ್ತರ ಸಂಗವನ್ನೆ ಕರುಣಿಸು ಎಂದು ಕೇಳಿಕೊಳ್ಳುತ್ತಾರೆ. ಇನ್ನೊಂದು ವಚನದಲ್ಲಿ “ಅಯ್ಯಾ ನಿಮ್ಮ ಮಹಾನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತ್ತು ,ಮನ ಶುದ್ಧವಾಯಿತ್ತು, ಧನ ಶುದ್ಧವಾಯಿತ್ತು, ಎನ್ನ ಸರ್ವಾಂಗ ಶುದ್ಧವಾಯಿತ್ತು. ಎಂದು ಹೇಳುತ್ತಾರೆ. ಇಂತಹ ಸರ್ವಾಂಗ ಶುದ್ಧಮಾಡುವ ಸಜ್ಜನರ ಸಹವಾಸ ಲೇಸಲ್ಲವೆ.
ಮರಮರ ಮಥನದಿಂದ ಅಗ್ನಿ ಹುಟ್ಟಿ
ಆ ಮರನೆಲ್ಲವ ಸುಡದಿಪ್ಪುದೆ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ ?
ಇದು ಕಾರಣ ಮಹಾನುಭಾವರ ತೋರಿಸು
ಕೂಡಲ ಸಂಗಮ ದೇವಾ
ಕಾಡಿನಲ್ಲಿ ಮರ ಮರಗಳ ಘರ್ಷಣೆಯಿಂದ ಇಡಿ ಕಾಡೆ ಸುಟ್ಟು ಭಸ್ಮವಾಗುವಂತೆ,
ಮಹಾನುಭಾವರ ಪರುಷ ಭಾವದಿಂದಲೆ ನನ್ನಲ್ಲಿ ಜ್ಞಾನದ ಕಿಚ್ಚು ಹತ್ತಿ ಅದರಿಂದ ನನ್ನ ಸಾಧನೆಗೆ ಅಡ್ಡಿಯನ್ನುಂಟುಮಾಡುವ ಅಂಗ ಗುಣಗಳು (ವಿಷಯಾದಿಗಳು, ಅರಿಷಡ್ವರ್ಗಗಳು,ಮಲತ್ರಯಂಗಳು,ಇತ್ಯಾದಿ)ಸುಟ್ಟು ನನ್ನನ್ನು ಪರಿಶುಧ್ಧನನ್ನಾಗಿ ಮಾಡುತ್ತವೆ.
ಆದ್ದರಿಂದ ಮಹಾನುಭಾವರ ಸಂಗವನ್ನೆ ಕರುಣಿಸು ಎಂದು ಬಸವಣ್ಣನವರು ಕೇಳಿಕಕೊಳ್ಳುತ್ತಾರೆ.
ಗಿರಿಗಳ ಮೇಲೆ ಹಲವು ತರು-ಮರಾದಿಗಳಿದ್ದು
ಶ್ರೀಗಂಧ ಸನ್ನಿಧಿಯಲು ಪರಿಮಳವಾಗದೆ,
ಲಿಂಗವಂತನ ಸನ್ನಿಧಿಯಿಂದ
ಹಿಂದಣ ದುಸ್ಸಂಗವು ಕೆಡುವುದು
ಕೂಡಲ ಸಂಗಮ ದೇವಯ್ಯಾ
ಸಿರಿಯಾಳನ ಸಾರಿರ್ದ ನರರೆಲ್ಲ ಸುರರಾಗರೆ ?
ಬೆಟ್ಟದ ಮೇಲೆ ಹಲವಾರು ರೀತಿಯ ಮರಬಳ್ಳಿಗಳಿರುತ್ತವೆ. ಅದರಲ್ಲಿ ಒಂದು ಶ್ರೀಗಂಧದ ಮರವಿದ್ದರು ಅದರ ಸುವಾಸನೆ ಎಲ್ಲ ಮರಗಳಿಗೂ ಹರಡುವಂತೆ,
ಲಿಂಗದ ಮಹಿಮೆಯನ್ನು ಅರಿತು ಆಚರಿಸುವವರ ಸಂಗದಿಂದ ಹಿಂದಿನ ದುಷ್ಟಸಂಗದಿಂದ ಮಾಡಿದ ಪಾಪಕಾರ್ಯಗಳೆಲ್ಲವು ನಷ್ಟವಾಗಿ ಅರಿವು ಮುಡುವುದು. ಸಿರಿಯಾಳನ ಜೋತೆ ಇದ್ದವರೆಲ್ಲರು ಹೇಗೆ ಅಮರರಾದರೊ ಹಾಗೆ ಶರಣರ ಸಂಗದಿಂದ ಲಿಂಗದ ಮಹತ್ವ ಅರಿತು ಮಹಾತ್ಮರಾಗುತ್ತೆವೆ.
ಸಾರಸಜ್ಜನರ ಸಂಗವದು ಲೇಸು ಕಂಡಯ್ಯ
ದೂರ ದುರ್ಜನರ ಸಂಗವದು ಭಂಗವಯ್ಯ
ಎನ್ನುವಂತೆ ಯಾವಾಗಲು ಸಜ್ಜನರ ಸಂಗದಲ್ಲಿಯೆ ಇರುವುದರಿಂದ ಸದ್ಭಾವವೆ ಬೆಳೆಯುತ್ತದೆ. ವ್ಯರ್ಥ ಸಂಕಲ್ಪಗಳು, ವ್ಯರ್ಥ ಚಿಂತನೆಗಳು , ಬರುವದಿಲ್ಲ.
ಅಕ್ಕಮಹಾದೇವಿ “ನೀಕೊಟ್ಟ ಆಯುಷ್ಯವುಳ್ಳನ್ನಕ್ಕರ ಲಿಂಗಸುಖಿಗಳ ಸಂಗದಲ್ಲಿರಿಸು” ಮತ್ತು “ಮಹಾನುಭಾವಿಗಳ ಸಂಗದಿಂದ ನಾನು ಪರಮಸುಖಿಯಾದೆನು” “ಏಳೆಳು ಜನ್ಮದಲಿ ಶಿವಭಕ್ತರೆ ಬಂಧುಗಳೆನಗೆ” ಮತ್ತು “ಎನ್ನ ಆತ್ಮ ಸಂಗಾತಕ್ಕೆ ಚೆನ್ನಮಲ್ಲಕಾರ್ಜುನಾ ನೀನೆನಗುಂಟು” ಎಂದು ಆತ್ಮದ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾಳೆ.
ಹೀಗೆ ಸಜ್ಜನರ ಸಂಗದ ಕುರಿತು ಸಾಕಷ್ಟು ವಚನಗಳನ್ನು ನೋಡಬಹುದು. “ಅಲ್ಪರ ಸಂಗ, ಅಭಿಮಾನ ಭಂಗ” ಆದರೆ “ಶರಣರ ಸಂಗ ದುಷ್ಟತನದ,ಅರಿಷಡ್ವರ್ಗಗಳ,ಅಷ್ಟಮದಗಳ ಭಂಗ” ಎನಬಹುದು
ಸಜ್ಜನರ ಸಹವಾಸದಲ್ಲಿಯೆ ಸವಿಜೇನಿದೆ. ಅದು ಎಂದೂ ತೀರದ ಸವಿಜೇನು.
–ಸವಿತಾ. ಎಮ್. ಮಾಟೂರ
ಇಲಕಲ್ಲ