ಐತಿಹಾಸಿಕ ನೆಲದಲ್ಲಿ ಹೊಸ ತಾಲೂಕಿನ ಹೊಸದೃಷ್ಟಿಯ ಹುಡುಕಾಟ


e-ಸುದ್ದಿ, ಮಸ್ಕಿ
ಐತಿಹಾಸಿಕ ಪಟ್ಟಣ ಮಸ್ಕಿ ನಗರದಲ್ಲಿ ಫೇ.14 ರಂದು ಭಾನುವಾರ ಜರುಗುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ತಾಲೂಕಿನ ಹೊಸದೃಷ್ಟಿ ಹುಡುಕಾಟಕ್ಕೆ ನಾಂದಿಯಾಗಲಿದೆ.
ಹೊಸ ತಾಲೂಕು ಅಸ್ಥಿತ್ವಗೊಂಡ ನಂತರ ಮೊದಲ ಬಾರಿಗೆ ಕಸಾಪ ಕೂಡ ಅಸ್ಥಿತ್ವಕ್ಕೆ ಬಂದಿದ್ದು ಮೊದಲ ಸಮ್ಮೇಳನದಲ್ಲಿ ಹಲವಾರು ವಿಚಾರಗಳ ಚರ್ಚೆಗೆ ಕಾರಣವಾಗುತ್ತದೆ ಎಂಬ ಭರವಸೆ ಸಾಹಿತ್ಯ ವಲಯದಲ್ಲಿ ಹರಿದಾಡತೊಡಗಿದೆ.
ಮೊದಲ ಗೋಷ್ಟಿಯಲ್ಲಿ ಪ್ರಗತಿಪರ ಸಾಹಿತಿ, ನೊಂದವರ ದನಿಯಾದ ಕವಿ ಸಿ.ದಾನಪ್ಪ ಗೋಷ್ಟಿಯ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ಡಾ.ಅಮರೇಶ ಯತಗಲ್ ಮಸ್ಕಿ-ಐತಿಹಾಸಿ ಹಿನ್ನಲೆ ಕುರಿತು, ಸಿಂಧನೂರಿನ ಪದವಿ ಕಾಲೇಜಿನ ಪ್ರಚಾರ್ಯ ಸಿ.ಬಿ.ಚಿಲ್ಕರಾಗಿ ಮಸ್ಕಿ ಹೊಸ ತಾಲೂಕಿನ ಹೊಸ ದೃಷ್ಟಿ ಕುರಿತು ಬೆಳಕು ಚಲ್ಲಲಿದ್ದಾರೆ. ಈ ಭಾಗದ ಜನ ಜೀವನದ ಭಾಗವಾಗಿರುವ ಸಂತೆ ಮತ್ತು ಜಾತ್ರೆಗಳ ಕುರಿತು ಶಿಕ್ಷಕ ಆದಪ್ಪ ಹೆಂಬಾ ಮಾತನಾಡುವರು.
ಎರಡನೇ ಗೋಷ್ಟಿಯ ಅಧ್ಯಕ್ಷತೆಯನ್ನು ಚಲನಚಿತ್ರ ನಿರ್ದೆಶಕ ಮಸ್ಕಿಯಲ್ಲಿ ಅಭ್ಯಾಸ ಮಾಡಿ ಮಸ್ಕಿಯವರೇ ಆದ ರಮೇಶ ಸುರ್ವೆ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಡಿ.ಎಚ್.ಕಂಬಳಿ ಮಾಧ್ಯಮ ಬೆಳವಣಿಗೆ ಕುರಿತು, ಲಿಂಗಸೂಗೂರಿನ ಸಾಹಿತಿ ಡಾ.ಶಶಿಕಾಂತ ಕಾಡ್ಲೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪರಂಪರೆ ಕುರಿತು, ಕೊಪ್ಪಳದ ಸಾವಿತ್ರಿ ಮುಜಂದಾರ ಮಹಿಳೆಯರು ಮತ್ತು ಸಾಧನೆ ಸಾವಾಲುಗಳನ್ನು ಕುರಿತು ಮಾತನಾಡುವರು.
ಮೂರನೇಯದು ಕವಿ ಗೋಷ್ಟಿ. ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಸಾಹಿತಿ, ಹಾಸ್ಯ ಲೇಖಕ ಗುಂಡುರಾವ್ ದೇಸಾಯಿ ವಹಿಸಲಿದ್ದು ಕವಿ ಡಾ.ಶರೀಫ ಹಸಮಕಲ್ ಆಶಯನುಡಿ ನುಡಿಯಲಿದ್ದಾರೆ. ಶ್ರೀಶೈಲ ಜಾಲಿಹಾಳ, ವಿವೇಕಾನಂದ ಎಲಿಗಾರ, ಸುರೇಶ ಬಳಗಾನೂರು, ಅಬ್ದುಲ್ ಗನಿಸಾಬ, ಪಂಪಯ್ಯ ಸಾಲಿಮಠ, ದೇವರಾಜ ಎಸ್.ಬಪ್ಪೂರು, ಶಿವಪ್ಪ ಮಡಿವಾಳರ, ಎ.ರೆಹಮಾನ ಶೇಡ್ಮಿ, ಅಮರೇಶ ಪಾಟೀಲ, ಮಲ್ಲಯ್ಯ ಪಟ್ಟದೊಡೆಯರ್, ಸೂಗುರೇಶ ಹಿರೇಮಠ, ವಿಶ್ವನಾಥ ಕಂಬಾಳಿಮಠ, ರವಿಚಂದ್ರ ಮಲ್ಕಾಪುರ, ವೆಂಕೋಬ ಕೋಳಬಾಳ, ವರದೇಂದ್ರ ಕೆ. ಅಮರೇಶ ನಿಲೋಗಲ್, ಕಾಮಾಕ್ಷಿ ತೋಟದ್ ಶ್ರೀದೇವಿ ಕರ್ಜಗಿ ಒಟ್ಟು 18 ಜನ ಕವಿಗಳು ಕವಿತೆಗಳನ್ನು ವಾಚಿಸಲಿದ್ದಾರೆ.
ಸಮ್ಮೇಳನ ಅಧ್ಯಕ್ಷ ಶರಭಯ್ಯಸ್ವಾಮಿ ಅವರ ಸಾಹಿತ್ಯ ಕುರಿತು ಹಿರಿಯ ಸಾಹಿತಿ ಗಿರಿರಾಜ ಹೊಸಮನಿ ಮಾತನಾಡುತ್ತಾರೆ. ವಚನಗಳಲ್ಲಿ ಆರೋಗ್ಯ ವಿಶೇಷ ಉಪನ್ಯಾಸ ಏರ್ಪಡಿಸಿದ್ದು ಸಿಂಧನೂರಿನ ಮಕ್ಕಳ ವೈದ್ಯ ಡಾ.ಕೆ.ಶಿವರಾಜ ಉಪನ್ಯಾಸ ನೀಡುವರು.
ವಿವಿಧ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.
————————————————
ಸಮ್ಮೇಳನ ಅಧ್ಯಕ್ಷತೆ ಅಪಸ್ವರ
ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಲ್ಲಿ ಅಪಸ್ವರದ ಧ್ವನಿ ಮಾರ್ಧನಿಸತೊಡಗಿದೆ. ತಾಲೂಕು ಕಸಾಪ ಅಧ್ಯಕ್ಷರು ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಸ್ವಜಾತಿ ಪ್ರೇಮ ಮೆರದಿದ್ದು ಪ್ರಗತಿಪರರನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರತೊಡಗಿವೆ.
ಪ್ರಸ್ತುತ ದಿನ ಮಾನಗಳಲ್ಲಿ ಪ್ರಗತಿಪರ ಸಾಹಿತ್ಯವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಈ ಹಿಂದೆ ಇದ್ದ ಪುರಾಣ ಸಾಹಿತ್ಯವನ್ನು ರಚಿಸಿದವರನ್ನು ಆಯ್ಕೆ ಮಾಡಿದ್ದು ಎಷ್ಟು ಸರಿ. ಪ್ರಗತಿಪರ ಚಿಂತಕ ದಲಿತ ಕವಿ ಸಿ.ದಾನಪ್ಪ ಅವರನ್ನು ದಲಿತರೆಂಬ ಕಾರಣಕ್ಕೆ ಕಡೆಗಣಿಸಿದ್ದಾರೆ ಎಂಬ ಸಂಶಯ ಮೂಡುತ್ತದೆ ಎಂದು ರಂಗಕರ್ಮಿ ಧರ್ಮರಾಜ ಗೋನಾಳ ಪ್ರಶ್ನಿಸಿದ್ದಾರೆ.
ಕಸಾಪ ಅಧ್ಯಕ್ಷರು ಸ್ವಜಾತಿ ಪ್ರೇಮಿಗಳಾಗಿದ್ದಾರೆ ಎನ್ನುವದಕ್ಕೆ ಇಡೀ ಸಮ್ಮೇಳನದಲ್ಲಿ ಮೆರವಣಿಗೆಯಿಂದ ಹಿಡಿದು ಸಮಾರೋಪ ಸಮಾರಂಭದವರೆಗೆ ಜಂಗಮ ಸಮಾಜದ 20 ಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸಿದ್ದಾರೆ ಎಂಬ ಆರೋಪವು ಕೇಳಿ ಬರತೊಡಗಿದೆ.
————————
ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಲುವಾಗಿ ನಡೆದ ಸಭೆಯಲ್ಲಿ ಎಂಟು ಜನರ ಹೆಸರುಗಳು ಪ್ರಸ್ತಾಪವಾಗಿವೆ. ಅದರಲ್ಲಿ ಸಿ.ದಾನಪ್ಪ ಅವರ ಹೆಸರು ಕೂಡ ಪ್ರಸ್ತಾಪವಾಗಿದೆ. ಆದರೆ ಬಹುತೇಕ ಸದಸ್ಯರು ಶರಭಯ್ಯಸ್ವಾಮಿ ಬಗ್ಗೆ ಒಲವು ತೊರಿಸಿದ್ದರಿಂದ ಅವರನ್ನು ಆಯ್ಕೆ ಮಾಡಲಾಗಿದೆ ವಿನಹಃ ಸ್ವಾಜಾತಿ ಪ್ರೇಮ ಮೆರದಿಲ್ಲ.
-ಘನಮಠದಯ್ಯ ಸಾಲಿಮಠ ಕಸಾಪ ತಾಲೂಕು ಅಧ್ಯಕ್ಷ

Don`t copy text!