ಹಸಿವಿನ ವ್ಯಾಪಾರ

ಕವಿತೆ

ಹಸಿವಿನ ವ್ಯಾಪಾರ

ರೈತ ಭವ್ಯ ಭಾರತದ ಕನಸೆನ್ನುವಿರಿ
ಆದರೆ ಅವನ ಕನಸನ್ನೇ ಕನ್ನಡಿಯೊಳಗೆ ಇರಿಸುವಿರಿ…
ರೈತ ದೇಶದ ಬೆನ್ನೆಲುಬೆನ್ನುವಿರಿ ಆದರೆ
ಅದೇ ಬೆನ್ನಿಗೆ ಛಾಠಿ- ಲಾಠಿ ಬೀಸಿ ಆರದ ಗಾಯ ಮಾಡಿದಿರಿ..
ರೈತ ಬಹು ಮುಗ್ಧನೆನ್ನುವಿರಿ ಆದರೆ ಅವನ ಮುಗ್ಧತೆಯನ್ನೇ ವ್ಯಾಪಾರಕ್ಕಿಟ್ಟಿರುವಿರಿ…

ರೈತನಿಗೆ ಜಾಗತೀಕರಣದ ಆಸೆ ತೋರಿಸಿದಿರಿ.. ಆದರೆ ಅದೇ ರೈತನ ಜಾಗವನ್ನು ಕೈಗಾರೀಕರಣಗೊಳಿಸಿದಿರಿ
ರೈತನಿಗೆ ಬೆಂಬಲ ಬೆಲೆಯ ಭಿಕ್ಷೆ ಹಾಕಿದಿರಿ
ಅದರ ಜೊತೆಗೆ ದಲ್ಲಾಳಿಗಳ ಹೊಟ್ಟೆ ತುಂಬಿಸಿದಿರಿ…
ರೈತ ರೈತ ರೈತ ದೇಶದ ದೇವರೆಂದಿರಿ ಅದೇ ದೇವರನ್ನು ಬೊಗಸೆಯೊಡ್ಡುವ ಭಿಕ್ಷುಕರನ್ನಾಗಿಸಿದಿರಿ..

ರೈತನಿಗಾಗಿ ಜಾರಿಗೊಂಡ ಕಾಯ್ದೆ ಕಾನೂನುಗಳೆಷ್ಟೊ…
ಅವುಗಳಾವುವೂ ರೈತರ ಮೇಲಿನ ಗೋಲಿಬಾರನ್ನು ನಿಲ್ಲಿಸಲಾಗಲಿಲ್ಲ..
ಸಹಸ್ರಗಳ ಲೆಕ್ಕದಲ್ಲಿ ರೈತನ ಮೇಲೆ ಹಿಂಸಾಚಾರಗಳಾದವು..
ರೈತನ ಕಣ್ಣೀರಿನ ಆಕ್ರಂದನದ ಆಕ್ರೊಶವನ್ನು ರಾಜಕೀಯಗೊಳಿಸಿದಿರಿ..

ರೈತರ ಮಾರುಕಟ್ಟೆಯನ್ನು ಆಧುನೀಕರಣದ ಹೆಸರಿನಲ್ಲಿ ರೈತನನ್ನೆ ಮಾರಾಟದ ವಸ್ತುವನ್ನಾಗಿಸಿದಿರಿ ಜೊತೆಗೆ

ಅವನ ಮಾರಾಟದ ಕಟ್ಟೆಯನ್ನೇ ನುಂಗಿ ಹಾಕಿದಿರಿ…
ಯಾವ ರೈತನನ್ನು ದೇಶದ ಹೆಮ್ಮೆ ಎಂದಿರೊ ಅಂದು..
ಅದೇ ರೈತನಿಗೆ ದೇಶದ್ರೊಹದ ಪಟ್ಟ ಕಟ್ಟಿರುವಿರಿ ಇಂದು..

ರೈತನಿಗಾಗಿ ಕಳೆದ ಶತಮಾನದಿಂದಲೂ ನಡೆದಿದೆ ಧರಣಿ ಉಪವಾಸ ಸತ್ಯಾಗ್ರಹ…
ಆದರೂ ಅವನಿಗೆ ಅವುಗಳಾವುವೂ ತೀರಿಸಲಿಲ್ಲ ಅವನ ವನವಾಸ
ಬರ ಬಂದಾಗ ರೈತನ ಬೆಳೆಗೆ ಬೆಲೆ ಕೊಡದೇ ರೈತ ಸತ್ತಾಗ …
ಚೆಕ್ಕಿನ-ಬೆಕ್ಕಿನವಾಟವಾಡಿ ಅನುಕಂಪವ ಗಿಟ್ಟಿಸಿದಿರಿ…

ರೈತರ ಹೆಸರಲಿ ಪ್ರಮಾಣ ವಚನ ಸ್ವೀಕರಿಸಿದಾಗ ಇದ್ದಂತಹ ಹುರುಪು
ಕಾಲ ಗತಿಸಿದ ಹಾಗೆ ರೈತನಿಗೆ ಸಿಗಲಿಲ್ಲ ಉಪ್ಪು….
ರೈತ ಗೀತೆಗೆ ಎದ್ದು ನಿಲ್ಲುವ ನಾವು ರೈತನ ಸಾವಿಗೆ ಎದ್ದು ನಿಲ್ಲಲಾರೆವು…
ಓ ಪ್ರಜಾಪ್ರತಿನಿಧಿಯೇ ನಿಮಗೆ ಮಾತ್ರ ಹಿಂಗಾವಲು ಮುಂಗಾವಲು ಪಡೆಯ ಕಾವಲು…
ಆದರೆ ರೈತರಿಗಾರು ಕಾವಲು…
ಕಾವಲು ಕಾಯುವವರೇ ಮೆಯುವಾಗ ಹೊಲಕ್ಕೆಲ್ಲಿಯ ಬೇಲಿ..

ನೆನಪಿರಲಿ ನಮ್ಮ ಮುಂದಿನ ಪೀಳಿಗೆಗಳು
ಆಹಾರಕ್ಕಾಗಿ ಹಾಹಾಕಾರಗೊಳ್ಳುವ ದಿನಗಳು ದೂರವಿಲ್ಲ..
ರೈತರ ಸಾವಿಗೆ ಕೊನೆಯೇ ಇಲ್ಲ
ಇನ್ನೊಬ್ಬ ರೈತ ಸಾಯುವ ಮುನ್ನ ಎಚ್ಚೆತ್ತುಕೊಳ್ಳಬೆಕೆನ್ನ ಜನ…
ರೈತರ ಸಾವಿಗೆ ಮರುಗದ ನಾವು ಇದ್ದರೂ ಸತ್ತಂತೆ..

ರೈತನುಳಿದರೆ ನಾವು
ರೈತನಳಿದರೆ ಸಾವು

ಅಗ್ನಿದಿವ್ಯಾ… ( ಅಮರೇಶ ಎಮ್ ಪಾಟೀಲ್)

Don`t copy text!