ಹಸುಗೂಸನ್ನು ಹಳ್ಳದಲ್ಲಿ ಬಿಟ್ಟು ಹೋದ ಮಹಾ ತಾಯಿ !
e-ಸುದ್ದಿ, ಬೆಳಗಾವಿ
ಸಂತಾನ ಭಾಗ್ಯ ಪಡೆಯಲು ಸಿಕ್ಕ ಸಿಕ್ಕ ದೇವರಿಗೆ ಕೈ ಮುಗಿಯುವ, ಹತ್ತಾರು ವೈದ್ಯರ ಬಳಿ ಅಲೆದಾಡುವ ದಂಪತಿ ಒಂದೆಡೆಯಾದರೆ, ಜನಿಸಿದ ಹಸುಗೂಸನ್ನು ಬಿಸಾಡಿ ಹೋಗುವ ಕಲ್ಲು ಮನಸ್ಸಿನವರು ಅಲ್ಲಲ್ಲಿ ತಮ್ಮ ವಿಕೃತ ವರ್ತನೆ ಅನಾವರಣಗೊಳಿಸುತ್ತಿರುತ್ತಾರೆ. ಬಳಗಾವಿ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ ವಿಕೃತ ರೂಪ ತೋರಿಸಿದ್ದಾಳೆ. ಹೌದು, ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಖಾನಟ್ಟಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಕರುಳ ಬಳ್ಳಿಯನ್ನು ಹಳ್ಳದಲ್ಲಿ ಬಿಸಾಡಿ ಹೋಗಿದ್ದಾಳೆ. ಹಸುಗೂಸನ್ನು ಕಂಡ ಗ್ರಾಮಸ್ಥರು ಮಗುವಿನ ಆರೈಕೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನೀಗ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ನವಜಾತ ಗಂಡು ಮಗುವನ್ನು ಹೀಗೆ ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂದಿರಬೇಕು ಎಂದು ಅಲ್ಲಿದ್ದವರು ಮರುಕ ವ್ಯಕ್ತಪಡಿಸಿದ್ದಾರೆ.