ಭಕ್ತನಾದಡೆ ಬಸವಣ್ಣನಂತಾಗಬೇಕು
ದಿನಾಂಕ 14/3/2001 ರಂದು ಗೂಗಲ್ ಮೀಟ್ ನಲ್ಲಿ *ಭಕ್ತನಾದಡೆ* *ಬಸವಣ್ಣನಂತಾಗಬೇಕು* ಎನ್ನುವ ವಿಷಯದ ಮೇಲೆ ಸಾಮೂಹಿಕ ಸಂವಾದವನ್ನು ಏರ್ಪಡಿಸಲಾಗಿತ್ತು…
*ವಚನ* *ಪ್ರಾರ್ಥನೆ*:-
*ಕುಮಾರಿ ಗ್ರೀಷ್ಮ*
ಭಕ್ತಿ ಎಂತಹುದಯ್ಯಾ ಎನ್ನುವ ಬಸವಣ್ಣನವರ ವಚನವನ್ನು ಹಾಡಿದಳು….
*ಗೀತಾ ಜಿ ಎಸ್*
ಇಬ್ಬರು ಮೂವರು ದೇವರು ಎಂದು ಉಬ್ಬಿ ಮಾತನಾಡಬೇಡ ಎನ್ನುವ ಬಸವಣ್ಣನವರ ವಚನವನ್ನು ಹಾಡಿದರು…
ಪ್ರಾಸ್ತಾವಿಕ ಭಾಷಣ ಮಾಡಿದ ರುದ್ರಮೂರ್ತಿ ಪ್ರಭುಗಳು
ದೇವರು ಬೇಕಾದರೆ ಆಗಬಹುದು ಆದರೆ ಬಸವಣ್ಣನವರಿಗೆ ಭಕ್ತರಾಗುವುದು ತುಂಬಾ ಕಷ್ಟ ಎಂದು ತಮ್ಮ ಮಾತುಗಳನ್ನು ಆರಂಭಿಸಿ,ಸಿದ್ಧರಾಮರೂ ಕೂಡ ಬಸವಣ್ಣನಂತೆ ಆಗಬೇಕೆಂದು ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಬಸವಣ್ಣನವರು ಎಲ್ಲಾ ಶರಣರನ್ನೂ ಪ್ರಶಂಸಿಸಿದ್ದಾರೆ, ನಾನು ಆ ಶರಣರಿಗಿಂತ ಚಿಕ್ಕವನು ಎಂದು ಹೇಳಿದ್ದಾರೆ, ಚಿನ್ಮಯಿ ಜ್ಞಾನಿ ಚೆನ್ನಬಸವಣ್ಣ ಅಷ್ಟಾವರಣ ಶಟಸ್ಥಲಗಳನ್ನು ನಿಮಗೆ ತಂದು ಕೊಟ್ಟಿದ್ದಾರೆ. ಭಕ್ತನಾದವನು ಶಾಂತಿಯಿಂದ ಇರಬೇಕು.ಗುರು, ಲಿಂಗ ಜಂಗಮದಲ್ಲಿ ನಿಂದನೆ ಇಲ್ಲದಿರಬೇಕು,ಭಕ್ತನಾದವನು ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕು,ಶರಣರ ಮಾರ್ಗದಲ್ಲಿ ಭಕ್ತನಿಗೇ ಮೊದಲ ಸ್ಥಾನ ವ್ಯಕ್ತಿಯಿಂದ ಸಮುಷ್ಟಿಯವರೆಗೆ ಹೋಗುವುದೇ ಶರಣ ಚಿಂತನೆ ಇದೇ ಮೊದಲ ಮೆಟ್ಟಿಲು ಎಂದು ತಿಳಿಸಿ, ಇವತ್ತಿನ ವಿಷಯದ ಬಗ್ಗೆ ಪಟ್ಟಣ ಸರ್ ಹಾಗೂ ಅನೇಕರು ತಮ್ಮ ನಿಲುವುಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು…
ಡಾ.ಶಶಿಕಾಂತ್ ಪಟ್ಟಣ ಮಾತನಾಡಿ
ಎಲ್ಲರಿಗೂ ಶರಣು ಸಮರ್ಪಿಸಿದ ಅವರು
ಬಸವಣ್ಣನೇ ತಾಯಿ
ಬಸವಣ್ಣನೇ ತಂದೆ
ಬಸವಣ್ಣನೇ ಪರಮ
ಬಂದು ಎನಗೇ
ಏನ್ನುವ ಸಿದ್ಧರಾಮೇಶ್ವರರ ವಚನದಿಂದ ತಮ್ಮ ಮಾತುಗಳನ್ನು ಆರಂಭಿಸಿ,ಭಕ್ತ ಮತ್ತು ಬಸವ ಈ ವಿಚಾರದ ಬಗ್ಗೆ 900 ವರ್ಷಗಳಿಂದ ನಿರಂತರವಾಗಿ ಚಿಂತನೆ ನಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಸ್ಪಷ್ಟ ನಿಲುವು ಸಿಗುತ್ತದೆ ಎನ್ನುವುದಾದರೆ ಅದಕ್ಕೆ ಫ.ಗು.ಹಳಕಟ್ಟಿಯವರೇ ಕಾರಣ ಎಂದು ತಿಳಿಸಿದರು..
ಸಾವಿರಾರು ವರ್ಷಗಳಿಂದ ಸನಾತನ ವ್ಯವಸ್ಥೆಯಲ್ಲಿ ಆದಿ, ಅನಾದಿಕಾಲದಿಂದಲೂ ಭಕ್ತಿ ಎಂದರೆ ಮಾಲಿಕತ್ವ, ಗುರುವಿನ ಅಧೀನದೊಳಗೆ ಇರುವವನು ಎಂದೇ ಇತ್ತು,ಆದರೆ ಬಸವಣ್ಣನವರು ಭಕ್ತ ಎನ್ನುವ ಪದಕ್ಕೆ ಒಂದು ಮೌಲಿಕ ಅರ್ಥವನ್ನು ತಂದು ಕೊಟ್ಟರು ಎಂದು ತಿಳಿಸಿದರು…
ಅಲ್ಲಮಪ್ರಭುಗಳು ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ,ಹೊಟ್ಟೆಯೋಗರದ ಮೇಲೆ ಕಲ್ಲು ಕಟ್ಟಿಕೊಂಡು ಮಾತ್ರಕ್ಕೆ ಅದು ಲಿಂಗವೇ, ಕಟ್ಟಿದಾತ ಗುರುವೇ,ಕಟ್ಟಿಸಿದಾತ ಶಿಷ್ಯನೇ ಎಂದು ಪ್ರಶ್ನಿಸುತ್ತಾರೆ. ಭಕ್ತ ಎಂದರೆ ಸಾಧಕ. ಪರಿಪೂರ್ಣವಾದ ಹೆಜ್ಜೆಯೊಳಗೆ ಸತ್ಯ ಶುದ್ಧವಾಗಿ ಅಂತರಂಗ ಬಹಿರಂಗದೊಳಗೆ ಪಾರದರ್ಶಕವಾಗಿ ಇರುವವನು ಎಂದು ಅರ್ಥ ಎಂದು ತಿಳಿಸಿದರು…
ಶರಣರು ಯಾವ ತತ್ವಗಳನ್ನೂ ಶ್ರೇಣೀಕೃತಗೊಳಿಸಲಿಲ್ಲ, ದೀಪದಿಂದ ದೀಪ ಹಚ್ಚುವಂತೆ ಇಲ್ಲಿ ಇಬ್ಬರೂ ಸಮಾನವಾಗಿ ಬೆಳಗುತ್ತಾರೆ ಯಾರೂ ದೊಡ್ಡವರಲ್ಲ ಗುರು ಮತ್ತು ಭಕ್ತಿ ಒಂದೇ ಎಂದು ತಿಳಿಸಿ, ಗುರುವನ್ನು ಮುಟ್ಟಿ ಗುರುವಾಗಬೇಕು,
ಭಕ್ತನಾದೊಡೆ ಬಸವಣ್ಣನಂತಾಗಬೇಕೆಂದು ಜೇಡರ ದಾಸಿಮಯ್ಯನ ಮಡದಿ ದುಗ್ಗಳೆ ತಿಳಿಸಿದ್ದಾಳೆ ಎಂದು ತಿಳಿಸಿದರು.ಹಾಗೆಯೇ ಚೆನ್ನಬಸವಣ್ಣನವರೂ ಕೂಡ ಬಸವಣ್ಣನವರು ಸೃಷ್ಟಿಸಿದ ಬೀಜ ನಾನು ಎಂದು ತಿಳಿಸಿದ್ದಾರೆ ಎಂದು ತಿಳಿಸಿ, ಭಕ್ತ ಶರಣು ಧರ್ಮದ ವಾರಸುದಾರ, ಅವನು ತನ್ನ ಅಸ್ತಿತ್ವವನ್ನು ಭಕ್ತರಿಗೆ ತೋರಿಸಬಲ್ಲ,ಬಸವಣ್ಣನವರು ಭಕ್ತ ಭಾವನೆಗಳನ್ನು ಗುರುತಿಸಿ ದಾನ ಮತ್ತು ದಾಸೋಹವನ್ನು ಜಾರಿಗೆ ತಂದರು…
ವಿಪ್ರರು ನುಡಿದಂತೆ ನಡೆಯದ ಆಶಾಢಭೂತಿಯನ್ನು ಸಂಪೂರ್ಣವಾಗಿ ಅವರು ಕಿತ್ತು ಹಾಕಿದರು ಎಂದು ತಿಳಿಸಿದರು..
ಬಸವಣ್ಣನವರನ್ನು ಬಸವಣ್ಣನವರಿಗೇ ಹೋಲಿಸಬೇಕು ಎಂದು ಅ.ನ.ಕೃ.ರವರು ಹೇಳಿದ್ದಾರೆ ಎಂದು ತಿಳಿಸಿ,ಬಸವನ ಮಾಟವೇ ಮಾಟ, ಬಸವಾ,ಬಸವಾ ಎನ್ನುವ ಶಬ್ದ ಹೋಯಿತು ಎಂದು ನೀಲಾಂಬಿಕೆಯೂ ಕೂಡ ಮರುಗುತ್ತಾರೆ,ಅಕ್ಕ ನಾಗಮ್ಮನೂ ಕೂಡ ಬಸವಣ್ಣನೇ ನನಗೆ ಜನ್ಮ ಕೊಟ್ಟ ತಂದೆ ಎಂದು ಸೋದರನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ತಿಳಿಸಿದರು..
ಭಕ್ತಿ ಎನ್ನುವುದು ಸಾಧನೆ,ಭಕ್ತ ಎನ್ನುವುದು ಸಾಧನೆಯ ಮಾರ್ಗದಲ್ಲಿ ಪರಿಪೂರ್ಣತೆಯನ್ನು ಕಂಡುಕೊಳ್ಳುವುದು ಎಂದು ತಿಳಿಸಿ, ಅರಿವೇ ಗುರು, ಆಚಾರವೇ ಲಿಂಗ ಹಾಗೂ ಅನುಭಾವವೇ ಜಂಗಮ ಎಂದು ತಿಳಿಸಿ,ಬಸವನ ಚಿಂತನೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು,ಭಕ್ತನಾದಡೆ ಬಸವಣ್ಣನಂತಾಗಬೇಕು ಎಂದು ತಿಳಿಸಿದರು..
ಅಲ್ಲಮಪ್ರಭುಗಳು ಒಂದೆಡೆ ಹೀಗೇ ಹೇಳಿದ್ದಾರೆ,ಅಷ್ಟಾವರಣಗಳು ಸಾಧನೆಯ ಕುರುಹುಗಳು ಮಾತ್ರ ಆಯತ,ಸ್ವಾಯತವನ್ನು ನೀನೇ ಮಾಡಿಸಿ ನನಗೆ ನೀನೇ ವಿಳಾಸವಾದೆ ಬಸವಣ್ಣ ಎಂದು ತಿಳಿಸಿದುದರ ಬಗ್ಗೆ ಹೇಳಿ, ಬಸವಣ್ಣನ ಭಕ್ತಿ ನಿಜಭಕ್ತಿ ಅವರಲ್ಲಿ ಯಾವ ಗೊಂದಲವೂ ಇರಲಿಲ್ಲ, ಜಗತ್ತಿನೊಳಗೆ ಭಕ್ತ ಎನ್ನುವುದು ಗುಲಾಮ ಅಲ್ಲ ಅವನೇ ನಿಜವಾದ ಸಾಧಕ ಎಂದು ಅಕ್ಕಮಹಾದೇವಿ ತಿಳಿಸಿದ್ದಾರೆ ಎಂದು ಹೇಳಿದರು.
ಭಕ್ತರೊಳಗೆ ಆಯ್ದಕ್ಕಿ ಲಕ್ಕಮ್ಮ ಮತ್ತು ಮುಕ್ತಾಯಕ್ಕ ಪ್ರಮುಖರು,ಲಕ್ಕಮ್ಮಳಂತೂ ಒಮ್ಮೆ ಬಸವಣ್ಣನವರನ್ನು ತನ್ನ ಮನೆಗೆ ಕರೆದು ಪ್ರಸಾದವನ್ನು ಉಣಬಡಿಸಿದ್ದಳು ಎಂದು ತಿಳಿಸಿ,ಶರಣರು ಗುರು ಶಿಷ್ಯರನ್ನು ಕೊಡಲಿಲ್ಲ, ಅವರು ಕಾಯಕ ದಾಸೋಹ ತತ್ವಗಳನ್ನು ತಂದು ಕೊಟ್ಟರು, ಬಸವಣ್ಣನವರನ್ನು ಮರೆತರೆ ಕಲ್ಯಾಣಕ್ಕೆ ಅರ್ಥವಿಲ್ಲ ಎಂದು ಆಯ್ದಕ್ಕಿ ಲಕ್ಕಮ್ಮ ಹೇಳಿರುವ ಬಗ್ಗೆ ಅದ್ಭುತವಾಗಿ ತಿಳಿಸಿದರು.
ಮುಂದುವರೆದು ನೋವಿನಿಂದ ಹೇಳಿದ ಅವರು ಗೌತಮ ಬುದ್ಧನ ಅನುಯಾಯಿಗಳು ಅವನನ್ನು ಅಪ್ಪಿಕೊಂಡರು, ಏಸುವಿನ ಅನುಯಾಯಿಗಳು ಏಸುವನ್ನು ಹಾಗೇ ಅಂಬೇಡ್ಕರ್ ರವರನ್ನೂ ಅಪ್ಪಿಕೊಂಡರು ಆದರೆ ನಾವುಗಳು ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ.ಅವರ ಮೌಲ್ಯಗಳನ್ನು ಗುರುತಿಸುವಲ್ಲಿ ಸೋತಿದ್ದೇವೆ,ದೀನ ದಲಿತರು ವಿಧವೆಯರು ಕೆಳವರ್ಗದವರಿಗೆ ಮರು ಜೀವಕೊಟ್ಟ ಬಸವಣ್ಣನವರ ಆಶಯಗಳಿಗೆ ಧಕ್ಕೆ ಬಾರದಂತೆ ನಾವು ಇನ್ನು ಮುಂದಾದರೂ ನಡೆಯೋಣ ಎಂದು ತಿಳಿಸಿದರು,ಹಾಗೆಯೇ ಹಲವಾರು ವಚನಗಳ ಅರ್ಥವನ್ನು ಸಂದರ್ಭಕ್ಕೆ ಸರಿಯಾಗಿ ವಿವರಿಸಿದರು…
*ಕುಮಾರ್ ರಾಜಣ್ಣ* :-
ನಾನು ಇಲ್ಲಿ ಏನೇ ಹೇಳಿದರೂ ಅದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿ ಹೇಳಿದ ಅವರು, ಎಲ್ಲಾ ಗುಣಗಳು ಒಬ್ಬರಲ್ಲೇ ಇದ್ದಾಗ ಮತ್ತೆ ಮತ್ತೆ ಬೇರೆ ತಿಳಿದು ಕೊಳ್ಳುವ ಅಗತ್ಯ ಇಲ್ಲ ಎಂದು ನೇರವಾಗಿ ಬಸವಣ್ಣನವರ ಪರ ಹೇಳಿದರು.ಮಾವಿನಕಾಯಿಯೊಳಗಣ ಒಂದು ಎಕ್ಕೆಯ ಕಾಯಿ ನಾನಯ್ಯ, ಎಲ್ಲಾ ಭಕ್ತರಿಗಿಂತ ನಾನೇ ಚಿಕ್ಕವನು ಎನ್ನುವ ಬಸವಣ್ಣನವರ ಹಿರಿದಾದ ಗುಣವನ್ನು ಅವರು ಶ್ಲಾಘಿಸಿದರು. ಹಾಗೆಯೇ ಯಾವ ಶರಣರೂ ಕೂಡ ಬಸವಣ್ಣನವರನ್ನು ವೈಭವೀಕರಿಸಿದ ಉದಾಹರಣೆ ಇಲ್ಲ ಎಂದು ತಿಳಿಸಿದರು…
*ಪ್ರೊ.ವಿಜಯಲಕ್ಷಿ ಪುಟ್ಟಿ* :-
ನಿಜವಾಗಿಯೂ ಇಂದು ಅತ್ಯುತ್ತಮ ವಿಷಯವನ್ನು ಕೊಟ್ಟಿದ್ದೀರಿ,ಆದರೆ ಇಂದು ನಾವು ಭಕ್ತರಾಗಿರುವುದಕ್ಕಿಂತ ಭವಿಗಳಾಗಿರುವುದೇ ಹೆಚ್ಚು ಎಂದು ತಿಳಿಸಿ, ಒಂದು ಸುಂದರ ವಚನದ ಅರ್ಥವನ್ನು ತಿಳಿಸಿದರು ಅರೆ ಭಕ್ತರಾದವರ ನೆರೆಹೊರೆ ಬೇಡ ಜೊತೆಗೆ ದಾರಿ ಸಂಗಡ ಬೇಡ ಎನ್ನುವ ವಚನದ ಅರ್ಥವೆಂದರೆ ಅಲ್ಪ ಜ್ಞಾನಿಗಳ ಜೊತೆ ನಮ್ಮ ಸ್ನೇಹ ಬೇಡ ಅವರಿಂದ ನಮಗೆ ತೊಂದರೆಯೇ ಹೆಚ್ಚು,ಆದರೆ ಜ್ಞಾನಿಗಳ ಸಾಂಗತ್ಯ ನಿಮಗೆ ಹೊರೆಯಾಗುವುದಿಲ್ಲ, ದಾರಿಯಲ್ಲಿ ಹೋಗುತ್ತಿರುವಾಗ ಉತ್ತಮ ವಿಚಾರಗಳನ್ನು ಚರ್ಚೆ ಮಾಡುತ್ತಾ ಹೋದಾಗ ದಾರಿ ಸವೆದುದೇ ಗೊತ್ತಾಗುವುದಿಲ್ಲ ನಿಜ ಭಕ್ತರ ಸಹವಾಸ ಮಾಡಬೇಕು ಎಂದು ಅವರು ತಿಳಿಸಿದರು ಹಾಗೆಯೇ ಸಂಸಾರವೆಂಬುದು ಗಾಳಿಯ ಸೊಡರು, ಸಿರಿ ಎಂಬುದು ಸಂತೆಯ ಮಂದಿ ಎನ್ನುವ ವಚನದ ಅರ್ಥವನ್ನು ತಿಳಿಸಿ,
ಸಂಸಾರವೆನ್ನುವುದು ದೀಪ ಇದ್ದ ಹಾಗೆ ಅದು ಜೋರಾಗಿ ಗಾಳಿ ಬೀಸಿದಾಗ ಹೇಗೆ ಆರುತ್ತದೋ ಹಾಗೆಯೇ, ಬೆಳ್ಳಿ ಬಂಗಾರ, ಆಸ್ಥಿಯ ಬೆನ್ನ ಹಿಂದೆ ನಾವು ಬಿದ್ದಿದ್ದೇವೆ,ಸಂತೆಯ ಮಂದಿ ನಮ್ಮನ್ನು ಅಲ್ಲಿ ಮಾತ್ರ ಮಾತನಾಡುತ್ತಾರೆ.ಆದರೆ ಅದು ನಿಜವಲ್ಲ ಅದೇ ರೀತಿ ಈ ಸಂಪತ್ತೂ ಕೂಡ ಶಾಶ್ವತವಲ್ಲ ಎಂದು ತಿಳಿಸಿದರು.ಪಟ್ಟಣ ಸರ್ ರವರು ಎಷ್ಟೋ ಬಾರಿ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವ ವಿಷಯದ ಬಗ್ಗೆ ತಿಳಿಸಿದ್ದಾರೆ.ಅಕ್ಕನ ಅರಿವಿನಲ್ಲಿ ಪರಸ್ಪರ ಚರ್ಚೆಯ ಮೂಲಕ ತಿಳಿದುಕೊಳ್ಳುತ್ತಿದ್ದೇವೆ ಜ್ಞಾನವು ಮನದ ಅಂಧಕಾರವನ್ನು ಹೋಗಲಾಡಿಸುತ್ತದೆ ಎಂದು ತಿಳಿಸಿದರು…
*ಸಂಜೀವ್ ತಂಕಲಿ* :-
ಭಕ್ತನಾಗುವುದು ಸಾಮಾನ್ಯ ವಿಷಯವಲ್ಲ,ಭಕ್ತಿಯೇ ಬೇರೆ ಜ್ಞಾನವೇ ಬೇರೆ,ಭಕ್ತನಾದ ನಿಂಗೆ ಅಹಂಕಾರ ಇರಬಾರದು, ಪರಿಪೂರ್ಣತೆ ಇದ್ದರೆ ಮಾತ್ರ ಭಕ್ತನಾಗುತ್ತಾನೆ ಎಂದು ತಿಳಿಸಿ, ತಮ್ಮನ್ನು ತಾವು ಸ್ವ ವಿಮರ್ಶೆಗೆ ಒಳಪಟ್ಟ ವ್ಯಕ್ತಿ ಎಂದರೆ ಅವರೇ ಬಸವಣ್ಣನವರು. ಎಷ್ಟೋ ವಚನದಲ್ಲಿ ಇದನ್ನು ನಾವು ಕಾಣಬಹುದು.ಮತ್ತೊಬ್ಬರಿಗೆ ಕೇಡು ಬಯಸದಂತೆ ನೋಡಿಕೊಂಡ ಇವರು ಆನು ಒಲಿದಂತೆ ಹಾಡುವೆ ಎಂದು ಕಾಯಕ ಮತ್ತು ದಾಸೋಹಕ್ಕೆ ಮಹತ್ವವನ್ನು ಕೊಟ್ಟರು.ದಿನಧ 24 ಗಂಟೆಯೂ ಪೂಜೆ ಮಾಡಿದರೆ ಅದು ಭಕ್ತಿಯಲ್ಲ ಎಂದು ತಿಳಿಸಿದರು..
*ಸೋಮಶೇಖರ್ ಮುಗ್ಧಮ್* :- ಇವರು ಮಾತನಾಡಿ ಭಕ್ತಿ ಎಂದರೆ ಬಸವಣ್ಣ, ಬಸವಣ್ಣ ಎಂದರೆ ಭಕ್ತಿ, ಎಲ್ಲಾ ಶರಣರು ಹೇಳಿದ್ದು ಇದನ್ನೇ….
ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣನಾ ನೆನೆವುದು ಎನ್ನುವ ಮಡಿವಾಳ ಮಾಚಿದೇವರ ವಚನದ ಅರ್ಥವನ್ನು ತಿಳಿಸಿ ಹೇಳಿದರು.
ಅಕ್ಕಮಹಾದೇವಿಯು ದೇವಲೋಕದವರಿಗೂ,ಮರ್ತ್ಯಲೋಕದವರಿಗೂ ಹಾಗೂ ಎಲ್ಲರಿಗೂ ಬಸವಣ್ಣನೇ ದೇವರು ಎಂದು ಹೇಳಿದ್ದಾಳೆ,ಬಸವಣ್ಣನಿಗೆ ಬಸವಣ್ಣನೇ ಸಾಟಿ ಎಂದು ಶರಣೆ ದುಗ್ಗಳೆಯೂ ಹೇಳಿದ್ದಾಳೆ ಎಂದು ತಿಳಿಸಿ, ಕಿಂಕರದಿಂದ ಶಂಕರದವರೆಗೂ ಬಸವಣ್ಣನವರು ಬೆಳೆದಿದ್ದಾರೆ ಎಂದು ತಿಳಿಸಿದರು.950 ವರ್ಷಗಳಿಂದೀಚೆಯೂ ಬಸವಣ್ಣನವರು ಚಲಾವಣೆಯಲ್ಲಿ ಇದ್ದಾರೆ ಎಂದರೆ ಅದಕ್ಕೆ ಕಾರಣ ಎಲ್ಲಾ ಕಡೆ ಬಸವ ಚಿಂತನೆಗಳು ಹರಿವ ನೀರಿನಂತೆ ಏನೇ ಅಡೆತಡೆ ಬಂದರೂ ನಿರಂತರವಾಗಿ ನಡೆಯುತ್ತಿದೆ.ಬಸವನ ಹಾದಿಯಲ್ಲಿ ನಾವು ನಡೆದರೆ ನಮ್ಮ ಬದುಕು ಪಾವನವಾಗುತ್ತದೆ ಎಂದು ತಿಳಿಸಿದರು…
*ರಾಜಶ್ರೀ ಥಳಂಗೆ* :-
ಶಶಿಕಾಂತ್ ಸರ್ ರವರು ಇವರ ಅಕ್ಕಮಹಾದೇವಿ ಚಿತ್ರವು ಇಂಗ್ಲೆಂಡ್ನಲ್ಲಿ ಮೊಟ್ಟ ಮೊದಲ ಪ್ರದರ್ಶನ ಕಾಣುತ್ತಿದೆ ಎಂದು ಅಭಿನಂದನೆಗಳನ್ನು ಸಲ್ಲಿಸಿದರು.ಅದಕ್ಕೆ ರಾಜಶ್ರೀಯವರು ಇಲ್ಲಿ ಲಾಕ್ಡೌನ್ ಇರುವುದರಿಂದ ಹಾಗಾಗಿದೆ ಎಂದಾಗ ಪಟ್ಟಣ ಸರ್ ನೊಂದು ಈ ಚಿತ್ರವನ್ನು ಒಬ್ಬ ಮಠಾಧೀಶರುಗಳೂ ನೋಡಿಲ್ಲ ಎಂದು ವಿಶಾದವ್ಯಕ್ತಪಡಿಸಿದರು…
ಅಯ್ಯಾ ನಿಮ್ಮ ಅನುಭವಿಗಳ ಸಂಗದಿಂದ ತನು ಶುದ್ಧವಾಯಿತು ನೋಡಾ ಎನ್ನುವ ಅಕ್ಕಮಹಾದೇವಿಯವರ ಸುಂದರ ವಚನವನ್ನು ಹಾಡಿದರು..
*ರೂಪ ಬಿಲ್ಲೆ* :-
ಪರಶು ಸೋಂಕಿದ ಬಳಿಕ ಕಬ್ಬುನದ ಕೇಡು ನೋಡಯ್ಯ ಎನ್ನುವ ಸಿದ್ಧರಾಮೇಶ್ವರರ ವಚನವನ್ನು ಹಾಡಿದರು…
*ಉಮೇಶ್ ಮಂತಾಳೆ* :-
ಕೊಟ್ಟಿರುವ ವಿಷಯವು ತುಂಬಾ ಸೂಕ್ತವಾಗಿದೆ ಎಂದು ತಿಳಿಸಿ, ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜ ಅಂಕುರಿಸಿ ಎನ್ನುವ ಬಸವಣ್ಣನವರ ವಚನದ ಅರ್ಥವನ್ನು ತಿಳಿಸಿ ಹೇಳಿ , ಬಸವಣ್ಣನವರು ತುಂಬಾ ಮೃದು ಹೃದಯದವರು ಅವರು ವ್ಯಕ್ತಿತ್ವ ನಮಗೆ ಆದರ್ಶ,ಭಕ್ತನಾದ ನಾನು ಅವರ ದಾರಿಯಲ್ಲಿ ಹೋಗಬೇಕು, ವೈಚಾರಿಕ ನೆಲೆಯಲ್ಲಿ ಭಕ್ತಿಯನ್ನು ಆಚರಿಸಬೇಕು, ಯಾರು ಅರೆಭಕ್ತರು ಯಾರು ನಿಜ ಭಕ್ತರು ಎಂದು ಗುರುತಿಸುವುದು ಕಷ್ಟ ಎಂದು ತಿಳಿಸಿದರು…
*ಪಾಲನೇತ್ರ ಬಾಣಾವರ* :-
ಕೋವಿಡ್ ನಿಂದಾಗಿ ಬಸವ ಚಿಂತನೆಗಳನ್ನು ಪ್ರಸಾರ ಮಾಡಲು ತುಂಬಾ ಅನುಕೂಲವಾಗಿದೆ,ಬಸವ ಭಕ್ತಿ ಎಂದು ಹೇಳುತ್ತೇವೆ.ಎಲ್ಲರೂ ವಚನಗಳನ್ನು ಉದಾಹರಣೆ ಕೊಡುತ್ತಾ ಹೇಳುತ್ತಾರೆ, ಇದರಿಂದ ಜನ ಸಾಮಾನ್ಯರಿಗೆ ಹೃದಯದಿಂದ ಹೃದಯಕ್ಕೆ ಮುಟ್ಟುತ್ತದೇನೋ ನಿಜ ಆದರೆ, ಮೊದಲು ಅದನ್ನು ಸಂಪೂರ್ಣವಾಗಿ ಜೀರ್ಣಿಸಿಕೊಂಡು ಬೇರೆಯವರಿಗೆ ಹೇಳಬೇಕು ಎಂದು ತಿಳಿಸಿದರು…
ನಂತರ ಅವರು ಬಸವಣ್ಣ ಎನ್ನುವ ಮೇಟಿಯನ್ನು ನಾವು ಕಳೆದುಕೊಂಡಿದ್ದೇವೆ, ಅದು ಶರಣ ಸಂಕುಲದಲ್ಲಿ ಹರಿದು ಹಂಚಿ ಹೋಯ್ತು, ಮುಂದೆ ಯಾರೂ ಇದರ ಕಡೆ ಗಮನ ಕೊಡಲಿಲ್ಲ ಆದ್ದರಿಂದ ಬಸವಣ್ಣನವರಿಗೆ ಬಸವಣ್ಣನವರೇ ಸಾಟಿ ಎಂದು ತಿಳಿಸಿದರು…
*ಗೌರಮ್ಮ ನಾಶೀ* ;-
ಇವರೂ ಕೂಡ ಪಾಲನೇತ್ರ ಅವರ ಮಾತಿಗೆ ಸಮ್ಮತಿ ನೀಡಿ ನಾನು ಬಹಳ ದಿನದಿಂದ ಹೇಳುವ ಮಾತನ್ನು ಅವರು ಹೇಳಿದ್ದಾರೆ, ಹಾಗಾಗಿ ದೃಷ್ಟಾಂತಗಳನ್ನು ಇಟ್ಟುಕೊಂಡು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಸಿಗಬೇಕು ಎಂದು ತಿಳಿಸಿ, ಒಂದು ಸಾರಿ ವಚನ ಚಿಂತನೆ, ಮತ್ತೊಂದು ಸಾರಿ ಅನುಭವಗಳನ್ನು ಇಟ್ಟು ಕೊಂಡು ಮಾತನಾಡಬೇಕು ಹಾಗೂ ಇದನ್ನು ಗ್ರೂಪಿನಲ್ಲಿ ಅಳವಡಿಸಬೇಕು ಎಂದು ತಿಳಿಸಿದರು…
*ಜ್ಯೋತಿ ತಿಮ್ಮಾಪುರ* :-
50,60,70 ರ ದಶಕದವರು ಬಸವಣ್ಣನವರ ತತ್ವಾದರ್ಶಗಳು ಮನೆ ಮನೆಗಳಲ್ಲಿ ರೂಢಿಯಲ್ಲಿತ್ತು. ಅದನ್ನೇ 90 ರ ದಶಕದಲ್ಲಿ ಮುಂದುವರೆಸಿದರು. ಅದರಂತೆ ಮುಂದಿನ ಜನಾಂಗದವರು ಇದನ್ನು ಅನುಸರಿಸಬೇಕು ಎಂದು ತಿಳಿಸಿದರು..
*ಕುಮಾರ್ ರಾಜಣ್ಣ* .:-
RSS ಹಿಂದೂ ಪರ ಗ್ರೂಪ್ಗಳು ಲಿಂಗಾಯತ ಫ್ಯಾಮಿಲಿ ಮೇಲೆ Target ಮಾಡುತ್ತಿವೆ, ನಾವು ಲಿಂಗಾಯತರು ನಮ್ಮ ಮನೆಯಲ್ಲಿ ಪರಿವರ್ತನೆಯಾಗಬೇಕು ಎಂದು ತಿಳಿಸಿ ಕಾರ್ಯಾಗಾರ ಮಾಡಬೇಕು ಎಂದು ತಿಳಿಸಿದರು..
*ಪ್ರಿಯಾಂಕ ಪಾಣಿ* :-
ಲಿಂಗ ಪೂಜೆ ಶಿವಯೋಗ ಎರಡೂ ವೈಯಕ್ತಿಕವಾದವು. ಮೊದಲು ಬಸವನ ಅರಿತು ವಚನದ ಪರಿಚಯ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು…
*ಗೀತಾ ಜಿ ಎಸ್* :-
ಬಸವಣ್ಣನವರ ವಿಚಾರಗಳು ಕೇವಲ ಮನೆಯ ವಾತಾವರಣದಲ್ಲಷ್ಟೇ ಸಿಗದೆ,ಶಾಲೆಯ ಪಠ್ಯ ಪುಸ್ತಕಗಳಲ್ಲಿ ಇದ್ದು ಶಿಕ್ಷಕರು ವಚನಗಳ ಸಾರವನ್ನು ಅರ್ಥವತ್ತಾಗಿ ತಿಳಿಸಿದಾಗ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಪರಿಣಾಮ ಬೀರುತ್ತದೆ. ಶರಣರ ಆದರ್ಶಗಳನ್ನು ಮಕ್ಕಳು ಅನುಸರಿಸುತ್ತಾರೆ ಎಂದು ತಿಳಿಸಿದರು…
*ಸಂಗಮೇಶ ಸಾಲೀಮಠ್* :-
RSS ಸಂಘಟನೆಯವರು Target ಮಾಡುತ್ತಿದ್ದಾರೆ ಎನ್ನುವುದು They are not force.they are request ಹಿಂದುತ್ವದ ಬಗ್ಗೆ ಹೇಳುತ್ತಾರೆ ಎಂದು ತಿಳಿಸಿದರು…
ವಚನ ಪ್ರಾರ್ಥನೆ- ವಿದ್ಯಾ ಮುಗ್ದಮ್
ಭಕ್ತನಾದೊಡೆ ಬಸವಣ್ಣನಂತಾಗಬೇಕು ಎನ್ನುವ ಸುಂದರ ವಚನವನ್ನು ಸುಶ್ರಾವ್ಯವಾಗಿ ಹಾಡಿದರು..
ಕಡೆಗೆ ರುದ್ರಮೂರ್ತಿ ಸರ್ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು…
ವರದಿ -ಜಿ.ಎಸ್.ಗೀತಾ
ಹರಮಘಟ್ಟ ಶಿವಮೊಗ್ಗ