ಕಲ್ಯಾಣ ಕರ್ನಾಟಕದ ಪ್ರತಿಭೆ ಮಹೇಶ ದೇವಶಟ್ಟಿ

ನಾವು – ನಮ್ಮವರು

ಲೇಖಕರು : ಗವಿಸಿದ್ದಪ್ಪ ವೀ.ಕೊಪ್ಪಳ

ಕೊಪ್ಪಳ : ಕಲ್ಯಾಣ ಕರ್ನಾಟಕದಲ್ಲಿ ಏನು ಉಂಟು ಏನಿಲ್ಲ. ಅತ್ಯಂತ ಫಲವತ್ತಾದ ಭೂಮಿ, ಖನಿಜ ಸಂಪತ್ತು, ವಿಶೇಷವಾಗಿ ಪ್ರತಿಭಾ ಸಂಪತ್ತು.
ಈ ಭಾಗದಲ್ಲಿ ಅನೇಕ ಪ್ರತಿಭಾವಂತರು ಇದ್ದಾರೆ. ಆದರೆ ಅವರೆಲ್ಲ ಎಲೆಮರೆ ಕಾಯಿಯಂತೆ ಯಾರ ಕಣ್ಣೀಗೂ ಕಾಣದಂತೆ ತಮ್ಮ ಕಾಯಕದಲ್ಲಿ ನಿರತರಾಗಿ, ಬಾಹ್ಯ ಪ್ರಂಪಚಕ್ಕೆ ಕಾಣದೆ ಹೋಗುತ್ತಾರೆ. ಎಲೆಮರೆ ಕಾಯಿಯಂತಿರುವ ಪ್ರತಿ ಭೆಗಳನ್ನು ಗುರುತಿಸಿ ಪರಿಚಯಿಸುವ ಅಂಕಣವೇ
*ನಾವು – ನಮ್ಮವರು ಅಂಕಣ*
ಕನ್ನಡದ ಜನಪ್ರಿಯ ದೂರದರ್ಶನ ಖಾಸಗಿ ಚಾನೆಲ್ ಆಗಿರುವ ಪಬ್ಲಿಕ್ ಟಿ.ವಿ.ಯಲ್ಲಿ “ಸಿನಿ ಅಡ್ಡ” ಕಳೆದ ಮೂರುವರೆ ವರ್ಷಗಳಿಂದ, ಒಂದ ನೂರಾ ಇಪ್ಪತ್ತೈದು ವಾರಗಳಿಂದ ನಂಬರ್ ಒನ್ ಸ್ಥಾನದಲ್ಲಿ ಮಿಂಚುತ್ತಿದೆ. ಇದಕ್ಕೆ ಯಾರು ಕಾರಣ ಗೊತ್ತೆ ? ಅವರೇ ನಮ್ಮ ಅಂಕಣದ ಹೀರೋ
ಶ್ರೀ ಮಹೇಶ ದೇವಶೆಟ್ಟಿ. ” 

ವಧು- ವರರ ಮಾಹಿತಿಗಾಗಿ ಸಂಪರ್ಕಿಸಿ-8792306857

ಇವರು ಕೊಪ್ಪಳದವರು. ಇಂದು ಕನ್ನಡ ಚಿತ್ರರಂಗದ ಘಟಾನುಘಟಿ ನಾಯಕ-ನಾಯಕಿಯರು, ಗಾಯಕರು, ನಿರ್ದೇಶಕರು, ನಿರ್ಮಾಪಕರು ಮಹೇಶ ದೇವಶೆಟ್ಟಿ ಅಂದರೆ ಎಲ್ಲಿಲ್ಲದ ಅಚ್ಚುಮೆಚ್ಚು.
ಪಬ್ಲಿಕ್ ಟಿ.ವಿ.ಯ ಸಿನಿ ಅಡ್ಡಾದ 1225 ಎಪಿಸೋಡುಗಳನ್ನು ನಿರಂತರವಾಗಿ ನಿರ್ದೇಶಿಸಿ ಹೊರತಂದಿರುವುದು ಮಹೇಶ ದೇವಶಟ್ಟಿಯ ದೊಡ್ಡ ಸಾಹಸವೇ ಸರಿ.
ದೃಶ್ಯಗಳಿಗೆ ತಕ್ಕಂತೆ ಡೈಲಾಗಗಳನ್ನು ಬರೆಯುವುದು, ಆ೦ಕರ್ ಗಳು ಹೇಳುವ ಡೈಲಾಗುಗಳಲ್ಲಿರುವ ಏರಿಳಿತಗಳನ್ನು ಗಮನಿಸಿ ತಿದ್ದುವುದು. ಪ್ರತಿ ದಿನ ಕನ್ನಡ ಚಿತ್ರರಂಗದಲ್ಲಿ ನಡೆಯುವ ಚಟುವಟಿಕೆಗಳನ್ನು ಹದ್ದಿನ ಕಣ್ಣಿನಿಂದ ಗಮನಿಸುತ್ತಾ ಎಪಿಸೋಡುಗಳನ್ನು ರೂಪಿಸುವ ಅದ್ಭುತ ಚಾಕಚಕ್ಯತೆ ಮಹೇಶನಿಗೆ ಒಲಿದಿದೆ.
ಮಹೇಶ ಎಂದು ಟಿ.ವಿ ಪರದೆಯ ಮೇಲೆ ಬಂದೇ ಇಲ್ಲಾ ! ಒಂದ ಸಾವಿರದ ಎರಡ ನೂರಾ ಇಪ್ಪತ್ತೈದು ಎಪಿಸೋಡುಗಳನ್ನು ಪರದೆಯ ಹಿಂದೆ ನಿಂತು ರೂಪಿಸಿ, ಅದರ ಯಶಸ್ಸನ್ನು ಮರೆಯಲ್ಲಿ ನಿಂತು ಆನಂದಿಸುತ್ತಾನೆ.
ಪ್ರಚಾರದ ಹುಚ್ಚು ಅವನಿಗಿಲ್ಲ.ಕಳೆದ ಎರಡು ದಿನಗಳಿಂದ ಅವರ ಕುಟುಂಬದವರನ್ನು ಅವನ ಮಿತ್ರರನ್ನು ಕೇಳಿದರೂ ಅವನ ಒಂದೇ ಒಂದು ಫೋಟೋ ಸಿಗುತ್ತಿಲ್ಲ. ಇಷ್ಟೊಂದು ಯಶಸ್ವಿ ವ್ಯಕ್ತಿ ಮಹೇಶನನ್ನು ಬೆರಳೆಣಿಕೆಯಷ್ಟು ಜನ ನೋಡಿರಬಹುದು. “ಇಡೀ ನಾಡಿಗೆ ಗೋಚರನಿದ್ದರೂ ಅಗೋಚರವಾಗಿ,ಅಗೋಚರನಿದ್ದರೂ ಗೋಚರವಾಗಿ ಉಳಿಯುವ ಕಲೆ ಮಹೇಶನಿಗೆ ಸಿದ್ಧಿಸಿದೆ”.
ಸಾಮಾನ್ಯವಾಗಿ ಚಿತ್ರರಂಗದ ಕಲಾವಿದರೆಲ್ಲ ಮಹೇಶ ದೇವಶೆಟ್ಟಿಯನ್ನು ಭಾರತೀಯ ಚಿತ್ರರಂಗದ ಎನ್ ಸೈಕ್ಲೋಪೀಡಿಯಾ ಎಂದೇ ಕರೆಯುತ್ತಾರೆ.
ಭಾರತೀಯ ಚಿತ್ರರಂಗದ ಬಗ್ಗೆ ಅಷ್ಟೊಂದು ಆಳವಾಗಿ ಅಧ್ಯಯನ ಮಾಡಿದ್ದಾನೆ, ಮಾಡುತ್ತಲೂ ಇದ್ದಾನೆ.
ಮಹೇಶ ಜರ್ನಲಿಸಂ ಹಾಗೂ ದೃಶ್ಯ ಮಾಧ್ಯಮ ಕ್ಷೇತ್ರಕ್ಕೆ ಬಂದಿದ್ದೇ ಒಂದು ಅಚ್ಚರಿ.ಏಕೆಂದರೆ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಅಧ್ಯಯನ ಮಾಡಿದ್ದು ಪುರಾತತ್ವ ಶಾಸ್ತ್ರ ( archaeology ) ದಲ್ಲಿ ಸ್ನಾತಕೋತ್ತರ ಪದವಿಯನ್ನು.”ಪುರಾತತ್ವ ಶಾಸ್ತ್ರಕ್ಕೂ ಚಿತ್ರರಂಗಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧ”.ಆದರೆ ಇವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕವನ, ಕಥೆಗಳನ್ನು ಬರೆಯುವ ಚಟವನ್ನು ಅಂಟಿಸಿಕೊಂಡಿದ್ದ.ಮುಂದೆ ಇದೇ ಇವನ ಆಸಕ್ತಿ ಆಯಿತು. ಇಪ್ಪತ್ತೊಂದನೇ ಶತಮಾನದ ಪ್ರಾರಂಭದಲ್ಲಿ ಅಂದರೆ 2000 ಇಸ್ವಿಯಲ್ಲಿ ತಲೆಯಲ್ಲಿ ಏನೇನೋ ಕನಸುಗಳನ್ನು ಕಟ್ಟಿಕೊಂಡು ಬರಿಗೈಯಿಂದ ರಾತ್ರೊ ರಾತ್ರಿ ಪರಿಚಯವಿರದ ಬೆಂಗಳೂರಿಗೆ ಬಂದು ನಿಂತಾಗ ಇವನಿಗೆ ಆಸರೆ ನೀಡಿದ್ದು ಕಪ್ಪು ಸುಂದರಿ “ಹಾಯ್ ಬೆಂಗಳೂರು”ಪತ್ರಿಕೆಯ ಸಂಪಾದಕ
ರವಿ ಬೆಳಗೆರೆಯವರು.


ಒಂದು ವರ್ಷ ಹಾಯ್ ಬೆಂಗಳೂರು ಪತ್ರಿಕೆಯ ಸಿನಿಮಾ ವಿಭಾಗದಲ್ಲಿ ಬರವಣಿಗೆಯನ್ನು ಬರೆಯುತ್ತಾ ಅನುಭವಗಳಿಸಿ, ಮುಂದೆ 2001ರಲ್ಲಿ ಇಡೀ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಿಂಚಿನಂತೆ ಅವತರಿಸಿದ ವಿ.ಆರ್.ಎಲ್ ಸಮೂಹ ಸಂಸ್ಥೆಯ ಮಾಲೀಕ ಶ್ರೀ ವಿಜಯ ಸಂಕೇಶ್ವರ ಅವರ “ವಿಜಯ ಕರ್ನಾಟಕ” ದಿನ ಪತ್ರಿಕೆಯಲ್ಲಿ ಮಹೇಶ ದೇವಶೆಟ್ಟಿ ಸೇರಿದರು.
ಮುಂದೆ ಕೆಲವೇ ವರ್ಷಗಳಲ್ಲಿ ತನ್ನ ಪ್ರತಿಭೆಯಿಂದ ವಿಜಯ ಕರ್ನಾಟಕ ಪತ್ರಿಕೆಯ ಸಿನಿ ವಿಭಾಗದ ಮುಖ್ಯಸ್ಥನಾಗಿ ಹದಿಮೂರು ವರ್ಷ ದುಡಿದು ಅನುಭವ ಗಳಿಸಿ ಅಲ್ಲಿಂದ ಪ್ರಜಾ ಟಿ.ವಿ. ಸಿನಿ ವಿಭಾಗದ ಮುಖ್ಯಸ್ಥನಾಗಿ ಕೆಲಸ ನಿರ್ವಹಿಸುತ್ತಿದ್ದ ಮಹೇಶನ ಪ್ರತಿಭೆ ಪಬ್ಲಿಕ್ ಟಿ.ವಿ.ಯ ಮುಖ್ಯಸ್ಥರು ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ ಶ್ರೀ ಎಚ್. ಆರ್. ರಂಗನಾಥ ಅವರ ಕಣ್ಣಿಗೆ ಬಿದ್ದು “ಪಬ್ಲಿಕ್ ಟಿ.ವಿ ಫಿಲ್ಮ್ ಬ್ಯೂರೋ ಚೀಫ್ ” ಆಗಿ ನೇಮಕ ಮಾಡಿಕೊಂಡರು.
ಅಂದಿನಿಂದ ಸಿನಿ ಅಡ್ಡಾದ ಕಾರ್ಯಕ್ರಮವನ್ನು ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸಿ ತಾನು ಯಶಸ್ಸಿನ ತುಟ್ಟ ತುದಿಗೆ ಏರುವ ಪ್ರಯತ್ನ ನಡೆಸಿದ್ದಾನೆ.
ಕನ್ನಡ ಚಿತ್ರರಂಗದಲ್ಲಿ ಉಂಟಾಗುವ ಸಣ್ಣ ಕದಲಿಕೆಗಳು, ಪಿಸು ಮಾತುಗಳು, ಗುಸುಗುಸುಗಳು, ರೂಮರಗಳು ಗಾಸಿಪ್ ಗಳು ಮಹೇಶನ ಲೇಸರ್ ಕಣ್ಣು ಹಾಗೂ ಕಿವಿಗಳಿಗೆ ಬೀಳದೆ ಮರೆಯಾಗಿ ಹೋಗಲು ಸಾಧ್ಯವಿಲ್ಲ ಅಷ್ಟೊಂದು ಪ್ರಬಲವಾಗಿದೆ ಮಹೇಶ ದೇವಶಟ್ಟಿಯ ನೆಟ್ ವರ್ಕ್.
ತನ್ನ ವೃತ್ತಿಯಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ವೃತ್ತಿ ನಿಷ್ಠೆ ಮೆರೆಯುತ್ತಿದ್ದಾನೆ.
ಚಿತ್ರರಂಗದ ಕುರಿತು ಅನೇಕ ಪುಸ್ತಕಗಳನ್ನು ಹೊರತಂದಿದ್ದಾನೆ. ಅವುಗಳಲ್ಲಿ ಅದ್ಭುತವಾದ ಒಂದು ಪುಸ್ತಕ “ಮೇಕಿಂಗ್ ಆಫ್ ಆಪ್ತಮಿತ್ರ” ಈ ಪುಸ್ತಕದಲ್ಲಿ ಆಪ್ತಮಿತ್ರ ಚಿತ್ರದ ತೆರೆಯ ಹಿಂದಿನ ಘಟನೆಗಳನ್ನು ಅದ್ಭುತವಾಗಿ ಬರಹದಲ್ಲಿ ವಿವರಿಸಿದ್ದಾನೆ. ಕನ್ನಡ ಚಿತ್ರರಂಗದಲ್ಲಿ ತೆರೆಯ ಹಿಂದಿನ ಘಟನೆಗಳನ್ನು ಪುಸ್ತಕ ರೂಪದಲ್ಲಿ ಇಲ್ಲಿಯವರೆಗೆ ಯಾರೂ ತಂದಿಲ್ಲ ಈ ಸಾಹಸ ಕೇವಲ ಮಹೇಶ ದೇವಶೆಟ್ಟಿಯಿಂದ ಮಾತ್ರ ಸಾಧ್ಯವಾಗಿದೆ.
ಈ ಪುಸ್ತಕವನ್ನು ಒಮ್ಮೆ ನೀವು ಓದಲೇಬೇಕು. ಭಾರತೀಯ ಚಿತ್ರರಂಗದಲ್ಲಿ ಯಾರೂ ಮೂಡಿಸದ ಹೆಜ್ಜೆಯ ಗುರುತನ್ನು ಮೂಡಿಸಿರುವ ಅದ್ಭುತ ನಟ ರಜನೀಕಾಂತ ಕುರಿತು*ರಜನಿ-ವಿಶಿಷ್ಟ-ವಿಕ್ಷಿಪ್ತ* ಇವರ ಮತ್ತೊಂದು ಕೃತಿ.

ಬೆಂಗಳೂರಿನ ರೇಣುಕಾಚಾರ್ಯ ಸಭಾಭವನದಲ್ಲಿ  ಈ ಕೃತಿಯನ್ನು ಕನ್ನಡದ ಚಿರಯೌವ್ವನಿಗ ನಟ ಶ್ರೀ ರಮೇಶ ಅರವಿಂದ, ಇನ್ನೊಬ್ಬ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿಸಿದ. 

ಈ ಕೃತಿ ಬಿಡುಗಡೆಯ ಸಮಾರಂಭಕ್ಕೆ ಮಹೇಶ ನನ್ನನ್ನು ಆಹ್ವಾನಿಸಿ ನೆರೆದಿದ್ದ ಸಭಿಕರಿಗೆಲ್ಲ ನನ್ನ ವಿದ್ಯಾ ಗುರುಗಳೆಂದು ಪರಿಚಯಿಸಿ ರಮೇಶ ಅರವಿಂದ ಹಾಗೂ ಶ್ರೀನಿವಾಸ ಮೂರ್ತಿ ಅವರಿಂದ ನನಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ,ವೇದಿಕೆಯಲ್ಲಿದ್ದ ಚಿತ್ರರಂಗದ ದಿಗ್ಗಜರ ಎದುರಿನಲ್ಲಿ ನನಗೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ದಿನ.
ಹಿಂದಿ ಚಿತ್ರರಂಗದ ದುರಂತ ನಾಯಕಿ ಸೌಂದರ್ಯದ ಖನಿ ಮೀನಾ ಕುಮಾರಿ, ಮಧುಬಾಲ ಹಾಗೂ ಚಿರಯೌವ್ವನೆ ರೇಖಾರ ಜೀವನ-ಸಾಧನೆ-ಬದುಕು ಕುರಿತು ಅದ್ಭುತವಾದ ಕೃತಿಗಳನ್ನು ಮಹೇಶ ರಚಿಸಿದ್ದಾರೆ.
ಮಹೇಶನಿಗೆ ಕನ್ನಡ ಚಿತ್ರರಂಗದ ದುರಂತ ನಾಯಕಿ ಕಲ್ಪನಾ ಹಾಗೂ ಕನ್ನಡ ಚಿತ್ರರಂಗವನ್ನೇ ತೊರೆದು ದೂರದ ಅಮೆರಿಕದಲ್ಲಿ ನೆಲೆಸಿರುವ ಅಭಿನಯ ಚತುರೆ ಆರತಿ ಅವರ ಚಿತ್ರರಂಗದ ಬದುಕು ಹಾಗೂ ಸಾಧನೆ ಕುರಿತು ಪುಸ್ತಕ ರೂಪದಲ್ಲಿ ತೆಗೆದುಕೊಂಡು ಬಾ ಎಂದು ತಿಳಿಸಿದ್ದೇನೆ.
ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಎಲೆ ಮರೆಯ ಕಾಯಿಯಂತೆ ದುಡಿದ ಕಲಾವಿದರು , ನಟ, ನಿರ್ದೇಶಕ, ಸಂಗೀತಗಾರರು,ಗಾಯಕರ “ಜೀವನ-ಸಾಧನೆ- ಬದುಕು” ಕುರಿತು ಕೃತಿಗಳನ್ನು ರಚಿಸು ಎಂದು ಹೇಳಿದ್ದೇನೆ.ಆಗಲಿ ಸರ್ ಎಂದು ಆಶ್ವಾಸನೆ ನೀಡಿದ್ದಾನೆ.
*ಕುಟುಂಬ*
ಮಹೇಶನ ತಂದೆ ಮಲಕಾಜಪ್ಪ ಮೂಲತಃ ಸುರಪುರದವರು.ಅವರು ಮದುವೆಯಾದದ್ದು ಕೊಪ್ಪಳದ ನಿಂಗಲಬಂಡಿ ಮನೆತನದ ಹೆಣ್ಣುಮಗಳನ್ನು ಹೀಗಾಗಿ ಕೊಪ್ಪಳದಲ್ಲಿಯೇ ನೆಲೆಸಿದರು. ಈ ದಂಪತಿಗಳಿಗೆ ನಾಲ್ಕು ಜನ ಗಂಡು ಮಕ್ಕಳು.ಇವರಲ್ಲಿ ಬಸವರಾಜ ಸಾಫ್ಟ್ವೇರ್ ಇಂಜಿನಿಯರ್ ಆಗಿ ಲಂಡನ್ನಲ್ಲಿ ನೆಲೆಸಿದ್ದಾನೆ, ಎರಡನೆಯವರು ಶಿವಕುಮಾರ ಕೊಪ್ಪಳದಲ್ಲಿ ಉದ್ಯಮಿಯಾಗಿದ್ದಾರೆ, ಮೂರನೆಯವರು ಪ್ರವೀಣ ಧಾರವಾಡದ ಹೈಕೋರ್ಟ್ನಲ್ಲಿ ವಕೀಲರಾಗಿದ್ದಾರೆ,ನಾಲ್ಕನೆಯವರೆ ಮಹೇಶ ದೇವಶೆಟ್ಟಿ.
ಮಹೇಶ ನನ್ನ ಶಿಷ್ಯ. ಧರ್ಮದಿಂದ ಲಿಂಗಾಯತನಾಗಿದ್ದರು ಸಂಸ್ಕಾರದಿಂದ ಜಾತ್ಯತೀತನಾಗಿ ಬೆಳೆದಿದ್ದಾನೆ.ಅವರು ಸಾಧನೆಗೊಂದು ನಿಮ್ಮ ಮೆಚ್ಚುಗೆ ಇರಲಿ.

Don`t copy text!