ಚಿಂದಿ ಚಿಂದಿ ತುತ್ತಿನ ಚೀಲ

ಚಿಂದಿ ಚಿಂದಿ ತುತ್ತಿನ ಚೀಲ

ವಯಸ್ಸು ಹದಿಮೂರೂ ದಾಟಿಲ್ಲ
ಅಲೆಯುತಿಹನವನು ಭಿಕ್ಷೆಗಾಗಿ
ಹೊಟ್ಟೆ ಹೊರೆಯುವುದಕ್ಕಲ್ಲ
ಅಮ್ಮನ ಜೀವಕ್ಕಾಗಿ ||

ಹರುಕು ಚೀಲ
ಗಾಲಿ ಹಲಗೆಯ ಮೇಲೆ ಅಮ್ಮ
ಚಿಂದಿ ಚಿಂದಿ ಯಾಗಿದೆ
ಅವನ ಭಿಕ್ಷೆಯ ಚೀಲ
ಜೊತೆಗೆ
ತುತ್ತಿನ ಚೀಲವೂ ||

ಎಲ್ಲರನು ಬೇಡುತಿಹನು
ಎಗ್ಗು-ಸಿಗ್ಗಿಲ್ಲದೇ
ದುಡ್ಡೋ ಬ್ರೆಡ್ಡೋ
ಎಲ್ಲವನು ಇಕ್ಕುತಿಹನು
ಅಮ್ಮನ ಕೈಯ್ಯಿಗೆ ||

ಪಾಪಿಗಳ ಲೋಕದಲ್ಲಿ
ಪುಣ್ಯವಂತರೂ ಉಂಟು
“ಬಂದ ಎಲ್ಲವನು
ಅಮ್ಮನಿಗೇ ಇತ್ತರೆ
ನೀನೇನು ತಿನ್ನುವಿ ?
ಬಾ ಊಟ ಮಾಡು”
ಅಂದ ಹೃದಯವಂತರಿಗೆ
ತಲೆ ಬಾಗಿ ನಮಿಸುತ್ತ
“ಬೇಡ ಸರ್ ಆ ಅನ್ನದ ಅರ್ದ
ದುಡ್ಡು ಕೊಟ್ಟರೂ ಸಾಕು
ಅಮ್ಮನ ಆಸ್ಪತ್ರೆ ಖರ್ಚು ನೀಗುತ್ತೆ.
ನನಗೆ ಹಸಿವು ರೂಢಿಯಾಗಿದೆ”
ಎಂದುತ್ತರಿಸಿದ.
ತತ್ತರಿಸಿತು ಅವರ ಮನ.
ಕಣ್ಣೊದ್ದೆಯಾಗಿ ಕೈಗಿತ್ತರು
ತಮ್ಮಲ್ಲಿದ್ದ ಹಣ ! ||

ದೂರದ ಮೈಕಿನಲ್ಲಿ
ಶಿವನು ಭಿಕ್ಷೆಗೆ ಬಂದ ನೀಡು ಬಾರೇ ತಂಗಿ
ಇವನಂಥ ಚೆಲುವರಿಲ್ಲ ನೋಡು ಬಾರೆ……”
ಹಾಡು ಮೊಳಗುತ್ತಿತ್ತು.
ಭಿಕ್ಷೆ ಚೆಲುವ ಶಿವನಿಗೆ ಮಾತ್ರ ಚೆಂದ
ನಮ್ಮಂಥ ಮನುಷ್ಯರಿಗಲ್ಲ ಅನಿಸುತ್ತಿತ್ತು ||

✍️ ಆದಪ್ಪ ಹೆಂಬಾ ಮಸ್ಕಿ

Don`t copy text!