ಶರಣು ಶರಣಾಥಿ೯ ಗಜಲ್ ಗಳು

ಪುಸ್ತಕ ಪರಿಚಯ


ಕೃತಿ….ಶರಣು ಶರಣಾಥಿ೯ ಗಜಲ್ ಗಳು
ಲೇಖಕರು…ಪ್ರೊ.ಕಾಶೀನಾಥ ಅಂಬಲಗೆ
ಪ್ರಕಾಶನ…ಪ್ರಗತಿ ಪ್ರಕಾಶನ ಕಲಬುರಗಿ
ಮೊ.ನಂ.೯೪೪೯೬೧೯೧೬೨

ಗಜಲ್ ಶಬ್ದ ವು ಅರಬ್ಬಿ ಭಾಷೆಯಿಂದ ಬಂದಿದ್ದು ಗಜಲ್ ಎಂದರೆ ಪ್ರಿಯತಮೆಯೊಡನೆ ಪಿಸು ಮಾತುಗಳಿಂದ ಹೃದಯ ತಟ್ಟುವುದು ,ಅರಬ್ಬಿ ಭಾಷೆಯಲ್ಲಿ ಗಜಲ್ ಕಾವ್ಯ ವಾಗಿ ಬೆಳೆಯದೆ ಇರಾನ್ ದೇಶ ಪ್ರವೇಶಿಸಿ ಅಲ್ಲಿಯ ಪಾಸಿ೯:ಭಾಷೆಯಲ್ಲಿ ಕಾವ್ಯ ವಾಗಿ ಬೆಳೆಯಿತು .ಅಲ್ಲಿಂದ ಉದು೯ ಭಾಷೆಗೆ ಪ್ರವೇಶಿಸಿದ ಗಜಲ್ ಉದು೯ ಕಾವ್ಯ ರಾಣಿಯಾಗಿ ಎಲ್ಲರ ಮನ ಗೆದ್ದಿತು .ಇದು ಒಂದು ಹಾಡು ಗಬ್ಬವಾಗಿದ್ದು ಇದರ ಸ್ಥಾಯಿ ಗುಣ ಪ್ರೇಮ,ವಿರಹ,ವ್ಯಾಮೋಹ ,ಅನುರಾಗ ,ಕಾಯುವಿಕೆ ,ನಿವೇದಿಸಿ ಕೊಳ್ಳುವಿಕೆ ಹೃದಯಾಳದ ಪ್ರೇಮ ತೀವ್ರತೆಯನ್ನು ತೋರಿಸುವ ,ತನ್ನತಾ ಅರಿಯುವ ಕಾವ್ಯ ವಾಗಿದೆ,ಮೃದು ಮಧುರ ಭಾವನೆಗಳಿಂದ ಸಹೃದಯರ ಮನ ಗೆಲ್ಲುತ್ತದೆ.ವಿರಹ ಕಾಯುವಿಕೆ, ಧ್ಯಾನಿಸುವೆಕೆ, ಭಾವನೆಗಳು ಕಣ್ಣಂಚಿನಲ್ಲಿ ಹನಿ ಮೂಡಿಸುತ್ತವೆ.ಹೃದಯ ನೋವಿನ ಭಾವದಿಂದ ನಲುಗಿದರೆ ಬರೆದ ಗಜಲ್ ಓದುಗರ ಮನ ಗೆಲ್ಲುತ್ತದೆ. ಗಜಲ್ ದ ಸ್ಥಾಯಿ ಗುಣವಾದ ಪ್ರೇಮ,ವಿರಹ, ಧ್ಯಾನ,ಸಂದಾನ ಗಳಾಗಿದ್ದು ಈ ಭಾವದಿಂದ ಗಜಲ್ ರಚನೆ ಯಾಗಿ ರಾಜಾಶ್ರಯದಲ್ಲಿ ಬೆಳೆಯುತ್ತಿತ್ತು. ನಂತರ ಸಮಾಜಮುಖಿಯಾಗಿ ಸಮಾಜದ ನೋವಿಗೆ ಸ್ಪಂದಿಸಿ ಗಜಲ್ ಕಾರರು ವಿವಿಧ ವಿಷಯಗಳಲ್ಲಿ ಗಜಲ್ ಬರೆಯ ತೊಡಗಿದ್ದಾರೆ.ಕನ್ನಡದ ನೆಲ ಜಲ ಸಂಸ್ಕೃತಿಗೆ ತಕ್ಕಂತೆ ಛಂದೋಬದ್ಧ ವಾಗಿ ಕನ್ನಡ ಗಜಲ್ ಗಳು ರಚನೆಯಾಗುತ್ತಿವೆ.ಆದರೂ ಕೆಲವರು ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಇಷ್ಟದಂತೆ ಬರೆಯುತ್ತಿದ್ದಾರೆ.

ಪ್ರೊ.ಕಾಶೀನಾಥ ಅಂಬಲಗೆ ಯವರು ಮೂಲತಾ ಬೀದರ ಜಿಲ್ಲೆಯವರು,ಕನ್ನಡ ಹಿಂದಿ ಭಾಷೆಯಲ್ಲಿ ಎಂ ಎ ಮಾಡಿಕೊಂಡು ವಿಶ್ವವಿದ್ಯಾಲಯ ದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಕನ್ನಡ ಹಿಂದಿ ಭಾಷೆಯಲ್ಲಿ ಒಟ್ಟು ೮೫ ಕೃತಿಗಳನ್ನು ಪ್ರಕಟಿಸಿದ್ದಾರೆ. “ಶರಣು ಶರಣಾಥಿ೯ ಗಜಲ್ ಗಳು” ಇವರ ಕನ್ನಡ ಗಜಲ್ ಗಳ ಪ್ರಥಮ ಸಂಕಲನವಾಗಿದ್ದು ,ಇವರು ಅನೇಕ ಹಿಂದಿ ಗಜಲ್ ಕಾರರ ಹಿಂದಿ ಗಜಲ್ ಗಳನ್ನು ಕನ್ನಡಕ್ಕೆ ಅನುವಾದಿಸಿ ಅನೇಕ ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ. ಇವರು ಕನ್ನಡದ ಗಜಲ್ ದ ಎರಡನೆ ಸಂಕಲನ “ಸತಿಯೇ ಸಾಕಿ ಯಾದ ಕವಿ ಸಮಯ” ಸಂಕಲನ ಪ್ರಕಟಮಾಡಿದ್ದಾರೆ.

ಪ್ರೊ.ಕಾಶಿನಾಥ ಅಂಬಲಿಗೆ ಯವರ ಪರಿಭಾಷೆಯಲ್ಲಿ ಗಜಲ್ ಎಂದರೆ”ಪ್ರಿಯತಮೆಯೊಂದಿಗೆ ಸಂವಾದ ,ಸಲ್ಲಾಪ ಎನ್ನಲಾಗಿದೆ .ಗಜಲ್ ಗಳು ಹಾಗೆ ಬೆಳೆದು ಬಂದಿವೆ.ಕೆಲವು ಗಜಲ್ ಗಳು ಇದನ್ನು ಮೀರಿದವು ಕೂಡ ಇವೆ.ಪ್ರಿಯೆತಮೆಯೊಂದಿಗೆ ಪ್ರೀತಿ ಪ್ರಣಯಗಳ ಸಲ್ಲಾಪ ಮಾತ್ರವೆಂದು ನಿಮಗಾರು ಹೇಳಿಕೊಟ್ಟರು?ಆಕೆಯೊಂದಿಗೆ ಬದುಕಿನ ವೈವಿಧ್ಯಮಯ? ಸಮಕಾಲೀನ ಬದುಕಿನ ಸಂಕೀರ್ಣತೆ ಹಾಗೂ ನೋವು ನಲಿವುಗಳ ಜಿಜ್ಞಾಸೆ ಗಳೇಕೆ ಬೇಡ?ಬೇಡವಾದರೆ ಅವಳೆಂತಹ ಪ್ರಿಯೆತಮೆ ?ಅವಳ್ಯಾವ ಪ್ರಿಯೆತಮೇ? ಇದು ಅರ್ಥವಾದರೆ ನನ್ನ ಕಾವ್ಯ ಅರ್ಥ ವಾಗುತ್ತದೆ,ನನ್ನ ಗಜಲ್ ಗಳು ಅರ್ಥವಾಗುತ್ತವೆಂದು””ಅಂಬಲಗೆಯವರು ವ್ಯಾಖ್ಯಾನಿಸಿದ್ದಾರೆ.

ಪ್ರೊ.ಕಾಶಿನಾಥ ಅಂಬಲಗೆ ಅವರ ” ಶರಣು ಶರಣಾಥಿ೯ ಗಜಲ್ ಗಳು” ಈ ಸಂಕಲನದಲ್ಲಿ ಒಟ್ಟು೩೭ ಗಜಲ್ ಗಳಿವೆ.ಈ ಸಂಕಲನದ ಗಜಲ್ ಗಳು ವಿವಿಧ ವಿಷಯಗಳ ಮೇಲೆ ರಚಿತವಾಗಿವೆ.ಸಂಕಲನದ ಶೀಷಿ೯ಕೆ ಸೂಚಿಸುವಂತೆ ಶರಣರ ತತ್ವ ಗಳನ್ನಾಧಾರಿಸಿ ಲಿಂಗಸಮಾನತೆ ಸ್ತ್ರೀ ಸ್ವಾತಂತ್ರ ಕಾಯಕ,ದಾಸೋಹ,ಧರ್ಮ,ಜಾತಿ ಬೇಧ ,ಈ ವಿಷಯಗಳ ಆಧಾರವಾಗಿಟ್ಟುಕೊಂಡು ವಚನಗಳ ರೂಪಕಗಳನ್ನು ಬಳಿಸಿ ಕೆಲವು ಗಜಲ್ ಗಳನ್ನು ರಚಿಸಿದ್ದಾರೆ. ಇನ್ನು ಕೆಲವು ಮಹಿಳಾಸಂವೇದನೆ ,ಲೈಂಗಿಕ ದೌರ್ಜನ್ಯ, ಸಮಾಜಿಕ ಕಳಕಳಿ,ಪ್ರಿಯತಮೆಯ ಕಾಯುವಿಕೆ, ವಿರಹ, ಇವುಗಳ ಮೇಲೆ ಗಜಲ್ ಗಳನ್ನು ಛಂದೋಬದ್ಧ ವಾಗಿ ಮಧುರ,ಮೃದು ಶಬ್ದ ಗಳೊಂದಿಗೆ ಲಯ,ಗೇಯತೆಯಿಂದ ಭಾವತೀವ್ರತೆಯಿಂದ ಗಜಲ್ ಗಳನ್ನು ಹಾಡುವ ಹಾಗೆ ಶುದ್ಧ ಕನ್ನಡ ಶಬ್ದ ಗಳನ್ನು ಉಪಯೋಗಿಸಿ ಸೊಗಸಾಗಿ ಗಜಲ್ ಗಳನ್ನು ರಚಿಸಿದ್ದಾರೆ.ಈ ಸಂಕಲನದ ಗಜಲ್ ಗಳು ಓದುಗರ ಮನ ಗೆಲ್ಲುತ್ತವೆ ಮತ್ತು ಮನದಾಳದಲ್ಲಿ ನಿಲ್ಲುತ್ತವೆ.

ಈ ಸಂಕಲನದಲ್ಲಿ ನನಗೆ ಇಷ್ಟವಾದ ಮತ್ತು ಕಾಡುವ ಹಾಗೂ ಚಿಂತನೆಗೆ ಹಚ್ಚುವ ಕೆಲವು ಗಜಲ್ ಗಳ ಮಿಸ್ರಾ ಗಳು.

ವೈದೇಹಿ ಯರ ಅಗ್ನಿ ಪರೀಕ್ಷೆಗೊಡ್ಡುವ ರಾಮರು ಬದಲಿ ಇರಬಹುದು”
“ಹೆಣ್ಣು ಬೆಂಕಿಗಾಹುತಿಯಾಗುವ ದುಃಖಾಂತಗಳು ಬದಲಾಗಲೇ ಇಲ್ಲ”(ಗಜಲ್ ೩)

“ವಿಶ್ವವನೇ ಗೆದ್ದು ಸಾಮ್ರಾಟನಾಗುವೆ ಎಂದು ತಿಳಿದು ಕೊಂಡಿರುವಿ”
“ನಿನ್ನ ಮನಸಿಗೆ ಮಾಲೀಕನಾಗುವುದು ಕಲಿತುಕೋ ಮನುಷ್ಯ ನಾಗುವಿ” ( ಗ ೬)

“ಯುಗಗಳ ನಂತರ ಬಂದಿರುವಿ ತಕ್ಷಣವೇ ಹೊರಡುವ ಮಾತಾಡುವಿಯಲ್ಲ”
“ನಿನ್ನ ಸಾನಿಧ್ಯದಲ್ಲಿ ಗದ್ಯವಾಗಿದ್ದವ ಪದ್ಯವಾದೆ ನೀನು ಹಾಡಲೇ ಇಲ್ಲ” (ಗಜಲ್ ೧೮)

ಊರ ಗೌಡನ ಮಗನಿಗೆ ಮೀಸೆ ಮೂಡಿದ್ದೇ ಕೆಟ್ಟ ಕಾಲ”
“ಯುವತಿಯರು ನದಿ ನೀರಿಗೆ ಬರೋದು ಬಿಟ್ಟಿದ್ದೇ ಕೆಟ್ಟ ಕಾಲ”(ಗಜಲ್೨೦)

” ಪ್ರೇಮದ ಮೊಗ್ಗು ಗಳ ಅರಳುವುದು ತಡೆಯಲು ಆಗುವುದಿಲ್ಲ”
“ಪ್ರೀತಿಯ ಸುಗಂಧದ ಗಾಳಿಗೆ ಈಗ ಮುಚ್ಚಿಡಲು ಆಗುವುದಿಲ್ಲ( ಗಜಲ್ ೨೭)

” ಹೆಣ್ಣುಸಾಕ್ಷಾತ ಕಪಿಲಸಿದ್ಧ ಮಲ್ಲಿಕಾಜು೯ನವಾದ ನಿಮಗೆ ,ಶರಣು ಶರಣಾಥಿ೯”
“ಮನು ಸ್ಮೃತಿ ಯಿಂದ ಗುಲಾಮಳಾದವಳು ಸಮಕ್ಕೆ ನಿಂತಳು ನಿಮಗೆ ಶರಣು ಶರಣಾಥಿ೯”(ಗಜಲ್ ೩೫)

ಜಗದ ಮಹಿಳೆಯರು ಮೌನವೆಂಬ ಒಂದೇಭಾಷೆ ಮಾತಾಡಿದರು
ಅನುಭವ ಮಂಟಪದಿ ಶರಣರು ಮುರಿದಭಾಷೆ ಮಾತಾಡಿದರು” (ಗಜಲ್೩೭)

“ಅಕ್ಕಮಹಾದೇವಿ, ಸತ್ಯಕ್ಕ,ಸೂಳೆಸಂಕವೈಯಾದಿ ನೂರಾರು ಶಿವ ಶರಣೆ”
“ವೇದಕ್ಕೆ ಬರೆಯನಿಕ್ಕಿದರು ಯುಗ ಯುಗಗಳ ಮೌನಕ್ಕೆ ಬರೆಯನಿಕ್ಕಿದರು” (ಗಜಲ್೩೬)

“ಕಾಯಕವು ಜಂಗಮಕ್ಕಾಗಿಯೇ ಆರಂಭವ ಮಾಡಬೇಕು”
“ಕಾಯಕದಿ ಜಗದ ಪ್ರೀತಿಗಾಗಿ ಮನ ಕಾಯ್ದುಕೋಬೇಕು” (ಗಜಲ್೩೭)

ಪ್ರೊ ಕಾಶಿನಾಥ ಅಂಬಲಗೆ ಯವರ “ಶರಣು ಶರಣಾಥಿ೯ ಗಜಲ್ಗಳು” ಸಂಕಲನದಲ್ಲಿ ಇಂತಹಮಅನೇಕ ಮಿಸ್ರಾ ಗಳು ಓದುಗರ ಮನ ಗೆಲ್ಲುತ್ತವೆ,ಕಾಡುತ್ತವೆ ಚಿಂತನೆಗೆ ಹಚ್ಚುತ್ತವೆ.ಅಂಬಲಗೆಯವರು ಇಂಥಹ ಪ್ರೌಢತೆಯಿಂದ ತುಂಬಿ ತುಳುಕುವ ಸುಂದರ ಗಜಲ್ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದು ,ನಾವೆಲ್ಲ ಓದಿ ಆನಂದಿಸಲು ಹಚ್ಚಿದ್ದು ನಿಜಕ್ಕೂ ಅಭಿನಂದನೆಗಳು.ಈ ಹಿರಿಯ ಗಜಲ್ ಕಾರರ ಸಂಕಲನಗಳು ಯುವ ಗಜಲ್ ಕಾರರಿಗೆ ಓದವ ಮತ್ತು ಬರೆಯುವವರಿಗೆ ಮಾರ್ಗದರ್ಶನವಾಗಲು ಇನ್ನಷ್ಟು ಕೃತಿಗಳು ಇವರಿಂದ ಹೊಂಬರಲೆಂದು ಆಶಿಸುತ್ತಾ ವಂದಿಸುವೆ.

ಪ್ರಭಾವತಿ ಎಸ್ ದೇಸಾಯಿ ವಿಜಯಪುರ
ಮೊ.೮೪೦೮೮ ೫೪೧೦೮

Don`t copy text!