ಯುಗಯುಗಗಳು ಸಂದಿವೆ ಹೊಸತನದ ನಿರೀಕ್ಷೆಯಲಿ…

ಯುಗಯುಗಗಳು ಸಂದಿವೆ ಹೊಸತನದ ನಿರೀಕ್ಷೆಯಲಿ…

ಗಿಡಮರಗಳೆಲ್ಲವೂ ಹಳತನ್ನು ಕಳಚಿಕೊಂಡು ಹೊಸ ಚಿಗುರೊಡೆದು ಮತ್ತೆ ನಳನಳಿಸುವ ಈ ಅದ್ಭುತ ಸೃಷ್ಟಿಯು ಏನು ಸಂದೇಶ ನೀಡುತಿದೆ ? ಎಲ್ಲವೂ ಪರಿವರ್ತನೆಯಾಗುತ್ತಲಿಹುದು . ನಿನ್ನೆಗಳ ತುಳಿದು ಇಂದಿಗೆ ನಿಂದು, ನಾಳೆಯತ್ತ ಹೆಜ್ಜೆ ಹಾಕುತ್ತಲಿರುವ ಸಮಯ ಅನುಕ್ಷಣವೂ ತನ್ನನೇ ತಾ ಹಿಂದಿಕ್ಕಿ ಮುನ್ನಡೆಯುತಿದೆ. ಮನುಷ್ಯ ಏಕೆ ಬದಲಾವಣೆಯನ್ನು ಅಪ್ಪಿಕೊಳ್ಳಲಾರ ? ಲೌಕಿಕ ಬದುಕಿನ ಎಲ್ಲ ವಸ್ತು, ವಿಷಯಗಳಲ್ಲಿ ಹೊಸದಕ್ಕಾಗಿ ತುಡಿವ ಮನುಜ ಆಂತರಿಕವಾಗಿ ಎಂದಾದರೂ ಬದಲಾಗಿದ್ದಾನೆಯೆ ಅಥವಾ ಬದಲಾವಣೆ ಬಯಸಿದ್ದಾನೆಯೆ ಎಂಬುದು ಸ್ವಗತ. ಮನುಷ್ಯ ತನ್ನ ನ್ಯೂನ್ಯತೆ, ಸಿಟ್ಟು, ತಪ್ಪು, ಒಪ್ಪು, ಅಹಂಕಾರ ಎಲ್ಲವುಗಳನು ಕಳಚಿಕೊಂಡು ಏಕೆ ಬದಲಾಗಲಾರ? ಹಳ್ಳ, ಕೊಳ್ಳ, ನದಿ ಎಲ್ಲೊ ಹುಟ್ಟಿ ಎಲ್ಲೊ ಹರಿದು ಬದಲಾಗುತ್ತಲೇ ಸಾಗುವುದು ಕಡಲು ಸೇರುವವರೆಗೂ, ಕಡಲು ಸೇರಿದ ಬಳಿಕ ಸಂಪೂರ್ಣವಾಗಿ ಕಡಲೆಂಬ ವಿಶಾಲತೆಯಲ್ಲಿ ತಾನೆಂಬ ಅಸ್ತಿತ್ವವನ್ನು ಕಳೆದುಕೊಳ್ಳುವಿಕೆ. ನಿತ್ಯ ಮರಣ, ನಿತ್ಯ ಜನನ ಎಂದು ಕವಿಗಳು ಹೇಳುವಂತೆ ಮಲಗಿದಾಗ ಮರಣ, ಎದ್ದಾಗ ಮರುಹುಟ್ಟು . ಈ ಮರುಹುಟ್ಟು ಹೊಸಬದುಕಿನತ್ತ ಮುಖ ಮಾಡಲಿ. ನಿತ್ಯ ಕಸಗುಡಿಸಿ ಅಂಗಳ ತೊಳೆದು ರಂಗವಲಿಯನಿಕ್ಕುವ ಮನಸುಗಳು ತಮ್ಮ ತಾ ಗುಡಿಸಿ ತೊಳೆದು ಹೊಸಭಾವದ ರಂಗವಲಿಯನಿಕ್ಕಬಲ್ಲವೆ?

ನಿತ್ಯ ಬದುಕಿಗೆ ಹೊಸತನ ಕೊಡುವ ಮೂಲ ಯಾವುದು? ಅದುವೆ ನಮ್ಮ ಆಂತರಿಕ ಬದಲಾವಣೆ . ಹೊಸಭಾವ, ಆಲೋಚನೆ, ಕನಸು, ಸಂಕಲ್ಪ ಇವಲ್ಲದೆ ಹೊಸ ಮನೆ, ಬಟ್ಟೆ, ಕಾರು , ವೈಭವೋಪೇತ ಐಷಾರಾಮಿ ಸರಕುಗಳು ಬದುಕಿಗೆ ಹೊಸತನ್ನು ಕೊಡಬಲ್ಲವೆ? ಹೊಸದಾಗಿ ತಂದಾಗ ಸಂಭ್ರಮ ಅದರ ಬೆನ್ನಲ್ಲೇ ಕ್ಷಣಭಂಗುರ . ಕ್ಷಣಿಕ ಆನಂದಕಾಗಿ ಅದರ ಬೆನ್ನಲ್ಲೇ ಮತ್ತೊಂದರ ಬೆನ್ನು ಹತ್ತುವ ಹುಚ್ಚು ಕುದುರೆ ಈ ಮನಸು. ಆನಂದದ ಅನ್ವೇಷಣೆಯಲ್ಲೇ ಬದುಕು ಮುನ್ನುಗ್ಗುತಿದೆ, ಅದೋ ಸಿಕ್ಕಂತಾಗುವದು ಸಿಗದೆ ಓಡುವುದು. ಆದರೂ ಇಂದು ಸಿಕ್ಕೀತು ನಾಳೆ ಸಿಕ್ಕೀತು ಎಂಬ ಭ್ರಮೆಯಲ್ಲಿ ಸಿಗುವ ಸಿಗದಿರುವ ವಿಷಯ ದ ಅಂತ್ಯ ಆಗಿಯೆ ಬಿಡುವುದು. ಅದಕ್ಕೆಂದೇ ಹೇಳುವರು ಅಲ್ಲಮರು ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ ಸಿಕ್ಕದೆಂಬ ಬಳಲಿಕೆಯ ನೋಡಾ ಎಂದು. ಈ ಜಗತ್ತಿನಲ್ಲಿ ಯಾರೂ ಶಾಶ್ವತವಾಗಿ ಇರಲು ಬಂದಿಲ್ಲ. ಇದು ಸೃಷ್ಟಿಯ ವಿಕಾಸಚಕ್ರ. ಕರೆಯದೆ ಬಂದುದ ಹೇಳದೆ ಹೋದುದನಾರೂ ಅರಿಯರಲ್ಲಾ ಎಂಬ ಅಲ್ಲಮರ ವಚನದಂತೆ ಎಲ್ಲರೂ ಸಾಮಾನ್ಯ ವಾಗಿ ಹುಟ್ಟಿ ಸಾಮಾನ್ಯ ವಾಗಿ ಅಳಿದುಹೋಗುವರು , ನಿತ್ಯ ಸತ್ಯವಾದದ್ದನ್ನು ಅರಿಯದೆ ಹೊರಟುಹೋಗುವರು. ಕತ್ತಲೆ ಬೆಳಕೆಂಬುದಿಲ್ಲ ನಿತ್ಯನಾದವಂಗೆ , ಚಿತ್ತ, ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಕಂಡವಂಗೆ , ನಿತ್ಯ ಅನಿತ್ಯವೆಂಬುದಿಲ್ಲ ಸತ್ಯ ತಾನಾದವಂಗೆ ಎಂಬ ಮಾತು ಎಷ್ಟು ಅನುಪಮವಾಗಿದೆ.


ಹಾಗಾದರೆ ಪರಮಸುಖದ ನೆಲೆ ಯಾವದು ? ದುಃಖಕ್ಕೆ ಈಡು ಮಾಡುವ ಸುಖ ಪರಮಸುಖ ಹೇಗಾದೀತು? ನಿತ್ಯ ಸತ್ಯ ಯಾವದು? ಸರಮ ಸುಖ ಯಾವದು ? ಒಂದೊಮ್ಮೆ ಇತ್ತ ಚಿತ್ತ ಹರಸಿದರೆ ಎಲ್ಲ ಭ್ರಮೆಗಳೂ ಕಳಚಿಕೊಂಡು ಹೊಸಭಾವದ ಹೊಸದಿಕ್ಕುಗಳು ಉದಿಸಿ ಹೊಸದಿಗಂತವು ಗೋಚರಿಸುವದು. ಆಗ ನಿಜವಾದ ಹೊಸಹುಟ್ಟು ಹೊಸಯುಗ ಹೊಸ ನಿರೀಕ್ಷೆಗಳ ಹೊತ್ತ ವಿಸ್ತಾರವಾದ ಈ ಕ್ಷಿತಿಜ.

 

ಸುನಿತಾ ಮೂರಶಿಳ್ಳಿ,
ಧಾರವಾಡ.

Don`t copy text!