– ಗವಿಸಿದ್ದಪ್ಪ ವೀ.ಕೊಪ್ಪಳ
ವಿಜಯಪುರ : ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಿಡುವ 2019 ನೆ ಸಾಲಿನ “ಜಿ.ಪಿ.ರಾಜರತ್ನಂ” ಪರಿಚಾರಕ ಪ್ರಶಸ್ತಿಯು ಸಿಂದಗಿಯ ಡಾ.ಎಂ.ಎಂ.ಪಡಶೆಟ್ಟಿ ಅವರನ್ನು ಹುಡುಕಿಕೊಂಡು ಬಂದಿದೆ.
ಸಾಹಿತಿಗಳನ್ನು, ಸಾಹಿತ್ಯ ಕೃತಿಗಳನ್ನು ಜಾತಿ, ಮತ, ಪಂಥ, ಧರ್ಮಗಳಿಂದ ಅಳೆಯಲಾಗದು.ತನ್ನ ಸುತ್ತಲೂ ನಡೆಯುವ ಘಟನೆಗಳನ್ನ, ದೃಶ್ಯಗಳನ್ನ,ನೋವು-ನಲಿವುಗಳನ್ನ, ಸುಖ-ದುಃಖಗಳನ್ನು ಓದುಗರ ಮನ ಮುಟ್ಟುವಂತೆ ಹೇಳುವುದು ಸಾಹಿತಿಯ ಧರ್ಮ.
ಭೂತ, ಭವಿಷ್ಯತ್,ಹಾಗೂ ವರ್ತಮಾನ ಕಾಲದಲ್ಲಿ ನಡೆದಿರುವ, ನಡೆಯುವ,ನಡೆಯುತ್ತಿರುವ ವಿಷಯಗಳನ್ನು ಪಕ್ಷಪಾತವಿಲ್ಲದೆ ಓದುಗರ ಮುಂದಿಡುವುದು ಲೇಖಕರ, ಬರಹಗಾರರ ಹಾಗೂ ಸಾಹಿತಿಗಳ ಧರ್ಮ.ಈ ಸಾಲಿಗೆ ಸೇರಿದವರು ಡಾ.ಎಂ.ಎಂ.ಪಡಶೆಟ್ಟಿಯವರು ಎಂಬುದು ನಮಗೆಲ್ಲ ಹೆಮ್ಮೆ.
ಡಾ.ಎಂ.ಎಂ.ಪಡಶೆಟ್ಟಿ ಅವರನ್ನು ನಾನು ಮೊಟ್ಟ ಮೊದಲು ನೋಡಿದ್ದು ಸಿಂದಗಿಯಲ್ಲಿ. ಸಿಂದಗಿಯ ಹಿರಿಯರು ಡಾ.ಪಡಶೆಟ್ಟಿ ಗುರುಗಳನ್ನು ಪರಿಚಯಿಸಿದರು.ಅಷ್ಟೊತ್ತಿಗಾಗಲೇ ಪಡಶೆಟ್ಟಿ ಗುರುಗಳು ನನಗೆ ಅವರ ಕೃತಿಗಳು ಮತ್ತು ಲೇಖನಗಳಿಂದ ಪರಿಚಯವಾಗಿದ್ದರು.ಆದರೆ ಮುಖಾಮುಖಿ ಬೆಟ್ಟಿ ಆಗಿದ್ದು ಸಿಂದಗಿಯಲ್ಲಿ.
ನಾನು ಲೇಖಕ, ಬರಹಗಾರ, ಸಾಹಿತಿಯೆನ್ನುವ ಹಮ್ಮು-ಬಿಮ್ಮು ಅವರ ಬಳಿ ಸುಳಿದೇ ಇಲ್ಲ ಅನ್ನಿಸುತ್ತದೆ ಅಷ್ಟೊಂದು ನಿಗರ್ವಿ ಪಡಶೆಟ್ಟಿ ಗುರುಗಳು.ಪ್ರಶಸ್ತಿ ಪುರಸ್ಕಾರಕ್ಕೆ ಲಾಬಿ ಮಾಡಿದವರೇ ಅಲ್ಲ.ತಮಗೆಲ್ಲ ಗೊತ್ತಿರಬಹುದು ಡಾ.ಎಂ.ಎಂ ಪಡಶೆಟ್ಟಿ ಅವರು ಡಾ.ಎಂ.ಎಂ ಕಲಬುರ್ಗಿ ಅವರ ಶಿಷ್ಯಂದಿರು.ಕಲಬುರ್ಗಿ ಸರ್ ಗೆ ಪಡಶೆಟ್ಟಿ ಅವರು ತಮ್ಮ ಊರಿನವರು ಅನ್ನುವ ಪ್ರೀತಿ ಒಂದು ಕಡೆಯಾದರೆ, ಇವರಲ್ಲಿರುವ ಪ್ರತಿಭೆ, ಅನ್ವೇಷಣಾ ಹಾಗೂ ಸಂಶೋಧನಾ ಗುಣ ಕಲಬುರ್ಗಿ ಸರ್ ಮೆಚ್ಚುಗೆಗೆ ಪಾತ್ರವಾಗಿತ್ತು. ಬಣಜಿಗ ಸಮಾಜದ ಕುರಿತು ವೈಜ್ಞಾನಿಕ ಮತ್ತು ಐತಿಹಾಸಿಕವಾದ ಸಂಶೋಧನಾ ಗ್ರಂಥವನ್ನು ಹೊರತರಬೇಕೆಂದು ಮಾಡಿದ್ದೇವೆ, ಇದು ಯಾರಿಂದ ಸಾಧ್ಯ ಸರ್ ಎಂದು ಡಾ.ಕಲಬುರ್ಗಿ ಸರ್ ಅವರನ್ನು ಕೇಳಿದಾಗ ಅವರು ಥಟ್ಟಂತ ಹೇಳಿದ್ದು ಡಾ.ಎಸ್.ಕೆ. ಕೊಪ್ಪ ಹಾಗೂ ಡಾ.ಎಂ.ಎಂ.ಪಡಶೆಟ್ಟಿ ಅವರ ಹೆಸರನ್ನು.
ರಾಜ್ಯಾಧ್ಯಕ್ಷರಾಗಿದ್ದ ಲಿಂ.ಮಲ್ಲಿಕಾರ್ಜುನ ಅಗಡಿಯವರು, ನಾನು, ಎಂ.ವಿ. ಗೊಂಗಡಶೆಟ್ಟಿ, ಎಂ,ಜಿ.ಕುಂಬಾರಿ,ಎಸ್.ವಿ.ಅಂಗಡಿ ಯವರು, ಡಾ.ಎಸ್.ಕೆ. ಕೊಪ್ಪ ಮತ್ತು ಡಾ.ಪಡಶೆಟ್ಟಿ ಗುರುಗಳೊಂದಿಗೆ ಸೇರಿಕೊಂಡು ಧಾರವಾಡದ ಡಾ.ಎಂ.ಎಂ. ಕಲಬುರ್ಗಿ ಸರ್ ಮನೆಯಲ್ಲಿ ಇದರ ಬಗ್ಗೆ ಒಂದು ಪೂರ್ವಭಾವಿ ಸಭೆಯನ್ನು ನಡೆಸಿ ಡಾ.ಎಸ್.ಕೆ. ಕೊಪ್ಪ ಮತ್ತು ಡಾ.ಪಡಶೆಟ್ಟಿಯವರಿಗೆ ಆ ಜವಾಬ್ದಾರಿಯನ್ನು ಅಂದು ಹೊರಿಸಿದ್ದೆವು.
ಆದರೆ ಕಾರಣಾಂತರಗಳಿಂದ ಆ ಕೆಲಸ ಕುಂಠಿತಗೊಂಡಿದೆ ಅದರೆ ಮುಂದುವರೆದಿಲ್ಲ.ಮುಂದುವರೆಯದಿರುವುದಕ್ಕೆ ಡಾ.ಎಸ್.ಕೆ.ಕೊಪ್ಪ ಮತ್ತು ಡಾ. ಎಂ.ಎಂ.ಪಡಶೆಟ್ಟಿ ಯವರು ಕಾರಣರಲ್ಲ.
ಡಾ. ಎಂ.ಎಂ.ಪಡಶೆಟ್ಟಿ ಗುರುಗಳನ್ನು ಕೊಪ್ಪಳದ ಕೋಟೆ ಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಶ್ರಾವಣ ಮಾಸದ ಕಾರ್ಯಕ್ರಮಕ್ಕೆ ಆಮಂತ್ರಿಸಿದಾಗ ಸಂತೋಷದಿಂದ ಬಂದು ಉಪನ್ಯಾಸವನ್ನು ನೀಡಿದ್ದರು.ಅಷ್ಟು ದೂರದಿಂದ ಕೊಪ್ಪಳಕ್ಕೆ ಬರಲು ಅವರು ಕಾರನ್ನು ಕೇಳಲಿಲ್ಲ. ಕೆಂಪು ಬಸ್ಸಿನಲ್ಲೆ ಬಂದು ಕೆಂಪು ಬಸ್ಸಿನಲ್ಲಿಯೇ ಊರಿಗೆ ಹೋದ ಸರಳ ಜೀವಿ ಡಾ.ಪಡಶೆಟ್ಟಿ ಗುರುಗಳು. ಡಾ.ಪಡಶೆಟ್ಟಿ ಗುರುಗಳ ಸರಳತನವನ್ನು ಕೊಪ್ಪಳದ ಲಿಂಗಾಯತ ತರುಣ ಸಂಘದವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.ಡಾ. ಎಂ. ಎಂ. ಪಡಶೆಟ್ಟಿ ಅವರು ಎಡ-ಬಲ ವಿಚಾರಧಾರೆ ಅಥವಾ ಯಾವುದೇ ಇಸಂಗಳ ಗುಂಪಿಗೆ ಸೇರಿದವರಲ್ಲ.ಸಾಹಿತ್ಯದ ಯಾವುದೇ ಭ್ರಮೆಗಳ ಸುಳಿಯಲ್ಲಿ ಸಿಲುಕಿದವರಲ್ಲ.”ಸತ್ಯ-ಅನ್ವೇಷಣೆ-ವಾಸ್ತವ” ಈ ಗುಂಪಿಗೆ ಸೇರಿದವರು ಡಾ.ಪಡಶೆಟ್ಟಿ ಗುರುಗಳು. ಸುಮಾರು ಅರುವತ್ತು (60) ಕೃತಿಗಳನ್ನು ಹೊರತಂದ ಸಿಂಧಗಿಯ ಪ್ರಸಿದ್ಧ “ನೆಲೆ ಪ್ರಕಾಶನ” ಸಂಸ್ಥೆಯವರು ಡಾ. ಎಂ.ಎಂ.ಪಡಶೆಟ್ಟಿ ಅವರ ಬದುಕು, ಬರಹ, ಕೃತಿಗಳು, ಜೀವನ, ಸಾಧನೆ ಕುರಿತು “ನಿರಾಳ” ಎನ್ನುವ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಅಷ್ಟೊಂದು ಕೆಲಸವನ್ನು ಪಡಶೆಟ್ಟಿ ಗುರುಗಳು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ್ದಾರೆ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಷಯ.
ವೃತ್ತಿಯಿಂದ ನಿವೃತ್ತಿ ಪಡೆದ ನಂತರ ಗೆಳೆಯರೆಲ್ಲ ಕೂಡಿಕೊಂಡು ಸಿಂಧಗಿಯಲ್ಲಿ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾಹಿತ್ಯ ಕೃಷಿಯ ಜೊತೆ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಕಾರ್ಯನಿರತರಾಗಿದ್ದಾರೆ. ಮತ್ತಷ್ಟು ಕೃತಿಗಳು ಇದರಿಂದ ಹೊರಬರಲಿ.ಇವರ ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಮೆರುಗು ಬರಲಿ ಎಂದು ಆಶಿಸೋಣ. ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ 2019 ನೇ ಸಾಲಿನ “ಜಿ.ಪಿ. ರಾಜರತ್ನಂ ಪರಿಚಾರಕ” ಪ್ರಶಸ್ತಿಯನ್ನು ಪಡೆದ ಡಾ.ಎಂ.ಎಂ ಪಡಶೆಟ್ಟಿ ಗುರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಡಾ.ಪಡಶೆಟ್ಟಿ ಗುರುಗಳಿಗೆ ಮಹಾತ್ಮ ಬಸವೇಶ್ವರ ಆಯುಷ್ಯ, ಆರೋಗ್ಯ, ಸಂಪತ್ತನ್ನು ಕರುಣಿಸಲಿ.ದೇವಿ ಸರಸ್ವತಿ ಡಾ.ಪಡಶೆಟ್ಟಿ ಗುರುಗಳ ಕೈ ಬೆರಳುಗಳಲ್ಲಿ ನಲಿದಾಡಲಿ ಎಂದು ಪ್ರಾರ್ಥಿಸುತ್ತೇನೆ …