ಜೀರೋ ಬ್ಯಾಲೆನ್ಸ್

ಪುಸ್ತಕ ಪರಿಚಯ
” ಜೀರೋ ಬ್ಯಾಲೆನ್ಸ್ “
( ಕವಿತೆಗಳು )
—– ಡಾ. ಶೃತಿ ಬಿ ಆರ್
“ಮನಸ್ಥಿತಿಯನ್ನು ಬ್ಯಾಲೆನ್ಸ್ಡ್ ಮಾಡುವ
ಹೀರೋ ಕವಿತೆಗಳು”

ರಾಧೆಯ ತುಟಿಯ
ಕಡುಗೆಂಪು ಲಿಪ್ ಸ್ಟಿಕ್ಕು
ಅವಳ ಮನೆಯ ದಿನಸಿಗೆ
ದಿಕ್ಕಾಗಿದೆಯಂತೆ!
ಅವಳೀಗ ಶಾಪಿಂಗು ಮಾಲಿನ
ದೊಡ್ಡಂಗಡಿಯಲಿ
ಸೇಲ್ಸ್ ಗರ್ಲಂತೆ! “

” ಮೈತುಂಬ ಸೆರಗೊದ್ದಿದ್ದರೂ
ಮೆಸೇಜುಗಳಲ್ಲೇ
ಮೈಸವರಿ, ಆನ್ ಲೈನಿನಲ್ಲೇ
ಸ್ಖಲಿಸಿ ಸುಖಿಸುವ
ಇಂದ್ರರ ಕಂಡು ಅಸಹ್ಯದಿಂದ
ಮತ್ತೆ ಕಲ್ಲಾಗಬೇಕಂತೆ
ಅಹಲ್ಯೆ! “
(ಭೇಟಿಯಾಗಿದ್ದರು.. ಆ ಹುಡುಗಿಯರು..)

ಓದಿದ್ರಿ?? ಏನು? ! ನಿಮ್ಮ ಮನಸು ಕಸಿವಿಸಿ ಆಗುತ್ತಿದೆಯೇ?? ಓದುತ್ತಿದ್ದಂತೆ ಆಹ್ಲಾದಕರವಾಗಿ ಹರಿಯುತ್ತಿರುವ ನೆತ್ತರು ಏಕೋ ಬಿಸಿಯಾಗುತ್ತಿದೆಯಾ? ಸಮಾಜದಲ್ಲಿ ವಿಕೃತ ಮನಸುಗಳ ಧೋರಣೆ ಕಣ್ಣ ಮುಂದೆ ಬಂದಂತಾಗಿ ಬಿಸಿ ಹೆಚ್ಚಾಗಿ ರಕ್ತ ಕುದಿಯಲು ಪ್ರಾರಂಭವಾದರೆ ಆಶ್ಚರ್ಯವೇನಲ್ಲ ಬಿಡಿ. ಹೌದು…. ನನಗೂ ಅಂತಹುದೇ ಅನುಭವವಾಗಿ ಒಂದು ಕ್ಷಣ.. ಛೇ… ನಾವು ಎಂತಹ ಸ್ಥಿತಿಯನ್ನು ತಲುಪಿದ್ದೇವೆ. ಪ್ರಕೃತಿ ಸಮಾನವಾದ ಸ್ತ್ರೀಯನ್ನು ಯಾವ ಮಟ್ಟಕ್ಕೆ ‌ತಂದಿದ್ದೇವೆ ಎಂದು ಅವಲೋಕಿಸುವಂತೆ ಈ ಕವನ ಸಂಕಲನದ ಬಹುತೇಕ ಕವನಗಳ ಸಾಲುಗಳು ನನ್ನನ್ನು ಪ್ರಶ್ನಿಸಿವೆ ಎಂಬುದು ಸತ್ಯ ರಿ…… ಇಂತಹ ಸಾಲುಗಳನ್ನು ಎಳೆ ಎಳೆಯಾಗಿ ನಮ್ಮಲ್ಲಿ ಉಳಿಸಿ, ಅದಕ್ಕೆ ಪೂರಕವಾಗಿ ನಿಷ್ಕಲ್ಮಷತೆಯನ್ನು ಹೃದಯದಲ್ಲಿ ಚಿಗುರಿಸುವ ಕವಯಿತ್ರಿ ಯಾರು ಎಂದು ಚಿಂತಿಸುತ್ತಿರುವಿರಾ ? ಬನ್ನಿ ಅವರ ಮತ್ತು ಅವರ ಕೃತಿಯ ಪರಿಚಯ ಮಾಡಿಕೊಡುತ್ತೇನೆ.


ವೃತ್ತಿಯಿಂದ ವಾಣಿಜ್ಯ ತೆರಿಗೆ ಅಧಿಕಾರಿ ಪ್ರವೃತ್ತಿಯಿಂದ ಪ್ರೇಮಕ್ಕೆ ಪ್ರತಿಯಾಗಿ ಪ್ರೇಮದ ತೆರಿಗೆಯನ್ನು ನಮ್ಮ ಪ್ರೇಮಿಗೆ ಕೊಡಬೇಕೆನ್ನುವ ಕವಯಿತ್ರಿ ಡಾ. ಶೃತಿ ಬಿ ಆರ್…. ಅವರ ಪ್ರಪ್ರಥಮ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸಹಾಯಧನ ಪಡೆದು‌ ಬುಕ್ ಬ್ರಹ್ಮ ಪ್ರಾಯೋಜಕತ್ವದ, ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಕವನ ಸಂಕಲನ “ಜೀರೋ ಬ್ಯಾಲೆನ್ಸ್”.
ಮನಸ್ಸು ಮತ್ತು ಬದುಕು ಯಾವತ್ತಿಗೂ ಬ್ಯಾಲೆನ್ಸ್ಡ್ ಆಗಿರಬೇಕು. ಸ್ವಚ್ಛ ಮನಸಿನ ಆಲೋಚನೆಗಳೊಂದಿಗೆ ಬದುಕು ಪರಿಪೂರ್ಣವಾಗಿರಬೇಕು. ಅಂತೆಯೇ‌‌ ಹಣದ ಮುಗ್ಗಟ್ಟನ್ನು ಎದುರಿಸಲಾಗದ ಮನಸ್ಥಿತಿಯ ಪ್ರತಿಬಿಂಬವನ್ನೂ “ಜೀರೋ ಬ್ಯಾಲೆನ್ಸ್” ನಮಗೆ ಕಾಣಿಸುತ್ತದೆ. ಕವಯಿತ್ರಿ ಡಾ. ಶೃತಿ ಬಿ ಆರ್ ಅವರು; ತಮ್ಮ ಮನಸಿನ ಮಹದಾಶಯವನ್ನು ತಾವು ಕಂಡ, ಅನುಭವಿಸಿದ, ಅನುಭಾವಿಸಿದ ವಿಷಯವಸ್ತುವನ್ನು ಮತ್ತು ಅದರಿಂದ ತಮ್ಮ ಭಾವನೆಗಳ ಮೇಲಾದ ಪರಿಣಾಮವನ್ನು ಯಥಾವತ್ತಾಗಿ ಓದುಗರ ಸ್ಮೃತಿಗೆ ಕಾವ್ಯ ಮುಖೇನ ರಸವತ್ತಾಗಿ ನೇರವಾಗಿ ತಿಳಿಸಿಕೊಡುತ್ತಾರೆ.

ಹೆಣ್ಣು ತನ್ನ ಬದುಕಿನುದ್ದಕ್ಕೂ ಅನುಭವಿಸುವ ಪ್ರೀತಿ, ನೋವು, ಹತಾಷೆ, ನಿರಾಸೆಗಳನ್ನು ಸೂಕ್ಷ್ಮ ಮತಿಯಿಂದ ಅವಲೋಕಿಸಿ, ಆಲೋಚಿಸಿ ಚೊಚ್ಚಲ ಕೃತಿಯಲ್ಲೇ ಬಿತ್ತರಿಸಿರುವುದು ವಿಶೇಷವೆನಿಸುತ್ತದೆ. ಪ್ರಸ್ತುತ ಸಮಾಜದ ಪರಿಸ್ಥಿತಿಗೆ ಈ ಕೃತಿಯು ಕನ್ನಡಿಯಾಗಿದೆ ಎಂಬುಂದು, ಓದುಗನು ಕೃತಿಯ ಅವಲೋಕನದ ನಂತರ ಒಪ್ಪಿಕೊಂಡುಬಿಡುತ್ತಾನೆ.

ಅಂತೆಯೇ ಹೆಣ್ಣು ಎಲ್ಲವನ್ನೂ ಅನುಭವಿಸಿಯೇ ತಿಳಿಯಬೇಕೆಂದಿಲ್ಲ. ತನ್ನ ಸಮಾನ ಲಿಂಗದವರ ಮೇಲೆ ನಡೆಯುವ ಶೋಷಣೆಯನ್ನು ಕೇಳಿ ನೋಡಿಯೇ ನೋವು ತಿನ್ನುವಾಕೆ. ಕವಯಿತ್ರಿ ಅವರು ಎಷ್ಟರ ಮಟ್ಟಿಗೆ ಹೃದಯ ಹಿಂಡಿದ ಅನುಭವವನ್ನು ಪಡೆಯುತ್ತಾರೆಂದರೆ ಅದನ್ನು ಅಕ್ಷರ ರೂಪಕ್ಕೆ ಇಳಿಸಿದರೂ ಕರಗದಷ್ಟು. ಅಂತೆಯೇ
ಸಹೋದರಿ ಶೃತಿ ಬಿ ಆರ್ ಅವರ ಈ ಸಾಲುಗಳು ಹೆಣ್ಣಿನ ವರ್ತಮಾನತೆಯನ್ನು ಹಾಗೇ ಓದುಗನೆದೆಗೆ ಇರಿದುಬಿಡುತ್ತವೆ. ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸಾಲುಗಳೇ ಇದಕ್ಕೆ ಸಾಕ್ಷಿ ಆಗಿ ನಿಲ್ಲುತ್ತವೆ.

ಸಂಸಾರ ಎಂಬ ಸಾಗರದಲ್ಲಿ ಪ್ರೇಮದಲೆಗಳಷ್ಟೇ ಅಲ್ಲ, ಆಗಾಗ ವಿರಸದ ಅಲೆಗಳೂ ಏಳುತ್ತವೆ. ಸಹನೆ, ತಾಳ್ಮೆ, ನಂಬಿಕೆಗಳೇ ಸಂಸಾರ ನೌಕೆಗೆ ರಕ್ಷಣಾ ಗೋಡೆಗಳು, ಅವುಗಳನ್ನು ಮೀರಿ; ಸಮಾನತೆಯ ಸಂಸಾರದಲ್ಲಿ ಅಸಹನೀಯ ಅಲೆಗಳು ಬಂದರೆ ಹೇಗೆ ?ಎಂದು,

ಸಮತಟ್ಟಾದ ನೆಲದಲ್ಲೇ ಅರಳಿದ್ದ ನಮ್ಮಲ್ಲಿ
ಮಹಡಿಗಳಷ್ಟು ಅಸಮಾನತೆಯ ಸೌಧ ಹುಟ್ಟಿತ್ಹೇಗೆ?”

ಕವಯಿತ್ರಿ ಅವರು ಈ ರೀತಿ, “ಅಂತರ” ಕವಿತೆಯಲ್ಲಿ ಪ್ರಶ್ನಿಸುತ್ತ?!. ಮುಂದುವರೆದು,

ತಪ್ಪು ಒಪ್ಪುಗಳ ತೂಗಿ ನ್ಯಾಯಮಾಡುವುದು ಹೇಗೆ?
ನಿನ್ನ ಮೂಗಿನ ನೇರಕ್ಕೆ ನಿನ್ನದೇ ತಕ್ಕಡಿ…
ನನ್ನ ಮೂಗಿನ ನೇರಕ್ಕೆ ನನ್ನದೇ ತಕ್ಕಡಿ!”…..
…… ಎಂದು ನಿದ್ದೆ ಬಾರದ ರಾತ್ರಿಗಳನ್ನು ಕಣ್ಣೀರಲ್ಲಿ ಕಳೆದು, ಅಕ್ಕ ಪಕ್ಕ ಇದ್ದೂ ಅಪರಿಚಿತರಾದೆವು….. ಎಂದೂ, ಹೆಣ್ಣು ಗಂಡುಗಳಲ್ಲಿ ತಲೆದೋರಿದ ಭಿನ್ನಾಭಿಪ್ರಾಯದಿಂದ ಕದಡಿದ ಮನಸಿನ ಶಾಂತಿಯ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಒಂದು ಹೂವನ್ನು ಹೊಸಕಿ ಹಾಕಿರಬಹು,
ಬರಲಿರುವ ವಸಂತವ ತಡೆಯಲಾರರು” ವ್ಹಾ ವ್ಹಾ….
“Pablo Neruda” ರವರ ಮಾತು….
ಸಾವಿನ ಕೊನೆಯ ಕ್ಷಣದಲ್ಲೂ, ಬದುಕಿನ ಬಗ್ಗೆ ಮನಸಲ್ಲಿ ಆಶಾವಾದವನ್ನು ಹುಟ್ಟಿಸುವ ಸಾಲುಗಳ ಪಡಿಯಚ್ಚಿನಂತಹ ಕವಿತೆ, ಕವಯಿತ್ರಿ ಶೃತಿ ಅವರ, “ಆಶಾವಾದಿ ಗೆಳೆಯನಿಗೆ….” ಕವಿತೆ ಮೌಲ್ಯಯುತವಾಗಿದ್ದು, ಓದುಗನನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ. ಎಷ್ಟೇ ಆಶಾವಾದವನ್ನು ರೂಢಿಸಿಕೊಂಡರೂ, ಸುತ್ತಲಿನ ನಿರ್ದಯಿ ಸಮಾಜ ನಮ್ಮನ್ನು ಹತ್ತಿಕ್ಕುವಲ್ಲಿ ನಿರಂತರ ನಿರತವಾಗಿರುತ್ತದೆ, ಎಂಬ ವ್ಯಂಗ್ಯಾತ್ಮಕ ನುಡಿಗಳು ಖಂಡಿತವಾಗಿ ಓದುಗನ ಮನಸನ್ನು ಕಲಕುತ್ತವೆ.

ಎಂದು ಮಾಗೀತು ನೊಂದೆದೆಗಳ ಹಸಿ ಗಾಯ?
ಸಾವಲ್ಲೂ ಸಿಗಲಾರದೇನೋ ಸಾಂತ್ವನದ ನ್ಯಾಯ!
ಆದರೂ ನೀ ನಿರಂತರ ಆಶಾವಾದಿ
ನಿನಗೆಂತಾ ಮರುಳೋ ಗೆಳೆಯಾ!”... ಎಂಬ ಗೆಳೆಯನ ಆಶಾವಾದ ಒಂದು ಅತಿರೇಕವೋ? ಮುಗ್ಧತೆಯೋ? ಮೂಢತೆಯೋ?!!! ಇದೊಂದು ಆಶ್ಚರ್ಯವೂ! ಪ್ರಶ್ನೆಯೂ! ಹೌದು ಎನಿಸುವಂತೆ ಓದುಗನಲ್ಲಿ ಉಳಿಸಿಬಿಡುತ್ತಾರೆ ಕವಯಿತ್ರಿ ಶೃತಿ.

ಹೂಂ! ಹೌದು! ಕವಿಗಳು ಎನ್ನಿಸಿಕೊಂಡವರು ಪ್ರಾಯದಲ್ಲಿ ಪ್ರೇಮ ಕವಿತೆಗಳನ್ನು ಬರೆಯದೇ ಇರಲಾರರು.. ಅಲ್ವಾ… ? ಅದನ್ನೋದಿದ ಪಾಲಕರು ನನ್ನ ಮಗ/ಳು ಬರೆದ ಕವಿತೆಯೆಂದು ಊರೆಲ್ಲಾ ಡಂಗೂರ ಸಾರುವರು….. ನಿಜ ತಾನೆ? ನಿಜ ಆದರೆ, ಅದೇ ಕವಿತೆಯ ಉನ್ಮಾದದಲ್ಲಿ, ಕವಿ ಪ್ರೇಮಕ್ಕೆ ಸಿಲುಕಿದರೆ!!?? ಒಪ್ಪುತ್ತಾರಾ?? ಮಗನೇ/ಳೇ ಪ್ರೇಮವೆಂಬುದು ಬರೆಯಲಿಕ್ಕುಂಟು, ಮಾಡಲಿಕ್ಕಲ್ಲ!! ಎಂದು ಆಕ್ಷೇಪಿಸುವರು…. ಅದಕ್ಕಾಗಿಯೇ ಕವಯಿತ್ರಿ ಅವರು “ಹೀಗೊಂದು ಪ್ರೇಮ ಕವನ” ಎಂಬ ಕವಿತೆಯನ್ನು ಬರೆದು, ಪಾಲಕರ ಮತ್ತು ಸಮಾಜದವರ ಮನಸ್ಥಿತಿಯ ಕುರಿತಾಗಿ ಖೇದ ವ್ಯಕ್ತಪಡಿಸುತ್ತಾರೆ. ಇದು ಕವಯಿತ್ರಿ ಅವರ ಅನುಭವವೋ? ಅನುಭಾವವೋ? ಅವರೇ ಹೇಳಬೇಕು. ಆದರೆ ಪ್ರತಿಯೊಬ್ಬ ಕವಿ ಪ್ರೇಮಿ ಇದನ್ನು ಅಲ್ಲಗಳೆಯುವಂತಿಲ್ಲ ಅಲ್ಲವೇ?

ಹಾಗೇ ಕವಯಿತ್ರಿ ಅವರು ಮತ್ತೊಂದು ಸತ್ಯವನ್ನು ಬಿಚ್ಚಿಡುತ್ತಾರೆ. ಅದೇನಂತೀರಾ? ನಿಮಗೆಲ್ಲಾ ಗೊತ್ತಿರೋದೆ ರಿ. ಅದೇ ನಮ್ಮ ಜನ ಇದಾರಲಾ, ನಾವ್ ಹೇಗೇ ಇದ್ರೂ ಆಡಿಕೊಳ್ಳುತ್ತಾರೆ. ಬಾಯಿಗೇನು ಬರ ಎಂಬಂತೆ, ಆಳಿಗೊಂದು ಕಲ್ಲು ಎಂಬಂತೆ, ಮನ ಚುಚ್ಚುವಂತೆ ಮಾತಿನ ಬಾಣ ಎಸೆಯುತ್ತಲೇ ಇರುತ್ತಾರೆ, ಅದಕ್ಕೆ ನಮ್ಮ ಶೃತಿ ಅವರು, ವಿಡಂಬನಾತ್ಮಕವಾಗಿ “ಜನ ಮಾತನಾಡಲಿಲ್ಲ…..” ಎಂಬ ಕವಿತೆಯಲ್ಲಿ ಒಬ್ಬ ಅಸಹಾಯಕ ಹೆಣ್ಣು ಮಗಳ ಬದುಕಿನ ಕುರಿತಾಗಿ ಆಡಿಕೊಳ್ಳುವ ಜನರು, ಅದೇ ಹೆಣ್ಣು ನಿಶ್ತೇಜವಾಗಿ ಬಿದ್ದಾಗ, ಅವಳ ಕುಡಿ ಕಸದ ತೊಟ್ಟಿಯಲ್ಲಿನ ಅನ್ನಕ್ಕೆ ಕೈ‌ ಹಾಕಿದ ಸಂದರ್ಭ, ಕೊನೆಗೆ ಅವಳ ಮರಣವಾದಾಗಲೂ ಮೂಕರಂತೆ ನೋಡಿದರೇ ಹೊರತು ಮಾತನಾಡಲಿಲ್ಲ ಎಂದು, ನಿಷ್ಕರುಣಿ ಜನರ ಮಾತ್ಸರ್ಯ ತುಂಬಿದ ಮನಗಳನ್ನು ಬೆತ್ತಲೆಗೊಳಿಸಿದ್ದಾರೆ.

ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯ ವಿಪರೀತವಾಗಿದೆ ಎಂಬುದಕ್ಕೆ ಸಾಕ್ಷಿ ಹಲವಾರು. ಅಂತಹ ಕುಕೃತ್ಯಕದಿಂದ ಬದಲಾದ ಪರಿಸರ ಮಾತೆ ಮೂಕಳಾಗುತ್ತಾಳೆ,
ಮಳೆಯ ಹನಿ ನುಂಗಿ ಘಮಲನ್ನು ಸೂಸುತ್ತಿದ್ದ ಮಣ್ಣು ಕಳೆದುಹೋಗಿದೆ ಎಂದು ವಿಷಾದಿಸುತ್ತಾರೆ. ಮುಂದುವರೆದಂತೆ…

ಕಾಡು ನುಗ್ಗಿ ಕಿತ್ತು ತಿಂದ
ಚೊಟ್ಟೇ ಹಣ್ಣ ಸವಿ,
ಗೇರುಹಣ್ಣಿನ ಒಗರು,
ದೊಡ್ಡ ಬಜಾರಿನಲ್ಲಿ
ತಣ್ಣಗೆ ಕೂತ
ಹಣ್ಣುಗಳಿಗೆಲ್ಲಿ ಬರಬೇಕು!
….. ಎಂದು ಹಿಂದೆ ಕಾಡಲ್ಲಿ ನುಗ್ಗಿ ಹಣ್ಣನ್ನು ಕಿತ್ತು ತಿಂದಾಗ ಸಿಗುತ್ತಿದ್ದ ರುಚಿ, ಬಜಾರಲ್ಲಿ ಶೋಕಿಯಾಗಿ ತಣ್ಣಗೆ ಕೂತ ಹಣ್ಣಲ್ಲಿ ಸಿಗುವುದಿಲ್ಲ…. ಪ್ರಕೃತಿ ಈಗ ಕೇವಲ ಒಂದು ” ಪ್ರತಿಕೃತಿ ” ಯಾಗಿದೆ ಎಂಬ ನೋವನ್ನು ಹೊರಹಾಕಿ ಪ್ರಕೃತಿಯ ಕುರಿತಾಗಿ ತಮ್ಮ ಕಾಳಜೀ ಭಾವವನ್ನು ವ್ಯಕ್ತಪಡಿಸುತ್ತಾರೆ.

ಹೃದಯಾಂತರಾಳದಲ್ಲಿ ಪ್ರೇಮದ ಹೂ ಅರಳುವುದು ಯಾವಾಗ? ಅದಕ್ಕೊಂದು ಸವಿಭಾವದ ಅನುಭಾವ ತಾಕಿದಾಗ. ಅಂತಹ ಅನುಭವ ಒಂದು ಪ್ರೇಮದ ಜೋಡಿಯನ್ನು ನೋಡಿದಾಗ ಅದರ ಉನ್ಮಾದ ಹೆಚ್ಚುತ್ತದೆ ಎಂಬುದನ್ನು ಒಂದು ಘಟನಾ ಕವಿತೆಯ ಮೂಲಕ ಪ್ರಚುರಪಡಿಸುತ್ತಾರೆ. ಪ್ರೇಮ ಚಿಗುರುವುದೆಂದರೆ ” ಸವಿಭಾವಗಳ ಸೋನೆ ” ಸುರಿದಂತೆ ಎಂದು ಕವಯಿತ್ರಿ ತಮ್ಮ ಭಾವನೆಗಳನ್ನು ಓದುಗನ ಭಾವನೆಗಳಿಗೆ ಸಾಮ್ಯೀಕರಿಸುತ್ತಾರೆ ಎಂಬುದು ವಿಶೇಷವೆನಿಸುತ್ತದೆ.

” ಕಲೆಗಳಿಗೆ ಕರುಣೆಯಿಲ್ಲ “ ಕವಿತೆಯು ಕೇವಲ ಓದಿಗೆ ಸೀಮಿತವಾಗಿಲ್ಲ, ಅಷ್ಟೇ ಅನುಭಾವಿಸಿದರೂ ತೃಪ್ತಿ ಆಗೊಲ್ಲ ನೋಡಿ. ಮನಸಿನಾಳಕ್ಕಿಳಿದು ಹಾಗೇ ನಮ್ಮನ್ನ ನಮ್ಮ ಹೃದಯವನ್ನು ಕಲಕಿಬಿಡುತ್ತದೆ ಎಂದರೆ ಅತಿಶಯೋಕ್ತಿಯೂ ಅಲ್ಲ. ಹೌದು…. ಈ ಕವಿತೆ ಬಗೆಗೆ ಬರೆಯುವಾಗ ನಂಗೇಕೆ ಹೀಗಾಗುತ್ತಿದೆ??!! ಎಂಬುದೇ ಸೋಜಿಗವೆನಿಸುತ್ತಿದೆ. ನಿಮಗೂ ಹಾಗಾಗಬಹುದೇನೋ ಈ ಸಾಲುಗಳನ್ನೊಮ್ಮೆ ಓದಿ ಬಿಡಿ….

ಅಟ್ಟದ ಮೇಲಿಂದ ಬಿದ್ದು‌
ಮಾಡಿಕೊಂಡ ಗಾಯ ಈಗಿಲ್ಲ,
ಹೆಣ್ಣು ಹದ್ದುಬಸ್ತಿನಲ್ಲಿಲ್ಲದಿದ್ದರೆ
ಹೀಗೆ ಕಾಲುಜಾರುವುದೆ “ ಎಂದು
ಅಂದು ಅಜ್ಜನಾಡಿದ ನುಡಿ ಕಿವಿಯೊಳಗೆ ನಂಜಾಗಿದೆ!

ನಿಜ ತಾನೆ! ಪ್ರಸ್ತುತ ಸಮಾಜಕ್ಕೆ ಕನ್ನಡಿಯಾಗಿ ತೋರುವ ಕವಿತೆ. ಎಡವಿ ಬಿದ್ದಾಗ ಆದ ಗಾಯದ ಕಲೆ ಮಾಸುತ್ತದೆ.‌ಆದರೆ ಹೆಣ್ಣು ಹದ್ದುಬಸ್ತಿನಲ್ಲಿಲ್ಲದೆ ಜಾರಿದರೆ?? ಎಂದಿಗೂ ಅವಳಿಗಂಟುವ ಕಲೆ ಮಾಸುವುದಿಲ್ಲ. ಇದನ್ನು ಎಚ್ಚರಿಸಲೇ ಅಜ್ಜನ ಮಾತು ಇನ್ನೂ ಕಿವಿಯಲ್ಲಿ ನಂಜಾಗಿ ಉಳಿದುಬಿಟ್ಟಿದೆ ಎನ್ನುತ್ತಾರೆ ಕವಯಿತ್ರಿ.

ಕಾಲೇಜು ದಾರಿಯಲ್ಲಿ
ಕಲ್ಲೆಡವಿ ಕಿತ್ತಿದ್ದ ಹೆಬ್ಬೆರಳುಗುರು
ಒಂದಷ್ಟಾದರೂ ಕುರುಹು
ಉಳಿಸಿಲ್ಲ,
ಅದೇ ಹಾದಿಯಲ್ಲಿ ದಿನವೂ
ಕಾದು ನಿಲ್ಲುತ್ತಿದ್ದ
ಗುಳಿಕೆನ್ನೆಯ ಹುಡುಗನ
ಮರೆಯಲಾಗಿಲ್ಲ! “
….. ಒಂದು ಪ್ರೇಮದ ಅನುಭವವೂ ಹಾಗೆ ಅನ್ನುವುದು ತಮ ಅನುಭವಕ್ಕೆ ಬಂದಿರಲೂಬಹುದು. ಅದಕ್ಕೆಂದೇ ಸಹೋದರಿ ಶೃತಿ ಅವರು, ಕಾಲೇಜಿನ ದಾರಿಯಲ್ಲಿ ಎಡವಿದಾಗ ಕಿತ್ತಿ ನೆತ್ತರಿನಲ್ಲಿ ಮಿಂದು, ನೋವಿನ ಸಜೆ ನೀಡಿದ ಹೆಬ್ಬೆರೆಳುಗುರ ಗಾಯದ ಕಲೆ ಈಗಿಲ್ಲ, ಆದರೆ ಅದೇ ದಾರಿಯಲ್ಲಿ ಹೃದಯಕ್ಕೆ ಪ್ರೇಮದ ಗಾಯ ಮಾಡಿದ ಗುಳಿಕೆನ್ನೆಯ ಹುಡುಗನನ್ನು ಮರೆಯಲಾಗುತ್ತಿಲ್ಲ ಎಂಬುದು ಕವಯಿತ್ರಿಯವರ ಭಾವಪರವಶತೆಯ ಬಿಂಬ.

ಮಗಳು ಹುಟ್ಟುವಾಗಿನ
ಆಪರೇಷನ್ನಿನ ಗಾಯದ ಗುರುತು
ಕಣ್ಣಿಟ್ಟು ಹುಡುಕಿದರೆ ಮಾತ್ರವೇ
ಕಂಡಿತೇನೋ,
ನೀನು ಒಳ್ಳೆಯ ತಾಯಿಯಲ್ಲ
ಎಂದ ಮಗಳ ಕಿಡಿನುಡಿ
ಅಳಿಸಲಾಗದ ಕಾರ್ಗಪ್ಪು
ಕಲೆಯಾಗಿದೆ! “
…… ಏನನ್ಸುತ್ತೆ ನೋಡಿ, ಒಂಭತ್ತು ತಿಂಗಳು ಹೊತ್ತು, ಹೆತ್ತು, ತಮ್ಮ ಜೀವನವನ್ನೆ ತೇಯ್ದು ನಮ್ಮನ್ನು ಬೆಳೆಸಿದ ತಾಯಿಗೆ; ಪ್ರಸವ ಸಂದರ್ಭದಲ್ಲಿ ತನ್ನ ಹೊಟ್ಟೆಯನ್ನು ಕೊಯ್ದು ಮಾಡಿದ ಗಾಯವೂ ಕಾಣುವುದಿಲ್ಲ, ಆದರೆ ಮಗ/ಳು ನೀನು ಒಳ್ಳೆಯ ತಾಯಿಯಲ್ಲ ಎಂಬ ಘಾಸಿಗೊಳಿಸುವ ಮಾತಿಂದ, ಮನಸಿನ ಮೇಲಾದ ಗಾಯದ ಕಲೆ ಮಾತ್ರ ಉಸಿರಿನೊಂದಿಗೇ ಮರೆಯಾಗುತ್ತದೆ ಎನ್ನುವ ಕವಯಿತ್ರಿ, ಈ ಕಾರಣದಿಂದಲೇ ಮಾತಿನ ಮತ್ತು ಭಾವದ ಗಾಯಗಳಿಂದಾದ ಗಾಯಗಳ
ಕಲೆಗಳಿಗೆ ಕರುಣೆಯಿಲ್ಲ ” ಎನ್ನುತ್ತಾರೆ. ಇದರ ಜೊತೆಗೆ
ಸಾಮಾಜಿಕ ಮೌಲ್ಯದ ಅರಿವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆ ಕಾರಣದಿಂದಲೇ ಓದುಗರಿಗೆ ವಿಶೇಷವಾಗಿ ಈ ಕವಿತೆ ತುಸು ಹೆಚ್ಚೇ ಇಷ್ಟವಾಗುತ್ತದೆ. ಅಷ್ಟೇ ಮನಸು ಹೃದಯಗಳ ಆಪ್ತ ಸಮಾಲೋಚನೆಗೆ ದಾರಿಮಾಡಿಕೊಡುತ್ತದೆ.

ಹೆಣ್ಣಿನ ಬದುಕು ಗಂಡಿಗಿಂತ ಭಿನ್ನ, ಸಮಾಜ ಎಷ್ಟೇ ಮೇಲ್ದರ್ಜೆಗೆ‌ ಏರಿದರೂ ಸಮಾನತೆ ಎಂಬುದು ಇಂದಿಗೂ ಕುಂಟುತ್ತಲೇ ಸಾಗಿದೆ. ಮೇಲ್ನೋಟಕ್ಕೆ ಸಿಕ್ಕ ಸ್ವಾತಂತ್ರ್ಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದೆ ಎಂಬುದು ಸತ್ಯ. ಕವಿತೆಯಲ್ಲಿ ಕವಯಿತ್ರಿ ಅವರು, ಎರಡು ವ್ಯಕ್ತಿತ್ವದ ಹೆಣ್ಣನ್ನು ತೋರಿಸುತ್ತಾರೆ. “ಮುಗ್ಧತೆಯ ಪ್ರತೀಕವಾಗಿ ಸ್ತ್ರೀ ಎಲ್ಲದಕ್ಕೂ ಹೊಂದಿಕೊಂಡು, ಸಹಿಸಿಕೊಂಡು, ಪುರುಷನ ತಪ್ಪುಗಳಿಗೆ ತಾನು ಕುರಾಡಾಗಿ ತನ್ನ ಹಣೆಬರಹವನ್ನು ಹಳಿಯುವವಳು”… ಇದಕ್ಕೆ ವ್ಯತಿರಿಕ್ತವಾಗಿ ” ಕ್ಷಮಿಸಿ, ನಾನು ಅಂತವಳಲ್ಲ…. ”

ನನ್ನದೊಂದಿಷ್ಟು ಬಾಯಿ ಮುಂದು
ಇದ್ದದ್ದು ಇದ್ದಂತೆ ವದರಿ
ಬಜಾರಿ ಎನಿಸಿಕೊಂಡಿದ್ದರೂ,
ನನ್ನತನವೆಂಬುದ ಜೋಪಾನವಾಗಿ
ಕಾಪಿಡುವವಳು! “
…. ಎಂದು ದಬ್ಬಾಳಿಕೆಯನ್ನು ವಿರೋಧಿಸುವವಳಾಗಿ, ಗಂಡು ಬೀರಿ, ಬಜಾರಿ ಎನಿಸಿಕೊಂಡು ಬದುಕುವವಳು. ಈ ಎರಡೂ ಮನಸ್ಥಿತಿಯ ಹೆಣ್ಣು ಮಕ್ಕಳು ಪರಿಸ್ಥಿತಿಗೆ ತಕ್ಕಂತೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವುದೂ ಅವಶ್ಯಕ ಮತ್ತು ಅನಿವಾರ್ಯ ಎಂಬುದು ಕವಿಯ ಅಂತರಂಗದ ನುಡಿ….

ಹಾಗೆ ಮತ್ತೊಂದು ರೋಚಕ ಅನುಭವ ನೀಡಿದ ಕವಿತೆ ” ಒಂದು ಜೊತೆ ಪಾದ “…. ಪಾದದ ಸುತ್ತ ಒಂದು ಸುತ್ತು ಹಾಕಿ, ವಿಭಿನ್ನ ಪಾದಗಳನ್ನು ಕಂಡು – ಕಂಡ ಅನುಭವ ಉಂಡು, ಕಡೆಗೆ ಅವ್ವಳ ಪಾದವೇ ಶ್ರೇಷ್ಠ, ಅವ್ವಳ ಪಾದದಲ್ಲೇ ಅತೀವ ಆನಂದದ ಮುಕ್ತಿ ದೊರೆಯುತ್ತದೆ ಎಂಬುದನ್ನು ಅರಿತು, ಭಾವುಕನಾಗಿ ಅವಳ ಪಾದಕ್ಕೆ ಎರಗುತ್ತಾನೆ; ಪಾದಗಳನ್ನು ನೋಡುವ ಗೀಳನ್ನು ಹಚ್ಚಿಕೊಂಡ ಮನುಷ್ಯ. ತನ್ನೊಡನೆ ಮಾನಸಿಕವಾಗಿ ನಮ್ಮನ್ನೂ ಬಾಗಿಸುತ್ತಾನೆ. ಸಂಕಲನದ ವಿಶೇಷ ಕವನಗಳಲ್ಲಿ ಈ ಕವನವು ಮುಂಚುಣಿಯಲ್ಲಿ ನಿಲ್ಲುತ್ತದೆ.

ಹಾಂ! ನಿಮಗೆ, ಇದು ಒಂದೊಮ್ಮೆ ಅನುಭವಕ್ಕೆ ಬಂದೇ ಬಂದಿರುತ್ತದೆ. ಪರರ ಹೆಗಲ ಮೇಲೆ ನಿಂತು, ಅವರೇ ಕಾಣದಂತೆ ಮಾಡಿ ತಮ್ಮನ್ನು ಮಾತ್ರ ಲೋಕಕ್ಕೆ ಪರಿಚಯಿಸಿಕೊಳ್ಳುವ ಅನೇಕ ಸಣ್ಣ
ಮನಸಿನವರನ್ನು ಕಂಡೇ ಇರುತ್ತೀರಿ. ಅದಕ್ಕೊಂದು ಸೂಕ್ತ ಉದಾಹರಣೆಯನ್ನು ಕವಯಿತ್ರಿ ಸಹೋದರಿ ಡಾ. ಶೃತಿ ಬಿ ಆರ್ ಅವರು ” ಬಳ್ಳಿಯೊಲವು ಕರಗಿತು ” ಕವಿತೆಯ ಮೂಲಕ ಸೂಕ್ಷ್ಮವಾಗಿ ಅಷ್ಟೇ ಸರಳವಾಗಿ ತಿಳಿಸಿಕೊಡುತ್ತಾರೆ.

ಒಣಗಿ ನಿಂತ ಬೋಳು ಮರವ
ಕಂಡು ಲತೆಯ ಮನವು ಕರಗಿತು ”

” ಮರದ ಬಳಿಯೆ ಎಂದೂ ಇರುವ
ಬಯಕೆ ಗಟ್ಟಿಯಾಯಿತು….
ಮರದ ಬುಡದಿ ಚಿಗುರು ಮೂಡಿ
ಮರವ ಸುತ್ತಿ ಸವರಿತು! ”

ಹೀಗೆ ಒಂಟಿ ಮರವ ಕಂಡು ಮರುಗಿ, ಮನಸು ಕರಗಿ ಬಳ್ಳಿ ಆ ಮರವನ್ನು ಸುತ್ತಿಕೊಂಡು ಹುಲುಸಾಗಿ ಬೆಳೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತದೆ. ಹೂವು ಬಿಟ್ಟು ಮರವ ಸಿಂಗಾರಗೊಳಿಸುತ್ತದೆ. ತನ್ನೆಲ್ಲ ಆಪ್ತತೆ, ಪ್ರಿತಿಯನ್ನು ಧಾರೆ ಎರೆಯುತ್ತದೆ…. ಆದರೆ… ಆದರೆ….

‘ ಆಹಾ! ಎಂಥಾ ಚಂದ ಮರ ಎಂದು
ಹಳದಿ ಹೂಗಳಂದ ಕಂಡು
ನಲಿಯುತಿದ್ದ ಜನಕೆ ಲತೆ ಕಾಣದಾಯಿತು
ಮರವನಪ್ಪಿ ತಾನು ಇರುವೆ,
ಹೂಗಳು ನನ್ನವೆಂಬ ಬಳ್ಳಿಯೆದೆಯ ಕೂಗು
ಕಿವುಡು ಜನಕೆ ಕೇಳದಾಯಿತು “....
ಅಲ್ವಾ….. ನೋಡಿ ಪ್ರಸ್ತುತ ಇದೇ ನಡೆಯುತ್ತಿರುವುದು ಎಂದು ನಿಮಗೆ ಅನಿಸುತ್ತಿದೆ ತಾನೆ. ಹೌದು! ಕಂಪು, ಇಂಪು ಮನಸಿಗೆ ಹಿತನೀಡುವ ತಂಪು ಯಾರದ್ದು ಎಂದು ನೋಡದ ಕಣ್ಣು, ಮೇಲ್ನೋಟದ ವಯ್ಯಾರಕ್ಕೆ ಮರುಳಾಗಿ‌ ಅದೇ ಸತ್ಯ ಎಂದು ನಂಬಿ ಬಿಡುತ್ತದೆ. ಇದು ವಿಪರ್ಯಸವೂ ಹೌದು, ಜೊತೆಗೆ ಪರಾವಲಂಬತೆ ನಮ್ಮನ್ನು ಗೌಣವಾಗಿಸುತ್ತದೆ ಎಂಬುದೂ ಹೌದು…. ಎಂಬ ಪರಿಕಲ್ಪನೆಯೊಂದಿಗೆ ಹುಟ್ಟಿದ ಕವಿತೆ ಸಂಕಲನಕ್ಕೊಂದು ಮೆರುಗನ್ನು ನೀಡುತ್ತದೆ.

ಮತ್ತೆ, ಬದಲಾಗುವ ಕಾಲಕ್ಕೆ ಕಾಯುವ ಮನಸ್ಥಿತಿಯನ್ನು ತೋರುವ ಕವಿತೆ ” ಹೀಗೇಕೆ?? ” ಎನಿಸಿದರೆ, ಅದಕ್ಕೆ ವಿರುದ್ಧವೆಂಬಂತೆ ಬದಲಾಲಣೆಯೇ ಕಾಣದ ಬದುಕಿನ ನಿಶ್ಚಲತೆ ಎಂಬುದು ” ಸಾವಿಗಿಂತಲೂ ಕ್ರೂರ ” ಎಂಬ ಕವಿತೆಯಲ್ಲಿ ಕಾಣಸಿಗುತ್ತದೆ.
ಜೊತೆಗೆ ಇದೇ ಕಾಲಕ್ಕೆ ಸಂಬಂಧಿಸಿದ
” ಮೊದಲು ಮತ್ತು ನಂತರ ” ಎಂಬ ಕವಿತೆಯು ಒಂದು ಹೊಸ ಅನುಭವ ನೀಡುತ್ತದೆ. ಹೀಗೂ ಕವಿತೆಯನ್ನು ಬರೆಯಬಹುದಾ! ಎನಿಸಿದ್ದಂತೂ ಸತ್ಯ. “ಪ್ರೀತಿಯ ವೈಫಲ್ಯವಾಗುವುದರ ಅರಿವಿದ್ದರೆ ಹೃದಯವನ್ನೇ ಬಚ್ಚಿಡುತ್ತಿದ್ದೆ” ಎನ್ನುವ ಕವಿ ಮನಸು…. ” ಪ್ರೀತಿ ಹೀಗೆ ಹೃದಯವನ್ನು ಆವರಿಸುವುದೆಂದು ಗೊತ್ತಿದ್ದರೆ, ದೇಹದಲ್ಲೆಲ್ಲ ಹೃದಯವೇ ಇರಲೆಂದು ಬಯಸುತ್ತಿದ್ದೆ ” ಎನ್ನುತ್ತದೆ. ಎಷ್ಟು ಚೆಂದದ ಅನುಭೂತಿ ಅಲ್ವಾ? ಅದಕ್ಕೆ ಇದು ನನಗೆ ಇಷ್ಟವಾದ ಮತ್ತೊಂದು ಕವಿತೆ.

ಉಪಕಾರ ಸ್ಮರಣೆಯನ್ನು ಮರೆತ ಕೃತಘ್ಞರನ್ನು ಪ್ರಶ್ನಿಸುವ ಕವಿತೆ, ” ಅವಳ ವಿಳಾಸವಿಲ್ಲ ” ಮನಸನ್ನು ತೆರೆಸಿದರೆ, ನನ್ನವರನ್ನು ಸದಾ ಸುಖದಿಂದಿಡು ಎಂದು ಪ್ರಭುವನ್ನು ಕೋರಿಕೊಳ್ಳುವ ಸಾಲುಗಳುಳ್ಳ ಕವಿತೆ
” ಕೋರಿಕೆ ” ಮನಸಿಗೆ ಹೊಕ್ಕುತ್ತವೆ.

ಬಣ್ಣ ಬಣ್ಣದ ಮರಳು ಮಾತಿಂದ ಮನಸನ್ನಾವರಿಸಿ, ನಾಜೂಕು ಬಲೆಗೆ ಬೀಳಿಸಿಕೊಂಡು ವಂಚನೆಗೈಯ್ಯುವ ಕುಹಕ ಬುದ್ಧಿಯ ಪ್ರತಿಬಿಂಬ ಕವಿತೆಯ ಪ್ರಾರಂಭದಲ್ಲಿ ಕಂಡರೆ, ಮುಗ್ಧತೆ ಉಳಿದಿಲ್ಲ… ನಾ ಎಂದೂ ಥಳುಕಿಗೆ ಮೈ ಮರೆಯುವುದಿಲ್ಲ ಮತ್ತೆಂದೂ ಆ ಮೋಸದ
” ನಾವೆ(ಗೆ) ತಲುಪದ ತೀರ ” ನಾನು ಎಂದು ಅಂತ್ಯದಲ್ಲಿ ಸತ್ಯವನ್ನರಿತ ಸಧೃಡ ಮನಸನ್ನು ನಿರ್ಮಿಸುವ ಸಾಲುಗಳು ವಾವ್ ಎನಿಸುತ್ತವೆ.

ಆತ್ಮಕ್ಕಿಲ್ಲ ಸಂಗಾತ ” ,
” ಒಳ್ಳೆಯವರಾಗುವುದೆಂದರೆ “,
” ಗುರುತುಗಳು ಉಳಿದಿಲ್ಲ”,
” ಋತುಸಂಕಟ ” ಅದ್ಭುತವಾದ ಓದಲೇಬೇಕಾದ ಕವಿತೆಗಳು.
” ಜೀರೋ ಬ್ಯಾಲೆನ್ಸ್” ಸಂಕಲನದ ಬಹುತೇಕ ಕವಿತೆಗಳು ಹೆಣ್ಣಿನ ಪರ ದನಿ ಎತ್ತುತ್ತವೆ, ಎಂದು ವಾದಿಸುವುದಕ್ಕಿಂತಲೂ; ಕವಿತೆಗಳಲ್ಲಿ ಹೆಣ್ಣು ದೈಹಿಕವಾಗಿ (ಋತು ಸಂಕಟ) ಮಾನಸಿಕವಾಗಿ, ಅನುಭವಿಸುತ್ತಿರುವ ಪರಿತಾಪವನ್ನು ಪ್ರತಿಬಿಂಬಿಸುತ್ತವೆ. ಅವಳ ಶೋಷಣೆಯನ್ನು ತೋರಲು ಸೀಮಿತವಾಗದ ಕವಿತೆಗಳು, ನಮ್ಮ ಭವಿತವ್ಯದಲ್ಲಿ ಅವಳ ಮಹತ್ವದ ಪಾತ್ರದ ಅರಿವನ್ನು ಮೂಡಿಸುವಲ್ಲಿ ಮತ್ತು ಬೆಳೆಸುವಲ್ಲಿ ಗೆದ್ದಿವೆ ಎಂಬುದು ಮನಸಿನ ಅನುಭವ.

ಸಹೋದರಿ ಡಾ ಶೃತಿ ಬಿ ಆರ್ ಅವರ ಅಪರಿಮಿತ ಆಲೋಚನಾ ಶಕ್ತಿಯ ಪ್ರತಿಫಲಿತ ಕವನಗಳ ಗಣವೇ ಈ ಸಂಕಲನ. ಸಂಕಲನದ ಎಲ್ಲ ಕವಿತೆಗಳ ಅವಲೋಕನವು ಪರಿಪೂರ್ಣ ಮನಸ್ಥಿತಿಗೆ‌ ನಮ್ಮನ್ನು ಕರೆದುಯ್ಯುತ್ತವೆ ಎಂದರೆ, ಅದಕ್ಕೆ ಕಾರಣ ಕವಿತೆಗಳ ವಿಷಯ ವಸ್ತು. ಹೌದು, ತುಂಬಾ ಗಂಭೀರವಾದ ವರ್ತಮಾನದ ಪ್ರಸಂಗಗಳನ್ನಾಧರಿಸಿ ಬರೆದ ಕವಿತೆಗಳು ನಮ್ಮನ್ನು ಓದುವ ಕ್ಷಣದಿಂದ ಮನಃಪರಿವರ್ತನೆಯನ್ನು ಮಾಡಲು ಹವಣಿಸುತ್ತವೆ. ಅದಕ್ಕೆ ದಾರಿಯನ್ನೂ‌ ತೋರುತ್ತವೆ. ಮತ್ತು ಕವಯಿತ್ರಿ ಸಹೋದರಿ, ಡಾ. ಶೃತಿ ಬಿ ಆರ್ ಅವರ ಪ್ರತಿಯೊಂದು ಕವಿತೆಗಳೂ ಮನಸನ್ನು ಚಿಂತನೆಗೀಡುಮಾಡುತ್ತವೆ. ಕವಿತೆಗಳನ್ನು ಓದಿ ಅರ್ಥೈಸಿಕೊಂಡು ವಿಶ್ಲೇಷಣೆಗೆ ಕುಳಿತರೆ ಪದಗಳ ಮಿತಿ ಮೀರಿಸುವ ವಿಷಯವನ್ನು ಹೊಂದಿವೆ ಎಂಬುದು ಖಂಡಿತ ಓದುಗರ ಅನುಭವಕ್ಕೆ ಬರುವಂತದ್ದು. ಅದರಲ್ಲಿ ನನ್ನ ಜ್ಞಾನದ ಮಿತಿಯಲ್ಲಿ ನಾನು ಕವಿತೆಗಳನ್ನು ಅವಲೋಕಿಸಲು ಪ್ರಯತ್ನಿಸಿದ್ದೇನೆ. ತಾವೂ ಅವರ ಕವಿತೆಗಳನ್ನು ಓದಿ ಎಂದು ಕೋರಿಕೊಳ್ಳುತ್ತ ನನ್ನ ಅನುಭವದ ಹಂಚಿಕೆಗೆ ಅಲ್ಪವಿರಾಮ ನೀಡುತ್ತಿದ್ದೇನೆ.

ಧನ್ಯವಾದಗಳೊಂದಿಗೆ ”

-ವರದೇಂದ್ರ ಕೆ ಮಸ್ಕಿ
99452 53030

ಪುಸ್ತಕಕ್ಕಾಗಿ ಸಂಪರ್ಕಿಸಿ
– ಡಾ. ಶೃತಿ ಬಿ ಆರ್
-90353 79923

Don`t copy text!