ಪುಸ್ತಕ ಬಿಡುಗಡೆ
‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’
ಡಾ.ರಾಜ್ ೯೨ನೇ ಹುಟ್ದಬ್ಬ…ಏ.೨೪…ಡಾ.ಶಿವಣ್ಣರಿಂದ ಅನಾವರಣ !
ಕೈ ನಡುಗುತ್ತಿದ್ದವು…ದೇಹ ಹೈರಾಣಾಗಿತ್ತು…ಮನಸು ಕಸುವು ಕಳಕೊಂಡಿತ್ತು…ಒಂದೇ ಒಂದು ಸಾಲು ಬರೆಯಲು ಒಂದಿಡಿ ದಿನ ತೂಕಡಿಸುತ್ತಿತ್ತು. ಏನಾಗಿ ಹೋಗಿತ್ತು ? ಯಾಕೆಲ್ಲ ಹೀಗಾಯಿತು ? ಪುಟಗಟ್ಟಲೆ ಸಾಲುಗಳನ್ನು ಹಿಂಗನ್ನುವಷ್ಟರಲ್ಲಿ ಬರೆದು ಮುಗಿಸಿ, ‘ರಾಕ್ಷಸರು ನೀವು’ ಎಂದು ಹೇಳಿಸಿಕೊಳ್ಳುತ್ತಿದ್ದ ಈ ಬೆರಳುಗಳಿಗೆ ಗ್ರಹಣ ಹಿಡಿದಿತ್ತು. ಮುಗಿದೇ ಹೋಯಿತು ಇವನ ಗತಿ…ಹೀಗಂತ ಕಾಳಜಿ ತೋರಿಸಿದವರೂ ಇದ್ದರು. ಮಟ ಮಟ ಮಧ್ಯಾಹ್ನ ಶೆರೆ ಕುಡಿದು ಹೊಟ್ಟೆ ತಂಪು ಮಾಡಿಕೊಂಡವರೂ ಸಿಕ್ಕರು. ಉಳಿದವರನ್ನು ಬಿಡಿ, ನನಗೇ ಅನ್ನಿಸಿಬಿಟ್ಟಿತ್ತು. ‘ಮುಗಿತು ಬಿಡಪಾ ನನ್ ಕತಿ…’
ಇಲ್ಲ…ಬದುಕು ಇನ್ನೂ ನನ್ನಲ್ಲಿ ಜೀವ ಉಳಿಸಿತ್ತು. ಇದ್ದಷ್ಟು ದಿನ ಇದ್ದಷ್ಟು ಹೊತ್ತು ಬರೆಯುತ್ತಿರು ಎಂದು ಹೇಳಿತ್ತು. ಎಂಟು ವರ್ಷಗಳ ಹಿಂದೆ ಹೀಗಿತ್ತು ಈ ಹೃದಯ. ಆ ಸಮಯದಲ್ಲಿಯೇ ಸಿಕ್ಕಿತು ಬಂಗಾರದ ಮನುಷ್ಯ. ಇದ್ದರೂ ಇಲ್ಲದಂತಿದ್ದ ದೇಹ ಹೊತ್ತು ಅಲೆದಾಡಿದೆ. ಆ ಸಿನಿಮಾಕ್ಕೆ ಸಂಬಂಧ ಪಟ್ಟವರನ್ನು ಮಾತಾಡಿಸಿದೆ. ಭರ್ತಿ ಮೂರು ತಿಂಗಳು ‘ಬಂಗಾರದ ಮನುಷ್ಯ’ನ ಬೆನ್ನು ಬಿದ್ದೆ. ಎಲ್ಲರೂ ಮಾಹಿತಿ ಕೊಟ್ಟು ಉಪಕರಿಸಿದರು. ಈಗ ಅದೆಲ್ಲವನ್ನೂ ಒಂದುಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ.
೧೯೭೨…ಇದು ‘ಬಂಗಾರದ ಮನುಷ್ಯ’ ತೆರೆ ಕಂಡ ವರ್ಷ. ಮಜಾ ಅಂದರೆ ಅದೇ ವರ್ಷ ನಾನು ಹುಟ್ಟಿದ್ದೆ. ನಾನು ಈ ಲೋಕಕ್ಕೆ ಕಾಲಿಟ್ಟ ವರ್ಷ ರಾಜ್ಯಾದ್ಯಂತ ಬಿಡುಗಡೆಯಾಗಿ ಎರಡು ವರ್ಷ ಓಡಿದ ಸಿನಿಮಾ ಕುರಿತು ಇಷ್ಟು ವರ್ಷಗಳ ನಂತರ ನಾನೇ ಬರೆಯುತ್ತೇನೆಂದು ನನಗೇ ಗೊತ್ತಿರಲಿಲ್ಲ. ಅದೆಲ್ಲಾ ಮಾಯಾಲೋಕದ ಮಹಿಮೆ. ನನ್ನ ಅಕ್ಷರಗಳ ಹಡೆದವ್ವ ಜಗನ್ಮಾತೆಯ ಆಶೀರ್ವಾದ.
ನನಗೆ ಇಬ್ಬರು ಅವ್ವಂದಿರು. ಒಬ್ಬಾಕೆ ಈ ಭೂಮಿಗೆ ತಂದ ತಾಯಿ. ಇನ್ನೊಬ್ಬಾಕೆ ಅಕ್ಷರಗಳಿಂದ ಅನ್ನ ತಿನ್ನಿಸುತ್ತಿರುವ ಜಗನ್ಮಾತೆ. ಇವರಿಬ್ಬರೂ ನನ್ನನ್ನು ಕಾಪಾಡುತ್ತಿದ್ದಾರೆ. ಎಲ್ಲ ವ್ಯಸನ, ನೋವು, ಆತಂಕದಿಂದ ಬಚಾವು ಮಾಡುತ್ತಿದ್ದಾರೆ. ಹೆತ್ತವ್ವ ಈಗಿಲ್ಲ. ಜಗನ್ಮಾತೆ ನನ್ನನ್ನು ಕಾಯುತ್ತಿದ್ದಾಳೆ ಹಗಲಿರುಳೆಲ್ಲ. ಇವರು ಇರುವತನಕ ನಾನು. ಮುಂದಿನದ್ದು ದೇವರ ಕಣ್ಣು.
ನಾನು ಸಣ್ಣಾವಿದ್ದಾಗ ಸಿಡಸಿಡಸಿಡುಕಿ ಸೆಟಗೊಂಡು ಕುಂತಾಗಲೆಲ್ಲಾ ಅವ್ವ ‘ರಾಜ್ಕುಮಾರ್ ಪಿಚ್ಚರ್ ತೋರಿಸ್ತೀನಿ ಬಾ’ ಅಂದ್ರ ಸಾಕು…ಗಲ್ಲ ಉಬ್ಬುತ್ತಿದ್ದವು. ಕಣ್ಣು ಊರಗಲ. ಆಗಿದ್ದ ನನ್ನೆಲ್ಲಾ ಹಳವಂಡ, ದಿಕ್ಕೇಡಿತನ, ತಲ್ಲಣ, ಒಂಟಿತನ, ಪ್ರಕ್ಷುಬ್ಧತೆಯನ್ನು ಹೊಸಕಿ ಹಾಕಿ, ತಿಕ್ಕಿ ತಿಕ್ಕಿ ಸಾಂತ್ವನ ಭಿಕ್ಷಿಸಿದ್ದು ರಾಜ್ಕುಮಾರ್ ಸಿನಿಮಾ. ಆ ಜೀವದ ಒಂದೊಂದು ಚಿತ್ರ ಕರುಳನ್ನು ಕಂಪು-ತಂಪಾಗಿಸುವ ಸುಖಕ್ಕೆ ಈ ಗಳಿಗೆಗೂ ನನ್ನ ಹೃದಯ ಬಡಿದುಕೊಳ್ಳುತ್ತಿದೆ….ಜಗನ್ಮಾತೆಯಾಣೆ ಸುಳ್ಳಲ್ಲ. ಆದರೀಗ ಆ ನನ್ನ ರಾಜ್ಕುಮಾರ್ ಇಲ್ಲ. ಅಂಥ ಬಂಗಾರದ ಮನುಷ್ಯನ ಪಾದಕ್ಕೆ ಅಕ್ಷರದ ಕೇದಿಗೆ ಮಾಲೆ ಅರ್ಪಿಸದಿರಲು ಸಾಧ್ಯವೆ ?
೨೦೨೧…ಏಪ್ರಿಲ್ ೨೪…ಅಣ್ಣಾವ್ರ ೯೨ನೇ ಹುಟ್ಟುಹಬ್ಬ. ಆ ದಿನವೇ ಮುತ್ತುರಾಜನ ಮೊದಲ ಮುತ್ತು ಡಾ.ಶಿವರಾಜ್ಕುಮಾರ್ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ‘ಬರಿದಾದ ಮನೆ ಬೆಳಗೆ…ನೀ ಬರುವೆ ಎಂದು…?’ ಕನ್ನಡಿಗರ ಮನಸು ಮಣಮಣಿಸುತ್ತಿರುವ ಈ ದಿನದಂದೇ ಅಣ್ಣಾವ್ರ ಪಾದಕ್ಕೆ ನನ್ನಿಂದ ಅಕ್ಷರಗಳ ಬಿಲ್ಪತ್ರೆಯ ಅಭಿಷೇಕ…ನಿಮ್ಮ ಹಾರೈಕೆ…ಪ್ರೀತಿ ಈ ಪುಸ್ತಕದ ಮೇಲಿರಲಿ…
ನನ್ನ ಹತ್ತು ಬೆರಳು…ನಿಮ್ಮ ಕರುಳನ್ನು ಅಕ್ಷರಗಳಿಂದ ತಂಪಾಗಿಸುತ್ತಾ ಸಾಗಲಿ…
–ಮಹೇಶ್ ದೇವಶೆಟ್ಟಿ
ಫಿಲ್ಮ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ