ಹಾಸ್ಯ ರಸಾಯನ :
ಗುಂಡುರಾವ್ ದೇಸಾಯಿ ಶಿಕ್ಷಕರು ಮಸ್ಕಿ
ಹಿರಿಯ ಸ್ನೇಹಿತರೊಬ್ಬರು”ಈ ಚಿತ್ರ ಕಳಿಸಿ ಒಂದು ಹಾಸ್ಯ ನುಡಿಚಿತ್ರ ಬರೆಯಲು ಸಾಧ್ಯವಾಗುತ್ತೇನೊ ನೋಡಿ ” ಅಂತ ಫೋನಾಯಿಸಿದ್ರು…ನಾನು ಏನಂತ ನೋಡೀರಲಿಲ್ಲ….ವ್ಯಾಟ್ಸಪ್ ತಗದು ನೋಡಿದ ಕೂಡಲೆ ಗುಮ್ಮಿಕೊಂಡು ಬಂದ ನಗುನ ತಡೆದುಕೊಳ್ಳಲಿಕ್ಕೂ ಆಗಲಿಲ್ಲ…ಬೈಲಗುಡ್ಡದಾಗ ವಿದ್ಯಾಗಮದಾಗ ಮಕ್ಕಳಿಗೆ ಪಾಠ ಮಾಡತಿದ್ದ ನನ್ನ ನೋಡಿ “ಸರ್ ಗೆ ಏನಾಯ್ತು ಅಂತ ಅವರು ಗಾಭರಿ ಆಗಿ ” ನೋಡುವಂತಾಯಿತು..
ಮೊದಲು ಈ ಫೋಟೊ ಚಂದಾಗಿ ತಗದ ಮಹಾನುಭಾವರಿಗೆ ಶರಣು ಹೇಳಲೆಬೇಕು…..”ಅವನೌನ ಏನು ಚಂದ ಫೋಟೊ ತಗದನ ” ಅನ್ನುವುದಕ್ಕಿಂತ ಈ ಹಣ್ಣನ್ನು ತಿಂದವನ ಬಗ್ಗೆ ಖಂಡಿತ ಯೋಚಿಸಬೇಕು ಅನಿಸ್ತು…ನಮ್ಮ ಭಾಗದಾಗ ಈ ಪಪ್ಪಾಯಿ ಹಣ್ಣಿನ ಬಗ್ಗೆ ಒಳ್ಳೆ ಭಾವನೆ ಅಷ್ಟಾಗಿ ಇಲ್ಲ…ಹಣ್ಣಿನ ಅಂಗಡಿಗೆ ಮದುವೆಯಾಗದ ಹೆಣ್ಣುಮಕ್ಕಳು ಹಣ್ಣನ್ನ ನಾಲ್ಕುದಿನ ಕಂಟಿನ್ಯೂ ಒಯ್ದದ್ರೆ ಅವರನ್ನ ಅನುಮಾನದಿಂದ ನೋಡುವ ಜನ ನಮ್ಮಲ್ಲಿ ಬಾಳ ಇದ್ದಾರ..ಹಾಗ ನೋಡೀದ್ರ ಇದರಷ್ಟು ಉತ್ತಮವಾದ ಹಣ್ಣು ಯಾವು ಇಲ್ಲ ಅಂತ ವೈದ್ಯರ ಹೇಳತಾರ…ಹೊಟ್ಟಿನ ತೊಳಿಸುತ್ತ ಅನ್ನೊ ಕಾರಣಕ್ಕ ಗರ್ಭಿಣಿಯರು ಇದರ ಸನೇಕ ಸಹಿತ ಹಾಯಲ್ಲ…ಯಾಕ ಕನಸಿನಾಗೂ ತಿನ್ನ ಯೋಚನೇನ ಮಾಡಲ್ಲ…ಇತ್ತೀಚೀಗೆ ಶುಗರ್ ಗೆ ಒಳ್ಳೆ ಹಣ್ಣು ಎಂಬ ಅಭಿದಾನಕ್ಕೆ ಪಾತ್ರ ಆಗಿರೋದರಿಂದ ಆ ಕಾರಣಕ್ಕಾಗಿ ಶುಗರ್ ಬಂದೋರು ತಿನ್ನೋಕೆ ಶುರು ಹಚ್ವಕೊಂಡಾರ….
ನಾನು ಅದೆಂತೊ ಕೃಷಿಕ ಆಗೋಕೆ ಹೋಗಿ ಇದನ್ನು ಬೆಳೆದೆ.. ಮಧ್ಯ ರೈತ ಕೈಕೊಟ್ಟದ್ದಕ್ಕೆ ಲಕ್ಷಗಟ್ಟಲೆ ಕಳಕೊಂಡೆ.. ಬೆಳೆ ಫೇಲ್ ಮಾಡಿಕೊಂಡು ಒತ್ತಡ ಜಾಸ್ತಿ ಮಾಡಿಕೊಂಡು ಶುಗರ್ ಗೆ ಹತ್ತಿರವಿದ್ದಾಗ…..ಬೆಳೆದ ಈ ಹಣ್ಣನ್ನೆ ತಿಂದು ತಿಂದು ಮನೆಯಲ್ಲಿ “ಅಷ್ಟು ತಿನ್ನಾಕ ಹೋಗಬ್ಯಾಡ್ರಿ”ಎಂದು ಹೇಳಿದ್ತೂ ಕೇಳದೆ…ನನಗೆ ಹತ್ತಿರ ಬರೋ ಶುಗರ್.ನ್ನು .ಹೆಚ್ಚಿದ್ದ ವೇಟ್ ನ್ನು ಕಡಿಮೆ ಮಾಡಿದ ಪುಣ್ಯ ಈ ಪಪ್ಪಾಯಿಗೆ ಸಲ್ಲಬೇಕು..ಹಾಗಾಗಿ ಈಗಲೂ ಸಾಫ್ಟ ಕಾರ್ನರ್ ಇದರ ಬಗ್ಗೆ ನನಗೆ…ಹೊಲದಲ್ಲಿ ಬೆಳೆದಾಗ ಬೆಳೆ ನಷ್ಟವಾಗಿ ಆಗಿ ಪುಕ್ಕಟೆ ಹಂಚಿದ್ರೂ…”ರುಚಿಕಟ್ಟಾಗೇದ ನಿಮ್ಮ ಹಣ್ಣು” ಅಂದಿದ್ದು ನನಗೆ ಸೋಲಿನಲ್ಲೂ ಗೆಲವು ಕಾಣಕ ಸಾಧ್ಯ ಆಯಿತು…
ಇರಲಿ ಮುಖ್ಯ ವಿಷಯಕ್ಕೆ ಬರತೀನಿ….ಈ ಗಿಡ ಫೈಖಾನ್ಯಾಗನಿಂದ ಉದ್ಭವವಾದ ರೀತಿ ನೋಡಿದ್ರ ಇದನ್ನು ತಿಂದವ ಸಣ್ಣವನೇನಲ್ಲ..ಹೊಲದಾಗ ಬೀಜ ಹಚ್ಚಿ ಎಪ್ಪಾ ಬೆಳೆಯೊ ಅಂದ್ರು ಬೆಳೆಯೊ ಜಾಯಮಾನದಲ್ಲ ಈ ಜಾತಿ…ಅದು ಬೇಳೆಯಾಕ ನರ್ಸರಿ ಫಾರ್ಮ ಆಗಬೇಕು…ಪ್ರತ್ಯೇಕ ವಾತವರಣನ ಬೇಕು…ನಾನು ಈ ಚಿತ್ರದಾಗ ಗ್ರಾಫೀಕ್ ಕೈಚಳಕ ಏನಾರು ಅದ ಅದಂತ ನೋಡಿದೆ..ಹ್ಞೂಂ…ಹ್ಞುಂ..ಏಕದಂ….ಫೈಖಾನ್ಯಾಗನಿಂದ ಎದ್ದು ನಿಂತದ…ಈ ಹಣ್ಣನ್ನ ತಿನ್ನೋಕ ಒದ್ದಾಡತೀವಿ…ಮೇಲೆ ಅದರ ಬೀಜನ್ನ ನೋಡಿದ್ರಂತೂ ಒಂದು ತರಹ ಅನಸ್ತದ ..ಇದನ್ನು ತಿಂದ ಪುಣ್ಯಾತ್ಮಎಷ್ಟು ಖಬರ ತಪ್ಪಿ ತಿಂದಿರಬೇಕು…?.ಲಗ್ನ ಮನ್ಯಾಗ ಹೋಗಿ ಸಿಗುತ್ತೋ ಇಲ್ಲೋ ಅಂತ ಮೇಯ್ದು ಬಂದಂಗ ಇವನು ದನ ತಿಂದಾಂಗ ಉದ್ರಿ ಹಣ್ಣು ಸಿಕ್ಕಾಗ ಬೀಜ ಸಹಿತ ತಿಂದು ಅಜೀರ್ಣ ಆಗಿ….ಈ ಫೈಖಾನ್ಯಾಗ ಬಂದು ವಿಸರ್ಜಿಸಿರಬೇಕು ಅನಸ್ತದ….ಹಾಗೆ ಆಗಿದ್ರ ಏನು ಅನಸ್ತಿರಲಿಲ್ಲ…ಬ್ಲಾಕ್ ಆಗೊಹಾಂಗ್ ಅವ ವಿಸರ್ಜನೆ ಮಾಡಿರಬೇಕು ಇಲ್ಲ ನೀರು ಹಾಕದ ಹಾಗ ಬಂದಿರಬೇಕು….ಮೇಲಾಗಿ…ಅವ ಹಾಕಿದವ ಈ ಮನೆಯವ ಅಲ್ಲ ಅನಸ್ತದ…ಸ್ವಂತ ಪೈಖಾನಿ ಆಗಿದ್ರ ಅದು ಎಷ್ಟು ಹೊಲಸಾದ್ರೂ ಕ್ಲೀನ್ ಮಾಡತಿದ್ದ….ಇವ…ಘನಂದಾರಿ ಕೆಲಸ ಮಾಡಿ ಹೋದ ಮೇಲೆ ಹೋಗಬೇಕು ಅನ್ನೋರು ಅದರ ವಾಸನೆಗೆ ಸಮೀಪ ಸಹಿತ ಹೋಗೋಕೆ ಆಗಿಲ್ವೇನೊ…? ಅಥವಾ ಹೋಗಲೆ ಬಾರದು ಅಂತ ಭೀಷ್ಮ ಪ್ರತಿಜ್ಞೆ ತೊಟ್ರೇನೊ……..?ಅಲ್ಲದ ಆ ಸುಡುಗಾಡು ವಾಸನಿ ತಡಿಯಾಕ
ಕಟ್ಟಿಗೆನೊ ಕುಳ್ಳನ್ನೊ ಒಟ್ಟಿರಬೇಕು…ಅಥವಾ…ಮಣ್ಣನ್ನೊ ಚಲ್ಲಿರಬೇಕು….ವಾಸನೆ ಹೋಗಿ ಪೈಖಾನ್ಯಾಗ ಬಿದ್ದಿದ್ದ ಅಳಿದುಳಿದ ವಸ್ತುಗಳೆಲ್ಲ ಗೊಬ್ಬರಾಗಿ ಒನ್ ಫೈನ್ ಡೆ ಮಳಿ ಆಗಿ ಅಲ್ಲಿ ನೀರು ಹೊಕ್ಕು ಹೊಟ್ಟೆಗಿಂದ ಬಿದ್ದ ಬೀಜ ಕ್ಕ ಚಿಗುರೋ ಆಸೆ ಆಗಿ ಚಿಕ್ಕೊಂಡಿರಬೇಕು..ಚಿಕ್ಕೋರಿರೊ ಕಾಲಕ್ಕ ಪದ್ಯ ಓದಿದ್ದ ನೆನಪು…ಮೋಡದಿಂದ ಹೊರ ಬಂದ ಹನಿ….ಎಲ್ಲಿ ಬಿದ್ದ ಹೆಸರಿಲ್ಲದ ಹೋಗತೀನೊ ಅನ್ನೊದುರೋಳಗ ಕಪ್ಪಚಿಪ್ಪ ಬಾಯಾಗ ಬಿದ್ದು ಮುತ್ತು ಆದಂಗ…..ಈ ಬೀಜಕ್ಕೂ …ಅಂತಹ ಸದ್ಗತಿ ಸಿಕ್ಕಿದೆಏನೊ ಅನಸ್ತದ….ಆ ಮನೆಯವರು ಗಮನಿಸಲಾರದೊಳಗ ಸೀಗರ ಆದ ಜಾಗದಾಗ ಎದ್ದು ನಿಧಾನಕ್ಕ ಸೂರ್ಯನಿಂದ ಊಟ ಪಡೆಯೊ ಆಸೆಗಾಗಿ ಅದು ತನ್ನ ಬಾಹುಗಳನ್ನ ಹೊರ ಚಾಚಿರಬೇಕು…ಇದನ್ನು ಗಮನಿಸಿದ ಮನೆಯವರಿಗೆ ಏನು ಮಾಡಕ ತೋಚಿದ್ದಂಗಿಲ್ಲಂತ ಕಾಣುತ್ತೆ…ಯಾಕಂದ್ರ ಹಳ್ಳಿ ಊರಾಗ ಸ್ವಚ್ಛ ಭಾರತ ಅಭಿಯಾನ ಕಚ್ಚಿ ಹರಕೊಂಡು ಹೋಗ್ಯಾವ….ಕುಡಿಯಾಕ ನೀರು ಸಿಗದ ಊರಾಗ ಇದಕ್ಕ ಬಕೇಟಗಟ್ಲೆ ನೀರು ಎಲ್ಲಿಂದ ತಂದು ಸುರಿಬೇಕು…
ಅದಕ್ಕ ಒಂದು ತಂಬಿಗ್ಯಾಗ ಸುಖವಾಗಿ ಹೊರಹಾಕೊ ಬಯಲು ಶೌಚವನ್ನ ಅವರು ಈಗಲೂ ಇಷ್ಟ ಪಡತಾರ….ಹಾಗಾಗಿ ಫೈಖಾನಿಗಿಂತ ಗಿಡನ ಮಹತ್ವಾಗಿ ಕಂಡದ..ಮೇಲಾಗಿ ಸ್ವಂತ ದುಡ್ಡು ಹಾಕಿ ಕಟ್ಟಿದ್ದು ಆದ್ರ ಕಳಕಳಿ ಇರುತಾದ…ಅದನ್ನೊ ನೋಡಿದ್ರ ಮನೆಯವರು ಕೂಡ ಸಹಿಮಾಡಿಸಿಕೊಂಡು ಪೈಖಾನಿಯಲ್ಲೂ ತಿನ್ನಬೇಕು ಎನ್ನುವ ಮಹಾತ್ನ ಕಟ್ಟಿಸಿರಲೇಬೇಕು..ಪೈಖಾನಿಯಲ್ಲೂ ಬಾಯಿ ಹಾಕತಾರ ಅಂದ್ರ..ಅಬ್ಬಾ!!!!
ಇರಲಿ ಈಗ ಜಿಜ್ಞಾಸೆ ಆಗೋದು..ಪಪ್ಪಾಯಿ ಗಿಡ ಬೆಳದಾದ ಯಾಕ ಕಿತ್ತಿ ಹಾಕಬೇಕು ಅಂತ ಆ ಮನೆಯವರು ಏನೊ ಸುಮ್ಮನಿದ್ದಾರ…ಆದರ ಸಮಸ್ಯೆ ಆಗೋದ ಈಗ..ಅದು ಕಾಯಿ ಬಿಟ್ಟು ಹಣ್ಣಾದ ಮೇಲೆ ತಿನ್ನೋರು ಯಾರು..?
ಲಾಸ್ಟ್ ಪಂಚ್—–
ಪದ್ದು ಉವಾಚ: ನಮ್ಮ ಮಸ್ಕಿ ಬಸ್ ಸ್ಟ್ಯಾಂಡಿನ್ಯಾಗ ಮೂವತ್ತುರೂಪಾಯಿಗೆ ಒಂದು ಕೊಡದನ ಹತ್ತು ರೂಪಾಯಿ ಕಡಿಮೆ ಮಾಡಿಕೊಟ್ರ….ನಮ್ಮ ಶುಗರ್ ಮಂದಿ..ಪಟಕ್ ಅಂತ ತೊಗೊಂಡು ಹೋಗಿ…ಖಚಕ್ ಅಂತ ಹೊಟ್ಯಾಗ ಹಾಕಿಕೊಂತಾರ….