ಬಸವಣ್ಣನವರ ದೃಷ್ಟಿಯಲ್ಲಿ ದೇವರು

ವಚನ ಸಾಹಿತ್ಯದ ಆಶಯಗಳು-3


ಬಸವಣ್ಣನವರ ದೃಷ್ಟಿಯಲ್ಲಿ ದೇವರು
ಬಸವಣ್ಣನವರು ವಿಶ್ವದ ಮಹಾಚಿಂತಕರ ಗುಣವಿಶೇಷಗಳನ್ನೆಲ್ಲ ತಮ್ಮ ವ್ಯಕ್ತಿತ್ವದಲ್ಲಿ ಸಮಷ್ಟಿಗೊಳಿಸಿಕೊಂಡ ಮಹಾನ್ ಚೇತನ ! ಆರ್ಥರ್ ಮೈಲ್ಡ್ ಹೇಳುವಂತೆ ಅವರು ‘ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ.’ ಬುದ್ಧನ ದಯೆ, ಮಹಾವೀರನ ಅಹಿಂಸೆ, ಕ್ರಿಸ್ತನ ಮಾನವ ಪ್ರೇಮ, ಗಾಂಧೀಜಿಯವರ ಸಮಾಜಿಕ ಚಿಂತನೆ, ಮಾಕ್ರ್ಸನ ಆರ್ಥಿಕ ನೀತಿ, ಅಂಬೇಡ್ಕರ್ ಅವರ ದಲಿತೋದ್ಧಾರದ ದೃಷ್ಟಿ –ಈ ಎಲ್ಲವನ್ನು ಏಕಿಭವಿಸಿಕೊಂಡ ವಿಶೇಷತೆ ಬಸವಣ್ಣನವರದು. ಅವರ ಎರಡು ಆಶಯಗಳು ಸ್ವಾತಂತ್ರ್ಯ ಮತ್ತು ಸಮಾನತೆ ಅವರನ್ನು ಸಮಾಜ ಸುಧಾರಕ ಅನ್ನುವದಕ್ಕಿಂತ ‘ಸಮಾಜ ಪರಿವರ್ತಕರು’ ಅನ್ನುವುದು ಸೂಕ್ತ !
ಶರಣರ ತತ್ವಜ್ಞಾನ ಅವಿನಾಶವಾದ ಚೈತನ್ಯ ಮತ್ತು ನಾಶವಾಗದಂಥ ವಸ್ತುವಿನ ಕುರಿತು ತಿಳಿಸುವಂಥದು. ಅವರ ಪ್ರಕಾರ ವಿನಾಶ ವಸ್ತುವಿನಲ್ಲಿ ಚೈತನ್ಯವೂ ಇದೆ ; ಚೈತನ್ಯವಸ್ತು ನಾಶವಾದಾಗ, ಚೈತನ್ಯ ರೂಪತಾಳಿ ಮೂಲ ಚೈತನ್ಯದಲ್ಲಿ ಲೀನವಾಗುತ್ತದೆ.
ಕನ್ನಡಿಯ ನೋಡುವ ಅಣ್ಣಗಳಿರಾ
ಜಂಗಮವ ನೋಡಿರೆ
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ
‘ಸ್ಥಾವರ-ಜಂಗಮ ಒಂದೇ’ಎಂದುದು ಕೂಡಲಸಂಗಮ..
ಬಸವಣ್ಣನವರ ಈ ವಚನವನ್ನು ನೋಡಿದಾಗ ‘ವಸ್ತು ಮತ್ತು ಚೈತನ್ಯಗಳು’ –ಅಂತಿಮ ಸತ್ಯದ ಕ್ಷಣದಲ್ಲಿ ಒಂದಾಗುವ ‘ಸ್ಥಾವರ-ಜಂಗಮ ಒಂದೇ’ ಎಂಬುದರ ಅರಿವಾಗುವುದು.
ಈ ತತ್ವಜ್ಞಾನದ ಮೂಲಕ ಶರಣರು ಜೀವಜಗತ್ತಿಗೆ ನ್ಯಾಯ ಒದಗಿಸುವ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಿದ್ದು ಮಾನವ ಇತಿಹಾಸದಲ್ಲಿಯೇ ಅನುಪಮವಾಗಿದೆ! ಶರಣರ ದೇವರು ದೇಗುಲಗಳಲ್ಲಿ ಇಲ್ಲ : ಅವರ ದೇವರು ಚೈತನ್ಯದ ಪ್ರತೀಕವಾದ “ ಅರಿವು” ಜಂಗಮರೂಪಿ ದೇವರು!
‘ಜಂಗಮ’ಎಂದರೇನು? ಜಂಗಮ ಎಂದರೆ
1) ಅನಂತವಾದ ನಿರಂತರವಾದ ಚೈತನ್ಯ
2) ಚೈತನ್ಯರೂಪಿ ದೇವರು
3) ಚೈತನ್ಯ ರೂಪಿ ಅರಿವು
4) ಚೈತನ್ಯ ಒಳಗೊಂಡ ಇಡೀ ವಿಶ್ವ
5) ಜೀವ ಜಗತ್ತು
6) ಮಾನವ ಕುಲ
ಬದಕಲು ಯೋಗ್ಯವಾಗುವಂಥ ಸಮಾಜ ನಿರ್ಮಾಣಕ್ಕಾಗಿ ಶರಣ ಸಂಕುಲ ಕಂಡುಕೊಂಡ ಈ ಸತ್ಯವನ್ನು ಸಮರ್ಪಣಭಾವದಿಂದ ಸಾರುತ್ತ ಸಾಗುವ ‘ಶರಣ’ ಸಕಲ ಜೀವರಾಶಿ ಆನಂದಮಯವಾಗಿ ಇರಬೇಕು ಎಂಬುದು ಬಸವಣ್ಣನವರ ಆಶಯ. ಅದಕ್ಕೆ ದಯೆಯೇ ಶರಣ ಧರ್ಮದ ಜೀವಾಳ! ದಯವಿಲ್ಲದೆ ಧರ್ಮ ಆದೇವುದಯ್ಯಾ-ಎಂದು ಕೇಳುತ್ತಾರೆ. ದೇವರು ಯಾರು ಎಂಬ ಪ್ರಶ್ನೆಗೆ ಅವರು ತಮ್ಮ ವಚನದಲ್ಲಿ ಹೇಳುತ್ತಾರೆ.
ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು
ನೀರನೊಲ್ಲದು,ಬೋನವ ಬೇಡದು, ಕರೆದಡೆ ಓ ಎನ್ನದು
ಸ್ಥಾವರ ಪೀಜೆ, ಜಂಗಮದ ಉದಾಸೀನ
ಕೂಡಲಸಂಗಯ್ಯನೊಲ್ಲ ನೋಡಾ….

ಜಂಗಮವೆಂಬ ಸಮಾಜ ರೂಪಿಯಾದ ದೇವರು ನಮ್ಮ ಮುಂದೆ ಇದ್ದಾನೆ ಎನ್ನುತ್ತಾರೆ ಬಸವಣ್ಣನವರು. ಅರಿವಿಲ್ಲದ ಲಿಂಗದ ಪೂಜೆ ಸಲ್ಲದು ಎಂಬ ಅರ್ಥ! ಇನ್ನೊಂದು ವಚನದಲ್ಲಿ

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ ಕುಡಲಸಂಗಯ್ಯ
ಅಂದರೆ ಮಾನವರೆಲ್ಲ ನಡೆದಾಡುವ ದೇವಾಲಯಗಳು. ಒಳಗಿನ ಆತ್ಮಸಾಕ್ಷಿ ಎಂಬ ಅರಿವು ಗುರುವಗುತ್ತದೆ, ದೇವರಾಗುತ್ತದೆ. ಇದು ಬಸವ ಧರ್ಮ, ಶರಣಧರ್ಮ ! ಪ್ರತಿಯೊಬ್ಬರಲ್ಲಿ ದೇವರು ಇರುವಾಗ ಯಾರು ದೊಡ್ಡವರು ಅಥವಾ ಸಣ್ಣವರಲ್ಲ. ಸರ್ವಸಮತ್ವ ತತ್ವ ಇಲ್ಲಿ ಮುಖ್ಯವಾದುದು.
ಶರಣು
(ಆಧಾರ)

– ಹಮೀದಾಬೇಗಂ ದೇಸಾಯಿ, ಸಂಕೇಶ್ವರ

 

 

Don`t copy text!