ಬೀಜ ವಿತರಣೆ ವಿಳಂಭ ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಮಸ್ಕಿ: ಕೃಷಿ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮಯಕ್ಕೆ ಸರಿಯಾಗಿ ವಿತರಣೆ ಮಾಡುತ್ತಿಲ್ಲವೆಂದು ರೈತರು ದೀಡಿರ ಪ್ರತಿಭಟನೆ ಮಾಡಿದ ಘಟನೆ ಶನಿವಾರ ಸಂಜೆ ನಡೆಯಿತು.
ಪಟ್ಟಣದ ಲಿಂಗಸುಗೂರು ರಸ್ತೆಯ ಹೊರವಲಯದಲ್ಲಿರುವ ಕೃಷಿ ಕೇಂದ್ರದಲ್ಲಿ ಬೆಳಿಗ್ಗೆಯಿಂದ ರೈತರು ಕಡಲೇ ಬೀಜಕ್ಕಾಗಿ ಜಾತಕ ಪಕ್ಷಿಯಂತೆ ಕಾಯ್ದು ಕುಳಿತ್ತಿದ್ದರು. ಸಂಜೆಯಾದರೂ ಬಿತ್ತನೆ ಬೀಜಗಳನ್ನು ವಿತರಿಸದೆ ವಿಳಂಬಕ್ಕಾಗಿ ರೈತರು ರಾಷ್ಟ್ರೀಯ ಹೆದ್ದಾರಿ 150 (ಎ) ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಟೈಯರ್‍ಗೆ ಬೆಂಕಿಹಚ್ಚಿ ಕೃಷಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ದಿನಗಳಿಂದ ರೈತರಿಗೆ ಶನಿವಾರ ಕಡಲೇ ಬೀಜ ವಿತರಣೆ ಮಾಡುವುದಾಗಿ ಹೇಳಿ ಗ್ರಾಮೀಣ ಭಾಗದ ರೈತರಿಗೆ ಟೊಕನ್ ಕೊಟ್ಟಿದ್ದರು. ಬಿತ್ತನೆ ಬೀಜ ತರುವುದಕ್ಕಾಗಿ ರೈತರು ಹಳ್ಳಿಗಳಿಂದ ಟಾಟ್ ಏಸ್, ಟಾಂಟಾಂ ವಾಹನದಲ್ಲಿ ಬಂದು ಜಮಾಯಿಸಿದ್ದರು. ಬೆಳಿಗ್ಗೆಯಿಂದ ಬೀಜಕ್ಕಾಗಿ ಕಾಯ್ದು ಕುಳಿತ ರೈತರಿಗೆ ಕೃಷಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವದಕ್ಕೆ ಆಕ್ರೋಶಗೊಂಡ 100ಕ್ಕೂ ಅಧಿಕ ರೈತರು ಪ್ರತಿಭಟನೆ ಮಾಡಿ ಬೀಜಗಳನ್ನು ವಿತರಿಸುವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆಯ ಅಧಿಕಾರಿ ಮಹಾಂತೇಶ ಹವಲ್ದಾರ ಆಗಮಿಸಿ ರೈತರನ್ನು ಸಮದಾನಪಡಿಸಿ ಪ್ರತಿಭಟನೆ ಹಿಂಪಡೆಯುವಂತೆ ರೈತರಲ್ಲಿ ಮನವಿ ಮಾಡಿದರು. ಖುದ್ದು ತಾವೇ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸುವ ವ್ಯವಸ್ಥೆ ಮಾಡಿದರು. ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಯಲ್ಲಿ ರೈತರಾದ ಶರಣಪ್ಪ ಹಳ್ಳಿ ಕುಣಿಕೆಲ್ಲೂರು, ಬಸವರಾಜ ಮಿಂಚೇರಿ, ಮಲ್ಲಣ್ಣ ಖಜಾನೆ, ಮಲ್ಲಣ್ಣ ನೀರಲಕೇರಿ, ಸಿದ್ದಪ್ಪ ಹೂವಿನಬಾವಿ, ಮೌನೇಶ ಮುರಾರಿ, ಖಾಸಿಂ ಮುರಾರಿ ಹಾಗೂ ಇತರರು ಭಾಗವಹಿಸಿದ್ದರು.

Don`t copy text!