ಮಸ್ಕಿ : ಮಸ್ಕಿ ಹಳ್ಳಕ್ಕೆ ಭಾನುವಾರ ಬೆಳಿಗ್ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಬಹಿರ್ದೆಸೆಗೆ ಹೋಗಿದ್ದ ಇಬ್ಬರು ಯುವಕರಲ್ಲಿ ಒಬ್ಬ ಯುವಕ ನೀರು ಪಾಲಾದರೇ ಮತ್ತೊಬ್ಬ ಯುವಕ ಬದುಕಿ ಬಂದ ಘಟನೆ ಜರುಗಿದೆ.
ಮಸ್ಕಿ ನಾಲ ಯೋಜನೆಯ ಮೇಲ್ಬಾಗದಲ್ಲಿ ಶನಿವಾರ ಸುರಿದ ಮಳೆಗೆ ಜಲಾಶಯಕ್ಕೆ 2500 ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಮಸ್ಕಿ ಹಳ್ಳಕ್ಕೆ ರಾತ್ರಿ 3 ಗಂಟೆಯಿಂದ 200 ಕ್ಯೂಸೆಕ್‍ನಂತೆ ನೀರು ಹರಿಬಿಟ್ಟು ನಂತರ ಹಂತ ಹಂತವಾಗಿ ಹೆಚ್ಚಿಸಿ 1600 ಕ್ಯೂಸೆಕ್ ನೀರನ್ನು ಹಳ್ಳಕ್ಕೆ ಬಿಡಲಾಗಿದೆ.
ಮುಂಜಾನೆ ಹಳ್ಳದಲ್ಲಿ ನೀರು ಕಡಿಮೆ ಇದ್ದ ಕಾರಣ ಚನ್ನಬಸವ ಮತ್ತು ಜಲೀಲ ಇಬ್ಬರು ಬಹಿರ್ದೆಸೆಗೆ ತೆರಳಿದ್ದರು. ಏಕಾಎಕಿ ನೀರಿನ ಹರಿವು ಹೆಚ್ಚಾಗಿ ಬಂದಿದ್ದರಿಂದ ವಾಪಸ್ಸು ಬರಲು ಆಗದೆ ಹಳ್ಳದಲ್ಲಿ ಸಿಲುಕಿಕೊಂಡರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಬಲರಾಮ ಕಟ್ಟಿಮನಿ ಮತ್ತು ಸಿಪಿಐ ದೀಪಕ್ ಬೂಸರಡ್ಡಿ ಲಿಂಗಸೂಗೂರಿನಿಂದ ಅಗ್ನಿ ಶಾಮಕದಳದ ಸಿಬ್ಬಂದಿಯನ್ನು ಕರೆಸಿ ಹಳ್ಳದಲ್ಲಿ ಸಿಲುಕಿಕೊಂಡಿದ್ದವರನ್ನು ಹೊರಕ್ಕೆ ಕರೆತರುವ ಯತ್ನ ಮಾಡಿದರು. ಅಗ್ನಿ ಶಾಮಕದಳ ಸಿಬ್ಬಂದಿ ಹಳ್ಳಕ್ಕೆ ಇಳಿದು ಚನ್ನಬಸವನನ್ನು ಹಗ್ಗದ ಸಾಹಾಯದಿಂದ ಅರ್ಧಕ್ಕೆ ಬಂದಾಗ ಹಗ್ಗ ತುಂಡಾಗಿ ಚನ್ನಬಸವ ನೀರು ಪಾಲಾದ ಘಟನೆ ನೋಡು ನೋಡುತ್ತಿದ್ದಂತಯೇ ನಡೆಯಿತು.
ಚನ್ನಬಸವನನ್ನು ಹುಡಕಲು ಅರ್ಧ ಕೀ.ಮೀ ವರೆಗೆ ಹೋದ ಸಿಬ್ಬಂದಿಗೆ ಸಿಗದೆ ಇದ್ದಾಗ ಜಾಲಿ ಗಿಡದ ಆಶ್ರಯ ಪಡೆದುಕೊಂಡು ಜೀವ ರಕ್ಷಣೆ ಮಾಡಿಕೊಂಡರು.
ಕಣ್ಣೆದುರಿನಲ್ಲಿ ನೀರು ಪಾಲದ ಚನ್ನಬಸವನನ್ನು ನೋಡಿದ ಜಲೀಲ ಮಾನಸಿಕವಾಗಿ ಅಸ್ವಸ್ಥನಾದ. ಹಗ್ಗದ ಸಹಾಯದಿಂದ ಬರಲು ನಿರಾಕರಿಸಿದ ನಂತರ ತಾಲೂಕು ಆಡಳಿತ ಕ್ರೇನ್ ತರಿಸಿ ಕ್ರೇನ್ ಸಹಾಯದಿಂದ ಜಲೀಲನ್ನು ಕಾಪಾಡಿದರು. ನಂತರ ಜಲೀಲನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಮಾಡಿದರು.
ಆಕ್ರಂದನ ಃ ಹಳ್ಳದಲ್ಲಿ ಸುಮಾರು ಮೂರು ತಾಸು ಜೀವ ಉಳಿಸಿಕೊಂಡು ಕುಳಿತಿದ್ದ ಚನ್ನಬಸವ ಕೊನೆಗೂ ಸಾವಿರಾರು ಜನರ ಸಮ್ಮುಖದಲ್ಲಿ ಹಳ್ಳಕ್ಕೆ ಹರಿದುಕೊಂಡು ಹೋಗುತ್ತಿದ್ದನ್ನು ನೋಡಿದ ಜನರು ವಿಧಿಗೆ ಹಿಡಿ ಶಾಪ ಹಾಕಿದರು.
ಕಣ್ಣೆದುರಿನಲ್ಲಿ ಚನ್ನಬಸವ ಹಳ್ಳಕ್ಕೆ ಹರಿದು ಹೋಗುತ್ತಿದ್ದನ್ನು ಕಂಡ ಕುಟುಂಬಸ್ಥರು ರೋಧಿಸುತ್ತಿರುವ ದೃಶ್ಯ ಮನಕಲುವಂತಿತ್ತು. ಚನ್ನಬಸವನಿಗೆ ಪತ್ನಿ, ಮಗ ಹಾಗೂ ಇಬ್ಬರು ತಂಗಿಯರಿದ್ದು ಬಡತನ ಕುಟುಂಬದಿಂದ ಜೀವನ ಸಾಗಿಸುತ್ತಿದ್ದರು.
ಕುಟುಂಬಸ್ಥರ ಆರೋಪ ಃ ಜಲಿಲನನ್ನು ಕಾಪಾಡಿದಂತೆ ಚನ್ನಬಸವನನ್ನು ಕ್ರೇನ್ ಸಹಾಯದಿಂದ ಉಳಿಸಿಕೊಳ್ಳಲಿಲ್ಲ, ಮುಂಜಾಗ್ರತೆ ಮಾಡದೆ ಹಗ್ಗ ಹಾಕಿ ಕರೆತರುವ ಪ್ರಯತ್ನ ಮಾಡಿದ್ದಕ್ಕೆ ಕುಟುಂಬಸ್ಥರು ತಾಲೂಕು ಆಡಳಿತ ವಿರುದ್ಧ ಆರೋಪಿಸಿದರು.