ಅನುಪಮ ಸ್ವರಸಾಮ್ರಾಟ್ ಪಂಡಿತ್ ಕುಮಾರ ಗಂಧರ್ವ

ಅನುಪಮ ಸ್ವರಸಾಮ್ರಾಟ್ ಪಂಡಿತ್ ಕುಮಾರ ಗಂಧರ್ವ

ಕುಮಾರ ಗಂಧರ್ವ: ಭಾರತೀಯ ಶಾಸ್ತ್ರೀಯ ಸಂಗೀತದ ಐತಿಹಾಸಿಕ ಉತ್ಕ್ರಾಂತಿಯ ಜೊತೆಗೆ ಬೆರೆತಂಥ ಒಂದು ಹೆಸರು. ಕಲಾ ಮೌಲ್ಯಗಳ ಒಂದು ಚೌಕಟ್ಟಿನಲ್ಲಿ ಬಂಧಿಯಾಗಿದ್ದ ಚಿರಂತನ ಮತ್ತು ಪಾರಂಪರಿಕ ಶಾಸ್ತ್ರೀಯ ಸಂಗೀತವನ್ನು ಪುನರ್‌ವಿಮರ್ಶೆ ಮಾಡಿ, ಒಂದು ಹೊಚ್ಚ ಹೊಸ ಸೌಂದರ್ಯ ಶೈಲಿಯಿಂದ ಸಂಗೀತ ಶಾಸ್ತ್ರವನ್ನು ಹುಟ್ಟು ಹಾಕಿದರು ಎನ್ನುವ ಒಂದು ಹೆಸರು. ಇದೂ ಒಂದು ಸಂಗೀತದ ಶಾಸ್ತ್ರವೆಂದು ಸಿದ್ಧ ಮಾಡಿದ ಒಂದು ಹೆಸರು. ಇದನ್ನೇ ಈ ಲೇಖನದ ಮೂಲಕ ಪ್ರಸ್ತುತಪಡಿಸುವ ಒಂದು ಪ್ರಯತ್ನ.

1935, ಅಲಹಾಬಾದ್ (ಈಗಿನ ಪ್ರಯಾಗರಾಜ) ನ “ಆಗ್ರಾ ಜಮೀನದಾರ ಅಸೋಶಿಯೇಶನ್ಸ” (ಈಗಿನ ಸಿ.ಎಮ್.ಪಿ ಡಿಗ್ರಿ ಕಾಲೇಜ) ನಲ್ಲಿ ಒಂದು ಸಂಗೀತ ಸಮ್ಮೇಳನವನ್ನು ಏರ್ಪಿಡಿಸಿದ್ದರು. ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜರಾದ ಆ ಕಾಲಕ್ಕೆ ತಾನಸೇನ್‌ಎಂದೇ ಕರೆಯಲ್ಪಡುತ್ತಿದ್ದ ಉಸ್ತಾದ ಫಯಾಝ ಖಾನ ಸಾಬ್, ಉಸ್ತಾದ ಅಬ್ದುಲ್‌ಅಜೀಝ ಖಾನ್‌ಸಾಬ್, ಉಸ್ತಾದ ಹಫೀಝ ಅಲಿಖಾನ್‌ಸಾಬ್‌, ‌ಪಂಡಿತ್ ನಾರಾಯಣರಾವ್ ವ್ಯಾಸ, ‌ಪಂಡಿತ್‌ವಿನಾಯಕ ಪಟವರ್ಧನ ಮತ್ತು ಗಾಯನ ಗಾರುಡಿಗ ಕುಂದನ ಲಾಲ್‌ಸೆಹಗಲ್ ಮುಂತಾದವರು ಉಪಸ್ಥಿತರಿದ್ದರು.

ಜಮೀನದಾರ ಅಸೋಶಿಯೇಶನ್ಸ್ ಮುಂಭಾಗದಲ್ಲಿ 10/11 ವಯಸ್ಸಿನ ಇಬ್ಬರು ಹುಡುಗರು ಗೋಲಿ ಆಡುತ್ತಿದ್ದರು. ಅವರನ್ನು ಯಾರೂ ಗಮನಿಸಿರಲಿಲ್ಲ. ಅದೇ ಬಾಲಕರು ಸ್ವಲ್ಪ ಸಮಯದ ನಂತರ ಉಸ್ತಾದರಂತೆ ಸಲಾಮ್‌ಮಾಡುತ್ತಾ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪ್ರೇಕ್ಷಕರಲ್ಲಿ ಒಂದು ಪರಿಹಾಸ್ಯದ ನಗೆಯ ಅಲೆ ತೇಲಿ ಬಂತು. ಇಷ್ಟು ಚಿಕ್ಕ ಬಾಲಕರು ಇಂಥ ದಿಗ್ಗಜರ ನಡುವೆ ಏನು ಗಾಯನ ಪ್ರಸ್ತುತ ಮಾಡಬಹುದು ಎನ್ನುವಂತೆ ಇತ್ತು ಆ ಸಭೆಯ ವಾತಾವರಣ. ಬಾಲಕ ಒಂದು ಮರಾಠಿ ನಾಟಕದ “ಉಗೀಚ ಕಾ ಕಾಂತಾ ಗಾಂಜೀತಾ” ಎನ್ನುವ ಹಾಡನ್ನು ಅತ್ಯಂತ ಪ್ರಭುದ್ಧವಾಗಿ, ಶಾಸ್ತ್ರೀಯ ಬದ್ಧವಾಗ ಹಾಡಿದಾಗ ಇಡೀ ಸಭೆಯಲ್ಲಿ ಒಂದು ಮಿಂಚಿನ ಪ್ರವಾಹ ಹರಿದಂತೆ ಭಾಸವಾಗಿ ಇಡೀ ಸಭೆ ಸ್ಥಬ್ಧವಾಗಿದ್ದನ್ನು ಸಂಗೀತ ಪ್ರಿಯರು ಬಹಳ ಕಾಲ ನೆನಪು ಮಾಡಿಕೊಂಡಂಥ ಸಂಗೀತ ಕಛೇರಿ ಅದು.

ತದನಂತರ ಕಾಪಿ ರಾಗವನ್ನು ಅರ್ಧಘಂಟೆ ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿ, ಸುಮಾರು 15 ನಿಮಿಷ ಚಪ್ಪಾಳೆಯ ಸುರಿಮಳೆ ಆಗುತ್ತದೆ. ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿದ್ದಂಥ ಪಂಡಿತ ತೇಜ್‌ಬಹಾದ್ದೂರ ಸಪ್ರು ಅವರು ಬಾಲಕನನ್ನು ಬಾಚಿ ತಬ್ಬಿಕೊಂಡು ಸ್ವರ್ಣ ಪದಕ ನೀಡುತ್ತಾರೆ.

ಆ ಬಾಲಕನ ಧ್ವನಿಯನ್ನು ಕೇಳಿಯೇ ಇಡೀ ಸಭೆ ನಿಬ್ಬೆರಗಾಗಿತ್ತು. ಆ ಸಂಗೀತ ಸಮಾರೋಹದಲ್ಲಿ ಉಪಸ್ಥಿತರಿದ್ದ ಉಸ್ತಾದ್‌ಫಯಾಝ ಖಾನ ಸಾಬ್ ಅವರ ಬಾಯಿಂದ ಹೊರಟ ಒಂದು ಉದ್ಘೋಷ ಇಡೀ ಸಭೆಯನ್ನು ಚಕಿತಗೊಳಿಸಿತು.

ಮೈನೆ ಯೆ ಮರಾಠಿ ರಂಗಭೂಮಿ ಕಾ ಗಾನಾ ಉಸ್ತಾದ್‌ಅಬ್ದುಲ ಕರೀಮ್‌ಖಾನ್‌ಸಾಬ್ ಕೊ ಗಾತೇ ಹುವೆ ಸುನಾ ಥಾ. ಮುಝೆ ಪುನರ್ಜನಮ್‌ಮೆ ವಿಶ್ವಾಸ್‌ನಹೀ ಹೈ. ಲೇಕಿನ್‌ಇಸ್‌ಛೋಟೆ ಉಸ್ತಾದ್‌ಕೊ ದೇಖ್‌ಕೆ ಐಸಾ ಲಗಾ ಕಿ ಉಸ್ತಾದ್‌ಅಬ್ದುಲ ಕರೀಮ್‌ಖಾನ್‌ಸಾಬ್ ಕಾ ಅವತಾರ ಫಿರ್‌ಸೆ ಹುವಾ ಹೈ.

ನಾನು ಈ ಮರಾಠಿ ನಾಟಕದ ಹಾಡನ್ನು ಉಸ್ತಾದ್‌ಅಬ್ದುಲ್‌ಕರೀಮ್‌ಖಾನ್‌ಸಾಬ್ ಅವರು ಹಾಡಿದ್ದನ್ನು ಕೇಳಿದ್ದೇನೆ. ನನಗೆ ಪುನರ್ಜನ್ಮದಲ್ಲಿ ವಿಶ್ವಾಸವಿಲ್ಲ. ಆದರೆ ಈ ಹುಡುಗನ ಹಾಡು ಕೇಳಿ ನನಗೆ ಉಸ್ತಾದ್‌ಅಬ್ದುಲ್‌ಕರೀಮ್‌ಖಾನ್‌ಸಾಬ್‌ಮತ್ತೆ ಅವತಾರ ಎತ್ತಿದ್ದಾರೆ ಅನಿಸುತ್ತದೆ.

ಅಲ್ಲಿದ್ದ ಬಹುತೇಕ ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರರಲ್ಲಿ ಮೊಳಕೆಯೊಡೆದ ವಿಶ್ವಾಸ ಅಂದರೆ ಈ ಹುಡುಗನಿಗೆ ಹಿಂದಿನ ಜನ್ಮದಿಂದಲೇ ಶಾಸ್ತ್ರೀಯ ಸಂಗೀತದ ತಾಲೀಮು ಸಿಕ್ಕಿದೆ. ಈಗ ಅದನ್ನು ಪ್ರಸ್ತುತ ಮಾಡಲು ಬಂದಿದ್ದಾನೆ ಎನ್ನುವುದು. ಇದು ಉತ್ಪ್ರೇಕ್ಷೆ ಆದರೂ ಬಾಲಕನ ಅಂದಿನ ಪ್ರಭುದ್ಧ ಗಾಯನ ಎಲ್ಲರ ಮನಸ್ಸನ್ನು ಸೆಳೆದಿತ್ತು ಎನ್ನುವುದು ಬಹುಕಾಲ ನೆನಪಿಸಿಕೊಳ್ಳುವಂಥಾ ಸನ್ನಿವೇಶ.

ಮನೆಯ ಶಾಸ್ತ್ರೀಯ ಸಂಗೀತದ ವಾತಾವರಣದಲ್ಲಿ ಬೆಳೆದ ಇಂಥ ಅದ್ಭುತ ಬಾಲ ಪ್ರತಿಭೆ 4 ವರ್ಷದವನಿದ್ದಾಗಲೇ ಸಂಗೀತದ ಅಭ್ಯಾಸವನ್ನು ರೂಢಿಸಿಕೊಂಡಿದ್ದ. 5 ವರ್ಷದವನಿದ್ದಾಗಲೇ ಈ ಬಾಲಕ ದಾವಣಗೆರೆಯಲ್ಲಿ ಪ್ರಪ್ರಥಮ ಕಛೇರಿಯನ್ನು ನೀಡಿದ್ದ. ಬಾಲ ಗಂಧರ್ವರ ಆರಾಧಕರಾಗಿದ್ದ, ಅಲ್ಲಿ ಉಪಸ್ಥಿತರಿದ್ದ ಕಲಬುರ್ಗಿ ಜಿಲ್ಲೆಯ ಗುರುಕಲ್ಮಠದ ಶಾಂತವೀರ ಮಹಾಸ್ವಾಮೀಜಿಯವರು “ಅರೆ ಈತ ಗಂಧರ್ವ, ಇನ್ನು ಮುಂದೆ ಈ ಬಾಲಕ ಕುಮಾರ ಗಂಧರ್ವ” ಎಂದು ನಾಮಕರಣ ಮಾಡುತ್ತಾರೆ. ಮುಂದೆ ಇದೇ ಹೆಸರು ಶಾಶ್ವತವಾಗಿ ಉಳಿಯಿತು. ಇಂಥ ನಾಮಾಂಕಿತ ಪಡೆದ ಪ್ರತಿಭಾವಂತ ಬಾಲಕ ಈ ಲೇಖನದ ಕೇಂದ್ರಬಿಂದು ಶ್ರೀ ಶಿವಪುತ್ರ ಸಿದ್ಧರಾಮಯ್ಯ ಕೋಮ್ಕಾಳಿಮಠ.

ಸಂಗೀತಮಯ ವಾತಾವರಣ ಮತ್ತು ಸಂಗೀತವನ್ನೇ ಹಾಸಿ ಹೊದ್ದಂಥ ಮನೆತನದ, ವೃತಿಯಿಂದ ಸರಾಫರಾಗಿದ್ದ ಶ್ರೀ ಸಿದ್ಧರಾಮಯ್ಯ ಮತ್ತು ಶ್ರೀಮತಿ ಗುರುಸಿದ್ಧವ್ವರ ಮಗನಾಗಿ ದಿನಾಂಕ 08.04.1924 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುಳೇಭಾವಿಯಲ್ಲಿ ಜನಿಸುತ್ತಾರೆ. ತಂದೆ ಸ್ವತಃ ಶಾಸ್ತ್ರೀಯ ಸಂಗೀತಗಾರರು. ಸಂಗೀತದ ದೀಕ್ಷೆಯನ್ನು ನೀಡಿದಂಥ ಸೋದರ ಮಾವ ಶ್ರೀ ಕಲ್ಲಯ್ಯಸ್ವಾಮಿ ಸಂಬರಗಿಮಠ ಗಾಯಕ ನಟರಾಗಿದ್ದರು. ಇಂಥ ಪ್ರತಿಭಾವಂತ ಮಗನಿಗೆ ಹೆಚ್ಚಿನ ತಾಲೀಮು ಅಗತ್ಯ ಇದೆ ಎಂದರಿತ ತಂದೆ ಶ್ರೀ ಸಿದ್ಧರಾಮಯ್ಯನವರು ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿ “ದೇವಧರ ಸ್ಕೂಲ್‌ಆಫ್‌ಇಂಡಿಯನ್‌ಮ್ಯೂಸಿಕ್” ಗೆ ಸೇರಿಸುತ್ತಾರೆ. ಅಲ್ಲಿ ಸಂಗೀತದ ಗುರುಗಳಾದ ಪ್ರೋ. ಬಿ. ಅರ್.‌ದೇವಧರ ಅವರಲ್ಲಿ ಸಂಗೀತ ಶಿಕ್ಷಣವನ್ನು ಆರಂಭ ಮಾಡುತ್ತಾರೆ. ವಿಶೇಷ ಅಕ್ಕರೆಯಿಂದ ತಮ್ಮ ಮಗನಂತೆ ನೋಡಿಕೊಂಡ ಪ್ರೋ. ಬಿ. ಅರ್.‌ದೇವಧರ ಅವರು ಕುಮಾರ ಗಂಧರ್ವರನ್ನು ಪ್ರತಿಭಾವಂತ ಗಾಯಕನನ್ನಾಗಿ ರೂಪಿಸಿದ ಮೂರ್ತಿಕಾರರು.
ಕೇವಲ ಅನುಕರಣವೇ ಗಾಯನವಲ್ಲ, ಅದೊಂದು ಸೃಜನಶೀಲ ಪ್ರಕ್ರಿಯೆ ಎಂದು ತಿಳಿಸಿ ಸಂಗೀತ ಶಾಸ್ತ್ರದ ಎಲ್ಲ ಮಜಲುಗಳನ್ನು ಪರಿಚಯಿಸಿದರು. ಕುಮಾರನನ್ನು ನಿಜವಾದ “ಗಂಧರ್ವ”ರನ್ನಾಗಿ ಮಾಡಿದ ಶ್ರೇಯಸ್ಸು ಪ್ರೋ. ಬಿ. ಅರ್.‌ದೇವಧರ ಅವರಿಗೆ ಸಲ್ಲುತ್ತದೆ. ಅಲ್ಲಿಂದ ಬಾಲಕ ಕುಮಾರ ಗಂಧರ್ವರ ಬಾಳಿನಲ್ಲಿ ಮತ್ತೊಂದು ಸಂಗೀತ ಲೋಕದ ಅನಾವರಣ ಶುರುವಾಗುತ್ತದೆ.

ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಿದ್ದ ಬಾಲಕನಿಗೆ ಶಾಸ್ತ್ರೀಯ ಸಂಗೀತದ ವಿವಿಧ ಘರಾಣೆಗಳ ದ್ರುಪದ್, ಟಪ್ಪಾ, ಖಯಾಲ್‌, ಠುಮರಿ, ತಾನ್, ಬಂದಿಶ್ ಗಳನ್ನು ಪರಿಚಯಿಸುತ್ತಾರೆ. 1933 ರಿಂದ 1943 ರ ವರೆಗೆ ಪ್ರೋ. ದೇವಧರ ಅವರಲ್ಲಿ ಶಿಕ್ಷಣ ಪಡೆದ ಕುಮಾರ ಗಂಧರ್ವರು ಮುಂದೆ ಅಂಜನೀಬಾಯಿ ಮಾಳವೇಕರ ಅವರಲ್ಲಿ ಸಂಗೀತದ ಶಿಕ್ಷಣ ಪಡೆದರು. ಕುಮಾರ ಗಂಧರ್ವರ ಒಂದು ವೈಶಿಷ್ಠ್ಯವೆಂದರೆ ಯಾವುದೇ ಘರಾಣೆಗೆ ಸೀಮಿತವಾಗಿರಲಿಲ್ಲ.

1944-45 ಕುಮಾರ ಗಂಧರ್ವರ ಜೀವನದಲ್ಲಿ Romantic Year. ಅನಬಹುದು. ಪ್ರೋ. ದೇವಧರ ಅವರಲ್ಲಿ ಸಂಗೀತ ವಿದ್ಯಾಭ್ಯಾಸ ಮಾಡುತ್ತಿದ್ದ ಹಾಗೂ ತಮ್ಮ ಪ್ರೀತಿಯ ಶಿಷ್ಯೆಯೂ ಆಗಿದ್ದ ಮಂಗಳೂರಿನ ಶ್ರೀಮತಿ ಭಾನುಮತಿ ಕಂಸ ಅವರನ್ನು 1946 ರಲ್ಲಿ ವಿವಾಹವಾಗುತ್ತಾರೆ. ಕುಮಾರ ಗಂಧರ್ವರ ಜೀವನದಲ್ಲಿ ಶ್ರೀಮತಿ ಭಾನುಮತಿಯವರ ಪಾತ್ರ ಅತ್ಯಂತ ಮಹತ್ವದ್ದು. ಅವರ ಬಾಳಿನುದ್ದಕ್ಕೂ ಅವರ ಪತ್ನಿಯಾಗಿ, ಅನಾರೋಗ್ಯ ಪೀಡಿತರಾರಾದಾಗ ಒಬ್ಬ ತಾಯಿ ಮಗುವನ್ನು ನೋಡಿಕೊಳ್ಳುವಂತೆ ಸಾಕಿ ಸಲುಹಿದರು ಎಂದು ಸಮೀಪದಿಂದ ಬಲ್ಲವರು ಹೇಳುತ್ತಾರೆ. ಅಂದರೆ ಶ್ರೀಮತಿ ಭಾನುಮತಿ ಕಂಸ ಅವರ ವ್ಯಕ್ತಿತ್ವ ಎಂಥ ಉನ್ನತ ಮಟ್ಟದಲ್ಲಿತ್ತು ಎನ್ನುವುದನ್ನು ನಾವು ಗಮನಿಸಬಹುದು. ಖ್ಯಾತ ಹಿಂದುಸ್ತಾನಿ ಗಾಯಕ ಮುಕುಲ್‌ಶಿವಪುತ್ರ ಇವರ ಮಗ.


1947 ರಲ್ಲಿ ಕುಮಾರ ಗಂಧರ್ವರು ಗಂಭೀರ ಅನಾರೋಗ್ಯಕ್ಕೀಡಾದರು. ಒಂದು ಮೂಲದ ಪ್ರಕಾರ ವೈದ್ಯರುಗಳು ಕ್ಷಯರೋಗ ಎಂದು ತಪ್ಪಾಗಿ ಗ್ರಹಿಸಿದ್ದರು ಮತ್ತು ಇದು ಪುಪ್ಪುಸದ ಕ್ಯಾನ್ಸರ್‌ಆಗಿತ್ತು ಎಂದು ನಂಬಲಾಗಿದೆ.
ಇಂದಿನ ಕಾಲದಂತೆ ವೈದ್ಯಕೀಯ ಕ್ಷೇತ್ರ ಆಧುನೀಕರಣವಾಗಿರಲಿಲ್ಲ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ, ವೈದ್ಯರ ಸಲಹೆಯ ಮೇರೆಗೆ ಪುಪ್ಪುಸದ ಒಂದು ಭಾಗವನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗಿತ್ತು. ಶಸ್ತ್ರ ಚಿಕಿತ್ಸೆಯ ನಂತರ ಯಾವುದಾದರೂ ಒಣ ಹವೆ ಇರುವ ಪ್ರದೇಶಕ್ಕೆ ಹೋಗಿ ನೆಲೆಸಿ ಎಂದು ವೈದ್ಯರು ಸಲಹೆ ನೀಡಿದಾಗ ಮಧ್ಯಪ್ರದೇಶದ ಇಂದೋರ್‌ಸಮೀಪವಿರುವ ಮಾಲ್ವಾ ಪ್ರದೇಶದ ದೇವಾಸ ನಗರಕ್ಕೆ ಬಂದು ನೆಲೆಸುತ್ತಾರೆ.

ಕುಮಾರ ಗಂಧರ್ವರಿಗೆ ಮಾತನಾಡಲೂ ಅವಕಾಶ ನೀಡಬಾರದು ಎಂದು ವೈದ್ಯರು ಸಲಹೆ ನೀಡಿರುತ್ತಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಪತ್ನಿ ಭಾನುಮತಿಯವರು ಧೈರ್ಯ ಕಳೆದುಕೊಂಡು ಅತ್ತು ಬಿಟ್ಟಾಗ ಎದೆಗುಂದದ ಕುಮಾರ ಗಂಧರ್ವರು “ಸುಮ್ಮನಿರು ನಾನು ಹಾಡದೇ ಸಾಯುವುದಿಲ್ಲ” ಅಂದು ಧೈರ್ಯ ತುಂಬುತ್ತಾರೆ.
ಕುಮಾರ ಗಂಧರ್ವರನ್ನು ಅತ್ಯಂತ ಕಾಳಜಿಯಿಂದ ಆರೈಕೆ ಮಾಡಿದ ಪತ್ನಿ ಶ್ರೀಮತಿ ಭಾನುಮತಿಯವರು ಅವರನ್ನು ಈ ಅನಾರೋಗ್ಯದಿಂದ ಹೊರಬರಲು ಕಾರಣೀಭೂತವಾಗುತ್ತಾರೆ ಮತ್ತು ನೆರವಿಗೆ ಬಂದಿದ್ದು ಆಗತಾನೇ ಭಾರತಕ್ಕೆ ಬಂದಿದ್ದ Streptomycin ಎನ್ನುವ  Antibiotic medicine

ಸುಮಾರು 4/5 ವರ್ಷ ಹಾಸಿಗೆಯಲ್ಲೇ ಕಳೆದ ಕುಮಾರ ಗಂಧರ್ವರು ಮಾಲ್ವಾ ಪ್ರದೇಶದ ಜಾನಪದ ಸಂಗೀತವನ್ನು ಕೇಳಿಸಿಕೊಳ್ಳುತ್ತಾ ಮನಸ್ಸಿನಲ್ಲಿಯೇ ಈ ಜನಪದ ಹಾಡುಗಳನ್ನು ಮುಂಚೂಣಿಗೆ ತರಬೇಕೆಂದು ಸಂಕಲ್ಪ ಮಾಡಿದ್ದರು ಎನ್ನಲಾಗುತ್ತದೆ.

ಅನಾರೋಗ್ಯವನ್ನು ವರವೆಂದೇ ಭಾವಿಸಿದ ಕುಮಾರ ಗಂಧರ್ವರು “ಅನಾರೋಗ್ಯಕ್ಕಿಂತ ಮೊದಲು ನಾನು ಸಂಗೀತವನ್ನು ಗಿಳಿಪಾಠದಂತೆ ಒಪ್ಪಿಸುತ್ತಿದ್ದೆ. ಇದು ನನ್ನ ಅಂತರಂಗದ ಬಾಗಿಲನ್ನು ತೆರೆಯಿತು” ಎಂದು ಪದೇ ಪದೇ ಹೇಳುತ್ತಿದ್ದುದನ್ನು ಅವರನ್ನು ಸಮೀಪದಿಂದ ಬಲ್ಲವರು ಹೇಳುತ್ತಾರೆ. ಹಾಗಾಗಿಯೇ ಅವರ ಸಂಗೀತಕ್ಕೆ ದಾರ್ಶನಿಕ ಮತ್ತು ಧ್ಯಾನಾತ್ಮಕ ಸೊಗಡಿತ್ತು ಎನ್ನುವುದು. ಬಹಳಷ್ಟು ಹೆಣಗಿದ ಕುಮಾರ ಗಂಧರ್ವರು ತಮ್ಮ ಹಾಡುಗಾರಿಕೆಯಲ್ಲಿ ಸಾಕಷ್ಟು ಮಾರ್ಪಾಡು ಮಾಡಿಕೊಳ್ಳಲು ನಿರ್ಧರಿಸಿದ್ದಂತೆ ಕಾಣುತ್ತದೆ. ಹೆಚ್ಚಾಗಿ ಮಧ್ಯಮಾವಧಿ ರಾಗಗಳನ್ನು ಪ್ರಸ್ತುತಪಡಿಸಿದ್ದನ್ನು ನಾವು ಕಾಣಬಹುದು.

ಸುಮಾರು 5/6 ವರ್ಷ ಸಂಗೀತ ಕಛೇರಿಗಳಿಂದ ದೂರವಿದ್ದ ಕುಮಾರ ಗಂಧರ್ವರು 1953 ಡಿಸೆಂಬರ್ ನಲ್ಲಿ ಅಲಹಾಬಾದ್‌(ಈಗಿನ ಪ್ರಯಾಗರಾಜ) ನಲ್ಲಿ ಮತ್ತೆ ಸಾರ್ವಜನಿಕವಾಗಿ ಸಂಗೀತ ಕಛೇರಿಯನ್ನು ನೀಡುತ್ತಾರೆ. ಅಂದಿನ ಕಛೇರಿಯನ್ನು ಲಂಕೇಶ್ವರಿ ರಾಗದಿಂದ ಪ್ರಾರಂಭಿಸಿದ ಕುಮಾರ ಗಂಧರ್ವರು ಇಡೀ ಸಭೆಯಲ್ಲಿ ಒಂದು ವಿದ್ಯುತ್‌ಸಂಚಾರ (Electrifying Effect) ವನ್ನೇ ಮಾಡಿದ್ದರು. ಸುಮಾರು 5/6 ವರ್ಷ ಸಂಗೀತದಿಂದ ದೂರವಿದ್ದವರು ಇನ್ನು ಮೊದಲಿನಂತೆ ಹಾಡಲಾರರು ಎನ್ನುವವರ ಅನುಮಾನಕ್ಕೆ ತೆರೆ ಎಳೆದರು. ಒಂದು ರೀತಿಯಲ್ಲಿ ಮರುಹುಟ್ಟು ಪಡೆದರು. ಇದು ಕುಮಾರ ಗಂಧರ್ವರ ಸಂಗೀತ ಪ್ರಜ್ಞೆ ಮತ್ತು ಹಠಕ್ಕೆ ಹಿಡಿದ ಕನ್ನಡಿ ಎನ್ನಬಹುದು.

ಇಂಥ ಒಂದು ಅಭೂತಪೂರ್ವ ಸಾಧನೆ ಮಾಡಲು ಕಾರಣರಾದವರು ಶ್ರೀಮತಿ ಭಾನುಮತಿಯವರು. ಶಿಷ್ಯೆಯಾಗಿ, ಪ್ರೇಯಸಿಯಾಗಿ, ಪತ್ನಿಯಾಗಿ ಅಪಾರ ಸೇವೆ ಮಾಡಿದ ಭಾನುಮತಿ 1961 ರಲ್ಲಿ ಎರಡನೇ ಮಗುವಿನ ಜನನ ಸಮಯದಲ್ಲಿ ನಿಧನರಾದಾಗ ಕುಮಾರ ಗಂಧರ್ವರ ಬಾಳಿನಲ್ಲಿ ಮತ್ತೊಂದು ಬರಸಿಡಿಲು ಬಡಿದಂತಾಯಿತು. ಅವರ ಬಾಳಿನಲ್ಲಿ ಪ್ರವೇಶ ಮಾಡಿದವರು ಮತ್ತೋರ್ವಶಿಷ್ಯೆ ಶ್ರೀಮತಿ ವಸುಂಧರಾ ಶ್ರೀಖಂಡೆ. ಜೇಮಶೇಡಪುರದಲ್ಲಿ ಜನಿಸಿದ ಶ್ರೀಮತಿ ವಸುಂಧರಾ ಅವರು ಕೋಲ್ಕತ್ತಾದಲ್ಲಿ ತಮ್ಮ ವಿದ್ಯಾಭ್ಯಾವನ್ನು ಮಾಡಿದ್ದಾರೆ.
1946 ರಲ್ಲಿ ಮುಂಬೈಗೆ ಬಂದ ಅವರು ಪ್ರೋ. ದೇವಧರ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಸುತ್ತಾರೆ. ಪಂಡಿತ್‌ವಿಷ್ಣು ದಿಗಂಬರ ಪಾಲುಸ್ಕರ ಮತ್ತು ಕುಮಾರ ಗಂಧರ್ವರ ಶಿಷ್ಯೆಯಾಗಿ ಸಂಗೀತದ ತಾಲೀಮನ್ನು ಪಡೆದವರು. ಸಾಮಾನ್ಯವಾಗಿ ಕುಮಾರ ಗಂಧರ್ವರ ಎಲ್ಲಾ ಕಛೇರಿಗಳಲ್ಲಿ ತಾನಪುರಾ ಹಿಡಿದು ಸಾಥ್ ನೀಡುತ್ತಿದ್ದವರು ಶ್ರೀಮತಿ ವಸುಂಧರಾ ಶ್ರೀಖಂಡೆ. ಅವರ ಮಗಳು ಶ್ರೀಮತಿ ಕಲಾಪಿನಿ ಕೋಮ್ಕಲಿ ಸಹ ಪ್ರಖ್ಯಾತ ಹಿಂದುಸ್ತಾನಿ ಗಾಯಕಿ.


ಅಭೂತಪೂರ್ವವಾಗಿ ಸಂಗೀತ ಕಛೇರಿಗಳಿಗೆ ಹಿಂತಿರುಗಿ ಬಂದ ಕುಮಾರ ಗಂಧರ್ವರು ಬೇರೆ ಬೇರೆ ಬಂದಿಶ್‌ಗಳಿಗೆ ಬೇರೆ ಬೇರೆ ರಾಗ, ತಾಳಗಳನ್ನು ಹೊಂದಿಸಿ ಪ್ರಸ್ತುತ ಪಡಿಸುವಲ್ಲಿ ಮಗ್ನರಾಗುತ್ತಾರೆ. ಗಾಯಕನ ಇಚ್ಛೆ ಮತ್ತು ಬಂದಿಶ್‌ಗಳನ್ನು ಬಂಧಿಸುವದನ್ನು ತಪ್ಪಿಸಿ ಬೇರೆ ಬೇರೆ ರಾಗಗಳಲ್ಲಿ ವ್ಯಕ್ತಪಡಿಸಿ ಒಂದು ವಿಶಾಲ ರೂಪವನ್ನು ನೀಡಿದವರು ಕುಮಾರ ಗಂಧರ್ವರು. ಕಠಿಣದಲ್ಲಿ ಕಠಿಣ ತಾನ್‌ಗಳನ್ನು ಅತ್ಯಂತ ಸುಲಭವಾಗಿ ಪ್ರಸ್ತುತ ಮಾಡಿದ ಗಾಯಕರಲ್ಲಿ ಪ್ರಮುಖರಾದವರು ಕುಮಾರ ಗಂಧರ್ವರು. ಮಧ್ಯಲಯವನ್ನು ಹೆಚ್ಚಾಗಿ ಬಳಸುತ್ತಿದ್ದ ಕುಮಾರ ಗಂಧರ್ವರು “ರೂಪಧರೆ ಜಬ ಸಾಧದ ಪೂರಣ ಸುರ್‌ಬನೆ ಲಯ ಢಾಯೆ””ಎಂದು ಹೇಳುತ್ತಿದ್ದ ಮಾತು ಈಗಲೂ ಪ್ರಸ್ತುತ. ಅವರ ಹಾಡುಗಾರಿಕೆಯ ವಿಶೇಷತೆ ಅಂದರೆ ಚೌಕಟ್ಟು ಎನ್ನುವ Sequence  ಇರಲಿಲ್ಲ. ಆದರೆ ಬಂದಿಶ್‌ಗಳಲ್ಲಿನ ಚಿತ್ರಣವನ್ನು ಉದಾಸೀನ ಮಾಡಲಿಲ್ಲ.

ಬಹಳ ಅಪರೂಪವಾದ ಇನ್ನೊಂದು ವಿಶೇಷತೆ ಕುಮಾರ ಗಂಧರ್ವ ಅವರ ಗಾಯನದಲ್ಲಿ ಅಂದರೆ ತಾಳ ಸಪ್ತಕ ಸ್ವರದ ಪ್ರಸ್ತುತಿ. ಇದನ್ನ Handle ಮಾಡೋದು ಕಷ್ಟ ಮತ್ತು  Very Rsre. ಅದನ್ನು ಕಟ್ಟುತ್ತಾ ಹೋಗುತ್ತಿದ್ದ ಪರಿ ಅಮೋಘವಾದದ್ದು. ರಾಗ ಪ್ರಜ್ಞೆ ಮತ್ತು Timing ಅಂತೂ Fantastic.

ಲೋಕಸಂಗೀತಕ್ಕೆ ಸಂಪೂರ್ಣ ಸಪ್ತಕದ ಪರಿಕಲ್ಪನೆಯನ್ನು ಕೊಟ್ಟವರು ಕುಮಾರ ಗಂಧರ್ವರು. ಇದಕ್ಕೆ ಗ್ರಾಮೀಣ ಪ್ರತಿಮೆಗಳನ್ನು ಜೋಡಿದವರು ಕುಮಾರ ಗಂಧರ್ವರು. ಪ್ರಕೃತಿಯ ಜೊತೆಗೆ ಸಂವಾದ ನಡೆಸಿದ ಕುಮಾರ ಗಂಧರ್ವರು ಇದಕ್ಕಾಗಿ ಹೊಸ ರಾಗಗಳನ್ನು ಸೃಷ್ಟಿಸಿದರು. ಜಾನಪದ ಸಂಗೀತ ಮತ್ತು ಶಾಸ್ತ್ರೀಯ ಸಂಗೀತಗಳ ಬೆಸುಗೆಯನ್ನು ಮಾಡಿ ಪ್ರಸ್ತುತಿ ಮಾಡಿದ್ದು ಕುಮಾರ ಗಂಧರ್ವರ ವಿಶಿಷ್ಠ ಕೊಡುಗೆ. ಋತುಮಾನಕ್ಕನುಗುಣವಾಗಿ ಪ್ರಚಲಿತವಿದ್ದ ರಾಗಗಳಿಗೆ ತಮ್ಮದೇ ಆದ ರಾಗಗಳನ್ನು ಜೋಡಿಸಿ ಗೀತ ವರ್ಷ (ಮಳೆಗಾಲ), ಗೀತ ಹೇಮಂತ (ಚಳಿಗಾಲ) ಮತ್ತು ಗೀತ ವಸಂತ (ವಸಂತ ಕಾಲ) ಎನ್ನುವ ರಾಗಗಳನ್ನು ರಚನೆ ಮಾಡಿದ್ದಾರೆ. ಈ ರಾಗಗಳು ಮಾಲ್ವಾ ಜನರ ಜಾನಪದ ಜೀವನ, ಉತ್ಸವಗಳು ಮತ್ತು ಹಬ್ಬ ಹರಿದಿನಗಳನ್ನು ವಿಶ್ಲೇಷಣೆ ಮಾಡಿ, ಪರಂಪರಾಗತವಾಗಿ ಬಂದ ಬಂದಿಶ್‌ಗಳು ಮತ್ತು ಲೋಕಗೀತೆಗಳನ್ನು  Blend  ಮಾಡಿ ರಚಿಸಿದ ರಾಗಗಳು. ಅಷ್ಟರ ಮಟ್ಟಿಗೆ ಅವರು ಸಂಗೀತವನ್ನು ಆರಾಧಿಸಿದ್ದರು.

ಪ್ರಾರಂಭದಿಂದಲೂ ಹಲವಾರು ಘರಾಣೆಗಳ ತಾಲೀಮು ಪಡೆದಿದ್ದರೂ, ಮುಂದೆ ಸಾಗಿದಂತೆ ಒಂದು ಘರಾಣೆಗೆ ಸೀಮಿತವಾಗದೇ ಕುಮಾರ ಗಂಧರ್ವರ ಸೃಜನಶೀಲ ಗಾಯನ ಘರಾನಾದ ಗಡಿಗಳನ್ನೂ ದಾಟಿತ್ತು. ಸಾಮಾನ್ಯವಾಗಿ ಎರಡು ರಾಗಗಳನ್ನು ಪ್ರಸ್ತುತ ಮಾಡುವಾಗ ಒಂದಾದ ಮೇಲೆ ಇನ್ನೊಂದು ರಾಗವನ್ನು ಉಪಯೋಗಿಸುವುದು ವಾಡಿಕೆ. ಆದರೆ ಈ Concept ನ್ನು ಸುಧಾರಿಸಿ ಎರಡೆರಡು ರಾಗಗಳನ್ನು (Parallel) ಸಮಾನಾಂತರವಾಗಿ ಯಶಸ್ವಿಯಾಗಿ ಪ್ರಯೋಗ ಮಾಡಿದ್ದು, ಈ ರಾಗಗಳು ವಿರಳ ನವಿರು ನಾಜೂಕನ್ನು ಹೊಂದಿವೆ. ಉದಾಹರಣೆಗಾಗಿ ಕೇದಾರ-ನಂದ, ಕೇದಾರ-ದುರ್ಗಾ, ಗೌರಿ-ಬಸಂತ, ಸೊಹನಿ-ಭಟಿಯಾರ ಮುಂತಾದ ರಾಗಗಳನ್ನು ಏಕ ಕಾಲಕ್ಕೆ ಸಮಾನಾಂತರ ಪ್ರಯೋಗ ಮಾಡಿ ಯಶಸ್ವಿಯಾಗಿ ಪ್ರಯೋಗ ಮಾಡಿದ್ದರು.

ಕುಮಾರ ಗಂಧರ್ವರು ಶಾಸ್ತ್ರೀಯ ಸಂಗೀತದ ತಳಹದಿಯ ಮೇಲೆ ಬೆಳೆದು ಬಂದ ಲಘು ಶಾಸ್ತ್ರೀಯ ಸಂಗೀತದ ಶೃಂಗಾರ ರಸದ ಲಲಿತ ಸ್ವರೂಪ ರಾಗಗಳಾದ ಠುಮರಿ, ಟಪ್ಪಾ ತರಾನಾಗಳನ್ನು ಅದ್ಭುತವಾಗಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರು.

ಠುಮರಿ ಈ ಶಬ್ದದ ಉತ್ಪತ್ತಿಯು ಹಿಂದಿ ಶಬ್ದ ಠುಮಕಾನಾ ಎನ್ನುವ ಸುಂದರ ಸ್ತ್ರೀಯ ವಿಶಿಷ್ಟ ನಡಿಗೆಯ ಸೂಚಕವಾಗಿದೆ. ಶಬ್ದದ ಅರ್ಥವನ್ನು ಠುಮ ಮತ್ತು ರೀ ಎಂಬ ಪ್ರಕಾರದಿಂದ ಹೇಳುತ್ತಾರೆ. ಠುಮ್ ಅಂದರೆ ಠುಮಕ ಚಾಲ ಮತ್ತು ರೀ ಎಂದರೆ ಅಂತರಂಗದ ಭಾವನೆಗಳನ್ನು ರೀ, ಅರೀ, ಏರೀ ಮುಂತಾದ ಆಡುಭಾಷೆಗಳನ್ನು ಉಪಯೋಗಿಸಿ ಹೇಳುವುದು. ಶೃಂಗಾರ ರಸದಲ್ಲಿ ಮುಖ್ಯವಾಗಿ ಎರಡು ರಸಗಳಿವೆ. ಒಂದು ಸಂಯೋಗ ರಸ ಇನ್ನೊಂದು ವಿಯೋಗ ರಸ. ಈ ಎರಡೂ ರಸಗಳ ಪ್ರಯೋಗವು ಠುಮರಿ ಹಾಡುಗಾರಿಕೆಯಲ್ಲಿ. ಅತ್ಯಧಿಕವಾಗಿ ಕೇಳಲು ಸಿಗುತ್ತದೆ. ಠುಮರಿ ಹಾಡುಗಾರಿಕೆಯ ಭಾರತೀಯ ಖಯಾಲ್ ಹಾಡುಗಾರಿಕೆಯ ತಳಹದಿಯ ಮೇಲೆಯೇ ಬೆಳೆದು ಬಂದಂತಹ ಮಧ್ಯಲಯದ ಸರಳ ನಾಜೂಕಿನ ಶಾಸ್ತ್ರೀಯ ಸಂಗೀತದ ಪ್ರಕಾರ. ಮುಖ್ಯವಾಗಿ ಇದು ಭಾವಪ್ರಧಾನವಾದ ಗಾಯನ. ಗೀತೆಯ ಅರ್ಥವನ್ನು ಸ್ವರಗಳ ಮೂಲಕ ಖಟಕಾ, ಮುರಕಿ ಮುಂತಾದ, ಅಲಂಕಾರಿಕ ಸ್ವರಗಳೊಂದಿಗೆ ಕೇಳುಗರ ಮನಮುಟ್ಟುವಂತೆ ತಿಳಿಸುವುದೇ ಇದರ ಮುಖ್ಯ ಉದ್ದೇಶ. ಠುಮರಿ ಹಾಗೂ ಕಥಕ್ ನೃತ್ಯಕ್ಕೂ ಅತ್ಯಂತ ನಿಕಟವಾದ ಸಂಬಂದವಿದೆ.

ಟಪ್ಪಾ ಒಂದು ಕ್ಲಿಷ್ಟಕರವಾದ ಗಾಯನ ಪ್ರಕಾರ. ಶಬ್ದಗಳ ನಡುವೆ, ವೇಗವಾದ ತಾನಗಳ ಪ್ರಯೋಗವು ಇದರಲ್ಲಿ ಆಕರ್ಷಕವಾದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಶೋರಿಮಿಯಾ ಎಂಬುವರು ಟಪ್ಪಾ ಶೈಲಿಯನ್ನು ಪ್ರಪ್ರಥಮವಾಗಿ ಪ್ರಯೋಗ ಮಾಡಿದ್ದರೆಂದು ತಿಳಿದು ಬರುತ್ತದೆ. ಠಮರಿಯನ್ನು ಹಾಡುವ ರಾಗಗಳಲ್ಲಿ ಎಂದರೆ ಕಾಪಿ, ಭೈರವಿ, ಸಿಂಧೂರಾ, ಖಮಾಜ ಪೀಲೂ ಮುಂತಾದ ರಾಗಗಳಲ್ಲಿ ಟಪ್ಪಾ ಶೈಲಿಯ ಪ್ರಯೋಗ ಕಂಡು ಬರುತ್ತದೆ.

ತರಾನಾ ಗಾಯನದಲ್ಲಿ ಕೆಲವೊಂದು ಬೇಕಾಗಿರದ ಸ್ವರ ಶಬ್ದಗಳನ್ನು ಬಿಟ್ಟು ವೇಗವಾಗಿ ಅಂದರೆ ಧೃತ ಲಯದಲ್ಲಿ ಹಾಡುವದು ಈ ಶೈಲಿಯ ವೈಶಿಷ್ಠ್ಯ. ಸಂತೋಷ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಕೃತಿಗಳನ್ನು ಸಾಮಾನ್ಯವಾಗಿ ಕಛೇರಿಗಳ ಕೊನೆಯಲ್ಲಿ ಹಾಡಲಾಗುತ್ತದೆ. ಲಯಬದ್ಧವಾದ ಶಬ್ದಪುಂಜಗಳು ಹೆಚ್ಚಿದ್ದು ಪದಗಳ ಬಳಕೆ ಈ ಪ್ರಕಾರದಲ್ಲಿ ಕಡಿಮೆ. ಉಸ್ತಾದ ಅಮೀರ ಖುಸ್ರೋ (ಕ್ರಿ. ಶ. 1253-1325 ಅಇ) ತರಾನಾವನ್ನು ಪ್ರಸ್ತುತ ಪಡಿಸಿದ ಪ್ರಥಮ ಗಾಯಕರು.

ಶೃಂಗಾರ ರಸದ ರಾಗಗಳಾದ ಠುಮರಿ, ಟಪ್ಪಾ ತರಾನಾಗಳನ್ನು ಅದ್ಭುತವಾಗಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರು. ಪ್ರಪ್ರಥಮವಾಗಿ 4 ವರ್ಷದ ಬಾಲಕನಾಗಿದ್ದಾಗ ಎರಡು ತಂಬೂರಿಗಳ ಮಧ್ಯೆ ಕುಳಿತು ಕುಮಾರ ಗಂಧರ್ವರು ಹಾಡಿದ್ದು ಬಾಲ ಗಂಧರ್ವರು ಹಾಡಿದ್ದ ಚೀಜ್ “ತಾತಕರಿ ದುಹಿತಾ” ಎನ್ನುವ ಮರಾಠಿಯ ಟಪ್ಪಾ ಶೈಲಿಯ ಹಾಡು. ಹಾಗಾಗಿ ಅವರು ಪದೇ ಪದೇ ಹೇಳುತ್ತಿದ್ದುದು ನನ್ನ ಬಾಯಿಯಿಂದ ಮೊದಲು ಗಾಯನ ಹೊರಬಿದ್ದದ್ದು ಟಪ್ಪಾದಿಂದಲೇ ಎಂದು. ತರಾನಾ ಕಲಾಕಾರನಿಗೆ ಒಂದು ಸಂಪೂರ್ಣ ಅಭಿವ್ಯಕ್ತಿಯನ್ನು ನೀಡುತ್ತದೆ ಎಂದು ಹೇಳುತ್ತಿದ್ದರೆಂದು ಅವರ ಮಗಳು ಶ್ರೀಮತಿ ಕಲಾಪಿನಿ ಕೋಮ್‌ಕಲಿ ಹೇಳುತ್ತಾರೆ.


ಅವರ “ತ್ರಿವೇಣಿ” ಎನ್ನುವ ಗೀತೆಗಳ ಸಂಗ್ರಹದಲ್ಲಿ ಸೂರದಾಸ, ಕಬೀರದಾಸ ಮತ್ತು ಮೀರಾ ಭಜನ್‌ಗಳನ್ನು ಒಳಗೊಂಡಿದ್ದವು. ಈ ಸಂತರು ಮತ್ತು ಕವಿಗಳ ಕಾಲ ಪರಿಸರ ಮತ್ತು ಘಟನೆಗಳ ವ್ಯಾಪಕ 10 ವರ್ಷಗಳ ಅಧ್ಯಯನದ ಫಲವಾಗಿ 1965 ರಲ್ಲಿ ಅವರು ಪ್ರಕಟ ಮಾಡಿದ “ಅನೂಪರಾಗ ವಿಲಾಸ” ಎನ್ನುವ ಕೃತಿ. ರಚನಾಕಾರರ ವ್ಯಕ್ತಿತ್ವಕ್ಕೆ ಅನುಗುಣವಾಗಿ ತಕ್ಕಂತೆ ರಾಗಗಳನ್ನು ಆಯ್ದುಕೊಂಡು ಭಾವನಾತ್ಮಕವಾಗಿ ಪ್ರಸ್ತುತ ಪಡಿಸಿದ ಭಜನೆಗಳು.

ಕುಮಾರ ಗಂಧರ್ವರನ್ನು ಬಂಡಾಯ ಶಾಸ್ತ್ರೀಯ ಗಾಯಕರೆಂದು ಹಲವಾರು ಸುಪ್ರಸಿದ್ಧ ಗಾಯಕರು ಹಣೆಪಟ್ಟಿ ಕಟ್ಟಿದ್ದರು. ಅದಕ್ಕೊಂದು ಸಣ್ಣ ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಬೇಕು. ಮುಂಬೈನ ದಾದರನಲ್ಲಿನ ಒಂದು ಸಂಗೀತ ಕಛೇರಿಯಲ್ಲಿ ಭೂಪರಾಗವನ್ನು ಹಾಡುವಾಗ ಉತ್ತುಂಗ ಲಯದಲ್ಲಿದ್ದ ಹಾಡನ್ನು ಇದ್ದಕ್ಕಿಂದಂತೆ ಮಧ್ಯಮ ಲಯದಲ್ಲಿ ತಂದು ನಿಲ್ಲಿಸುತ್ತಾರೆ. ಭೂಪರಾಗದಲ್ಲಿ ಮಧ್ಯಮ ಲಯವನ್ನು ಸಾಮಾನ್ಯವಾಗಿ ಪ್ರಯೋಗಿಸುವುದಿಲ್ಲ. ಸಂಗೀತ ವಿಮರ್ಶಕರು “ಭೂಪರಾಗದಲ್ಲಿ ಮಧ್ಯಮ ಸ್ವರವೇಕೆ?? ಎಂದು ವಿರೊಧ ಮಾಡತಾರೆ. ಆಗ ಕುಮಾರ ಗಂಧರ್ವರು ಇದು ನನ್ನ ಒಂದು ಪ್ರಯೋಗ. ಇದನ್ನು ನಾನು “ಚೌತಿಭೂಪ” ಎಂದು ಕರೆಯುತ್ತೇನೆ ಎಂದು ಉತ್ತರಿಸಿದಾಗ ಮೌನಕ್ಕೆ ಶರಣಾಗುತ್ತಾರೆ.

ಮುಝೆ ಅಪನೆ ಸಂಗೀತಕೆ ಬಾರೆ ಮೆ ಕುಛ್‌ಕೆಹನಾ ನಹೀ ಹೈ. ಕೆಹನಾ ಹೈ ಲೋಗೋ ಕೋ. ಕ್ಯೂಂಕೀ ಉನ್‌ಕೋ ಸಮಝ ಹೈ ಕೀ ನಹೀ ವೇ ಸಿದ್ಧ ಕರೆ, ಮೈ ಕ್ಯೂಂ ಸಿದ್ಧ ಕರೂ? ಅನ್ನುತ್ತಾ ಎಲ್ಲ ವಿರೋಧಿಗಳನ್ನು ತಣ್ಣಗಾಗಿಸುತ್ತಿದ್ದರು.

ಕುಮಾರ ಗಂಧರ್ವರ ಈ ಬಂಡಾಯ ಹೊಸ ಹೊಸ ಅವಿಷ್ಕಾರಗಳಿಗೆ ಕಾರಣವಾಯಿತು. ಇದಕ್ಕಾಗಿಯೇ ಪ್ರಖ್ಯಾತ ಹಾರ್ಮೋನಿಯಮ್‌ವಾದಕ ಮತ್ತು ರಂಗಭೂಮಿ ನಟರಾದ ಪಂಡಿತ ಗೋವಿಂದರಾವ್‌ತಾಂಬೆ ಅವರು ಹೇಳುವ ಹಾಗೆ “ಕುಮಾರ ಗಂಧರ್ವರು ಭಾರತೀಯ ಶಾಸ್ತ್ರೀಯ ಸಂಗೀತ ಲೋಕಕ್ಕೆ ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದರು”. ಇದೇ ಮಾತನ್ನು ಅವರೊಂದಿಗೆ ತಬಲಾ ಸಾಥ್‌ನೀಡುತ್ತಿದ್ದ ಪಂಡಿತ್‌ವಸಂತ ಅಚರೇಕರ ಮತ್ತು ಅವರ ಮಗ ಸುರೇಶ ಅಚರೇಕರ ಅವರೂ ಸಹ ಪುಷ್ಠೀಕರಿಸುತ್ತಾರೆ.

ಶಾಸ್ತ್ರೀಯ ಸಂಗೀತದ ಎಲ್ಲ ಗಡಿ-ಸೀಮೆಗಳನ್ನೂ ದಾಟಿ ಪುಟಿದೆದ್ದ ಕುಮಾರ ಗಂಧರ್ವರು ಪ್ರಚಲಿತ ರಾಗಗಳಿಗೆ ಹೊಸ ಜೀವಕಳೆ ತುಂಬಿ ಪ್ರಯೋಗಗಳನ್ನು ಮಾಡಿ “ಧುನ್‌ಉಗಮ” ರಾಗಗಳೆಂದು ಹೆಸರಿಸಿ ಯಶಸ್ಸನ್ನು ಕಂಡವರು.
• ಲಗನ ಗಾಂಧಾರ
• ಮಾಲವತಿ
• ಭಾವಮತ ಭೈರವ
• ಸಾಂಝರಿ
• ಮಘದಾ
• ಸಹೇಲಿ ತೋಡಿ
• ಮಧು ಸೂರಜ
• ರಾಹಿ
• ಅಹಿರ ಮೋಹಿನಿ
• ಸೋಹನಿ
• ಭಟಿಯಾರ
• ನಿಂದಿಯಾರಿ
• ಗಾಂಧಿ ಮಲ್ಹಾರ

ಕಂಠದಿಂದ ಹೊರಡುವ ನಾದದ ಆಘಾತವೇ ಅಕ್ಷರ ಎನ್ನುವದು ಅವರ ನಂಬಿಕೆಯಾಗಿತ್ತು. ಹಾಗಾಗಿ ಅಷ್ಟಾಂಗದಿಂದ ಹೊರಡುವ ಯಾವ ನಾದ ಹೊಂದಿಕೆಯಾಗುತ್ತದೆಯೋ ಅದನ್ನೇ ತಮ್ಮ ಬಂದಿಶ್‌ಗಳಲ್ಲಿ ಪ್ರಯೋಗ ಮಾಡಿದ್ದನ್ನು ನಾವು ಕಾಣಬಹುದು. ಇದು ಅವರ ಪ್ರಯೋಗ ಇಚ್ಛಾಶಕ್ತಿಗೆ ಸಾಕ್ಷಿ. “Genious to Transform “ಎನ್ನುವ ಹಾಗೆ ಪರಿವರ್ತನೆಯ ಹಾದಿಯಲ್ಲಿ ಸಾಗಿದವರು ಕುಮಾರ ಗಂಧರ್ವರು. ಇದಕ್ಕಾಗಿ ಹಲವಾರು ಹಿಂದುಸ್ತಾನಿ ಗಾಯಕರು ಅವರನ್ನು ಬಂಡಾಯ ಗಾಯಕರು ಎಂದಾಗಲೂ ಅವರು ಹಿಂಜರಿಯಲಿಲ್ಲ. ಅವರ ಜೊತೆ ಹಾರ್ಮೋನಿಯಮ್‌ಮತ್ತು ತಬಲಾ ಸಾಥ್‌ನೀಡುತ್ತಿದ್ದವರಿಗೆ ಕುಮಾರ ಗಂಧರ್ವರು ಸವಾಲಾಗಿದ್ದರು. ಯಾವ ಸಮಯದಲ್ಲಿ ತಾನ್‌ಏರಿಸುತ್ತಾರೆ, ಹೇಗೆ ಏರಿಸುತ್ತಾರೆ ಮತ್ತು ಎಲ್ಲಿ ತಂದು ನಿಲ್ಲಿಸುತ್ತಾರೆ ಎನ್ನುವುದೇ Unpredictable ಇಂಥ ಪ್ರಯೋಗಗಳನ್ನು ಉಸ್ತಾದ ಮುಸ್ತಾಕ ಅಲಿಯವರು ಪ್ರಯೋಗಿಸುತ್ತಿದ್ದುದನ್ನು ನಾವು ಕಾಣಬಹುದು. ಅವರ Body Language ಅಂತೂ Marvelous.

ಕುಮಾರ ಗಂಧರ್ವರ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಅವರ ಮಗ ಮುಕುಲ್‌ಶಿವಪುತ್ರ, ಮಗಳು ಕಲಾಪಿನಿ ಕೋಮ್‌ಕಲಿ ಮುಂದುವರೆಸಿದ್ದಾರೆ. ಮೊಮ್ಮಗ ಭುವನೇಶ್ ಕೋಮ್‌ಕಲಿ ಅವರೂ ಸಹ ಅಗ್ರಪಂಕ್ತಿಯ ಹಿಂದುಸ್ತಾನಿ ಗಾಯಕರು. ಅವರ ಶಿಷ್ಯ ಪರಂಪರೆಯ ಗರಡಿಯಲ್ಲಿ ತಯಾರಾದವರಲ್ಲಿ ಶ್ರೀ ಸತ್ಯಶೀಲ ದೇಶಪಾಂಡೆ, ಶುಭಾ ಮುದಗಲ್‌, ವಿಜಯ ಸರ್‌ದೇಶಮುಖ, ಮಧೂಪ್‌ಮುದಗಲ್‌ಮುಂತಾದವರ ದೊಡ್ಡ ಪಟ್ಟಿಯೇ ಇದೆ.

ಶಬನಮ್‌ವೀರಮಣಿ ಎನ್ನುವವರು ತಯಾರಿಸಿದ “ಕಬೀರ” ಎನ್ನುವ ಚಲನಚಿತ್ರದಲ್ಲಿ ಕುಮಾರ ಗಂಧರ್ವರ ಜೀವನಗಾಥೆಯನ್ನು ಬಿಂಬಿಸಲಾಗಿದೆ. ಭಾರತ ಸರ್ಕಾರದ ಫಿಲ್ಮ ಡಿವಿಜನ್‌ತಯಾರಿಸಿದ 78 ನಿಮಿಷಗಳ “ಹಂಸ ಅಕೇಲಾ” ಎನ್ನುವ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿದೆ. ರಾಘವ ಪಿ ಮೆನೊನ ಎನ್ನುವವರು “Real Meaning of Swar”ಎನ್ನುವ ಕುಮಾರ ಗಂಧರ್ವರ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದಾರೆ.

ಇಂಥ ಅಭೂತಪೂರ್ವಗಾಯನ ಪ್ರತಿಭೆಗೆ ಸಂದ ಪುರಸ್ಕಾರಗಳು ಹಲವಾರು.
1962: ಗೌರವ ಡಾಕ್ಟರೇಟ್ – ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯ
1973: ಡಿ. ಲಿಟ್‌ಗೌರವ – ಉಜ್ಜಯನಿ ವಿಶ್ವ ವಿದ್ಯಾಲಯ
1973: ಮಧ್ಯಪ್ರದೇಶ ಕಲಾ ಪರಿಷತ್ತು ವತಿಯಿಂದ ಸನ್ಮಾನ
1973: ಕೇಂದ್ರ ನಾಟಕ ಅಕಾಡೆಮಿಯಿಂದ ಸನ್ಮಾನ
1977: ಕೇಂದ್ರ ಸರ್ಕಾರದ ಪದ್ಮ ಭೂಷಣ ಪ್ರಶಸ್ತಿ
1983: ಮಧ್ಯಪ್ರದೇಶ ಸರ್ಕಾರದ ಶಿಖರ ಸನ್ಮಾನ್‌ಪ್ರಶಸ್ತಿ
1990: ಕೇಂದ್ರ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ


ಭಾನುಕುಲ: ಬೆಟ್ಟದ ನಿಸರ್ಗ ರಮಣೀಯ ವಾತಾವರಣದಲ್ಲಿರುವ ಮಧ್ಯಪ್ರದೇಶದ ದೇವಾಸದ ನಿವಾಸದಲ್ಲಿ ಕುಮಾರ ಗಂಧರ್ವರು ತಮ್ಮ ಜೀವನದ ಬಹುಪಾಲನ್ನು ಕಳೆದರು. ಮಾಲ್ವಾ ಪ್ರದೇಶದ ಅತ್ಯಂತ ಜನಪ್ರಿಯ ಜಾನಪದ ಸಂಸ್ಕೃತಿ ಇಲ್ಲಿ ಮಿಳಿತವಾಗಿದೆ. “ಮಾತಾ ಕಿ ಟೇಕಡಿ” ಎನ್ನುವ ಈ ಪರಿಸರದಲ್ಲಿ ಚಾಮುಂಡಾ ಮತ್ತು ತುಳಜಾ ಭವಾನಿ ದೇವಿಯವರ ದೇವಸ್ಥಾನಗಳಿವೆ.

ಕುಮಾರ ಗಂಧರ್ವ ಸಂಗೀತ ಅಕಾಡೆಮಿ
“ಭಾನುಕುಲ” 14/1, ಮಾತಾಜಿ ರಸ್ತೆ,
ಮಾತಾಜಿ ಕಿ ಟೇಕಡಿ, ದೇವಾಸ – 455 001
ಮಧ್ಯಪ್ರದೇಶ.

ಅಮೇರಿಕಾದ ಪ್ರಖ್ಯಾತ ಶಿಲ್ಪಕಾರ ಲಿಯೋನಾರ್ಡ್‌ಬಸ್ಕಿನ್‌ಹೇಳುವಂತೆ, “ Art is man’s distinctly human way of fighting death”ಎನ್ನುವಂತೆ ಅನಾರೋಗ್ಯವನ್ನು ಮೆಟ್ಟಿ ನಿಂತು ಅದ್ಭುತ ಮನಮೋಹಕ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಆರಾಧಿಸಿದ ಕುಮಾರ ಗಂಧರ್ವರು ಸಂಗೀತ ಲೋಕ ಕಂಡ ಅಪ್ರತಿಮ ಗಾಯಕರು. ಎಲ್ಲ ವಿರೋಧಗಳ ನಡುವೆಯೂ ತಮ್ಮತನವನ್ನು ಬಿಡದೆ ಛಲಬಿಡದ ತ್ರಿವಿಕ್ರಮನಂತೆ ಬೆಳೆದು ನಿಂತದ್ದು ವಿಸ್ಮಯ. ಹಿಂದುಸ್ತಾನಿ ಹಾಡುಗಾರಿಕೆಯಲ್ಲಿರುವ ಮಜಲುಗಳನ್ನೂ ಮೀರಿ ಹೊಸ ಪ್ರಯೋಗಗಳಿಗೆ ಕೈ ಹಾಕಿ ತಮ್ಮತನವನ್ನು ಬಯಸಿದ ಅಪೂರ್ವಚೇತನ. ಇಂಥ ಅಪೂರ್ವ ದೃಶ್ಯ ಪ್ರವರ್ತಕ ಧೃವತಾರೆ ದಿನಾಂಕ 12.01.1992 ರಂದು ತಮ್ಮ ದೇವಾಸದ ನಿವಾಸದಲ್ಲಿ ಮಿಂಚಿ ಮರೆಯಾಯಿತು.

ಇಂಥ ದಿಗ್ಗಜರ ಪರಿಚಯವನ್ನು ಬರೆಯಲು ಪ್ರೇರೇಪಣೆ ನೀಡಿದ ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಶ್ರೀ ಶ್ರೀಕಾಂತ ಬಿಲಕೇರಿ ಅವರಿಗೆ ವಂದನೆ ಸಲ್ಲಿಸುತ್ತಾ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಲೇಖನ :- ವಿಜಯಕುಮಾರ ಕಮ್ಮಾರ, ತುಮಕೂರು
ಮೋಬೈಲ್ ನಂ : 9741 357 132
ಈ-ಮೇಲ್ : viರಿiಞಚಿmmಚಿಡಿ@gmಚಿiಟ.ಛಿom

 

 

Don`t copy text!