e-ಸುದ್ದಿ, ಮಸ್ಕಿ
ತಾಲೂಕಿನ ವಿವಿಧಡೆ ಸಂಘ ಸಂಸ್ಥೆಗಳು, ಮಠಗಳು, ಶಿಕ್ಷಕರು ಶಾಲಾ ಕಾಲೇಜುಗಳಲ್ಲಿ ಶನಿವಾರ ವಿಶ್ವಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಡುವ ಕಾರ್ಯಕ್ರಮಗಳು ನಡೆದ ಬಗ್ಗೆ ವರದಿಯಾಗಿವೆ.
ಮಸ್ಕಿ, ಬಳಗಾನೂರು, ಸಂತೆಕೆಲ್ಲೂರು, ಮೆದಕಿನಾಳ, ಗುಡದೂರು, ಗದ್ರಟಗಿ, ಹಾಗೂ ತೊರಣದಿನ್ನಿ ಗ್ರಾಮಗಳಲ್ಲಿ ಸಸಿ ವಿತರಣೆ ಹಾಗು ಸಸಿ ನೆಡುವ ಕಾರ್ಯಕ್ರಮಗಳು ಜರುಗಿದವು.
ಮಸ್ಕಿ ಪಟ್ಟಣದಲ್ಲಿ ಶಾಸಕ ಬಸನಗೌಡ ತುರ್ವಿಹಾಳ ಅಭಿನಂದನ್ ಶಿಕ್ಷಣ ಸಂಸ್ಥೆಯವರು 10 ಸಾವಿರ ಸಸಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು ಕರೊನಾ ಸೋಂಕಿತರು ಆಮ್ಲಜನಕ ಪಡೆಯಲು ಹಣ ಕೊಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಅದನ್ನು ತಪ್ಪಿಸಲು ಗಿಡ ಮರಗಳನ್ನು ಬೆಳಸಿದರೆ ಉಚಿತ ಗಾಳಿ ಸಿಗುತ್ತದೆ. ಪ್ರತಿಯೊಬ್ಬರು ಸಸಿ ನೆಟ್ಟರೆ ಪ್ರಕೃತಿಗೆ ನಾವು ಕೊಡುಗೆ ಕೊಟ್ಟಂತೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು.
ತಹಸೀಲ್ದಾರ ಬಲರಾಮ ಕಟ್ಟಿಮನಿ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಉಪನ್ಯಾಸಕ ಮಹಾಂತೇಶ ಮಸ್ಕಿ, ಮಹಾಂತೇಶ ಬ್ಯಾಳಿ, ಅಭಿನಂದನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ ಹಾಗೂ ಇತರರು ಇದ್ದರು.
ಗದ್ರಟಗಿಯಲ್ಲಿ ಸಸಿಗೆ ಪೂಜೆ ಃ ತಾಲೂಕಿನ ಗದ್ರಟಗಿ ಗ್ರಾಮದಲ್ಲಿ ಚೌಡೇಶ್ವರಿ ದೇವಸ್ಥಾನದಲ್ಲಿ ವನಸಿರಿ ಫೌಂಡೇಶನವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು.
ಶಾಸಕ ಬಸನಗೌಡ ತುರ್ವಿಹಾಳ ಸಸಿಗೆ ಪೂಜೆ ಸಲ್ಲಿಸಿ ಗಿಡ ನೆಟ್ಟು ಚಾಲನೇ ನೀಡಿದರು. ಅಮರೇಗೌಡ ಮಲ್ಲಾಪುರ, ಹನುಮೇಶ ಬಾಗೋಡಿ, ರಾಜು ಕುರುಕುಂದ, ಚಂದ್ರಶೇಖರ ಪವಾಡಶಟ್ಟಿ, ನಾಗರಾಜ ಹತ್ತಿಗುಡ್ಡ ಹಾಗೂ ಇತರರು ಭಾಗವಹಿಸಿದ್ದರು.
ಬಳಗಾನೂರು ಃ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಪ್ರಕೃತಿ ಫೌಂಡೇಶನ್ ಹಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ 10 ಸಾವಿರ ಸಸಿ ನೆಡುವ ಅಭಿಯಾನಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಮರಿ ಸಿದ್ಧಬಸವ ಸ್ವಾಮೀಜಿ ಸಸಿ ನೆಟ್ಟು ಚಾಲನೆ ನೀಡಿದರು.
ಶಿವಮೂರ್ತಿ ಗದ್ದಿಗಿಮಠ, ಗುಂಡಪ್ಪ ವಿಶ್ವಕರ್ಮ, ಮುಖ್ಯಗುರು ಬಸವರಾಜ ಹೊಸಳ್ಳಿ, ಮಲ್ಲನಗೌಡ ಗುಡಗಲದಿನ್ನಿ, ಶ್ರೀನಿವಾಸ ಕುಲಕರ್ಣಿ, ಬಸವರಾಜ ಗಬ್ಬೂರು, ವಿಜಯಕುಮಾರ ಹಾಗೂ ಇತರರು ಇದ್ದರು.
ಲಯನ್ಸ್ ಕ್ಲಬ್ ಃ ಮಸ್ಕಿ ಪಟ್ಟಣದ ಲಯನ್ಸ್ ಕ್ಲಬ್‍ನ ಸದಸ್ಯರು ಪಟ್ಟಣದ ವಿವಿಧ ಶಾಲೆಗಳು ಹಾಗೂ ಆಸ್ಪತ್ರೆಗಳಲ್ಲಿ ಸಸಿನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಿದರು. ಡಾ.ಮಲ್ಲಿಕಾರ್ಜುನ ಇತ್ಲಿ, ಬಸವಲಿಂಗ ಶಟ್ಟಿ, ಡಾ. ಮಲ್ಲಿಕಾರ್ಜುನ ಶಟ್ಟಿ, ಶಿವರಾಜ ಇತ್ಲಿ ಹಾಗೂ ಇತರರು ಭಾಗವಹಿಸಿದ್ದರು.