ಒಡಲ ಅಲೆಗಳು
ಸಾಗರದ ಅಲೆಗಳ
ಕಂಡು ನನ್ನೆದೆ ಪ್ರಶ್ನೆ
ಹೆಣ್ಣೆ ನಿನ್ನ ಅಲೆಗಳ
ಅಬ್ಬರಕೂ ಅದಕೂ
ಏನು ವ್ಯತ್ಯಾಸ….?
ಅದೆಲ್ಲ ದಂಡೆಗೆ ತಂದು
ಅಪ್ಪಳಿಸಿ ಶಾಂತಾಗುವದು
ಏನೆಲ್ಲ ನಿನ್ನೊಳು ಹುದುಗಿಸಿ
ಕೊಂಡು ಶಾಂತಳಾಗಿರುವಿ
ಅದರಲೆಗಳ ಏರಿಳಿತ..
ಕಂಗಳಿಗೆ ಸಿರಿಯನಿತ್ತರೆ
ನಿನ್ನ ಕರುಣೆಯಲೆಗಳ
ಏರಿಳಿತ ಹೃದಯ ಸಿರಿ
ಸುತ್ತಲ ಉಸುಕಲಿ ಸಿಂಪಿ
ಶಂಖ ಚಿತ್ತಾರದೊಡಲು
ಮನಸೆಳೆವ ಸಿರಿಯಾದರೆ
ಹೆಣ್ಣೆ ನಿನ್ನೊಡಲ ಪ್ರೀತಿ
ಮಮತೆಯ ಸಿರಿಯೆರೆದು
ತಲ್ಲೀನಳಾಗಿರುವೆ ಹೆಣ್ಣೆ
ನದಿಗಳ ಸಿಹಿ ನೀರ ಹೀರಿ
ಉಪ್ಪು ನೀರು ನೀಡುವುದು
ಹೆಣ್ಣೆ ನನ್ನೆದೆಯ ಪ್ರಶ್ನೆ…
ಬಾಳಲಿ ಕಹಿಯ ಹೀರುತ
ಎಲ್ಲರಿಗೂ ಸಿಹಿ ಹಂಚುವ
ನಿನ್ನಾಳ ಅದಕೂ ಮಿಗಿಲು
–ಲೀಲಾ ಕಲಕೋಟಿ
ನಿಜವಾಗಲೂ ಸತ್ಯ, ಬಹುತೇಕ ಹೆಣ್ಣು ಜೀವಗಹು, ಯಾವತ್ತಿಗೂ ಕಹಿಯನ್ನು ಹೀರಿ ಕೊಂಡು ಸಿಹಿಯನ್ನು ತನ್ನವರಿಗೆ ನೀಡುತ್ತಾರೆ. ಹೆಣ್ಣು ತನ್ನ ಜೀವ ತೇಯ್ದ, ತನ್ನವರ ಬದುಕಿಗೆ ಅಮೃತಳಾಗುತ್ತಾಳೆ. ಅವಳನ್ನು ಸಮುದ್ರಕ್ಕೆ ಹೋಲಿಸಿ, ಅದನ್ನೂ ಮೀರಿದ ವ್ಯಕ್ತಿತ್ವ ಎಂಬುದು.. ಅತಿಶಯೋಕ್ತಿ ಏನಲ್ಲ… ಹೆಣ್ಣೇ ಹಾಗೆ.. ತ್ಯಾಗಮಯಿ, ಪ್ರೇಮಮಯಿ….
ಅಭಿನಂದನೆಗಳು ಸರ್… ಉತ್ತಮ ಕವಿತೆ