ಅಪ್ಪ ಎನ್ನುವ ಆಲದಮರ
ಸಾಮಾನ್ಯವಾಗಿ ಮಗಳಿಗೆ ತಂದೆಯ ಮೇಲೆ ಪ್ರೀತಿ, ಮಗನಿಗೆ ಅಮ್ಮನ ಮೇಲೆ ಪ್ರೀತಿ ಇರುತ್ತದೆ. ನನ್ನ ವಿಷಯದಲ್ಲಿ ಅದರ ವಿರುದ್ದವಾಗಿತ್ತು. ಹಾಗೆ ನೋಡಿದರೆ ನಾನು ಅಪ್ಪನ ದ್ವೇಷಿಸಲೇಬೇಕಿತ್ತು. ಕಾರಣ ನನ್ನ ಅವ್ವ ಅಪ್ಪನ ವಯಸ್ಸುಗಳ ನಡುವಿನ ಅಂತರ ಬರೋಬ್ಬರಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚು. ನಲವತ್ತರ ಆಸುಪಾಸಿನಲ್ಲಿದ್ದ ಅಪ್ಪನಿಗೆ ಹದಿನೈದರ ಆಸುಪಾಸಿನಲ್ಲಿದ್ದ ಅವ್ವನಳನ್ನು ಹೇಗೆ ಮದುವೆ ಆಗಲು ಒಪ್ಪಿಕೊಂಡನೋ ಎಂದು ಅಶ್ಚರ್ಯ ಆಗುತ್ತಿತ್ತು. ಆದರೆ ತಂದೆಯಾಗಿ ಕಷ್ಟದ ಸಮಯದಲ್ಲೂ ಧೃತಿಗೆಡದೆ ಅವರು ತೋರಿದ ಕಾಳಜಿ, ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಹಾಗೆ ನೋಡಿದ್ರೆ ಅವರು ಕಷ್ಟದ ದಿನಗಳನ್ನು ಎದುರಿಸುವ ಅನಿವಾರ್ಯತೆ ಇದ್ದೆ ಇರಲಿಲ್ಲ. ಮೆಷ್ಟಾçಗಿ ಎರಡು ದಶಕಗಳ ಹೆಚ್ಚಿನ ಕಾಲ ಕೆಲಸ ಮಾಡಿದವರು. ನನಗೆ ಈಗಲೂ ನಮ್ಮ ತಂದೆಯವರ ಬಗ್ಗೆ ಗೊತ್ತಿಲ್ಲದವರು ಕೇಳುವ ಪ್ರಶ್ನೆ ‘ಅಲ್ರೀ ನಿಮ್ಮಪ್ಪ ಮೇಷ್ಟಿçದ್ರು ಅಂತಿರಿ, ಮಸ್ಕಿಗೆ ಬಂದು ಮೂವತ್ತುವರ್ಷ ಆಯ್ತು ಅಂತಿರಿ ಮನಿ ಹೋಗಲಿ ಒಂದು ಪ್ಲಾಟು ಸಹಿತ ಮಾಡಿಲ್ಲಲ್ರಿ’ ಎಂದು ‘ನಿಮ್ಮ ತಂದೆಯವರಿಗೆ…..’ ಅಡ್ಡ ಚಟಗಳೇನಾದ್ರೂ ಇದ್ದವೇನು? ಅಂತ ಪ್ರಶ್ನೆಹಾಕುವ ದಾಟಿಯಲ್ಲ ಕೇಳುತ್ತಾರೆ. ನಮ್ಮ ತಂದೆಯವರದು ದೊಡ್ಡ ಕುಟುಂಬ ಆರುಜನ ಅಣ್ಣ ತಮ್ಮಂದಿರು, ಮೂವರು ಸಹೋದರಿಯರು. ಇವರೊಬ್ಬರೇ ನೌಕರಿಮಾಡುವಂತವರಾಗಿದ್ದರು. ಜೊತೆಗೆ ಹುಟ್ಟಿನಿಂದ ಬಂದ ಅಂಗವೈಕಲ್ಯ ಬೇರೆ. ಕಾಲಿನ ಪಾದಗಳೆರಡು ಡೊಂಕಾಗಿದ್ದುದರಿAದ ಅಡ್ಡಾಡುವದಕ್ಕೂ ಬಹು ಕಷ್ಟವಾಗಿತ್ತು. ಹಾಗಾಗಿ ಮನೆಯವರು ಮದುವೆ ಆಗು ಎಂದರು ಒಲ್ಲೆ ಎಂದು ಮೌನವಹಿಸಿದ್ದರು. ಆಗ ಸಂಕಷ್ಟದಲ್ಲಿದ್ದ ಮನೆಗೆ ತಾವು ನಯಾ ಪೈಸಾ ಇಟ್ಟುಕೊಳ್ಳದೆ ಕೊಟ್ಟು ಬಿಡುತ್ತಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಪಗಾರ ತರಲು ತಾವು ಒಂದು ದಿನವು ಹೋಗದೆ ಸಹೋದರರೆ ಆ ಕಾರ್ಯಮಾಡುತ್ತಿದ್ದರು ಎಂದ ಮೇಲೆ ಎಂತಹ ನಿಸ್ವಾರ್ಥ ಬದುಕು ಅಲ್ವೇ?
ಅವರ ತಂದೆಯ ಅಕಾಲಿಕ ನಿಧನದಿಂದ ಇಡೀ ಸಂಸಾರದ ಜವಬ್ದಾರಿ ಅವರ ಮೇಲೆ ಬಿತ್ತು. ತಾನು ಅಂಗವಿಕಲ ಮದುವೆ ಮಾಡಿಕೊಂಡು ಯಾಕೆ ಇನ್ನೊಬ್ಬರಿಗೆ ತೊಂದರೆ ನೀಡಬೇಕು ಎಂದು ನಿರ್ಧರಿಸಿದ ಅವರು ತಮ್ಮ ಬದುಕನ್ನು ಪರಿಪೂರ್ಣವಾಗಿ ಸಂಸಾರದ ಪ್ರಗತಿಗೆ ಮೀಸಲಿಟ್ಟಿದ್ದರು. ಸಹೋದರ, ಸಹೋದರಿಯರ ಮದುವೆ, ಅವರ ಖರ್ಚು ನಿಭಾಯಿಸುವುದರಲ್ಲೆ ಕಳೆಯಿತು. ಆರಂಭದಲ್ಲಿ ರಾಯಚೂರಿನಲ್ಲಿ ಅಂಗಡಿಯನ್ನಿಟ್ಟು ನಂತರದಲ್ಲಿ ಮಸ್ಕಿಯ ಗಚ್ಚಿನ ಮಠದಲ್ಲಿ ಇದ್ದುಕೊಂಡು ಪುರಾತತ್ವ ಕಾರ್ಯದಲ್ಲಿ ಸಹಾಯಕರಾಗಿ ಕೆಲಸಮಾಡಿ ನಂತರ ಬಂಧು ಗಿರಿಯಪ್ಪ ಎಂಬುವರ ನೆರವಿನಿಂದ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ವಯಸ್ಸಾದ ಮೇಲೆ ಅಪ್ಪನಿಗೆ ಒದಗಬಹುದಾದ ತೊಂದರೆಗಳನ್ನರಿತ ಅಜ್ಜಿ ಮದುವೆ ಹೇಗಾದರೂ ಮಾಡಿಕೊಳ್ಳಲೇ ಬೇಕು ಎಂದು ಮನಸಿರದಿದ್ದರೂ ತನಗಿಂತಲೂ ಇಪ್ಪತ್ತು ವರ್ಷ ಚಿಕ್ಕವಳಿದ್ದ ನನ್ನ ತಾಯಿಯೊಂದಿಗೆ ಮುದುವೆ ಮಾಡಿದರು.
ಅಪ್ಪ ವಯಸ್ಸಿನಲ್ಲಿ ಯರ‍್ಯಾರಿಗೋ ಏನೆಲ್ಲ ಉಪಕಾರ ಮಾಡಿದ್ರೂ ಉಪಕಾರ ಸ್ಮರಣೆ ಮಾಡಿದವರು ಕಡಿಮೆ. ಅವ್ವಳಿಗೂ ತವರು ಮನಿಯಿಂದ ಅಂತಹ ಹೇಳಿಕೊಳ್ಳುವಂತಹ ಬೆಂಬಲ ಇಲ್ಲವಾದ್ದರಿಂದ ಅಪ್ಪನನ್ನು ಕೈ ಹಿಡಿದು ಬದುಕಬೇಕಾಯಿತು. ಹುಟ್ಟಿದ ಕೆಲವೆ ವರ್ಷಗಳಲ್ಲಿ ಸಾಲಾಗಿ ಮೂರು ಮಕ್ಕಳು ತೀರಿ ಹೋದ್ರೆ ಕುಟುಂಬದ ಸ್ಥಿತಿ ಹೇಗಾಗಿರಬೇಡ. ತದನಂತರ ಹಲವಾರು ವರ್ಷಗಳ ಆಸೆ ಬಿಟ್ಟು ಸಹೋದರ ಮಕ್ಕಳನ್ನೆ ತಮ್ಮ ಮಕ್ಕಳೆಂದು ಭ್ರಮಿಸಿ, ಅವೆ ಏಳ್ಗೆಯಲ್ಲಿ ಬದುಕು ಸವೆಸಿದರು. ಆದರೆ ಆಕಸ್ಮಿಕ ಎಂಬAತೆ ಅಕ್ಕ ನಿವೃತ್ತಿ ಅಂಚಿನಲ್ಲಿ, ನಿವೃತ್ತರಾದ ಮೇಲೆ ನಾನು ಹುಟ್ಟಿದಾಗ ಬದುಕಿನ ಆಸೆ ಮತ್ತೆ ಅಪ್ಪಗ ಆಸೆ ಚಿಗರಿತು. ನಾವು ಹುಟ್ಟಿದ ಮೇಲೆ ಮನೆ-ಮನಗಳ ಮನಸ್ಸು ಒಡೆಯಿತು. ಅನಿವಾರ್ಯವಾಗಿ ಊರು ಬಿಡಬೇಕಾಯಿತು.
ಇಳಿಗಾಲದಲ್ಲಿ ಹುಟ್ಟಿದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವರು ಮಾಡಿದ ಹೋರಾಟ ಅಷ್ಟಿಷ್ಟಲ್ಲ. ರಿಟೈರ್ ಆದ ಮೇಲೆ ಅವರ ಕೈಯಲ್ಲಿ ಯಾವ ಹಣವು ಇರಲಿಲ್ಲ ಉಳಿಸಿರಲಿಲ್ಲ. ಪೆನ್‌ಶನ್ ಒಂದೆ ಬದುಕಿಗೆ ಆಧಾರವಾಗಿತ್ತು. ಅದು ನಾಲ್ಕು ಜನರ ನಿರ್ವಹಣೆಗೆ ಸಾಲದಾಗಿತ್ತು. ಹಾಗಾಗಿ ಕಡಿಮೆ ಬೆಲೆ ಇರುವ, ಇಲಿ ಹೆಗ್ಗಣಗಳು ವಾಸ ಮಾಡುವ ಲೈಟಿಲ್ಲದ ಮನೆಯಲ್ಲಿ ಕಾಲಕಳೆಯಬೇಕಾಯಿತು. ಮನೆಯಲ್ಲಿ ಬೆಳಿಗ್ಗೆ ಸಾಯಂಕಾಲ ಮನೆಪಾಠ. ಅಂದಿನ ದಿನಗಳಲ್ಲಿ ಮಸ್ಕಿಯಲ್ಲಿ ಇಬ್ಬರೇ ಟ್ಯೂಶನ್ ಹೇಳೋರು. ಅಮರಯ್ಯ ಸರ್ ಹಾಗೂ ನಮ್ಮ ತಂದೆಯವರು. ಅಮರಯ್ಯ ಸರ್ ನಮ್ಮೂರು ಅಂತರಗAಗಿಯ ಪಕ್ಕದ ನಾಗರಬೆಂಚಿಯವರು. ಹಾಗಾಗಿ ಮೊದಲಿನಿಂದಲೂ ಅಪ್ಪನೊಂದಿಗೆ ದೋಸ್ತಿ. ಅವರು ಮನೆಪಾಠ ಮಾಡುತ್ತಿದ್ದರು. ಮಸ್ಕಿಯಲ್ಲಿ ಜನಪ್ರಿಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರಿಂದ ಊರಿಗೆ ಪ್ರಸಿದ್ಧಿಯನ್ನು ಪಡೆದಿದ್ದರು. ಹಾಗಾಗಿ ಅಲ್ಲಿ ಹೋಗೊರೆಲ್ಲ ಶ್ರೀಮಂತರ ಮಕ್ಕಳಾಗಿದ್ದರು. ಅಪ್ಪನ ಹತ್ತಿರ ಮಧ್ಯಮ ವರ್ಗದ ಮಕ್ಕಳು ಬಡವರು ಬರುತ್ತಿದ್ದರು. ನಮ್ಮನೆದು ವಾರಕ್ಕ ಎಂಟಾಣೆ ಟ್ಯೂಷನ್. ಬೆಲೆ ಕಡಿಮೆ ಇದ್ದಲ್ಲಿ ಕ್ವಾಲಿಟಿ ಇರೋಲ್ಲ ಅಂತ ಭಾವಸ್ತಾರೆ. ಆದರೆ, ಕಾಟಾಚಾರಕ್ಕೆ ಮನೆಪಾಠ ಮಾಡದೆ ಹೇಳುವ ವಿಷಯದಲ್ಲಿ ನಿಖರತೆ ಇರುತಿತ್ತು. ಹೇಳಿದ ಕಾರ್ಯಗಳನ್ನು ಮಾಡದೆ ಇದ್ದರೆ ಕಠಿಣ ಶಿಕ್ಷೆ ಕಾಯುತ್ತಿತ್ತು. ಮನೆಪಾಠ ವಿಷಯದಲ್ಲಿ ರಾಜಿ ಮಾಡಿಕೊಳ್ಳತಾ ಇರಲಿಲ್ಲ. ಬೆತ್ತಕ್ಕ ಬರುವ ಮಕ್ಕಳು ನಲುಗಿ ಹೋಗುತ್ತಿದ್ದರು. ‘ಛಡಿ ಚಂಛA ವಿದ್ಯಾ ಘಂ ಘಂ’ ಎನ್ನುವುದು ಅಪ್ಪನ ಧ್ಯೇಯ ವಾಗಿತ್ತು. ಕೆಲದಿನಗಳಲ್ಲಿ ನಮ್ಮಪ್ಪನ ಮನೆಪಾಠ ಗಟ್ಟಿಗೊಂಡಿತು. ಇದಲ್ಲದೆ ಆ ಸಮಯದಲ್ಲಿ ‘ರಾತ್ರಿ ಶಾಲೆ’ ಕಲಿಸುವ ಯೋಜನೆ ಬಂದಾಗ ಬರುವ ಅಲ್ಪ ಸಂಭಾವನೆ ಮನೆವೆಚ್ಚಕ್ಕೆ ಆಗುತ್ತದೆ ಎಂದು ಭಾವಿಸಿ ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಕಲಿಸಲು ಹೋಗ್ತಾ ಇದ್ರು. ಅವರಿಗೆ ಆಸರೆಯಾಗಿ ನಾನು ಅಕ್ಕ ಹೋಗ್ತಾ ಇದ್ವಿ. ಇವತ್ತು ವಯಸ್ಕರ ಶಿಕ್ಷಣಕ್ಕಾಗಿ ಕೇವಲ ಕಾಗದ ಪತ್ರದಲ್ಲಿ ಕೋಟಿಗಟ್ಟಲೆ ಹಣ ವ್ಯರ್ಥವಾಗುತ್ತಿದೆ ಆದರೆ ಆಗ ಕೊಡುತ್ತಿದ್ದ್ ೧೦ರೂ.ಗೆ ಅಪ್ಪ ಕೊಟ್ಟ ರಾತ್ರಿ ಪಾಠ ಹೇಳಿಕೊಡಲು ಹೋಗುತಿದ್ರು ವಯಸ್ಕರ ಶಿಕ್ಷಣ ಔಪಚಾರಿಕ ಶಾಲೆಗಿಂತಲೂ ಮಿಗಿಲಾಗಿತ್ತು. ಅವರ ಕೈಯಲ್ಲಿ ಅಕ್ಷರಜ್ಞಾನ ಪಡೆದವರೆಲ್ಲ ಈಗಲೂ ಅವರನ್ನು ನನೆಯುತ್ತಾರೆ. ಅವರ ಪುಣ್ಯದಿಂದ ನಾವು ವ್ಯವಹಾರ ಮಾಡಂಗ ಆಗ್ಯಾದ ಎಂದು ಕಣ್ಣೀರ ತೆಗಿತಾರೆ. ಅವರ ಪುಣ್ಯದಿಂದ ನೀವು ಮಾಸ್ತರರಾಗಿದ್ದರಲ್ಲ ಬಾಳ ಖುಷಿ ಆಯ್ತು ಅಂತ ಸಂಭ್ರಮಿಸ್ತಾರೆ.
ನಾವಿದ್ದುದು ಕರೆಂಟ್ ಇಲ್ಲದ, ಹೊಗೆಗಿಂಡಿ ಇಲ್ಲದ, ಮೇಲೆ ಅಡ್ಡಾಡಿದರೆ ನಡಗುವ, ಮಾತಾಡಿದರೆ ಮಣ್ಣು ಉದುರುವ, ಮಳೆ ಬಂದರೆ ರಜ್ಜಾಗುವಂತಹ, ಜಂತಿಯಲ್ಲಿ ಇಲಿ, ಹುಳ ಹುಪ್ಪಡಿಗಳು ವಾಸವಾಗಿರುವ, ನಿತ್ಯ ಚೇಳುಗಳು ಆಗಾಗ ಹಾವುಗಳು ದರ್ಶನ ಕೊಡುವ ಬಹುಶಃ ಜನ ವಾಸಕ್ಕೆ ಯೋಗ್ಯವಾಗಿರದ ಮನೆಯಲ್ಲಿ. ಹೊಗಿಗಿಂಡಿ ಇಲ್ಲದ ಮನೆ ಅಂದ್ರ ಊಹಿಸಿಕೊಳ್ಳದೆ ಕಷ್ಟ. ಅಡುಗೆ ಮಾಡುವಾಗ ಹೊಗೆ ಇಡಿ ಮನೆಯನ್ನು ಆವರಿಸಿ ಕಣ್ಣುಗಳಲ್ಲಿ ಉರಿ ಎದ್ದು, ಉಸಿರಾಡಿಸಲು ಪರದಾಡಬೇಕಾದಂತಹ ಪರಿಸ್ಥತಿ. ಒಂದರ್ಥದಲ್ಲಿ ನಿತ್ಯ ಗ್ಯಾಸ ಚೇಂಬರ್ರನಲ್ಲಿ ಶಿಕ್ಷೆ ಕೊಟ್ಟ ಹಾಗೆ. ಇಂತಹ ಬದುಕಿಗೆ ಮುಕ್ತಿ ಸಿಗುತ್ತೊ ಇಲ್ಲೊ ಎಂದು ಒಮ್ಮೊಮ್ಮೆ ಅತ್ತಿದ್ದು ಉಂಟು. ಅಲ್ಲಿ ನಿಲ್ಲಲೂ ಕೂಡ ಆ ಈಗ ನನ್ನ ಮಕ್ಕಳಿಗೆ ಆಗಾಗ ಈ ಬಗ್ಗೆ ಹೇಳ್ತಾ ಇದ್ರೆ ನಗತಾ ಇರತಾರೆ.
ನೆನಪಿದ್ದ ಮಟ್ಟಿಗೆ ಅಪ್ಪನ ನಿವೃತ್ತಿ ವೇತನ ಎರಡು ನೂರು ರೂಪಾಯಿ ಬರತಾ ಇತ್ತು ಅದರಲ್ಲಿ ಎಲ್ಲರ ಸಂಸಾರ ನಡಿಬೇಕು. ಅದಕ್ಕಾಗಿ ಅಪ್ಪ ಆಶ್ರಯಿಸಿದ್ದು ಟ್ಯೂಷನ್ ಬದುಕು. ವಾರಕ್ಕೆ ಎಂಟಾಣೆ ಮಕ್ಕಳಿಗೆ ನಿಗದಿಪಡಿಸಿದ ದರ. ಅರ್ಧ ಊರೆ ನಮ್ಮಪ್ಪನ ಶಿಷ್ಯಂದಿರು. ಈಗಲು ನನ್ನ ಪರಿಚಯಿಸಿಕೊಂಡು ಇಂತವರ ಮಗ ಎಂದು ಗೊತ್ತಾದಾಗ ‘ಅಯ್ಯ ನಿಮ್ಮ ತಂದೆಯವರ ಹತ್ತಿರ ಟ್ಯೂಶನ್ ಬರತಿದ್ವಿರಿ’ ಅಭಿಮಾನ ಪಡತಾರ. ಆ ಅಭಿಮಾನ ಪಡೋದು ಅವರು ನೀಡಿದ ಪ್ರಾಮಾಣಿಕ ಶಿಕ್ಷಣಕ್ಕೆ.
ನಾವು ೫-೬ನೇ ತರಗತಿ ಇದ್ದಾಗ ನಮ್ಮಪ್ಪನಿಗೆ ಬರುತ್ತಿದ್ದು ಕೇವಲ ಮೂರುನೂರು ರೂಪಾಯಿ ಪಗಾರ. ಅದರಲ್ಲಿ ಜೀವನ ಸಾಗಿಸಬೇಕಾಗಿತ್ತು. ಮರಳದ ತಿಪ್ಪಣನವರ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ನಿತ್ಯಕ್ಕೆ ಆಹಾರ. ಸ್ಮರಿಸಬೇಕು ಅವರನ್ನ. ಉಪಯೋಗಕ್ಕೆ ಬಾರದ ರೇಷನ್ ಕಾರ್ಡ ಇದ್ದಾಗಲೂ ನಿಯಮ ಮೀರಿ ಅಪ್ಪನ ವ್ಯಕ್ತಿತ್ವ ನೋಡಿ ಸಾಮಾನ್ಯ ದರದಲ್ಲೆ ಬೇಸರಿಸಿಕೊಳ್ಳದ ಅಕ್ಕಿಯನ್ನ, ಗೋದಿಯನ್ನ ಕೊಡುತ್ತಿದ್ದರು. ಖಾದಿ ಸೀರೆ ದೋತ್ರ ಬಂದಾಗಲೂ ತೆಗೆದಿಡುತ್ತಿದ್ದರು. ತೊಗರಿ ಬೇಳೆ ಬೆಲೆ ಆಗ ಬಡವರ ಕೈಗೆ ನಿಲುಕದಷ್ಟಿತ್ತು. ಈಗಲೂ ಹಾಗೆ ಇದೆ. ಹಾಗಾಗಿ ಕಡಿಮೆ ಕಿಮ್ಮತ್ತಿಗೆ ಸಂತೆಯಲ್ಲಿ ಸಿಗುತ್ತಿದ್ದ ಹೆಸರಬೆಳೆ ನಮಗೆ ಸಾಂಬಾರಿಗೆ. ಅವನ್ನು ಒಡೆದು ಅದರಿಂದ ಮಾಡುವ ಸಾರು. ಅದರಲ್ಲಿ ಅವ್ವನಿಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿರಲಿಲ್ಲ. ಮಾಡಬೇಕು ಮಾಡಬೇಕು ಅನ್ನೋ ಮನೋಭಾವದವಳು. ಯಾವತ್ತಾದರೂ ನಾಷ್ಟ ಮಾಡಿದರೆ ಉದ್ದಿನ ಬೇಳೆ ಇಲ್ಲದ ಗುಂಡುಪAಗಲು, ಕೊಬ್ರಿ , ಪುಟಾಣಿ ಇಲ್ಲದ ಬರಿ ಮೆಣಸಿನ ಕಾಯಿ ಚಟ್ನಿ. ಚೆನ್ನಾಗಿರುವ ಊಟ ದೂರವೇ ಉಳಿಯಿತು. ನಾವು ಇಡ್ಲಿ ತಿಂದಿದ್ದು ಮೆಟ್ರಿಕಿಗೆ ಬಂದಾಗ. ಅಪ್ಪಗ ಮೂಲವ್ಯಾಧಿ ಆಪರೇಷನ್ ಆದ ಮೇಲೆ ಖಾರದ ಕೊಡದು ಕಡಿಮೆ ಮಾಡಿ ಎಂದಾಗ. ಅಪ್ಪಾ ರಾಯಚೂರಿನಿಂದ ಬರುವಾಗ ಒಂದು ಇಡ್ಲಿ ಪಾತ್ರೆ ತೆಗೆದು ಕೊಳ್ಳೊಣ ಎಂದ್ರು. ಆಗ ಅಕ್ಕ ಕಾಲೇಜಿಗೆ ಬಂದಿದ್ಲು. ಆಕಿನ ಪ್ರಯತ್ನದಿಂದ ಅವ್ವ ಪ್ರಥಮ ಬಾರಿಗೆ ಹವರಾದ ಇಡ್ಲಿ ಮಾಡಿಹಾಕಿದ್ಲು.
ವಯಸ್ಸಿನ ಅಂತರದಿAದ ಆಗಾಗ ಮನಸ್ತಾಪಗಳು ಬರುತ್ತಿದ್ದವು. ಅವ್ವಳ ತಿಳುವಳಿಕೆ ಮಟ್ಟನೂ ಕಡಿಮೆ ಇದ್ದುದರಿಂದ ಅವ್ವ ಒಂದು ರೀತಿ ಒದರಾಡಕಿ, ಅಪ್ಪ ಒಂದು ರೀತಿ ಒರ‍್ಯಾಡಾತ. ಅಮ್ಮ ಆಗಾಗ ಅತ್ಮಹತ್ಯ ಮಾಡಿಕೊಳ್ಳಾಕ ಪ್ರಯತ್ನಿಸಿದೋ ಅದನ್ನು ತಡೆಯಲು ಏನು ಅರಿಯದ ನಾವು ಒದ್ಯಾಡೋದು. ನಿಜಕ್ಕೂ ಅದನ್ನು ನೆನೆಸಿಕೊಳ್ಳಬಾರದು, ನೆನಸಿಕೊಂಡರೆ ಈಗಲು ಭಯವಾಗುತ್ತದೆ.
ನಂಬಲಸಾಧ್ಯ ನಂಬಲೇಬೇಕು. ಪಾಪಿ ಸಮುದ್ರಕ್ಕ ಇಳದರೂ ಮೊಣಕಾಲಮಟ ನೀರು ಅನ್ನೊ ಹಾಂಗ ಬ್ರಾಹ್ಮಣರ ಓಣ್ಯಾಗ ಯಾವತ್ತಿಗೂ ನೀರಿನ ಬರಗಾಲ. ಇಳಿ ವಯಸ್ಸಿನಲ್ಲಿ ಅದುವಾಗಿರುರುವಂತಹ ಕಾಲುಗಳಿಂದ ನೀರು ತರೋದನ್ನ ನೆನೆಸಿಕೊಂಡ್ರೆ ಈಗಲೂ ಭಯವಾಗುತ್ತೆ. ಅಂತಹ ಕಷ್ಟöದ ಬದುಕನ್ನ ಎದುರಿಸಿದ ಮಹನೀಯ. ಮನೆಯಲ್ಲಿ ಶೌಚಾಲಯ ಇಲ್ಲವಾದ್ದರಿಂದ ಆ ಕಾರ್ಯಕ್ಕೆ ದೂರದ ಸ್ಥಳಕ್ಕೆ ತಡವರಿಸುತ್ತಾ ನಡೆದು ಹೋಗಿಬರುವುದನ್ನು ನೋಡಿದರೆ ಕರಳು ಕಿತ್ತಿ ಬರುತ್ತಿತ್ತು. ವಯೋ ಬಾಧೆ, ಭವಿಷ್ಯದ ಮಕ್ಕಳ ಬಗ್ಗೆ ಚಿಂತಿಸುತ್ತ ನಿದ್ದೆ ಮಾಡದೆ ನರಳಾಡುತ್ತಿದ್ದ ಅಪ್ಪನ ಮನಸ್ಥಿತಿ ಅರಿತು ಮನಸ್ಸು ಹೋಯ್ದಾಡುತ್ತಿತ್ತು.
ಮಸ್ಕಿಗೆ ಬಂದದ್ದು ನಮ್ಮನ್ನು ಓದಿಸಲು. ನಿವೃತ್ತ ಶಿಕ್ಷಕಕನಾದ ಅಪ್ಪ ಟ್ಯೂಷನ್ ಹೇಳಿ ಹೊಟ್ಟೆಹೊರೆಯಬೇಕು ಎನ್ನುವ ನಿಲುವಿನಲ್ಲಿ. ಮರಾಠ ಎನ್ನುವ ಊರಿನಲ್ಲಿ ಕೆಲ ಜ್ಯೋತಿಷ, ಪಂಚಾAಗಗಳನ್ಮ್ನ ಓದಿ ಅಲ್ಲಿ ಜನಕ್ಕೆ ತಿಳಿಸಿತಿದ್ದಂತೆ. ನಿವೃತ್ತಿಯಲ್ಲಿ ಪ್ರೀತಿಯಿಂದ ಕೇಳಿಬರುವ ಬಡವರಿಗೆ ತಿಳಿದಷ್ಟು ಯಾವುದೆ ಫಲಾಪೇಕ್ಷೆ ಇಲ್ಲದೆ ಹೇಳತಿದ್ದ. ಇದು ವೈದಿಕ ವೃತ್ತಿ ಮಾಡುವವರಿಗೆ, ಮಡಿ ಅಮ್ಮನವರ ಕಿವಿಗೆ, ಕಣ್ಣಿಗೆ ಬಿದ್ದು ನಮ್ಮ ವೃತ್ತಿಗೆ ಧಕ್ಕೆ ತಂದಾರೂ ಅಂತ ತಿಳಿದು ವಯಸ್ಸಿನ ಅಂತರ ಗ್ರಹಿಸದೆ ‘ಏನು ಕೀರ್ತಪ್ಪ ಮಾಸ್ತರ ಊರಾಗ ಬಾಳ್ವೆ ಮಾಡಬೇಕು ಅನಕೊಂದರಾ ಹ್ಯಾಂಗ’ ಎಂದು ಕೇಳುವಷ್ಟರ ಮಟ್ಟಿಗೆ ಮಾತಾಡಿದ್ದರಂತೆ. ನಮ್ಮಪ್ಪ ಇಂತವಕ್ಕೆಲ್ಲ ಸೊಪ್ಪ ಹಾಕುವವರಲ್ಲ. ಹೇಳಿದವರ ಮಕ್ಕಳಿಗೆ ವೈದಿಕ ಪಕ್ಷ ಇದ್ದಾಗ ಆಮಂತ್ರಣ ನೀಡಿ ಹೇಗೆ ಈ ವೃತ್ತಿ ನಿಭಾಯಿಸಬೇಕೆಂದು ತಿಳಿಹೇಳಿಕೊಟ್ಟವರು.
ಅಸಮರ್ಥರ ಶೋಷಣೆ ಸರ್ವಕಾಲಿಕ, ಜಾತ್ಯಾತೀತ. ಮುಂದವರೆದ್ದು ಎಂದು ಹಣೆಪಟ್ಟಿಕಟ್ಟಿಕೊಂಡು ಹುಟ್ಟಿದ ಜಾತಿಯಲ್ಲೂ ಶೋಷಣೆ ಇದೆ. ಇಲ್ಲಿಯೂ ಎಸ್ಸಿ.ಎಸ್ಟಿ.ಓಬಿಸಿ ಕೆಟಗರಿಗಳಿವೆ. ಹೇಳಿಕೊಳ್ಳಲು ಬಾಯಿಲ್ಲ ಅಷ್ಟೆ. ಆ ಪರಿಸ್ಥಿತಿಯಲ್ಲಿ ಶೋಷಿತರಾಗಿ ಧ್ವನಿ ಕಳೆದುಕೊಂಡ ಜೀವಗಳೆಷ್ಟೊ. ವಿಧವೆಯರು, ಬಡವರು, ಕಡಿಮೆ ಮತದವರು, ಅಂಗಹೀನರು ಅಲ್ಲಿಯೂ ನಾನಾ ಬಗೆ. ನಾವು ಇಂತಹ ಶೋಷಣೆಗೆ ಒಳಗಾಗಿಲ್ಲ ಎಂದು ಹೇಳುವ ಧರ‍್ಯ ಇಲ್ಲ. ಪೇಪರ್ ಓದಲು ಇದ್ದವರ ಮನೆಗೆ ಹೋದರೆ ಕಸಿದುಕೊಂಡು ಬೈದಿದ್ದು, ನೀರಿಗೆ ಹೋದರೆ ದಬ್ಬಿದ್ದು, ಶಾಲೆಗೆ ಬುತ್ತಿ ಒಯ್ದಾಗ ಹಂಚಿಕೊಳ್ಳಲು ನಿರಾಕರಿಸುತ್ತಿದ್ದುದು, ಮದುವೆ ಮುಂಜುವಿಗಳಿಗೆ ಓಣಿಗೆಲ್ಲ ಆಮಂತ್ರಣ ನೀಡಿದರೂ ನಮಗೆ ಮಾತ್ರ ಬಿಡುತ್ತಿದ್ದದು, ತಾತ ಮೊಮ್ಮೊಕ್ಕಳಂತೆ ಕಾಣುತ್ತಿದ್ದ ನಮ್ಮ ಕುಟುಂಬವನ್ನು ಹೀಯಾಳಿಸುತ್ತಿದ್ದುದು, ಒಂದಲ್ಲ ಅವನ್ನೆಲ್ಲ ನೆನಸಿಕೊಂಡರೆ ಮನಭಾರವಾಗದೆ ಇರದು.
ವಿಷಯಾಂತರಕ್ಕೆ ಕ್ಷಮೆ ಇರಲಿ. ಇಳಿ ವಯಸ್ಸು. ಆರ್ಥಿಕ ದುಸ್ಥಿತಿ, ಮಕ್ಕಳ ಪಾಲನೆ, ಸಾಮಾಜಿಕ ಅಪಸ್ವರ ಇವುಗಳ ಮಧ್ಯ ಅವರು ಉಳಿಸಿಕೊಂಡಿದ್ದ ಲವಲವಿಕೆ, ಹುಮ್ಮಸ್ಸು ಎಂತವರನ್ನು ನಾಚಿಸಬೇಕು. ಬಂದವರಿಗೆಲ್ಲ ನಗುಮೊಗದಿಂದ ಮಾತಾಡುವುದು ಅದೆಂತ ಚೈತನ್ಯ ಅವರಲ್ಲಿ. ಎಂದೂ ತಮಗೆ ಬಂದ ಕಷ್ಟಗಳ ಬಗ್ಗೆ ಎದೆಗುಂದಿದವರಲ್ಲ. ಬದುಕನ್ನು ಆತ್ಮವಿಶ್ವಾಸದಿಂದ ಎದುರಿಸಿದವರು. ಅವರು ಮನೆಗಾಗಿ ಮಾಡಿದ ಕೆಲಸ ಸಮಾಜಕ್ಕೆ ಮಾಡಿದ್ದರೆ ಅದು ಬೇರೆನೆ ಆಗಿರುತ್ತಿತ್ತು. ಮನೆ ಮಾರು ಎರಡು ಗೆದ್ದವರು.. ಅಪ್ಪನ ಮಾತಿನ ಪ್ರಭಾವಲಯಕ್ಕೆ ಒಳಗಾದವರೆ ಇಲ್ಲ. ನಾನು ಸೇವೆಗೆ ಸೇರಿದ ಮೇಲೆ ನಮ್ಮ ಅನೇಕ ಹಿರಿಯ ಸಹುದ್ಯೋಗಿ ಮಿತ್ರರು ನನಗಾಗಿ ಮನೆಗೆ ಬಂದರೂ ನಾನಿರದಿದ್ದರೂ ತಾಸುಗಟ್ಟಲೇ ಅಪ್ಪನೊಂದಿಗೆ ಮಾತಿಗಿಳಿದು ಹೋಗುತ್ತಿದ್ದರು. ಬಹುಶಃ ಆ ಸ್ಥಿತಿ ಈಗಿದ್ದರೆ ನಮ್ಮ ಮನೆಗೆ ಯಾರೂ ಬರುತ್ತಿರಲಿಲ್ಲವೇನೋ? ಆದರೆ ಲೈಟಿರದ ಮನೆಗೆ ಅಪ್ಪನ ಮೇಲಿನ ಅಭಿಮಾನಕ್ಕೆ ಎಷ್ಟು ಬಂಧುಗಳು ಅಂತಸ್ಥಿನ ಲೆಕ್ಕವಿಲ್ಲದೆ ಬಂದು ಇದ್ದು ಹೋಗುತ್ತಿದ್ದರು.
ನಾನು ಗ್ರಹಿಸಿಲ್ಲ ಆದರೆ ನನ್ನಪ್ಪ ಕೆಲಸ ಮಾಡಿದ ಆ ಊರಿನ ಜನ ಹೇಳೋರು. ರಜಾ ಇತ್ಯಾದಿ ದಿನಗಳು ಬಂದರೆ ಮೂವತ್ತು ಜನಕ್ಕೆ ಕಡಿಮೆ ಇರುತ್ತಿರಲಿಲ್ಲವಂತೆ. ತಂಗಿ, ತಮ್ಮಂದಿರ ಮಕ್ಕಳೆಲ್ಲ ಅಲ್ಲೆ ಓದಿದವರು. ನಮ್ಮಜ್ಜಿ ಅಲ್ಲೆ ಇರೋರು. ಅದು ಮಾತೃ ಹೃದಯದ ಮನಸ್ಸು ಬಂದೋರಿಗೆಲ್ಲ ಓಣಿಗಿನ ಮಂದಿಗೆಲ್ಲ ಮಾಡೋದು. ಈಗಲೂ ಆ ಊರಿಗೆ ಹೋದ್ರೆ ಎಲ್ಲರೂ ನೆನೆಯುವರೆ. ವಯಸ್ಸಾಗಿರುವ ನನ್ನ ಕಕ್ಕನ ಮಕ್ಕಳು, ಅಕ್ಕಂದಿರು, ಅತ್ತೆ ಮಾವನ ಮಕ್ಕಳು ಅಪ್ಪನ ಆ ಪ್ರೀತಿಯ ಸಾಮ್ರಾಜ್ಯವನ್ನು, ಅಪ್ಪನ ಅಂತಃಕರಣವನ್ನು ಅಪಾರವಾಗಿ ಸ್ಮರಿಸುವವರೆ. ಮುಪ್ಪಿನ ಕಾಲದಲ್ಲಿ ಅಪ್ಪನಿಗೆ ಏನು ಮಾಡದಿದ್ದರೂ ಅವರ ಋಣದ ನೆನಪು ಅವರ ಮೇಲಿದೆಯಲ್ಲ ಅದೆ ಸಂತಸ.
ವಯಸ್ಸಾದರೂ ಆತ್ಮಾಭಿಮಾನ ಬಿಡದ ವ್ಯಕ್ತಿ ಎಲ್ಲ ಕೆಲಸಗಳನ್ನು ಸ್ವಂತವಾಗಿ ಮಾಡಬೇಕೆನ್ನುವ ಹಠವಾದಿ. ಆರಾಮ ಇಲ್ಲದಾಗ್ಯೂ ಕೈ ಹಿಡಿಯಲು ಹೋದರೆ ಅವರ ಆತ್ಮಾಭಿಮಾನಕ್ಕೆ ಅಡ್ಡಿಯಾಗುತ್ತಿತ್ತು. ಕೊಸರಿಕೊಳ್ಳುತ್ತಿದ್ದರು. ದೇಹ ಬಿಡುವ ಹಿಂದಿನ ದಿನವೂ ಆ ಗತ್ತನ್ನು ಪಾಲಿಸಿದವರು. ಅಪ್ಪ ತನ್ನ ಸೇವಾವಧಿಯಲ್ಲಿ ಏನನ್ನು ಮಾಡಿಕೊಳ್ಳಲಿಲ್ಲ. ನಮಗೆ ಇಚ್ಛಿತ ಓದು ಓದಿಸಲು ಸಾಧ್ಯವಾಗದಿದ್ದರೂ ಒಳ್ಳೆ ಆತ್ಮಾಭಿಮಾನದ ಬದುಕು ನಡೆಸುವ ಸಂಸ್ಕಾರÀ ನೀಡಿದವರು. ಓದುವಾಗ ನಮ್ಮೊಂದಿಗೆ ಹಿರಿಯ ವಿದ್ಯಾರ್ಥಿಯಾಗಿ ಮೊದಲೆ ಕಲಿತುಕೊಂಡು ಲೆಕ್ಕ ಹೇಳಿಕೊಡುತ್ತಿದ್ದರು, ಶಾಲೆಗೆ ಹೋಗಿ ಬರುವಷ್ಟರಲ್ಲಿ ಎಲ್ಲ ಪ್ರಶ್ನೋತ್ತರಗಳಿಗೆ ಉತ್ತರ ಹುಡುಕಿ ಇಟ್ಟಿರುತ್ತಿದ್ದರು, ಹಳೆಯ ಪ್ರಶ್ನೆಗಳನ್ನು ಸಂಗ್ರಹಿಸಿ ಆ ಪ್ರಶ್ನೆಗಳನ್ನು ಬಿಡಿಸಲು ನೀಡುತ್ತಿದ್ದರು. ಏಳನೆ ತರಗತಿ ಓದಿದ್ದ ಅಪ್ಪ ನಮಗಾಗಿ ಹತ್ತನೆಯ ತರಗತಿ ಪುಸ್ತಕಗಳನ್ನು ಓದುತ್ತಿದ್ದ. ಪರೀಕ್ಷೆ ಇದ್ದಾಗ ಪ್ರೀತಿಯಿಂದ ಎಬ್ಬಿಸಿ ಹಾಲಿನ ಪುಡಿಯಿಂದ ಚಹಾ ಮಾಡಿ ಕುಡಿಸಿ ತಲೆಸವರಿ ‘ನಿದ್ದೆ ಮಾಡಬೇಡಪ ಓದು, ಓದು, ಬದುಕು ಕಟ್ಟಿಕೊ’ ಎಂದು ಆಲಂಗಿಸುತ್ತಿದ್ದರು. ಕಾಲೇಜು ಅಭ್ಯಾಸಕ್ಕಾಗಿ ಹೊರಗಡೆ ಓದುವಾಗಲೂ ಅಲ್ಲಿ ಅಪ್ಪನ ನೆರವನ್ನು ಪಡೆದ ಹಲವಾರು ಮನೆಗಳಿದ್ದರೂ ಯಾರನ್ನು ಬೇಡದೆ ‘ನೀನು ಹಾಸ್ಟೇಲನಲ್ಲಿಯೆ ಇದ್ದು ಸ್ವಂತ ಮಾಡಿಕೊಂಡು ಉಣ್ಣು ಯಾರ ಹಂಗಿನಲ್ಲಿರಬೇಡ’ ಎಂಬ ಸ್ವಾಭಿಮಾನದ ಚಿಗರನ್ನು ಬಿತ್ತಿದವರು ಅಪ್ಪ. ಬದುಕಿನಲ್ಲಿ ಸುಖಕ್ಕಿಂತ ಕಷ್ಟಗಳ ಸರಮಾಲೆಯಲ್ಲೆ ಹೊದ್ದು ಮಲಗಿದ ಅಪ್ಪನಿಗೆ ಇರುವಷ್ಟು ದಿನ ಸುಖದಲ್ಲಿರಿಸಲು ಉದ್ಯೋಗ ದೊರಕಿದ ಮರು ತಿಂಗಳೆಲ್ಲೆ ನಾನು ಅಪ್ಪನಿಗೆ ಸುಖ ಎನಿಸಬಹುದಾದ ಎಲ್ಲಾ ಕಾರ್ಯ ಮಾಡಿದೆ. ಅಪ್ಪನಿಗಾಗಿ ಶೌಚವಿರುವ ಅಂದದ ಮನೆ, ಮಲಗಲು ಮಂಚ ಮೆತ್ತನೆ ಗಾದಿ ಖರಿದಿಸಿದೆ, ಮೂಕವಿಸ್ಮಿತನಾಗಿ ಗ್ರಹಿಸುತ್ತಿದ್ದ ಟಿ.ವಿ ಯನ್ನು ತಂದಿರಿಸಿದೆ. ಅಪ್ಪನಿಗೆ ಇಷ್ಟವಾಗುವ ಎಲ್ಲವನ್ನು ತಂದಿರಿಸಿ ಅವರ ವೃಧ್ಯಾಪ್ಯದಲ್ಲಿ ಮಗುವಿನ ಆನಂದವನ್ನು ಕಂಡು ಸಂತೃಷ್ಟನಾದೆ.
ಈಗಲೂ ನಾನು ಅಪ್ಪನ ಅಭಿಮಾನಿ. ನಮಗಾಗಿ ಆಸ್ತಿ, ಮನೆ ಮಾಡ್ಲಿಲ್ಲ, ಕಡೆಗೆ ಒಂದು ಪ್ಲಾಟು ಮಾಡ್ಲಿಲ್ಲ, ಮದುವೆನೂ ಇಚ್ಛೆಯಂತೆ ಮಾಡಲಿಲ್ಲ. ಆದರೆ ಮಾಡಲಿಲ್ಲ ಎನ್ನುವ ಕೊರಗು ಇರದಂತೆ ನಮ್ಮ ಮನದಲ್ಲಿ ಈಗಲೂ ನೆಲೆಗೊಂಡಿದ್ದಾರೆ. ಅಪ್ಪನ ನಗುಮೊಗದ ಆ ಫೋಟೊ ನೋಡಿದೊಡನೆ ಎಂತಹ ನೋವು ಹಗುರಾಗದೆ ಇರದು. ಈಗಲೂ ಆಗಾಗ ಕನಸಿನಲ್ಲಿ ಆಪ್ತವಾಗಿ ಮಾತಾಡುವ ಮನಸ್ಸು ಅವರದು.
ಗುಂಡುರಾವ್ ದೇಸಾಯಿ