ನಾನು ಓದಿದ ಪುಸ್ತಕ
ಹೂವು ಹಣ್ಣು
(ಸಾಮಾಜಿಕ ಕಾದಂಬರಿ)
ಕೃತಿ ಕರ್ತೃ:- ತ್ರಿವೇಣಿ
“ಹೂವು ಹಣ್ಣು, ಒಂದು ದೇಹದ ಸೌಂದರ್ಯಕ್ಕೆ
ಒಂದು ಹಸಿವಿನ ಅನಿವಾರ್ಯಕ್ಕೆ”
ತ್ರಿವೇಣಿ ಅವರ “ಹೂವು ಹಣ್ಣು” ಕಾದಂಬರಿ ಓದಲು ಕುಳಿತರೆ ಬಿಟ್ಟು ಏಳಲು ಮನಸಾಗುವುದಿಲ್ಲ. ಆಯಸ್ಕಾಂತದಂತೆ ಕೃತಿ ನಮ್ಮ ಚಿತ್ತವನ್ನು ಬಿಗಿದಪ್ಪಿ ಓದಿಸಿಕೊಂಡು ಹೋಗುತ್ತದೆ.
ಒಬ್ಬ ಸುಸಂಸ್ಕೃತೆ, ವಿವಾಹಿತೆ, ಸೌಂದರ್ಯದ ರಾಶಿ, ಸರ್ವ ಗುಣ ಸಂಪನ್ನೆ, ಮನೆಯ ಬೆಳಕಾಗಿದ್ದವಳು, ವೇಶ್ಯಾ ವೃತ್ತಿಗೆ ತನ್ನ ದೇಹವನ್ನು ಅರ್ಪಿಸುವ ಅನಿವಾರ್ಯತೆಯ ಕಾರಣವನ್ನು ತಿಳಿಸುವ ಕಥೆ, “ಹೂವು ಹಣ್ಣು”, ಒಂದು ಸಾಮಾಜಿಕ ಕಾದಂಬರಿ. ನಮ್ಮ ಹತ್ತಿರದ ಸಮಾಜದಲ್ಲಿ ಒಬ್ಬಳು ವೇಶ್ಯೆ ಹುಟ್ಟಿಕೊಂಡಿದ್ದಾಳೆಂದರೆ ಅದಕ್ಕೆ ಕಾರಣ ಅವಳಲ್ಲ, ಸುತ್ತಲಿನ ಅತಿ ಕೆಟ್ಟ ಮನಸ್ಥಿತಿಯುಳ್ಳ ಸಮಾಜ. ಇಲ್ಲಿ ಕಥಾ ನಾಯಕಿ ರಮಾ(ರಮಾಬಾಯಿ)ಳ ಪರಿಸ್ಥಿತಿಗೆ ಪುರುಷ ಸಮಾಜ ಮಾತ್ರ ಕಾರಣವಾಗಿಲ್ಲ. ಪ್ರಾರಂಭದಲ್ಲಿ, ರಮಾ ವೇಶ್ಯಾವಾಟಿಕೆಗೆ ತನ್ನ ಮನಸನ್ನು ಸಿದ್ಧಗೊಳಿಸುವಂತೆ ಮಾಡಿದ್ದು ಸ್ತ್ರೀ ಸಮಾಜವೇ. ಹೆಣ್ಣು ಹೆಣ್ಣಿಗೆ ಶತೃ ಎಂಬುದಕ್ಕೆ ಉದಾಹರಣೆಯ ಪ್ರಸಂಗವಿದು. ನೆರೆಹೊರೆಯ ಗಯ್ಯಾಳಿಗಳು ತಮ್ಮ ಮಾತಿನ ಇರಿತದಿಂದ, ಇಲ್ಲ ಸಲ್ಲದ ಊಹಾಪೋಹಗಳಿಂದ ಅಸತ್ಯವಾದದ್ದನ್ನು ನುಡಿದು-ನುಡಿದು ಅದನ್ನೇ ಸತ್ಯವಾಗಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತಾರೆ. ಇದಕ್ಕೆ ಪೂರಕವಾಗಿ ಹಸಿದ ಹೆಣ್ಣಿಗೆ ಹೊಟ್ಟೆಗೆ ಹಿಟ್ಟುಕೊಡುವದನ್ನು ನೆಪಮಾಡಿಕೊಂಡು ತಮ್ಮ ತೆಕ್ಕೆಗೆ ಬೀಳಿಸಿಕೊಂಡು, ಬಳಸಿಕೊಳ್ಳ ಹೊರಟ ನಿರ್ದಯಿ, ತಾಯಿ ಗಂಡ ಪುರುಷರ ಬಗ್ಗೆ ಹೊಸದೇನನ್ನು ಹೇಳಲಾಗುವುದಿಲ್ಲ, ಅಂತಹವರಿಂದ ಒಳ್ಳೆಯತನವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಈ ಕಾದಂಬರಿಯ ಓದುಗನಿಗೆ ಅನ್ನಿಸದೆ ಇರದು.
ಕಾದಂಬರಿಯಲ್ಲಿಯ ಮುಖ್ಯ ಪಾತ್ರ, ಅವರ ಕಥೆಗೆ ಬರುವುದಾದರೆ, ವಾಸು ಮತ್ತು ರಮಾ ಅನ್ಯೋನ್ಯ ಜೋಡಿಗಳು. ಬಡತನದಲ್ಲೂ ಪ್ರೀತಿಯಿಂದ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಪ್ರೇಮಿಗಳು. ಮನೆಯಲ್ಲಿ ಜಗಳಮಾಡಿಕೊಂಡು ಮೈಸೂರಿಗೆ ಬಂದು ನೆಲೆಸಿದ ಕುಟುಂಬಕ್ಕೆ, ಒಂದ್ಹೊತ್ತಿನ ಊಟಕ್ಕೂ ಪರದಾಟ. ಕೆಲಸಕ್ಕಾಗಿ ಅಲೆದು-ಅಲೆದು ಸೋತ ಗಂಡನ ಮುಖ, ಕೃಷವಾಗುತ್ತಿರುವ ದೇಹವನ್ನು ನೋಡಿ ರಮಾ ತನ್ನ ಮುತ್ತಿನ ಕಿವಿಯೋಲೆಯನ್ನು ಮಾರಲು ಗಂಡನಿಗೆ ಒತ್ತಾಯಿಸಿ ಕಳಿಸುತ್ತಾಳೆ. ತನ್ನ ತಾಯಿ ಪ್ರೀತಿಯಿಂದ ತನ್ನ ಹೆಂಡತಿಗೆ ಮೀಸಲಿರಿಸಿ ಕೊಟ್ಟ ಓಲೆಯನ್ನು ಒಲ್ಲದ ಮನಸಿನಿಂದಲೇ ಕಡೆಯ ಬಾರಿ ಕೆಲಸಕ್ಕೆ ಪ್ರಯತ್ನಿಸಿ ಸಿಗದಿದ್ದಾಗ ಶೆಟ್ಟರ ಬಳಿ ಮಾರಲು ಹೋಗುತ್ತಾನೆ ವಾಸು. ಅಂಗಡಿಯ ಶೆಟ್ಟಿ (ಶೆಟ್ಟರು) “ಇಂತಹ ಬೆಲೆ ಬಾಳುವ ಮುತ್ತಿನ ಓಲೆ, ಹೆಣ್ಣು ಮಕ್ಕಳ ಮೇಲಿದ್ದರೆ ಚೆನ್ನ. ಮದುವೆ ಆದ ಮೇಲೆ ನಿನ್ನ ಹೆಂಡತಿಗೆ ಕೊಡು” ಎನ್ನುತ್ತಾನೆ. “ಅವಳೇ ಇದನ್ನು ಮಾರಲು ಕಳಿಸಿದ್ದಾಳೆ ಶೆಟ್ಟರೆ, ಓಲೆಯಿಲ್ಲದೆ ಬದುಕಬಹುದು, ಅನ್ನಯಿಲ್ಲದೆ ಬದುಕಲಸಾಧ್ಯ” ಎನ್ನುತ್ತಾನೆ. ಈ ಮಾತು ನಿಜವಾದ ಹಸಿವಿನ ಅಳಲನ್ನು ತೋರಿಸುತ್ತದೆ. ಬದುಕಿಗೆ ಅನ್ನ ಮುಖ್ಯ, ಚಿನ್ನ ಅಲ್ಲ ಎಂಬ ತ್ರಿವೇಣಿಯರ ಮಾತು ಸಾರ್ವಕಾಲಿಕವಾಗಿಯೂ ವರ್ತಮಾನದ ಸತ್ಯವಾಗಿಯೇ ಇರುತ್ತದೆ.
ವಾಸುವಿನ ಪರಿಸ್ಥಿತಿ ತಿಳಿದ ಶೆಟ್ಟರು, “ಓಲೆಯನ್ನು ಮಾರಬೇಡ, ನಮ್ಮ ಅಂಗಡಿಯಲ್ಲೇ ಲೆಕ್ಕ ಬರೆಯುವ ಕೆಲಸ ಕೊಡುತ್ತೇನೆ” ಎಂದು ಕಥಾ ನಾಯಕನ ಕುಟುಂಬಕ್ಕೆ ದೇವರಾಗುತ್ತಾರೆ. ನಲವತ್ತು ರೂಪಾಯಿ ಸಂಬಳದಲ್ಲಿ ಹದಿನೈದು ರೂಪಾಯಿ ಮುಂಗಡ ಹಣವನ್ನು ಓಲೆಯನ್ನು ಒತ್ತೆಗಿರಿಸಿ ತಂದ ವಾಸು ಹೆಂಡತಿಯ ಬಳಿ ಹದಿನೈದು ರೂಪಾಯಿಗೆ ಜಲೆ ಮಾರಿರುವುದಾಗಿ ಸುಳ್ಳು ಹೇಳಿ, ಬೆಲೆ ಬಾಳುವ ಆಭರಣವನ್ನು ಕಡಿಮೆ ಹಣಕ್ಕೆ ಮಾರಿದ್ದಕ್ಕಾಗಿ ಬೈಸಿಯೂಕೊಳ್ಳುತ್ತಾನೆ. ಕೆಲಸ ಸಿಕ್ಕದ್ದನ್ನೂ ಹೇಳದೆ ಒಂದು ತಿಂಗಳ ಬಳಿಕ ಓಲೆಯನ್ನು ಹೆಂಡತಿಯ ಕೈಗಿತ್ತು ನಿಜ ತಿಳಿಸಿ ಖುಷಿ ಪಡಿಸುತ್ತಾನೆ. ಸುಂದರ ಸಂತೋಷವಾದ ಕುಟುಂಬಕ್ಕೆ ಮಗಳು ಶೀಲಾ ಜೊತೆಯಾಗಿರುತ್ತಾಳೆ.
ಯಾರ ವಕ್ರ ದೃಷ್ಟಿಯೋ ಅನಾರೋಗ್ಯಕ್ಕೆ ತುತ್ತಾಗಿ ವಾಸು ಅಸುನೀಗುವಲ್ಲಿ ಕಾದಂಬರಿ ತಿರುವು ಪಡೆದುಕೊಳ್ಳುತ್ತದೆ. ಬಡತನ ತನ್ನ ಆರ್ಭಟವನ್ನು ತೋರಿಸತೊಡಗುತ್ತದೆ. ಈ ಪ್ರಸಂಗವನ್ನು ತ್ರಿವೇಣಿಯವರು ಬಹಳ ಮನ ಮುಟ್ಟುವಂತೆ ಬರೆಯುತ್ತಾರೆ. ಗಂಡನ ಅಗಲಿಕೆಯ ಬಾಧೆಯನ್ನು ಅತ್ಯಂತ ಸೂಕ್ಷ್ಮವಾಗಿ ಓದುಗರೆದೆಗೆ ಹಾಕಿ ಕಣ್ಣಿರು ತರಿಸುತ್ತಾರೆ. ವಾಸುವಿನ ಅಗಲಿಕೆ ನಂತರ, ಅವನ
ಅಂಗಡಿ ಮಾಲೀಕರಾದ ಶೆಟ್ಟರು ತನ್ನ ಕೈಲಾದ ಸಹಾಯ ಮಾಡುತ್ತೇನೆಂದು ರಮಾಳ ಮನೆಗೆ ಬರುತ್ತಾರೆ. ಬಂದವನೇ ರಮಾಳ ಸೌಂದರ್ಯಕ್ಕೆ ಸೋತು; ತಾನು ವಿವಾಹಿತ ಎಂಬುದನ್ನೂ ಮರೆತು, ಅವಳನ್ನು ತನ್ನವಳನ್ನಾಗಿಸಿಕೊಳ್ಳಲು ಮತ್ತೆ ಮತ್ತೆ ಮನೆಗೆ ಬರತೊಡಗುತ್ತಾನೆ. ಜೊತೆಗೆ ಮನೆ ಮಾಲೀಕನ ವಕ್ರ ದೃಷ್ಟಿಯೂ ರಮಾಳನ್ನು ಕುಗ್ಗಿಸಿ ಬಿಡುತ್ತದೆ.. ಇದರ ನಡುವೆ, ಇದನ್ನೆಲ್ಲ ಕಂಡ ಓಣಿಯ ಹೆಂಗಳೆಯರ ನೀಚತನದ ಮಾತುಗಳಿಂದ ಇರಿಯತೊಡಗುತ್ತವೆ. ಊಹಾಪೋಹಗಳಿಗೆ ಬಲಿಯಾದ ರಮಾ ಎಲ್ಲರ ದೃಷ್ಟಿಯಲ್ಲಿ ಕೆಟ್ಟವಳಾಗುತ್ತಾಳೆ. ಶೆಟ್ಟಿಯನ್ನು ಧಿಕ್ಕರಿಸಿ, ಮನೆ ಮಾಲಿಕನನ್ನು ಓಡಿಸಿ ಗರತಿಯಂತೆ ಬಾಳಲು ಕೆಲಸ ಅರಸಿ, ನಾನಾ ಕೆಲಸ ಗಿಟ್ಟಿಸಿಕೊಂಡರೂ ಎಲ್ಲ ಕಡೆಯಲ್ಲೂ ವ್ಯಭಿಚಾರಕ್ಕೆ ಕರೆಯುತ್ತಿದ್ದರೇ ಹೊರತು, ಅವಳಿಗೂ ಒಂದು ಮನಸಿದೆ, ವಿಧವೆ ಹೆಣ್ಣು ಎಂದು ಯಾರೂ ರಮಾಳನ್ನು ಗೌರವಿಸುವುದೇ ಇಲ್ಲ, ಆದರಿಸುವುದೂ ಇಲ್ಲ. ಎಲ್ಲ ಕೆಲಸಗಳನ್ನೂ ತೊರೆದು, ಉಳಿದ ಹಣದಲ್ಲಿ ಸ್ವಲ್ಪ ದಿನ ಹಸಿವು ಇಂಗಿಸಿಕೊಳ್ಳುತ್ತಾರೆ ತಾಯಿ ಮಗಳು. ಆದರೆ ಪೌಷ್ಠಿಕ ಆಹಾರವಿಲ್ಲದೆ, ಸಮಯಕ್ಕೆ ಊಟ ಇಲ್ಲದೇ ಮಗಳು ಬಳಲಿ ಬೆಂಡಾಗಿ ಕೈ ತಪ್ಪಿ ಹೋಗುವ ಹಂತಕ್ಕೆ ಬಂದಾಗಿನ ಸಂದರ್ಭವನ್ನು ಲೇಖಕಿಯವರು ಮನಹಿಂಡುವಂತೆ ಬರೆದಿದ್ದಾರೆ. ಇನ್ನೇನು ಮಗಳು ಸತ್ತೇ ಹೋಗುತ್ತಾಳೆ ಅನ್ನುವ ಸಂದರ್ಭದಲ್ಲಿ, ರಮಾ ತನ್ನ ಬದುಕಿನ ಪಥವನ್ನು ಸರಿಯಾಗಿಸಿಕೊಳ್ಳುವ ಯಾವುದೇ ಕಡೆಯ ಅವಕಾಶವಿಲ್ಲದೆ ಸೋಲನುಭವಿಸುತ್ತಾಳೆ. ವಿಧಿಯಿಲ್ಲದೇ ಮಗಳನ್ನು ಉಳಿಸಿಕೊಳ್ಳಲು, ಅದೇ ಶೆಟ್ಟರ ಅಂಗಡಿಗೆ ಹೋಗಿ ಸೆರಗು ಸರಿಸಲು ಅಣಿಯಾಗಿಬಿಡುತ್ತಾಳೆ. ಜನರ ಬಾಯಲ್ಲಿನ ಅಸತ್ಯವಾದ ಮಾತನ್ನು ಸತ್ಯವಾಗಿಸುತ್ತಾಳೆ. ದೇಹವನ್ನು ಶೆಟ್ಟರು ಕೊಡುವ ಹಣಕ್ಕೆ ಅಡ ಇಡುತ್ತಾಳೆ. ಅಲ್ಲಿ ಆಕೆ, ಅಡಯಿಟ್ಟದ್ದು ಕೇವಲ ದೇಹವನ್ನಲ್ಲ, ತನ್ನ ಮನಸ್ಸನ್ನು ಕೂಡ. ಮನದ ನೈತಿಕತೆಯನ್ನು ಕಳಚಿ ನಿಂತಂತ ಸ್ಥಿತಿಯ ದೃಶ್ಯ ಓದುಗನನ್ನು ಕಸಿವಿಸಿಗೊಳಿಸುತ್ತದೆ.
ನೇರ ಹಾಸಿಗೆಗೆ ಕರೆದೊಯ್ಯ ಬಯಸಿದ ದುಷ್ಟ ಶೆಟ್ಟರನ್ನು ತಡೆದು, ಹಸಿವೆ ಎಂದಾಗ ಶೆಟ್ಟರು ಹೋಟೆಲಿಗೆ ಕರೆದೊಯ್ಯುತ್ತಾರೆ. ಆ ಸಂದರ್ಭದಲ್ಲಿ ತ್ರಿವೇಣಿಯವರ; “ರಮಾ ತಿಂಡಿಯನ್ನು ನಿರೀಕ್ಷಿಸುತ್ತಾ, ಹಸಿವಿನಿಂದ ಬಾಗಿಲಲ್ಲಿ ದೃಷ್ಟಿ ನೆಟ್ಟು, ಆಹಾರ ಬರುವುದರ ಕಡೆ ನೋಡುತ್ತಿದ್ದರೆ, ಶೆಟ್ಟರು ಹಸಿವಿನಿಂದ ರಮೆಯ ಕಡೆ ನೋಡುತ್ತಿದ್ದರು” ಎಂಬ ಸಾಲುಗಳು ಒಂದು ಹೊಟ್ಟೆಯ ಹಸಿವಿನ ಅಕ್ರಂದನ, ಮತ್ತೊಂದು ಮನದ ಕಾಮದ ಹಸಿವಿನ ಹಂಬಲವನ್ನು ತೋರಿಸುತ್ತವೆ. ಈ ಸಂದರ್ಭದಲ್ಲಿ ಓದಗನ ಅರಿವಿಗೆ ಬರದೇ ಕಂಬನಿಗಳು ಕೆನ್ನೆಗೆ ಜಾರುತ್ತವೆ. ತನ್ನ ಮತ್ತು ಮಗಳ ಹೊಟ್ಟೆ ಹಸಿವೆಯನ್ನು ಮೊದಲು ಇಂಗಿಸಿಕೊಂಡು ನಂತರ ಶೆಟ್ಟಿಯ ಕಾಮದ ಹಸಿವಿಗೆ ಆಹಾರವಾಗುತ್ತಾಳೆ ರಮಾ. ಆದರೆ ತನ್ನ ದೇಹವನ್ನು ಶೆಟ್ಟರಿಗೆ ಅರ್ಪಿಸುವ ಮುನ್ನ, ಗಂಡನ ಜೊತೆಗಿನ ಎಲ್ಲ ಭಾವಚಿತ್ರಗಳನ್ನು ಸುಟ್ಟು ಹಾಕಿಬಿಡುತ್ತಾಳೆ.
ಅಲ್ಲಿಂದ, ಮುಂದೆ ನಡೆಯುವುದೆಲ್ಲಾ ರಮಾಳದ್ದೇ ಆಟ. ತನ್ನ ಸೌಂದರ್ಯವನ್ನರಸಿ ಬಂದ ಶೆಟ್ಟರಿಂದ ಹೊಟ್ಟೆಯ ಹಸಿವು ಎನ್ನುವುದು ಸುಳಿಯದೇ ಹೋಗುತ್ತದೆ. ತನ್ನ ಈ ಪಾಪ ಕೃತ್ಯ ಮಗಳಿಗೆ ತಿಳಿಯಬಾರದು, ನನ್ನ ಮಗಳು ನನ್ನದೇ ದಾರಿ ಹಿಡಿಯಬಾರದೆಂದು ಅವಳನ್ನು ಚರ್ಚ್ ಗೆ ಕರೆದೊಯ್ದು ಮದರ್ ನ ಸುಪರ್ದಿಗೆ ವಹಿಸಿ, ಅವಳಿಗೊಂದು ಉತ್ತಮ ಬದುಕು ಕೊಡಲು ವಿನಂತಿಸಿ, ಆಣೆಯೂ ಪಡೆದು ಮರಳುತ್ತಾಳೆ. ಮತ್ತೆ ಬರುವುದಾಗಿ ಮಗಳಿಗೆ ಹೇಳಿ ಹೊರಬಂದವಳು ಮರಳಿ ಹೋಗದೆ, ಮಗಳಿಗೆ ತನ್ನ ಇರುವಿಕೆ, ತನ್ನ ಮುಖವೇ ಮರೆಯುವಂತೆ ಮಾಡುತ್ತಾಳೆ. ಇತ್ತ ಶೆಟ್ಟರ ಹೆಂಡತಿ ಬಾಣಂತನ ಮುಗಿಸಿ ಬಂದೊಡನೆ ಶೆಟ್ಟರ ಆಗಮನ ಕಡಿಮೆಯಾಗುತ್ತದೆ, ಆಮದಾನಿ ಕಡಿಮೆಯಾಗಿ, ಬೇರೆ ಗಿರಾಕಿಗಳನ್ನು ಬಿಟ್ಟುಕೊಳ್ಳುತ್ತಾಳೆ, ಎಲ್ಲರನ್ನೂ ಆಟ ಆಡಿಸುತ್ತಾ, ಸುಖ ನೀಡಿ ಹಣ ಗಳಿಸುತ್ತಾಳೆ. ಮಗಳಿಗೂ ಹಣ ಕಳಿಸುತ್ತಾಳೆ, ಆದರೆ ತಾಯಿ ಸತ್ತಿದ್ದಾಳೆಂದು ಹೇಳಿ ಕ್ರಮೇಣ ಶೀಲಾ(ಮಗಳು) ಮನಸಿನ ಸ್ಮೃತಿಯಿಂದ ರಮಾಳನ್ನು ಮರೆಸುತ್ತಾರೆ. ಕಾಲ ಉರುಳಿದಂತೆ ಕಾಲೇಜು ಹಂತಕ್ಕೆ ಶೀಲಾ ಬರುತ್ತಾಳೆ, ಅಲ್ಲಿ ಹೊಸ ಅಧ್ಯಾಪಕನಾಗಿ ಜಯಂತ್ ನ ಆಗಮನವಾಗುತ್ತದೆ. ಇವರಿಬ್ಬರ ನಡುವೆ ಪ್ರೇಮ ಹುಟ್ಟಿ, ಮದರ್ ರ ಅನುಮತಿಯೊಂದಿಗೆ ಮದುವೆಯೂ ಆಗುತ್ತದೆ. ಮದುವೆಗೆ ರಮಾ ತನ್ನ ವಜ್ರದ ಹರಳಿನ ಕಿವಿ ಓಲೆಯನ್ನು ಮದರ್ ಮೂಲಕ ಶೀಲಾಗೆ ತಲುಪಿಸುತ್ತಾಳೆ.
ವರುಷಗಳುರುಳಿದಂತೆ ದೇಹದ ಸೌಂದರ್ಯ ಮಾಸಿ ಗಿರಾಕಿಗಳು ಬರದೇ ಮತ್ತೆ ಬಡತನ ಹುಟ್ಟುತ್ತದೆ. ತನಗೆ ಪ್ರತಿ ಸ್ಪರ್ಧಿಯಾಗಿ ಮತ್ತೊಬ್ಬಳು ಹುಟ್ಟಿಕೊಂಡ ಕಾರಣ ರಮಾ ದಯನೀಯ ಸ್ಥಿತಿಗೆ ತಲುಪುತ್ತಾಳೆ. ಸೌಂದರ್ಯ ಇರುವ ತನಕ ಆಟ, ನಂತರ ಏನೂ ಇಲ್ಲ ಎಂಬ ಅರಿವು ರಮಾಗಾಗುತ್ತದೆ. ಮತ್ತೆ ಬರಬಾರದ ಕಾಯಿಲೆಯೂ ಬಂದು ಮೈಯೆಲ್ಲಾ ಗಾಯಗಳಾಗಿ ಅವಳ ದೇಹದ ಸುವಾಸನೆ ದುರ್ವಾಸನೆಗೆ ಬದಲಾಗಿರುತ್ತದೆ. ಬಾಡಿಗೆ ಕಟ್ಟಲೂ ಹಣವಿಲ್ಲದೆ ರಮಾ ದೊಡ್ಡ ಮನೆಯಿಂದ ಸಣ್ಣ ಕೋಣೆಯ ಮನೆಗೆ ತನ್ನ ಮನೆಯನ್ನು ಬದಲಾಯಿಸುತ್ತಾಳೆ. ವಿಧಿ ಘೋರವಾಗಿ ದಿನದಿಂದ ದಿನಕ್ಕೆ ರಮಾಳ ದೇಹ ಮತ್ತು ಮನಸುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ದಿನಕ್ಕೆ ಹತ್ತಾರು ಮಂದಿ ರಮಾಳಲ್ಲಿ ಹಾಸಿಗೆ ಸುಖ ಪಡೆಯುತ್ತಿದ್ದವರು, ಈಗ ದಿನಕ್ಕೆ ಒಬ್ಬರೂ ಸುಳಿಯದಂತಾಗುತ್ತಾರೆ. ಒಂದೊಂದು ರೂಪಾಯಿಗೂ ಗಿರಾಕಿಗಳನ್ನು ಬರಮಾಡಿಕೊಳ್ಳಲು ಮುಂದಾಗುವ ಸ್ಥಿತಿಗೆ ರಮಾ ತಲುಪುತ್ತಾಳೆ. ಶ್ರೀಮಂತರು, ಅಧಿಕಾರಿ ವರ್ಗದವರನ್ನಷ್ಟೇ ಹಾಸಿಗೆಗೆ ಬಿಟ್ಟುಕೊಳ್ಳುತ್ತಿದ್ದ ರಮಾ ಈಗ ಯಾರು ಸಿಕ್ಕರೂ ಸರಿ ಎಂದು ತಾನೇ ವಯ್ಯಾರ ಮಾಡಿ ದಾರಿ ಹೋಕರನ್ನೆಲ್ಲ ಕರೆಯಲು ಪ್ರಾರಂಭಿಸುತ್ತಾಳೆ. ಕೆಲವರು ಇವಳ ಬಲೆಗೆ ಬಿದ್ದರೆ, ಕೆಲವರು ನಕ್ಕು, ಉಗಿದು ಮುಂದೆಹೋಗುತ್ತಿದ್ದರು.
ಆಗಾಗ ಮಗಳ ನೆನಪು ಕಾಡಿದರೂ ವಿಧಿ ಇಲ್ಲದೆ ಸುಮ್ಮನಾಗುತ್ತಾಳೆ. ಆದರೆ ಮಗಳು ಅಳಿಯ, ಎದುರು ಮನೆಗೇ ಬಾಡಿಗೆಗೆ ಬರುತ್ತಾರೆ. ಅಷ್ಟರಲ್ಲೇ ಶೀಲಾಗೆ ನಾಲ್ಕು ವರ್ಷದ ಮಗಳು ಇರುತ್ತಾಳೆ. ಅವಳೇ ಶಶಿ. ಮುಂದೆ ಶಶಿಗೂ ರಮಾಗೂ ಅತ್ಯಾಪ್ತ ಸ್ನೇಹ ಬೆಳೆದು ಮೊಮ್ಮಗಳೊಂದಿಗೆ ಆಡುವ ಸುಖ ಸಿಕ್ಕದ್ದು ನನ್ನ ಪುಣ್ಯ ಎಂದು ಖುಷಿ ಪಡುತ್ತಾಳೆ ನಿರ್ಭಾಗ್ಯವತಿ ರಮಾ. ವಿಧಿ ಅದಕ್ಕೂ ಕಲ್ಲು ಹಾಕುವಂತೆ ಇವಳು ನೀತಿಗೆಟ್ಟವಳು ಎಂದು ಶೀಲಾಗೆ ತಿಳಿದು, ಮಗಳನ್ನು ಆ ಕಡೆ ಸುಳಿಯದಂತೆ ಮಾಡುತ್ತಾಳೆ. ತನ್ನ ತಾಯಿಯೇ ಆಕೆ ಎಂದು ತಿಳಯದ ಶೀಲಾ, ಆಕೆ ಅಸಹ್ಯದ ಹೆಂಗಸು, ನೀನು ಯಾವುದೇ ಕಾರಣಕ್ಕೂ ಆಕೆಯ ಬಳಿ ಹೋಗ ಬಾರದೆಂದು ತಾಕೀತು ಮಾಡಿ ದಂಡಿಸುತ್ತಾಳೆ. ಜಯಂತ್ ಕೂಡ ಇದಕ್ಕೆ ಸಹಕರಿಸುತ್ತಾನೆ. ಕದ್ದು ಮಚ್ಚಿ ಹೋಗುತ್ತಿದ್ದ ಶಶಿಗೆ ಶೀಲಾಳಿಂದ ಒದೆ ಬೀಳುತ್ತವೆ. ಜಯಂತ್ ಕೂಡ ಹೊಡೆಯಲು ಪ್ರಾರಂಭಿಸುತ್ತಾನೆ. ಬೇಸತ್ತು ನಾವೇ ಮನೆ ಖಾಲಿ ಮಾಡೋಣ ಎಂದು ಮಗಳು ಅಳಿಯ ನಿರ್ಧರಿಸಿದ್ದಾರೆ ಎಂದು ತಿಳಿದ ರಮಾ, ಒಂದು ರಾತ್ರಿ ಕಳೆದು, ಬೆಳಗಾಗುವುದರೊಳಗೆ ಮನೆ ಖಾಲಿ ಮಾಡಿರುತ್ತಾಳೆ. ಅವಳೇ ತನ್ನ ತಾಯಿ ಎಂದು ತಿಳಿಯದ ಶೀಲಾ ಪೀಡೆ ತೊಲಗಿತು, ಅಸಹ್ಯ ಹೊರಟು ಹೋಯಿತು, ನನ್ನ ಮಗಳ ಮನಸು ಕೆಡುವುದು ತಪ್ಪಿತು, ಯಾರ ಜೊತೆ ಓಡಿಹೋದಳೋ ಎಂಬಲ್ಲಿ ಕಾದಂಬರಿ ಅಂತ್ಯವಾಗುತ್ತದೆ.
ಗಂಡನನ್ನು ಕಳೆದುಕೊಂಡ ರಮಾಗೆ ಸುತ್ತಲಿನ ಹೆಂಗಸರು ಸಂತೈಸಿ ವಾತ್ಸಲ್ಯದ ಮಾತುಗಳಾಡಿ ಅಳವಳಿಗೆ ಧೈರ್ಯ ತುಂಬಿದ್ದರೆ ರಮಾ ಈ ಸ್ಥಿತಿಗೆ ತಲುಪುತ್ತಿರಲಿಲ್ಲ. ಎಲ್ಲ ಪುರುಷ ವರ್ಗದವರು ಅವಳಲ್ಲಿ ತಮ್ಮ ಸಹೋದರಿಯನ್ನು ಕಂಡು ಅವಳಿಗೊಂದು ದಿಕ್ಕು ತೋರಿ, ಊಟಕ್ಕೆ ದಾರಿ ಮಾಡಿಕೊಟ್ಟಿದ್ದರೆ ಅವಳು ವ್ಯಭಿಚಾರಕ್ಕೆ ಇಳಿಯುತ್ತಿರಲಿಲ್ಲ. ಮಗಳನ್ನೂ ದೂರ ಮಾಡಿಕೊಳ್ಳುತ್ತಿರಲಿಲ್ಲ. ಮೊಮ್ಮಗಳು, “ಆಂಟೀ, ನೀವು ಕೆಟ್ಟವರಂತೆ ಹೌದಾ?” ಎಂದು ಪ್ರಶ್ನಿಸಿದಾಗ, “ಹೌದಮ್ಮ ಈ ಸಮಾಜ ನನ್ನನ್ನು ಕೆಟ್ಟವಳನ್ನಾಗಿ ಮಾಡಿದೆ” ಎಂದಾಗ ಸಮಾಜದ ವ್ಯಾಘ್ರತನ, ವ್ಯಭಿಚಾರಿತನ ಓದುಗನಿಗೆ ಅರ್ಥವಾಗುತ್ತದೆ. ತ್ರಿವೇಣಿಯವರ “ಹೂವು ಹಣ್ಣು” ಸಾಮಾಜಿಕವಾಗಿ ಮನುಷ್ಯರ ಮನಸ್ಥಿತಿಯನ್ನು ತೋರಿಸುತ್ತದೆ. ಅಂತೆಯೇ ಮನಃಪರಿವರ್ತನೆಗೂ ದಾರಿ ಮಾಡಿಕೊಡುತ್ತದೆ. ಅದ್ಭುತವಾದ ಲೇಖಕಿಯ ಪರಮಾದ್ಭುತವಾದ ಕಾದಂಬರಿ… ಒಮ್ಮೆ ಓದಿದರೆ ಬದುಕಿನುದ್ದಕ್ಕೂ ಕಾಡುವ ಪಾತ್ರಗಳು ಇವೆ… ಒಮ್ಮೆ ಓದಿ
– ವರದೇಂದ್ರ ಕೆ ಮಸ್ಕಿ
9945253030