ಕಾಡಿದ ಕೈ

ಕಾಡಿದ ಕೈ

ಸೌಮ್ಯನಿಗೆ ಪ್ರಕಾಶನ ವರ್ಗಾವಣೆಯ ಬಿಸಿ ತಟ್ಟಿದ್ದು ಮದುವೆಯಾಗಿ ಒಂದೂವರೆ ವರ್ಷದ ನಂತರ. ಲಕ್ಷಿಪುರಕ್ಕೆ

ವರ್ಗವಾದಾಗ ಮದುವೆಯ ಸಮಯದಲ್ಲಿ ನೀರಾವರಿ ಇಲಾಖೆಯಲ್ಲಿ ಇಂಜನೀಯರ ಆಗಿದ್ದ ಪ್ರಕಾಶ ಇದ್ದದ್ದು ಸೌಮ್ಯಳ ತವರೂರಾದ ರಾಮಪುರದಲ್ಲಿಯೇ. ಸರಕಾರಿ ನೌಕರನಾಗಿ ೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸೌಮ್ಯ¼ ತಂದೆಯವರಿಗೆ ಅಳೀಯನೂ ಸರಕಾರಿ ನೌಕರನಾಗಿರಬೇಕೆಂಬ ಆಶಯ. ಬಹುಶಃ ಖಾಯಂ ಕೆಲಸದ ಜೊತೆಗೆ ಸಂಬಳದೊಂದಿಗೆ ಗಿಟ್ಟುವ ಗಿಂಬಳದಿಂದ ಮಗಳು ಸೌಖ್ಯವಾಗಿ ಇರಬಹುದೆಂಬ ಕಲ್ಪನೆ ಇರಬಹುದೇನೋ! ಹೇಗೋ ಅವರ ಆಶಯ ಈಡೇರಿತ್ತು.

ಡಿಗ್ರಿ ಮುಗಿಸಿದ್ದ ಸೌಮ್ಯಳ ಮದುವೆಯ ವಿಷಯವಾಗಿ ಎಲ್ಲ ಸ್ನೇಹಿತರ ಹತ್ತಿರ ಹೇಳಿಕೊಂಡಿದ್ದರು. ಸ್ವಲ್ಪ ಸಂಪ್ರದಾಯಸ್ತರಾದ ಅವರಿಗೆ ಹೆಣ್ಣು ಮಕ್ಕಳು ಹೆಚ್ಚು ಓದುವುದಾಗಲಿ, ನೌಕರಿ ಮಾಡುವುದಾಗಲಿ ಅವಶ್ಯವೆನಿಸುತ್ತಿರಲಿಲ್ಲ. ಮೊದಲನೇಯ ಮಗಳಾದ ಸೌಮ್ಯಳಿಗಾಗಿ ಬಹಳ ಮುತುವರ್ಜಿಯಿಂದ ವರನಿಗಾಗಿ ಹುಡುಕಾಟ ನಡೆಸಿದ್ದರು. ಕೆಲವು ಪ್ರಸ್ತಾಪಗಳು ಬಂದರೂ ಯಾವುದೋ ಕಾರಣಗಳಿಂದ ಅವರ ಮನಸ್ಸಿಗೆ ಹಿಡಿಸದೇ ನಿರಾಕರಿಸಿದ್ದರು. ಸ್ನೇಹಿತರಾದ ರಾಮರಾಯರು ಪ್ರಕಾಶನ ಹೆಸರನ್ನು ಸೂಚಿಸಿದಾಗ ವಿವರಗಳನ್ನು ತಿಳಿದು ಆಸಕ್ತಿ ತೋರಿದ್ದರು. ನಂತರ ವಧುಪರೀಕ್ಷೆ ನಡೆದು ಮೊದಲ ನೋಟದಲ್ಲಿಯೇ ಸೌಮ್ಯಳ ಸೌಮ್ಯತೆಗೆ ಹಾಗೂ ಮುಗ್ಧತೆಗೆ ಮರುಳಾದ ಪ್ರಕಾಶ ಯಾವುದೇ ನಿಬಂಧನೆ, ಬೇಡಿಕೆಗಳಿಲ್ಲದೇ ಒಪ್ಪಿಗೆ ನೀಡಿದ್ದ. ನೋಡಲು ತನ್ನ ಮೆಚ್ಚಿನ ನಟನನ್ನೇ ಹೋಲುವ ದೃಢವಾದ ಮೈಕಟ್ಟಿನ ಪ್ರಕಾಶ ಸೌಮ್ಯಳಿಗೂ ಒಪ್ಪಿಗೆಯಾಗಿದ್ದ. ಅವರ ಜೊತೆಗೆ ಇನ್ನೊಂದು ಆಕರ್ಷಣೆ ಎಂದರೆ ಮದುವೆಯಾದ ಮೇಲೂ ಇದೇ ಊರಲ್ಲಿ ಇರುವ ಅವಕಾಶ!. ಹೆಚ್ಚು ಯೋಚನೆ ಮಾಡದೆ ನಾಚುತ್ತ ಒಪ್ಪಿಗೆ ಸೂಚಿಸಿದ್ದಳು.

ಮುಂದಿನದೆಲ್ಲ ಸಾಂಗವಾಗಿ ನಡೆದು ಮದುವೆಯಾಗಿ ನವದಂಪತಿಗಳು ಪ್ರಕಾಶನ ಸರಕಾರಿ ಕ್ವಾರ್ಟರ್ಸನಲ್ಲಿ ನವ ದಾಂಪತ್ಯದ ಜೀವನಕ್ಕೆ ಕಾಲಿರಿಸಿದ್ದರು. ವರುಷವಾದರೂ ಮಧು ಚಂದ್ರದ ಚಂದಿರ ಅಸ್ತನಾಗಿರಲಿಲ್ಲ. ಅಘಾದವಾಗಿ ಪ್ರೀತಿಸುವ ಮುದ್ದುಗರೆಯುವ ಪತಿ, ಹತ್ತಿರದಲ್ಲಿಯೇ ಇರುವ ತಾಯಿ ಮನೆ, ಸೌಮ್ಯಳ ದಿನಗಳು ಹಗುರವಾಗಿ ಮೋಡದಲ್ಲಿ ತೇಲಿದ್ದವು. ಮದುವೆಯಾದ ಮೊದಲ ವಾರ್ಷಿಕೋತ್ಸವ ಸಂಭ್ರಮ ಈಗಷ್ಟೇ ಮುಗಿದಿತ್ತು. ಆಗ ಬಂದೊದಗಿತ್ತು ಈ ವರ್ಗಾವಣೆಯ ಆಘಾತ. ಸರಕಾರಿ ನೌಕರಿಯ ಈ ಬಿಸಿ ತುಪ್ಪವನ್ನು ಅವಳು ಮರತೇ ಬಿಟ್ಟಿದ್ದಳು.

ಅಯ್ಯೋ ಯಾರಾದರೂ ಖಾಸಗಿ ಕೆಲಸದಲ್ಲಿ ಇರುವವರನ್ನು ಅಥವಾ ವ್ಯಾಪಾರಸ್ಥರನ್ನು ಮದುವೆಯಾಗಿದ್ದರೆ ಈ ಕಿರಿಕಿರಿ ಇರುತ್ತಿರಲಿಲ್ಲವೆನೋ ಎನಿಸಿತ್ತು. ಎಲ್ಲ ಸಾಮಾನುಗಳನ್ನೂ ಪ್ಯಾಕ ಮಾಡುವ ಭರಾಟೆಯಲ್ಲಿದ್ದಾಗ ಸಾಮನು ಕಟ್ಟುವುದು ನಂತರ ಬಟ್ಟೆ ಜೋಡಿಸುವುದು ಅದೇನು ಹಗುರವಾದ ಕೆಲಸವಾಗಿರಲಿಲ್ಲ. ಆಕೆಯ ತಾಯಿ ಹಾಗು ತಮ್ಮ ಇಬ್ಬರೂ ಸಹಾಯಕ್ಕೆ ಬಂದಿದ್ದರು. ಒಂದು ವಾರದಲ್ಲಿ ಸರಕಾರಿ ಕ್ವಾಟರ‍್ಸ ಸಿಕ್ಕ ತಕ್ಷಣ ಪ್ರಕಾಶ ಬಂದು ಸಾಮಾನಿನ ಸಮೇತ ಸೌಮ್ಯಾಳನ್ನು ಲಕ್ಷ್ಮಿಪುರಕ್ಕೆ ಕರೆತಂದಿದ್ದ. ಜೀವನದಲ್ಲಿ ಮೊದಲ ಬಾರಿಗೆ ತವರಿನಿಂದ ಸಹಾಯವಿಲ್ಲದೇ ಮನೆಯ ಜವಾಬ್ಧಾರಿಯನ್ನು ವಹಿಸಿಕೊಳ್ಳುವ ಅನುಭವ ಹೊಸದಾಗಿತ್ತು. ಫೋನಿನಲ್ಲಿಯೇ ಎಲ್ಲ ಸಲಹೆ ಸೂಚನೆಗಳು ರವಾನೆಯಾಗತೊಡಗಿದ್ದವು. ಯಾರೂ ಪರಿಚಿತರಿಲ್ಲದ ಹೊಸ ಊರು. ಊರಿನ ಹೊರ ವಲಯದಲ್ಲಿದ್ದ ಸರಕಾರಿ ಕ್ವಾರ‍್ಸ ನಲ್ಲಿ ಪ್ರಕಾಶ ಬರುವ ಹೋಗುವ ಸಮಯ ನಿಗದಿತವಿರದಿದ್ದರಿಂದ ಹೆಚ್ಚಿನ ಸಮಯ ಸೌಮ್ಯ ಮನೆಯಲ್ಲಿ ಒಬ್ಬಳೇ ಇದ್ದು ಮೊಬೈಲ್ ಅವಲಂಭನೆ ಜಾಸ್ತಿ ಆಗತೊಡಗಿತು.

ಮಿತಭಾಷಿಯಾದ ಸೌಮ್ಯಳಿಗೆ ಅಕ್ಕಪಕ್ಕದವರೂ ಬಹಳ ದಿನ ಅಪರಿಚಿತರಾಗಿ ಉಳಿದುಬಿಟ್ಟರು. ಮೊದಲಿಗೆ ಪರಿಚಿತಳಾಗಿದ್ದು ಎದುರಿನ ಮನೆಯಲ್ಲಿದ್ದ ಗಿರಿಜಾ. ಬಂದ ದಿನವೇ ತಾನೇ ಪರಿಚಯ ಮಾಡಿಕೊಂಡು ಇವರ ವಿವರಗಳನ್ನು ತಿಳಿದುಕೊಂಡು ಏನಾದರೂ ಬೇಕಾದರೆ ಕೇಳಿ ಎಂದು ಸಹಾಯಹಸ್ತ ಚಾಚಿದ್ದಳು. ನೋಡಲು ದಪ್ಪ ಎತ್ತರವಾಗಿದ್ದ ಆಕೆ ಒರಟಾಗಿ ಕಂಡರೂ ಅವಳ ಸ್ನೇಹಮಯ ವರ್ತನೆ ಸೌಮ್ಯಳಿಗೆ ಹಿಡಿಸಿತ್ತು. ನಂತರದ ಪರಿಚಯದಲ್ಲಿ ಮನೆಯ ವಿವರಗಳೆಲ್ಲವೂ ತಿಳಿದಿದ್ದವು. ಪತಿ ಮುಕುಂದ ಪಿ.ಡಬ್ಲೂ.ಡಿ ಡಿಪಾರ್ಟಮೆಂಟನಲ್ಲಿ ಇಂಜಿನೀಯರ ಇದ್ದು, ಇಬ್ಬರು ಮಕ್ಕಳಲ್ಲಿ ಮೊದಲನೆ ಮಗ ಇಂಜನೀಯರಿಂಗ್ ಮೊದಲ ವರ್ಷದಲ್ಲಿದ್ದ, ಮಗಳು ಎಸ್.ಎಸ್.ಎಲ್.ಸಿ ಓದುತ್ತಿದ್ದಳು. ಗಿರಿಜಾ ಗಂಡ ಆಫೀಸಿಗೆ ಹಾಗು ಮಕ್ಕಳು ಕಾಲೇಜಿಗೆ ಹೋದ ಮೇಲೆ ಎಲ್ಲ ಕೆಲಸ ಮುಗಿಸಿ ಮಧ್ಯಾನ್ಹ ಯಾವಾಗಲಾದರೂ ಸೌಮ್ಯಳ ಜೊತೆ ಮಾತನಾಡುತ್ತಿದ್ದಳು. ಮೊದಲನೇ ಸಲ ಮನೆ ಜವಾಬ್ಧಾರಿಯನ್ನು ವಹಿಸಿಕೊಂಡು ಗೊಂದಲದಲ್ಲಿದ್ದ ಸೌಮ್ಯಳ ಬಗ್ಗೆ ಅವರಿಗೆ ವಿಶೇಷ ಕಾಳಜಿ. ಮನೆ ನಿರ್ವಹಣೆಯಲ್ಲಿ ಹಾಗೂ ಅಡುಗೆ ಬಗ್ಗೆ ಚಿಕ್ಕ ಪುಟ್ಟ ಸಲಹೆ ನೀಡುತ್ತಾ ಹತ್ತಿರವಾಗುತ್ತ ಒಂದು ತಿಂಗಳಲ್ಲಿಯೇ ಗಿರಿಜಕ್ಕಳಾಗಿಬಿಟ್ಟಿದ್ದಳು.

ಮಕ್ಕಳು ಯಾವತ್ತಾದರೂ ಅಮ್ಮನನ್ನು ಹುಡುಕುತ್ತ ಬಂದು ಮಾತನಾಡಿಸುತ್ತಿದ್ದರು. ಅವರ ಯಜಮಾನರಾದ ಮುಕುಂದರಾಯರು ಕಾಣಿಸುತ್ತಿದ್ದುದು ಅಪರೂಪ. ಆಫೀಸಿಗೆ ಹೋಗುವಾಗ ಪ್ರಕಾಶನಿಗೆ ಎದುರಿಗೆ ಸಿಕ್ಕರೆ ಹಲೋ ಅಂದಿದ್ದಷ್ಟೇ. ನೋಡಿದ ತಕ್ಷಣ ವಿಲಕ್ಷಣ ಭಾವವನ್ನು ತೋರುವ ವ್ಯಕ್ತಿ. ಏನೋ ಒಂಥರಾ! ಒಂದೆರಡು ಸಲ ಅಕಸ್ಮಾತಾಗಿ ಎದುರಿಗೆ ಬಂದಾಗ ಅವರ ತೀಕ್ಷ÷್ಣ ನೋಟ ಸೌಮ್ಯಳಿಗೆ ಕಿರಿಕಿರಿ ಮೂಡಿಸಿತ್ತು. ಆದರೆ ನಂತರ ಮರೆತು ಬಿಟ್ಟಿದ್ದಳು. ಮನೆ ಕೆಲಸದ ನಂತರ ಸ್ವಲ್ಪ ಹೊತ್ತು ಟಿ.ವ್ಹಿ. ನೋಡುತ್ತ, ಅಮ್ಮನ ಜೊತೆ ಸ್ನೇಹಿತರ ಜೊತೆ ಫೋನಿನಲ್ಲಿ ಮಾತನಾಡುತ್ತ ಸಂಜೆ ಪ್ರಕಾಶನ ಜೊತೆ ಸುತ್ತಾಡುವುದು ಹೀಗೆ ದಿನಚರಿ ಸಾಗಿತ್ತು.

ಆವತ್ತು ಸಾಯಂಕಲ ಒಣಗಿಸಲು ಹಾಕಿದ ಬಟ್ಟೆ ತರಲು ಟೇರಸ್‌ಗೆ ಹೋದಾಗ ಯಾರೋ ತನ್ನನ್ನೇ ಗಮನಿಸುತ್ತಿರುವ ಹಾಗೆ ಭಾಸವಾಯಿತು. ಸುತ್ತಲೂ ನೋಡಿದಾಗ ಯಾರೂ ಕಾಣಲಿಲ್ಲ. ಮಾರನೇ ದಿನವೂ ಹಾಗೆ ಅನಿಸಿದಾಗ ಸ್ವಲ್ಪ ಹೊತ್ತು ನಿಂತು ಸುತ್ತಲೂ ಸೂಕ್ಷö್ಮವಾಗಿ ಅವಲೋಕಿಸಿದಾಗ ಕಂಡಿದ್ದು ಎದುರುಗಡೆ ಕಿಡಕಿಯಲ್ಲಿ ಆ ಎರಡು ಕಣ್ಣುಗಳು. ಅವು ಮುಕುಂದರಾಯನ ಕಣ್ಣು ಎನ್ನುವುದರಲ್ಲಿ ಸಂಶಯ ಇರಲಿಲ್ಲ. ಅದೇ ಮುಜುಗರ ಭಾವದಿಂದ ಕೆಳಗೆ ಇಳಿದು ಬಂದಿದ್ದಳು. ಈ ರೀತಿಯ ಅನುಭವ ಪುನರಾವರ್ತಿಸಲು ಆರಂಭವಾದಾಗ ಸೌಮ್ಯಳಿಗೆ ಸ್ವಲ್ಪ ಹೆದರಿಕೆ ಶುರುವಾಯಿತು. ಯಾರ ಹತ್ತಿರ ಹೇಳಬೇಕೆಂದು ಅರ್ಥವಾಗಲಿಲ್ಲ. ಪ್ರಕಾಶನ ಹತ್ತಿರ ಹೇಳಿದರೆ ಏನು ಅಂದುಕೊಳ್ಳುವವನೋ! ಅಮ್ಮನಿಗೆ ಹೇಳಿದರೆ ಸುಮ್ಮನೆ ಗಾಭರಿಯಾಗುತ್ತಾರೆ ಎಂದುಕೊಳ್ಳುತ್ತ ಅದರ ಕಡೆ ಹೆಚ್ಚು ಗಮನ ಹರಿಸದಿದ್ದರೆ ಆಯಿತು ಎಂದುಕೊಂಡಳು. ಆದರೂ ಮನಸ್ಸು ತಡಿಯದೇ ಪ್ರಕಾಶನ ಹತ್ತಿರ ಹೇಳಿದಾಗ ನೀನೆ ಏನಾದರೂ ಕಲ್ಪನೆ ಮಾಡಿಕೊಳ್ಳುತ್ತಿರಬಹುದು. ಅವರು ತುಂಬಾ ಸಂಭಾವಿತ ಜನ ಹಾಗೂ ಮಧ್ಯ ವಯಸ್ಸು ದಾಟಿದೆ ಎಂದು ಹಗುರವಾಗಿ ನಕ್ಕು ಬಿಟ್ಟ. ಇರಬಹುದು ಎಂದು ಸುಮ್ಮನಾದಳು. ಆದರೂ ಹೆಣ್ಣು ಮಕ್ಕಳಿಗೆ ಒಮ್ಮೆ ಸಂಶಯ ಭೂತ ಹೊಕ್ಕಿತೆಂದರೆ ತೆಗೆದು ಹಾಕುವುದು ಸುಲಭವಲ್ಲ. ಆತ ಮನೆಯಲ್ಲಿದ್ದಾಗ ಟೆರೇಸ್ ಮೇಲೆ ಹೋಗುವುದನ್ನು ಕಡಿಮೆ ಮಾಡತೊಡಗಿದಳು.
ಪ್ರಕಾಶನಿಗೆ ಟ್ರೇನಿಂಗ್‌ಗಾಗಿ ಮೂರು ದಿನ ಬೇರೆ ಊರಿಗೆ ಹೋಗುವ ಪ್ರಸಂಗ ಬಂದಾಗ ಸೌಮ್ಯ ಹೌಹಾರಿದ್ದಳು. ಯಾವತ್ತೂ ಒಬ್ಬಳೇ ಇದ್ದು ಅಭ್ಯಾಸವಿಲ್ಲದ್ದರಿಂದ ಗಾಬರಿಗೊಂಡು ಅಮ್ಮನಿಗೆ ಫೋನು ಮಾಡಿದಳು. ಆದರೆ ತಮ್ಮನಿಗೆ ಪರೀಕ್ಷೆ ನಡೆಯುತ್ತಿದ್ದು ಅಲ್ಲಿಂದ ಯಾರೂ ಬರುವ ಸಾಧ್ಯತೆಗಳಿರಲಿಲ್ಲ. ಹೇಗೋ ಮನಸ್ಸು ಗಟ್ಟಿಮಾಡಿಕೊಂಡು ಗಂಡನನ್ನು ಬೀಳ್ಕೊಟ್ಟಿದ್ದಳು. ದಿನ ಹೇಗೋ ಕಳೆದಿತ್ತು. ರಾತ್ರಿಯಾದಂತೆ ಮನಸ್ಸಿನ ತಳಮಳ ಹೆಚ್ಚಾದಾಗ ಪ್ರಕಾಶನ ಜೊತೆ ಸ್ವಲ್ಪ ಹೊತ್ತು ಮಾತಾಡಿ ಅಮ್ಮನ ಹತ್ತಿರ ಮಾತನಾಡಿದರೂ ಒತ್ತಡ ಕಡಿಮೆಯಾಗದೇ ಹಾಸಿಗೆಯಲ್ಲಿ ಅತ್ತಿಂದಿತ್ತ ಹೊರಳಾಡುತ್ತ ನಿದ್ರೆ ಬಂದಾಗ ಆಗಲೇ ಬೆಳಗಿನ ಜಾವ!. ಮತ್ತೆ ಎಚ್ಚರವಾಗಿದ್ದು ಕೆಲಸದ ಸಿದ್ದಮ್ಮ ಬಾಗಿಲು ತಟ್ಟಿದಾಗ ಗಡಿಬಿಡಿಯಲ್ಲಿ ಎದ್ದು ಸಮಯ ನೋಡಿದಾಗ ಆಗಲೆ ೯ ಗಂಟೆಯಾಗಿತ್ತು. ಬಾಗಿಲು ತೆಗೆದ ತಕ್ಷಣ ಒಳಬಂದ ಸಿದ್ದಮ್ಮ “ಅಮ್ಮಾವ್ರೆ ವಿಷಯ ಗೊತ್ತಾಯ್ತಾ? ಎದುರುಮನೆ ಮುಕುಂದರಾಯರು ಹೋಗಿ ಬಿಟ್ಟರಂತೆ, ಹಾರ್ಟ ಅಟ್ಯಾಕಂತೆ ಪಾಪ, ಡಾಕ್ಟರ್ ಬರುವುದರಲ್ಲಿ ಜೀವ ಹೋಗಿಬಿಟ್ಟಿತ್ತಂತೆ. ಮನೆಯಲ್ಲಿ ಗಿರಿಜಮ್ಮ ಮತ್ತು ಮಕ್ಳು ಅಷ್ಟೇ ಇರೋದು. ಅವರ ಮನೆಯವರೆಲ್ಲ ದಾವಣಗೇರಿಯಿಂದ ಬರಬೇಕು” ಎನ್ನುತ್ತಾ ಒಳಗೆ ನಡೆದಳು. ಸೌಮ್ಯಳಿಗೆ ಸಿಡಿಲು ಬಡಿದಂತಾಗಿ ಮಾತು ಹೊರಡದೇ ಮೌನವಾಗಿ ಸಿದ್ದಮ್ಮಳನ್ನು ದಿಟ್ಟಿಸುತ್ತ ನಿಂತುಬಿಟ್ಟಳು. ನಂತರ ಬಚ್ಚಲಿಗೆ ಹೋಗಿ ಮುಖಕ್ಕೆ ತಣ್ಣೀರು ಎರಚಿಕೊಂಡಾಗ ವಾಸ್ತವಕ್ಕೆ ಬಂದಿದ್ದಳು. ಏನೂ ಮಾಡಲೂ ತೋಚದೆ ತಕ್ಷಣ ಪ್ರಕಾಶನಿಗೆ ಫೋನು ಮಾಡಿ ವಿಷಯ ತಿಳಿಸಿದಳು. ಅವನೂ ಆತಂಕದಿಂದ ಎಲ್ಲ ವಿವರಗಳನ್ನು ಕೇಳಿಕೊಂಡು “ಪಾಪ ಮಕ್ಕಳು ಏನು ಮಾಡ್ತಾ ಇದ್ದಾರೋ ಯಾರಿಗೆ ಗೊತ್ತು? ನೀನು ಹೋಗಿ ಸ್ವಲ್ಪ ನೋಡು” ಎಂದು ಸಲಹೆ ನೀಡಿದ.

ಪಾತ್ರೆ ತೊಳೆದು ಹೊರಗೆ ಹೊರಟ ಸಿದ್ದಮ್ಮನನ್ನು ಕಳಿಸಿಕೊಟ್ಟು ಬಾಗಿಲಿಗೆ ಬೀಗ ಹಾಕಿ ಗಿರಿಜಾಳ ಮನೆಗೆ ಬಂದಾಗ ಕಂಡಿದ್ದು ನೆರೆಹೊರೆಯ ಮರ‍್ನಾಲ್ಕು ಜನ ಗಂಡಸರು ಮಾತ್ರ. ಹಾಲ್ ನಲ್ಲಿ ಜಮುಖಾನೆಯ ಮೇಲೆ ಮಲಗಿದ ದೇಹ ಮತ್ತು ಅದರ ಪಕ್ಕದಲ್ಲಿ ವೀರಾಗಿಣಿಯಂತೆ ಗೋಡೆಗೆ ಒರಗಿ ಕುಳಿತ ಗಿರಿಜಕ್ಕ. ಮಕ್ಕಳಿಬ್ಬರೂ ಅತ್ತು ಅತ್ತು ಸುಸ್ತಾಗಿ ರೂಮಿನಲ್ಲಿ ಕುಳಿತಿದ್ದರು. ರಾತ್ರಿಯೆಲ್ಲ ಅತ್ತು ಕೆಂಪಾಗಾಗಿದ್ದ ಕಣ್ಣು, ಕೆದರಿದ ಕೂದಲು ನಿಸ್ತೇಜ ಮುಖ. ಸುತ್ತಲಿನ ಯಾವುದೇ ಪರಿವೆ ಇಲ್ಲದಂತೆ ಕುಳಿತ ಗಿರಿಜಾಳನ್ನು ನೋಡಿ ಸೌಮ್ಯಾಳಿಗೆ ದುಃಖ ಉಮ್ಮಳಿಸಿ ಬಂತು. ನಿಧಾನಕ್ಕೆ ಹೋಗಿ ಅವಳ ಪಕ್ಕದಲ್ಲಿ ಕುಳಿತು ಅವಳ ಕೈಯ್ಯನ್ನು ತನ್ನ ಕೈಯ್ಯಲ್ಲಿ ತೆಗೆದುಕೊಂಡು ಸವರಿದಳು. ಅವಳ ಸ್ಥಿತಿಯನ್ನು ನೋಡುತ್ತ ಬಾಯಿಯಿಂದ ಮಾತು ಹೊರಡದೇ ಏನು ಮಾಡಲೂ ತೋಚದೇ ಅವಳ ದೃಷ್ಟಿಯನ್ನು ಅನುಸರಿಸಿ ಬಾಗಿಲ ಕಡೆಗೆ ನೋಡುತ್ತ ಸುಮ್ಮನೆ ಕುಳಿತ ಸೌಮ್ಯಳಿಗೆ ಗಂಟಲುಬ್ಬಿ ಬಂದಿತ್ತು. ಹಾಗೆಯೇ ಎಷ್ಟೋ ಹೊತ್ತು ಕುಳಿತಿದ್ದಳು. ಅರಿವಿಗೆ ಬಂದಾಗ ಸಮಯ ಜಾರಿತ್ತು.

ನಂತರ ಕೇಳಿದ್ದು ವಾಹನಗಳು ನಿಂತ ಶಬ್ದ. ಜೋರಾಗಿ ಅಳುತ್ತ ಬಾಗಿಲಿನಿಂದ ಪ್ರವೇಶಿಸಿದ್ದರು ಗಿರಿಜಾಳ ಅಮ್ಮ ಮತ್ತು ಅಣ್ಣ. ಅಷ್ಟೊತ್ತಿನತನಕ ಜೀವಂತ ಶವದಂತೆ ಕುಳಿತಿದ್ದ ಗಿರಿಜಳಿಗೆ ತಮ್ಮ ತಾಯಿಯನ್ನು ನೋಡಿದ ಕೂಡಲೆ ಅವಳ ಅಳುವಿನ ಕಟ್ಟೆಯೊಡೆದಿತ್ತು. ಎರಡೂ ಕೈಗಳಿಂದ ತಾಯಿಯನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದ್ದಳು. ಕ್ಷಣಾರ್ಧದಲ್ಲಿ ಸಂಪೂರ್ಣ ಸನ್ನಿವೇಶ ಬದಲಾಗಿತ್ತು. ಗಿರಿಜಕ್ಕನನ್ನು ನೋಡುತ್ತಿದ್ದ ಸೌಮ್ಯಳ ಗಮನಕ್ಕೆ ಬಂದದ್ದು ತಾನು ಇನ್ನೂ ಹಿಡಿದುಕೊಂಡ ಕೈ!! ಗೊಂದಲದಲ್ಲಿ ತಾನು ಹಿಡಿದು ಕೊಂಡ ಕೈ ಮುಕುಂದರಾಯರದು ಎಂದು ಗಮನಕ್ಕೆ ಬಂದ ತಕ್ಷಣ ಮಿಂಚಿನಂತೆ ಕೈ ಹಿಂದಕ್ಕೆಳೆದುಕೊಂಡಳು. ಅಂದರೆ ತಾನು ಇಷ್ಟೊತ್ತು ಹಿಡಿದುಕೊಂಡು ಕುಳಿತಿದ್ದು ಸತ್ತ ಮುಕುಂದರಾಯರ ಕೈ!!!! ಮೈ ಮರಗಟ್ಟಿದಂತೆನಿಸತೊಡಗಿ ಕಣ್ಣ ಮುಂದೆ ಕತ್ತಲು ಕವಿಯಿತು. ಅಳುವ ಧ್ವನಿ ಪಾತಾಳದಿಂದ ಬಂದಂತೆ ಎನಿಸುತ್ತಿತ್ತು. ಹಾಗೆ ಸಾವಕಾಶವಾಗಿ ಸರಿದು ದೂರದ ಗೋಡೆಗೆ ತಾಗಿ ಕುಳಿತುಕೊಂಡಿದ್ದಳು. ಯಾರೋ ಯಾರೋ ಸಂಬಂಧಿಗಳು ಬಂದರು.

ಅಂತಿಮ ಸಂಸ್ಕಾರಕ್ಕಾಗಿ ದೇಹವನ್ನು ಹತ್ತಿರದಲ್ಲಿಯೆ ಇದ್ದ ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿ ಹೊರಟಾಗ ಮಧ್ಯಾನ್ಹವಾಗಿತ್ತು. ಶವವನ್ನು ಹೊತ್ತ ವಾಹನ ಹೊರಟ ಮೇಲೆ ಮನೆಗೆ ಬಂದ ಸೌಮ್ಯ ನೇರವಾಗಿ ಬಚ್ಚಲಿಗೆ ಹೋಗಿದ್ದಳು. ಯಾವತ್ತೂ ಇಂಥ ಪ್ರಸಂಗವನ್ನು ಹತ್ತಿರದಿಂದ ನೋಡಿರದ ಸೌಮ್ಯಳಿಗೆ ಮೈ ಮನಸ್ಸುಗಳು ಮರಗಟ್ಟಿದ್ದವು. ಪದೇ ಪದೇ ನೆನಪಿಗೆ ಬರುತ್ತಾ ಇದ್ದುದು ಮುಕುಂದರಾಯರ ಕೈ. ಎಷ್ಟು ಸೋಪು ಹಚ್ಚಿ ತೊಳೆದರೂ ಮನಸ್ಸಿಗೆ ಸಮಾಧಾನವಾಗಿರಲಿಲ್ಲ. ಮನಸ್ಸಿನ ಗೊಂದಲ ಹೆಚ್ಚಾಗುತ್ತ ಹೋಗಿತ್ತು. ಇದು ಮುಕುಂದರಾಯನ ಅತೃಪ್ತ ಆತ್ಮ ನಡೆಸಿದ ಹುಡುಗಾಟ ಎನಿಸತೊಡಗಿತ್ತು. ಕಾಡುತ್ತಿದ್ದ ಕಣ್ಣುಗಳ ಜೊತೆಗೆ ಕೈ ಸೇರಿಕೊಂಡಿತ್ತು. ನಿಜವಾಗಿ ಆತ್ಮವೇ ಆಗಿದ್ದರೆ?! ಕೈ ಕಾಲುಗಳಲ್ಲಿ ತಣ್ಣಗೆ ನಡುಕ ಪ್ರಾರಂಭವಾಗಿತ್ತು. ಪ್ರಕಾಶನ ಅನುಪ ಸ್ಥಿತಿಯಲ್ಲೇ ಇದೆಲ್ಲ ಆಗಬೇಕಿತ್ತೇ? ರಾತ್ರಿಯಾದಂತೆ ಕಳವಳ ಹೆಚ್ಚಾಯಿತು. ಮನಸ್ಸು ತಾಳದೇ ಪ್ರಕಾಶನಿಗೆ ನಡೆದ ಸಂಗತಿಯನ್ನು ಹೇಳುವಾಗ ದುಃಖ ಉಕ್ಕಿ ಬಂದು ಗಂಟಲು ಕಟ್ಟಿತ್ತು. ಮೊದಲಿಗೆ ಶವದ ಸ್ಪರ್ಶ ತಿಳಿಯದ ಅವಳ ಬೆಪ್ಪುತನಕ್ಕೆ ಸಿಟ್ಟುಬಂದರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಪ್ರಕಾಶ ಅವಳಿಗೆ ಸಮಾಧಾನ ಪಡಿಸತೊಡಗಿದ.

ಸುಮಾರು ಹೊತ್ತು ಅವನ ಮಾತುಗಳನ್ನು ಕೇಳುತ್ತ ಕೇಳುತ್ತ ಸೌಮ್ಯಳ ಅಳು ಹತೋಟಿಗೆ ಬಂದಿತ್ತು. “ಫೋನ ಬಂದ್ ಮಾಡದೇ ಹಾಗೆ ಇಟ್ಟಿರುತ್ತೇನೆ. ನೀನು ಯೋಚನೆ ಮಾಡದೇ ಮಲಗು” ಎಂದು ಪ್ರಕಾಶ ಹೇಳಿದಾಗ ಸ್ಪೀಕರ್ ಆನ್ ಮಾಡಿ ಮಲಗಿದಳು. ದಣಿದ ಮನಸ್ಸು ನಿದ್ರೆಗೆ ಜಾರಿದ್ದು ಗೊತ್ತಾಗಲಿಲ್ಲ. ಸೌಮ್ಯಾಳ ಧ್ವನಿ ನಿಂತಾದ ಮೇಲೆ ಪ್ರಕಾಶ ನಿಧಾನವಾಗಿ ದಿಂಬಿನ ಮೆಲೆ ಒರಗಿದ. ಸೌಮ್ಯಳನ್ನು ಕಾಡಿದ ಕೈ ಈಗ ಪ್ರಕಾಶನನ್ನು ಕಾಡತೊಡಗಿತ್ತು.

-ಪ್ರೊ. ರಾಜನಂದಾ ಘಾರ್ಗಿ
ಬೆಳಗಾವಿ

4 thoughts on “ಕಾಡಿದ ಕೈ

Comments are closed.

Don`t copy text!