ಉಚಿತ ಶವಸಂಸ್ಕಾರ ಕಾಯಕಯೋಗಿ ವೀರಬಾಹು..

ಉಚಿತ ಶವಸಂಸ್ಕಾರ ಕಾಯಕಯೋಗಿ ವೀರಬಾಹು..

(ಸಾಲುಮರದ ವೃಕ್ಷ ರತ್ನ ಅಶೋಕಣ್ಣ ಅವರ ಮತ್ತಷ್ಟು ಸೇವೆಯ ಪರಿಚಯಾತ್ಮಕ ಲೇಖನ

ರಸ್ತೆಬದಿಯಲ್ಲಿಯೇ ದುರ್ಮರಣವನ್ನಪ್ಪಿ ಯಾರೆಂದು ಗುರುತಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ ಶವಗಳ ಸಂಸ್ಕಾರಕ್ಕೆ ದಿಕ್ಕು ದೆಸೆಯಿಲ್ಲದಿದ್ದಾಗ ಪೋಲಿಸ ಇಲಾಖೆಯ ಅನುಮತಿಯೊಂದಿಗೆ ತಾವೇ ಖುದ್ದಾಗಿ ಶವಗಳನ್ನು ತಂದು ಶವಸಂಸ್ಕಾರ ಮಾಡಿದರು. ಕೊನೆಗೆ ಅವರು ಬಿರ್ಲಾ ಗಾರ್ಮೆಂಟ್ಸಿನ ಕಾರ್ಮಿಕರು ಎಂದು ಪತ್ತೆಮಾಡಲಾಯಿತು. ಅದರ ಮಾಲೀಕರು ಹಾಗೂ ಶವಗಳ ಕುಟುಂಬಸ್ಥರು ಶವಸಂಸ್ಕಾರ ಮಾಡಿದವರ ಬಳಿ ಬಂದು ಕಣ್ಣೀರಿಡುತ್ತಾ ತೆರಳಿದರು. ಬೀದಿಯಲ್ಲೇ ಶವವಾಗಿ ಬಿದ್ದ ತಮ್ಮ ಮಕ್ಕಳಿಗೆ ಶವಸಂಸ್ಕಾರ ಮಾಡಿ ಪುಣ್ಯಕಟ್ಟಿಕೊಂಡವರಿಗೆ ಧನ್ಯವಾದ ಹೇಳುತ್ತಾ ಒಂದು ಲಕ್ಷರೂ ನೀಡಲು ಮುಂದಾದಾಗ ನಯವಾಗಿಯೇ ಮಾನವೀಯತೆಗೆ ಬೆಲೆಕಟ್ಟಬೇಡಿ ಎಂದು ಹೇಳಿಕಳಿಸಿ ಅವರ ಕುಟುಂಬಸ್ಥರಿಗೆ ದೈರ್ಯವನ್ನೂ ಹೇಳಿ ಸಮಾಧಾನ ಪಡಿಸಿ ಕಳಿಸಿದರು. ಈ ಘಟನೆ ನಡೆದದ್ದು ಚೆನ್ನರಾಯಪಟ್ಟಣದಲ್ಲಿ. ಶವಸಂಸ್ಕಾರಕ್ಕೆ ಜಾಗದ ಕೊರತೆಯಷ್ಟೇ ಅಲ್ಲ ಹಣದ ಅಗತ್ಯವೂ ಇರುವ ಈ ಕಾಲಘಟ್ಟದಲ್ಲಿ ಯಾರದೋ ಶವಗಳನ್ನು ಉಚಿತವಾಗಿ ಶವಸಂಸ್ಕಾರ ಮಾಡುವವರೂ ಇದ್ದಾರಾ ಎಂದು ನಂಬಲು ಕಷ್ಟವಾದರೆ ಕುದ್ದಾಗಿ ಕಣ್ಣಾರೆ ನೋಡಲು ಚೆನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿರುವ ಗೂರನಹಳ್ಳಿಯ ಹರೀಶ್ಚಂದ್ರ ಶಾಂತಿಧಾಮಕ್ಕೆ ಬೇಟಿ ನೀಡಬಹುದು.


ಚೆನ್ನರಾಯಪಟ್ಟಣದ ಸುತ್ತಲಿನ ಹಲವು ಪ್ರದೇಶಗಳಲ್ಲಿ ಹಲವು ಬಾರಿ ಅನಾಥ ಶವವಾಗಿ ಬಿದ್ದವರನ್ನೆಲ್ಲ ಎತ್ತಿಕೊಂಡುಬಂದು ಶವಸಂಸ್ಕಾರ ಮಾಡಿದ್ದ ವೀರಬಾಹುಗಳಿಬ್ಬರು ಈಗಲೂ ತಮ್ಮ ಕಾಯಕ ಎಂದಿನಂತೆ ಮುಂದುವರಿಸಿದ್ದಾರೆ.ಉಚಿತವಾಗಿ ಒಂದು ಲೋಟ ಶುದ್ದ ಕುಡಿಯುವ ನೀರು ಸಹ ಸಿಗುವ ಸಾಧ್ಯತೆ ಕಡಿಮೆಯಿರುವ ಕಾಲಘಟ್ಟದಲ್ಲಿ ಬದುಕುತ್ತಿರುವ ಇಂದು ಶವಸಂಸ್ಕಾರಕ್ಕೆ ಆರಡಿ ಮೂರಡಿ ಜಾಗದ ಭಾಗ್ಯವಿಲ್ಲದವರಿಗೆ ಯಾವುದೇ ಧರ್ಮ ಜಾತಿ ಲೆಕ್ಕಾಚಾರವಿಲ್ಲದೆಯೇ ಉಚಿತ ಶವಸಂಸ್ಕಾರ ಭಾಗ್ಯ ದೊರಕಿಸಲಾಗುವ ಶಾಂತಿಧಾಮವೊಂದನ್ನು ಅವರು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಉಚಿತ ಶವಸಂಸ್ಕಾರ ಕಾಯಕದ ಜೊತೆಗೆ ಇಡೀ ರುದ್ರಭೂಮಿಯನ್ನು ಹಸಿರು ರುದ್ರಭೂಮಿಯನ್ನಾಗಿಸಿದ್ದು ಇವರ ವಿಶೇಷತೆಯಾಗಿದೆ. ಇಲ್ಲಿ ವೈವಿದ್ಯಮಯ ಗಿಡಮರಗಳು ,ಔಷದಿಗಳ ಸಸ್ಯವನವೂ ಇದೆ. ಇಲ್ಲಿ ಮಕ್ಕಳು ಸಹ ಹೆದರದೆ ಕ್ರಿಕೆಟ್ ಮತ್ತಿತರ ಆಟ ಆಡುತ್ತಾರೆ.ಅಲ್ಲದೇ ಶಾಲಾ ಕಾಲೇಜಿನ ಮಕ್ಕಳು ಚ,ನಾ ಅಶೋಕ ಅವರ ನೇತೃತ್ವದಲ್ಲಿ ಇಲ್ಲಿ ಬಂದು ಅಗೀಗ ಸ್ವಚ್ಚತಾ ಕಾರ್ಯದಲ್ಲೂ ಬಾಗಿಯಾಗುತ್ತಾರೆ. ರುದ್ರಭೂಮಿಯೆಂದರೆ ನಕಾರಾತ್ಮಕ ಭಾವನೆಗಳು ,ದೆವ್ವ ಭೂತಗಳ ಆವಾಸ ಸ್ಥಾನಗಳೆಂಬ ನಂಬಿಕೆಯೇ ಬೇರೂರಿರುವಾಗ ಅಲ್ಲಿನ ಜನರೂ ಅದ್ಯಾವ ಬಾವನೆಯೂ ಇಲ್ಲದೆ ಇಲ್ಲಿ ಬಂದು ವಾಯುವಿಹಾರ ಮಾಡುತ್ತಾರೆ. ಅಷ್ಟರಮಟ್ಟಿಗೆ ಜನರಲ್ಲಿ ರುದ್ರಭೂಮಿ ಹಾಗು ಶವಗಳ ಕುರಿತಾದ ಪೂರ್ವಾಗ್ರಹಗಳ ಕುರಿತು ಅರಿವು ಮೂಡಿಸಿ ಶಾಂತಿಧಾಮವನ್ನಾಗಿಸಿದ್ದಾರೆ ಇಬ್ಬರು ಕಾಯಕಯೋಗಿ ವೀರಬಾಹುಗಳು.
ಅವರೇ ರುದ್ರಭೂಮಿಯನ್ನು ಉಚಿತ ಶಾಂತಿಧಾಮವನ್ನಾಗಿಸಿದ ನಿಸ್ವಾರ್ಥ ಕಾಯಕಯೋಗಿಗಳಾದ ಚ.ನಾ ಅಶೊಕ ಮತ್ತು ರತ್ನಮ್ಮ ಲಕ್ಷö್ಮಯ್ಯ ದಂಪತಿಗಳು .ಸುಮಾರು ಮೂರು ಎಕರೆಯ ಹಸಿರುಧಾಮವದು. ಅಲ್ಲಿ ಅಪರೂಪದ ಮಧುನಾಶಿನಿ, ಕಾಮಕಸ್ತೂರಿ,ಚಕ್ರಮುನಿ,ಅಮೃತಬಳ್ಳಿ,ಲೋಳೆಸರ,ನೋನಿ, ವಿವಿಧ ದಾಸವಾಳ,ಬಾಹ್ಮಿ, ಲಾವಂಚ,ಮೆಹಂದಿ ಮತ್ತಿತರ ವಿವಿಧ ವನೌಷದ ಗಿಡ ಮರ ಹೂ ಬಳ್ಳಿಗಳನ್ನು ಸಹ ಬೆಳೆಸಿದ್ದು ಸ್ಮಶಾನದ ಮರಗಳಲ್ಲಿ ದೆವ್ವಗಳು ವಾಸಿಸುತ್ತವೆ ಎನ್ನುವ ಮೂಢಜನಗಳ ಮಾತಿಗೆ ತಲೆಕೆಡಿಸಿಕೊಳ್ಳದೆ ತಮ್ಮದೆ ಪರಿಕಲ್ಪನೆಯ ಸ್ಮಶಾನ ನಿರ್ಮಿಸಿ ನೈಜ ವೀರಬಾಹುಗಳಾಗಿ ಉಚಿತ ಶವಸಂಸ್ಕಾರ ಕಾಯಕಕ್ಕೆ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದಾರೆ.
ಯಾರದೋ ಶವಗಳನ್ನು ಸಂಸ್ಕಾರ ಮಾಡಲು ಜನಗಳ ವಿರೋಧ
ಊರ ಹೊರಗೆ ಸತ್ತವರನ್ನು ಊರಿನ ಒಳಗೆ ತಂದು ಶವಸಂಸ್ಕಾರ ಮಾಡುವಂತಿಲ್ಲ ಎನ್ನುವ ಅಲ್ಲಿನ ಜನರ ಅಘೋಷಿತ ನಿಯಮವಿದ್ದ ಆ ಊರಿನಲ್ಲಿ ಯಾರದೋ ಶವಗಳನ್ನು ತಂದು ಸಂಸ್ಕಾರ ಮಾಡಲು ಜನ ಬಿಡುತ್ತಾರೆಯೇ ? ಮನೆಮಂದಿಯೆಲ್ಲ ಬುದ್ದಿಹೇಳಿದರೂ , ಜನಗಳೆಲ್ಲಾ ಹುಚ್ಚಾ ಎಂದು ಬೈದು ಹೊಡೆದು ಓಡಿಸಲು ಮುಂದಾದರೂ ಶವಸಂಸ್ಕಾರ ಮಾಡಿ ಅಲ್ಲೇ ಉಳಿಯುತ್ತಿದ್ದವರು ಅಶೋಕಣ್ಣ ಮತ್ತು ಲಕ್ಷö್ಮಯ್ಯ . ಶವಸಂಸ್ಕಾರಕ್ಕೂ ಗತಿಯಿಲ್ಲದವರ ಪರವಾಗಿ ನಿಂತು ಅಂತವರಿಗಾಗಿ ಸುಮಾರು 20 ವರ್ಷಗಳ ಹಿಂದೆ ಸುತ್ತೆಲ್ಲ ಇದ್ದಬದ್ದ ಸರ್ಕಾರಿ ಜಮೀನಿಗೆಲ್ಲ ಬೇಲಿಹಾಕಿಕೊಂಡು ತೆಂಗಿನ ತೋಟಮಾಡಿಕೊಳ್ಳಲು ಹೊರಟಿದ್ದವರನ್ನೆಲ್ಲ ಎದುರುಹಾಕಿಕೊಂಡು ಸಾರ್ವಜನಿಕ ಉಚಿತ ಸ್ಮಶಾನ ನಿರ್ಮಿಸಲೇಬೇಕೆಂದು ಪಣತೊಟ್ಟವರು ಚ.ನಾ ಅಶೋಕರವರು.
ವೃಕ್ಷದಾಸೋಹಿ ಅಶೋಕಣ್ಣರವರೇ ಈ ಸ್ಮಶಾನದ ವೀರಬಾಹು
ಹೌದು, ಹಾಸನ ಜಿಲ್ಲೆಯಾದ್ಯಾಂತ ಲಕ್ಷಾಂತರ ಗಿಡಮರ ಬೆಳೆಸಿದ ವೃಕ್ಷದಾಸೋಹಿ ‘ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ರಾಷ್ಟ್ರೀಯ ಪರಿಸರ ಪ್ರಶಸ್ತಿ’ ಪುರಸ್ಕೃತರೂ ಆಗಿರುವ ಚ.ನಾ ಅಶೊಕ ಅವರು. ಕೇವಲ ಗಿಡಮರ ಬೆಳೆಸಲು ಮಾತ್ರ ತಮ್ಮನ್ನು ತೊಡಗಿಸಿಕೊಂಡವರಲ್ಲ. ಹಲವಾರು ಸಾಮಾಜಿಕ ಕೆಲಸಗಳಿಗೆ ಜೀವನವನ್ನೇ ಮುಡಿಪಾಗಿಟ್ಟವರು. ಉಚಿತ ಶವಸಂಸ್ಕಾರ ಸೇವೆಯು ಅದರಲ್ಲಿ ಒಂದು ವಿಶಿಷ್ಟ ನಿಸ್ವಾರ್ಥ ಸೇವೆಯಾಗಿದೆ. ಅವರ ಹಲವು ಸಾಮಾಜಿಕ ಸೇವೆಗಳನ್ನು ನೋಡಿ ಎಲ್ಲ ರಾಜಕೀಯ ಗಿಮಿಕ್ ಮಾಡಲು ಹೊರಟಿರಬೇಕು ಎಂದು ಆಡಿಕೊಂಡವರೂ ಇದ್ದಾರೆ.ರಾಜಕಾರಣಿಗಳು ತಮಗೆ ಪ್ರತಿಸ್ಪರ್ಧಿಯಾಗಬಹುದೇನೋ ಎಂಬಂತೆ ಇವರ ಸೇವೆಯನ್ನು ಅನುಮಾನಿಸಿದ್ದೂ ಉಂಟು ,ಬೈದವರೂ ಇದ್ದಾರೆಂದು ಸ್ಥಳೀಯರು ಹೇಳುತ್ತಾರೆ.


ಸತ್ಯಹರೀಶ್ಚಂದ್ರ ಶಾಂತಿಧಾಮ
ಅವರ ಮಿತ್ರವರ್ಗವೇ ಹೇಳುವಂತೆ ಈ ಜಾಗವನ್ನು ತಮ್ಮದಾಗಿಸಿಕೊಳ್ಳಲು ಹಲವರು ಇನ್ನಿಲ್ಲದ ಪ್ರಯತ್ನ ನಡೆಸಿದಾಗ ಇಡೀ ತಾಲ್ಲೂಕಿನ ಜನ ಸುಮ್ಮನೆ ಕುಳಿತರೂ ಅಶೋಕಣ್ಣ ಸುಮ್ಮನೆ ಕೂರಲಿಲ್ಲ. ರಾತ್ರಿ ಹಗಲು ಅಲ್ಲಿಯೇ ಉಳಿದು ಗೆಳೆಯರ ನೆರವಿನೊಂದಿಗೆ ಬೇಲಿ ಹಾಕಿ ಶವಸಂಸ್ಕಾರ ಕಾಯಕ ಮಾಡುತ್ತಿದ್ದ ಲಕ್ಷö್ಮಯ್ಯ ಅವರನ್ನು ಜೊತೆಯಿರಿಸಿಕೊಂಡು ಉಚಿತ ಶವಸಂಸ್ಕಾರ ಆರಂಬಿಸಿದರು. ಲಕ್ಷö್ಮಯ್ಯ ದಂಪತಿಗಳು ಅಶೋಕಣ್ಣ ಹೇಳಿದಂತೆ ನಿಷ್ಟೆಯಿಂದಲೇ ಶವಸಂಸ್ಕಾರ ಕಾಯಕದಲ್ಲಿ ತೊಡಗಿಕೊಂಡು ಮುಂದೆ ಎಲ್ಲರೂ ಸೈ ಎನ್ನುವಂತೆ ನಿಸ್ವಾರ್ಥವಾಗಿ ಕಾರ್ಯನಿರತರಾಗಿ ಇಂದು ನಮ್ಮ ಮುಂದಿನ ಪೀಳಿಗೆಗೂ ಮಾದರಿಯಾಗಬಲ್ಲ ಸುಮಾರು ಮೂರು ಎಕರೆಯ ವಿಶಾಲವಾದ ಹಸಿರುವನದ ‘’ ಸತ್ಯಹರೀಶ್ಚಂದ್ರ ಶಾಂತಿಧಾಮ ‘’ ಎನ್ನುವ ಹೆಸರಿನಲ್ಲಿ ಸಾವಿನಾಚೆಯೂ ಸರ್ವಧರ್ಮ ಸಮನ್ವಯ ಸಾರುವ ರುದ್ರಭೂಮಿ ಉಳಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಇಲ್ಲಿನ ನಿಷ್ಟಾವಂತ ಕಾಯಕಯೋಗಿ ಲಕ್ಷಮಯ್ಯ ಮತ್ತು ರತ್ನಮ್ಮ ದಂಪತಿಗಳು. ಇಬ್ಬರು ಮಕ್ಕಳ ಜೊತೆಗೆ ಕುಟುಂಬ ಸಮೇತ ಆ ಶಾಂತಿಧಾಮದಲ್ಲಿಯೇ ವಾಸಿಸುತ್ತ ಶವಸಂಸ್ಕಾರ ಕಾಯಕ ಮಾಡುತ್ತ ಜೀವನ ಸೆವೆಸುತ್ತಿದ್ದಾರೆ.ಸರಳ ಶವಸಂಸ್ಕಾರ ಪದ್ದತಿ ಇಲ್ಲಿ ಅನುಸರಿಸಲಾಗುತ್ತಿದ್ದೂ ಇಲ್ಲಿ ಮಣ್ಣು ಮಾಡಲು ಬಯಸುವವರಿಗೆಲ್ಲರಿಗೂ ಸಮಾನ ಅವಕಾಶವಿದೆ. ಶವಗಳ ಕುರಿತಾದ ಮೂಢನಂಬಿಕೆ ಹೊಡೆದೋಡಿಸಿ ಜನಜಾಗೃತಿ ಮೂಡಿಸಲು ಸಹ ಶ್ರಮಿಸುತ್ತಿದ್ದೇವೆನ್ನುತಾರೆ ಅವರ ಮಿತ್ರಬಳಗದ ನೀಲಸ್ವಾಮಿ ಮತ್ತು ಚಂದ್ರು ಅವರು.
ಕೊನೆಗೂ ನೆರವಿಗೆ ನಿಂತ ಗೆಳೆಯರು ಹಾಗು ಸಂಘಸಂಸ್ಥೆಗಳು
ಛಲಬಿಡದ ಇವರ ನಿಸ್ವಾರ್ಥ ಸೇವೆ ಮನಗಂಡು ಕೆಲವು ಗೆಳೆಯರು ಇವರ ಕಾಯಕಕ್ಕೆ ನೆರವಾದರು. ಹಲವು ಸಂಘಸಂಸ್ಥೆಗಳು ಬೆನ್ನುತಟ್ಟಿ ಇಲ್ಲಿನ ಶಾಂತಿಧಾಮದ ಅಭಿವೃದ್ದಿಗೆ ಜೊತೆಯಾಗಿದ್ದಾರೆ. ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ದಿ ಸಂಘದಡಿ ಶ್ರೀ ವೀರೇಂದ್ರ ಹೆಗಡೆಯವರು ಸಹ ಇವರ ಸೇವೆ ಕೇಳಿ ಇಲ್ಲಿ ಶವವನ್ನು ಸುಡುಲು ಬೇಕಾದ ಸರಳಯಂತ್ರ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸ್ಥಳೀಯ ಪುರಸಭೆಯೂ ನೆರವಿಗೆ ಬಂದಿದೆ. ಸ್ವತಃ ಅಶೋಕಣ್ಣನವರೇ ನಿಂತು ಮಿಕ್ಕೆಲ್ಲ ಏರ್ಪಾಟು ಮುಂದುವರಿಸಿದ್ದರ ಫಲವಾಗಿ ಇಂದು ನೂರಾರು ನಿರ್ಗತಿಕರ, ಅನಾಥಶವಗಳ ಪಾಲಿಗೆ ಇದೇ ಭೂಸ್ವರ್ಗವಾಗಿದೆ.
ಸರ್ವಜನಾಂಗದ ಹಸಿರು ಶಾಂತಿಧಾಮವನ್ನಾಗಿಸಿ ಸತ್ಯಹರೀಶ್ಚಂದ್ರ ಹಾಗು ಸ್ಮಶಾನ ಕಾಯುವ ಶಿವನ ಮೂರ್ತಿಯನ್ನು ಅಲ್ಲಿ ನಿರ್ಮಿಸಿ ಶವಗಳ ಕುರಿತಾದ ಮೂಢನಂಬಿಕೆಗಳಿಲ್ಲದ ಭಯಮುಕ್ತ ಜನತಾ ಉದ್ಯಾನವನವನ್ನಾಗಿಸುವ ಕನಸನ್ನು ಹೊತ್ತಿದ್ದಾರೆ ಅಶೋಕಣ್ಣ. ‘’ಸತ್ತ ನಂತರ ಎಲ್ಲರ ದೇಹವೂ ನಶ್ವರ. ನಾವು ಮಾಡಿದ ನಿಸ್ವಾರ್ಥ ಸೇವೆ ಮಾತ್ರ ಉಳಿಯುತ್ತದೆ. ಮುಂದಿನ ತಲೆಮಾರುಗಳು ಸಹ ನಮ್ಮ ಸೇವೆ ನೆನೆಸಿದರೆ ಅದೇ ನಮ್ಮ ಪುನರ್ ಜನ್ಮವೆನ್ನಬಹುದು’’ ಎನ್ನುತ್ತಾರೆ ಅಶೋಕಣ್ಣ.

ರವಿರಾಜ್ ಸಾಗರ್ .ಮಂಡಗಳಲೆ
ಹವ್ಯಾಸಿ ಬರಹಗಾರರು. ಶಿಕ್ಷಕರು.

Don`t copy text!