ನೀರೋಲಿ
ಈಗಿನ ಮಕ್ಕಳಿಗಂತು ಇದು ಕಣ್ ಬಿಟಗೊಂಡ ಬಾಯಿ ತಕ್ಕೊಂಡ ಕೇಳುವಂತಹ ಹೊಸಶಬ್ಧ. ಮತ್ತ ಅದು ಏನು ಅಂತ ಗೊತರಲಿಕ್ಕೂ ಇಲ್ಲ. ನೀರಿನಿಂದ ಒಲೆ ಹೆಂಗ ಅಂತ ಕೇಳಿದರು ಕೇಳಿಯಾವು ಈ ಇಂಜನೀಯರ ತಲೆಗಳು. ನೀರು+ಉರಿ =ನಿರೋಲಿ. ಅಂದರೆ ನೀರನ್ನು ಒಲೆಯ ಮೇಲೆ ಹಂಡೆ ಇಟ್ಟು ಕಾಯಿಸೋದು.
ಆದರ ನೀರೋಲಿ ಬಗ್ಗೆ ಬರೀಬೇಕು ಅಂತ ನನಗ ಯಾಕ ಅನಿಸಿತು ಅಂದ್ರ ಮೊನ್ನೆ ನಾನು ಒಂದು ಹಳ್ಳಿಗೆ ಹೋಗಿದ್ದೆ. ನೂರಾರು ಎಕರೆ ತೋಟ, ಗದ್ದೆ ಇರುವ ಮನೆ. ಹತ್ತಾರು ದನಕರು ಸಾಕಿ ಹಾಲು ಕರೆದು ಡೈರಿಗೆ ಹಾಲು ಹಾಕುವದರಲ್ಲಿ ಒಬ್ಬರು ನಿರತರಾದರೆ, ಇನ್ನು ಕೆಲವರು ಗದ್ದೆಗೆ ಗೊಬ್ಬರ ಹಾಕಿಸುವ ಕೆಲಸದಾಗ ನಿರತರಾಗಿದ್ದರು., ಇನ್ನು ಮನಿ ಹೆಣಮಕ್ಕಳು ಬಾಗಿಲಿಗೆ ನೀರ ಹಾಕಿ ರಂಗೋಲಿ ಬಿಡತಾ, ಪೂಜೆಗೆಂದು ಹಿತ್ತಲದಾಗ ಅರಳಿದ ಹೂ ಎತ್ತೋದು ಮಾಡತಾ ಇದ್ದರು.
ಇಷ್ಟೆಲ್ಲ ಬೆಳಗಾಗೋದರಾಗ ನಾ ನೋಡಿದ ಚಟುವಟಿಕೆಗಳು. ಒಟ್ಟು ಕುಟುಂಬದ ಕೂಡಸ್ತ ಮನೆತನ. ಒಟ್ಟು ಕುಟುಂಬ ಅಂದರ ಮೊದಲಿನಂಗ ಚಿಗ ದೊಡ್ಡಪ್ಪಾ ಅಂದರ ಅಣ್ಣನ ೫-೬ ಮಕ್ಕಳು ಮತ್ತ ತಮ್ಮನ ೫-೬ ಮಕ್ಕಳ, ತಂಗಿ ಮಕ್ಕಳು ಮೊಮ್ಮಕ್ಕಳ ಒಟ್ಟಿಗೆ ಇರತಿದ್ದರು. ಜೊತೆಯಲಿ ಆ ಮನಿಯಾಗ ಮನಿ ಆಳಿಗು ಜಾಗ ಇರುತಿತ್ತು. ಪಾಲಾದನಂತರ ಈಗ ಅದು ಕರಗಿ ಇಬ್ಬರು ಅಣ್ಣ ತಮ್ಮರು ಅವರ ಮಕ್ಕಳು ಮಾತ್ರ ಒಟ್ಟಿಗಿರುವ ಸಂಸಾರ.
ನಮ್ಮ ಸಿಟಿಗಳಲ್ಲಿ ಇವು ಕೂಡ ಅಪರೂಪ ಬಿಡಿ. ಕುಟುಂಬ ಅಂದರ ಗಂಡ ಹೆಂಡತಿ ಒಂದ ಮಗು, ಎರಡಂದರ ಹೆಚ್ಚಾತು. ಮನೆಮಂದಿ ಓಡಾಟ, ಪಿಸು ಮಾತಿನಿಂದ ನನಗ ಬೇಗ ಎಚ್ಚರಾಯಿತು. ಕಣ್ಣು ಹೊಸೆಯುತ್ತ ಎದ್ದು ಬಂದ ನನಗೆ “ಬಚ್ಚಲ ಮನೀಗೆ ನಡೆ ಅಕ್ಕ ನೀರೋಲಿ ಹಾಕಿದ್ದದ. ಮುಖ ತೊಳಕೊ” ಅಂದರು ಅ ಮನೆಯ ಹೊಸ ಸೊಸೆ. ಸರಿ ಅಂತ ಬಚ್ಚಲ ಮನೆಗೆ ನಡೆದೆ. ನಮ್ಮೂರಲ್ಲಿ ಸುಮಾರು ವರ್ಷಗಳಿಂದ ಎಲ್ಲರ ಮನೆಯಲ್ಲಿ ಗೀಸರ್ ಗಳನ್ನೆ ನೋಡಿ ನೋಡಿ ಒಲೆ ಅನ್ನೋದ ಮರೆತುಹೋಗಿತ್ತು ನನಗ.
ನೀರೋಲಿ ನೋಡತಾ ಇದ್ದಂತೆ ಹಳೆಯ ನೆನಪುಗಳು ದಾಳಿ ಇಟ್ಟವು. ಚಿಕ್ಕವರಿದ್ದಾಗ ನಮ್ಮನೇಲೂ ಒಲೆ ಹಚ್ಚುತಿದ್ದರು. ಅಡಗಿ ಮಾಡಾಕ ಕಟ್ಟಿಗೆ ಒಲೆ ಆದರ ನೀರ ಕಾಸಾಕ ಬೂಸಾ ಒಲೆ. ಬೂಸಾ ತುಂಬುದು ಒಂದು ಕಲೆ. ಅವ್ವ ಒಲೆಯ ನಡುವೆ ಒಂದು ದಪ್ಪದ ಬಡಗಿ ಇಟ್ಟು ಒಲೆ ಬಾಯಿಗೆ ಒಂದ ಕಟ್ಟಿಗೆ ಇಟ್ಟು ಸುತ್ತಲು ಬೂಸಾ( ಕಟ್ಟಗಿ ಪುಡಿ) ಹಾಕಿ ಗಟ್ಟಿಯಾಗಿ ಒತ್ತತಿದ್ದರು. ನಂತರ ಸಾವಕಾಶ ಆ ಕಟ್ಟಗಿ ತೆಗಿತಿದ್ದರ. ಬೆಳಿಗ್ಗೆ ಕೆಳಗ ಕಟ್ಟಿಗೆ ಇಟ್ಟ ನೀರ ಕಾಸಾಕ ಒಲೆ ರೆಡಿ ಇರತಿತ್ತ. ಛಳಿಗಾಲದಾಗ ಎದ್ದವರ ಒಲಿಮುಂದ ಮಣಿ ಹಕ್ಕೊಂಡ ಕಾಲ ಚಾಚಿಕೊಂಡ, ಬಿಸಿಗೆ ಮೈ ಒಡ್ಡಿ ಕೂತರ ಚಹಾನು ಬೇಡಾ, ಜಳಕನು ಬೇಡಾ ಅಷ್ಟ ಅಲ್ಲ ಶಾಲೆನೂ ಬೇಡ ಅನಸತಿತ್ತ. ಆದರ ಅಪ್ಪ ಬಿಡಬೇಕಲ್ಲ.
ಕೈಕಾಲ ಕಾಸಾಕ ನಾಮುಂದ ತಾ ಮುಂದ ಅಂತ ಗುದ್ದಾಡತಿದ್ದ ಅಣ್ಣ, ಅಕ್ಕ ತಂಗಿರ ನೆನಪು ಒಂದ ಝಲಕ ಬಂದ ಮನಸ್ಸು ಬೆಚ್ಚಗಾಯಿತು. . ಧಾರವಾಡ ಈಗಿನಂಗ ಇರಲಿಲ್ಲ. ಧಾರಾಕಾರ ಸುರಿವ ಮಳೆ ಕಾರ್ಮೋಡ ಕತ್ತಲು, ಥಂಡಿ ಬಾಳ ಇರತಿತ್ತು. ಹಿಂಗಾಗಿ ಎಲ್ಲರ ಮನಿ ಒಲಿಯೊಳಗ ಸದಾ ಕೆಂಡ ಇರತಾ ಇತ್ತು.
ಒಲೆಗೆ ಮತ್ತೆ ಎರಡು ಕುಡಿಒಲೆ ಅಂತ ಇರತಿದ್ದವು. ಅಲ್ಲಿ ಸಣ್ಣ ಸಣ್ಣ ಗಡಗಿಯೊಳಗ ಬೇಳೆ ಕುದಿಲಿಕ್ಕೆ ಹಾಲ ಕಾಸಲಿಕ್ಕೆ ಇಡತಿದ್ದರು.
ಅದೇ ಈಗ ಸ್ಟೀಲ್ ನ ಮೂರ ಒಲೆ ನೋಡತಾ ಇದ್ದೇವಿ. ಅಷ್ಟ ಅಲ್ಲ ಕಟ್ಟಗಿಯಿಂದ ಬರೊ ನಿಗಿ ನಿಗಿ ಕೆಂಡ ಇದ್ದಲಿ ಒಲಿಗೆ ಹಾಕಿತಿದ್ದರು. ಹಪ್ಪಳ ಸುಡಾಕ, ಅಡಗಿ ಬಿಸಿ ಮಾಡಾಕ ಉಪಯೋಗಸತಾ ಇದ್ದರು. ಕೆಂಡದ ಮೇಲೆ ಸುಟ್ಟ ಹಪ್ಪಳದ ರುಚಿನ ರುಚಿ. ಅಗ್ಗಷ್ಟಿಕೆ ಹಾಕೊದಕ್ಕು ಕೆಂಡ ಉಪಯೋಗ ಆಗತಿತ್ತು. ಒಟ್ಟಾರೆಯಾಗಿ ಮನೆ ಸದಾ ಬೆಚ್ಚಗ ಇರತಾ ಇತ್ತು. ಅಷ್ಟೆ ಅಲ್ಲ ಒಲೆಗೆ ಶಗಣಿ ಕುಳ್ಳು ಉಪಯೋಗಸತಾ ಇದ್ದರು. ಅದರ ಹೊಗೆ ಮನೆಗೆಲ್ಲ ಹರಡಕೋತಿತ್ತ ಹಿಂಗಾಗಿ ಕ್ರಿಮಿ ಕೀಟ, ವೈರಸ್ ಸಾಯೋದರಿಂದ ಈಗಿನಂತಹ ಯಾವ ಭಯಾನಕ ರೋಗಗಳು ಇರುತಿರಲಿಲ್ಲ.
ನಲವತ್ತು ವರ್ಷ ಹಿಂದೆ ಓಡಿದ ಮನಸ್ಸನ್ನು ‘ಅಕ್ಕಾರ ಜಳಕ ಮಾಡಿಬಿಡತೀರೇನ’? ಅನ್ನೊ ದ್ವನಿ ಯಿಂದ ವಾಸ್ತವಕ್ಕೆ ಬಂದೆ. ” ಮತ್ತ ಒಲಿಗೆ ಗರಿ, ಕಾಯಿಚಿಪ್ಪ ಹಾಕೇನಿ. ಹಂಡೆದಾಗ ನೀರ ಕಾದಾವ ಹೆಂಗ ಹದಾ ಬೇಕ ಹಂಗ ನೀರ ಹಕ್ಕೋರಿ. ತಣ್ಣೀರನ ಹೌಜ ಒಳಗ ಐತಿ” ಅಂದರು. ತಾಮ್ರದ ಹಂಡೆ ಬಚ್ಚಲ ಮನಿಯಾಗ, ಒಲಿ ಹೊರಗ ಇತ್ತು. ಆಯ್ತು ನೀವೇನು ಯೋಚನೆ ಮಾಡಬ್ಯಾಡ್ರಿ ಅಂದೆ. ಅಹಾ! ಏನ ಖುಷಿ ಅಂತೀನಿ. ನೀರ ಕಾದಂಗ ನನಗ ಬೇಕಾದಷ್ಟು ತಣ್ಣೀರ ಹಾಕತಾ ಹದಗೊಳಸತಾ ಸುರಕೊಂಡದ್ದ ಸುರಕೊಂಡದ್ದ. ಹುಯ್ಯಕೋತ ಇರಬೇಕ ಅನಸತದ. ತಾಮ್ರದ ಹಂಡೆದಾಗಿನ ನೀರು ಚರ್ಮಕ್ಕು ಒಳ್ಳೇದು. ಈ ರೀತಿ ಒಲಿಯಾಗ ಕಟ್ಟಗಿ ಹಾಕಿ ಕಾಸಿದ ನೀರಿನ ಗುಣಧರ್ಮ ಬೇರೇನ ಅನಿಸದೆ ಇರಲಾರದು.
ಈಗೆಲ್ಲ ಗ್ಯಾಸನಿಂದ ಇಲ್ಲ ಕರೆಂಟನಿಂದ ಇಲ್ಲ ಸೋಲಾರಿಂದ ನೀರ ಕಾಸತೆವಲ್ಲ. ಕಾದ ನೀರ ಇಟಗೊಂಡ ಸ್ನಾನಾ ಮಾಡೋದಕ್ಕು ಕೆಳಗೆ ಉರಿ, ಮೇಲೆ ಹಂಡೆದಾಗ ಕಾಯುತ್ತಿರೋ ನೀರಿಗು ಇರೊ ವ್ಯತ್ಯಾಸ ತಿಳದಬಿಡತದ. ತಣ್ಣೀರ ಬೆರಸಕೋತ ಸುರಕೋತ ಸ್ನಾನಾ ಮಾಡೋ ಮಜಾನ ಬೇರೆ. ಎಷ್ಟ ಹಂಡೆ ಖಾಲಿ ಮಾಡಿದರು ಗೊತ್ತಾಗೊದೇ ಇಲ್ಲ. ಆನಂದನ ಆನಂದ. ಮೈ ಮನ ಹಗುರ. ಬಹಳ ವರ್ಷಗಳ ನಂತರ ಸಿಕ್ಕ ಅವಕಾಶ ನನ್ನ ತೃಪ್ತಿ ಅಪ್ಯಾಯತೆಯನ್ನು ನೀಡಿತ್ತು.
(ನೆನಪಿನಂಗಳದಿಂದ)
–ಶಾರದಾ ಕೌದಿ
ಧಾರವಾಡ
8951491838
ಬಾಲ್ಯವನ್ನೆಲ್ಲ ಮರು ನೆನಪಿಸಿದ ಲೇಖನ. ನಿಜವಾಗಲು ಆ ಸಮಯದಲ್ಲಿ ದೊಡ್ ಹಂಡೆಯಲ್ಲಿ ನೀರು ತುಂಬಿ ಬೆಳಗಿನ ಜಾವದಲ್ಲೇ ಎದ್ದು ಹೊಟ್ಟು ತುಂಬಿದ ಒಲೆಗೆ ನಮ್ಮ ತಂದೆ ತಾಯಿ ಉರಿ ಹಚ್ಚುತ್ತಿದ್ದರು…. ಸಂಜೆವರೆಗೂ ಬಿಸಿನೀರು ಸಿಗೋದು…. ನೀವು ಹೇಳಿದಂತೆ ಆ ಮಜಾನೇ ಬೇರೆ….. ರಜೆಯಲ್ಲಿ ಎಲ್ಲರೂ ತಾತನ ಮನೆ ಸೇರಿದರಂತೂ ಮುಗೀತು….. ನೀರೊಲೆ.. ಬಿಸಿ ನೀರು ತೆಗಿಯೋದು ತಣ್ಣಿರು ಹಾಕಿ ಮತ್ತೆ ಒಲೆ ಉರಿ ಜಾಸ್ತಿ ಮಾಡೋದು…. ಈಗ ಎರಡೇ ನಿಮಿಷದಲ್ಲಿ ಹಗಲಿಡೀ ಬೇಕೆಂದಾಗ ಬಿಸಿ ನೀರು ಸುಲಭವಾಗಿ ದಕ್ಕಿದರೂ ಆ ನೀರಿನ ಘಮ ಇಲ್ಲಿ ಖಂಡಿತಾ ಸಿಗುವುದಿಲ್ಲ ರಿ… ಸೂಪರ್ ಆಗಿ ಬರ್ದೀರಿ….