ಪಅವಳಿಲ್ಲ…..
ಪಿಸು ಮಾತು ಹುಸಿ ಕೋಪ
ಜೊತೆ ಪಯಣದ ತಿರುವಿನಲಿ
ಮರೆಯಾದಳು….
ನೆನಪುಗಳ ಹರುವಿಟ್ಟ
ಕಟ್ಟೆಯಲಿ ಹರಟಿ
ಹೊರಟು ನಿಂತಳು….
ಕನಸುಗಳ ಗುಡಿಸಿ ಸುತ್ತೆಲ್ಲ ಸುರಿದು
ಕಪ್ಪುಬಿಳುಪು ಚಿತ್ರದಲಿ
ಅಡಗಿದಳು….
ಸತ್ತ ಭಾವಗಳ
ಹೊತ್ತು ಸಾಗುವ ಮೌನದಲಿ
ಮಾತಾದಳು….
ಬದುಕಿಗೆ ಬಣ್ಣ ತುಂಬಿ
ಕಣ್ಣ ಬೆಳಕನು ಕದ್ದು
ಮುಗಿಲ ಚುಕ್ಕಿಯಾದಳು….
ಜೀಕಿದ ಜೋಕಾಲಿಯ
ಕಿಲಕಿಲ ಮಾರ್ದನಿಸುತಿದೆ
ಅಂಗಳದಿ….
ಸದ್ದಿಲ್ಲದೆ ಎದ್ದು ಹೋದ
ಹೆಜ್ಜೆ ಗುರುತಿಗೆ
ಗೆಜ್ಜೆ ಕಟ್ಟುವ ಹುಚ್ಚು……
ನೋವು ಆತಂಕಗಳ
ಒಳಸುಳಿ ಸೆಳವುಗಳ ಮೇಲೆ
ನಗೆಯ ಮುಖವಾಡ….
ಇಳೆಯ ಹಬ್ಬಗಳಿಲ್ಲ
ಮಳೆ -ಮಲ್ಲಿಗೆಯ ವಾಸನೆಯಿಲ್ಲ
ಅವಳು….
ಬರೆದಿಟ್ಟ ಬದುಕಿನ
ನಿರ್ಲಿಪ್ತ ಓದುಗ……!
–ಪ್ರೊ ಜಯಶ್ರೀ.ಎಸ್.ಭಮಸಾಗರ.
(ಶೆಟ್ಟರ). ಇಳಕಲ್ಲ.