ಕಲ್ಯಾಣ ಕರ್ನಾಟಕ ಭಾಗದ ಬಹುಮುಖ ಪ್ರತಿಭೆ ಹನುಮದಾಸ್ ನವಲಿ

ಕಲ್ಯಾಣ ಕರ್ನಾಟಕ ಭಾಗದ ಬಹುಮುಖ ಪ್ರತಿಭೆ ಹನುಮದಾಸ್ ನವಲಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ನವಲಿ ಗ್ರಾಮದ ಕಲಾವಿದ ಹನಮದಾಸ್ ಅವರದ್ದು ಬಹುಮುಖ ಪ್ರತಿಭೆ. ಸಂಗೀತ–ನೃತ್ಯ ನಿರ್ದೇಶನ, ತಬಲಾ, ಶಹನಾಯಿ ವಾದನ ಸೇರಿದಂತೆ ವಿವಿಧ ಕಲೆಗಳಲ್ಲಿ ಅವರು ಪರಿಣತರು.
ಗಿರಿಯವ್ವ ಮತ್ತು ತಿಮ್ಮದಾಸ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ ಹನಮನದಾಸ ಅವರು ಓದಿದ್ದು ನಾಲ್ಕನೇ ತರಗತಿವರೆಗೆ. ಆದರೆ ಸಂಗೀತ ಕ್ಷೇತ್ರದಲ್ಲಿ ಕಲಿತಿದ್ದು ಬೆಟ್ಟದಷ್ಟು.
ನವಲಿ ಗ್ರಾಮದ ಮೆಹಬೂಬ್ ಅಲಿ ಜಮಾದಾರ್ ಅವರ ಶಿಷ್ಯರಾಗಿ ತಬಲಾ ವಾದನದಲ್ಲಿ ಪರಿಣತಿ ಪಡೆದವರು.

ರಾಂಪುರ ಗ್ರಾಮದಲ್ಲಿ ‘ಕಲಿತ ಕಳ್ಳ’ ನಾಟಕಕ್ಕೆ ಮೊದಲ ಬಾರಿಗೆ ತಬಲಾಸಾಥ್ ನೀಡಿದರು. ಅಲ್ಲಿಂದ ಆರಂಭವಾದ ಅವರ ಸಂಗೀತ ಸೇವೆ ಮತ್ತು ಕಲಾ ಪ್ರದರ್ಶನವು ಜಿಲ್ಲೆಗೆ ಸೀಮಿತಗೊಳ್ಳದೇ ಹೊರಜಿಲ್ಲೆಗಳಿಗೂ ವ್ಯಾಪಿಸಿತು.
ಜಾತ್ರೆ, ಉತ್ಸವ, ಹಬ್ಬದ ನಿಮಿತ್ತ ನಡೆಯುವ ನಾಟಕ, ಸಂಗೀತ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದರು. ‘ಅಣ್ಣ-ತಂಗಿ’, ‘ಮರಳಿ ಪಡೆದ ಮುತ್ತು’, ‘ಕನಿಕರವಿಲ್ಲದ ಕಟುಕರು’, ‘ಬಡವ ಕೊಟ್ಟ ಎಚ್ಚರಿಕೆ’ ಸೇರಿದಂತೆ ಸಾವಿರಕ್ಕೂ ಹೆಚ್ಚು ಹವ್ಯಾಸಿ ಮತ್ತು ಕಂಪನಿ ನಾಟಕಗಳಿಗೆ ತಬಲಾ ನುಡಿಸಿದ್ದಾರೆ.
ರಾಜ್ಯಮಟ್ಟದ ನಾಯಕರ ಧ್ವನಿಯನ್ನು ಅನುಕರಣೆ ಮಾಡಿ, ಜನರನ್ನು ರಂಜಿಸಿದ್ದಾರೆ. ಸೀಳ್ದುಟಿ ಮೂಲಕ ಶಹನಾಯಿಯ ನಾದ ಹೊಮ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ವಿವಿಧ ಸಭೆ, ಸಮಾರಂಭ, ನಾಟಕ, ಬೀದಿ ನಾಟಕ, ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯದಿಂದ ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿವಿಧ ಗ್ರಾಮಗಳಲ್ಲಿ ಜರುಗುವ ಪುರಾಣ-ಪ್ರವಚನ ಕಾರ್ಯಕ್ರಮದಲ್ಲಿ ತಮ್ಮ ಸಂಗೀತ ಸೇವೆ ನೀಡುತ್ತಿದ್ದಾರೆ. ಪ್ರತಿ ಹುಣ್ಣಿಮೆಯ ದಿನದಂದು ಸುಕ್ಷೇತ್ರ ಸಜ್ಜಲಗುಡ್ಡದ ಶರಣಮ್ಮ ತಾಯಿಯವರ ಸನ್ನಿಧಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ.
1980ರಲ್ಲಿ ಶ್ರೀಜಗಜ್ಯೋತಿ ಬಸವಣ್ಣ ಸೇರಿ ಹತ್ತಾರು ನಾಟಕಗಳನ್ನು ನಿರ್ದೇಶನ ಮಾಡಿ, ರಂಗ ಪ್ರದರ್ಶನ ಮಾಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಮರೇಶ್ವರ ರಂಗಭೂಮಿ ಕಲಾವಿದರ ಸಹಯೋಗದಲ್ಲಿ ಜಿಲ್ಲೆಯ ವಿವಿಧೆಡೆ ಅನೇಕ ಕಾರ್ಯಕ್ರಗಳು ನೀಡಿದ್ದಾರೆ.
ಅವರ ಸೇವೆ ಮೆಚ್ಚಿ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಜಿಲ್ಲೆಯ ಸುಳ್ಯದ ಸಾಂಸ್ಕೃತಿ ವೇದಿಕೆ, ಜಿಲ್ಲೆ ಹಾಗೂ ತಾಲ್ಲೂಕಿನ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ .

ವರದಿ-ವೀರೇಶ ಅಂಗಡಿ

Don`t copy text!