ಹುಟ್ಟಿ ಬಾ ನೀ ಮತ್ತೆ
ಬಸವಣ್ಣ
ಅಂದು ನೀ
ಮೂರ್ತಿ ಪೂಜೆ ಖಂಡಿಸಿದೆ
ಇಂದು ನಿನ್ನನೇ
ಮೂರ್ತಿಯನ್ನಾಗಿ ಪೂಜಿಸಿದರು
ಅಂದು ನೀ ದೇಹವೇ ದೇಗುಲ ಎಂದು ಸಾರಿದೆ
ಇಂದು ದೇವಾಲಯಗಳಿಗೆ ಕಳಸವಿಡುತಿರುವರು
ಅಂದು ನೀನು ಜಾತಿಯನ್ನು ಖಂಡಿಸಿದೆ
ಇಂದು ಜಾತಿಯನ್ನೇ ಆಧಾರವಾಗಿರಿಸಿ
ಪೂಜಿಸುವರು ನಿನ್ನನು
ಅಂದು ನೀನು ಕಾಯಕದ ಕಲ್ಪನೆ ಬಿತ್ತಿದೆ
ಇಂದು ನಿನ್ನ ಹೆಸರನ್ನೇ
ಕಾಯಕಕಾಗಿ ಬಳಸುತಿರುವರು
ಅಂದು ನೀ ದಾಸೋಹ ತಿಳಿಸಿದೆ
ಇಂದು ದಾಸೋಹದ ಹೆಸರಲಿ
ಲೋಟಿ ಮಾಡುತಿರುವರು
ಅಂದು ಅಂತರ್ಜಾತಿ ವಿವಾಹ ಬಿತ್ತಿದೆ
ಇಂದು ಮಾರ್ಯಾದೆ ಹತ್ಯೆ ನಡೆಯುತಿದೆ
ಅಂದು ನೀ ಮಾನವೀಯತೆಯನು ಕಲಿಸಿದೆ
ಇಂದು ಅಮಾನವೀಯತೆಯಲಿ ಮೆರೆಯುತಿಹರು
ಅಂದು ನೀ ದಯವೇ ಧರ್ಮದ ಮೂಲವೆಂದೆ
ಇಂದು ದಯವಿಲ್ಲದ ಧರ್ಮ ಅನುಸರಿಸುತಿಹರು
ಅಂದಿನ ಸಮಾಜವನ್ನು ಇಂದು ತರಲು
ಸಮಾನತೆಯ ಹರಿಕಾರ ನೀ
ವಿಶ್ವ ಭಾತೃತ್ವ ಕಲಿಸಲು
ಹುಟ್ಟಿ ಬಾ ನೀ ಮತ್ತೆ
ಜಗದ ಬೆಳಕಿಗೆ ಬಸವಾ
–ಡಾ ದಾನಮ್ಮ ಝಳಕಿ ಬೆಳಗಾವಿ
—–_———_———————————————————-ಇಂದಿನ ಸಂಚಿಕೆಯ ಪ್ರಾಯೋಜಕರು
ಪ್ರತಿಷ್ಟಿತ SUM ಕಾಲೇಜು, ಲಿಂಗಸುಗುರು