ವಿಠ್ಠಪ್ಪ ಗೋರಂಟ್ಲಿ..ಭಾಗ್ಯನಗರದ ಭಾಗ್ಯವಿಧಾತ

 

 

 

 

 

 

 

(ಮಸ್ಕಿಯಲ್ಲಿ ವಿಠ್ಠಪ್ಪ ಗೊರಂಟ್ಲಿ ಅವರನ್ನು ಸನ್ಮಾನಿಸಿದ ಕ್ಷಣ)

ವಿಠ್ಠಪ್ಪ ಗೋರಂಟ್ಲಿ..
ಕೊಪ್ಪಳ ಭಾಗ್ಯನಗರದ ಭಾಗಕ್ಕೆ ಸಾಹಿತ್ಯ,ಸಾಮಾಜಿಕ,ಸಾಂಸ್ಕೃತಿಕ ಕ್ಷೇತ್ರಕ್ಕೆ ನಾಡಿನಾದ್ಯಂತ ಒಂದು ಜೀವಂತಿಕೆ ತಂದುಕೊಟ್ಟವರು.
ಅಂತಹ ಚೇತನ ಇಂದು( ಜುಲೈ 22,2021) ಕೊನೆಯುಸಿರೆಳೆದಿದೆ.

ಪದ್ಮಶಾಲಿ ನೇಕಾರರ ಬಡ ಕುಟುಂ‌ಬದಲ್ಲಿ ಜನಿಸಿ ,ಕೇವಲ 4 ನೇ ತರಗತಿಯವರೆಗೆ ಸಾಂಪ್ರದಾಯಿಕ ಶಿಕ್ಷಣ ಪಡೆದರೂ ಕೂಡ,
ಕಡುಬಡತನದಲ್ಲಿ ಚಿಮಣಿ ಬುಡ್ಡಿಯ ಬೆಳಕಿನಲ್ಲಿ ನಿರಂತರವಾಗಿ ಓದಿ ಕನ್ನಡದ ಯಾವ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಿಗೂ ಕಡಿಮೆ ಇಲ್ಲದ ಜ್ಞಾನ ತಮ್ಮದಾಗಿಸಿಕೊಂಡಿದ್ದರು.

ಲಂಕೇಶ್ ಪತ್ರಿಕೆಯ ಮೂಲಕ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ತನಿಖಾ ವರದಿಗಳನ್ನು ಹೊರಗೆಡವಿದ್ದರು. ಇವರು ಭಾಗ್ಯನಗರ ಮಂಡಳ ಪಂಚಾಯತಿಯ ಪ್ರಧಾನರಾಗಿದ್ದಾಗ ಸ್ವತಃ ಲಂಕೇಶ ಅವರೇ “ವಿಠ್ಠಪ್ಪ ನೀನು ಕೊಪ್ಪಳದ ಶಾಸಕನಾಗಬೇಕು” ಅಂತಾ ಬರೆದಿದ್ದರು.ತಮ್ಮ ಪ್ರಗತಿ ರಂಗದಿಂದ ವಿಧಾನಸಭೆಗೆ ಸ್ಪರ್ಧಿಸಲೂ ಕೂಡ ಆಹ್ವಾನಿಸಿದ್ದರು.

ಮುಂದೆ ಹಾಯ್ ಬೆಂಗಳೂರ್ ವರದಿಗಾರರಾಗಿ ಕೆಲ‌ಕಾಲ ಕೆಲಸ ಮಾಡಿದ್ದರು. ಸುದ್ದಿಮೂಲ ದೈನಿಕದ ಉಪಸಂಪಾದಕರಾಗಿ ,ಅಂಕಣಕಾರರಾಗಿ ಸಕ್ರಿಯರಾಗಿದ್ದರು.ಕೊಪಣ ಕಿರಣ ಪಾಕ್ಷಿಕ, ದಿನ ಕಹಳೆ ದಿನಪತ್ರಿಕೆಗಳನ್ನು ತಮ್ಮ ಸಂಪಾದಕತ್ವದಲ್ಲಿಯೇ ಹೊರತಂದಿದ್ದರು.

ಸಾಹಿತ್ಯ ,ಕತೆ,ಕವಿತೆ,ನಾಟಕ ರಚನೆಯ ಜೊತೆಗೆ ಸಮುದಾಯ ಸಂಘಟನೆಯ ಮೂಲಕ ನಾಟಕಗಳಲ್ಲಿಯೂ ಮನೋಜ್ಞ ಅಭಿನಯ ನೀಡುತ್ತಿದ್ದರು. ಹೋರಾಟ,ಚಳವಳಿ,ಅನ್ಯಾಯದ ವಿರುದ್ಧ ಸ್ಪಷ್ಟ,ಖಚಿತ ಅಭಿಪ್ರಾಯದೊಂದಿಗೆ ನೇರವಾಗಿ ಧ್ವನಿ ಎತ್ತುತ್ತಿದ್ದರು.ಬದುಕಿನ ಕೊನೆಯ ಉಸಿರಿನವರೆಗೂ ಅದನ್ನು ಅನುಸರಿಸಿಕೊಂಡು ಬಂದರು.

ಬಂಡಾಯದ ಮನೋಧರ್ಮದ ಇವರು ಅವಧೂತ ಪರಂಪರೆಯ ಸಾಧಕರಾಗಿದ್ದರು.ನಿಜ ಅರ್ಥದಲ್ಲಿ ಶರಣ,ಸೂಫಿ,ಅವಧೂತ,ಆರೂಢ ಪರಂಪರೆಗಳ ನಿಜ ವಾರಸುದಾರರಾಗಿದ್ದರು.

ಭಾಗ್ಯನಗರದಲ್ಲಿ ಸದಾನಂದ ಜ್ಞಾನಯೋಗಾಶ್ರಮ ಸ್ಥಾಪಿಸಿ , ನಿತ್ಯ ಸತ್ಸಂಗ ನಡೆಸುತ್ತಿದ್ದುದು ಅವರ ಬದ್ಧತೆಗೆ ಸಾಕ್ಷಿಯಾಗಿತ್ತು.

ಇಂತಹ ಅಪರೂಪದ ಚೇತನದ ಹಠಾತ್ ನಿರ್ಗಮನ ನಮ್ಮೆಲ್ಲರನ್ನು ಅನಾಥಗೊಳಿಸಿದೆ. ಹಲವು ವಿಭಿನ್ನ ವಲಯಗಳನ್ನು ನಿರ್ವಾತಗೊಳಿಸಿದೆ.

ವಿಠ್ಠಪ್ಪನವರನ್ನು ಸ್ಮರಿಸುತ್ತ ಅವರ ಹಾದಿಯಲ್ಲಿ ಸಾಗಬೇಕು..

ಅವರ ಮಕ್ಕಳಾದ ಶ್ರೀನಿವಾಸ ಗೋರಂಟ್ಲಿ,ಮಹೇಶನಿಗೆ ಬಳಗಕ್ಕೆ ಹೇಗೆ ಸಮಾಧಾನ ಹೇಳಲಿ,ಸ್ವತಃ ನನಗೆ ದುಃಖ ತಡೆಯಲಾಗುತ್ತಿಲ್ಲ..

ಹೋಗಿ ಬರ್ರಿ ಸರ್, ಭಾರದ ಹೃದಯದ ವಿದಾಯ..

ಮಂಜುನಾಥ ಡೊಳ್ಳಿನ ಧಾರವಾಡ

Don`t copy text!