ಮಸ್ಕಿ : ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರಿಹಾರಕ್ಕಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು ಶ್ರಮಿಸಿದ್ದಾರೆ. ಅವರನ್ನು ಮತ್ತೊಮ್ಮೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಿದರೆ ಶಿಕ್ಷಕರ ಸಮಸ್ಯಗಳಿಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಲು ಸಾಧ್ಯ ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಕಾಂಗ್ರೆಸ್‍ನಿಂದ ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಶರಣಪ್ಪ ಮಟ್ಟೂರು ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.
ಕೇಂದ್ರ ಹಾಗೂ ಹಾಗೂ ರಾಜ್ಯ ಸರ್ಕಾರಗಳು ಎರಡೂ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮುಖಾಂತರ ಜನರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಜೊತೆಗೆ ಶಿಕ್ಷಕರು ತಮ್ಮ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಿದರೆ ಸರ್ಕಾರ ನಿರ್ಲಕ್ಷ್ಯ ಮಾಡಿ ಅವರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದರು.
ಸಮಾಜವನ್ನು ತಿದ್ದುವ ಬುದ್ಧಿವಂತ ಶಿಕ್ಷಕರು ಯಾವುದೇ ಕಾರಣಕ್ಕೆ ಬಿಜೆಪಿಯವರನ್ನು ನಂಬಬೇಡಿ ಎಂದ ಬಾದರ್ಲಿ ಅವರು ಶಿಕ್ಷಕರು ಶರಣಪ್ಪ ಮಟ್ಟೂರು ಅವರಿಗೆ ಪ್ರಥಮ ಪ್ರಾಶ್ಯಸ್ತದ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವರಿಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಜಿ.ಪಂ.ಮಾಜಿ ಸದಸ್ಯರಾದ ಎಚ್.ಬಿ.ಮುರಾರಿ, ಶ್ರೀಶೈಲಪ್ಪ ಬ್ಯಾಳಿ, ರಾಘವೇಂದ್ರ ನಾಯಕ, ಬಸನಗೌಡ ಮುದಬಾಳ್, ಆನಂದ ವಿರಾಪೂರು, ಸುರೇಶ ಬ್ಯಾಳಿ, ಶೇಖರಗೌಡ, ಶರಣಪ್ಪ ಯಲಿಗಾರ್, ಸುರೇಶ ಕೈರವಾಡಗಿ ಸೇರಿದಂತೆ ಇತರರು ಇದ್ದರು