ಮಸ್ಕಿ : ಬಿಜೆಪಿ ಪಕ್ಷದಲ್ಲಿ ಮೂಲ ಮತ್ತು ವಲಸಿಗರ ಮದ್ಯೆ ಒಳ ಬೇಗುದಿ ದಿನದಿಂದ ದಿನಕ್ಕೆ ತಾರಕಕ್ಕೇರಿದ್ದು ಅದನ್ನು ಶಮನ ಮಾಡಲು ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ ಕಟೀಲು ಮಂಗಳವಾರ ಪಟ್ಟಣಕ್ಕೆ ಆಗಮಿಸಲಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರತಾಪಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲರ ವಿರುದ್ದ ೨೧೩ ಮತಗಳ ಅಂತರದಿಂದ ಸೋತಿದ್ದ ಬಿಜೆಪಿ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರನ್ನು ಸಂಸದ ಸಂಗಣ್ಣ ಕರಡಿ, ಸಚಿವ ಶ್ರೀ ರಾಮುಲು , ಸುರಪುರ ಶಾಸಕ ರಾಜುಗೌಡ ಸಂಧಾನ ನಡೆಸಿ ಉಪ ಚುನಾವಣೆ ಬಂದಾಗ ಇಬ್ಬರು ಒಗ್ಗೂಡಿ ಕೆಲಸ ಮಾಡುವಂತೆ ಸಂಧಾನ ನಡೆಸಿದ್ದರು. ಅದರ ಫಲವಾಗಿ ಬಸನಗೌಡ ತುರ್ವಿಹಾಳ ಅವರಿಗೆ ತುಂಗಭದ್ರಾ ಕಾಡ ಅಧ್ಯಕ್ಷ ಸ್ಥಾನ ನೀಡಿ ತೃಪ್ತಿ ಪಡಿಸಿದ್ದರು.
ಮೇಲ್ನೋಟಕ್ಕೆ ಸರಿ ಎಂದು ಕಂಡರೂ ಕ್ಷೇತ್ರದ ಕಾರ್ಯಕರ್ತರಲ್ಲಿ, ಹಲವು ಮುಖಂಡರಲ್ಲಿ ಮೂಲ – ವಲಸಿಗ ಎಂಬ ಅಸಮಾಧಾನದ ಬೇಗುದಿ ಇರುವದು ಸುಳ್ಳಲ್ಲ. ಪ್ರತಾಪಗೌಡ ಪಾಟೀಲ ಟೀಮ್ ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಮೂಲ ಬಿಜೆಪಿಗರಲ್ಲಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಳ್ಳಿ ಬಿಟ್ಟರೇ ಉಳಿದವರು ಬಿಜೆಪಿ ಕಚೇರಿ ಕಡೆ ತಲೆ ಹಾಕುತ್ತಿಲ್ಲ. ವಲಸಿಗ ಪ್ರತಾಪಗೌಡರು ಆಯಕಟ್ಟಿನ ಜಾಗದಲ್ಲಿ ತಮ್ಮ ಹಿಂಬಾಲಕರನ್ನೇ ನೇಮಕ ಮಾಡಿದ್ದಾರೆ ಎಂಬುದು ಮೂಲ ಬಿಜೆಪಿಗರ ಆರೋಪ.
ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಳ್ಳಿ ಮೂಲ ಬಿಜೆಪಿಗರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದು, ಮಾಜಿ ಶಾಸಕರ ಕೈಗೊಂಬೆಯಾಗಿದ್ದಾರೆಂದು ಮೂಲ ಬಿಜೆಪಿಗರು ಆರೋಪಿಸುತ್ತಿದ್ದಾರೆ.
ಕಾಂಗ್ರೆಸ್ ನತ್ತ ಬಸನಗೌಡ ಚಿತ್ತ : ಮಸ್ಕಿ ಕ್ಷೇತ್ರದ ಭಿನ್ನಮತ ರಾಜ್ಯಮಟ್ಟದ ನಾಯಕರಿಗೆ ತಲೆ ನೋವಾಗಿದ್ದು ಸಂಧಾನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲು ಸಂಧಾನ ನಡೆಸುವ ಸಾಧ್ಯತೆ ಹೆಚ್ಚಿದೆ. ಅರೆ ಮನಸ್ಸಿನಿಂದ ಕಾಡ ಅಧ್ಯಕ್ಷ ರಾಗಿರುವ ಬಸನಗೌಡ ತುರ್ವಿಹಾಳ ಆಪ್ತರು ಕಾಂಗ್ರೆಸ್‌ಗೆ ಕರೆತರಲು ಜಿಲ್ಲಾ ಮುಖಂಡರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿಮಾಡಿ ಬಸನಗೌಡ ತುರ್ವಿಹಾಳ ಅವರನ್ನು ಕಾಂಗ್ರೆಸ್ ಗೆ ಕರೆತರಲು ಭೂಮಿಕೆ ಸಿದ್ದಪಡಿಸಿದ್ದಾರೆ ಎನ್ನಲಾಗಿದೆ. ಬಸನಗೌಡ ತುರ್ವಿಹಾಳ ಕೂಡ ತಮ್ಮ ಆಪ್ತರೊಂದಿಗೆ ಗೌಪ್ಯವಾಗಿ ಸಮಾಲೋಚನೆ ಮಾಡುತ್ತಿದ್ದು, ಕಾಂಗ್ರೆಸ್ ಗೆ ಅವರ ಆಪ್ತರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
____—————————————-
ಮೂಲ ಬಿಜೆಪಿ ಗರಲ್ಲಿ ಅಸಮಾಧಾನ ಇರುವದು ನಿಜ. ಸರಿ ಪಡಿಸುವದಕ್ಕಾಗಿ ಹಲವು ಬಾರಿ ಯತ್ನಿಸಿದರು ಪ್ರಯೋಜನ ವಾಗಿಲ್ಲ. ಇಂದಿನ ಸಭೆಗೆ ಮೂಲ ವಲಸಿಗರು ಆಗಮಿಸಿ ರಾಜ್ಯ ಅಧ್ಯಕ್ಷರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ.
– ಅಪ್ಪಾಜಿಗೌಡ ಪಾಟೀಲ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ.
_——–_————————————————————–
-Γ